ಗೃಹ ವ್ಯವಹಾರಗಳ ಸಚಿವಾಲಯ

ಪಂಜಾಬ್‌ನ ಗಡಿ ಗ್ರಾಮಗಳಲ್ಲಿರುವ ಜೀತಪದ್ಧತಿ ಸಮಸ್ಯೆಯ ಬಗ್ಗೆ ಪಂಜಾಬ್ ರೈತರನ್ನು ದೂಷಿಸಿಲ್ಲ

Posted On: 03 APR 2021 4:16PM by PIB Bengaluru

ಮಾನವ ಕಳ್ಳಸಾಗಣೆ ಸಿಂಡಿಕೇಟ್‌ಗಳ ವಿರುದ್ಧ ಮಾತ್ರ ಗೃಹ ಸಚಿವಾಲಯವು ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ

ರಾಜ್ಯದ ರೈತರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಗೃಹ ಸಚಿವಾಲಯವು ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪು ವರದಿಗಳು ಬಂದಿವೆ. ಈ ವರದಿಗಳು ದಾರಿ ತಪ್ಪಿಸುವಂತಿವೆ. ಎರಡು ವರ್ಷಗಳ ಅವಧಿಯಲ್ಲಿ ಪಂಜಾಬ್‌ನ ನಾಲ್ಕು ಸೂಕ್ಷ್ಮ ಗಡಿ ಜಿಲ್ಲೆಗಳಲ್ಲಿ ಉದ್ಭವಿಸುತ್ತಿರುವ ಸಾಮಾಜಿಕ ಆರ್ಥಿಕ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಸಿಎಪಿಎಫ್ ಗೃಹ ಸಚಿವಾಲಯದ ಗಮನಕ್ಕೆ ತಂದಿದ್ದು, ಇದರ ಬಗ್ಗೆ ಸರಳವಾದ ಅವಲೋಕನದ ಮೂಲಕ ಸಂಪಾದಕೀಯ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.
ಮೊದಲನೆಯದಾಗಿ, ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳ ಬಗ್ಗೆ ವಾಡಿಕೆಯ ಸಂವಹನದ ಭಾಗವಾಗಿ ಗೃಹ ಸಚಿವಾಲಯವು ನಿರ್ದಿಷ್ಟ ರಾಜ್ಯ ಅಥವಾ ರಾಜ್ಯಗಳಿಗೆ ಬರೆಯುವ ಪತ್ರಕ್ಕೆ ಯಾವುದೇ ಉದ್ದೇಶವನ್ನು ಆರೋಪಿಸಲಾಗುವುದಿಲ್ಲ. ಸಮಾಜಘಾತುಕ ಶಕ್ತಿಗಳು ದುರ್ಬಲರನ್ನು ಬಲಿಪಶುಗಳನ್ನಾಗಿ ಮಾಡುತ್ತಿರುವ ಬಗ್ಗೆ ಎಲ್ಲಾ ರಾಜ್ಯಗಳಲ್ಲೂ ಪರಿಶೀಲನೆ ನಡೆಸಬೇಕು ಎಂದು ಕೋರಿ ಈ ಪತ್ರವನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿಯವರಿಗೂ ಸಹ ಕಳುಹಿಸಲಾಗಿದೆ. 
ಎರಡನೆಯದಾಗಿ, ಗೃಹ ಸಚಿವಾಲಯವು ಪಂಜಾಬ್‌ ರೈತರ ವಿರುದ್ಧ “ಗಂಭೀರ ಆರೋಪಗಳನ್ನು”ಹೊರಿಸಿದೆ ಎಂದು ಪತ್ರದ ಕುರಿತು ಬಂದಿರುವ ಕೆಲವು ಮಾಧ್ಯಮ ವರದಿಗಳು ಸಂಪೂರ್ಣವಾಗಿ ಅಸಂಬದ್ಧವಾಗಿವೆ ಮತ್ತು ಇದನ್ನು ಈಗ ನಡೆಯುತ್ತಿರುವ ರೈತರ ಆಂದೋಲನದೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. "ಮಾನವ ಕಳ್ಳಸಾಗಣೆ ಸಿಂಡಿಕೇಟ್‌ಗಳು" ಅಂತಹ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿವೆ ಮತ್ತು ಅವರ "ದೈಹಿಕ ಮತ್ತು ಮಾನಸಿಕ ಆರೋಗ್ಯದ" ಮೇಲೆ ಪರಿಣಾಮ ಬೀರುವಷ್ಟು ಹೆಚ್ಚಿನ ಶ್ರಮವನ್ನು ಹೊರತೆಗೆಯಲು ಅವರಿಗೆ ಮಾದಕ ವಸ್ತುಗಳ ಆಮಿಷವೊಡ್ಡುವುದರ ಜೊತೆಗೆ ಅವರನ್ನು ಶೋಷಿಸಲಾಗುತ್ತಿದೆ, ಕಡಿಮೆ ಕೂಲಿ ನೀಡಲಾಗುತ್ತಿದೆ ಮತ್ತು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಸಮಸ್ಯೆಯ ಬಹು ಆಯಾಮಗಳು ಮತ್ತು ಅಗಾಧತೆಯನ್ನು ಗಮನದಲ್ಲಿಟ್ಟುಕೊಂಡು, "ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ" ಮಾತ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರವನ್ನು ಕೋರಿದೆ.

***


(Release ID: 1709407) Visitor Counter : 225