ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಖಗೋಳಶಾಸ್ತ್ರಜ್ಞರ ನಡುವೆ ಸಹಯೋಗವನ್ನು ಹೆಚ್ಚಿಸುವ ಮಹತ್ವವನ್ನು ಸಾರಿದ ಬ್ರಿಕ್ಸ್ ದೇಶಗಳು
Posted On:
21 MAY 2021 4:27PM by PIB Bengaluru
ʻಬ್ರಿಕ್ಸ್ ಖಗೋಳವಿಜ್ಞಾನ ಕಾರ್ಯ ಸಮೂಹʼದ ಏಳನೇ ಸಮಾವೇಶದಲ್ಲಿ ಈ ದೇಶಗಳ ಖಗೋಳಶಾಸ್ತ್ರಜ್ಞರ ನಡುವೆ ಸಹಯೋಗವನ್ನು ಹೆಚ್ಚಿಸುವ ಮಹತ್ವವನ್ನು ಬ್ರಿಕ್ಸ್ ರಾಷ್ಟ್ರಗಳ ಪ್ರತಿನಿಧಿಗಳು ಒತ್ತಿ ಹೇಳಿದರು.
ಬ್ರಿಕ್ಸ್ 2021ರ ಕ್ಯಾಲೆಂಡರ್‌ನ ʻವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವೇಷಣೆʼ ವಿಭಾಗದ ಅಡಿಯಲ್ಲಿ, ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡ ʼಬ್ರಿಕ್ಸ್ ಖಗೋಳವಿಜ್ಞಾನ ಕಾರ್ಯ ಸಮೂಹದ (ಬಿಎಡಬ್ಲ್ಯುಜಿ) ಏಳನೇ ಸಮಾವೇಶವನ್ನು ಭಾರತ ಆಯೋಜಿಸಿತ್ತು. ಆನ್‌ಲೈನ್ ಮೂಲಕ ಮೇ 19ರಿಂದ 20ರ ವರೆಗೆ ನಡೆದ ಈ ಸಮಾವೇಶದಲ್ಲಿ ಈ ದೇಶಗಳ ಖಗೋಳಶಾಸ್ತ್ರಜ್ಞರೂ ಭಾಗವಹಿಸಿದ್ದರು.
ಭಾರತದ ವತಿಯಿಂದ, ಪುಣೆಯ ʻಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕುರಿತಾದ ಅಂತರ-ವಿಶ್ವವಿದ್ಯಾಲಯ ಕೇಂದ್ರʼ(ಐಯುಸಿಎಎ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಈ ಸಮಾವೇಶವನ್ನು ಸಂಘಟಿಸಿದ್ದವು. ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಸರಕಾರಿ ಅಧಿಕಾರಿಗಳು ಸೇರಿದಂತೆ ಎಲ್ಲಾ ಐದು ಬ್ರಿಕ್ಸ್ ದೇಶಗಳ 50ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗವಹಿಸಿದರು.
ಸಮಾವೇಶದಲ್ಲಿ ಪಾಲ್ಗೊಂಡ ಪ್ರತಿನಿಧಿಗಳು ಕಾರ್ಯತಂತ್ರದ ಮತ್ತು ಕಾರ್ಯಾಚರಣೆಯ ವಿಷಯಗಳ ಬಗ್ಗೆ ಚರ್ಚಿಸಿದರು. ಬ್ರಿಕ್ಸ್ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ದೂರದರ್ಶಕಗಳಿಗೆ ಸಂಬಂಧಿಸಿದಂತೆ ಒಂದು ಜಾಲವನ್ನು ಸೃಷ್ಟಿಸಲು ಮತ್ತು ಪ್ರಾದೇಶಿಕ ದತ್ತಾಂಶ ಜಾಲವನ್ನು ರಚಿಸಲು ಶಿಫಾರಸು ಮಾಡಿದರು. ಈ ವಲಯದಲ್ಲಿ ಮಹತ್ವಾಕಾಂಕ್ಷೆಯ ಯೋಜನೆ ಅಭಿವೃದ್ಧಿಪಡಿಸಲು ಅವರು ಸಮ್ಮತಿಸಿದರು. ಕುಶಾಗ್ರ ದೂರದರ್ಶಕ ಜಾಲ ಮತ್ತು ದತ್ತಾಂಶ ಜಾಲವನ್ನು ನಿರ್ಮಿಸುವುದು, ಬ್ರಹ್ಮಾಂಡದಲ್ಲಿ ಅಸ್ಥಿರ ಖಗೋಳ ವಿದ್ಯಮಾನಗಳ ಅಧ್ಯಯನ, ಬಿಗ್ ಡೇಟಾ, , ಕೃತಕ ಬುದ್ಧಿಮತ್ತೆ, ಬಹು-ತರಂಗಾಂತರದ ದೂರದರ್ಶಕದ ವೀಕ್ಷಣಾಲಯದ ಹಿನ್ನೆಲೆಯಲ್ಲಿ ಪ್ರಸ್ತುತ ಸೃಷ್ಟಿಯಾಗುತ್ತಿರುವ ಬೃಹತ್ ದತ್ತಾಂಶವನ್ನು ಪ್ರಕ್ರಿಯೆಗೊಳಿಸಲು ʻಮೆಷಿನ್ ಲರ್ನಿಂಗ್ʼ ಬಳಕೆ ಸೇರಿದಂತೆ ಈ ಕ್ಷೇತ್ರದಲ್ಲಿ ಭವಿಷ್ಯದ ಸಂಶೋಧನೆಯ ದಿಕ್ಕಿನ ಬಗ್ಗೆ ಕಾರ್ಯನಿರತ ಗುಂಪಿನ ಸದಸ್ಯರು ಬೆಳಕು ಚೆಲ್ಲಿದರು.
ಆಯಾ ದೇಶದಲ್ಲಿ ನಡೆಯುತ್ತಿರುವ ಕಾರ್ಯಗಳ ವೈಜ್ಞಾನಿಕ ಫಲಿತಾಂಶಗಳನ್ನು ಪ್ರಸ್ತುತ ಪಡಿಸುವತ್ತ ಪ್ರತಿ ದೇಶವೂ ಮುಖ್ಯವಾಗಿ ಗಮನ ಹರಿಸಬೇಕು ಎಂದು ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಖಗೋಳವಿಜ್ಞಾನ ಕ್ಷೇತ್ರದಲ್ಲಿ ಸಹಕರಿಸಲು ವೇದಿಕೆಯನ್ನು ಒದಗಿಸುವ ʻಬಿಎಡಬ್ಲ್ಯೂಜಿʼ ಶಿಫಾರಸು ಮಾಡಿದೆ. ಇದರಿಂದ ಬ್ರಿಕ್ಸ್ಗೆ ಧನಸಹಾಯ ಒದಗಿಸುವ ಸಂಸ್ಥೆಗಳಿಂದ ಆರ್ಥಿಕ ನೆರವಿನ ಅವಕಾಶ ಘೋಷಣೆಯಾದಾಗ, ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾಕಾರಗೊಳಿಸಲು ಹಣಕಾಸಿನ ಬೆಂಬಲವನ್ನು ಪಡೆಯಲು ಸಹಾಯಕವಾಗುತ್ತದೆ.. ಬ್ರಿಕ್ಸ್ ದೇಶಗಳ ಖಗೋಳಶಾಸ್ತ್ರಜ್ಞರ ನಡುವೆ ಸಹಯೋಗವನ್ನು ಹೆಚ್ಚಿಸುವ ಮಹತ್ವವದ ಬಗ್ಗೆಯೂ ʻಬಿಡಬ್ಲ್ಯೂಜಿʼ ಗಮನ ಸೆಳೆಯಿತು.
ವಿಜ್ಞಾನಿ(ಜಿ) ಮತ್ತು ಅಂತಾರಾಷ್ಟ್ರೀಯ ಸಹಕಾರ ಮುಖ್ಯಸ್ಥ ಶ್ರೀ ಎಸ್. ಕೆ. ವರ್ಶ್ನೆ ಅವರು ಭಾರತದ (ಡಿಎಸ್ಟಿ) ದೃಷ್ಟಿಕೋನಗಳನ್ನು ಪ್ರಸ್ತುತಪಡಿಸಿದರು. ಜೊತೆಗೆ ಬ್ರಿಕ್ಸ್ ದೇಶದ ವೈಜ್ಞಾನಿಕ ಸಂಶೋಧರ ತಂಡದ ನೇತೃತ್ವವನ್ನು ವಹಿಸಿದರು. ಈ ಸಂಶೋಧಕರು ತಾವು ಕೈಗೊಂಡ ಸಂಶೋಧನಾ ಚಟುವಟಿಕೆ ಮತ್ತು ಸಂಶೋಧನಾ ಮೂಲ ಸೌಕರ್ಯವನ್ನು ಬಿಂಬಿಸುವ ವರದಿಗಳನ್ನು ಸಮಾವೇಶದಲ್ಲಿ ಪ್ರಸ್ತುತಪಡಿಸಿದರು.
ಬ್ರಿಕ್ಸ್ ದೇಶಗಳಿಂದ ಭಾಗವಹಿಸಿದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳಲ್ಲಿ ಭಾರತದಿಂದ ಮುಂಬೈನ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಬೆಂಗಳೂರಿನ ಭಾರತೀಯ ಖಗೋಳಭೌತಶಾಸ್ತ್ರ ಸಂಸ್ಥೆ, ಪುಣೆಯ ನ್ಯಾಷನಲ್ ಸೆಂಟರ್ ಫಾರ್ ರೇಡಿಯೋ ಆಸ್ಟ್ರೋಫಿಸಿಕ್ಸ್, ದೆಹಲಿ ವಿಶ್ವವಿದ್ಯಾಲಯ ಸೇರಿವೆ. ಬ್ರೆಜಿಲ್‌ನಿಂದ ಖಗೋಳ ಭೌತಶಾಸ್ತ್ರದ ರಾಷ್ಟ್ರೀಯ ಪ್ರಯೋಗಾಲಯ; ಬ್ರೆಜಿಲಿಯನ್ ಸೆಂಟರ್ ಫಾರ್ ರಿಸರ್ಚ್ ಇನ್ ಫಿಸಿಕ್ಸ್, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಫಾರ್ ಸ್ಪೇಸ್ ರಿಸರ್ಚ್ ; ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್‌ನ ಖಗೋಳವಿಜ್ಞಾನ ಸಂಸ್ಥೆ; ಚೀನಾದ ರಾಷ್ಟ್ರೀಯ ಖಗೋಳ ವೀಕ್ಷಣಾಲಯಗಳು, ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್; ದಕ್ಷಿಣ ಆಫ್ರಿಕಾದ ಆಫ್ರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿ ಸಹ ಭಾಗವಹಿಸಿದ್ದವು.
ಭಾರತವು ಜನವರಿ 2021ರಿಂದ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಸಚಿವರ ಮಟ್ಟದ ಸಭೆಗಳು, ಹಿರಿಯ ಅಧಿಕಾರಿಗಳ ಸಭೆಗಳು ಮತ್ತು ವಲಯವಾರು ಸಭೆಗಳು / ಸಮ್ಮೇಳನಗಳು ಸೇರಿದಂತೆ ಸುಮಾರು 100 ಕಾರ್ಯಕ್ರಮಗಳನ್ನು ಬ್ರಿಕ್ಸ್-2021ಕ್ಯಾಲೆಂಡರ್ ವರ್ಷದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.
*****
(Release ID: 1720736)
Visitor Counter : 244