ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ – 15 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

Posted On: 30 AUG 2020 11:33AM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ.ಸಾಮಾನ್ಯವಾಗಿ ಇದು ಉತ್ಸವಗಳ ಸಮಯ. ಅಲ್ಲಲ್ಲಿ ಜಾತ್ರೆಗಳನ್ನು ಆಯೋಜಿಸಲಾಗಿದೆ, ಧಾರ್ಮಿಕ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಕೊರೊನಾದ ಸಂಕಟದ ಸ್ಥಿತಿಯಲ್ಲಿ ಜನರಲ್ಲಿ ಸಂಭ್ರಮವಂತೂ ಇದೆ, ಉತ್ಸಾಹವೂ ಇದೆ ಆದರೆ ನಮ್ಮೆಲ್ಲರ ಮನಸ್ಸನ್ನು ಕಲಕುವಂತಹ ಶಿಸ್ತೂ ಇದೆ. ಒಟ್ಟಾರೆ ನೋಡುವುದಾದರೆ ನಾಗರಿಕರಲ್ಲಿ  ಕರ್ತವ್ಯದ ಅರಿವಿದೆ. ಜನರು ತಮ್ಮ ಬಗ್ಗೆ ಎಚ್ಚರಿಕೆ ವಹಿಸುತ್ತಲೇ, ಬೇರೆಯವರ ಬಗ್ಗೆ ಎಚ್ಚರಿಕೆವಹಿಸಿ ತಮ್ಮ ದೈನಂದಿನ ಕೆಲಸಗಳನ್ನು ಕೂಡಾ ಮಾಡುತ್ತಿದ್ದಾರೆ. ದೇಶದಲ್ಲಿ ಆಯೋಜಿಸಲಾಗುತ್ತಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಬಾರಿ ಸರಳತೆ ಮತ್ತು ಸಂಯಮವನ್ನು ಕಾಯ್ದುಕೊಳ್ಳಲಾಗುತ್ತಿರುವುದು ಅಭುತಪೂರ್ವವಾಗಿದೆ. ಕೆಲವೆಡೆ ಗಣೇಶ ಉತ್ಸವವನ್ನು ಆನ್ ಲೈನ್ ನಲ್ಲಿ ಆಚರಿಸಲಾಗುತ್ತಿದೆ ಇದೇ ವೇಳೆ ಹಲವೆಡೆ ಬಾರಿ ನೈಸರ್ಗ ಸ್ನೇಹಿ ಗಣೇಶ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸ್ನೇಹಿತರೆ, ನಾವು ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಹಬ್ಬಗಳು ಮತ್ತು ಪರಿಸರದ ಕುರಿತು ಖಂಡಿತ ನಮ್ಮ ಮನದಲ್ಲಿ ಒಂದು ವಿಷಯ ಮೂಡುತ್ತದೆ. ಇವೆರಡ ಮಧ್ಯೆ ಬಹಳ ಗಾಢವಾದ ಸಂಬಂಧವಿದೆ. ಒಂದೆಡೆ ನಮ್ಮ ಹಬ್ಬಹರಿದಿನಗಳಲ್ಲಿ ಪರಿಸರ ಮತ್ತು ಪ್ರಕೃತಿಯ ಜೊತೆಗೆ ಸಹಜೀವನದ ಸಂದೇಶ ಅಡಗಿದ್ದರೆ ಮತ್ತೊಂದೆಡೆ ಹಲವಾರು ಹಬ್ಬಗಳನ್ನು ಪ್ರಕೃತಿಯ ರಕ್ಷಣೆಗೆಂದೇ ಆಚರಿಸಲಾಗುತ್ತದೆ. ಬಿಹಾರದ ಪಶ್ಚಿಮ ಚಂಪಾರಣ್ ನಲ್ಲಿ ಯುಗ ಯುಗಗಳಿಂದ ಥಾರು ಬುಡಕಟ್ಟು ಸಮಾಜದ ಜನರು 60 ಗಂಟೆಗಳ ಲಾಕ್ ಡೌನ್ ಅಥವಾ ಅವರದೇ ಭಾಷೆಯಲ್ಲಿ ಹೇಳುವುದಾದರೆ 60 ಗಂಟೆಗಳ ನಿಷೇಧ ವನ್ನು ಆಚರಿಸುತ್ತಾರೆ. ಪ್ರಕೃತಿಯ ರಕ್ಷಣೆಗಾಗಿ ಥಾರು ಸಮಾಜದ ಜನತೆ ನಿಷೇಧವನ್ನು ತಮ್ಮ ಪರಂಪರೆಯ ಒಂದು ಭಾಗವನ್ನಾಗಿಸಿಕೊಂಡಿದೆ ಮತ್ತು ಯುಗಗಳಿಂದ ಅದನ್ನು ಪಾಲಿಸುತ್ತಾ ಬಂದಿದೆ. ಅವಧಿಯಲ್ಲಿ ಯಾರೂ ಗ್ರಾಮದೊಳಗೆ ಪ್ರವೇಶಿಸುವುದಿಲ್ಲ ಮತ್ತು ಯಾರೂ ತಮ್ಮ ಮನೆಯಿಂದ ಹೊರಬೀಳುವುದಿಲ್ಲ. ಅಲ್ಲದೆ ತಾವು ಹೊರ ಹೋದರೆ ಅಥವಾ ಯಾರಾದರೂ ಹೊರಗಿನಿಂದ ಬಂದರೆ ಅವರು ಬಂದು ಹೋಗುವುದರಿಂದ ಮತ್ತು ಜನರ ದೈನಂದಿನ ಕೆಲಸಕಾರ್ಯಗಳಿಂದ ಹೊಸ ಗಿಡ ಮರಗಳಿಗೆ ನಷ್ವಾಗಬಹುದು ಎಂದು ಅವರು ನಂಬುತ್ತಾರೆ. ನಿಷೇಧದ ಆರಂಭಕ್ಕೂ ಮೊದಲು ನಮ್ಮ ಬುಡಕಟ್ಟು ಸಮುದಾಯದ ಸೋದರ ಸೋದರಿಯರು ಭವ್ಯವಾದ ರೀತಿಯಲ್ಲಿ ಪೂಜೆ ಪ್ರವಚನ ನಡೆಸುತ್ತಾರೆ ಮತ್ತು ಮುಕ್ತಾಯದಲ್ಲಿ ಬುಡಕಟ್ಟು ಸಾಂಪ್ರದಾಯಿಕ ಗೀತೆ, ಸಂಗೀತ, ನೃತ್ಯದ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ

ಸ್ನೇಹಿತರೆ, ಇಂದು ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಹಬ್ಬ ಚಿಂಗಂ ಮಾಸದಲ್ಲಿ ಬರುತ್ತದೆ. ಸಮಯದಲ್ಲಿ ಜನರು ಏನನ್ನಾದರೂ ಹೊಸ ವಸ್ತುವನ್ನು ಖರೀದಿಸುತ್ತಾರೆ. ತಮ್ಮ ಮನೆಗಳನ್ನು ಸಿಂಗರಿಸುತ್ತಾರೆ. ಹೂವಿನ ರಂಗೋಲಿ ಹಾಕುತ್ತಾರೆ. ಓಣಂ ಹಬ್ಬದ ಆನಂದವನ್ನು ಅನುಭವಿಸುತ್ತಾರೆ. ವಿವಿಧ ಬಗೆಯ ಕ್ರೀಡೆಗಳು, ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ಓಣಂ ಹಬ್ಬದ ಸಡಗರ ಇಂದು ದೂರದ ವಿದೇಶಗಳಿಗೂ ಹಬ್ಬಿದೆ. ಅಮೇರಿಕಾ ಆಗಲಿ, ಯುರೋಪ್ ಆಗಲಿ ಅಥವಾ ಖಾಡಿ ದೇಶವೇ ಆಗಲಿ ಓಣಂ ಹಬ್ಬದ ಉಲ್ಲಾಸ ನಿಮಗೆ ಎಲ್ಲೆಡೆ ನೋಡಲು ಸಿಗುತ್ತದೆ. ಓಣಂ ಈಗ ಒಂದು ಅಂತಾರಾಷ್ಟ್ರೀಯ ಹಬ್ಬವಾಗುತ್ತಾ ಸಾಗಿದೆ

ಸ್ನೇಹಿತರೆ, ಓಣಂ ನಮ್ಮ ಕೃಷಿಗೆ ಸಂಬಂಧಸಿದ ಹಬ್ಬವಾಗಿದೆ. ಇದು ನಮ್ಮ ಗ್ರಾಮೀಣ ಅರ್ಥವ್ಯವಸ್ಥೆಗೆ ಒಂದು ಹೊಸ ಆರಂಭದ ಸಮಯವಾಗಿರುತ್ತದೆ. ಕೃಷಿಕರ ಶಕ್ತಿಯಿಂದಲೇ ನಮ್ಮ ಜೀವನ, ನಮ್ಮ ಸಮಾಜ ಸಾಗುತ್ತದೆಯಲ್ಲವೇ. ನಮ್ಮ ಹಬ್ಬಗಳು ಕೃಷಿಕರ ಪರಿಶ್ರಮದಿಂದಲೇ ವರ್ಣಮಯವಾಗುತ್ತವೆ. ನಮ್ಮ ಅನ್ನದಾತರ, ಕೃಷಿಕರ ಜೀವನಧಾರೆಯ ಶಕ್ತಿಗೆ ವೇದಗಳಲ್ಲೂ ಗೌರವಪೂರ್ಣ ನಮನ ಸಲ್ಲಿಸಲಾಗಿದೆ.

ಋಗ್ವೇದದಲ್ಲಿ ಮಂತ್ರವೊಂದಿದೆ

ಅನ್ನಾನಾಂ ಪತಯೇ ನಮಃ, ಕ್ಷೇತ್ರಾಣಾಂ ಪತಯೇ ನಮಃ,

ಅಂದರೆ ಅನ್ನದಾತನಿಗೆ ನಮಸ್ಕಾರಗಳು ಕೃಷಿಕನಿಗೆ ನಮಸ್ಕಾರಗಳು. ನಮ್ಮ  ಕೃಷಿಕರು ಕೊರೊನಾದ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ನಮ್ಮ ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಬಾರಿ ಮುಂಗಾರು ಬೆಳೆಯ ಬಿತ್ತನೆ ಶೇ 7 ರಷ್ಟು ಹೆಚ್ಚಾಗಿದೆಧಾನ್ಯಗಳ ಬಿತ್ತನೆ ಬಾರಿ ಸುಮಾರು ಶೇ 10 ರಷ್ಟು, ಬೇಳೆಕಾಳುಗಳ  ಬಿತ್ತನೆ  ಸುಮಾರು ಶೇ 5 ರಷ್ಟು, ಪ್ರಧಾನ ಧಾನ್ಯಗಳು ಸುಮಾರು ಶೇ 3 ರಷ್ಟು ಹೆಚ್ಚಾಗಿ ಬಿತ್ತನೆಯಾಗಿವೆ. ಇದಕ್ಕಾಗಿ ದೇಶದ ಕೃಷಿಕ ಬಂಧುಗಳನ್ನು ಅಭಿನಂದಿಸುತ್ತೇನೆ. ಅವರ ಪರಿಶ್ರಮಕ್ಕೆ ನಮಿಸುತ್ತೇನೆ.    

ನನ್ನ ಪ್ರಿಯ ದೇಶಬಾಂಧವರೆ, ಕೊರೊನಾದ ಕಾಲಘಟ್ಟದಲ್ಲಿ ದೇಶ ಹಲವಾರು ವಿಷಯಗಳ ವಿರುದ್ಧ ಒಟ್ಟೊಟ್ಟಿಗೇ ಹೋರಾಡುತ್ತಿದೆ. ಆದರೆ ಇದರ ಜೊತೆಗೆ ಹಲವಾರು ಬಾರಿ ಇಷ್ಟೊಂದು ಸುದೀರ್ಘಾವಧಿ ಮನೆಯಲ್ಲೇ ಉಳಿಯುವುದರಿದ ನನ್ನ ಪುಟ್ಟ ಬಾಲಮಿತ್ರರ ಸಮಯ ಹೇಗೆ ಕಳೆಯುತ್ತಿರಬಹುದು ಎಂಬ ಪ್ರಶ್ನೆಯೂ ಮನದಲ್ಲಿ ಮೂಡುತ್ತದೆ. ಇದರಿಂದಾಗಿಯೇ ವಿಶ್ವದಲ್ಲೇ ಒಂದು ವಿಭಿನ್ನ ಪ್ರಯತ್ನವಾಗಿರುವ ಗಾಂಧಿನಗರದಲ್ಲಿರುವ ಮಕ್ಕಳ ವಿಶ್ವ ವಿದ್ಯಾಲಯಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಣ್ಣ, ಲಘು ಮತ್ತು  ಮಧ್ಯಮ ಉದ್ಯೋಗಗಳ ಸಚಿವಾಲಯಗಳೊಂದಿಗೆ ಸೇರಿ ನಾವು ಮಕ್ಕಳಿಗಾಗಿ ಏನು ಮಾಡಬಹುದು, ಇದರ ಬಗ್ಗೆ ಚಿಂತನ ಮಂಥನಗಳು ನಡೆದವು. ಇದು ನನಗೆ ಬಹಳ ಆಹ್ಲಾದಕರ ಮತ್ತು ಲಾಭದಾಯಕವಾಗಿತ್ತು ಏಕೆಂದರೆ ಒಂದು ರೀತಿಯಲ್ಲಿ ಇದು ನನಗೆ ಹೊಸತನ್ನು ಅರಿಯುವ, ಹೊಸತನ್ನು ಕಲಿಯುವಂಥ ಅವಕಾಶವಾಗಿತ್ತು.      

 

ಸ್ನೇಹಿತರೆ, ಆಟಿಕೆಗಳು ಅದರಲ್ಲೂ ವಿಶೇಷವಾಗಿ ಭಾರತೀಯ ಆಟಿಕೆಗಳು ಎಂಬುದು ನಮ್ಮ ಚಿಂತನೆಯ ವಿಷಯವಾಗಿತ್ತು. ಭಾರತೀಯ ಮಕ್ಕಳಿಗೆ ಹೊಸ ಹೊಸ ಆಟಿಕೆಗಳು ಹೇಗೆ ಸಿಗಬೇಕು, ಭಾರತ ಆಟಿಕೆಗಳ ಉತ್ಪಾದನಾ ಕೇಂದ್ರ ಹೇಗೆ ಆಗಬೇಕು ಎಂಬುದರ ಕುರಿತು ವಿಚಾರ ವಿಮರ್ಶೆ ನಡೆಯಿತು. ಅಂದ ಹಾಗೆ ಮನದ ಮಾತನ್ನು ಕೇಳುತ್ತಿರುವ ಎಲ್ಲ ಮಕ್ಕಳ ತಂದೆತಾಯಿಯರಲ್ಲಿ ಕ್ಷಮೆ ಕೇಳುತ್ತೇನೆ ಏಕೆಂದರೆ ಬಹುಶಃ ಮನದ ಮಾತನ್ನು ಕೇಳಿದ ನಂತರ ಆಟಿಕೆಗಳ ಹೊಸ ಹೊಸ ಬೇಡಿಕೆಗಳನ್ನು ಕೇಳುವಂತಹ  ಹೊಸತೊಂದು ಕೆಲಸ ಅವರ ಮನಸ್ಸಲ್ಲಿ ಮೂಡಬಹುದು.

ಸ್ನೇಹಿತರೆ, ಆಟಿಕೆಗಳು ಚಟುವಟಿಕೆಯನ್ನು ವೃದ್ಧಿಸುವಂತಹವಾಗಿರುವುದರ ಜೊತೆಗೆ ನಮ್ಮ ಆಕಾಂಕ್ಷೆಗಳಿಗೂ ರೆಕ್ಕೆ ಮೂಡಿಸುತ್ತವೆ. ಆಟಿಕೆಗಳು ಕೇವಲ ಮನಸ್ಸನ್ನು ಉಲ್ಲಸಿತಗೊಳಿಸುವುದಲ್ಲದೆ ಮನಸ್ಸುಗಳನ್ನು ರೂಪಿಸುತ್ತವೆ ಮತ್ತು ಗುರಿಗಳನ್ನು ಗಟ್ಟಿಗೊಳಿಸುತ್ತವೆ. ಆಟಿಕೆಗಳ ಕುರಿತು ಗುರುದೇವ ರವೀಂದ್ರನಾಥ ಟ್ಯಾಗೋರರು ಯಾವ ಆಟಿಕೆ ಅಪೂರ್ಣವಾದುದಾಗಿರುತ್ತದೆ ಅದೇ ಅತ್ಯುತ್ತಮವಾದುದಾಗಿರುತ್ತದೆ, ಅದು ಎಂಥ ಆಟಿಕೆಯಾಗಿರಬೇಕೆಂದರೆ ಅದು ಅಪೂರ್ಣವಾಗಿರಬೇಕು ಮತ್ತು ಮಕ್ಕಳೆಲ್ಲ ಸೇರಿ ಅದನ್ನು ಪೂರ್ತಿಗೊಳಿಸಬೇಕು ಎಂದು ಹೇಳಿರುವುದನ್ನು ನಾನು ಎಲ್ಲೋ ಓದಿದ್ದೆ. ಗುರುದೇವ ಟ್ಯಾಗೋರರು ತಾವು ಚಿಕ್ಕವರಾಗಿದ್ದಾಗ ತಮ್ಮದೇ ಕಲ್ಪನೆಯಿಂದ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ, ತಮ್ಮ ಸ್ನೇಹಿತರೊಂದಿಗೆ ಸೇರಿ ತಮ್ಮ ಆಟಿಕೆಗಳನ್ನು ಮಾಡುತ್ತಿದ್ದರು ಮತ್ತು  ಆಟವನ್ನು ಆಡುತ್ತಿದ್ದರು. ಆದರೆ ಒಂದು ದಿನ ಬಾಲ್ಯದ ಮೋಜಿನ ಕ್ಷಣಗಳಲ್ಲಿ ಹಿರಿಯರ ಹಸ್ತಕ್ಷೇಪವಾಯಿತು. ಅವರ ಒಬ್ಬ ಸ್ನೇಹಿತ, ಒಂದು ದೊಡ್ಡ, ಸುಂದರ ವಿದೇಶದ ಆಟಿಕೆಯನ್ನು ತೆಗೆದುಕೊಂಡು ಬಂದ. ಆಟಿಕೆಯನ್ನು ತೋರಿಸುತ್ತಾ ಗರ್ವದಿಂದ ಬೀಗುತ್ತಿರುವಾಗ ಆಟಕ್ಕಿಂತ ಹೆಚ್ಚು ಆಟಿಕೆಯ ಮೇಲೆ  ಎಲ್ಲ ಸ್ನೇಹಿತರ ಗಮನ ಕೇಂದ್ರೀಕೃತವಾಗಿತ್ತು. ಎಲ್ಲರ ಆಕರ್ಷಣೆಯ ಕೇಂದ್ರ ಆಟದ ಬದಲಿಗೆ ಆಟಿಕೆಯಾಗಿತ್ತು. ಯಾವ ಮಗು ನಿನ್ನೆವರೆಗೆ ಎಲ್ಲ ಮಕ್ಕಳೊಂದಿಗೆ ಆಡುತ್ತಿದ್ದನೋ, ಎಲ್ಲರೊಂದಿಗೆ ಇರುತ್ತಿದ್ದನೋ, ಬೆರೆತುಹೋಗುತ್ತಿದ್ದನೋ, ಆಟದಲ್ಲಿ ಮುಳುಗಿಹೋಗುತ್ತಿದ್ದನೋ, ಈಗ ಆತ ದೂರ ಉಳಿಯಲಾರಂಭಿಸಿದ. ಒಂದು ರೀತಿಯಲ್ಲಿ ಬೇರೆ ಮಕ್ಕಳಿಗಿಂತ ಭಿನ್ನ ಎನ್ನುವ ಭಾವ ಅವನ ಮನದಲ್ಲಿ ಬೇರೂರಿತು. ದುಬಾರಿ ಆಟಿಕೆಯಲ್ಲಿ ಮಾಡಲು ಏನೂ ಇರಲಿಲ್ಲ, ಕಲಿಯಲೂ ಏನೂ ಇರಲಿಲ್ಲ. ಅಂದರೆ, ಒಂದು ಆಕರ್ಷಕ ಆಟಿಕೆ ಪ್ರತಿಭಾವಂತ ಮಗುವೊಂದನ್ನು ಎಲ್ಲೋ ತುಳಿದುಹಾಕಿತು. ಹುದುಗಿಸಿಟ್ಟಿತು, ಬಡವಾಗಿಸಿತು. ಆಟಿಕೆ ಹಣದ, ಸಂಪತ್ತಿನ, ದೊಡ್ಡಸ್ತಿಕೆಯ ಪ್ರಸರ್ಶನ ಮಾಡಿತು ಆದರೆ, ಮಗುವಿನ ಸೃಜನಶೀಲ ಮನೋಭಾವ ಬೆಳೆಯುವುದನ್ನು ಮತ್ತು ವಿಕಸನಗೊಳ್ಳುವುದನ್ನು ನಿರ್ಬಂಧಿಸಿತು. ಆಟಿಕೆಯೇನೋ ಬಂತು ಆದರೆ ಆಟವೇ ಮುಗಿದುಹೋಯಿತು, ಮಗುವಿನ ಬೆಳವಣಿಗೆಯೂ ಕುಂಠಿತವಾಯಿತು. ಆದ್ದರಿಂದ ಗುರುದೇವ ಹೇಳುತ್ತಿದ್ದರು ಆಟಿಕೆ ಹೇಗಿರಬೇಕೆಂದರೆ ಮಕ್ಕಳ ಬಾಲ್ಯವನ್ನು ಹೊರಹೊಮ್ಮಿಸುವಂತಿರಬೇಕು. ಅವರ ಸೃಜನಶೀಲತೆಯನ್ನು ಬಿಂಬಿಸುವಂತಿರಬೇಕು. ಮಕ್ಕಳ ಬೇರೆ ಬೇರೆ ಆಯಾಮಗಳ ಮೇಲೆ ಆಟಿಕೆಗಳ ಪ್ರಭಾವದ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಹಳಷ್ಟು ಗಮನಹರಿಸಲಾಗಿದೆ. ಆಡುತ್ತಾ ಕಲಿಯುವುದು, ಆಟಿಕೆಗಳನ್ನು ತಯಾರಿಸುವುದನ್ನು ಕಲಿಯುವುದು, ಟಿಕೆಗಳನ್ನು ಸಿದ್ಧಪಡಿಸುವ ಸ್ಥಳಕ್ಕೆ ಭೇಟಿ ನೀಡುವುದು, ಇವೆಲ್ಲವನ್ನು ಕಲಿಕೆಯ ಭಾಗವನ್ನಾಗಿಸಿದೆ.

ಸ್ನೇಹಿತರೆ, ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಸಮೃದ್ಧ ಪರಂಪರೆಯಿದೆ. ಅತ್ಯುತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾದ ಬಹಳಷ್ಟು ಪ್ರತಿಭಾವಂತ ಕುಶಲಕರ್ಮಿಗಳಿದ್ದಾರೆ. ಭಾರತದಲ್ಲಿ ಕೆಲವೊಂದು ಕ್ಷೇತ್ರಗಳು ಟಾಯ್ ಕ್ಲಸ್ಟರ್ ಅಂದರೆ ಆಟಿಕೆಗಳ ಕೇಂದ್ರಗಳಾಗಿಯೂ ವಿಕಸಿತಗೊಳ್ಳುತ್ತಿವೆ. ಉದಾಹರಣೆಗೆ ಕರ್ನಾಟಕದ ರಾಮನಗರದ ಚನ್ನಪಟ್ಟಣ, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕೊಂಡಪಲ್ಲಿ, ತಮಿಳುನಾಡಿನ ತಂಜಾವೂರ್, ಅಸ್ಸಾಂನ ದುಭರಿ, ಉತ್ತರ ಪ್ರದೇಶದ ವಾರಣಾಸಿ, ಇಂಥ ಅದೆಷ್ಟೋ ಸ್ಥಳಗಳಿವೆ, ಬಹಳಷ್ಟು ಹೆಸರುಗಳನ್ನು ಪಟ್ಟಿ ಮಾಡಬಹಯದಾಗಿದೆ. ಜಾಗತಿಕ ಆಟಿಕೆಗಳ ಉದ್ಯಮ ರೂ 7 ಲಕ್ಷ ಕೋಟಿ ಗಿಂತ ಅಧಿಕ ವ್ಯವಹಾರ ಹೊಂದಿದೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದುರೂ 7 ಲಕ್ಷ ಕೋಟಿ ಗಿಂತ ಹೆಚ್ಚಿನ ವ್ಯವಹಾರದ ಇಷ್ಟು ದೊಡ್ಡ ಉದ್ಯಮವಾದರೂ ಭಾರತದ ಪಾಲುದಾರಿಕೆ ಇದರಲ್ಲಿ ಬಹಳ ಕಡಿಮೆಯಿದೆ. ಯಾವ ರಾಷ್ಟ್ರದ ಬಳಿ ಇಷ್ಟು ಅಗಾಧವಾದ ಬಳುವಳಿ ಇದೆ, ಪರಂಪರೆಯಿದೆ, ವಿವಿಧತೆಯಿದೆ, ಯುವಜನತೆಯಿದೆ, ಆಟಿಕೆಗಳ ಮಾರುಕಟ್ಟೆಯಲ್ಲಿ ಅದರ ಪಾಲುದಾರಿಕೆ ಇಷ್ಟು ಕಡಿಮೆಯಿದೆ ಎಂದರೆ ನಮಗೆ ಖುಷಿಯೆನಿಸುತ್ತದೆಯೇ? ಇಲ್ಲ, ಇದನ್ನು ಕೇಳಿದ ಮೇಲೆ ನಿಮಗೂ ಖುಷಿಯೆನಿಸುವುದಿಲ್ಲ. ನೋಡಿ ಸ್ನೇಹಿತರೆ, ಆಟಿಕೆಗಳ ಉದ್ಯಮ ಬಹಳ ವ್ಯಾಪಕವಾದುದು. ಗೃಹ ಉದ್ಯೋಗವಾಗಲಿ, ಸಣ್ಣ ಪುಟ್ಟ ಅಥವಾ ಲಘು ಉದ್ಯೋಗಗಳಾಗಲಿ, ಎಂ ಎಸ್ ಎಂ ಗಳಾಗಲಿ, ಇದರ ಜೊತೆ ಜೊತೆಗೆ ದೊಡ್ಡ ಉದ್ಯೋಗಗಳು, ಖಾಸಗಿ ಉದ್ಯಮಗಳು ವಲಯದ ಪರೀಧಿಗೆ ಬರುತ್ತವೆ. ಇದನ್ನು ಮುಂದುವರಿಸಲು ದೇಶ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶ್ರೀಯುತ ಸಿ ವಿ ರಾಜು ಅವರಿದ್ದಾರೆ. ಅವರ ಗ್ರಾಮದ ಎತಿ-ಕೊಪ್ಪಕಾ ಆಟಿಕೆಗಳು ಒಂದು ಕಾಲದಲ್ಲಿ ಬಹಳ ಪ್ರಸಿದ್ಧವಾಗಿದ್ದವು. ಆಟಿಕೆಗಳನ್ನು ಕಟ್ಟಿಗೆಯಿಂದ ತಯಾರಿಸಿದ್ದು ಅದರ ವಿಶೇಷವಾಗಿತ್ತು. ಆಟಿಕೆಗಳಲ್ಲಿ ಎಲ್ಲಿಯೂ ಯಾವುದೇ ರೀತಿಯ ಕೋನಗಳು ನೋಡಲು ಸಿಗುತ್ತಿರಲಿಲ್ಲ ಎಂಬುದು ಮತ್ತೊಂದು ವಿಶೇಷತೆಯಾಗಿತ್ತು. ಆಟಿಕೆಗಳು ಎಲ್ಲ ಕೋನಗಳಿಂದಲೂ ದುಂಡಗೆ ಇರುತ್ತಿದ್ದವು. ಆದ್ದರಿಂದ ಮಕ್ಕಳಿಗೆ ಪೆಟ್ಟಾಗುವ ಸಮಸ್ಯೆ ಇರುತ್ತಿರಲಿಲ್ಲ. ಸಿ ವಿ ರಾಜು ಅವರು ಎತಿ-ಕೊಪ್ಪಿಕಾ ಆಟಿಕೆಗಳಿಗಾಗಿ ಈಗ ತಮ್ಮ ಗ್ರಾಮದ ಕುಶಲಕರ್ಮಿಗಳ ಜೊತೆ ಒಗ್ಗೂಡಿ ಒಂದು ರೀತಿಯ ಹೊಸ ಆಂದೋಲನವನ್ನು ಆರಂಭಿಸಿದ್ದಾರೆಅತ್ಯುತ್ತಮ ಗುಣಮಟ್ಟದ ಎತಿ-ಕೊಪ್ಪಿಕಾ ಆಟಿಕೆಗಳನ್ನು ತಯಾರಿಸಿ ಸ್ಥಳೀಯ ಆಟಿಕೆಗಳ ಕುಂದಿಹೋದ ಗೌರವವನ್ನು ಸಿವಿ ರಾಜು ಅವರು ಮತ್ತೆ ತಂದುಕೊಟ್ಟಿದ್ದಾರೆ. ಆಟಿಕೆಗಳ ಬಗ್ಗೆ ನಾವು ಎರಡು ವಿಷಯಗಳನ್ನು ಯೋಚಿಸಬಹುದು. ನಿಮ್ಮ ಗೌರವಪೂರ್ಣ ಇತಿಹಾಸವನ್ನು ನಿಮ್ಮ ಜೀವನದಲ್ಲಿ ಮತ್ತೆ ಅಳವಡಿಸಿಕೊಳ್ಳಬಹುದು ಹಾಗೂ ನಿಮ್ಮ ಸ್ವರ್ಣಮಯ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ನಾನು ನನ್ನ ಸ್ಟಾರ್ಟ್ ಅಪ್ ಮಿತ್ರರಿಗೆ, ನಮ್ಮ ಹೊಸ ಉದ್ಯಮಿಗಳಿಗೆ - Team up for toys… ಎಂದು ಹೇಳುತ್ತೇನೆ. ಬನ್ನಿ ಒಗ್ಗೂಡಿ ಆಟಿಕೆಗಳನ್ನು ತಯಾರಿಸೋಣ. ಈಗ ಎಲ್ಲರಿಗೂ ಸ್ಥಳೀಯ ಆಟಿಕೆಗಳಿಗಾಗಿ ಧ್ವನಿ ಎತ್ತುವ ಸಮಯ ಬಂದಿದೆ. ಬನ್ನಿ, ನಾವು ನಮ್ಮ ಯುವಜನತೆಗಾಗಿ, ಹೊಸತನದ, ಉತ್ತಮ ಗುಣಮಟ್ಟದ, ಆಟಿಕೆಗಳನ್ನು ತಯಾರಿಸೋಣ. ಆಟಿಕೆಗಳು ಬಾಲ್ಯ ಅರಳಿಸುವಂತಹವು ಮತ್ತು ನಲಿಸುವಂತಹವಾಗಿರಬೇಕು. ಪರಿಸರಕ್ಕೂ ಅನುಕೂಲಕರವಾದಂತಹ ಆಟಿಕೆಗಳನ್ನು ನಾವು ತಯಾರಿಸೋಣ.                    

ಸ್ನೇಹಿತರೆ, ಇದೇ ರೀತಿ, ಈಗ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ಯುಗದಲ್ಲಿ ಕಂಪ್ಯೂಟರ್ ಗೇಮ್ಸ್ ಗಳ ಟ್ರೆಂಡ್ ಕೂಡ ಇದೆ. ಆಟಗಳನ್ನು ಮಕ್ಕಳೂ ಆಡುತ್ತಾರೆ. ಆದರೆ ಇದರಲ್ಲಿ ಎಷ್ಟು ಆಟಗಳಿರುತ್ತವೆಯೋ ಅವುಗಳ ಥೀಮ್ ಗಳು ಕೂಡಾ ಹೆಚ್ಚಾಗಿ ವಿದೇಶಗಳದ್ದೇ ಆಗಿರುತ್ತವೆ. ನಮ್ಮ ದೇಶದಲ್ಲಿ ಎಷ್ಟೊಂದು ಐಡಿಯಾಗಳಿವೆ, ಎಷ್ಟೊಂದು ಕಾನ್ಸೆಪ್ಟ್ ಗಳಿವೆ ಎಂದರೆ ನಮ್ಮ ಇತಿಹಾಸ ಬಹಳ ಸಮೃದ್ಧವಾಗಿದೆ. ನಾವು ಅವುಗಳ ಮೇಲೆ ಗೇಮ್ಸ್ ಸಿದ್ಧಪಡಿಸಬಹುದೇ? ನೀವೂ ಭಾರತದಲ್ಲೂ ಗೇಮ್ಸ್ ಸಿದ್ಧಪಡಿಸಿ, ಎಂದು ನಾನು ದೇಶದ ಯುವಪ್ರತಿಭೆಗೆ ಹೇಳುತ್ತೇನೆ. Let the games begin ಎಂದೂ ಹೇಳಲಾಗುತ್ತದೆ. ಹಾಗಾದರೆ ಬನ್ನಿ ಆಟ ಆರಂಭಿಸೋಣ.     

ಸ್ನೇಹಿತರೆ, ಸ್ವಾವಲಂಬಿ ಭಾರತ ಆಂದೋಲನದಲ್ಲಿ ವರ್ಚುವಲ್ ಗೇಮ್ಸ್ ಆಗಲಿ, ಆಟಿಕೆಗಳ ಕ್ಷೇತ್ರವಾಗಲಿ, ಎಲ್ಲವೂ ಬಹಳ ಮಹತ್ವಪೂರ್ಣ ಪಾತ್ರವನ್ನು ವಹಿಸಬೇಕಿದೆ ಮತ್ತು ಇದೊಂದು ಅವಕಾಶವೂ ಆಗಿದೆ. ಇಂದಿನಿಂದ 100 ವರ್ಷ ಹಿಂದೆ ಅಸಹಕಾರ ಆಂದೋಲನ ಆರಂಭವಾಗಿತ್ತು. ಆಗ ಗಾಂಧೀಜಿ ಬರೆದಿದ್ದರು – “ಅಸಹಕಾರ ಆಂದೋಲನ ದೇಶದ ಜನತೆಗೆ ಸ್ವಾಭಿಮಾನ ಮತ್ತು ತಮ್ಮ ಶಕ್ತಿಯ ಅರಿವು ಮೂಡಿಸುವ ಒಂದು ಪ್ರಯತ್ನಎಂದು.

ಇಂದು ನಾವು ದೇಶವನ್ನು ಸ್ವಾವಲಂಬಿಯಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ, ಅಂದರೆ ಸಂಪೂರ್ಣ ಸ್ವಾಭಿಮಾನದೊಂದಿಗೆ ಮುಂದೆ ಸಾಗಬೇಕಿದೆ, ಪ್ರತಿಯೊಂದು ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿ ಮಾಡಬೇಕಿದೆ. ಅಸಹಕಾರ ಆಂದೋಲನದ ರೂಪದಲ್ಲಿ ಯಾವ ಬೀಜವನ್ನು ಬಿತ್ತಲಾಗಿತ್ತೊ ಅದನ್ನು ಈಗ ಸ್ವಾವಲಂಬಿ ಭಾರತದ ವಟವೃಕ್ಷದಂತೆ ಪರಿವರ್ತನೆಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.    

ನನ್ನ ಪ್ರೀತಿಯ ದೇಶವಾಸಿಗಳೇ, ಭಾರತೀಯರ ಅನ್ವೇಷಣೆ ಮತ್ತು ಪರಿಹಾರ ನೀಡುವ ಸಾಮರ್ಥ್ಯದ ಬಲವನ್ನು ಪ್ರತಿಯೊಬ್ಬರೂ ಮಾನ್ಯ ಮಾಡುತ್ತಾರೆ. ಮತ್ತು ಎಲ್ಲಿ ಸಮರ್ಪಣಾ ಭಾವವಿದೆಯೋ, ಸಂವೇದನೆ ಇದೆಯೋ ಅಲ್ಲಿ ಶಕ್ತಿ ಅಪರಿಮಿತವಾಗುತ್ತದೆ. ತಿಂಗಳ ಆರಂಭದಲ್ಲಿ ದೇಶದ ಯುವಜನತೆಯ ಎದುರು ಆ್ಯಪ್ ಆವಿಷ್ಕಾರದ ಸವಾಲೊಂದನ್ನು ಇಡಲಾಗಿತ್ತು. ಸ್ವಾವಲಂಬಿ ಭಾರತ ಆ್ಯಪ್ ಆವಿಷ್ಕಾರದ ಸವಾಲಿನಲ್ಲಿ ನಮ್ಮ ಯುವಜನರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಸುಮಾರು 7 ಸಾವಿರ entry ಗಳು  ಬಂದಿದ್ದವು. ಅವುಗಳಲ್ಲಿ, ಮೂರನೇ ಎರಡರಷ್ಟು ಆ್ಯಪ್ ಗಳು ಎರಡು ಮತ್ತು ಮೂರನೇ ಶ್ರೇಣಿಯ ನಗರಗಳ ಯುವಕರು ಅಭಿವೃದ್ಧಿಪಡಿಸಿರುವಂಥವುಗಳಾಗಿವೆ. ಇದು ಸ್ವಾವಲಂಬಿ ಭಾರತ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಶುಭ ಸಂಕೇತವಾಗಿದೆ. ಸ್ವಾವಲಂಬಿ  ಭಾರತ ಆ್ಯಪ್ ಆವಿಷ್ಕಾರ ಸವಾಲಿನ ಫಲಿತಾಂಶವನ್ನು ನೋಡಿದರೆ ತಾವು ಖಂಡಿತವಾಗಿ ಪ್ರಭಾವಿತರಾಗುತ್ತೀರಿ. ಸಾಕಷ್ಟು ವಿಚಾರ ವಿನಿಮಯಗಳ ನಂತರ ಬೇರೆ ಬೇರೆ ವಿಭಾಗಗಳಲ್ಲಿ ಸರಿಸುಮಾರು 2 ಡಜನ್ ಆ್ಯಪ್ ಗಳಿಗೆ ಪ್ರಶಸ್ತಿಯನ್ನೂ ನೀಡಲಾಗಿದೆ. ತಾವೆಲ್ಲರೂ ಆ್ಯಪ್ ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಬಳಕೆ ಮಾಡಿಕೊಳ್ಳಿ. ಇದರಿಂದ ತಮಗೂ ಇಂಥದ್ದೇನಾದರೂ ಮಾಡಲು ಪ್ರೇರಣೆಯಾಗಬಹುದು. ಇವುಗಳಲ್ಲಿ ಕುಟುಕೀ ಎನ್ನುವ ಮಕ್ಕಳ ಕಲಿಕಾ ಆ್ಯಪ್ ಒಂದಿದೆ. ಚಿಕ್ಕಮಕ್ಕಳಿಗೆ ಉತ್ತಮ ಸಂವಾದಿಯಾಗಿರುವ ಆ್ಯಪ್ ನಲ್ಲಿ ಹಾಡುಗಳನ್ನು, ಕಥೆಗಳನ್ನು ಕೇಳಿಸಲಾಗುತ್ತದೆ. ಮೂಲಕವೇ ಮಕ್ಕಳು ಸಾಕಷ್ಟು ಗಣಿತ ಹಾಗೂ ವಿಜ್ಞಾನದ ಹಲವಾರು ಅಂಶಗಳನ್ನು ಕಲಿತುಕೊಳ್ಳುತ್ತಾರೆಇದರಲ್ಲಿ ಚಟುವಟಿಕೆಗಳೂ ಇವೆ, ಆಟವೂ ಇದೆ. ಇದೇ ರೀತಿಯಲ್ಲಿ ಒಂದು ಮೈಕ್ರೊ ಬ್ಲಾಗಿಂಗ್ ವೇದಿಕೆಯಾಗಿರುವ ಆ್ಯಪ್ ಕೂಡ ಇದೆ. ಇದರ ಹೆಸರು ಕೆಒಒ ಅಂದರೆ ಕೂ. ಇದರಲ್ಲಿ ನಾವು ನಮ್ಮ ಮಾತೃಭಾಷೆಯಲ್ಲಿ ಬರಹ, ವಿಡಿಯೋ ಹಾಗೂ ಧ್ವನಿಯ ಮೂಲಕ ನಮ್ಮ ಮಾತುಗಳನ್ನು ದಾಖಲಿಸಬಹುದು, ಸಂವಾದ ನಡೆಸಬಹುದು. ಇದೇ ರೀತಿ, ಚಿಂಗಾರಿ ಎನ್ನುವ ಆ್ಯಪ್ ಸಹ ಯುವಜನತೆಯಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. ಆಸ್ಕ್ ಸರ್ಕಾರ್ಎನ್ನುವ ಆ್ಯಪ್ ಇದೆ. ಇದರಲ್ಲಿ ಚಾಟ್ ಬೋಟ್ ಮೂಲಕ ತಾವು ಪರಸ್ಪರ ಚರ್ಚೆ ನಡೆಸಬಹುದು. ಹಾಗೂ ಯಾವುದೇ ಸರ್ಕಾರಿ ಯೋಜನೆಗಳ ಬಗ್ಗೆ ಬರಹ, ದನಿ ಹಾಗೂ ವಿಡಿಯೋ ಮೂರೂ ವಿಧಾನಗಳಲ್ಲಿ ಸರಿಯಾದ ಮಾಹಿತಿ ಪಡೆದುಕೊಳ್ಳಬಹುದು. ಇದು ತಮಗೆ ಬಹಳ ಸಹಕಾರಿಯಾಗಿದೆ. ಇನ್ನೊಂದು ಸ್ಟೆಪ್ ಸೆಟ್ ಗೋ ಎನ್ನುವ ಆ್ಯಪ್ ಇದೆ. ಇದು ದೈಹಿಕ ಸಾಮರ್ಥ್ಯ, ಫಿಟ್ ನೆಸ್ ಗೆ ಸಂಬಂಧಿಸಿದೆ. ತಾವು ಎಷ್ಟು ನಡೆದಿದ್ದೀರಿ, ಎಷ್ಟು ಕ್ಯಾಲೋರಿಗಳನ್ನು ಕಳೆದುಕೊಂಡಿದ್ದೀರಿ ಎನ್ನುವ ಎಲ್ಲ ಮಾಹಿತಿಗಳನ್ನು ಇದು ಸಂಗ್ರಹಿಸುತ್ತದೆ. ಅಲ್ಲದೆ, ತಾವು ದೈಹಿಕ ಚಟುವಟಿಕೆಗಳನ್ನು ನಡೆಸಲು ಪ್ರೇರಣೆ ನೀಡುತ್ತದೆ. ಇಲ್ಲಿ ನಾನು ಕೆಲವೇ ಉದಾಹರಣೆಗಳನ್ನು ನೀಡಿದ್ದೇನೆ. ಇನ್ನೂ ಹಲವಾರು ಆ್ಯಪ್ ಗಳು ಸ್ಪರ್ಧೆಯಲ್ಲಿ ವಿಜೇತವಾಗಿದೆ. ಕೆಲವು ವ್ಯಾಪಾರ ವಹಿವಾಟಿಗೆ, ಕೆಲವು ಆಟೋಟಗಳಿಗೆ ಸಂಬಂಧಿಸಿವೆ. ಇಸ್ ಇಕ್ವಲ್ ಟು, ಬುಕ್ಸ್ ಆ್ಯಂಡ್ ಎಕ್ಸಪೆನ್ಸ್, ಜೋಹೋ, ವರ್ಕ್ ಪ್ಲೇಸ್, ಎಫ್ಟಿಸಿ ಟ್ಯಾಲೆಂಟ್ ನಂಥ ಆ್ಯಪ್ ಗಳಿವೆ. ತಾವು ಇವುಗಳ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದರೆ ಸಾಕಷ್ಟು ಮಾಹಿತಿ ಸಿಗುತ್ತದ. ತಾವೂ ಮುಂದೆ ಕೆಲವು ಅನ್ವೇಷಣೆಗಳನ್ನು ಮಾಡಿ, ಕೆಲವನ್ನು ಬಳಕೆಗೆ ತನ್ನಿ. ತಮ್ಮ ಪ್ರಯತ್ನ, ಇಂದಿನ ಚಿಕ್ಕ ಚಿಕ್ಕ ಸ್ಟಾರ್ಟ್ ಅಪ್ ಗಳು ಮುಂದೆ ದೊಡ್ಡ ದೊಡ್ಡ ಕಂಪನಿಗಳಾಗಿ ಬದಲಾಗುತ್ತವೆ ಹಾಗೂ ವಿಶ್ವದಲ್ಲಿ ಭಾರತದ ಹೆಸರನ್ನು ಗುರುತಿಸಲು ಸಹಕಾರಿಯಾಗುತ್ತವೆ. ಇಂದು ಯಾವೆಲ್ಲ ದೊಡ್ಡ ದೊಡ್ಡ ಕಂಪನಿಗಳ ಹೆಸರು ಕಂಡುಬರುತ್ತವೆಯೋ ಅವುಗಳೆಲ್ಲ ಹಿಂದೊಮ್ಮೆ ಸ್ಟಾರ್ಟ್ ಅಪ್ ಗಳಾಗಿದ್ದವು ಎನ್ನುವುದನ್ನು ತಾವು ಮರೆಯಬೇಡಿ.

ಪ್ರೀತಿಯ ದೇಶವಾಸಿಗಳೇ, ನಮ್ಮ ಮಕ್ಕಳು, ವಿದ್ಯಾರ್ಥಿಗಳು ತಮ್ಮ ಸಂಪೂರ್ಣ , ಕ್ಷಮತೆಯನ್ನು ತೋರಿಸುವಲ್ಲಿ , ಸಾಮರ್ಥ್ಯವನ್ನು ವ್ಯಕ್ತಪಡಿಸುವಲ್ಲಿ ಪೌಷ್ಟಿಕಾಂಶ ಹಾಗೂ ಪೋಷಣೆಯ ಪಾತ್ರವೂ ಅಧಿಕವಾಗಿದೆ. ದೇಶಾದ್ಯಂತ ಸೆಪ್ಟೆಂಬರ್ ತಿಂಗಳನ್ನು ಪೌಷ್ಟಿಕತೆಯ ಮಾಸ ಎಂಬುದಾಗಿ ಆಚರಿಸಲಾಗುತ್ತಿದೆ. ರಾಷ್ಟ್ರ ಮತ್ತು ಪೌಷ್ಟಿಕತೆಗೆ ತುಂಬ ಆಳವಾದ ಸಂಬಂಧವಿದೆ. ಒಂದು ಗಾದೆ ಮಾತಿದೆ, ಯಥಾ ಅನ್ನಮ್ ತಥಾ ಮನಃ. ಅಂದರೆ, ನಾವು ಸೇವಿಸುವ ಅನ್ನ ಹೇಗಿರುತ್ತದೆಯೋ ಹಾಗೆ ನಮ್ಮ ಮಾನಸಿಕ ಮತ್ತು ಬೌದ್ಧಿಕ ವಿಕಾಸವೂ ಆಗುತ್ತದೆ ಎಂದು. ಶಿಶುಗಳಿಗೆ ಗರ್ಭದಲ್ಲಿ, ಬಾಲ್ಯದಲ್ಲಿ ಎಷ್ಟು ಉತ್ತಮವಾದ ಪೋಷಣೆ ಸಿಗುತ್ತದೆಯೋ ಅಷ್ಟೇ ಉತ್ತಮವಾಗಿ ಮಗುವಿನ ಮಾನಸಿಕ ವಿಕಾಸವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗೆಯೇ ಮಗು  ಆರೋಗ್ಯವಾಗಿಯೂ ಇರುತ್ತದೆ. ಮಕ್ಕಳಿಗೆ ಪೌಷ್ಟಿಕಾಂಶದ ಲಭ್ಯತೆ ಜತೆಗೆ ತಾಯಂದಿರಿಗೂ ಪೂರ್ತಿ ಪೋಷಣೆ ಸಿಗುವುದು ಅತ್ಯಗತ್ಯ. ಪೌಷ್ಟಿಕತೆಯೆಂದರೆ ಕೇವಲ ತಾವು ಯಾವ ಆಹಾರ ಸೇವಿಸುತ್ತೀರಿ, ಎಷ್ಟು ಸೇವಿಸುತ್ತೀರಿ ಎಷ್ಟು ಬಾರಿ ಸೇವಿಸುತ್ತೀರಿ ಇಷ್ಟೇ ಅಲ್ಲ. ತಮ್ಮ ದೇಹಕ್ಕೆ ಎಷ್ಟು ಪೌಷ್ಟಿಕತೆ, ಸತ್ವ ಸಿಗುತ್ತಿದೆ ಎಂಬುದು ಮುಖ್ಯ. ತಮಗೆ ಕಬ್ಬಿಣಾಂಶ, ಕ್ಯಾಲ್ಸಿಯಂ ಸಿಗುತ್ತದೆಯೇ ಇಲ್ಲವೇ, ಸೋಡಿಯಂ ಹಾಗೂ ಜೀವಸತ್ವಗಳು ಸಿಗುತ್ತದೆಯೇ ಇಲ್ಲವೇ ಎಂದು ನೋಡಬೇಕಾಗುತ್ತದೆ. ಎಲ್ಲ ಪೌಷ್ಟಿಕಾಂಶಗಳಿಗೆ ಬಹಳ ಪ್ರಾಮುಖ್ಯತೆಯಿದೆಪೌಷ್ಟಿಕತೆಯ ಆಂದೋಲನದಲ್ಲಿ ಜನ ಭಾಗಿಯಾಗುವುದು ಅತ್ಯಂತ ಅಗತ್ಯ. ಜನರ ಸಹಭಾಗಿತ್ವವೇ ಇದನ್ನು ಫಲಪ್ರದವನ್ನಾಗಿಸುತ್ತದೆ. ಹಿಂದಿನ ಕೆಲವು ವರ್ಷಗಳಲ್ಲಿ ನಿಟ್ಟಿನಲ್ಲಿ ದೇಶದಲ್ಲಿ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಈಗ ಮುಖ್ಯವಾಗಿ, ನಮ್ಮ ಗ್ರಾಮೀಣ ಭಾಗಗಳಲ್ಲಿ ಇದನ್ನು ಜನರ ಸಹಭಾಗಿತ್ವದಿಂದ ಜನಾಂದೋಲನವನ್ನಾಗಿ ಮಾಡಲಾಗುತ್ತಿದೆ. ಪೌಷ್ಟಿಕ ಸಪ್ತಾಹ, ಪೌಷ್ಟಿಕ ಮಾಸ ಆಚರಣೆಗಳ ಮೂಲಕ ಪೌಷ್ಟಿಕತೆಯ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸಲಾಗುತ್ತಿದೆ. ಶಾಲೆಗಳೂ ಇದರಲ್ಲಿ ಜತೆಯಾಗಿವೆ. ಮಕ್ಕಳಿಗಾಗಿ ಸ್ಪರ್ಧೆಗಳು ನಡೆಯಲಿ, ಅವರಲ್ಲಿ ಅರಿವು ಹೆಚ್ಚಲಿ. ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ತರಗತಿಯಲ್ಲಿ ಒಬ್ಬ ಮಾನಿಟರ್ ಇರುವಂಥ ಮಾದರಿಯಲ್ಲಿಯೇ ಪೌಷ್ಟಿಕತೆ ಪ್ರತಿನಿಧಿಸುವ ಮಾನಿಟರ್ ಕೂಡ ಇರಲಿ. ಅಂಕಪಟ್ಟಿಯಂತೆಯೇ ಪೌಷ್ಟಿಕ ಪಟ್ಟಿಯನ್ನೂ ಮಾಡಬೇಕಿದೆ. ಇಂಥವೆಲ್ಲ ಕಾರ್ಯಗಳನ್ನು ಆರಂಭಿಸಬೇಕಿದೆ. ಪೌಷ್ಟಿಕ ಮಾಸಾಚರಣೆ ಹಿನ್ನೆಲೆಯಲ್ಲಿ ಎಂವೈಜಿಒವಿ (MyGov) ಪೋರ್ಟಲ್ ನಲ್ಲಿ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯನ್ನೂ ಆಯೋಜಿಸಲಾಗುವುದು. ಇದರೊಂದಿಗೆ ಮೀಮ್ ಗಳ ಸ್ಪರ್ಧೆಯೂ ನಡೆಯಲಿದೆ. ತಾವು ಸ್ವಯಂ ಇದರಲ್ಲಿ ಸ್ಪರ್ಧಿಸಿ ಹಾಗೂ ಇನ್ನೊಬ್ಬರನ್ನೂ ಪಾಲ್ಗೊಳ್ಳಲು ಪ್ರೇರೇಪಿಸಿ.

ಜತೆಗಾರರೇ, ತಮಗೆ ಯಾವಾಗಲಾದರೂ ಗುಜರಾತ್ ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ನೋಡಲು ಅವಕಾಶ ಸಿಕ್ಕಿರಬಹುದು, ಅಥವಾ ಕೋವಿಡ್ ನಂತರ ಪ್ರವಾಸಿಗರಿಗೆ ತೆರೆದ ಬಳಿಕ ಅಲ್ಲಿಗೆ ಭೇಟಿ ನೀಡಲು ಅವಕಾಶ ಸಿಗಬಹುದು. ಅಲ್ಲೊಂದು ವಿಶಿಷ್ಟ ಪ್ರಕಾರದ ಪೌಷ್ಟಿಕ ಉದ್ಯಾನವನ್ನು ನಿರ್ಮಿಸಲಾಗಿದೆ. ನೀವು ಅಲ್ಲಿಗೆ ಹೋದಾಗ ಆಟವಾಡುತ್ತ, ಆನಂದಪಡುತ್ತ ಪೌಷ್ಟಿಕತೆಯ ಕುರಿತು ಶಿಕ್ಷಣ ನೀಡುವ ಉದ್ಯಾನವನ್ನು ಖಂಡಿತವಾಗಿ ನೋಡಿ ಬನ್ನಿ.

ಜತೆಗಾರರೇ, ಭಾರತವು ಒಂದು ವಿಶಾಲವಾದ ದೇಶವಾಗಿದೆ, ಆಹಾರ ವೈವಿಧ್ಯ ಇಲ್ಲಿ ಅಪಾರ. ನಮ್ಮ ದೇಶದಲ್ಲಿ ಬೇರೆ ಬೇರೆ ಋತುಗಳು ಬರುತ್ತವೆ. ಬೇರೆ ಬೇರೆ ಸ್ಥಳಗಳಲ್ಲಿ ಅಲ್ಲಿನ ಹವಾಮಾನವನ್ನು ಆಧರಿಸಿ ವಿಭಿನ್ನ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ, ಪ್ರತಿಯೊಂದು ಪ್ರದೇಶದ ಹವಾಮಾನ, ಅಲ್ಲಿನ ಸ್ಥಳೀಯ ಊಟ, ಅಲ್ಲಿನ ಅನ್ನ, ಹಣ್ಣುಗಳು, ತರಕಾರಿಗಳಿಗೆ ಅನುಗುಣವಾಗಿ ಪೌಷ್ಟಿಕಾಂಶ ಭರಿತ ಆಹಾರ ಸೇವನೆಯ ಯೋಜನೆಯನ್ನು ಮಾಡಿಕೊಳ್ಳಿ. ಪ್ರಧಾನ ಧಾನ್ಯಗಳು, ಕಿರುಧಾನ್ಯಗಳು, ರಾಗಿ, ಜೋಳ ಇವು ಅತ್ಯುತ್ತಮ ಪೌಷ್ಟಿಕ ಆಹಾರಗಳು. ಒಂದು ಭಾರತೀಯ ಕೃಷಿ ಕೋಶವನ್ನು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಪ್ರತಿ ಜಿಲ್ಲೆಯಲ್ಲಿ ಯಾವ ಬೆಳೆ ಬರುತ್ತದೆ, ಅವುಗಳ ಪೌಷ್ಟಿಕತೆಯ ಮೌಲ್ಯವೆಷ್ಟು ಎನ್ನುವ ಎಲ್ಲ ಮಾಹಿತಿ ಸಿಗಲಿದೆ. ಇದು ತಮ್ಮೆಲ್ಲರಿಗೂ ಪ್ರಯೋಜನಕ್ಕೆ ಬರುವ ಕೋಶವಾಗಬಲ್ಲದು. ಬನ್ನಿ, ಇದು ಪೌಷ್ಟಿಕತೆಯ ಮಾಸದಲ್ಲಿ ಪೌಷ್ಟಿಕ ಆಹಾರ ಹಾಗೂ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳುವ ಬಗ್ಗೆ ನಮಗೆಲ್ಲರಿಗೂ ಪ್ರೇರಣೆ ನೀಡಬಲ್ಲದು.

ಪ್ರೀತಿಯ ದೇಶವಾಸಿಗಳೇ, ನಾವು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಒಂದು ಹೃದಯಸ್ಪರ್ಶಿ ವಿಚಾರದ ಬಗ್ಗೆ ನನ್ನ ಗಮನವಿತ್ತು. ಅದು, ನಮ್ಮ ರಕ್ಷಣಾಬಲದ ಎರಡು ಬಲಶಾಲಿ ಜೀವಿಗಳ ಕುರಿತಾಗಿತ್ತು. ಒಂದು ಸೋಫಿ ಹಾಗೂ ಇನ್ನೊಂದು ವಿದಾ. ಸೋಪಿ ಹಾಗೂ ವಿದಾ ಇವು ಭಾರತೀಯ ಸೇನೆಯ ಶ್ವಾನಗಳು. ಅವುಗಳಿಗೆ ಸೇನಾ ಮುಖ್ಯಸ್ಥರು ಮೆಚ್ಚುಗೆ ಪತ್ರವನ್ನು ನೀಡಿ ಗೌರವಿಸಿದರು. ಸೋಫಿ ಮತ್ತು ವಿದಾ ನಾಯಿಗಳಿಗೆ ಸಮ್ಮಾನ ಯಾಕೆ ಸಿಕ್ಕಿತೆಂದರೆ, ಇವು ದೇಶ ಕಾಯುವ ತಮ್ಮ ಕರ್ತವ್ಯವನ್ನು ಬಹಳ ಅದ್ಭುತವಾಗಿ ನಿಭಾಯಿಸಿವೆನಮ್ಮ ರಕ್ಷಣಾ ಬಲದಲ್ಲಿರುವ ಇಂಥ ಅನೇಕ ಬಹಾದ್ದೂರ್ ಶ್ವಾನಗಳು ದೇಶಕ್ಕಾಗಿಯೇ ಬದುಕುತ್ತವೆ ಹಾಗೂ ದೇಶಕ್ಕಾಗಿ ತಮ್ಮ ಬಲಿದಾನವನ್ನೂ ಮಾಡುತ್ತವೆ. ಬಾಂಬ್ ಸ್ಫೋಟದಂತಹ ಎಷ್ಟೆಲ್ಲ ಘಟನೆಗಳಲ್ಲಿ, ಭಯೋತ್ಪಾದಕರು ತಪ್ಪಿಸಿಕೊಂಡು ಹೋಗದಂತೆ ತಡೆದು ನಿಲ್ಲಿಸುವಲ್ಲಿ ಇಂಥ ಶ್ವಾನಗಳು ಮಹತ್ವದ ಪಾತ್ರ ನಿಭಾಯಿಸಿವೆ. ದೇಶದ ಸಂರಕ್ಷಣೆಯಲ್ಲಿ ಶ್ವಾನಗಳ ಪಾತ್ರ ಎಂಥದ್ದು ಎಂದು ತಿಳಿಯುವ ಅವಕಾಶ ನನಗೆ ಕೆಲ ಸಮಯದ ಹಿಂದೆ ಸಿಕ್ಕಿತು. ಸಾಕಷ್ಟು ಕಥೆಗಳನ್ನೂ ಕೇಳಿದೆ. 2006ರಲ್ಲಿ ಬಲರಾಮ ಎನ್ನುವ ನಾಯಿ ಅಮರನಾಥ ಯಾತ್ರೆಯ ದಾರಿಯಲ್ಲಿ ಇರಿಸಿದ್ದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಅಗೆದು ಪತ್ತೆ ಮಾಡಿತ್ತು2002ರಲ್ಲಿ ಭಾವನಾ ಐಇಡಿ ಪತ್ತೆ ಹಚ್ಚಿತ್ತು. ಐಇಡಿ ತೆಗೆಯುವಾಗ ಉಗ್ರರು ಬಾಂಬ್ ಸ್ಫೋಟಿಸಿದ್ದರು  ಹಾಗೂ ಶ್ವಾನಗಳು ಹುತಾತ್ಮವಾಗಿದ್ದವು. 2-3 ವರ್ಷಗಳ ಹಿಂದೆ ಛತ್ತೀಸ್ ಗಢದ ಬೀಜಾಪುರ ದಲ್ಲಿ ಸಿಆರ್ ಪಿಎಫ್ ಗೆ ಸೇರಿದ್ದ ಸ್ನಿಫರ್ ಶ್ವಾನ ಸಹ ಐಇಡಿ ಸ್ಫೋಟದಿಂದ ಹುತಾತ್ಮವಾಗಿತ್ತು. ಬೀಡ್ ಪೊಲೀಸರು ತಮ್ಮ ಜತೆಗಾರ ಶ್ವಾನವಾಗಿದ್ದ ರಾಕಿಗೆ ಸಂಪೂರ್ಣ ಸನ್ಮಾನದೊಂದಿಗೆ ಅಂತಿಮ ವಿದಾಯ ಹೇಳಿದ್ದ ಅತ್ಯಂತ ಭಾವಪೂರ್ಣ ದೃಶ್ಯವೊಂದನ್ನು ಕೆಲವು ದಿನಗಳ ಹಿಂದಷ್ಟೇ ತಾವು ಟಿವಿಯಲ್ಲಿ ಬಹುಶಃ ನೋಡಿದ್ದಿರಬಹುದು. ರಾಕಿಯು 300ಕ್ಕೂ ಹೆಚ್ಚು ಪ್ರಕರಣಗಳನ್ನು ಬಗೆಹರಿಸಲು ಪೊಲೀಸರಿಗೆ ನೆರವು ನೀಡಿತ್ತು. ಶ್ವಾನಗಳು ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯದಲ್ಲೂ ಬಹಳ ಮಹತ್ವದ ಪಾತ್ರ ವಹಿಸುತ್ತವೆ. ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ-ಎನ್ ಡಿಆರ್ ಎಫ್ ಇಂಥ ಡಜನ್ನುಗಟ್ಟಲೆ ಶ್ವಾನಗಳಿಗೆ ವಿಶೇಷವಾದ ತರಬೇತಿ ನೀಡಿದೆ. ಎಲ್ಲಾದರೂ ಭೂಕಂಪವಾದಾಗ, ಕಟ್ಟಡ ಕುಸಿದಾಗ ಅವಶೇಷಗಳ ಅಡಿ ಸಿಲುಕಿರುವ ಜನರನ್ನು ರಕ್ಷಿಸುವಲ್ಲಿ ನಾಯಿಗಳು ಅತ್ಯಂತ ತಜ್ಞತೆ ಹೊಂದಿರುತ್ತವೆ.

ಜತೆಗಾರರೇ, ಭಾರತೀಯ ತಳಿಯ ಶ್ವಾನಗಳೂ ಅತ್ಯಂತ ಚೆನ್ನಾಗಿರುತ್ತವೆ ಎಂದು ನನಗೆ ತಿಳಿಯಿತು. ಭಾರತೀಯ ತಳಿಗಳಲ್ಲಿ ಮುಧೋಳ ಹೌಂಡ್ ಇದೆ, ಹಿಮಾಚಲದ ತಳಿಯಿದೆ, ಇವು ಅತ್ಯಂತ ಶ್ರೇಷ್ಠವಾದ ತಳಿಗಳಾಗಿವೆ. ರಾಜಾಪಲಾಯಂ, ಕನ್ನಿ, ಚಿಪ್ಪೀಪರಾಯಿ ಹಾಗೂ ಕೋಂಬಾಯಿ ತಳಿಗಳೂ ಸಹ ಬಹಳ ಬುದ್ಧಿವಂತ ಭಾರತೀಯ ಶ್ವಾನ ತಳಿಗಳಾಗಿವೆ. ಇವುಗಳನ್ನು ಪಾಲನೆ ಮಾಡಲು ವೆಚ್ಚವೂ ಬಹಳ ಕಡಿಮೆ. ಅಲ್ಲದೆ, ಇವು ಭಾರತದ ವಾತಾವರಣಕ್ಕೆ ಚೆನ್ನಾಗಿ ಹೊಂದುತ್ತವೆ. ನಮ್ಮ ರಕ್ಷಣಾ ಏಜೆನ್ಸಿಗಳೂ ಭಾರತೀಯ ತಳಿಯ ಶ್ವಾನಗಳನ್ನೇ ತಮ್ಮ ಭದ್ರತಾ ಕಾರ್ಯದಲ್ಲಿ ಬಳಕೆ ಮಾಡುತ್ತಿವೆ. ಕೆಲವು ಸಮಯದ ಹಿಂದೆ ಸೇನೆ, ಸಿಐಎಸ್ ಎಫ್, ಎನ್ ಎಸ್ ಜಿ ಗಳು ಮುಧೋಳ ಜಾತಿಯ ಶ್ವಾನಗಳಿಗೆ ತರಬೇತಿ ನೀಡಿ ಶ್ವಾನ ದಳಕ್ಕೆ ಸೇರ್ಪಡೆ ಮಾಡಿಕೊಂಡಿವೆ. ಸಿಆರ್ ಪಿಎಫ್ ಕೋಂಬಾಯಿ ಜಾತಿಯ ನಾಯಿಗಳನ್ನು ತಮ್ಮ ದಳಕ್ಕೆ ಸೇರಿಸಿಕೊಂಡಿವೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ ಸಹ ಭಾರತೀಯ ತಳಿಗಳ ನಾಯಿಗಳ ಮೇಲೆ ಅಧ್ಯಯನ ಮಾಡುತ್ತಿದೆ. ಭಾರತೀಯ ತಳಿಗಳನ್ನು ಇನ್ನಷ್ಟು ಉತ್ತಮಪಡಿಸುವುದು ಹಾಗೂ ಹೆಚ್ಚು ಪ್ರಯೋಜನಕಾರಿಯನ್ನಾಗಿಸುವುದು ಇದರ ಉದ್ದೇಶವಾಗಿದೆ. ತಾವು ಅಂತರ್ಜಾಲದಲ್ಲಿ ಇವುಗಳ ಹೆಸರನ್ನು ಹುಡುಕಿದರೆ ತಳಿಗಳ ಬಗ್ಗೆ ಮಾಹಿತಿ ಸಿಗುತ್ತದೆ. ಇವುಗಳ ಸೌಂದರ್ಯ, ಅರ್ಹತೆ, ಗುಣಗಳನ್ನು ನೋಡಿದರೆ ಖಂಡಿತವಾಗಿ ಅಚ್ಚರಿಪಡುತ್ತೀರಿ. ಮುಂದಿನ ಬಾರಿ ತಾವು ನಾಯಿ ಸಾಕಲು ಇಚ್ಛಿಸಿದರೆ ಖಂಡಿತವಾಗಿ ಇಂಥ ಭಾರತೀಯ ತಳಿಗಳನ್ನೇ ಮನೆಗೆ ತನ್ನಿ. ಸ್ವಾವಲಂಬಿ ಭಾರತ ಜನಮನದ ಮಂತ್ರವೇ ಆಗಿರುವಾಗ ಯಾವುದೇ ಕ್ಷೇತ್ರ ಇದರಿಂದ ಹೊರಗುಳಿಯುವುದು ಹೇಗೆ?

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲ ದಿನಗಳ ನಂತರ ಸೆಪ್ಟೆಂಬರ್ 5ರಂದು ನಾವು ಶಿಕ್ಷಕರ ದಿನವ್ನನು ಆಚರಿಸುತ್ತೇವೆ. ನಮ್ಮ ಜೀವನದ ಸಾಫಲ್ಯಗಳು ಹಾಗೂ ಹಿಂದಿನ ದಿನಗಳನ್ನು ಒಮ್ಮೆ ನೆನಪಿಸಿಕೊಂಡರೆ ಒಬ್ಬರಾದರೂ ಶಿಕ್ಷಕರು ನಮ್ಮ ಸ್ಮರಣೆಗೆ ಬರುತ್ತಾರೆ. ಶೀಘ್ರವಾಗಿ ಬದಲಾಗುತ್ತಿರುವ ಸಮಯ ಹಾಗೂ ಕೊರೋನಾ ಸಂಕಟದ ಕಾಲದಲ್ಲಿ ನಮ್ಮ ಶಿಕ್ಷಕರಿಗೂ ಸಮಯದೊಂದಿಗೆ ಬದಲಾಗಬೇಕಾದ ಸವಾಲು ಎದುರಾಗಿದೆ. ನಮ್ಮ ಶಿಕ್ಷಕರು ಸವಾಲನ್ನು ಸ್ವೀಕಾರ ಮಾಡಿದ್ದಷ್ಟೇ ಅಲ್ಲ, ಬದಲಿಗೆ ಅದನ್ನೊಂದು  ಅವಕಾಶವನ್ನಾಗಿಯೂ ಸೃಷ್ಟಿ ಮಾಡಿದ್ದಾರೆ ಎನ್ನಲು ಬಹಳ ಸಂತಸವಾಗುತ್ತದೆ. ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೇಗೆ ಮಾಡಬೇಕು, ಹೊಸ ವಿಧಾನಗಳನ್ನು ಹೇಗೆ ತಮ್ಮದಾಗಿಸಿಕೊಳ್ಳಬೇಕು, ವಿದ್ಯಾರ್ಥಿಗಳಿಗೆ ಹೇಗೆ ನೆರವಾಗಬೇಕು ಎನ್ನುವ ವಿಚಾರಗಳನ್ನು ನಮ್ಮ ಶಿಕ್ಷಕರು ಬಹಳ ಸಹಜವಾಗಿ ಅರಿತುಕೊಂಡಿದ್ದಾರೆ ಮತ್ತು ತಮ್ಮ ವಿದ್ಯಾರ್ಥಿಗಳಿಗೂ ಬೋಧಿಸುತ್ತಿದ್ದಾರೆ. ಇಂದು ದೇಶದ ಪ್ರತಿಯೊಂದು ಪ್ರದೇಶದಲ್ಲಿ ಒಂದಲ್ಲ ಒಂದು ರೀತಿಯ ಆವಿಷ್ಕಾರಗಳು ನಡೆಯುತ್ತಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಹೊಸತನ್ನು ಸೃಷ್ಟಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಯಾವ ರೀತಿಯ ಅಗಾಧ  ಬದಲಾವಣೆ ಆಗಲಿದೆಯೋ ಅದರ ಲಾಭವನ್ನೂ ಸಹ ಶಿಕ್ಷಕರು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎನ್ನುವ ನಂಬಿಕೆ ನನಗಿದೆ.

ಜತೆಗಾರರೇ, ವಿಶೇಷವಾಗಿ ನನ್ನ ಶಿಕ್ಷಕ ಬಂಧುಗಳೇ, 2022ರಲ್ಲಿ ನಮ್ಮ ದೇಶ ಸ್ವತಂತ್ರವಾದ 75ನೇ ವರ್ಷವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯಕ್ಕೂ ಮುನ್ನ ಅನೇಕ ವರ್ಷಗಳವರೆಗೆ ನಮ್ಮ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿತ್ತು. ಅದೊಂದು ದೊಡ್ಡ ಇತಿಹಾಸ. ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಲ್ಲದೇ ಇರುವ ದೇಶದ ಯಾವ ಭಾಗವೂ ಇಲ್ಲ. ಜನ ತಮ್ಮ ಸರ್ವಸ್ವವನ್ನೂ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದರು. ನಮ್ಮ ಇಂದಿನ ಪೀಳಿಗೆ, ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟ, ಅದರಲ್ಲಿ ಪಾಲ್ಗೊಂಡಿದ್ದ ದೇಶದ ನಾಯಕರ ಬಗ್ಗೆ ತಿಳಿದುಕೊಳ್ಳಬೇಕು, ಅವರು ಅಷ್ಟೇ ತೀವ್ರವಾಗಿ ಅದನ್ನು ಅನುಭವಿಸಬೇಕು. ತಮ್ಮ ಜಿಲ್ಲೆ, ಪ್ರದೇಶಗಳಲ್ಲಿ ಸ್ವಾತಂತ್ರ್ಯ ಆಂದೋಲನ ಹೇಗಾಯಿತು, ಏನಾಯಿತು, ಯಾರೆಲ್ಲ ಹುತಾತ್ಮರಾದರು, ಯಾರು ಎಷ್ಟು ಸಮಯ ದೇಶಕ್ಕಾಗಿ ಜೈಲಿನಲ್ಲಿದ್ದರು ಎನ್ನುವ ಎಲ್ಲ ಮಾಹಿತಿಯನ್ನು ವಿದ್ಯಾರ್ಥಿಗಳು ತಿಳಿಯುವಂತಾಗಬೇಕು. ಇದರಿಂದ ಅವರ ವ್ಯಕ್ತಿತ್ವದ ಮೇಲೂ ಪರಿಣಾಮವುಂಟಾಗುತ್ತದೆ. ಇದಕ್ಕಾಗಿ ಅನೇಕ ಕೆಲಸಗಳನ್ನು ಮಾಡಬೇಕಿದೆ. ಇದರಲ್ಲಿ ನಮ್ಮ ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿದೆ. ತಾವು ಯಾವ ಜಿಲ್ಲೆಯಲ್ಲಿದ್ದೀರೋ ಅಲ್ಲಿ ಶತಮಾನಗಳ ಕಾಲ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದಾದರೂ ಘಟನೆಗಳು ಸಂಭವಿಸಿವೆಯೇ ಎನ್ನುವ ಕುರಿತು ವಿದ್ಯಾರ್ಥಿಗಳಿಂದ ಅಧ್ಯಯನ ಸಂಶೋಧನೆ ಮಾಡಿಸಬಹುದು. ಅದನ್ನು ಹಸ್ತಪ್ರತಿಯ ರೂಪದಲ್ಲಿ ಸಿದ್ಧ ಮಾಡಬಹುದುಅಲ್ಲದೆ, ತಮ್ಮ ನಗರದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ಯಾವುದೇ ಸ್ಥಳವಿದ್ದರೂ ಅಲ್ಲಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬಹುದು. ಯಾವುದೇ ಶಾಲೆಯ ವಿದ್ಯಾರ್ಥಿ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 75 ನಾಯಕರ ಬಗ್ಗೆ ಕವಿತೆ ಬರೆಯುವ ಬಗ್ಗೆಯೂ ನಿರ್ಧರಿಸಬಹುದು. ನಾಟ್ಯ, ರೂಪಕಗಳನ್ನೂ ಬರೆಯಬಹುದು. ತಮ್ಮ ಪ್ರಯತ್ನವು, ಇದುವರೆಗೂ ಬೆಳಕಿಗೆ ಬಂದಿಲ್ಲದ ದೇಶದ ಲಕ್ಷಾಂತರ ಅನಾಮಧೇಯ ನಾಯಕರ ಹೆಸರುಗಳನ್ನು ಮುಂಚೂಣಿಗೆ ತರಬಲ್ಲದು. ಯಾರು ದೇಶಕ್ಕಾಗಿ ಜೀವಿಸಿದರೋ, ದೇಶಕ್ಕಾಗಿ ಜೈಲಿಗೆ ಹೋದರೋ, ಸಮಯ ಕಳೆದಂತೆ ಯಾರೆಲ್ಲ ವಿಸ್ಮೃತಿಗೆ ಸಂದರೋ ಎಲ್ಲ ವ್ಯಕ್ತಿತ್ವಗಳನ್ನು 75ನೇ ಸ್ವಾತಂತ್ರ್ಯ ವರ್ಷದಲ್ಲಿ ನೆನಪಿಸಿಕೊಂಡರೆ, ಬೆಳಕಿಗೆ ತಂದರೆ ಅವರಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಿದಂತಾಗುತ್ತದೆ. ಸೆಪ್ಟೆಂಬರ್ 5ರಂದು ಶಿಕ್ಷಕ ದಿನವನ್ನು ಆಚರಿಸುತ್ತೇವೆ, ಶಿಕ್ಷಕರು ಇಂಥದ್ದೊಂದು ವಾತಾವರಣವನ್ನು ನಿರ್ಮಿಸಲಿ, ಎಲ್ಲರನ್ನೂ ಜತೆಗೂಡಿ, ಸೇರಿಕೊಂಡು ಮಾಹಿತಿ ಸಂಗ್ರಹಿಸಲಿ ಎಂದು ನಾನು ಶಿಕ್ಷಕ ಬಂಧುಗಳನ್ನು ಒತ್ತಾಯಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ದೇಶವು ಇಂದು ಯಾವ ಪ್ರಗತಿಯ ಯಾತ್ರೆಯಲ್ಲಿ ಸಾಗುತ್ತಿದೆಯೋ ಅದು ಎಲ್ಲ ದೇಶವಾಸಿಗಳು ಭಾಗಿಯಾದಾಗ ಮಾತ್ರವೇ ಸಫಲವಾಗುತ್ತದೆ. ಯಾತ್ರೆಯ ಯಾತ್ರಿಕರಾಗಿ. ಪಥದ ಪಥಿಕರಾಗಿ. ಇದಕ್ಕಾಗಿ ಪ್ರತಿಯೊಬ್ಬರೂ ಆರೋಗ್ಯಪೂರ್ಣವಾಗಿರಬೇಕು. ಸುಖವಾಗಿರಬೇಕು. ನಾವೆಲ್ಲರೂ ಸೇರಿ ಕೊರೋನಾವನ್ನು ಸಂಪೂರ್ಣವಾಗಿ ಸೋಲಿಸೋಣ. ತಾವೆಲ್ಲರೂ ಸುರಕ್ಷಿತವಾಗಿದ್ದಾಗ, ಯಾವಾಗ ಎರಡು ಗಜದ ದೂರವನ್ನು ನಿಭಾಯಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸುವ ಸಂಕಲ್ಪವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೀರೋ ಆಗ ಕೊರೋನಾ ಸೋಲುಣ್ಣುತ್ತದೆ. ತಾವೆಲ್ಲರೂ ಆರೋಗ್ಯದಿಂದಿರಿ, ಸುಖವಾಗಿರಿ. ಶುಭಕಾಮನೆಗಳೊಂದಿಗೆ ಮುಂದಿನ ಮನದ ಮಾತಿನಲ್ಲಿ ಮತ್ತೆ ಸಿಗೋಣ.

ಧನ್ಯವಾದಗಳು, ನಮಸ್ಕಾರ

***



(Release ID: 1649714) Visitor Counter : 274