ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಿಂದ ವಾಯುಮಾಲಿನ್ಯವನ್ನು ನಿಗ್ರಹಿಸುವ ಕ್ರಮಗಳ ಪರಿಶೀಲನೆ

Posted On: 04 NOV 2019 7:54PM by PIB Bengaluru

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಿಂದ ವಾಯುಮಾಲಿನ್ಯವನ್ನು ನಿಗ್ರಹಿಸುವ ಕ್ರಮಗಳ ಪರಿಶೀಲನೆ

ಪರಿಸ್ಥಿತಿಯನ್ನು ಸುಧಾರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಂದ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ

 

ಮಾಲಿನ್ಯವನ್ನು ನಿಭಾಯಿಸಲು ಪಂಜಾಬ್, ಹರಿಯಾಣ ಮತ್ತು ದೆಹಲಿ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರು ಮತ್ತೊಮ್ಮೆ ಪರಿಶೀಲಿಸಿದರು. ಕಳೆದ 24 ಗಂಟೆಗಳಲ್ಲಿ ಈ ರಾಜ್ಯಗಳಲ್ಲಿ ಬೆಂಕಿ ಮತ್ತು ಕೂಳೆ ಸುಡುವಿಕೆಯ ಹೊಸ ಪ್ರಕರಣಗಳನ್ನು ಪರಿಶೀಲಿಸಲು ತೆಗೆದುಕೊಂಡ ಹೆಚ್ಚುವರಿ ಕ್ರಮಗಳ ವಿವರಗಳನ್ನು ಡಾ. ಮಿಶ್ರಾ ಅವರು ತಿಳಿದುಕೊಂಡರು.

ಹಾಟ್ಸ್ಪಾಟ್ಗಳನ್ನು ಗುರುತಿಸಿರುವ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಪಂಜಾಬ್ ಮುಖ್ಯ ಕಾರ್ಯದರ್ಶಿಯವರು ಹೇಳಿದ್ದಾರೆ. 1981 ರ ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಉಲ್ಲಂಘನೆಗಾಗಿ ಎಫ್ಐಆರ್ಗಳನ್ನು ನೋಂದಾಯಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಕಾಯ್ದೆಯ ಉಲ್ಲಂಘನೆಗಾಗಿ ದಂಡವನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ.

ರಾಜ್ಯದಲ್ಲಿ ಕೂಳೆ ಸುಡುವ ಪ್ರಕರಣಗಳನ್ನು ಶೀಘ್ರವಾಗಿ ಕಡಿಮೆ ಮಾಡಲು ಸಂಬಂಧಪಟ್ಟ ಎಲ್ಲರಿಗೂ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದ್ದಾರೆ ಎಂದು ಹರಿಯಾಣದ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ವಾಯುಮಾಲಿನ್ಯದ ಪ್ರಕರಣಗಳನ್ನು ನಿಯಂತ್ರಿಸಲು ತಂಡಗಳು 24 ಗಂಟೆಯೂ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.

ನೀರಿನ ಸಿಂಪರಣೆಯನ್ನು ತೀವ್ರಗೊಳಿಸಲಾಗಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಗುರುತಿಸಲಾದ ಹಾಟ್ಸ್ಪಾಟ್ಗಳು ಮತ್ತು ಕಾರಿಡಾರ್ಗಳನ್ನು ಕೇಂದ್ರೀಕರಿಸಲಾಗುತ್ತಿದೆ ಎಂದು ದೆಹಲಿಯ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ನಗರದಲ್ಲಿ ಬೇಕಾಬಿಟ್ಟಿ ಕಸ ಎಸೆಯುವುದನ್ನು ನಿಲ್ಲಿಸಲಾಗಿದೆ ಮತ್ತು ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಗರಿಷ್ಠ ದಂಡವನ್ನು ವಿಧಿಸಿ, ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಕೆಲವು ದಿನಗಳಲ್ಲಿ ಹವಾಮಾನ ಪರಿಸ್ಥಿತಿಗಳು ಸುಧಾರಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ..

ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರು ಪೂರ್ವಭಾವಿ ಕ್ರಿಯೆಯ ಮಹತ್ವವನ್ನು ಒತ್ತಿ ಹೇಳಿದರು. ತಕ್ಷಣದ ಕ್ರಮಕ್ಕಾಗಿ ವ್ಯವಸ್ಥೆಯನ್ನು ಸ್ಥಾಪಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಸಂಬಂಧಪಟ್ಟವರೆಲ್ಲರೂ ಕೈಗೊಂಡಿರುವ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ಮತ್ತು ಅಲ್ಪಾವಧಿಯ ಕ್ರಮಗಳನ್ನು ತೆಗೆದುಕೊಂಡ ನಂತರ, ಶಾಶ್ವತ ದೀರ್ಘಕಾಲೀನ ಪರಿಹಾರಕ್ಕಾಗಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.

ಪ್ರಧಾನ ಮಂತ್ರಿಯವರ ಪ್ರಧಾನ ಸಲಹೆಗಾರ ಶ್ರೀ ಪಿ.ಕೆ. ಸಿನ್ಹಾ, ಕ್ಯಾಬಿನೆಟ್ ಕಾರ್ಯದರ್ಶಿಯವರು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಕಾರ್ಯದರ್ಶಿ, ಕೃಷಿ ಕಾರ್ಯದರ್ಶಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು, ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕರು ಮತ್ತು ಪಂಜಾಬ್, ಹರಿಯಾಣ ಮತ್ತು ದೆಹಲಿಯ ಮುಖ್ಯ ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.



(Release ID: 1592615) Visitor Counter : 116