ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಮನೆಗಳ ನಿರ್ಮಾಣಕ್ಕೆ 158 ಲಕ್ಷ ಮೆಟ್ರಿಕ್ ಟನ್ ಉಕ್ಕು: ಹರ್ದೀಪ್ ಸಿಂಗ್ ಪುರಿ
ನಿರ್ಮಾಣ ಹಂತದ ಸುಮಾರು 900 ಕಿ.ಮೀ ಮೆಟ್ರೋ ಯೋಜನೆಗಳಿಗೆ 1.17 ಮಿಲಿಯನ್ ಮೆಟ್ರಿಕ್ ಟನ್ ಉಕ್ಕು ಅಗತ್ಯ
ಕಳೆದ 3 ವರ್ಷಗಳಲ್ಲಿ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡಗಳ ನಿರ್ಮಾಣಕ್ಕೆ ಅಂದಾಜು 570 ಕೋಟಿ ರೂ. ಮೌಲ್ಯದ ಉಕ್ಕು ಬಳಕೆ
ನಿರ್ಮಾಣದಲ್ಲಿ ಹೊಸ ಸ್ಥಿತಿಸ್ಥಾಪಕ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಬಳಸುವಂತೆ ಉಕ್ಕು ಉದ್ಯಮಕ್ಕೆ ವಸತಿ ಸಚಿವರ ಕರೆ
Posted On:
18 AUG 2020 1:21PM by PIB Bengaluru
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ (ಯು)) ಅಡಿಯಲ್ಲಿ ಮಂಜೂರಾದ ಎಲ್ಲಾ ಮನೆಗಳ ನಿರ್ಮಾಣದಲ್ಲಿ ಅಂದಾಜು 158 ಲಕ್ಷ ಮೆಟ್ರಿಕ್ ಟನ್ ಉಕ್ಕುಮತ್ತು 692 ಲಕ್ಷ ಮೆಟ್ರಿಕ್ ಟನ್ ಸಿಮೆಂಟ್ ಬಳಸುವ ಸಾಧ್ಯತೆಯಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಸಿಐಐ ಆಯೋಜಿಸಿದ್ದ ಆತ್ಮನಿರ್ಭರ ಭಾರತ: ವಸತಿ ಮತ್ತು ನಿರ್ಮಾಣ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಉಕ್ಕಿನ ಬಳಕೆಯನ್ನು ಉತ್ತೇಜಿಸುವ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಇದುವರೆಗೆ ನಿರ್ಮಾಣ ಪ್ರಗತಿಯಲ್ಲಿರುವ ಹಾಗೂ ಪೂರ್ಣಗೊಂಡಿರುವ ಮನೆಗಳ ನಿರ್ಮಾಣದಲ್ಲಿ ಸುಮಾರು 84 ಲಕ್ಷ ಮೆಟ್ರಿಕ್ ಟನ್ ಉಕ್ಕು ಮತ್ತು 370 ಲಕ್ಷ ಮೆಟ್ರಿಕ್ ಟನ್ ಸಿಮೆಂಟ್ ಅನ್ನು ಉಪಯೋಗಿಸಲಾಗಿದೆ ಎಂದರು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಉಕ್ಕು ಖಾತೆ ರಾಜ್ಯ ಸಚಿವ ಶ್ರೀ ಎಫ್ ಎಸ್ ಕುಲ್ಹಸ್ತೆ, ನಾಗರಿಕ ವಿಮಾನಯಾನ ಕಾರ್ಯದರ್ಶಿ ಶ್ರೀ ಪಿ ಕೆ ಖರೋಲಾ, ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಡಿ ಎಸ್ ಮಿಶ್ರಾ, ಉಕ್ಕು ಕಾರ್ಯದರ್ಶಿ ಶ್ರೀ ಪಿ ಕೆ ತ್ರಿಪಾಠಿ, ಹಿರಿಯ ಅಧಿಕಾರಿಗಳು ಮತ್ತು ಉದ್ಯಮದ ಪಾಲುದಾರರು ವೆಬಿನಾರ್ನಲ್ಲಿ ಭಾಗವಹಿಸಿದ್ದರು.
ಪಿಎಂಎವೈ (ಯು) ಅಡಿಯಲ್ಲಿ, ಇದುವರೆಗೆ, 4,550 ನಗರ ನಗರಗಳಲ್ಲಿ 1.07 ಕೋಟಿ ಮನೆಗಳು (1.12 ಕೋಟಿ ಮನೆಗಳ ಬೇಡಿಕೆ) ಮತ್ತು 67 ಲಕ್ಷ ಮನೆಗಳನ್ನು ನಿರ್ಮಿಸಲಾಗಿದ್ದು 35 ಲಕ್ಷ ಮನೆಗಳನ್ನು ವಿತರಿಸಲಾಗಿದೆ ಎಂದು ಶ್ರೀ ಹರ್ದೀಪ್ ಸಿಂಗ್ ಪುರಿ ತಿಳಿಸಿದರು. ಎಲ್ಲಾ ಮಂಜೂರಾದ ಮನೆಗಳ ನಿರ್ಮಾಣದಲ್ಲಿ 3.65 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇಲ್ಲಿಯವರೆಗೆ ಪೂರ್ಣಗೊಂಡಿರುವ ಮನೆಗಳ ನಿರ್ಮಾಣದಲ್ಲಿ ಸುಮಾರು 1.65 ಕೋಟಿ ಉದ್ಯೋಗಗಳು ಈಗಾಗಲೇ ಸೃಷ್ಟಿಯಾಗಿವೆ ಎಂದರು. ಭಾರತವು 2024 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕೆಂಬ ದೃಷ್ಟಿಕೋನವನ್ನು 2019 ರಲ್ಲಿ ಪ್ರಧಾನಿಯವರು ರೂಪಿಸಿದ್ದಾರೆ ಮತ್ತು ಈ ಬೆಳವಣಿಗೆಯನ್ನು ದೇಶಾದ್ಯಂತ ನವೀನ, ಸುಸ್ಥಿರ, ಅಂತರ್ಗತ ಮತ್ತು ಸ್ವಾವಲಂಬಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಾಧಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು. ನಗರೀಕರಣದ ಬಗ್ಗೆ ಮಾತನಾಡಿದ ಸಚಿವರು, ನಮ್ಮ ನಗರಗಳು ಆರ್ಥಿಕ ಉತ್ಪಾದಕತೆ, ಮೂಲಸೌಕರ್ಯ, ಸಂಸ್ಕೃತಿ ಮತ್ತು ವೈವಿಧ್ಯತೆಯ ಕೇಂದ್ರಗಳಾಗಿವೆ. ನಮ್ಮ ಜನಸಂಖ್ಯೆಯ ಶೇ. 40 ಅಥವಾ 600 ಮಿಲಿಯನ್ ಭಾರತೀಯರು 2030 ರ ವೇಳೆಗೆ ನಮ್ಮ ನಗರಗಳಲ್ಲಿ ವಾಸಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ನಗರ ಸಾರಿಗೆಯಲ್ಲಿ ಉಕ್ಕಿನ ಬಳಕೆಯ ಬಗ್ಗೆ ಮಾತನಾಡಿದ ಸಚಿವರು, ಪ್ರಸ್ತುತ 18 ನಗರಗಳಲ್ಲಿ ಸುಮಾರು 700 ಕಿ.ಮೀ ಉದ್ದದ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ ಮತ್ತು 27 ನಗರಗಳಲ್ಲಿ ಸುಮಾರು 900 ಕಿ.ಮೀ ಮೆಟ್ರೋ ಜಾಲವು ನಿರ್ಮಾಣ ಹಂತದಲ್ಲಿದೆ ಎಂದು ಹೇಳಿದರು. ಮೆಟ್ರೋ ಯೋಜನೆಗಳಲ್ಲಿ ಉಕ್ಕಿನ ಅವಶ್ಯಕತೆಯು ಪ್ರತಿ ಕಿ.ಮೀ.ಗೆ ಸರಾಸರಿ 13,000 ಮೆಟ್ರಿಕ್ ಟನ್ ಗಳು (ವಿಧಗಳು-ಬಲವರ್ಧನೆ ಉಕ್ಕು, ನಿರ್ಮಾಣ ಉಕ್ಕು, ಸ್ಟೇನ್ಲೆಸ್ ಸ್ಟೀಲ್ ಮತ್ತು ಎಚ್ಟಿ ಸ್ಟೀಲ್) ಎಂದು ಅವರು ಹೇಳಿದರು.
ಸ್ಮಾರ್ಟ್ ಸಿಟೀಸ್ ಮಿಷನ್ ನಲ್ಲಿ ಉಕ್ಕಿನ ಪರೋಕ್ಷ ಬಳಕೆಯ ಕುರಿತು ಮಾತನಾಡಿದ ಅವರು, 100 ಸ್ಮಾರ್ಟ್ ನಗರಗಳಲ್ಲಿ 2 ಲಕ್ಷ ಕೋಟಿ ರೂ.ಗಳ 5,151 ಯೋಜನೆಗಳನ್ನು ಗುರುತಿಸಲಾಗಿದೆ ಮತ್ತು ಸುಮಾರು 1,66,000 ಕೋಟಿ ರೂ. ವೆಚ್ಚದ 4,700 ಯೋಜನೆಗಳಿಗೆ ಟೆಂಡರ್ ನೀಡಲಾಗಿದೆ. ಇದು ಒಟ್ಟು ಯೋಜನೆಗಳ ಶೇ.81 ಆಗಿದೆ. ಅಂದಾಜು 1,25,000 ಕೋಟಿ ರೂ. ವೆಚ್ಚದ ಸುಮಾರು 3,800 ಯೋಜನೆಗಳು ಅಂದರೆ ಶೇ.61 ರಷ್ಟು ಆರಂಭವಾಗಿವೆ. ಇವುಗಳಲ್ಲಿ 27,000 ಕೋಟಿ ರೂ. ವೆಚ್ಚದ 1,638 ಕ್ಕೂ ಹೆಚ್ಚು ಯೋಜನೆಗಳು ಪೂರ್ಣಗೊಂಡಿದೆ. ಸಂಚಾರವನ್ನು ಸುಧಾರಿಸುವ ಸಲುವಾಗಿ, ನಮ್ಮ ನಗರಗಳಲ್ಲಿ 215 ಸ್ಮಾರ್ಟ್ ರಸ್ತೆ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು 315 ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ನಮ್ಮ ನಗರಗಳನ್ನು ಹೆಚ್ಚು ವಾಸಯೋಗ್ಯ ಮತ್ತು ಸುಸ್ಥಿರವಾಗಿಸುವ ನಮ್ಮ ಬದ್ಧತೆಗನುಗುಣವಾಗಿ, ಸ್ಮಾರ್ಟ್ ವಾಟರ್ಗೆ ಸಂಬಂಧಿಸಿದ 70 ಯೋಜನೆಗಳು ಮತ್ತು ಸ್ಮಾರ್ಟ್ ಸೋಲಾರ್ ಅಡಿಯಲ್ಲಿ 42 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿಮಾನಯಾನ ಕ್ಷೇತ್ರದಲ್ಲಿ ಉಕ್ಕಿನ ಬಳಕೆಯ ಬಗ್ಗೆ ಮಾತನಾಡಿದ ನಾಗರಿಕ ವಿಮಾನಯಾನ ಸಚಿವರು, ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಗಳಲ್ಲಿ ಛಾವಣಿ ಮತ್ತು ಗಾಜಿನ ಮುಂಭಾಗದ ಬೆಂಬಲ ನಿರ್ಮಾಣದಲ್ಲಿ ಉಕ್ಕನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ಹೇಳಿದರು. ಉಕ್ಕಿನ ಛಾವಣಿಯ ರಚನೆಯೊಂದಿಗೆ, ತಡೆರಹಿತ ನೋಟ ಮತ್ತು ದೃಶ್ಯವನ್ನು ನೀಡಲು ದೊಡ್ಡ ಕಂಬಗಳಿಲ್ಲದ ಸ್ಥಳಗಳನ್ನು ನಿರ್ಮಿಸಬಹುದು ಎಂದು ಅವರು ಹೇಳಿದರು. ಟರ್ಮಿನಲ್ ಕಟ್ಟಡಗಳು, ಪೂರ್ವ-ವಿನ್ಯಾಸಗೊಳಿಸಿದ ರಚನೆಗಳಲ್ಲಿ ಉಕ್ಕಿನ ವರ್ಧಿತ ಬಳಕೆಯು ಸುಲಭ ಕೆಲಸಕ್ಕೆ ಮತ್ತು ತ್ವರಿತ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಶ್ರೀ ಪುರಿ ವಿವರಿಸಿದರು. ಕಳೆದ 3 ವರ್ಷಗಳಲ್ಲಿ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡಗಳ ನಿರ್ಮಾಣದಲ್ಲಿ ಅಂದಾಜು 570 ಕೋಟಿ ರೂ. ಮೌಲ್ಯದ ಉಕ್ಕು ಬಳಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡಗಳ ನಿರ್ಮಾಣದಲ್ಲಿ ಅಂದಾಜು 1,905 ಕೋಟಿ ರೂ. ಮೌಲ್ಯದ ಉಕ್ಕನ್ಗನು ಬಳಸಲಾಗುವುದು ಎಂದು ಅವರು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ 15,000 ಕೋಟಿ ರೂ. ವೆಚ್ಚದಲ್ಲಿ 15 ಹೊಸ ಟರ್ಮಿನಲ್ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯಿದ್ದು ಇದರಲ್ಲಿ ಹೆಚ್ಚಿನ ಪ್ರಮಾಣದ ಉಕ್ಕಿನ ಅಗತ್ಯವಿರುತ್ತದೆ ಮತ್ತು ವಿಮಾನ ನಿಲ್ದಾಣಗಳ ಕಾಮಗಾರಿ ವೆಚ್ಚದಲ್ಲಿ ಸರಾಸರಿ ಶೇ. 12-15 ರಷ್ಟು ವೆಚ್ಚವು ಉಕ್ಕಿನ ಕೆಲಸವಾಗಿರುತ್ತದೆ ಎಂದರು. 2030 ರ ವೇಳೆಗೆ 300 ಮಿಲಿಯನ್ ಟನ್ ಸಾಮರ್ಥ್ಯ ಹೊಂದುವ ಉಕ್ಕು ಸಚಿವಾಲಯದ ದೃಷ್ಟಿಕೋನವು ಮುಂದಿನ ದಶಕದಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿಯಿಂದ ಉಂಟಾಗುವ ಬೇಡಿಕೆಯಿಂದಾಗಿ ಬೆಂಬಲ ಪಡೆಯಲಿದೆ ಎಂದು ಸಚಿವರು ಹೇಳಿದರು. ಆ ಬೇಡಿಕೆಯನ್ನು ಪೂರೈಸುವಲ್ಲಿ ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಮತ್ತು ಮುಂದಿನ ವರ್ಷಗಳಲ್ಲಿ ಉಕ್ಕಿನ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ಪರಿಸರದ ಮೇಲಿನ ಪರಿಣಾಮ ಕುರಿತು ಮಾತನಾಡಿದ ಸಚಿವರು, ವಿಪತ್ತು ಸ್ಥಿತಿಸ್ಥಾಪಕ ಮತ್ತು ಪರಿಸರ ಸ್ನೇಹಿಯಾಗಿರುವ, ಇಂಗಾಲದ ಹೊರಸೂಸುವಿಕೆ ಕಡಿಮೆ ಇರುವ ನೂತನ, ಪರ್ಯಾಯ ಮತ್ತು ತ್ವರಿತ ನಿರ್ಮಾಣ ತಂತ್ರಗಳು ಮತ್ತು ತಂತ್ರಜ್ಞಾನಗಳನ್ನು ಬಳಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಹೊಸ ತಂತ್ರಜ್ಞಾನಗಳಿಗೆ ಉತ್ತಮ ಪ್ರೋತ್ಸಾಹ ನೀಡಿದೆ ಮತ್ತು ದೇಶದಾದ್ಯಂತ ಇದುವರೆಗೆ 15 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ / ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು, ಪಿಎಂಎವೈ ಮತ್ತು ಇತರ ರಾಜ್ಯ ಸಂಸ್ಥೆಗಳ ಮೂಲಕ. ಹೊಸ ತಂತ್ರಗಳು ಮತ್ತು ತಂತ್ರಜ್ಞಾನಗಳ ಬಳಕೆಗಾಗಿ ಉಕ್ಕು ಉದ್ಯಮವು ಮನೆಗಳನ್ನು ವೇಗವಾಗಿ ಪೂರ್ಣಗೊಳಿಸುವ ಮತ್ತು ಸ್ಥಿತಿಸ್ಥಾಪಕತ್ವ ಹೊಂದಿದ ತಮ್ಮದೇ ಆದ ವಿನ್ಯಾಸ ಮತ್ತು ನಿರ್ಮಾಣಗಳನ್ನು ರೂಪಿಸುವಂತೆ ಶ್ರೀ ಪುರಿ ಆಗ್ರಹಿಸಿದರು, ಇದನ್ನು ರಾಜ್ಯಗಳಲ್ಲಿ ಪ್ರೋತ್ಸಾಹಿಸಲು ಸಚಿವಾಲಯ ಸಹಕರಿಸಲಿದೆ ಎಂದು ಅವರು ಹೇಳಿದರು. ಇಂತಹ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಸಚಿವಾಲಯ ಈಗಾಗಲೇ ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ (ಜಿಎಚ್ಟಿಸಿ) ಎಂಬ ಜಾಗತಿಕ ಸವಾಲಿಗೆ ಚಾಲನೆ ನೀಡಿದೆ ಎಂದು ಅವರು ಹೇಳಿದರು
(Release ID: 1646694)
Visitor Counter : 180