ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ನಾಗರಿಕ ವಿಮಾನಯಾನ: ವಿದೇಶೀ ನೇರ ಬಂಡವಾಳ ಹೂಡಿಕೆ ನೀತಿಗೆ ಸಂಪುಟದ ಅನುಮೋದನೆ
Posted On:
04 MAR 2020 4:12PM by PIB Bengaluru
ನಾಗರಿಕ ವಿಮಾನಯಾನ: ವಿದೇಶೀ ನೇರ ಬಂಡವಾಳ ಹೂಡಿಕೆ ನೀತಿಗೆ ಸಂಪುಟದ ಅನುಮೋದನೆ
ಮೆಸರ್ಸ್ ಏರ್ ಇಂಡಿಯಾ ಲಿಮಿಟೆಡ್ ಗೆ ಸಂಬಂಧಿಸಿದಂತೆ ಭಾರತೀಯ ಪ್ರಜೆಗಳಾಗಿರುವ ಎನ್.ಆರ್.ಐಗಳಿಂದ ಪ್ರತಿಶತ 100ರವರೆಗೆ ವಿದೇಶಿ ಹೂಡಿಕೆಗೆ ಅನುಮತಿ ನೀಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೆಸರ್ಸ್ ಏರ್ ಇಂಡಿಯಾ ಲಿಮಿಟೆಡ್ ನಲ್ಲಿ ಭಾರತೀಯ ಪ್ರಜೆಗಳಾಗಿರುವ ಎನ್.ಆರ್.ಐಗಳು ಪ್ರತಿಶತ 100ರವರೆಗೆ ಸ್ವಯಂ ಚಾಲಿತ ಮಾರ್ಗದಲ್ಲಿ ವಿದೇಶಿ ಹೂಡಿಕೆ (ಗಳು) ಮಾಡಲು ಅನುಮತಿಸಲು ಹಾಲಿ ಅಸ್ತಿತ್ವದಲ್ಲಿರುವ ಎಫ್ಡಿಐ ನೀತಿಗೆ ತಿದ್ದುಪಡಿ ತರಲು ತನ್ನ ಅನುಮೋದನೆ ನೀಡಿದೆ.
ಪ್ರಸಕ್ತ ಎಫ್.ಡಿ.ಐ. ನೀತಿಯನ್ವಯ, ಶೇ.100ರಷ್ಟು ನೇರ ವಿದೇಶೀ ಬಂಡವಾಳ ಅನುಸೂಚಿತ ವಾಯು ಸಾರಿಗೆ ಸೇವೆ/ದೇಶೀಯ ಅನುಸೂಚಿತ ಪ್ರಯಾಣಿಕರ ವಿಮಾನ ಸಂಸ್ಥೆಗಳಲ್ಲಿ (ಸ್ವಯಂ ಚಾಲಿತ ಮಾರ್ಗದಲ್ಲಿ ಶೇ.49ರವರೆಗೆ ಮತ್ತು ಸರ್ಕಾರಿ ಮಾರ್ಗದಲ್ಲಿ ಶೇ.40ಕ್ಕಿಂತ ಹೆಚ್ಚಿನ) ಅನುಮತಿಸಲಾಗಿದೆ. ಆದಾಗ್ಯೂ ಅನಿವಾಸಿ ಭಾರತೀಯರಿಗೆ ಶೇ.100ರಷ್ಟು ವಿದೇಶೀ ನೇರ ಬಂಡವಾಳವನ್ನು ಸ್ವಯಂಚಾಲಿತ ಮಾರ್ಗದಲ್ಲಿ ಅನುಸೂಚಿತ ವಾಯು ಸಾರಿಗೆ ಸೇವೆ/ದೇಶೀಯ ಅನುಸೂಚಿತ ಪ್ರಯಾಣಿಕರ ವಾಯುಯಾನ ಸಂಸ್ಥೆಗಳಿಗೆ ಅನುಮತಿಸಲಾಗಿದೆ. ಆದರೂ ಇದು 1937ರ ವೈಮಾನಿಕ ನಿಯಮಗಳ ಪ್ರಕಾರ ಗಣನೀಯ ಪ್ರಮಾಣದ ಮಾಲೀಕತ್ವ ಮತ್ತು ಪರಿಣಾಮಕಾರಿ ನಿಯಂತ್ರಣ (ಎಸ್.ಒಇಸಿ) ಭಾರತೀಯ ಪ್ರಜೆಗಳಿಗೆ ವಹಿಸಲಾಗುವುದು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ. ಆದಾಗ್ಯೂ, ಮೆಸರ್ಸ್ ಏರ್ ಇಂಡಿಯಾ ಲಿಮಿಟೆಡ್ ಗಾಗಿ, ಪ್ರಸಕ್ತ ನೀತಿಯನ್ವಯ ಮೆ. ಏರ್ ಇಂಡಿಯಾದಲ್ಲಿ ವಿದೇಶೀ ಹೂಡಿಕೆ(ಗಳು) ವಿದೇಶೀ ವಿಮಾನಯಾನ ಸಂಸ್ಥೆ(ಗಳು) ಸೇರಿದಂತೆ ನೇರ ಅಥವಾ ಪರೋಕ್ಷವಾಗಿ ಪ್ರತಿಶತ 49 ಮೀರುವಂತಿಲ್ಲ ಮತ್ತು ಅದು ಮೇ. ಏರ್ ಇಂಡಿಯಾ ಲಿಮಿಟೆಡ್ನ ಗಣನೀಯ ಮಾಲೀಕತ್ವ ಮತ್ತು ಪರಿಣಾಮಕಾರಿ ನಿಯಂತ್ರಣವನ್ನು ಭಾರತೀಯ ಪ್ರಜೆಗಳಿಗೆ ವಹಿಸಲಾಗುವುದು ಎಂಬ ಷರತ್ತಿಗೂ ಒಳಪಟ್ಟಿರುತ್ತದೆ. ಹೀಗಾಗಿ ಎನ್.ಆರ್.ಐ.ಗಳಿಗೆ ಅನುಸೂಚಿತ ವಾಯು ಸಾರಿಗೆ ಸೇವೆ/ದೇಶೀಯ ಅನುಸೂಚಿತ ಪ್ರಯಾಣಿಕರ ಏರ್ ಲೈನ್ ನಲ್ಲಿ ಪ್ರತಿಶತ 100ರಷ್ಟು ವಿದೇಶೀ ಬಂಡವಾಳ ಹೂಡಿಕೆಗೆ ಅವಕಾಶವಿದ್ದರೂ, ಮೆ. ಏರ್ ಇಂಡಿಯಾ ವಿಚಾರದಲ್ಲಿ ಅದು ಶೇ.49ಕ್ಕೆ ಮಾತ್ರವೇ ಸೀಮಿತವಾಗಿತ್ತು.
ಪ್ರಯೋಜನಗಳು :
ಏರ್ ಇಂಡಿಯಾ ಲಿಮಿಟೆಡ್ನ ಶೇ.100ರಷ್ಟು ಬಂಡವಾಳ ಹಿಂತೆಗೆಯುವ ಭಾರತ ಸರ್ಕಾರದ ಉದ್ದೇಶಿತ ವ್ಯೂಹಾತ್ಮಕ ಕಾರ್ಯತಂತ್ರದ ನಿಟ್ಟಿನಲ್ಲಿ, ಮೆ. ಏರ್ ಇಂಡಿಯಾ ಲಿಮಿಟೆಡ್ ಯಾವುದೇ ಉಳಿಕೆ ಸರ್ಕಾರಿ ಮಾಲೀಕತ್ವವನ್ನು ಹೊಂದಿರುವುದಿಲ್ಲ ಮತ್ತು ಸಂಪೂರ್ಣವಾಗಿ ಖಾಸಗಿ ಒಡೆತನದಲ್ಲಿರುತ್ತದೆ ಎಂದು ನಿರ್ಧರಿಸಲಾಗಿದೆ. ಮೆ. ಏರ್ ಇಂಡಿಯಾ ಲಿಮಿಟೆಡ್ ನಲ್ಲಿನ ಹೂಡಿಕೆಯನ್ನು ಇತರ ಅನುಸೂಚಿತ ವಿಮಾನಯಾನ ನಿರ್ವಾಹಣೆದಾರರೊಂದಿಗೆ ಏಕರೂಪಕ್ಕೆ ತರಲಾಗುತ್ತದೆ. ಎಫ್.ಡಿ.ಐ. ನೀತಿಯಲ್ಲಿನ ತಿದ್ದುಪಡಿ ಇತರ ಅನುಸೂಚಿತ ಏರ್ ಲೈನ್ ನಿರ್ವಹಣೆದಾರರಿಗೆ ಸಮಾನವಾಗಿ ಶೇ.100ರವರೆಗೆ ಭಾರತೀಯ ಪ್ರಜೆಗಳೂ ಆದ ಅನಿವಾಸಿ ಭಾರತೀಯರಿಗೆ ಮೆ. ಏರ್ ಇಂಡಿಯಾ ಲಿಮಿಟೆಡ್ ನಲ್ಲಿ ವಿದೇಶೀ ಹೂಡಿಕೆಗೆ ಅನುಮತಿ ನೀಡುತ್ತದೆ. ಎಫ್.ಡಿ.ಐ. ನೀತಿಯಲ್ಲಿನ ಉದ್ದೇಶಿತ ಬದಲಾವಣೆಗಳು ಅನಿವಾಸಿ ಭಾರತೀಯರಿಗೆ ಮೆ. ಏರ್ ಇಂಡಿಯಾ ಲಿಮಿಟೆಡ್ ನಲ್ಲಿ ಶೇ.100ರವರೆಗೆ ಸ್ವಯಂಚಾಲಿತ ಮಾರ್ಗದಲ್ಲಿ ವಿದೇಶೀ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.
ಎಫ್.ಡಿ.ಐ. ನೀತಿಗೆ ಮೇಲಿನ ತಿದ್ದುಪಡಿಯು ದೇಶದಲ್ಲಿ ಸುಗಮ ವಾಣಿಜ್ಯ ನಡೆಸಲು ಅವಕಾಶ ಕಲ್ಪಿಸಲು ಎಫ್.ಡಿ.ಐ. ನೀತಿಯನ್ನು ಉದಾರೀಕರಿಸುವ ಮತ್ತು ಸರಳೀಕರಣಗೊಳಿಸುವ ಇಂಗಿತ ಹೊಂದಿದೆ. ಅತಿದೊಡ್ಡ ಎಫ್ಡಿಐ ಒಳಹರಿವಿಗೂ ಕಾರಣವಾಗುತ್ತದೆ ಮತ್ತು ಆ ಮೂಲಕ ಹೂಡಿಕೆ, ಆದಾಯ ಮತ್ತು ಉದ್ಯೋಗದ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಹಿನ್ನೆಲೆ:
ಎಫ್.ಡಿಐ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಸಾಲ ರಹಿತ ಹಣಕಾಸಿನ ಮೂಲವಾಗಿದೆ. ವಿದೇಶಿ ಹೂಡಿಕೆಯ ಒಳಹರಿವು ದೇಶಕ್ಕೆ ಆಕರ್ಷಿಸುವ ಉದ್ದೇಶದಿಂದ ಎಫ್.ಡಿಐ ನೀತಿಯನ್ನು ಚಾಲ್ತಿ ಆಧಾರದ ಮೇಲೆ ಪರಾಮರ್ಶಿಸಲಾಗುತ್ತದೆ. ಎಫ್.ಡಿಐ ಮೇಲೆ ಹೂಡಿಕೆದಾರ ಸ್ನೇಹಿ ನೀತಿಯನ್ನು ಸರ್ಕಾರ ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ಬಹುತೇಕ ವಲಯಗಳು / ಚಟುವಟಿಕೆಗಳಲ್ಲಿ ಸ್ವಯಂಚಾಲಿತ ಮಾರ್ಗದಲ್ಲಿ ಶೇ.100ವರೆಗೆ ಎಫ್.ಡಿಐಗೆ ಅನುಮತಿ ಇರುತ್ತದೆ.
ಭಾರತವನ್ನು ಆಕರ್ಷಕ ಹೂಡಿಕೆ ತಾಣವನ್ನಾಗಿ ಮಾಡಲು ಇತ್ತೀಚಿನ ದಿನಗಳಲ್ಲಿ ಎಫ್.ಡಿಐ ನೀತಿ ನಿಬಂಧನೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಹಂತಹಂತವಾಗಿ ಉದಾರೀಕರಣಗೊಳಿಸಲಾಗಿದೆ. ರಕ್ಷಣೆ, ನಿರ್ಮಾಣ ಅಭಿವೃದ್ಧಿ, ವ್ಯಾಪಾರ, ಔಷಧಗಳು, ವಿದ್ಯುತ್ ವಿನಿಮಯ, ವಿಮೆ, ಪಿಂಚಣಿ, ಇತರ ಹಣಕಾಸು ಸೇವೆಗಳು, ಆಸ್ತಿ ಪುನರ್ನಿರ್ಮಾಣ ಕಂಪನಿಗಳು, ಪ್ರಸಾರ, ಏಕ ಬ್ರಾಂಡ್ ಚಿಲ್ಲರೆ ವ್ಯಾಪಾರ, ಕಲ್ಲಿದ್ದಲು ಗಣಿಗಾರಿಕೆ, ಡಿಜಿಟಲ್ ಮಾಧ್ಯಮ ಇತ್ಯಾದಿಗಳು ಈ ಕ್ಷೇತ್ರಗಳಲ್ಲಿ ಸೇರಿವೆ.
ಈ ಸುಧಾರಣೆಗಳು ಇತ್ತೀಚಿನ ದಿನಗಳಲ್ಲಿ ಭಾರತ ದಾಖಲೆಯ ಎಫ್.ಡಿ.ಐ. ಹರಿವು ಆಕರ್ಷಿಸಲು ಕೊಡುಗೆ ನೀಡಿದೆ. ಭಾರತದಲ್ಲಿ ಎಫ್.ಡಿ.ಐ. ಹರಿವು 2014-15ರಲ್ಲಿ 45.15 ಶತಕೋಟಿ ಅಮೆರಿಕನ್ ಡಾಲರ್ ಆಗಿದ್ದು, ಅಲ್ಲಿಂದ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ವಿದೇಶೀ ನೇರ ಬಂಡವಾಳ 2015-16ರಲ್ಲಿ 55.56 ಶತಕೋಟಿ ಅಮೆರಿಕನ್ ಡಾಲರ್ ಗೆ, 2016-17ರಲ್ಲಿ 60.22 ಶತಕೋಟಿ ಅಮೆರಿಕನ್ ಡಾಲರ್, 2017-18ರಲ್ಲಿ 60.97 ಶತಕೋಟಿ ಅಮೆರಿಕನ್ ಡಾಲರ್ ಗೆ ಏರಿಕೆಯಾಗಿತ್ತು. ಮತ್ತು ದೇಶ ಕಳೆದ ಆರ್ಥಿಕ ವರ್ಷ ಅಂದರೆ 2018-19ರಲ್ಲಿ ದೇಶ ಇದೇ ಮೊದಲ ಬಾರಿಗೆ 62.00 ಶತಕೋಟಿ ಅಮೆರಿಕನಾ ಡಾಲರ್ (ಸಂಭವನೀಯ ಅಂಕಿ) ಒಳಹರಿವಿನ ದಾಖಲೆ ಮಾಡಿತ್ತು. ಕಳೆದ ಹತ್ತೊಂಬತ್ತೂವರೆ ವರ್ಷಗಳಲ್ಲಿ ಒಟ್ಟಾರೆ ವಿದೇಶೀ ನೇರ ಬಂಡವಾಳ (ಏಪ್ರಿಲ್ 2000ದಿಂದ ಸೆಪ್ಟೆಂಬರ್ 2019ರವರೆಗೆ) 642 ಶತಕೋಟಿ ಅಮೆರಿಕನ್ ಡಾಲರ್ ಆಗಿತ್ತು, ಆದರೆ ಕಳೆದ ಐದೂವರೆ ವರ್ಷಗಳಲ್ಲಿ ಬಂದ ಎಫ್.ಡಿ.ಐ. ಹರಿವು (ಏಪ್ರಿಲ್ 2014-ಸೆಪ್ಟೆಂಬರ್ 2019) 319 ಶತಕೋಟಿ ಅಮೆರಿನ್ ಡಾಲರ್ ಆಗಿತ್ತು, ಅದು ಕಳೆದ ಹತ್ತೊಂಬತ್ತೂವರೆ ವರ್ಷಗಳ ಒಟ್ಟಾರೆ ಎಫ್.ಡಿ.ಐ. ಹರಿವಿನ ಪ್ರತಿಶತ 50ರಷ್ಟಾಗಿತ್ತು.
ಜಾಗತಿಕ ವಿದೇಶೀ ನೇರ ಬಂಡವಾಲ ಹರಿವು ಕಳೆದ ಕೆಲವು ವರ್ಷಗಳಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿದೆ. ಯುಎನ್.ಸಿ.ಟಿ.ಎ.ಡಿ.ಯ ವಿಶ್ವದ ಹೂಡಿಕೆ ವರದಿ 2019ರ ಪ್ರಕಾರ, ಜಾಗತಿಕ ವಿದೇಶೀ ನೇರ ಬಂಡವಾಳ ಹೂಡಿಕೆ ಹರಿವು 2018ರಲ್ಲಿ ಶೇ.13ರಷ್ಟು ಕುಸಿದು ಕಳೆದ ವರ್ಷದಲ್ಲಿ 1.3 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿದೆ, ಇದು ಸತತ ಮೂರನೇ ವರ್ಷದ ಕುಸಿತವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ, ಜಾಗತಿಕ ಎಫ್.ಡಿಐ ಹರಿವಿಗೆ ಭಾರತ ಆದ್ಯತೆಯ ಮತ್ತು ಆಕರ್ಷಕ ತಾಣವಾಗಿ ಉಳಿದಿದೆ. ಆದಾಗ್ಯೂ, ಎಫ್.ಡಿಐ ನೀತಿ ಆಡಳಿತವನ್ನು ಮತ್ತಷ್ಟು ಉದಾರೀಕರಣಗೊಳಿಸುವ ಮೂಲಕ ಮತ್ತು ಸರಳಗೊಳಿಸುವ ಮೂಲಕ ದೇಶವು ಹೆಚ್ಚು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾವಿಸಲಾಗಿದೆ.
******
(Release ID: 1605262)