ಕೃಷಿ ಸಚಿವಾಲಯ
2021ನೇ ಹಂಗಾಮು ಕೊಬ್ಬರಿ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ
Posted On:
27 JAN 2021 2:23PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿ 2021ನೇ ಹಂಗಾಮಿನ ಕೊಬ್ಬರಿಗೆ ಕನಿಷ್ಠ ಬೆಂಬಲಬೆಲೆ (ಎಂ.ಎಸ್.ಪಿ.)ಗೆ ತನ್ನ ಅನುಮೋದನೆ ನೀಡಿದೆ.
ಗಿರಣಿ ಬಳಕೆಯ (ಮಿಲ್ಲಿಂಗ್) ನ್ಯಾಯೋಚಿತ ಸಾಧಾರಣ ಗುಣಮಟ್ಟದ (ಎಫ್.ಎ.ಕ್ಯು) ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ರೂ.375 ಹೆಚ್ಚಿಸಲಾಗಿದ್ದು, 2020ರಲ್ಲಿ ಪ್ರತಿ ಕ್ವಿಂಟಾಲ್ ಗೆ ಇದ್ದ ದರ ರೂ.9960ಯಿಂದ 2021ರ ಬೆಳೆ ವರ್ಷದಲ್ಲಿ 10,335 ರೂಪಾಯಿಗಳಿಗೆ ಏರಿಕೆಯಾಗಿದೆ. ಗಿಟಕು ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ರೂ.300 ಹೆಚ್ಚಿಸಲಾಗಿದ್ದು 2020ರಲ್ಲಿ ಪ್ರತಿ ಕ್ವಿಂಟಾಲ್ ಗೆ ಇದ್ದ ದರ ರೂ.20,300ರಿಂದ 2021ರಲ್ಲಿ 10,600 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಘೋಷಿತ ಎಂ.ಎಸ್.ಪಿ. ಅಖಿಲ ಭಾರತ ಮಟ್ಟದ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಗಿರಣಿ ಕೊಬ್ಬರಿಗೆ ಶೇ.51.87 ಮತ್ತು ಗಿಟಕಿ ಕೊಬ್ಬರಿಗೆ ಶೇ.55.76ರಷ್ಟು ಪ್ರತಿಫಲವನ್ನು ಖಾತ್ರಿಪಡಿಸುತ್ತದೆ. ಕೃಷಿ ವೆಚ್ಚ ಮತ್ತು ದರ ಆಯೋಗ (ಸಿ.ಎ.ಸಿ.ಪಿ.) ಶಿಫಾರಸಿನ ಆಧಾರದ ಮೇಲೆ ಈ ಅನುಮೋದನೆ ನೀಡಲಾಗಿದೆ.
2021ನೇ ಹಂಗಾಮಿಗೆ ಕೊಬ್ಬರಿಗೆ ಎಂ.ಎಸ್.ಪಿ. ಹೆಚ್ಚಳವು 2018-19ನೇ ಸಾಲಿನ ಆಯವ್ಯಯದಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿರುವ, ಅಖಿಲ ಭಾರತ ಮಟ್ಟದ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಒಂದೂವರೆ ಪಟ್ಟು ದರ ನಿಗದಿಯ ನೀತಿಗೆ ಅನುಗುಣವಾಗಿದೆ.
2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಮಹತ್ವದ ಮತ್ತು ಪ್ರಗತಿಪರ ಕ್ರಮದ ನಿಟ್ಟಿನಲ್ಲಿ ಇದು ಕನಿಷ್ಠ ಶೇ.50ರಷ್ಟು ಅಂತರದ ಲಾಭವನ್ನು ಖಾತ್ರಿಪಡಿಸುತ್ತದೆ.
ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ನಿಯಮಿತ (ಎನ್.ಎ.ಎಫ್.ಇ.ಡಿ.) ಮತ್ತು ಭಾರತೀಯ ರಾಷ್ಟ್ರೀಯ ಸಹಕಾರ ಗ್ರಾಹಕ ಒಕ್ಕೂಟ ನಿಯಮಿತ (ಎನ್.ಸಿ.ಸಿ.ಎಫ್.)ಗಳು ತೆಂಗಿನಕಾಯಿ ಬೆಳೆಯುವ ರಾಜ್ಯಗಳಲ್ಲಿ ಎಂ.ಎಸ್.ಪಿ.ಯಲ್ಲಿ ಬೆಲೆ ಬೆಂಬಲ ಕಾರ್ಯಾಚರಣೆಯನ್ನು ಕೈಗೊಳ್ಳಲು ಕೇಂದ್ರ ನೋಡಲ್ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲಿವೆ.
2020ರ ಹಂಗಾಮಿನಲ್ಲಿ, ಸರ್ಕಾರ 5053.34 ಟನ್ ಗಿಟಕು ಕೊಬ್ಬರಿ ಮತ್ತು 35.58 ಟನ್ ಗಿರಿಣಿ ಕೊಬ್ಬರಿ ಖರೀದಿಸಿದ್ದು ಇದರಿಂದ 4,896 ಕೊಬ್ಬರಿ ರೈತರಿಗೆ ಪ್ರಯೋಜನವಾಗಿದೆ.
***
(Release ID: 1692644)
Visitor Counter : 161