ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಕ್ರೀಡಾ ಇಲಾಖೆಯ ವರ್ಷಾಂತ್ಯದ ಪರಾಮರ್ಶೆ –2019
Posted On:
20 DEC 2019 10:38AM by PIB Bengaluru
ಕ್ರೀಡಾ ಇಲಾಖೆಯ ವರ್ಷಾಂತ್ಯದ ಪರಾಮರ್ಶೆ –2019
ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಿ, ಸದೃಢ ಭಾರತ ನಿರ್ಮಾಣ ಮತ್ತು ಕ್ರೀಡಾ ಉತ್ತೇಜನಕ್ಕೆ ಉಪಕ್ರಮಗಳು
ಭಾರತವನ್ನು ಆರೋಗ್ಯಪೂರ್ಣ ಮತ್ತು ಸದೃಢ ದೇಶವನ್ನಾಗಿಸಲು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾ ಚಳವಳಿಗೆ 2019ರ ಆಗಸ್ಟ್ 29ರಂದು ಚಾಲನೆ ನೀಡಿದ್ದಾರೆ. ಫಿಟ್ ಇಂಡಿಯಾ ಈಗ ಜನಾಂದೋಲನವಾಗಿದ್ದು, ಶಾಲೆಗಳು, ಕಾಲೇಜುಗಳು, ಸಂಸ್ಥೆಗಳು ಮತ್ತು ಎಲ್ಲ ವರ್ಗದ ಜನರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಮಹತ್ವದ ಹೆಜ್ಜೆಯಲ್ಲಿ ಸಚಿವಾಲಯವು ಆಟದ ಮೈದಾನಗಳು ಮತ್ತು ಕ್ರೀಡಾ ಮೂಲಸೌಕರ್ಯ ಎಲ್ಲ ಕ್ರೀಡಾಪಟುಗಳಿಗೆ ಉಚಿತವಾಗಿ ದೊರಕುವಂತೆ ಮಾಡಿದೆ. ಈ ವರ್ಷ ಬಿಲ್ಲುಗಾರಿಕೆ ವಿಶ್ವ ಚಾಂಪಿಯನ್ ಶಿಪ್ ನಲ್ಲಿ, ಕಾಮನ್ ವೆಲ್ತ್ ಕ್ರೀಡಾಕೂಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಮತ್ತು ಟೆಬಲ್ ಟೆನಿಸ್ ಚಾಂಪಿಯನ್ ಷಿಪ್ ನಲ್ಲಿ ಹಾಗೂ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ಹಿಂದೆಂದಿಗಿಂತಲೂ ಉತ್ತಮ ಪ್ರದರ್ಶನವನ್ನು ತೋರಿದೆ.
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಬರುವ ಕ್ರೀಡಾ ಇಲಾಖೆಯು, ಕ್ರೀಡಾ ಸಂಸ್ಕೃತಿ ಮೂಡಿಸಲು ಮತ್ತು ದೇಶದಲ್ಲಿ ಕ್ರೀಡಾ ಔನ್ನತ್ಯ ಸಾಧಿಸಲು 2019ರ ಸಾಲಿನಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ವೈಜ್ಞಾನಿಕ ಬೆಂಬಲ ಮತ್ತು ಸಲಕರಣೆಗಳು, ಮುಂದುವರಿದ ಮೂಲಸೌಕರ್ಯಗಳ ಬಗ್ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಕ್ರೀಡಾಪಟುಗಳಿಗೆ ತರಬೇತಿ ಮತ್ತು ವೈಜ್ಞಾನಿಕ ಹಾಗೂ ಸಲಕರಣೆಗಳ ಬೆಂಬಲದೊಂದಿಗೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ವೇದಿಕೆ ಕಲ್ಪಿಸುವ ಮೂಲಕ ಅಗತ್ಯವಾದ ನೆರವನ್ನು ಒದಗಿಸುತ್ತಿದೆ.
1. ಫಿಟ್ ಇಂಡಿಯಾ ಚಳವಳಿ: ಕ್ರೀಡಾ ಇಲಾಖೆ, 2019ರ ಆಗಸ್ಟ್ 29ರಂದು ಆರಂಭವಾಗಿ 2023ರ ಆಗಸ್ಟ್ 29ಕ್ಕೆ ಕೊನೆಗೊಳ್ಳುವ ಅಭಿಯಾನದ ಅವಧಿಯಲ್ಲಿ ಫಿಟ್ ನೆಸ್ ಕಾರ್ಯಕ್ರಮಗಳು/ಚಟುವಟಿಕೆಗಳಲ್ಲಿ ದಾಖಲಾಗಿ ಮತ್ತು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಸದೃಢತೆಯನ್ನು ಭಾರತೀಯರ ದೈನಂದಿನ ಬದುಕಿನ ಭಾಗವಾಗಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಅಂದರೆ 2019ರ ಆಗಸ್ಟ್ 29ರಂದು ಫಿಟ್ ಇಂಡಿಯಾ ಚಳವಳಿಗೆ ಚಾಲನೆ ನೀಡಿತು.
ಭಾರತದಲ್ಲಿ ಅಥವಾ ವಿದೇಶದಲ್ಲಿ ವಾಸಿಸುತ್ತಿರಲಿ ಮತ್ತು ಸದೃಢತೆಯ ಮೇಲೆ ಆರೋಗ್ಯಪೂರ್ಣ ಬದುಕಿಗೆ ಅವಲಂಬಿತವಾದ ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಎಲ್ಲ ಅಂಶಗಳು ಅಂದರೆ, ಮಾನಸಿಕ ಸಾಮರ್ಥ್ಯ, ಆರೋಗ್ಯಕರ ಜೀವನ ಶೈಲಿ, ಆರೋಗ್ಯಕರ ಆಹಾರ ಪದ್ಧತಿ, ಆರೋಗ್ಯಪೂರ್ಣ ಮತ್ತು ಸಮತೋಲಿತ ಆಹಾರ, ರೋಗ ತಡೆ ಆರೋಗ್ಯ ಆರೈಕೆ, ಸುಸ್ಥಿರ ಮತ್ತು ಪರಿಸರ ಸ್ನೇಹಿ ಜೀವನಶೈಲಿ ಇತ್ಯಾದಿ ಒಳಗೊಂಡಂತೆ ಲಿಂಗ, ಜಾತಿ, ವೃತ್ತಿ, ನಿವಾಸ, ಸಾಮಾಜಿಕ/ಆರ್ಥಿಕ ಸ್ಥಾನಮಾನ ಇತ್ಯಾದಿಯನ್ನು ಮೀರಿ ಎಲ್ಲ ಭಾರತೀಯರನ್ನೂ ಫಿಟ್ ಇಂಡಿಯಾ ಚಳವಳಿ ತೊಡಗಿಸಿಕೊಳ್ಳುತ್ತದೆ.
2. ಫಿಟ್ ಇಂಡಿಯಾ ಚಳವಡಿಯಡಿಯಲ್ಲಿ ಉಪಕ್ರಮಗಳು/ ಚಟುವಟಿಕೆಗಳು:
· ಮಹಾತ್ಮಾ ಗಾಂಧಿ ಅವರ 150ನೇ ಜಯಂತಿ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 2019ರ ಅಕ್ಟೋಬರ್ 2ರಂದು 1500ಕ್ಕೂ ಹೆಚ್ಚು ಫಿಟ್ ಇಂಡಿಯಾ ಧ್ವಜ ಓಟವನ್ನು ದೇಶದಾದ್ಯಂತ ಫಿಟ್ ಇಂಡಿಯಾ ಚಳವಳಿಯ ಅಡಿಯಲ್ಲಿ ಆಯೋಜಿಸಲಾಗಿತ್ತು.
· ಫಿಟ್ ಇಂಡಿಯಾ ಶಾಲಾ ಸಪ್ತಾಹ ಮತ್ತು ಫಿಟ್ ಇಂಡಿಯಾ ಪ್ರಮಾಣ ಪತ್ರ ವ್ಯವಸ್ಥೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಹಯೋಗದಲ್ಲಿ ಆರಂಭಿಸಲಾಗಿದೆ.
3. ಕ್ರೀಡಾ ಇಲಾಖೆಯು 2019ರ ಅಕ್ಟೋಬರ್ 11ರಂದು ರಾಷ್ಟ್ರೀಯ ಕ್ರೀಡಾ ಒಕ್ಕೂಟದ ಸಭೆಯ ವೇಳೆ, ಫಿಟ್ ಇಂಡಿಯಾ ಚಳವಳಿಯನ್ನು ಮುಂದುವರಿಸಲು, ಸರ್ಕಾರದ ಒಡೆತನದ ಕ್ರೀಡಾ ಸೌಕರ್ಯಗಳಲ್ಲಿ ಕ್ರೀಡಾ ಸ್ಪರ್ಧೆಗಳು ಯಾವುದೇ ವೆಚ್ಚವಿಲ್ಲದೆ ನಡೆಸಲು 2019ರ ನವೆಂಬರ್ 1ರಿಂದ ದೇಶದಾದ್ಯಂತ ಎಲ್ಲ ಕ್ರೀಡಾ ಪಟುಗಳಿಗೆ ಯಾವುದೇ ಶುಲ್ಕವಿಲ್ಲದೆ ಆಟದ ಮೈದಾನಗಳು ಮತ್ತು ಕ್ರೀಡಾ ಮೂಲಸೌಕರ್ಯ ಲಭ್ಯವಾಗುವಂತೆ ಮಾಡುವ ನಿರ್ಧಾರ ಕೈಗೊಂಡಿದೆ. ಈ ಕ್ರೀಡಾ ಸೌಲಭ್ಯಗಳು ಸರ್ಕಾರೇತರ ಅಥ್ಲೆಟಿಕ್ ಕೋಚ್ ಗಳಿಗೂ ತರಬೇತಿ ನೀಡಲು ಲಭ್ಯವಾಗಲಿದೆ.
4. ಖೇಲೋ ಇಂಡಿಯಾ ಯುವ ಕ್ರೀಡೆಗಳು 2019: ಖೇಲೋ ಇಂಡಿಯಾ ಯುವ ಕ್ರೀಡೆ 2019 ಆತಿಥ್ಯ ರಾಜ್ಯ ಮಹಾರಾಷ್ಟ್ರದ ಜೊತೆಗೂಡಿ ಪುಣೆಯ ಮಹಾಲುಂಗೆ –ಬಲೇವಾಡಿಯ ಶ್ರೀ ಶಿವ್ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ 2019ರ ಜನವರಿ 9ರಿಂದ 20ರವರೆಗೆ ನಡೆಸಲಾಯಿತು. 18 ಕ್ರೀಡಾ ಪ್ರವರ್ಗಗಳಲ್ಲಿ 379 ವೈಯಕ್ತಿಕ ಸ್ಪರ್ಧೆಗಳು ಮತ್ತು 24 ತಂಡ ಸ್ಪರ್ಧೆಗಳು ಸೇರಿದಂತೆ ಒಟ್ಟು 403 ಸ್ಪರ್ಧೆಗಳು ಜರುಗಿದವು, ಮಹಾರಾಷ್ಟ್ರ ಸಮಗ್ರ ಛಾಂಪಿಯನ್ ಷಿಪ್ ಆಗಿ ಹೊರಹೊಮ್ಮಿದರೆ, ಹರಿಯಾಣ ಮತ್ತು ದೆಹಲಿ ನಂತರದ ಸ್ಥಾನ ಪಡೆದವು. ಈ ಕ್ರೀಡಾಕೂಟದಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 5925 ಅಥ್ಲೀಟ್ ಗಳು, 1906 ಬೆಂಬಲ ಸಿಬ್ಬಂದಿ, 893 ತಾಂತ್ರಿಕ ಸಿಬ್ಬಂದಿ, 1021 ಸ್ವಯಂಸೇವಕರು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 1500 ಅಧಿಕಾರಿಗಳು ಉತ್ಸಾಹದಿಂದ ಭಾಗಿಯಾಗಿದ್ದರು. ಕೆಐವೈಜಿ ಮಹಾರಾಷ್ಟ್ರ 2019ರ ನೇರ ಪ್ರಸಾರ 12 ದಿನಗಳ ಕಾಲ ತಲಾ 8 ಗಂಟೆಯಂತೆ ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಡಿ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಯಿತು. ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಸಂಸ್ಥೆ ವತಿಯಿಂದ ಈ ಕ್ರೀಡಾಕೂಟದ ವೇಳೆ ಕ್ರೀಡಾಪಟುಗಳಿಗೆ ಮಾದಕ ದ್ರವ್ಯ ಸೇವನೆ ವಿರುದ್ಧ ಬೃಹತ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಇದು ರಾಷ್ಟ್ರಮಟ್ಟದ 3201 ಯುವ ಅಥ್ಲೀಟ್ ಗಳಿಗೆ ಅರಿವು ಮೂಡಿಸಿತು. 476 ಕ್ಕೂ ಹೆಚ್ಚು ಮಾದಕದ್ರವ್ಯ ಸೇವನೆಯ ಪರೀಕ್ಷೆ (ಡೋಪ್ ಟೆಸ್ಟ್) ಗಳನ್ನು ಭಾಗಿಯಾಗಿದ್ದ ಅಥ್ಲೀಟ್ ಗಳಿಗೆ ನಡೆಸಲಾಯಿತು.
5. “ಕ್ರೀಡೆಯಲ್ಲಿ ಮಾದಕ ದ್ರವ್ಯ ಸೇವನೆ ನಿಷೇಧ’ ಕುರಿತ ರಾಷ್ಟ್ರೀಯ ಸಮಾವೇಶ: ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಸಂಸ್ಥೆ (ಎನ್.ಎ.ಡಿ.ಎ.) ಸಹಯೋಗದಲ್ಲಿ ಭಾರತೀಯ ದೈಹಿಕ ಶಿಕ್ಷಣ ಪ್ರತಿಷ್ಠಾನವು ನವದೆಹಲಿಯಲ್ಲಿ 2019ರ ಜನವರಿ 30-31ರಂದು ಎರಡು ದಿನಗಳ ಕಾಲ ಮಾದಕ ದ್ರವ್ಯ ಸೇವನೆ ವಿರುದ್ಧದ ರಾಷ್ಟ್ರೀಯ ಸಮಾವೇಶ ಆಯೋಜಿಸಿತ್ತು. ಕೇಂದ್ರ ಕ್ರೀಡಾ ಸಚಿವರು; ಕೇಂದ್ರ (ಆರೋಗ್ಯ) ಖಾತೆ ರಾಜ್ಯ ಸಚಿವರು; ಶ್ರೀ ಅಶ್ವಿನಿ ಕುಮಾರ್ ಚೌಬೆ; ಶ್ರೀ ಮನೋಜ್ ತಿವಾರಿ, ಸಂಸದರು; ಶ್ರೀಮತಿ ಮೇರಿ ಕೋಮ್, ಸಂಸದರು; ಮಹಾ ನಿರ್ದೇಶಕರು, ಎನ್.ಎ.ಡಿ.ಎ ಸೇರಿದಂತೆ ಹಲವು ಭಾಷಣಕಾರರು ಕ್ರೀಡೆಯಲ್ಲಿ ಮಾದಕ ದ್ರವ್ಯ ಬಳಕೆ ತಡೆ ಕುರಿತ ಮಾರ್ಗೋಪಾಯಗಳ ಬಗ್ಗೆ ಬೆಳಕು ಚೆಲ್ಲಿದರು. ಈ ಸಮಾವೇಶದಲ್ಲಿ ದೇಶಾದ್ಯಂತದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ತರಬೇತುದಾರರು ಮತ್ತು ಕ್ರೀಡಾ ಉತ್ಸಾಹಿಗಳು ಭಾಗಿಯಾಗಿದ್ದರು.
6. ಡಿಜಿಟಲ್ ಇಂಡಿಯಾ ಪ್ರಶಸ್ತಿ -2018ರ ಅಡಿಯಲ್ಲಿ ಸಚಿವಾಲಯದ ಅಂತರ್ಜಾಲ ತಾಣಕ್ಕೆ ವೆಬ್ ರತ್ನ ಪ್ರಶಸ್ತಿ:ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಂತರ್ಜಾಲ ತಾಣವು ಡಿಜಿಟಲ್ ಇಂಡಿಯಾ ಪ್ರಶಸ್ತಿ -2018ರ ಅಡಿಯಲ್ಲಿ ವೆಬ್ ರತ್ನ (ರಜತ) ಪ್ರಶಸ್ತಿಗೆ ಭಾಜನವಾಗಿದೆ. ವರ್ಲ್ಡ್ ವೈಡ್ ವೆಬ್ ಮಾಧ್ಯಮ ಬಳಸಿಕೊಂಡು ಇ-ಆಡಳಿತದಲ್ಲಿ ಸಚಿವಾಲಯ ಕೈಗೊಂಡಿರುವ ಗಣನೀಯ ಉಪಕ್ರಮಗಳನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
7. ಲಕ್ಷ್ಮೀಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ (ಎಲ್.ಎನ್.ಐ.ಪಿ.ಇ) : ಗ್ವಾಲಿಯರ್ ನ ಎಲ್.ಎನ್.ಐ.ಪಿ.ಇ.ಯಲ್ಲಿ 2019ರ ಫೆಬ್ರವರಿ 25 ಮತ್ತು 26ರಂದು ಶರೀರಶಾಸ್ತ್ರ ವಿಭಾಗದಿಂದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಕುರಿತಂತೆ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿತ್ತು. 2019ರ ಫೆಬ್ರವರಿ 16-17ರಂದು ನಾಗಪುರದಲ್ಲಿ ನಡೆದ ಕ್ರೀಡಾ ಶರೀರಶಾಸ್ತ್ರ ಮತ್ತು ಯೋಗ ವಿಜ್ಞಾನ ಕುರಿತ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಎಲ್.ಎನ್.ಐ.ಪಿ.ಇ. ಕುಲಪತಿ ಪ್ರೊ. ಡಿ.ಕೆ. ದುರೇಹ ಅವರಿಗೆ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಶರೀರಶಾಸ್ತ್ರ ಕ್ಷೇತ್ರ ವಿಭಾಗದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ಜೀವಿತಾವಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
8. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2019: 2019ರ ಆಗಸ್ಟ್ 29ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಯವರು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ-2019ನ್ನು ಪ್ರದಾನ ಮಾಡಿದರು. ಈ ವರ್ಷ 32 ಕ್ರೀಡಾಪಟುಗಳು ಮತ್ತು 5 ಸಂಸ್ಥೆಗಳನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ವಿವಿಧ ಪ್ರವರ್ಗಗಳಲ್ಲಿ ಆಯ್ಕೆ ಮಾಡಲಾಗಿತ್ತು. ಮೌಲಾನಾ ಅಬ್ದುಲ್ ಕಲಾಂ ಆಜಾದ್ (ಎಂ.ಎ.ಕೆ.ಎ.) ಟ್ರೋಫಿ, 2010ನ್ನು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯಕ್ಕೆ ಪ್ರದಾನ ಮಾಡಲಾಯಿತು.
9 ತರಬೇತಿ ಮತ್ತು ಸ್ಪರ್ಧೆಗಳಿಗೆ ವಾರ್ಷಿಕ ದಿನದರ್ಶಿ (ಎ.ಸಿ.ಟಿ.ಸಿ.), ಯು ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳ ಸೀನಿಯರ್ ಮತ್ತು ಜೂನಿಯರ್ ತಂಡಗಳೆರಡಕ್ಕೂ ನಿಗದಿ ಮಾಡಲಾಗುವ ಕ್ರೀಡಾಕೂಟಗಳು ಮತ್ತು ತರಬೇತಿ ಶಿಬಿರಗಳನ್ನು ನಿರ್ಧರಿಸುತ್ತದೆ, ಪ್ರಸಕ್ತ ಆರ್ಥಿಕ ವರ್ಷಕ್ಕೆ ರೂಪಿಸಲಾಗಿರುವ ಕಾರ್ಯಕ್ರಮ ಆನ್ ಲೈನ್ ವೇದಿಕೆಯಲ್ಲಿ ಲಭ್ಯ. ಅನುಮೋದಿತ ಎ.ಸಿ.ಟಿ.ಸಿ. ದಿನದರ್ಶಿ ಮತ್ತು ಬಜೆಟ್ ಅನ್ನು ಅಂತರ್ಜಾಲ ತಾಣದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಅಂತರ್ಜಾಲ ತಾಣದ ಸಂಪರ್ಕದೊಂದಿಗೆ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗಿದೆ.
10. ಆಹಾರ ಮತ್ತು ಪೂರಕ ಆಹಾರ ಶುಲ್ಕಗಳನ್ನು ತರ್ಕಬದ್ಧಗೊಳಿಸುವಿಕೆ: ಸೀನಿಯರ್, ಜೂನಿಯರ್ ಅಥವಾ ಸಬ್ ಜೂನಿಯರ್ ಕ್ರೀಡಾಪಟುಗಳಾಗಿದ್ದರೂ ಎಲ್ಲಾ ಕ್ರೀಡಾಪಟುಗಳಿಗೆ ಆಹಾರ, ಪೂರಕ ಆಹಾರಗಳಿಗೆ ಆರ್ಥಿಕ ನೆರವು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ಸೀನಿಯರ್ ಮತ್ತು ಜೂನಿಯರ್ ಕ್ರೀಡಾಪಟುಗಳು ಮತ್ತು ಎಸ್‌ಎಐ ಪ್ರಶಿಕ್ಷಣಾರ್ಥಿಗಳು ವಿಭಿನ್ನ ಆಹಾರ ಕ್ರಮಗಳನ್ನು ಹೊಂದಿದ್ದರು, ಇದನ್ನು ಎಲ್ಲಾ ಹಂತದ ಪ್ರಶಿಕ್ಷಣಾರ್ಥಿಗಳಲ್ಲಿ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಮಾಡಲಾಗಿದೆ.
11. ದೇಶದಲ್ಲಿ ಕ್ರೀಡೆಗಳ ಉತ್ತೇಜನ ಮತ್ತು ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಸಮನ್ವಯತೆಯಿಂದ ಸಮಗ್ರ ಪ್ರಯತ್ನಗಳನ್ನು ರೂಪಿಸುವ ಉದ್ದೇಶದಿಂದ ಯುವಜನ ವ್ಯವಹಾರ ಮತ್ತು ಕ್ರೀಡೆಯ ರಾಜ್ಯಗಳ ಸಚಿವರು ಮತ್ತು ಕಾರ್ಯದರ್ಶಿಗಳ ಸಮಾವೇಶವನ್ನು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ 2019ರ ನವೆಂಬರ್ 15ರಂದು ನವ ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿತ್ತು.
12. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಆಟಗಳು ಮತ್ತು ಕ್ರೀಡೆಗಳಲ್ಲಿನ ಸಾಧನೆ:
a. ಜಿಯಾನ್ (ಚೈನಾ)ದಲ್ಲಿ ನಡೆದ ಐಎಸ್.ಎಸ್.ಎಫ್. ವಿಶ್ವಕಪ್ (ರೈಫಲ್/ಪಿಸ್ತೂಲ್)ನಲ್ಲಿ ಭಾರತ 3 ಚಿನ್ನ ಮತ್ತು 1 ಬೆಳ್ಳಿ ಪದಕ ಗೆಲ್ಲುವ ಮೂಲಕ ಹಂಗೇರಿಯೊಂದಿಗೆ ಪದಕ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನ ಪಡೆಯಿತು.
b. 2019ರ ಏಪ್ರಿಲ್ ನಲ್ಲಿ ಶ್ರೀಲಂಕಾದಲ್ಲಿ ನಡೆದ ಏಷ್ಯನ್ ಯುವ ಚೆಸ್ ಚಾಂಪಿಯನ್ ಷಿಪ್ ನಲ್ಲಿ 28 ಚಿನ್ನದ ಪದಕ, ದೋಹಾ (ಖತಾರ್)ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ 2 ಚಿನ್ನದ ಪದಕ ಮತ್ತು ಬ್ಯಾಂಕಾಕ್ (ಥಾಯ್ಲೆಂಡ್)ನಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲ 2 ಚಿನ್ನದ ಪದಕ ಸಂಪಾದನೆ ಇತರ ಗಣನೀಯ ಸಾಧನೆಗಳಾಗಿವೆ.
c. ಭಾರತವು ನೆದರ್ ಲ್ಯಾಂಡ್ಸ್ ನ ಹರ್ಟೊಜೆನ್ಬೋಷ್ ನಲ್ಲಿ 2019ರ ಜೂನ್ 10ರಿಂದ 16ರವರೆಗೆ ನಡೆದ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಷಿಪ್ ನಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದು, ವಿಶ್ವ ಅರ್ಚರಿ ಚಾಂಪಿಯನ್ ಷಿಪ್ ನಲ್ಲಿ ಪದಕ ಗಳಿಕೆಯ ಅತ್ಯುತ್ತಮ ಸಾಧನೆ ಮಾಡಿತು. ಈ ಪ್ರದರ್ಶನದೊಂದಿಗೆ ಭಾರತ, 2020ರ ಟೋಕಿಯೋ ಒಲಿಂಪಿಕ್ಸ್ ನ ಬಿಲ್ಲುಗಾರಿಕೆ ಸ್ಪರ್ಧೆಯ ಖೋಟಾ ಸಂಪಾದಿಸಿತು.
d. ಸಮೋವಾದ ಅಪಿಯಾದಲ್ಲಿ 2019ರ ಜುಲೈ 9ರಿಂದ 1ರವರೆಗೆ ನಡೆದ ಕಾಮನ್ ವೆಲ್ತ್ ಭಾರ ಎತ್ತುವ ಚಾಂಪಿಯನ್ ಷಿಪ್ ನಲ್ಲಿ ಭಾರತ ಮೂರು ವಿಭಿನ್ನ ವಯೋಮಾನದ 32 ಕ್ರೀಡಾಪಟು (15 ಪುರುಷರು ಮತ್ತು 17 ಮಹಿಳೆಯರು)ಗಳೊಂದಿಗೆ ಸೀನಿಯರ್ ಮತ್ತು ಜೂನಿಯರ್ ವಯೋಮಾನದ ವರ್ಗಗಳಲ್ಲಿ 35 ಪದಕ (22 ಚಿನ್ನ, 10 ಬೆಳ್ಳಿ ಮತ್ತು 3 ಕಂಚು) ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಈ ಪಂದ್ಯಾವಳಿಯಲ್ಲಿ ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.
e. 2019ರ ಜುಲೈನಲ್ಲಿ ಕಟಕ್ (ಭಾರತ)ನಲ್ಲಿ ನಡೆದ ಕಾಮನ್ ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್ ಷಿಪ್ ನಲ್ಲಿ ಭಾರತ ಎಲ್ಲ (ಏಳು) ಚಿನ್ನದ ಪದಕಗಳನ್ನೂ ತನ್ನದಾಗಿಸಿಕೊಂಡಿತು.
f. ವೈಯಕ್ತಿಕ ಕ್ರೀಡಾ ಸ್ಪರ್ಧೆಗಳಲ್ಲಿ ಹಿಮಾ ದಾಸ್ 2019ರ ಜುಲೈನಲ್ಲಿ ನಡೆದ ವಿವಿಧ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ 20 ದಿನಗಳ ಅವಧಿಯಲ್ಲಿ ಐದು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು.
g. ಇದು 200 ಮೀ ಮತ್ತು 400 ಮೀ ಓಟದಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
h. 2019ರ ಜುಲೈನಲ್ಲಿ ನಡೆದ ವರ್ಲ್ಡ್ ಯುನಿವರ್ಸಿಯೇಡ್ 100 ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಭಾರತದ ಪ್ರಥಮ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ದುತೇ ಚಂದ್ ಪಾತ್ರರಾದರು.
i. ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಷಿಪ್ 2019: ಪಿ.ವಿ. ಸಿಂಧು ಸ್ವಿಟ್ಜರ್ ಲ್ಯಾಂಡ್ ನ ಬಾಸೆಲ್ ಸೇಂಟ್ ಜಕೋಬ್ ಶೇಲ್ ನಲ್ಲಿ 2019ರ ಆಗಸ್ಟ್ 19ರಿಂದ 25ರವರೆಗೆ ನಡೆದ ಬಿ.ಡಬ್ಲ್ಯು.ಎಫ್. ವಿಶ್ವ ಚಾಂಪಿಯನ್ ಷಿಪ್ 2019ರಲ್ಲಿ ಚಿನ್ನದ ಪದಕ ಪಡೆದರು. ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಪ್ರಥಮ ಭಾರತೀಯ ಬ್ಯಾಟ್ಮಿಂಟನ್ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾದರು.
j. 2019ರ ಸೆಪ್ಟೆಂಬರ್ 14ರಿಂದ 22ರ ಅವಧಿಯಲ್ಲಿ ಕಜಕಿಸ್ತಾನದ ನೂರ್-ಸುಲ್ತಾನ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2019 ರಲ್ಲಿ ಭಾರತ ಕುಸ್ತಿಪಟುಗಳ (ಒಂದು ಬೆಳ್ಳಿ ಮತ್ತು 4 ಕಂಚಿನ ಪದಕ) ಪ್ರಬಲ ಪ್ರದರ್ಶನದೊಂದಿಗೆ ಭಾರತ ಟೋಕಿಯೊ ಒಲಿಂಪಿಕ್ 2020 ರ ಕುಸ್ತಿ ಸ್ಪರ್ಧೆಗೆ ನಾಲ್ಕು ಕೋಟಾ ಪಡೆದುಕೊಂಡಿತು.
k. ವಿಶೇಷ ಒಲಿಂಪಿಕ್ಸ್ 2019: 2019ರ ಮಾರ್ಚ್ 14ರಿಂದ 21ರವರೆಗೆ ಅಬು ದಾಬಿ (ಯುಎಇ)ಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್ ನಲ್ಲಿ ಭಾರತದ 284 ಕ್ರೀಡಾಪಟುಗಳು ಭಾಗಿಯಾಗಿದ್ದರು. ಭಾರತೀಯ ಆಟಗಾರರು 85 ಚಿನ್ನ, 154 ಬೆಳ್ಳಿ ಮತ್ತು 129 ಕಂಚಿನೊಂದಿಗೆ 368 ಪದಕ ಸಂಪಾದಿಸಿದರು. ಪಂದ್ಯಾವಳಿಯ ಪದಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಪಡೆಯಿತು.
l. ದಕ್ಷಿಣ ಏಷ್ಯಾ ಕ್ರೀಡಾಕೂಟ 2019: XIIIನೇ ದಕ್ಷಿಣ ಏಷ್ಯಾ ಕ್ರೀಡಾಕೂಟ 2019ನ್ನು ನೇಪಾಳ ಆಯೋಜಿಸಿತ್ತು, 7 ರಾಷ್ಟ್ರಗಳ ಪಾಲ್ಗೊಳ್ಳುವಿಕೆಯೊಂದಿಗೆ ಕಠ್ಮಂಡು ಮತ್ತು ಪೊಖಾರಾದಲ್ಲಿ 2019ರ ಡಿಸೆಂಬರ್ 1ರಿಂದ 10ವರೆಗೆ ಪಂದ್ಯಗಳು ನಡೆದವು. ಭಾರತ 174 ಚಿನ್ನ, 93 ಬೆಳ್ಳಿ ಮತ್ತು 45 ಕಂಚಿನೊಂದಿಗೆ 312 ಪದಕ ಪಡೆದು ಅಗ್ರಸ್ಥಾನ ಪಡೆಯಿತು.
13. ಟೋಕಿಯೋ ಒಲಿಂಪಿಕ್ಸ್ ಗೆ ಭಾರತದ ಸಿದ್ಧತೆ: ರಾಷ್ಟ್ರದ ಕ್ರೀಡಾ ಸಿದ್ಧತೆಗಳಿಗೆ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ (MYAS) ಎರಡು ಪ್ರಮುಖ ಯೋಜನೆಗಳು ಬೆಂಬಲಿಸುತ್ತಿವೆ, ಅವುಗಳೆಂದರೆ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಜಾರಿಗೆ ತಂದಿರುವ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್ 2020 ಎರಡಕ್ಕೂ ಸೆಪ್ಟೆಂಬರ್ 2020 ರವರೆಗೆ ಭಾರತೀಯ ತಂಡಗಳಿಗೆ ತರಬೇತಿ ಮತ್ತು ಸ್ಪರ್ಧೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಪೂರೈಸುವ, ತರಬೇತಿ ಮತ್ತು ಸ್ಪರ್ಧೆಗಳ ವಾರ್ಷಿಕ ದಿನದರ್ಶಿ (ಎ.ಸಿ.ಟಿ.ಸಿ.) ಮತ್ತು ಒಲಿಂಪಿಕ್ ಪೋಡಿಯಂ ಯೋಜನೆ ಗುರಿ (ಟಿಓಪಿಎಸ್) ಇದು ಭಾರತದ ಅಗ್ರ ಅಥ್ಲೀಟ್ ಗಳಿಗೆ ಒಲಿಂಪಿಕ್ಸ್ ನಲ್ಲಿ ಪದಕ ಗಳಿಸುವ ಗುರಿಗೆ ನೆರವಾಗಲಿದೆ. ಒಲಿಂಪಿಕ್ ಪೋಡಿಯಂ ಯೋಜನೆ ಅಡಿಯಲ್ಲಿ 58 ಪ್ರಮುಖ ಸಂಭಾವ್ಯರನ್ನು ಗುರುತಿಸಲಾಗಿದ್ದು, ಅವರಿಗೆ 2020ರ ಒಲಿಂಪಿಕ್ ಕ್ರೀಡೆಗಳಿಗೆ ಮತ್ತು 2020ರ ಪ್ಯಾರಾ ಒಲಿಂಪಿಕ್ಸ್ ಗಾಗಿ 18 ಜನರಿಗೆ ಬೆಂಬಲ ನೀಡಲಾಗುತ್ತಿದೆ.
*****
(Release ID: 1597325)
Visitor Counter : 650