ಸಂಪುಟ
ಸಾಮಾನ್ಯ ಅರ್ಹತಾ ಪರೀಕ್ಷೆ ಗೆ ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸಂಪುಟದ ಅನುಮೋದನೆ
ಕೇಂದ್ರ ಸರ್ಕಾರದ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆಗೆ ದಾರಿ ಮಾಡಿಕೊಟ್ಟಿದೆ
ಎನ್ಆರ್ಎ: ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ), ರೈಲ್ವೆ ನೇಮಕಾತಿ ಮಂಡಳಿಗಳು (ಆರ್ಆರ್ಬಿ) ಮತ್ತು ಬ್ಯಾಂಕಿಂಗ್ ಸಿಬ್ಬಂದಿ ಸೇವಾ ಸಂಸ್ಥೆ (ಐಬಿಪಿಎಸ್) ಗಳ ಮೊದಲ ಹಂತದ ಪರೀಕ್ಷೆಯನ್ನು ಒಳಗೊಳ್ಳುವ ಬಹು-ಏಜೆನ್ಸಿ ಸಂಸ್ಥೆ
ಎಸ್ಎಸ್ಸಿ, ಆರ್ಆರ್ಬಿ ಮತ್ತು ಐಬಿಪಿಎಸ್ಗೆ ಮೊದಲ ಹಂತದಲ್ಲಿ ಅಭ್ಯರ್ಥಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ)
ಸಿಇಟಿ: ಕಂಪ್ಯೂಟರ್ ಆಧಾರಿತ ಆನ್ಲೈನ್ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ಪದವೀಧರ, ಹೈಯರ್ ಸೆಕೆಂಡರಿ (12 ನೇ ತರಗತಿ ಉತ್ತೀರ್ಣ) ಮತ್ತು ಮೆಟ್ರಿಕ್ಯುಲೇಟ್ (10 ನೇ ತರಗತಿ ಉತ್ತೀರ್ಣ) ಅಭ್ಯರ್ಥಿಗಳಿಗೆ ವಿನೂತನ ಮಾದರಿಯಾಗಲಿದೆ
ಪ್ರತಿ ಜಿಲ್ಲೆಯಲ್ಲಿ ಸಿಇಟಿ: ಗ್ರಾಮೀಣ ಯುವಕರು, ಮಹಿಳೆಯರು ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ ಸುಲಭ ಲಭ್ಯತೆ
ಸಿಇಟಿ: ಮಹತ್ವಾಕಾಂಕ್ಷಿ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳ ಲಭ್ಯೆತೆಯ ಬಗ್ಗೆ ಗಮನ
Posted On:
19 AUG 2020 4:26PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್ಎ) ಸ್ಥಾಪನೆಗೆ ಅನುಮೋದನೆ ನೀಡಿದ್ದು, ಇದು ಕೇಂದ್ರ ಸರ್ಕಾರದ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿವರ್ತನೆಯ ಸುಧಾರಣೆಗೆ ದಾರಿ ಮಾಡಿಕೊಟ್ಟಿದೆ.
ನೇಮಕಾತಿ ಸುಧಾರಣೆ - ಯುವಕರಿಗೆ ವರದಾನ
ಪ್ರಸ್ತುತ, ಸರ್ಕಾರಿ ಉದ್ಯೋಗಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳು ಒಂದೇ ರೀತಿಯ ಅರ್ಹತಾ ಷರತ್ತುಗಳನ್ನು ಹೊಂದಿರುವ ವಿವಿಧ ಹುದ್ದೆಗಳಿಗೆ ಹಲವಾರು ನೇಮಕಾತಿ ಏಜೆನ್ಸಿಗಳು ನಡೆಸುವ ಪ್ರತ್ಯೇಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಇದಕ್ಕಾಗಿ ಅಭ್ಯರ್ಥಿಗಳು ಅನೇಕ ನೇಮಕಾತಿ ಏಜೆನ್ಸಿಗಳಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ವಿವಿಧ ಪರೀಕ್ಷೆಗಳಿಗೆ ಹಾಜರಾಗಲು ದೂರದ ಪ್ರಯಾಣ ಮಾಡಬೇಕಾಗುತ್ತದೆ. ಈ ಬಹು ನೇಮಕಾತಿ ಪರೀಕ್ಷೆಗಳು ಅಭ್ಯರ್ಥಿಗಳ ಮೇಲೆ, ಆಯಾ ನೇಮಕಾತಿ ಏಜೆನ್ಸಿಗಳ ಮೇಲೆ, ತಪ್ಪಿಸಬಹುದಾದ / ಪುನರಾವರ್ತಿತವಾದ ಖರ್ಚು, ಕಾನೂನು ಮತ್ತು ಸುವ್ಯವಸ್ಥೆ / ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸ್ಥಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಒಳಗೊಂಡಿರುತ್ತವೆ. ಈ ಪ್ರತಿಯೊಂದು ಪರೀಕ್ಷೆಗೆ ಸರಾಸರಿ 2.5 ಕೋಟಿಯಿಂದ 3 ಕೋಟಿ ಅಭ್ಯರ್ಥಿಗಳು ಹಾಜರಾಗುತ್ತಾರೆ. ಸಾಮಾನ್ಯ ಅರ್ಹತಾ ಪರೀಕ್ಷೆಯು ಈ ಅಭ್ಯರ್ಥಿಗಳಿಗೆ ಒಮ್ಮೆ ಹಾಜರಾಗಲು ಮತ್ತು ಉನ್ನತ ಮಟ್ಟದ ಪರೀಕ್ಷೆಗೆ ಯಾವುದಾದರೂ ಒಂದು ಅಥವಾ ಎಲ್ಲಾ ನೇಮಕಾತಿ ಏಜೆನ್ಸಿಗಳಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಇದು ನಿಜಕ್ಕೂ ಪರೀಕ್ಷಾರ್ಥಿಗಳಿಗೆ ವರದಾನವಾಗಿದೆ.
ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್ಎ)
ಬಹು-ಏಜೆನ್ಸಿ ಸಂಸ್ಥೆಯಾದ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್ಎ) ಯು ಗ್ರೂಪ್ ಬಿ ಮತ್ತು ಸಿ (ತಾಂತ್ರಿಕೇತರ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಕ್ರೀನ್ / ಶಾರ್ಟ್ಲಿಸ್ಟ್ ಮಾಡಲು ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು (ಸಿಇಟಿ) ನಡೆಸಲಿದೆ. ಎನ್ಆರ್ಎ ರೈಲ್ವೆ ಸಚಿವಾಲಯ, ಹಣಕಾಸು ಸಚಿವಾಲಯ / ಹಣಕಾಸು ಸೇವೆಗಳ ಇಲಾಖೆ, ಎಸ್.ಎಸ್.ಸಿ, ಆರ್.ಆರ್.ಬಿ ಮತ್ತು ಐಬಿಪಿಎಸ್ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಎನ್ಆರ್ಎ ಕೇಂದ್ರ ಸರ್ಕಾರದ ನೇಮಕಾತಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ಅಭ್ಯಾಸಗಳನ್ನು ತರುವ ವಿಶೇಷ ಸಂಸ್ಥೆಯಾಗಲಿದೆ ಎಂದು ಹೇಳಲಾಗಿದೆ.
ಪರೀಕ್ಷಾ ಕೇಂದ್ರಗಳ ಲಭ್ಯತೆ
ದೇಶದ ಪ್ರತಿಯೊಂದು ಜಿಲ್ಲೆಯ ಪರೀಕ್ಷಾ ಕೇಂದ್ರಗಳು ದೂರದ ಪ್ರದೇಶಗಳಲ್ಲಿರುವ ಅಭ್ಯರ್ಥಿಗಳಿಗೆ ಲಭ್ಯತೆಯನ್ನು ಹೆಚ್ಚಿಸುತ್ತವೆ. 117 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಪರೀಕ್ಷಾ ಮೂಲಸೌಕರ್ಯಗಳನ್ನು ಸ್ಥಾಪಿಸುವ ಬಗ್ಗೆ ವಿಶೇಷ ಗಮನ ನೀಡುವುದರಿಂದ ಅಭ್ಯರ್ಥಿಗಳು ತಮ್ಮ ವಾಸ ಸ್ಥಳಕ್ಕೆ ಹತ್ತಿರವಿರುವ ಸ್ಥಳದಲ್ಲಿಯೇ ಪರೀಕ್ಷಾ ಕೇಂದ್ರದ ಲಭ್ಯತೆಯಿಂದಾಗಿ ಹೆಚ್ಚಿನ ಪ್ರಯೋಜನವಾಗಲಿದೆ. ವೆಚ್ಚ, ಶ್ರಮ, ಸುರಕ್ಷತೆಗಳಿಗೆ ಸಂಬಂಧಿಸಿದಂತೆ ಅಪಾರ ಪ್ರಯೋಜನಗಳಾಗಲಿವೆ. ಈ ಪ್ರಸ್ತಾಪವು ಗ್ರಾಮೀಣ ಅಭ್ಯರ್ಥಿಗಳಿಗೆ ಲಭ್ಯತೆಯನ್ನು ಸುಲಭಗೊಳಿಸುವುದಲ್ಲದೆ, ದೂರದ ಪ್ರದೇಶಗಳಲ್ಲಿ ವಾಸಿಸುವ ಗ್ರಾಮೀಣ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ ಮತ್ತು ಆ ಮೂಲಕ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯವನ್ನು ಹೆಚ್ಚಿಸುತ್ತದೆ. ಉದ್ಯೋಗಾವಕಾಶಗಳನ್ನು ಜನರಿಗೆ ಹತ್ತಿರವಾಗಿಸುವುದು ಆಮೂಲಾಗ್ರ ಹೆಜ್ಜೆಯಾಗಿದ್ದು ಅದು ಯುವಜನರ ಸುಲಭ ಜೀವನವನ್ನು ಹೆಚ್ಚಿಸುತ್ತದೆ.
ಬಡ ಅಭ್ಯರ್ಥಿಗಳಿಗೆ ಪ್ರಮುಖ ಪ್ರಯೋಜನ
ಪ್ರಸ್ತುತ, ಅಭ್ಯರ್ಥಿಗಳು ಅನೇಕ ಏಜೆನ್ಸಿಗಳು ನಡೆಸುವ ಬಹು ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಪರೀಕ್ಷಾ ಶುಲ್ಕದ ಹೊರತಾಗಿ, ಅಭ್ಯರ್ಥಿಗಳು ಪ್ರಯಾಣ, ವಸತಿ ಮತ್ತು ಇತರ ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಒಂದೇ ಪರೀಕ್ಷೆಯು ಅಭ್ಯರ್ಥಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.
ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚು ಪ್ರಯೋಜನ
ಮಹಿಳಾ ಅಭ್ಯರ್ಥಿಗಳು ವಿಶೇಷವಾಗಿ ಗ್ರಾಮೀಣ ಪ್ರದೇಶದವರು ಸಾರಿಗೆ ಮತ್ತು ದೂರದ ಸ್ಥಳಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಬೇಕಾಗುವುದರಿಂದ ಹಲವು ಪರೀಕ್ಷೆಗಳಿಗೆ ಹಾಜರಾಗಲು ಸಮಸ್ಯೆಗಳನ್ನುಎದುರಿಸುತ್ತಾರೆ. ಕೆಲವೊಮ್ಮೆ ದೂರದಲ್ಲಿರುವ ಈ ಕೇಂದ್ರಗಳಿಗೆ ಅವರೊಂದಿಗೆ ಹೋಗಲು ಸೂಕ್ತ ವ್ಯಕ್ತಿಗಳನ್ನು ಹುಡುಕಬೇಕಾಗುತ್ತದೆ. ಪ್ರತಿ ಜಿಲ್ಲೆಯ ಪರೀಕ್ಷಾ ಕೇಂದ್ರವು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಮತ್ತು ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಕೊಡುಗೆ
ಆರ್ಥಿಕ ಮತ್ತು ಇತರ ಸಮಸ್ಯೆಗಳಿಂದಾಗಿ, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ತಾವು ಯಾವ ಪರೀಕ್ಷೆಗೆ ಹಾಜರಾಗಬೇಕೆಂದು ಆಯ್ಕೆ ಮಾಡಿಕೊಳ್ಳಬೇಕು. ಎನ್ಆರ್ಎ ಅಡಿಯಲ್ಲಿ, ಒಂದು ಪರೀಕ್ಷೆಯಲ್ಲಿ ಹಾಜರಾಗುವ ಮೂಲಕ ಅಭ್ಯರ್ಥಿಗಳು ಅನೇಕ ಹುದ್ದೆಗಳಿಗೆ ಸ್ಪರ್ಧಿಸುವ ಅವಕಾಶವನ್ನು ಪಡೆಯುತ್ತಾರೆ. ಎನ್ಆರ್ಎ ಮೊದಲ ಹಂತದ ಪರೀಕ್ಷೆಯನ್ನು ನಡೆಸುತ್ತದೆ, ಇದು ಇತರ ಹಲವು ಆಯ್ಕೆಗಳಿಗೆ ಮೆಟ್ಟಿಲಾಗುತ್ತದೆ.
ಸಿಇಟಿ ಅಂಕಗಳಿಗೆ ಮೂರು ವರ್ಷಗಳವರೆಗೆ ಮಾನ್ಯತೆ, ಪ್ರಯತ್ನಗಳಿಗೆ ಯಾವುದೇ ನಿರ್ಬಂಧವಿಲ್ಲ
ಫಲಿತಾಂಶದ ಘೋಷಣೆಯ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಭ್ಯರ್ಥಿಯ ಸಿಇಟಿ ಸ್ಕೋರ್ ಮಾನ್ಯವಾಗಿರುತ್ತದೆ. ಮಾನ್ಯವಾದ ಸ್ಕೋರ್ಗಳಲ್ಲಿ ಉತ್ತಮವಾದದ್ದು ಅಭ್ಯರ್ಥಿಯ ಪ್ರಸ್ತುತ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಗರಿಷ್ಠ ವಯೋಮಿತಿಗೆ ಒಳಪಟ್ಟು ಸಿಇಟಿಯನ್ನು ಬರೆಯಲು ಅಭ್ಯರ್ಥಿಯ ಪ್ರಯತ್ನಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಎಸ್ಸಿ/ಎಸ್ಟಿ/ಒಬಿಸಿ ಮತ್ತು ಇತರ ವರ್ಗಗಳ ಅಭ್ಯರ್ಥಿಗಳಿಗೆ ಸರ್ಕಾರದ ಪ್ರಸ್ತುತ ನೀತಿಯ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ವಿನಾಯ್ತಿ ನೀಡಲಾಗುವುದು. ಪ್ರತಿವರ್ಷ ಈ ಪರೀಕ್ಷೆಗಳಿಗೆ ತಯಾರಿ ನಡೆಸಲು ಮತ್ತು ಬರೆಯಲು ಸಾಕಷ್ಟು ಸಮಯ, ಹಣ ಮತ್ತು ಶ್ರಮವನ್ನು ವ್ಯಯಿಸುವ ಅಭ್ಯರ್ಥಿಗಳ ಸಮಸ್ಯೆಗಳನ್ನು ಇದು ತಗ್ಗಿಸುತ್ತದೆ.
ಪ್ರಮಾಣಿತ ಪರೀಕ್ಷೆ
ಪ್ರಸ್ತುತ ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ), ರೈಲ್ವೆ ನೇಮಕಾತಿ ಮಂಡಳಿಗಳು (ಆರ್.ಆರ್.ಬಿ.) ಮತ್ತು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) ಗಳು ನಡೆಸುತ್ತಿರುವ ತಾಂತ್ರಿಕೇತರ ಹುದ್ದೆಗಳಿಗೆ ಎನ್ಆರ್ಎ ಪದವೀಧರ, ಹೈಯರ್ ಸೆಕೆಂಡರಿ (12 ನೇ ತರಗತಿ ಉತ್ತೀಣ) ಮತ್ತು ಮೆಟ್ರಿಕ್ಯುಲೇಟ್ (10 ನೇ ತರಗತಿ ಉತ್ತೀಣ) ಅಭ್ಯರ್ಥಿಗಳಿಗೆ ಮೂರು ಹಂತದ ಪ್ರತ್ಯೇಕ ಸಿಇಟಿಯನ್ನು ನಡೆಸುತ್ತದೆ. ಸಿಇಟಿ ಸ್ಕೋರ್ ಮಟ್ಟದಲ್ಲಿ ಮಾಡಿದ ಸ್ಕ್ರೀನಿಂಗ್ ಆಧಾರದ ಮೇಲೆ, ನೇಮಕಾತಿಗಾಗಿ ಅಂತಿಮ ಆಯ್ಕೆಯನ್ನು ಪ್ರತ್ಯೇಕ ವಿಶೇಷ ಶ್ರೇಣಿಗಳ (II, III ಇತ್ಯಾದಿ) ಪರೀಕ್ಷೆಯ ಮೂಲಕ ಮಾಡಲಾಗುವುದು. ಅದನ್ನು ಆಯಾ ನೇಮಕಾತಿ ಏಜೆನ್ಸಿಗಳು ನಡೆಸುತ್ತವೆ. ಈ ಪರೀಕ್ಷೆಯ ಪಠ್ಯಕ್ರಮವು ಸಾಮಾನ್ಯ ಮಟ್ಟದ್ದಾಗಿರುತ್ತದೆ. ವಿಭಿನ್ನ ಪಠ್ಯಕ್ರಮದಂತೆ ಪ್ರತಿಯೊಂದು ಪರೀಕ್ಷೆಗೂ ಸಿದ್ಧರಾಗಬೇಕಾಗಿದ್ದ ಅಭ್ಯರ್ಥಿಗಳ ಜವಾಬ್ದಾರಿಯನ್ನು ಇದು ಸರಾಗಗೊಳಿಸುತ್ತದೆ.
ಪರೀಕ್ಷೆಗಳ ನಿಗದಿ ಮತ್ತು ಕೇಂದ್ರಗಳ ಆಯ್ಕೆ
ಅಭ್ಯರ್ಥಿಗಳು ಸಾಮಾನ್ಯ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ಸೌಲಭ್ಯವನ್ನು ಹೊಂದಿರುತ್ತಾರೆ ಮತ್ತು ಕೇಂದ್ರಗಳ ಆಯ್ಕೆಯನ್ನು ಪಡೆಯುತ್ತಾರೆ. ಲಭ್ಯತೆಯ ಆಧಾರದ ಮೇಲೆ, ಅವರಿಗೆ ಕೇಂದ್ರಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಆಯ್ಕೆಯ ಕೇಂದ್ರಗಳಲ್ಲಿ ತಮ್ಮ ಪರೀಕ್ಷೆಗಳನ್ನು ನಿಗದಿಪಡಿಸುವ ಹಂತವನ್ನು ತಲುಪುವುದು ಅಂತಿಮ ಗುರಿಯಾಗಿದೆ.
ಎನ್ಆರ್ಎಯ ಔಟ್ ರೀಚ್ ಚಟುವಟಿಕೆಗಳು
ಬಹು ಭಾಷೆಗಳು
ಸಿಇಟಿ ಹಲವಾರು ಭಾಷೆಗಳಲ್ಲಿ ಲಭ್ಯವಿರುತ್ತದೆ. ಇದು ದೇಶದ ವಿವಿಧ ಭಾಗಗಳ ಜನರಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಮತ್ತು ಆಯ್ಕೆಯಾಗಲು ಸಮಾನ ಅವಕಾಶವನ್ನು ಪಡೆಯಲು ಅನುಕೂಲವಾಗುತ್ತದೆ.
ಅಂಕಗಳು - ಬಹು ನೇಮಕಾತಿ ಏಜೆನ್ಸಿಗಳಿಗೆ ಪ್ರವೇಶ
ಆರಂಭದಲ್ಲಿ ಅಂಕಗಳನ್ನು ಮೂರು ಪ್ರಮುಖ ನೇಮಕಾತಿ ಏಜೆನ್ಸಿಗಳು ಬಳಸುತ್ತವೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಇತರ ನೇಮಕಾತಿ ಏಜೆನ್ಸಿಗಳು ಇದನ್ನು ಅಳವಡಿಸಿಕೊಳ್ಳುತ್ತವೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಇತರ ಏಜೆನ್ಸಿಗಳು ಅಳವಡಿಸಿಕೊಳ್ಳಲು ಇದು ಮುಕ್ತವಾಗಿರುತ್ತದೆ. ಹೀಗಾಗಿ, ದೀರ್ಘಾವಧಿಯಲ್ಲಿ, ಸಿಇಟಿ ಸ್ಕೋರ್ ಅನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳು, ಸಾರ್ವಜನಿಕ ವಲಯದ ಉದ್ಯಮ ಮತ್ತು ಖಾಸಗಿ ವಲಯದ ಇತರ ನೇಮಕಾತಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಹುದು. ನೇಮಕಾತಿಯ ವೆಚ್ಚ ಮತ್ತು ಸಮಯವನ್ನು ಉಳಿಸಲು ಇದು ಅಂತಹ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ.
ನೇಮಕಾತಿ ಸುತ್ತುಗಳನ್ನು ಕಡಿಮೆಮಾಡುವುದು
ಒಂದೇ ಅರ್ಹತಾ ಪರೀಕ್ಷೆಯು ನೇಮಕಾತಿ ಸುತ್ತುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕೆಲವು ಇಲಾಖೆಗಳು ಯಾವುದೇ ಎರಡನೇ ಹಂತದ ಪರೀಕ್ಷೆಯನ್ನು ನಡೆಸದಿರಲು ಮತ್ತು ಸಿಇಟಿ ಅಂಕಗಳು, ದೈಹಿಕ ಪರೀಕ್ಷೆಗಳು ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿಗೆ ಮುಂದಾಗುವ ಉದ್ದೇಶವನ್ನು ವ್ಯಕ್ತಪಡಿಸಿವೆ. ಇದು ನೇಮಕಾತಿ ಸುತ್ತುಗಳನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿನ ಯುವಕರಿಗೆ ಪ್ರಯೋಜನ ನೀಡುತ್ತದೆ.
ಹಣಕಾಸು ವಿನಿಯೋಗ
ಸರ್ಕಾರವು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್ಎ) ಗೆ 1517.57 ಕೋಟಿ ರೂ. ಗಳನ್ನು ಮಂಜೂರು ಮಾಡಿದೆ. ಮೂರು ವರ್ಷಗಳ ಅವಧಿಯಲ್ಲಿ ಈ ವೆಚ್ಚವನ್ನು ಮಾಡಲಾಗುವುದು. ಎನ್ಆರ್ಎ ಸ್ಥಾಪನೆಯಲ್ಲದೇ, 117 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಪರೀಕ್ಷಾ ಮೂಲಸೌಕರ್ಯಗಳನ್ನು ಸ್ಥಾಪಿಸಲು ಇದನ್ನು ಖರ್ಚು ಮಾಡಲಾಗುವುದು.
(Release ID: 1647092)
Visitor Counter : 422
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam