ಪ್ರಧಾನ ಮಂತ್ರಿಯವರ ಕಛೇರಿ
‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 25-08-2019 ರಂದು ಮಾಡಿದ ‘ಮನ್ ಕಿ ಬಾತ್’ – 3ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ
Posted On:
25 AUG 2019 11:45AM by PIB Bengaluru
‘ಮನದ ಮಾತು’
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು
ದಿನಾಂಕ 25-08-2019 ರಂದು ಮಾಡಿದ
‘ಮನ್ ಕಿ ಬಾತ್’ – 3ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ನಮ್ಮ ದೇಶ ಈ ಮಧ್ಯೆ ಒಂದೆಡೆ ಮಳೆಯ ಆನಂದವನ್ನು ಅನುಭವಿಸುತ್ತಿದ್ದರೆ ಇನ್ನೊಂದೆಡೆ ಭಾರತದ ಪ್ರತಿಯೊಂದು ಮೂಲೆಯಲ್ಲೂ ಒಂದಲ್ಲಾ ಒಂದು ಬಗೆಯ ಉತ್ಸವ ಮತ್ತು ಜಾತ್ರೆ, ದೀಪಾವಳಿವರೆಗೆ ಎಲ್ಲವೂ ಹೀಗೆ ನಡೆಯುತ್ತಿರುತ್ತದೆ. ಬಹುಶಃ ನಮ್ಮ ಪೂರ್ವಜರು ಋತು ಚಕ್ರ, ಆರ್ಥಿಕ ಚಕ್ರ ಮತ್ತು ಸಾಮಾಜಿಕ ಜೀವನದ ವ್ಯವಸ್ಥೆಯನ್ನು ಎಷ್ಟು ಜಾಣ್ಮೆಯಿಂದ ಹೆಣೆದಿದ್ದಾರೆ ಎಂದರೆ ಎಂಥದೇ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಮಂದತೆ ಮೂಡದಂತೆ ಎಚ್ಚರವಹಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ನಾವು ಹಲವಾರು ಹಬ್ಬಗಳನ್ನು ಆಚರಿಸಿದ್ದೇವೆ. ನಿನ್ನೆ ಭಾರತದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು. ಸಹಸ್ರಾರು ವರ್ಷಗಳ ನಂತರವೂ ಎಲ್ಲ ಉತ್ಸವಗಳೂ ಹೊಸತನವನ್ನು ಹೊತ್ತು ತರುತ್ತವೆ, ಹೊಸ ಪ್ರೇರಣೆಯೊಂದಿಗೆ ಬರುತ್ತವೆ, ಹೊಸ ಶಕ್ತಿಯನ್ನು ಹೊತ್ತು ತರುತ್ತವೆ ಮತ್ತು ಸಾವಿರಾರು ವರ್ಷಗಳಷ್ಟು ಪುರಾತನವಾದ ಜೀವನ ಎಂಥದ್ದು ಎಂದರೆ, ಇಂದಿಗೂ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದಾಹರಣೆ ನೀಡಬಲ್ಲಂಥ ಮತ್ತು ಪ್ರೇರಣಾದಾಯಕವಾದಂಥ ಶ್ರೀ ಕೃಷ್ಣನ ಜೀವನದಿಂದ ಪ್ರತಿಯೊಬ್ಬ ವ್ಯಕ್ತಿಯು ತನ್ನ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅಗಾಧ ಸಾಮರ್ಥ್ಯ ಹೊಂದಿದ್ದರೂ ಶ್ರೀಕೃಷ್ಣ ಕೆಲವೊಮ್ಮೆ ರಾಸಲೀಲೆಯಲ್ಲಿ ತಲ್ಲೀನನಾದರೆ, ಒಮ್ಮೊಮ್ಮೆ ಗೋವುಗಳೊಂದಿಗೆ, ಇನ್ನೊಮ್ಮೆ ಗೋಪಾಲಕರೊಂದಿಗೆ, ಕೆಲವೊಮ್ಮೆ ಆಟಪಾಠಗಳಲ್ಲಿ, ಕೆಲವೊಮ್ಮೆ ಕೊಳಲು ವಾದನದಲ್ಲಿ ಮುಳುಗಿಹೋಗುತ್ತಿದ್ದ. ಅದೆಷ್ಟೋ ವೈವಿಧ್ಯತೆಗಳಿಂದ ಕೂಡಿದ್ದ ವ್ಯಕ್ತಿತ್ವ, ಅಪ್ರತಿಮ ಸಾಮರ್ಥ್ಯವಂತ ಆದರೆ ಸಮಾಜ ಶಕ್ತಿಗೆ, ಲೋಕ ಶಕ್ತಿಗೆ ತನ್ನನ್ನು ಸಮರ್ಪಿಸಿಕೊಂಡು ಲೋಕ ಪಾಲಕನ ರೂಪದಲ್ಲಿ ಹೊಸತೊಂದು ದಾಖಲೆಯನ್ನೇ ಸೃಷ್ಟಿಸಿದಂತಹ ವ್ಯಕ್ತಿತ್ವ. ಸ್ನೇಹ ಹೇಗಿರಬೇಕು ಎಂಬುದಕ್ಕೆ ಸುಧಾಮನ ಘಟನೆಯನ್ನು ಯಾರು ಮರೆಯಲು ಸಾಧ್ಯ. ಇನ್ನು ರಣರಂಗದಲ್ಲಿ ಅದಮ್ಯ ಸಾಮರ್ಥ್ಯದ ಹೊರತಾಗಿಯೂ ಸಾರಥಿಯ ಕೆಲಸವನ್ನು ಸ್ವೀಕರಿಸುವುದು, ಪರ್ವತವನ್ನೇ ಬೆರಳಿಂದ ಎತ್ತಿಹಿಡಿಯುವುದರಿಂದ ಹಿಡಿದು ಊಟದ ಎಲೆಯನ್ನು ಎತ್ತುವವರೆಗೆ ಎಲ್ಲದರಲ್ಲೂ ಹೊಸತನ ಎದ್ದು ಕಾಣುತ್ತದೆ. ಆದ್ದರಿಂದ ಇಂದು ನಾನು ನಿಮ್ಮೊಂದಿಗೆ ಮಾತನಾಡುತ್ತಿರುವಾಗ ನನ್ನ ಗಮನ ಇಬ್ಬರು ಮೋಹನರ ಮೇಲೆ ನೆಟ್ಟಿದೆ. ಓರ್ವ ಸುದರ್ಶನ ಚಕ್ರ ಧರಿಸಿದ ಮೋಹನನಾದರೆ ಇನ್ನೊಬ್ಬರು ಚರಕಾಧಾರಿ ಮೋಹನ. ಸುದರ್ಶನ ಚಕ್ರ ಧರಿಸಿದ ಮೋಹನ ಯಮುನಾ ನದಿ ದಂಡೆಯನ್ನು ತೊರೆದು ಗುಜರಾತ್ನ ಸಮುದ್ರ ದಡದಲ್ಲಿ ದ್ವಾರಕಾ ನಗರದಲ್ಲಿ ನೆಲೆ ನಿಂತ. ಇನ್ನು ಸಮುದ್ರ ದಡದಲ್ಲಿ ಜನಿಸಿದ ಮೋಹನ ಯಮುನಾ ನದಿ ದಡಕ್ಕೆ ಬಂದು ದೆಹಲಿಯಲ್ಲಿ ಜೀವನದ ಕೊನೆಯುಸಿರೆಳೆಯುತ್ತಾರೆ. ಸುದರ್ಶನ ಚಕ್ರ ಧರಿಸಿದ ಮೋಹನ ಸಹಸ್ರಾರು ವರ್ಷಗಳ ಹಿಂದೆಯೇ ಅಂದಿನ ಪರಿಸ್ಥಿತಿಯಲ್ಲಿ ಯುದ್ಧವನ್ನು ತಡೆಯಲು, ಸಂಘರ್ಷವನ್ನು ತಡೆಯಲು, ತನ್ನ ಬುದ್ಧಿಶಕ್ತಿ, ಕರ್ತವ್ಯ ಮತ್ತು ಸಾಮರ್ಥ್ಯದ ಹಾಗೂ ತನ್ನ ವಿವೇಕದ ಸಂಪೂರ್ಣ ಬಳಕೆ ಮಾಡಿದ್ದ. ಚರಕಾಧಾರಿ ಮೋಹನ ಕೂಡಾ ಸ್ವಾತಂತ್ರ್ಯಕ್ಕಾಗಿ ಇಂಥದೇ ಒಂದು ದಾರಿ ಹುಡುಕಿದ್ದರು. ಮಾನವೀಯ ಮೌಲ್ಯಗಳನ್ನು ಕಾಪಾಡಲು, ವ್ಯಕ್ತಿತ್ವದ ಮೂಲ ತತ್ವಗಳಿಗೆ ಸಾಮರ್ಥ್ಯ ಒದಗಿಸಿಕೊಡಲು ಸಂಪೂರ್ಣ ವಿಶ್ವವೇ ಇಂದಿಗೂ ಆಶ್ಚರ್ಯಪಡುವಂಥ ಒಂದು ರೂಪ ಮತ್ತು ತಿರುವನ್ನು ಸ್ವಾತಂತ್ರ್ಯ ಚಳವಳಿಗೆ ನೀಡಿದ್ದರು. ನಿಸ್ವಾರ್ಥ ಸೇವೆಯ ಮಹತ್ವವಾಗಿರಲಿ, ಜ್ಞಾನದ ಮಹತ್ವವಾಗಿರಲಿ ಇಲ್ಲವೇ ಜೀವನ ಏಳು ಬೀಳುಗಳ ನಡುವೆಯೂ ನಗುತ್ತಾ ಮುಂದೆ ಸಾಗುವುದರ ಮಹತ್ವದ ಕುರಿತಾಗಲಿ, ಇದೆಲ್ಲವನ್ನು ನಾವು ಭಗವಂತ ಶ್ರೀ ಕೃಷ್ಣನ ಸಂದೇಶಗಳಿಂದ ಕಲಿಯಬಹುದಾಗಿದೆ. ಆದ್ದರಿಂದಲೇ ಶ್ರೀ ಕೃಷ್ಣನನ್ನು ಜಗದ್ಗುರು ಎಂದು ಕರೆಯಲಾಗುತ್ತದೆ. “ಕೃಷ್ಣಂ ವಂದೇ ಜಗದ್ಗುರುಂ”
ಇಂದು ನಾವು ಹಬ್ಬಗಳ ಕುರಿತು ಮಾತನಾಡುತ್ತಿರುವಾಗಲೇ ಭಾರತ ಮತ್ತೊಂದು ದೊಡ್ಡ ಉತ್ಸವದ ತಯಾರಿಯಲ್ಲಿ ತೊಡಗಿದೆ. ಭಾರತ ಮಾತ್ರವಲ್ಲ ಸಂಪೂರ್ಣ ವಿಶ್ವದಲ್ಲೇ ಇದರ ಚರ್ಚೆಯಾಗುತ್ತಿದೆ. ನನ್ನ ಪ್ರಿಯ ದೇಶಬಾಂಧವರೇ ನಾನು ಮಾತನಾಡುತ್ತಿರುವುದು ಮಹಾತ್ಮಾ ಗಾಂಧೀಯವರ 150 ನೇ ಜಯಂತಿ ಕುರಿತು. 2 ಅಕ್ಟೋಬರ್ 1869ರಲ್ಲಿ, ಪೋರ್ ಬಂದರ್ ಸಮುದ್ರದ ದಡದಲ್ಲಿ ಇಂದು ಕೀರ್ತಿ ಮಂದಿರ್ ಎಂದು ಕರೆಯಲಾಗುವ ಆ ಮನೆಯಲ್ಲಿ ಒಬ್ಬ ವ್ಯಕ್ತಿಯಲ್ಲ ಒಂದು ಯುಗದ ಜನನವಾಯಿತು. ಆ ವ್ಯಕ್ತಿ ಮಾನವನ ಇತಹಾಸಕ್ಕೆ ಹೊಸ ತಿರುವು ನೀಡಿದರು. ಹೊಸ ದಾಖಲೆಯನ್ನು ಬರೆದರು. ಒಂದು ವಿಷಯ ಮಹಾತ್ಮಾ ಗಾಂಧಿಯವರೊಂದಿಗೆ ಸದಾ ಇತ್ತು ಅಲ್ಲದೆ ಅದು ಅವರ ಜೀವನದ ಒಂದು ಭಾಗವೇ ಆಗಿ ಹೋಗಿತ್ತು. ಅದೇ - ಸೇವೆ, ಸೇವೆಯ ಮನೋಭಾವ, ಸೇವೆಯ ಕುರಿತು ನಿಷ್ಠೆ. ಅವರ ಸಂಪೂರ್ಣ ಜೀವನವನ್ನು ಅವಲೋಕಿಸಿದಾಗ, ದಕ್ಷಿಣ ಆಫ್ರಿಕಾದಲ್ಲಿ ವರ್ಣ ಬೇಧಕ್ಕೆ ಗುರಿಯಾದ ಸಮುದಾಯದ ಜನರ ಸೇವೆ ಮಾಡಿದ್ದರು. ಆ ಕಾಲಕ್ಕೆ ಇದು ಸಣ್ಣ ಪುಟ್ಟ ವಿಷಯವೇನಾಗಿರಲಿಲ್ಲ. ಚಂಪಾರಣ್ಯದಲ್ಲಿ ಭೇದ ಭಾವಕ್ಕೆ ಒಳಗಾದ ರೈತರ ಸೇವೆ ಮಾಡಿದ್ದರು. ಯಾರಿಗೆ ಸೂಕ್ತ ಕೂಲಿ ದೊರೆಯುತ್ತಿರಲಿಲ್ಲವೋ ಅಂಥ ಕೂಲಿಗಾರರ ಸೇವೆಯನ್ನು ಅವರು ಮಾಡಿದ್ದರು. ಬಡವ, ಬಲ್ಲಿದ, ಅಶಕ್ತ ಮತ್ತು ಹಸಿದವರ ಸೇವೆಯನ್ನೇ ತಮ್ಮ ಜೀವನದ ಆದ್ಯ ಕರ್ತವ್ಯವೆಂದು ಭಾವಿಸಿದ್ದರು. ರಕ್ತ ಪಿತ್ತ ರೋಗಕ್ಕೆ ಸಂಬಂಧಿಸಿದ ಅದೆಷ್ಟೋ ಭ್ರಮೆಗಳಿದ್ದವು, ಇಂಥ ಭ್ರಮೆಗಳನ್ನು ತೊಡೆದು ಹಾಕಲು ರಕ್ತ ಪಿತ್ತ ರೋಗಿಗಳ ಸೇವೆಯನ್ನು ಸ್ವತಃ ಮಾಡುತ್ತಿದ್ದರು ಮತ್ತು ಸ್ವಂತ ಜೀವನದಲ್ಲಿ ಸೇವೆಯ ಮೂಲಕ ಉದಾಹರಣೆಗಳನ್ನು ನೀಡುತ್ತಿದ್ದರು. ಸೇವೆ ಎಂಬುದನ್ನು ಕೇವಲ ಶಬ್ದದಿಂದಲ್ಲದೆ ಸ್ವತಃ ಜೀವಿಸಿ ಕಲಿಸಿದ್ದರು. ಸತ್ಯದೊಂದಿಗೆ ಹೇಗೆ ಗಾಂಧೀಜಿಯವರ ನಂಟಿತ್ತೋ ಹಾಗೆಯೇ ಸೇವೆಯೊಂದಿಗೂ ಗಾಂಧೀಜಿಯವರ ಅನನ್ಯವಾದ ಮತ್ತು ಅಪರೂಪದ ನಂಟಿತ್ತು. ಯಾರಿಗೇ ಆಗಲಿ ಎಲ್ಲಿಯೇ ಆಗಲಿ ಅವಶ್ಯಕತೆಯಿದೆ ಎಂದಾದರೆ ಮಹಾತ್ಮಾ ಗಾಂಧಿ ಸೇವೆಗಾಗಿ ಉಪಸ್ಥಿತರಿರುತ್ತಿದ್ದರು. ಅವರು ಸೇವೆಯ ಬಗ್ಗೆ ಒತ್ತು ನೀಡುವುದಲ್ಲದೇ ಆತ್ಮ ಸಂತೋಷದ ಬಗ್ಗೆಯೂ ಹೆಚ್ಚಿನ ಮಹತ್ವ ನೀಡಿದ್ದರು. ಸೇವೆ ಎಂಬ ಶಬ್ದದ ಸಾರ್ಥಕತೆ ಸೇವೆಯೇ ಪರಮ ಧರ್ಮ ಎಂದರಿತು ಸಂತೋಷದಿಂದ ಮಾಡುವುದರಲ್ಲಿಯೇ ಇದೆ. ಆದರೆ ಇದರೊಟ್ಟಿಗೆ ಉತ್ಕೃಷ್ಟ ಆನಂದ, “ಸ್ವಾಂತಃ ಸುಖಾಯಃ” ಅಂದರೆ ಸ್ವ ಇಚ್ಛೆಯಿಂದ ಸುಖದ ಅನುಭವ ಪಡೆಯುವುದು ಈ ಭಾವನೆಯ ಅನುಭವವವೂ ಸೇವೆಯಲ್ಲಿ ಅಂತರ್ಗತವಾಗಿದೆ. ಇದನ್ನು ಬಾಪು ರವರ ಜೀವನದಿಂದ ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಮಹಾತ್ಮಾ ಗಾಂಧೀ ಅಸಂಖ್ಯ ಭಾರತೀಯರ ಧ್ವನಿಯಾಗಿದ್ದರು. ಆದರೆ ಮಾನವ ಮೌಲ್ಯಗಳು ಮತ್ತು ಹಿರಿಮೆಗೆ ಅವರು ವಿಶ್ವದ ಧ್ವನಿಯಾಗಿದ್ದರು. ಮಹಾತ್ಮಾ ಗಾಂಧೀ ಅವರಿಗೆ ವ್ಯಕ್ತಿ ಮತ್ತು ಸಮಾಜ, ಮಾನವ ಮತ್ತು ಮಾನವೀಯತೆಯೇ ಸರ್ವಸ್ವವಾಗಿತ್ತು. ಆಫ್ರಿಕಾದ ಫೀನಿಕ್ಸ್ ಫಾರ್ಮ್ ಆಗಿರಲಿ ಅಥವಾ ಟೋಲ್ಸ್ ಟಾಯ್ ಫಾರ್ಮ್ ಆಗಿರಲಿ, ಸಾಬರಮತಿ ಆಶ್ರಮವಾಗಿರಲಿ ಅಥವಾ ವಾರ್ಧಾ ಆಗಿರಲಿ ಎಲ್ಲ ಸ್ಥಳಗಳಲ್ಲೂ ತಮ್ಮದೇ ಆದ ರೀತಿಯಲ್ಲಿ ಸಮುದಾಯ ಸಂಚಲನೆಯಲ್ಲಿ ಗಾಂಧೀಜಿ ಅವರದ್ದು ಎತ್ತಿದ ಕೈಯಾಗಿತ್ತು. ಪೂಜ್ಯ ಮಹಾತ್ಮಾ ಗಾಂಧೀ ಅವರಿಗೆ ಸಂಬಂಧಿಸಿದ ಮಹತ್ವಪೂರ್ಣ ಸ್ಥಳಗಳಿಗೆ ಭೇಟಿ ನೀಡಿ ನಮನ ಸಲ್ಲಿಸಲು ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ. ಗಾಂಧೀಜಿ ಸೇವಾ ಮನೋಭಾವನೆಯ ಮೂಲಕ ಸಂಘಟನಾ ಭಾವಕ್ಕೂ ಪುಷ್ಟಿ ನೀಡುತ್ತಿದ್ದರು ಎಂದು ನಾನು ಹೇಳಬಲ್ಲೆ. ಸಮಾಜ ಸೇವೆ ಮತ್ತು ಸಮುದಾಯ ಸಂಚಲನೆ ಎಂಬ ಭಾವನೆಗಳನ್ನು ನಮ್ಮ ವ್ಯಾವಹಾರಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ನಿಜವಾದ ಅರ್ಥದಲ್ಲಿ ಇದೇ ಮಹಾತ್ಮಾ ಗಾಂಧೀ ಅವರಿಗೆ ನೀಡಬಹುದಾದ ಶೃದ್ಧಾಂಜಲಿಯಾಗಿದೆ. ಕಾರ್ಯಾಂಜಲಿಯಾಗಿದೆ. ಇಂಥ ಅವಕಾಶಗಳು ಬಹಳಷ್ಟು ಸಿಗುತ್ತವೆ. ನಾವೂ ಒಗ್ಗೂಡುತ್ತೇವೆ ಆದರೆ ಗಾಂಧೀಜಿಯ 150 ನೇ ಜನ್ಮ ವರ್ಷಾಚರಣೆ ಹೀಗೆ ಬಂದು ಹೋಗುವುದು ನಮಗೆ ಒಪ್ಪಿಗೆಯೇ? ದೇಶಬಾಂಧವರೇ ಇಲ್ಲ. ನಾವೆಲ್ಲ ನಮನ್ನೇ ಪ್ರಶ್ನಿಸಿಕೊಳ್ಳೋಣ, ಆಲೋಚಿಸೋಣ, ಸಾಮೂಹಿಕ ಚರ್ಚೆ ಮಾಡೋಣ. ಸಮಾಜದ ಇತರ ಜನರೊಂದಿಗೆ ಬೆರೆತು, ಎಲ್ಲ ವರ್ಗದವರೊಂದಿಗೆ ಸೇರಿ, ಎಲ್ಲ ವಯೋಮಾನದವರೊಂದಿಗೆ ಕೂಡಿ – ಗ್ರಾಮಗಳಾಗಲಿ, ನಗರಗಳಾಗಲಿ, ಪುರುಷರಾಗಲಿ, ಮಹಿಳೆಯರಾಗಲೀ ಎಲ್ಲರೊಂದಿಗೆ ಸೇರಿ ಸಮಾಜಕ್ಕೆ ಏನು ಮಾಡಬಹುದು – ಒಬ್ಬ ವ್ಯಕ್ತಿಯ ರೂಪದಲ್ಲಿ ಆ ಪ್ರಯತ್ನದಲ್ಲಿ ಹೇಗೆ ಜೊತೆಗೂಡಬಹುದು. ನನ್ನಿಂದ ಯಾವ ರೀತಿಯ ಮೌಲ್ಯವರ್ಧನೆ ಆಗಬಹುದು ಎಂಬ ಚಿಂತನೆ ಮಾಡಬೇಕು. ಹಾಗೂ ಸಮೂಹ ಕಾರ್ಯದಲ್ಲಿ ಅದರದ್ದೇ ಆದ ಶಕ್ತಿ ಇರುತ್ತದೆ. ಗಾಂಧಿ 150 ರ ಸಂಪೂರ್ಣ ಕಾರ್ಯಕ್ರಮದಲ್ಲಿ ಸಾಮೂಹಿಕತೆಯೂ ಇರಲಿ ಮತ್ತು ಸೇವೆಯೂ ಇರಲಿ. ಸುತ್ತಮುತ್ತಲಿನ ಎಲ್ಲರೂ ಸೇರಿ ಮುಂದಡಿಯಿಡೋಣವೇ? ನಮ್ಮದು ಫುಟ್ಬಾಲ್ ತಂಡವಾದರೆ, ಫುಟ್ಬಾಲ್ ಆಡೋಣ ಜೊತೆಗೆ ಗಾಂಧೀಜಿ ಆದರ್ಶದಂತೆ ಕೆಲವೊಂದು ಸೇವಾ ಕಾರ್ಯಗಳನ್ನೂ ಮಾಡೋಣ. ನಮ್ಮದು ಮಹಿಳಾ ಸಂಘವಾದರೆ (ಲೇಡಿಸ್ ಕ್ಲಬ್) ಆಧುನಿಕ ಯುಗದ ಮಹಿಳಾ ಸಂಘದ ಕೆಲಸಗಳನ್ನೂ ಮಾಡುತ್ತಲಿರೋಣ ಜೊತೆಗೆ ಎಲ್ಲ ಗೆಳತಿಯರು ಸೇರಿ ಒಂದಲ್ಲ ಒಂದು ಸೇವಾ ಕಾರ್ಯವನ್ನೂ ಕೈಗೊಳ್ಳೋಣ. ಬಹಳಷ್ಟು ಕೆಲಸ ಮಾಡಬಹುದು. ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಬಡವರಿಗೆ ಹಂಚೋಣ. ಜ್ಞಾನವನ್ನು ಪಸರಿಸೋಣ. ಬಹುಶಃ 130 ಕೋಟಿ ದೇಶ ಬಾಂಧವರ ಬಳಿ 130 ಕೋಟಿ ಕಲ್ಪನೆಗಳಿವೆ, 130 ಕೋಟಿ ನವ ಉಪಕ್ರಮಗಳೂ ಆಗಬಹುದು. ಇದಕ್ಕೆ ಯಾವುದೇ ಸೀಮೆಯಿಲ್ಲ - ಬೇಕಾದದ್ದು ಇಷ್ಟೆ – ಉತ್ತಮ ಉದ್ದೇಶ, ಸದ್ಭಾವನೆ, ಸಂಪೂರ್ಣ ಸಮರ್ಪಣಾಭಾವದಿಂದ ಸೇವೆ ಮಾಡುವುದು. ಅದು ಕೂಡ ಸ್ವಾತಃ ಸುಖಾಯಃ – ಒಂದು ಅನನ್ಯವಾದ ಆನಂದದ ಅನುಭೂತಿಗಾಗಿ ಆಗಿರಲಿ.
ನನ್ನ ಪ್ರಿಯ ದೇಶ ಬಾಂಧವರೆ, ಕೆಲ ತಿಂಗಳುಗಳ ಹಿಂದೆ ನಾನು ಗುಜರಾತ್ನಲ್ಲಿ ದಾಂಡಿಗೆ ಭೇಟಿ ನೀಡಿದ್ದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಾಂಡಿಯ “ಉಪ್ಪಿನ ಸತ್ಯಾಗ್ರಹ” ಒಂದು ಮಹತ್ವದ ತಿರುವಾಗಿದೆ. ದಾಂಡಿಯಲ್ಲಿ ನಾನು ಮಹಾತ್ಮಾ ಗಾಂಧೀ ಅವರಿಗೆ ಮೀಸಲಾದ ಒಂದು ಅತ್ಯಾಧುನಿಕ ಸಂಗ್ರಹಾಲಯವನ್ನು ಉದ್ಘಾಟಿಸಿದ್ದೆ. ನೀವು ಕೂಡಾ ಮುಂಬರುವ ದಿನಗಳಲ್ಲಿ ಮಹಾತ್ಮಾ ಗಾಂಧೀ ಅವರಿಗೆ ಸಂಬಂಧಿಸಿದ ಒಂದಲ್ಲಾ ಒಂದು ಸ್ಥಳಕ್ಕೆ ಖಂಡಿತ ಭೇಟಿ ನೀಡಿ ಎಂದು ಆಗ್ರಹಿಸುತ್ತೇನೆ. ಅದು ಪೋರ್ ಬಂದರ್ ಆಗಿರಬಹುದು, ಸಾಬರಮತಿ ಆಶ್ರಮವಾಗಿರಬಹುದು, ಚಂಪಾರಣ್ ಆಗಿರಬಹುದು, ವಾರ್ಧಾ ಆಶ್ರಮವಾಗಿರಬಹುದು ಅಥವಾ ದಿಲ್ಲಿಯಲ್ಲಿ ಮಾಹಾತ್ಮಾ ಗಾಂಧಿಯವರಿಗೆ ಸಂಬಂಧಿಸಿದ ಯಾವುದೇ ಸ್ಥಳವಾಗಿರಬಹುದು ಹೀಗೆ ಯಾವುದೇ ಸ್ಥಳವಾಗಿರಲಿ ಇಂಥ ಸ್ಥಳಗಳಿಗೆ ನೀವು ಹೋದಾಗ ನಿಮ್ಮ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ತಪ್ಪದೇ ಅಪ್ಲೋಡ್ ಮಾಡಿ. ಇದರಿಂದ ಬೇರೆಯವರಿಗೂ ಸ್ಫೂರ್ತಿ ಸಿಗಲಿ ಹಾಗೂ ಅದರೊಟ್ಟಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವಂತಹ ಒಂದೆರಡು ವಾಕ್ಯಗಳನ್ನೂ ಬರೆಯಿರಿ. ನಿಮ್ಮ ಮನದಾಳದಿಂದ ಮೂಡಿಬಂದ ಭಾವ ಯಾವುದೇ ಉಚ್ಚಮಟ್ಟದ ಸಾಹಿತ್ಯಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ ಮತ್ತು ಆಗಬಹುದು. ಇಂದಿನ ಸಮಯದಲ್ಲಿ ನಿಮ್ಮ ದೃಷ್ಟಿ ಕೋನದಿಂದ ನೀವು ಲೇಖನಿಯಿಂದ ಬರೆದಂತಹ ಗಾಂಧಿಯ ರೂಪ ಬಹುಶಃ ಹೆಚ್ಚು ಸಮಯೋಚಿತವಿರಬಹುದು. ಮುಂಬರುವ ದಿನಗಳಲ್ಲಿ ಬಹಳಷ್ಟು ಕಾರ್ಯಕ್ರಮಗಳು, ಸ್ಪರ್ಧೆಗಳು, ಪ್ರದರ್ಶನಗಳ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಆದರೆ ಈ ಸಂದರ್ಭದಲ್ಲಿ ಒಂದು ಬಹಳ ರೋಚಕವಾದ ವಿಷಯವಿದೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ವೆನ್ನಿಸ್ ಬಿಯೆನ್ನೆಲ್ ಎಂಬ ಬಹು ಪ್ರಸಿದ್ಧ ಕಲಾ ಪ್ರದರ್ಶನವಿದೆ. ಅಲ್ಲಿ ವಿಶ್ವದಾದ್ಯಂತದ ಕಲಾವಿದರು ಸೇರುತ್ತಾರೆ. ಈ ಬಾರಿ ವೆನ್ನಿಸ್ ಬಿಯೆನ್ನೆಲ್ ನಲ್ಲಿ ಭಾರತೀಯ ಪೆವಿಲಿಯನ್ ನಲ್ಲಿ ಗಾಂಧೀಜಿಯವರ ನೆನಪುಗಳ ಬಹಳ ಆಸಕ್ತಿಕರ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಇದರಲ್ಲಿ ಹರಿಪುರಾ ಪ್ಯಾನಲ್ಗಳು ಬಹಳ ಆಸಕ್ತಿ ಮೂಡಿಸಿದ್ದವು. ಗುಜರಾತ್ನ ಹರಿಪುರದಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು ಎಂಬುದು ನಿಮಗೆ ನೆನಪಿರಬಹುದು. ಅದರಲ್ಲಿ ಸುಭಾಷ್ ಚಂದ್ರ ಭೋಸ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಆರ್ಟ್ ಪ್ಯಾನಲ್ಗಳಿಗೆ ಒಂದು ಸುಂದರ ಇತಿಹಾಸವಿದೆ. ಕಾಂಗ್ರೆಸ್ ಹರಿಪುರ ಅಧಿವೇಶನಕ್ಕೂ ಮೊದಲು 1937-38 ರಲ್ಲಿ ಮಹಾತ್ಮಾ ಗಾಂಧಿಯವರು ಶಾಂತಿನಿಕೇತನ ಕಲಾಭವನದ ಅಂದಿನ ಪ್ರಾಂಶುಪಾಲರಾಗಿದ್ದ ನಂದಲಾಲ್ ಬೋಸ್ ಅವರಿಗೆ ಆಮಂತ್ರಣ ನೀಡಿದ್ದರು. ಭಾರತದಲ್ಲಿರುವವರ ಜೀವನಶೈಲಿಯನ್ನು ಕಲಾ ಮಾಧ್ಯಮದ ಮೂಲಕ ಪ್ರಸ್ತುತಪಡಿಸಲಿ ಎಂಬುದು ಗಾಂಧೀಜಿಯವರ ಆಸೆಯಾಗಿತ್ತು. ಈ ಕಲಾ ಪ್ರದರ್ಶನ ಅಧಿವೇಶನದ ಸಮಯದಲ್ಲಿ ನಡೆಯಬೇಕು ಎಂದುಕೊಂಡಿದ್ದರು. ನಮ್ಮ ಸಂವಿಧಾನದ ಶೋಭೆಯನ್ನು ಹೆಚ್ಚಿಸಿರುವ, ಅದಕ್ಕೊಂದು ಹೊಸ ರೂಪವನ್ನು ನೀಡಿರುವ ಕಲಾಕೃತಿಗಳ ರಚನೆಕಾರರು ಇದೇ ನಂದಲಾಲ್ ಬೋಸ್. ಅವರ ಈ ಕಲಾ ಸಾಧನೆ ಸಂವಿಧಾನದ ಜೊತೆ ಜೊತೆಗೆ ನಂದಲಾಲ್ ಬೋಸ್ ಅವರನ್ನು ಅಮರರನ್ನಾಗಿಸಿದೆ. ನಂದಲಾಲ್ ಬೋಸ್ ಅವರು ಹರಿಪುರಾ ಸುತ್ತಮುತ್ತಲಿನ ಗ್ರಾಮಗಳಲ್ಲಿ ಓಡಾಡಿ ಕೊನೆಗೆ ಗ್ರಾಮೀಣ ಭಾರತದ ಜೀವನವನ್ನು ಪ್ರತಿಬಿಂಬಿಸುವ ಒಂದು ಆರ್ಟ್ ಕ್ಯಾನ್ವಾಸ್ ಸಿದ್ಧಪಡಿಸಿದರು. ಈ ಅಪರೂಪದ ಕಲಾಕೃತಿಯ ಬಗ್ಗೆ ವಿನಿಸ್ನಲ್ಲಿ ಬಹಳ ಚರ್ಚೆ ನಡೆಯಿತು. ಮತ್ತೊಮ್ಮೆ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಶುಭಾಷಯಗಳೊಂದಿಗೆ ಪ್ರತಿ ಭಾರತೀಯನಿಂದಲೂ ಒಂದಲ್ಲ ಒಂದು ಸಂಕಲ್ಪದ ಅಪೇಕ್ಷೆ ಇದೆ. ದೇಶಕ್ಕಾಗಿ, ಸಮಾಜಕ್ಕಾಗಿ, ಬೇರೆಯವರಿಗಾಗಿ ಏನಾದರೂ ಮಾಡಬೇಕು. ಇದೇ ನಾವು ಬಾಪು ಅವರಿಗೆ ಸಲ್ಲಿಸುವ ಉತ್ತಮವಾದ, ನಿಜವಾದ ಮತ್ತು ಪ್ರಾಮಾಣಿಕವಾದ ಕಾರ್ಯಾಂಜಲಿಯಾಗಿದೆ.
ತಾಯಿ ಭಾರತಿಯ ಸುಪುತ್ರರೇ, ನಿಮ್ಮೆಲ್ಲರಿಗೂ ನೆನಪಿರಬಹುದು ಕಳೆದ ಕೆಲವು ವರ್ಷಗಳಿಂದೀಚೆಗೆ ನಾವು ಅಕ್ಟೋಬರ್ಗಿಂತಲೂ ಮೊದಲು ಸುಮಾರು 2 ವಾರಗಳವರೆಗೆ ದೇಶಾದ್ಯಂತ “ಸ್ವಚ್ಛತೆಯೇ ಸೇವೆ” ಆಂದೋಲನವನ್ನು ಆಚರಿಸುತ್ತೇವೆ. ಈ ಬಾರಿ ಇದು ಸೆಪ್ಟೆಂಬರ್ 11 ರಿಂದ ಆರಂಭವಾಗಲಿದೆ. ಈ ಸಮಯದಲ್ಲಿ ನಾವು ನಮ್ಮ ಮನೆಯಿಂದ ಹೊರಬಂದು ಶ್ರಮದಾನದ ಮೂಲಕ ಮಹಾತ್ಮಾ ಗಾಂಧಿಜಿಗೆ ಕಾರ್ಯಾಂಜಲಿ ಸಮರ್ಪಿಸೋಣ. ಮನೆಯಿರಲಿ ಅಥವಾ ಬೀದಿಯಿರಲಿ, ಚೌಕವಾಗಿರಲಿ, ಕೂಡು ರಸ್ತೆಗಳಾಗಿರಲಿ ಅಥವಾ ಚರಂಡಿಗಳಾಗಿರಲಿ, ಶಾಲೆ, ಕಾಲೇಜುಗಳಿಂದ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯ ಮಹಾ ಅಭಿಯಾನವನ್ನೇ ನಡೆಸಬೇಕಿದೆ. ಈ ಬಾರಿ ಪ್ಲಾಸ್ಟಿಕ್ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ. ಎಷ್ಟೊಂದು ಉತ್ಸಾಹ ಮತ್ತು ಹುರುಪಿನಿಂದ 125 ಕೋಟಿ ದೇಶವಾಸಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರೋ, ಬಯಲು ಶೌಚ ಮುಕ್ತಿಗಾಗಿ ಕೆಲಸ ಮಾಡಿದರೋ, ಅದೇ ರೀತಿ ಒಗ್ಗೂಡಿ ಒಂದು ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್ನಿಂದ ಮುಕ್ತಿ ಹೊಂದಬೇಕಿದೆ ಎಂದು ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ನಾನು ಹೇಳಿದ್ದೆ. ಈ ವಿಷಯದ ಕುರಿತು ಸಮಾಜದ ಎಲ್ಲ ವರ್ಗಗಳಲ್ಲೂ ಉತ್ಸಾಹವಿದೆ. ನನ್ನ ಬಹಳಷ್ಟು ಜನ ವ್ಯಾಪಾರೀ ಸೋದರ ಸೋದರಿಯರು ತಮ್ಮ ಅಂಗಡಿಗಳಲ್ಲಿ “ ಗ್ರಾಹಕರು ತಮ್ಮ ಕೈಚೀಲಗಳನ್ನು ತಾವೇ ತರಬೇಕು” ಎಂಬ ಫಲಕವನ್ನು ಹಾಕಿದ್ದಾರೆ. ಇದರಿಂದ ಹಣದ ಉಳಿತಾಯವೂ ಆಗುತ್ತದೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ತಮ್ಮ ಕೊಡುಗೆಯನ್ನೂ ನೀಡಿದಂತಾಗುತ್ತದೆ. ಈ ಬಾರಿ ಅಕ್ಟೋಬರ್ 2 ರಂದು ಬಾಪೂಜಿಯವರ 150 ನೇ ಜಯಂತಿ ಆಚರಣೆ ಸಂದರ್ಭದಲ್ಲಿ ಬಯಲು ಶೌಚ ಮುಕ್ತ ಭಾರತವನ್ನ ಸಮರ್ಪಿಸುವುದಷ್ಟೇ ಅಲ್ಲದೆ ಪ್ಲಾಸ್ಟಿಕ್ ವಿರುದ್ಧ ಒಂದು ಹೊಸ ಜನಾಂದೋಲನಕ್ಕೆ ಅಡಿಪಾಯ ಹಾಕಲಿದ್ದೇವೆ. ಈ ವರ್ಷ ಗಾಂಧಿ ಜಯಂತಿಯನ್ನು ಭಾರತಮಾತೆಯನ್ನು ಪ್ಲಾಸ್ಟಿಕ್ನಿಂದ ಮುಕ್ತಗೊಳಿಸುವ ರೂಪದಲ್ಲಿ ಆಚರಿಸೋಣ, ಅಕ್ಟೋಬರ್ 2 ನೇ ತಾರಿಖನ್ನು ವಿಶೇಷವಾಗಿ ಆಚರಿಸೋಣ, ಮಹಾತ್ಮಾ ಗಾಂಧಿಯವರ ಜಯಂತಿಯು ಒಂದು ವಿಶೇಷ ಶ್ರಮದಾನದ ಹಬ್ಬವಾಗಲಿ ಎಂದು ಸಮಾಜದ ಎಲ್ಲ ವರ್ಗಗಳಿಗೆ, ಎಲ್ಲ ಗ್ರಾಮಗಳು, ಹೋಬಳಿಗಳು ಮತ್ತು ನಗರವಾಸಿಗಳಿಗೆ ಮನವಿ ಮಾಡುತ್ತೇನೆ, ಕೈಜೋಡಿಸಿ ಪ್ರಾರ್ಥಿಸುತ್ತೇನೆ. ಪ್ಲಾಸ್ಟಿಕ್ ಕಸ ಸಂಗ್ರಹ ಮತ್ತು ಶೇಖರಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ದೇಶದ ಎಲ್ಲ ನಗರಪಾಲಿಕೆಗಳು, ನಗರ ನಿಗಮಗಳು, ಜಿಲ್ಲಾಡಳಿತ, ಗ್ರಾಮ ಪಂಚಾಯ್ತಿಗಳು, ಸರ್ಕಾರಿ - ಸರ್ಕಾರೇತರ ಎಲ್ಲ ಸಂಸ್ಥೆಗಳು, ಎಲ್ಲ ಸಂಘಟನೆಗಳು, ಒಬ್ಬೊಬ್ಬ ನಾಗರಿಕನಲ್ಲೂ ವಿನಂತಿಸುತ್ತೇನೆ. ಈ ಎಲ್ಲ ಪ್ಲಾಸ್ಟಿಕ್ ತ್ಯಾಜ್ಯ ಒಗ್ಗೂಡಿದಾಗ ಇದರ ಸೂಕ್ತ ವಿಲೇವಾರಿಗೆ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಕಾರ್ಪೊರೇಟ್ ವಿಭಾಗಕ್ಕೂ ವಿನಂತಿಸುತ್ತೇನೆ. ಇದನ್ನು ಮರುಬಳಕೆ ಮಾಡಬಹುದು. ಇದರಿಂದ ಇಂಧನ ತಯಾರಿಸಬಹುದು. ಈ ರೀತಿ ದೀಪಾವಳಿವರೆಗೆ ನಾವು ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಕೆಲಸವನ್ನು ಪೂರ್ಣಗೊಳಿಸಬಹುದು. ಕೇವಲ ಸಂಕಲ್ಪಗೈಯ್ಯಬೇಕಿದೆ. ಪ್ರೇರಣೆಗಾಗಿ ಅತ್ತಿತ್ತ ನೋಡುವ ಅವಶ್ಯಕತೆಯಿಲ್ಲ. ಗಾಂಧಿಯವರಿಗಿಂತ ದೊಡ್ಡ ಪ್ರೇರಣೆ ಇನ್ನೊಂದಿಲ್ಲ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಸ್ಕೃತ ಸುಭಾಷಿತಗಳು ಒಂದು ರೀತಿಯಲ್ಲಿ ಜ್ಞಾನದ ರತ್ನಗಳಾಗಿವೆ. ನಮಗೆ ಜೀವನದಲ್ಲಿ ಯಾವುದು ಬೇಕೋ ಅದು ಅವುಗಳಲ್ಲಿ ದೊರೆಯುತ್ತವೆ. ಇತ್ತೀಚಿನ ದಿನಗಳಲ್ಲಿ ನನ್ನ ಸಂಪರ್ಕ ಬಹಳ ಕಡಿಮೆ ಆಗಿದೆ ಆದರೆ ಮೊದಲು ನಾನು ಬಹಳ ಸಂಪರ್ಕದಲ್ಲಿದ್ದೆ. ಇಂದು ನಾನು ಒಂದು ಸಂಸ್ಕೃತ ಸುಭಾಷಿತದಿಂದ ಒಂದು ಬಹಳ ಮಹತ್ವಪೂರ್ಣ ಮಾತನ್ನು ಸ್ಪರ್ಷಿಸಲು ಇಚ್ಛಿಸುತ್ತೇನೆ ಮತ್ತು ಇದು ಶತಮಾನಗಳ ಹಿಂದೆ ಬರೆದಂತಹ ಮಾತುಗಳಾಗಿವೆ. ಆದರೆ ಇಂದು ಕೂಡಾ ಇವು ಎಷ್ಟೊಂದು ಮಹತ್ವಪೂರ್ಣವಾಗಿವೆ. ಒಂದು ಉತ್ತಮ ಸುಭಾಷಿತ ಹೀಗಿದೆ –
“ಪೃಥ್ವಿಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಮ್|
ಮೂಢೈ: ಪಾಷಾಣಖಂಡೇಷು ರತ್ನಸಂಜ್ಞಾ ಪ್ರದೀಯತೆ|”
ಈ ಸುಭಾಷಿತದಲ್ಲಿ ಹೀಗಿದೆ- ಪೃಥ್ವಿಯಲ್ಲಿ ಜಲ, ಅನ್ನ ಮತ್ತು ಸುಭಾಷಿತ ಈ ಮೂರು ರತ್ನಗಳಿವೆ. ಮೂರ್ಖರು ಕಲ್ಲನ್ನು ರತ್ನಗಳೆನ್ನುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಅನ್ನದ ಮಹತ್ವ ಬಹಳ ಅಧಿಕವಾಗಿದೆ. ಎಲ್ಲಿಯವರೆಗೆ ಅಂದರೆ ನಾವು ಅನ್ನದ ಜ್ಞಾನವನ್ನೂ ವಿಜ್ಞಾನವಾಗಿ ಬದಲಿಸಿದ್ದೇವೆ. ಸಮತೋಲ ಮತ್ತು ಪೌಷ್ಟಿಕ ಆಹಾರ ನಮ್ಮೆಲ್ಲರಿಗೂ ಅವಶ್ಯವಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಮತ್ತು ನವಜಾತ ಶಿಶುಗಳಿಗಾಗಿ , ಯಾಕೆಂದರೆ ಇವರೆ ನಮ್ಮ ಸಮಾಜದ ಭವಿಷ್ಯದ ಅಡಿಪಾಯವಾಗಿದ್ದಾರೆ. ‘ಪೋಷಣ ಅಭಿಯಾನ’ ದಡಿಯಲ್ಲಿ ದೇಶದಲ್ಲೆಲ್ಲ ಆಧುನಿಕ ವೈಜ್ಞಾನಿಕ ರೀತಿಯಲ್ಲಿ ಪೋಷಣೆಯನ್ನು ಜನಾಂದೋಲನವನ್ನಾಗಿ ಮಾಡಲಾಗುತ್ತಿದೆ. ಜನರು ಹೊಸದಾದ ಮತ್ತು ಆಕರ್ಷಕ ರೀತಿಯಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಯಾವಾಗಲೋ ಒಂದು ಮಾತನ್ನು ನನ್ನ ಗಮನಕ್ಕೆ ತರಲಾಗಿತ್ತು. ನಾಶಿಕ್ ನಲ್ಲಿ “ಮುಷ್ಠಿಯಷ್ಟು ಕಾಳು” ಎಂಬುದೊಂದು ದೊಡ್ಡ ಚಳುವಳಿಯೇ ಆಗಿದೆ. ಇದರಡಿಯಲ್ಲಿ ಬೆಳೆಗಳ ಕೊಯ್ಲಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜನರಿಂದ ಒಂದು ಮುಷ್ಠಿ ಕಾಳು ಪಡೆದು ಕೂಡಿಸುತ್ತಾರೆ. ಮಹಿಳೆ ಹಾಗೂ ಮಕ್ಕಳಿಗಾಗಿ ಬಿಸಿಯೂಟ ಮಾಡಲು ಈ ಧಾನ್ಯಗಳನ್ನು ಉಪಯೋಗಿಸುತ್ತಾರೆ. ಇಲ್ಲಿ ದಾನ ಮಾಡುವ ವ್ಯಕ್ತಿ ಒಂದು ರೀತಿಯಿಂದ ಜಾಗರೂಕ ನಾಗರಿಕ ಸಮಾಜ ಸೇವಕನಾಗಿಬಿಡುತ್ತಾನೆ. ಇದಾದ ನಂತರ ಈ ಉದ್ದೇಶಕ್ಕಾಗಿ ಸ್ವತಃ ತಾನೆ ಸಮರ್ಪಿಸಿಕೊಂಡು ಬಿಡುತ್ತಾನೆ. ಅವನೊಬ್ಬ ಆ ಚಳುವಳಿಯ ಸಿಪಾಯಿಯಾಗಿ ಬಿಡುತ್ತಾನೆ. ನಾವೆಲ್ಲರೂ ಪರಿವಾರಗಳಲ್ಲಿ ಹಿಂದುಸ್ತಾನದ ಮೂಲೆ-ಮೂಲೆಯಲ್ಲಿ ‘ಅನ್ನ ಪ್ರಾಶನ’ ಸಂಸ್ಕಾರದ ಬಗ್ಗೆ ಕೇಳಿದ್ದೇವೆ. ಮಕ್ಕಳಿಗೆ ಮೊದಲ ಬಾರಿಗೆ ದ್ರವ ಆಹಾರದ ಬದಲಾಗಿ ಗಟ್ಟ್ಟಿ ಆಹಾರ ತಿನಿಸುವ ಈ ಸಂಸ್ಕಾರವನ್ನು ಮಾಡಲಾಗುತ್ತದೆ. ಗುಜರಾತಿನಲ್ಲಿ 2010 ರಲ್ಲಿ ಒಂದು ವಿಚಾರ ಮಂಡಿಸಲಾಯಿತು ‘ಅನ್ನ ಪ್ರಾಶನ ಸಂಸ್ಕಾರ’ ಸಮಯದಲ್ಲಿ ಯಾಕೆ ಮಕ್ಕಳಿಗೆ ಪೂರಕ ಆಹಾರ ಕೊಡಬಾರದು, ಏಕೆಂದರೆ ಇದರಿಂದ ಜನರನ್ನು ಜಾಗೃತಗೊಳಿಸಬಹುದು. ಇದೊಂದು ಬಹಳ ಅದ್ಭುತವಾದ ಹೆಜ್ಜೆಯಾಗಿದೆ, ಎಲ್ಲಿ ಬೇಕಾದರೂ ಅಳವಡಿಸಿಕೊಳ್ಳಬಹುದಾಗಿದೆ. ಹಲವು ರಾಜ್ಯಗಳಲ್ಲಿ ಜನರು ತಿಥಿ ಭೋಜನ ಅಭಿಯಾನ ನಡೆಸುತ್ತಾರೆ. ಒಂದು ವೇಳೆ ಪರಿವಾರದಲ್ಲಿ ಜನ್ಮದಿನವಾಗಿರಬಹುದು, ಯಾವುದೇ ಶುಭದಿನವಾಗಿರಬಹುದು, ಯಾವುದೇ ಸ್ಮ್ರತಿ ದಿನವಾಗಿರಬಹುದು ಆಗ ಪರಿವಾರದ ಜನತೆ ಪೌಷ್ಟಿಕವಾದ ಅಡುಗೆ, ಸ್ವಾಧಿಷ್ಟ ಅಡುಗೆ ಮಾಡಿಕೊಂಡು ಅಂಗನವಾಡಿಗೆ ಹೋಗುತ್ತಾರೆ, ಸ್ಕೂಲುಗಳಿಗೆ ಹೋಗುತ್ತಾರೆ ಮತ್ತು ಪರಿವಾರದ ಜನತೆ ಸ್ವತಃ ಮಕ್ಕಳಿಗೆ ನೀಡುತ್ತಾರೆ, ತಿನ್ನಿಸುತ್ತಾರೆ. ತಮ್ಮ ಆನಂದವನ್ನೂ ಹಂಚಿಕೊಳ್ಳುತ್ತಾರೆ ಮತ್ತು ಆನಂದವನ್ನು ವ್ಯಕ್ತಪಡಿಸುತ್ತಾರೆ. ಸೇವೆಯ ಭಾವನೆ ಮತ್ತು ಆನಂದದ ಭಾವನೆಯ ಅದ್ಭುತ ಮಿಲನ ಗೋಚರವಾಗುತ್ತದೆ. ಗೆಳೆಯರೆ, ಇಂತಹ ಹಲವು ಚಿಕ್ಕ-ಚಿಕ್ಕ ಕಾರ್ಯಗಳು ನಮ್ಮ ದೇಶದ ಅಪೌಷ್ಟಿಕತೆ ವಿರುದ್ಧ ಒಂದು ಪ್ರಭಾವಿ ಸಮರವನ್ನೇ ಸಾರಬಹುದಾಗಿದೆ. ಇಂದು ಜಾಗರೂಕತೆಯ ಕೊರತೆಯಿಂದ ಅಪೌಷ್ಟಿಕತೆಯಿಂದಾಗಿ ಬಡವರೂ ಮತ್ತು ಶ್ರೀಮಂತರೂ ಎರಡೂ ಸ್ತರದ ಪರಿವಾರಗಳು ಪ್ರಭಾವಿತವಾಗಿವೆ. ಇಡೀ ದೇಶದಲ್ಲಿ ಸೆಪ್ಟೆಂಬರ್ ತಿಂಗಳು ‘ಪೋಷಣ ಅಭಿಯಾನ’ ರೂಪದಲ್ಲಿ ಆಚರಿಸಲಾಗುವುದು. ತಾವು ಅವಶ್ಯವಾಗಿ ಇದರೊಂದಿಗೆ ಸೇರಿರಿ, ತಿಳಿದುಕೊಳ್ಳಿರಿ, ಸ್ವಲ್ಪ ಹೊಸದನ್ನು ಸೇರಿಸಿರಿ. ತಾವು ಕೊಡುಗೆ ನೀಡಿರಿ. ಒಂದು ವೇಳೆ ತಾವು ಒಂದಿಬ್ಬರಿಗಾದರೂ ಅಪೌಷ್ಟಿಕತೆಯಿಂದ ಮುಕ್ತಗೊಳಿಸಿದ್ದಾರೆ ಅದು ನಾವು ದೇಶವನ್ನು ಅಪೌಷ್ಟಿಕತೆಯಿಂದ ಹೊರಗೆ ತಂದಂತೆಯೇ ಸರಿ.
“ಹೆಲೊ ಸರ್, ನನ್ನ ಹೆಸರು ಸೃಷ್ಟಿ ವಿದ್ಯಾ ನಾನು 2nd year student ಆಗಿದ್ದೇನೆ. ಸರ್ ನಾನು Twelvth August ಕ್ಕೆ Bear Grylls ಜೊತೆಗೆ ತಮ್ಮ Episode ನೋಡಿದ್ದೆ. ಸರ್ ಆ ಇಠಿisoಜe ನೋಡಿ ನನಗೆ ಬಹಳ ಸಂತೋಷವಾಯಿತು. First of all (ಮೊದಲಿಗೆ) ಇದನ್ನು ಕೇಳಿ ಸಂತೊಷವಾಯಿತು ತಮಗೆ Nature, Wild life and environment ಬಗ್ಗೆ ಎಷ್ಟೊಂದು ಕಾಳಜಿ ಇದೆ. ಎಷ್ಟೊಂದು Care ಮಾಡುತ್ತೀರಿ. ಮತ್ತೆ ಸರ್ ತಮ್ಮನ್ನು ಈ ಹೊಸ ರೂಪದಲ್ಲಿ, Adventurous ರೂಪದಲ್ಲಿ ನೋಡಿ ಬಹಳ ಖುಷಿಯಾಯಿತು,. ಈಗ ಸರ್, ನಾನು ಈ Episode ನಿಂದ ತಮಗಾದ experience ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಕೊನೆಯದಾಗಿ ಒಂದು ಮಾತು Add ಮಾಡಬಯಸುತ್ತೇನೆ. ನಿಮ್ಮ fitness level ನೋಡಿ, ತಮ್ಮನ್ನು ಇಷ್ಟೊಂದು fit and fine ನೋಡಿ ನಮ್ಮಂತಹ youngster ಬಹಳ ಹೆಚ್ಚು impress ಮತ್ತು ಅತಿ ಹೆಚ್ಚು motivate ಆಗಿರುತ್ತೇವೆ.”
ಸೃಷ್ಟಿ ಅವರೆ ತಮ್ಮ ಫೋನ್ ಕಾಲ್ ಗಾಗಿ ಧನ್ಯವಾದಗಳು. ನಿಮ್ಮಂತೆಯೇ ಹರಿಯಾಣದಲ್ಲಿ ಸೋಹನಾ, ಕೆ.ಕೆ. ಪಾಂಡೆ ಅವರು ಮತ್ತು ಸೂರತ್ನ ಐಶ್ವರ್ಯಾ ಶರ್ಮಾ ಅವರೊಂದಿಗೆ ಇನ್ನೂ ಹಲವರು Discovery Channel ನಲ್ಲಿ ತೋರಿಸಿದಂತಹ ‘‘Man vs, Wild’ Episode ಬಗ್ಗೆ ತಿಳಿದುಕೊಳ್ಳಬಯಸಿದ್ದಾರೆ. ಈ ಸಲದ ‘ಮನ್ ಕಿ ಬಾತ್’ ಸಲುವಾಗಿ ಯೋಚಿಸುತ್ತಿರುವಾಗ ಇದರ ಬಗ್ಗೆ ಬಹಳಷ್ಟು ಪ್ರಶ್ನೆಗಳು ಬರಬಹುದೆಂದು ನನಗೆ ಪೂರ್ಣ ವಿಶ್ವಾಸವಿತ್ತು, ಅದು ಹಾಗೇ ಆಯಿತು ಅಲ್ಲದೆ ಕಳೆದ ಕೆಲವು ವಾರಗಳಲ್ಲಿ ನಾನು ನನ್ನ ಪ್ರವಾಸದಲ್ಲಿ ಎಲ್ಲೆಲ್ಲಿ ಜನರನ್ನು ಭೆಟಿಯಾಗಿದ್ದೇನೆ ಅಲ್ಲಿ ‘‘Man vs, Wild’ ನ ವಿಷಯ ಪ್ರಸ್ತಾಪ ಬಂದೇ ಬರುತ್ತಿದೆ. ಈ ಒಂದು Episode ನಿಂದಾಗಿ ನಾನು ಕೇವಲ ಭಾರತ ಅಷ್ಟೇ ಅಲ್ಲ ಜಗತ್ತಿನ ಎಲ್ಲ ಯುವಕರೊಂದಿಗೆ ಸಂಪರ್ಕ ಹೊಂದಿದ್ದೇನೆ. ಯುವಕರ ಮನಸ್ಸಿನಲ್ಲಿ ಈ ಪ್ರಕಾರ ನನಗೆ ಸ್ಥಾನ ಸಿಗುವುದೆಂದು ನಾನೂ ಕೂಡಾ ಎಂದೂ ಯೋಚಿಸಿರಲಿಲ್ಲ. ನಮ್ಮ ದೇಶ ಹಾಗೂ ಜಗತ್ತಿನ ಎಲ್ಲ ಯುವಕರು ಎಷ್ಟು ವಿವಿಧತೆಯಿಂದ ಕೂಡಿದ ವಿಷಯಗಳ ಬಗ್ಗೆ ಗಮನವಹಿಸತ್ತಾರೆಂದು ಕೂಡಾ ನಾನು ಎಂದೂ ಯೋಚಿಸಿರಲಿಲ್ಲ. ಜಗತ್ತಿನ ಎಲ್ಲ ಯುವ ಮನಸ್ಸುಗಳನ್ನು ಸ್ಪರ್ಷಿಸುವ ಪ್ರಸಂಗ ಒದಗುವುದೆಂಬುದರ ಬಗ್ಗೆ ನಾನು ಎಂದೂ ಯೋಚಿಸಿರಲಿಲ್ಲ. ಮತ್ತೆ ಏನಾಗುತ್ತದೆ? ಕಳೆದ ವಾರ ನಾನು ಭೂತಾನ್ಗೆ ಹೋಗಿದ್ದೆ. ಪ್ರಧಾನಮಂತ್ರಿಯಾಗಿ ಯಾವಾಗಲಾದರೂ ಎಲ್ಲಿಯಾದರೂ ಹೋಗಲು ಅವಕಾಶ ಒದಗಿ ಬಂದಾಗ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪರಿಣಾಮವಾಗಿ ಏನಾಗಿದೆ ಎಂಬುದನ್ನು ಗಮನಿಸಿದರೆ ಜಗತ್ತಿನಲ್ಲಿ ಎಲ್ಲಿ ಹೋಗುತ್ತೇನೋ ಅಲ್ಲಿ ಯಾರಾದರೂ ಆರೇಳು ನಿಮಿಷ ಯೋಗದ ಬಗ್ಗೆ ನನ್ನೊಂದಿಗೆ ಪ್ರಶ್ನೋತ್ತರ ಮಾಡುತ್ತಲೇ ಇರುವುದನ್ನು ನಾನು ಕಂಡಿದ್ದೇನೆ. ಇಡೀ ಜಗತ್ತಿನ ಯಾವುದೇ ಹಿರಿಯ ನಾಯಕರಿರಬಹುದು ಅವರು ನನ್ನೊಂದಿಗೆ ಯೋಗದ ಬಗ್ಗೆ ಮಾತನಾಡದೆ ಉಳಿದೇ ಇಲ್ಲ ಎಂಬುದು ನನ್ನ ಅನುಭವಕ್ಕೆ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಅನುಭವವಾಗುತ್ತಿದೆ. ಯಾರೇ ಭೇಟಿಯಾದರೂ, ಎಲ್ಲೇ ಮಾತನಾಡಲು ಅವಕಾಶ ಸಿಕ್ಕರೂ ಅವರು ವನ್ಯಜೀವಿಗಳ ಬಗ್ಗೆ ಚರ್ಚೆ ಮಾಡುತ್ತಾರೆ, ಪರಿಸರದ ಬಗ್ಗೆ ಚರ್ಚೆ ಮಾಡುತ್ತಾರೆ. ಹುಲಿ ಸಿಂಹ ಜೀವ-ಸೃಷ್ಟಿ ಇದೆಲ್ಲ ಕಂಡು ಜನರು ಎಷೊಂದು ಆಸಕ್ತಿ ಹೊಂದಿದ್ದಾರೆಂದು ನನಗೆ ಆಶ್ಚರ್ಯವಾಗುತ್ತಿದೆ. Discovery ಚಾನೆಲ್ ಈ ಕಾರ್ಯಕ್ರಮವನ್ನು 165 ದೇಶಗಳಲ್ಲಿ ಅವರವರ ಭಾಷೆಗಳಲ್ಲಿಯೇ ಪ್ರಸಾರ ಮಾಡುವ ಯೋಜನೆ ಮಾಡಿದೆ. ಇಂದು ವಾತಾವರಣ ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ ಒಂದು ಜಾಗತಿಕ ಮಂಥನದ ಪ್ರಕ್ರಿಯೆ ನಡೆಯುತ್ತಿದೆ. ಇಂತಹದ್ದರಲ್ಲಿ ಈ ಕಾರ್ಯಕ್ರಮ ಬಾರತದ ಸಂದೇಶ, ಭಾರತದ ಪರಂಪರೆ, ಬಾರತೀಯ ಸಂಸ್ಕಾರ ಯಾತ್ರೆಯಲ್ಲಿ ಪ್ರಕೃತಿಯ ಬಗ್ಗೆ ಸಂವೇದನಶೀಲತೆ ಈ ಎಲ್ಲ ಮಾತುಗಳನ್ನು ವಿಶ್ವಕ್ಕೆ ಪರಿಚಯಿಸುವುದರಲ್ಲಿ Discovery Channel ನ ಈ Episode ಬಹಳ ಸಹಾಯಕವಾಗುತ್ತದೆಯೆಂಬುದು ನನ್ನ ಆಶೆಯಾಗಿದೆ ಹಾಗೂ ನನಗೆ ಪೂರ್ಣ ವಿಶ್ವಾಸವಿದೆ ಅಲ್ಲದೆ ನಮ್ಮ ಬಾರತದಲ್ಲಿ climate justice ಮತ್ತು clean environment ನ ದಿಶೆಯಲ್ಲಿ ಇಟ್ಟಂತಹ ಹೆಜ್ಜೆಗಳನ್ನು ಜನರು ತಿಳಿಯಬಯಸಿದ್ದಾರೆ. ಆದರೆ ಇನ್ನೊಂದು ಕುತೂಹಲಕಾರಿ ವಿಷಯವಿದೆ. ಕೆಲವರು ಸಂಕೋಚದಿಂದಾದರೂ ಸರಿ ನನಗೆ ಒಂದು ಮಾತು ಅವಶ್ಯವಾಗಿ ಕೇಳುತ್ತಾರೆ ಮೋದಿಜಿ ನೀವು ಹಿಂದಿಯಲ್ಲಿ ಮಾತನಾಡುತ್ತಿದ್ದಿರಿ ಮತ್ತು Bear Grylls ಅವರಿಗೆ ಹಿಂದಿ ಬರುವುದಿಲ್ಲ ಆದಾಗ್ಯೂ ಇಷ್ಟೊಂದು ವೇಗವಾಗಿ ತಮ್ಮ ಮಧ್ಯೆ ಸಂವಾದ ಹೇಗೆ ನಡೆಯುತ್ತಿತ್ತು? ಅದೇನು ಆ ಮೇಲೆ Edit ಮಾಡಲಾಗಿದೆಯೇ? ಅದು ಅಷ್ಟೊಂದು ಮತ್ತೆ ಮತ್ತೆ Shooting ಮಾಡಲಾಗಿದೆಯೆ? ಏನಾಯ್ತು? ಬಹಳ ಜಿಜ್ಞಾಸೆಯಿಂದ ಕೇಳುತ್ತಾರೆ. ನೋಡಿ, ಇದರಲ್ಲಿ ಯಾವುದೇ ರಹಸ್ಯವಿಲ್ಲ. ಹಲವು ಜನರಲ್ಲಿ ಈ ಪ್ರಶ್ನೆಯಿದ್ದರೆ, ನಾನು ಇದರ ರಹಸ್ಯವನ್ನು ಬಿಡಿಸಿಯೇ ಇಡುತ್ತೇನೆ. ಹಾಗೆ ಅದು ರಹಸ್ಯವೇ ಅಲ್ಲ ವಾಸ್ತವವೇನೆಂದರೆ Bear Grylls ಜೊತೆ ಮಾತನಾಡುವಾಗ ತಂತ್ರಜ್ಞಾನ ಉಪಯೋಗ ಮಾಡಲಾಗಿದೆ. ನಾನು ಏನೇ ಮಾತನಾಡಿದರೂ ಅದು ತಕ್ಷಣ ಇಂಗ್ಲೀಷಿನಲ್ಲಿ ಅನುವಾದವಾಗುತ್ತಿತ್ತು. simultaneous interpretation ಆಗುತ್ತಿತ್ತು ಮತ್ತು Bear Grylls ಅವರ ಕಿವಿಯಲ್ಲಿ ಒಂದು ಚಿಕ್ಕ Cordles instrument ಹಾಕಿದ್ದರು. ಅಲ್ಲಿ ನಾನು ಹಿಂದಿ ಯಲ್ಲಿ ಮಾತನಾಡುತ್ತಿದ್ದಂತೆ ಅವರಿಗೆ ಇಂಗ್ಲೀಷಿನಲ್ಲಿ ಕೇಳಿಸುತ್ತಿತ್ತು ಹಾಗಾಗಿ ಸಂವಾದ ಬಹಳ ಸರಳವಾಗಿ ಆಗುತ್ತಿತ್ತು ಮತ್ತು ತಂತ್ರಜ್ಞಾನದ ಅದ್ಭುತ ಇದೇ ಅಲ್ಲವೆ. ಈ Show ಆದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್ ವಿಷಯದ ಬಗ್ಗೆ ಚರ್ಚೆ ಮಾಡುತ್ತಿರುವುದು ಕಂಡು ಬಂದಿತು. ತಾವು ಕೂಡಾ Nature ಮತ್ತು Wild life ಪ್ರಕೃತಿ ಮತ್ತು ವನ್ಯ ಜೀವಿಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಅವಶ್ಯವಾಗಿ ಹೋಗಿರಿ. ನಾನು ಮೊದಲೂ ಹೇಳಿದ್ದೇನೆ, ಈಗಲೂ ತಮಗೆ ಹೇಳುತ್ತಿದ್ದೇನೆ. ತಮ್ಮ ಜೀವನದಲ್ಲಿ ಅವಶ್ಯವಾಗಿ ಈಶಾನ್ಯ ರಾಜ್ಯಗಳಿಗೆ ಹೋಗಿರಿ. ಅದೆಂತಹ ಪ್ರಕೃತಿ ಅಲ್ಲಿ. ತಾವು ನೋಡುತ್ತಲೇ ಇದ್ದು ಬಿಡುತ್ತೀರಿ. ತಮ್ಮ ಆಂತರ್ಯದ ವಿಸ್ತಾರವಾಗುವುದು. ಅಗಷ್ಟ 15 ರಂದು ನಾನು ಕೆಂಪು ಕೋಟೆಯ ಮೇಲಿಂದ ತಮ್ಮೆಲ್ಲರನ್ನು ಆಗ್ರಹಿಸಿದ್ದೆ, ಅದೇನೆಂದರೆ ಮುಂದಿನ 3 ವರ್ಷಗಳಲ್ಲಿ , ಕನಿಷ್ಠ 15 ಸ್ಥಳಗಳಿಗೆ ಭಾರತದಲ್ಲಿಯೇ ಶತಪ್ರತಿಶತ ಪ್ರವಾಸಕ್ಕಾಗಿಯೇ ಇರುವ 15 ಸ್ಥಳಗಳಿಗೆ ಭೇಟಿ ನೀಡಿ. ನೋಡಿರಿ, ಅಧ್ಯಯನ ಮಾಡಿರಿ, ಪರಿವಾರವನ್ನು ತೆಗೆದುಕೊಂಡು ಹೋಗಿರಿ, ಸ್ವಲ್ಪ ಸಮಯ ಅಲ್ಲಿ ಕಳೆಯಿರಿ. ವಿವಿಧತೆಯಿಂದ ತುಂಬಿದ ದೇಶ ತಮಗೂ ಕೂಡ ಒಬ್ಬ ಶಿಕ್ಷಕನ ರೀತಿಯಲ್ಲಿ ವೈವಿಧ್ಯತೆಗಳನ್ನು ತಮ್ಮ ಅಂತರಾಳದಲ್ಲಿ ಮೂಡಿಸುತ್ತದೆ. ತಮ್ಮ, ತಮ್ಮ ಜೀವನದ ವಿಸ್ತಾರವಾಗುತ್ತದೆ. ತಮ್ಮ ಚಿಂತನೆಯ ವಿಸ್ತಾರವಾಗುತ್ತದೆ. ಮತ್ತೆ ನನ್ನ ಮೇಲೆ ವಿಶ್ವಾಸವಿಡಿ ಹಿಂದುಸ್ತಾನದಲ್ಲಿ ಮಾತ್ರವೇ ಇಂತಹ ಸ್ಥಳಗಳಿವೆ. ಹೊಸ ಸ್ಪೂರ್ತಿ, ಹೊಸ ಉತ್ಸಾಹ, ಹೊಸ ಉನ್ನತಿ, ಹೊಸ ಪ್ರೇರಣೆ ತೆಗೆದುಕೊಂಡು ಬರುವಿರಿ ಅಲ್ಲದೆ ಕೆಲವು ಸ್ಥಳಗಳಿಗೆ ಮತ್ತೆ ಮತ್ತೆ ತಮಗೂ ಹೋಗಬೇಕೆಂದು ಅನಿಸಬಹುದು, ತಮ್ಮ ಪರಿವಾರಕ್ಕೂ ಅನಿಸಬಹುದು.
ನನ್ನ ಪ್ರೀತಿಯ ದೇಶವಾಸಿಗಳೆ, ಭಾರತದಲ್ಲಿ ಪರಿಸರದ ಬಗ್ಗೆ Care ಮತ್ತು concern ಅಂದರೆ ಮೇಲ್ವಿಚಾರಣೆಯ ಆಸ್ಥೆ ಸ್ವಾಭಾವಿಕವಾಗಿ ಕಾಣುತ್ತಿದೆ. ಕಳೆದ ತಿಂಗಳು ನನಗೆ Tiger census ಜಾರಿಗೆ ತರುವ ಸೌಭಾಗ್ಯ ಒದಗಿ ಬಂದಿತ್ತು. ಭಾರತದಲ್ಲಿ ಎಷ್ಟು ಹುಲಿಗಳಿವೆಯೆಂದು ನಿಮಗೆ ಗೊತ್ತಿದೆಯೇ? ಭಾರತದಲ್ಲಿ ಹುಲಿಗಳ ಸಂಖ್ಯೆ 2967 ಇದೆ. Two thousand nine hundred sixty seven.. ಕೆಲವು ವರ್ಷಗಳ ಹಿಂದೆ ಇದರ ಅರ್ಧದಷ್ಟಿತ್ತು. ಹುಲಿಗಳ ಬಗ್ಗೆ 2010 ರಲ್ಲಿ ರಶಿಯಾದ Saint Petersburg ನಲ್ಲಿ Tiger summit ಆಯೋಜಿಸಲಾಗಿತ್ತು. ಅಲ್ಲಿ ಜಗತ್ತಿನಾದ್ಯಂತ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಆತಂಕ ವ್ಯಕ್ತಪಡಿಸುತ್ತ ಒಂದು ಸಂಕಲ್ಪ ಮಾಡಲಾಗಿತ್ತು. ಆ ಸಂಕಲ್ಪವೇನೆಂದರೆ 2022 ರ ವರೆಗೆ ಇಡಿ ಜಗತ್ತಿನಲ್ಲಿ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡುವುದಾಗಿತ್ತು. ಆದರೆ ಇದು New India ಅಲ್ಲವೆ, ನಾವು ಗುರಿಯನ್ನು ಬೇಗನೆ ತಲುಪಿ ಬಿಡುತ್ತೇವೆ. ನಾವು 2019 ರಲ್ಲಿಯೇ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಿ ಬಿಟ್ಟಿದ್ದೇವೆ. ನಾವು ಕೇವಲ ಹುಲಿಗಳ ಸಂಖ್ಯೆಯನ್ನಷ್ಟೆ ಅಲ್ಲ, Protected areas ಮತ್ತು community reserves ನ ಸಂಖ್ಯೆಗಳನ್ನು ಹೆಚ್ಚಿಸಿದ್ದೇವೆ ಹುಲಿಗಳ data release ಮಾಡುವ ಸಮಯದಲ್ಲಿ ನನಗೆ ಗುಜರಾತ್ನ ಗೀರ್ ಪ್ರದೇಶದ ಸಿಂಹಗಳು ನೆನಪಿಗೆ ಬಂದವು. ಅಲ್ಲಿ ನಾನು ಮುಖ್ಯಮಂತ್ರಿ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾಗ ಗೀರ್ ಕಾಡಿನಲ್ಲಿ ಸಿಂಹಗಳ Habitat ಸಂಕುಚಿತವಾಗುತ್ತಿತ್ತು. ಅವುಗಳ ಸಂಖ್ಯೆ ಕಡಿಮೆಗೊಳ್ಳುತ್ತಲಿತ್ತು. ನಾವು ಗೀರ್ ಅರಣ್ಯದಲ್ಲಿ ಒಂದಾದ ಮೇಲೊಂದರಂತೆ ಹಲವು ಹೊಸ ಹೆಜ್ಜೆಗಳನ್ನಿಟ್ಟೆವು. 2007 ರಲ್ಲಿ ಅಲ್ಲಿ ಮಹಿಳಾ guards ಗಳನ್ನು ನಿಯುಕ್ತಿಗೊಳಿಸಲು ನಿರ್ಣಸಲಾಯಿತು. ಪ್ರವಾಸೋದ್ಯಮವನ್ನು ಹೆಚ್ಚಿಸಲು infrastructure ನಲ್ಲಿ ಸುಧಾರಣೆ ತರಲಾಯಿತು. ನಾವು ಪ್ರಕೃತಿ ಹಾಗೂ ವನ್ಯ ಜೀವಿಗಳ ಬಗ್ಗೆ ಮಾತನಾಡುವಾಗಲೆಲ್ಲ ಕೇವಲ conservation ಬಗ್ಗೆಯೇ ಮಾತನಾಡುತ್ತೇವೆ. ಆದರೆ ಈಗ ನಮಗೆ conservation ಕ್ಕಿಂತಲೂ ಮುಂದೆ ಹೋಗಿ compassion ನ ಕುರಿತು ವಿಚಾರ ಮಾಡಲೇ ಬೇಕಾಗಿದೆ. ನಮ್ಮ ಶಾಸ್ತ್ರಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಳ ಒಳ್ಳೆಯ ಮಾರ್ಗದರ್ಶನ ಸಿಕ್ಕಿದೆ. ಶತಮಾನಗಳ ಮೊದಲೇ ನಮ್ಮ ಶಾಸ್ತ್ರಗಳಲ್ಲಿ ನಾವು ಹೇಳಿದ್ದೇವೆ-
ನಿರ್ವನೊ ಬಧ್ಯತೆ ವ್ಯಾಘ್ರೊ, ನಿವ್ರ್ಯಾಘ್ರಂ ಛಿದ್ಯತೆ ವನಮ್|
ತಸ್ಮಾದ್ ವ್ಯಾಘ್ರೊ ವನಂ ರಕ್ಷೆತ್, ವನಂ ವ್ಯಾಘ್ರಂ ನ ಪಾಲಯೆತ್||
ಅರ್ಥಾತ್, ಒಂದು ವೇಳೆ ಕಾಡು ಇರದೆ ಹೋದರೆ ಹುಲಿಗಳು ಮನುಷ್ಯರ ವಾಸಸ್ಥಾನಗಳಿಗೆ ಬರುವುದು ಅನಿವಾರ್ಯವಾಗುತ್ತದೆ ಅಲ್ಲದೆ ಕೊಲ್ಲಲ್ಪಡುತ್ತವೆ ಮತ್ತು ಅರಣ್ಯದಲ್ಲಿ ಹುಲಿಗಳು ಇರದೆ ಹೋದರೆ ಮನುಷ್ಯ ಅರಣ್ಯವನ್ನು ಕಡಿದು ಅದನ್ನು ನಾಶಗೊಳಿಸುತ್ತಾನೆ ವಾಸ್ತವದಲ್ಲಿ ಹುಲಿಯು ವನದ ರಕ್ಷಣೆಯನ್ನು ಮಾಡುತ್ತದೆ, ವನವು ಹುಲಿಯ ರಕ್ಷಣೆಯನ್ನಲ್ಲ- ಎಷ್ಟೊಂದು ಉತ್ತಮವಾದ ರೀತಿಯಲ್ಲಿ ನಮ್ಮ ಪೂರ್ವಜರು ಈ ವಿಷಯವನ್ನು ತಿಳಿಸಿಕೊಟ್ಟಿದ್ದಾರೆ. ಅದಕ್ಕಾಗಿಯೆ ನಮಗೆ ನಮ್ಮ ವನ, ವನಸ್ಪತಿಗಳು ಮತ್ತು ವನ್ಯ ಜೀವಿಗಳನ್ನು ಸಂರಕ್ಷಣೆ ಮಾಡುವ ಅವಶ್ಯಕತೆಯಷ್ಟೆಯಲ್ಲದೆ ಅಂತಹ ವಾತಾವರಣವನ್ನೂ ನಿರ್ಮಿಸಬೇಕಾಗಿದೆ, ಅವುಗಳು ಇದರಿಂದ ಸರಿಯಾದ ರೀತಿಯಲ್ಲಿ ಬೆಳೆಯುವಂತಾಗಬೇಕು.
ನನ್ನ ಪ್ರೀತಿಯ ದೇಶವಾಸಿಗಳೆ, 11ನೆ ಸೆಪ್ಟೆಂಬರ್ 1893 ಸ್ವಾಮಿ ವಿವೆಕಾನಂದ ಅವರ ಐತಿಹಾಸಿಕ ಭಾಷಣವನ್ನು ಯಾರು ತಾನೆ ಮರತಾರು. ಇಡೀ ವಿಶ್ವದ ಮನುಕುಲವನ್ನೆ ಅಲ್ಲಾಡಿಸುವ ಭಾರತದ ಈ ಯುವ ಸನ್ಯಾಸಿ ಜಗತ್ತಿನಲ್ಲಿ ಭಾರತದ ಒಂದು ತೇಜಸ್ವಿ ಛಾಪು ಮೂಡಿಸಿ ಬಂದರು. ಗುಲಾಮ ಭಾರತದತ್ತ ಯಾವ ಜಗತ್ತು ಬಹಳ ವಿಕೃತ ಭಾವದಿಂದ ನೋಡುತ್ತಿತ್ತೋ ಅಂತಹ ಜಗತ್ತಿಗೆ 11ನೇ ಸೆಪ್ಟೆಂಬರ್ 1893 ರಂದು ಸ್ವಾಮಿ ವಿವೆಕಾನಂದ ರಂತಹ ಮಹಾ ಪುರುಷರ ಮಾತುಗಳು ಇಡೀ ಜಗತ್ತು ಭಾರತದತ್ತ ನೋಡುವ ದೃಷ್ಟಿಯನ್ನೆ ಬದಲಾಯಿಸಿದವು. ಬನ್ನಿ, ಸ್ವಾಮಿ ವಿವೆಕಾನಂದ ಅವರು ಭಾರತದ ರೂಪವನ್ನು ಯಾವ ರೀತಿ ಕಂಡಿದ್ದರು, ಸ್ವಾಮಿ ವಿವೆಕಾನಂದರು ಭಾರತದ ಸಾಮರ್ಥ್ಯವನ್ನು ಹೇಗೆ ಕಂಡಿದ್ದರು ನಾವು ಅದರಂತೆ ಜೀವಿಸಲು ಪ್ರಯತ್ನಿಸೋಣ. ನಮ್ಮೊಳಗಿದೆ, ಎಲ್ಲವೂ ಇದೆ. ಆತ್ಮವಿಶ್ವಾಸದೊಂದಿಗೆ ಮುನ್ನಡೆಯೋಣ.
ನನ್ನ ಪ್ರೀತಿಯ ದೇಶವಾಸಿಗಳೆ, ತಮ್ಮೆಲ್ಲರಿಗೂ ನೆನಪಿರಬಹುದು 29 ಅಗಷ್ಟ ರಂದು ‘ರಾಷ್ಟ್ರೀಯ ಖೇಲ್ ದಿವಸ’ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನಾವು ಇಡೀ ದೇಶದಲ್ಲಿ ‘FIT INDIA MOVEMENT’ launch ಮಾಡಲಿದ್ದೇವೆ, ನಾವು ಸ್ವತ: ಸಧೃಡವಾಗಿರಬೇಕು fit ಇರಬೇಕು. ರಾಷ್ಟ್ರವನ್ನು ಸಧೃಡಗೊಳಿಸಬೇಕು ಮಕ್ಕಳು, ಹಿರಿಯರು, ಯುವಕರು, ಮಹಿಳೆಯರು ಎಲ್ಲರಿಗು ಇದೊಂದು ಒಳ್ಳೆ interesting ಅಭಿಯಾನವಾಗುತ್ತದೆ ಮತ್ತು ಇದು ನಮಗಾಗಿ ನಮ್ಮದೇ ಆಗಿರುತ್ತದೆ. ಆದರೆ ಅದರ ಸೂಕ್ಷ್ಮತೆಗಳನ್ನು ಇಂದು ನಾನು ಹೇಳುವುದಿಲ್ಲ. ಅಗಷ್ಟ 29ರ ವರೆಗೂ ಕಾಯಿರಿ. ನಾನು ಸ್ವತಃ ಅಂದು ಈ ವಿಷಯದ ಬಗ್ಗೆ ಹೇಳುವವನಿದ್ದೇನೆ ಮತ್ತು ನಿಮ್ಮನ್ನೂ ಇದರೊಂದಿಗೆ ಬೆರೆಸುತ್ತೇನೆ. ಯಾಕೆಂದರೆ ನಾನು ತಮ್ಮನ್ನು ಆರೋಗ್ಯವಂತರನ್ನಾಗಿ ನೋಡ ಬಯಸುತ್ತೇನೆ. ತಮಗೆ fitness ಗಾಗಿ ಜಾಗರೂಕರನ್ನಾಗಿ ಮಾಡ ಬಯಸುತ್ತೆನೆ ಮತ್ತು fit India ಕ್ಕಾಗಿ ದೇಶಕ್ಕಾಗಿ ನಾವೆಲ್ಲ ಸೇರಿ ಕೆಲವು ಗುರಿಗಳನ್ನು ನಿರ್ಧರಿಸೋಣ.
ನನ್ನ ಪ್ರೀತಿಯ ಧೆಶವಾಸಿಗಳೇ, ಅಗಷ್ಟ 29 ರಂದು fit India ದಲ್ಲಿ ನಿಮಗಾಗಿ ಕಾಯುತ್ತಿರುವೆನು. ಸೆಪ್ಟಂಬರ್ ತಿಂಗಳು ‘ಪೋಷಣ ಅಭಿಯಾನದಲ್ಲಿ’. ಮತ್ತು ವಿಶೇಷವಾಗಿ ಸೆಪ್ಟಂಬರ್ 11 ರಿಂದ ಅಕ್ಟೋಬರ್ 02 ರವರೆಗೆ ‘ಸ್ವಚ್ಛತಾ ಅಭಿಯಾನ’ ದಲ್ಲಿ ಹಾಗೂ ಅಕ್ಟೋಬರ್ 2 ರಂದು Totally dedicated plastic ಗಾಗಿ. plastic ನಿಂದ ಮುಕ್ತಿ ಹೊಂದಲು ನಾವೆಲ್ಲರು ಮನೆ ಹಾಗೂ ಮನೆಯ ಹೊರಗೆ ಎಲ್ಲ ಸ್ಥಳಗಳಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳೋಣ ಮತ್ತು ನನಗೆ ಗೊತ್ತು ಈ ಎಲ್ಲ ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತವೆ. ಬನ್ನಿ ಒಂದು ಹೊಸ ಉತ್ಸಾಹ, ಹೊಸ ಸಂಕಲ್ಪ, ಹೊಸ ಶಕ್ತಿಯೊಂದಿಗೆ ಸಾಗೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ‘ಮನ್ ಕಿ ಬಾತ್’ ನಲ್ಲಿ ಇಷ್ಟು ಸಾಕು. ಮತ್ತೆ ಸಿಗೋಣ. ನಾನು ನಿಮ್ಮ ಮಾತುಗಳು, ನಿಮ್ಮ ಸಲಹೆಗಳಿಗಾಗಿ ಕಾಯುತ್ತಿರುತ್ತೇನೆ. ಬನ್ನಿ, ನಾವೆಲ್ಲ ಸೇರಿ ಸ್ವತಂತ್ರ ಸೇನಾನಿಗಳ ಕನಸಿನ ಭಾರತವನ್ನು ನಿರ್ಮಿಸಲು, ಗಾಂಧಿಜಿಯವರ ಕನಸುಗಳನ್ನು ಸಾಕಾರಗೊಳಿಸಲು ಮುನ್ನಡೆಯೋಣ. ‘ಸ್ವಾಂತ: ಸುಖಾಯ:’ ಆತ್ಮ ತೃಪ್ತಿಯನ್ನು ಸೇವಾ ಭಾವದಿಂದ ಪ್ರಕಟಗೊಳಿಸುತ್ತ ಸಾಗೋಣ.
ಧನ್ಯವಾದಗಳು.
ನಮಸ್ಕಾರ.
*****
(Release ID: 1582953)
Visitor Counter : 408