ಗೃಹ ವ್ಯವಹಾರಗಳ ಸಚಿವಾಲಯ
ಗೃಹ ಸಚಿವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕರ್ನಾಟಕ , ಒಡಿಶಾ ಮತ್ತು ಹಿಮಾಚಲ ಪ್ರದೇಶಗಳಿಗೆ ಹೆಚ್ಚುವರಿ ಕೇಂದ್ರೀಯ ನೆರವು ಮಂಜೂರು
ಪ್ರಕಟಣಾ ದಿನಾಂಕ:
20 AUG 2019 1:35PM by PIB Bengaluru
ಗೃಹ ಸಚಿವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕರ್ನಾಟಕ , ಒಡಿಶಾ ಮತ್ತು ಹಿಮಾಚಲ ಪ್ರದೇಶಗಳಿಗೆ ಹೆಚ್ಚುವರಿ ಕೇಂದ್ರೀಯ ನೆರವು ಮಂಜೂರು
ನವದೆಹಲಿ, ಆಗಸ್ಟ್ 20, 2019
ಕೇಂದ್ರ ಗೃಹ ವ್ಯವಹಾರಗಳ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತಾಧಿಕಾರದ ಸಮಿತಿ (ಎಚ್.ಎಲ್.ಸಿ.) ಯು 2019 ರ ಆಗಸ್ಟ್ 19 ರಂದು ಹೊಸದಿಲ್ಲಿಯಲ್ಲಿ ಸಭೆ ಸೇರಿ ಬರಗಾಲ, ನೈಸರ್ಗಿಕ ವಿಪತ್ತು, ನೆರೆ, ಫಾನಿ ಚಂಡಮಾರುತ, ಭೂಕುಸಿತಗಳಿಂದ ಪೀಡಿತವಾದ ಮೂರು ರಾಜ್ಯಗಳಿಗೆ ಹೆಚ್ಚುವರಿ ಕೇಂದ್ರೀಯ ನೆರವನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಿತು. ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (ಎನ್.ಡಿ.ಆರ್. ಎಫ್. ) ನಿಂದ ಒಟ್ಟು 4432.10 ಕೋಟಿ ರೂ.ಗಳ ಹೆಚ್ಚುವರಿ ಕೇಂದ್ರೀಯ ನೆರವು ನೀಡುವುದಕ್ಕೆ ಅನುಮೋದನೆ ನೀಡಿತು. ಬರದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ 1029.39 ಕೋ.ರೂ, ಚಂಡಮಾರುತ ಫಾನಿಗಾಗಿ ಒಡಿಶಾಕ್ಕೆ 3338.32 ಕೋ.ರೂ. ಹಾಗು ಭಾರೀ ಮಳೆ ಮತ್ತು ಹಿಮಪಾತದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶಕ್ಕೆ 64.49 ಕೋ.ರೂ.ಗಳ ನೆರವನ್ನು ಮಂಜೂರು ಮಾಡಲಾಗಿದೆ.
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಸಭೆಯಲ್ಲಿದ್ದರು. ಗೃಹ ವ್ಯವಹಾರ, ಹಣಕಾಸು, ಕೃಷಿ ಸಚಿವಾಲಯಗಳ ಮತ್ತು ನೀತಿ ಆಯೋಗದ ಅಧಿಕಾರಿಗಳು ಪಾಲ್ಗೊಂಡಿದ್ದರು.
ರಾಜ್ಯ ವಿಪತ್ತು ಪರಿಹಾರ ನಿಧಿಯಡಿ (ಎಸ್.ಡಿ.ಆರ್.ಎಫ್.) ಕೇಂದ್ರವು ಈಗಾಗಲೇ ಹೆಚ್ಚುವರಿ ನೆರವನ್ನು ಬಿಡುಗಡೆ ಮಾಡಿದೆ. 2018-19 ರಲ್ಲಿ ಕೇಂದ್ರವು ಎಲ್ಲಾ ರಾಜ್ಯಗಳಿಗೆ 9,658 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. 2019-20 ರಲ್ಲಿ ಇದುವರೆಗೆ ಕೇಂದ್ರವು 6,104 ಕೋ.ರೂ.ಗಳನ್ನು 24 ರಾಜ್ಯಗಳಿಗೆ ಎಸ್.ಡಿ.ಆರ್.ಎಫ್. ನಿಂದ ಬಿಡುಗಡೆ ಮಾಡಿದೆ.
ಒಡಿಶಾದಲ್ಲಿ ಫಾನಿ ಚಂಡಮಾರುತ ಹಾನಿಗಾಗಿ 340.87 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 06-05-2019 ರಂದು ಒಡಿಶಾಗೆ ಭೇಟಿ ನೀಡಿದ್ದರು, ಮತ್ತು ಅವರು ಘೋಷಿಸಿದಂತೆ ತಕ್ಷಣದ ಸಹಾಯವಾಗಿ 1000 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಮೃತಪಟ್ಟವರ ಕುಟುಂಬಕ್ಕೆ ತಾತ್ಕಾಲಿಕ ಪರಿಹಾರವಾಗಿ 2 ಲಕ್ಷ ರೂ.ಗಳನ್ನು ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50,000 ರೂ.ಗಳ ನೆರವನ್ನು ಪ್ರಧಾನ ಮಂತ್ರಿ ಅವರ ಪರಿಹಾರ ನಿಧಿಯಿಂದ ಒದಗಿಸಲಾಗಿತ್ತು.
ಉನ್ನತ ಮಟ್ಟದ ಸಮಿತಿಯು ಅಂತರ –ಸಚಿವಾಲಯ ಕೇಂದ್ರೀಯ ತಂಡಗಳನ್ನು (ಐ.ಎಂ.ಸಿ.ಟಿ.) ರಾಜ್ಯಗಳಿಗೆ ಅವುಗಳಿಂದ ಬಂದ ಮನವಿಯ ಮೇರೆಗೆ ಗಂಭೀರ ವಿಪತ್ತಿನ ಸಮಯದಲ್ಲಿ ನಿಯೋಜಿಸುವ ಪದ್ದತಿಯ ಬಗ್ಗೆಯೂ ಪರಾಮರ್ಶೆ ನಡೆಸಿತು. ಕೇಂದ್ರ ಗೃಹ ಸಚಿವರು ಕೈಗೊಂಡ ಪ್ರಮುಖ ನಿರ್ಧಾರದ ಅನ್ವಯ ಇನ್ನು ಮುಂದೆ ಯಾವುದೇ ಗಂಭೀರ ಪ್ರಾಕೃತಿಕ ವಿಪತ್ತು ಸಂಭವಿಸಿದಲ್ಲಿ ಈ ತಂಡಗಳನ್ನು ತಕ್ಷಣವೇ ರಚಿಸಬಹುದಾಗಿದೆ. ಇವು ಹಾನಿ ಪೀಡಿತ ಪ್ರದೇಶಗಳಿಗೆ ತೆರಳಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಲಿವೆ. ಈ ತಂಡಗಳು ವಿವರವಾದ ಹಾನಿಯ ಮೌಲ್ಯಮಾಪನದ ವರದಿಯನ್ನು ಸಲ್ಲಿಸಿದ ಬಳಿಕ ಮತ್ತೊಮ್ಮೆ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತವೆ. ಮತ್ತು ರಾಜ್ಯ ಸರಕಾರಗಳು ಕೈಗೊಂಡ ಪರಿಹಾರ ಕಾರ್ಯಗಳನ್ನು ಪರಿಶೀಲಿಸುತ್ತವೆ. ಬಳಿಕ ಹೆಚ್ಚುವರಿ ನೆರವಿನ ಶಿಫಾರಸುಗಳನ್ನು ಮಾಡುತ್ತವೆ.
ಈ ನಿರ್ಧಾರದ ಅನ್ವಯ ಗೃಹ ವ್ಯವಹಾರಗಳ ಸಚಿವಾಲಯವು ತಕ್ಷಣವೇ ಐ.ಎಂ.ಸಿ.ಟಿ. ಗಳನ್ನು ರಚಿಸಿ ಅವುಗಳನ್ನು ನೆರೆ ಹಾನಿ ಪೀಡಿತ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಹಿಮಾಚಲ ಪ್ರದೇಶ , ಉತ್ತರಾಖಂಡ , ಬಿಹಾರ, ತ್ರಿಪುರಾ, ಮೇಘಾಲಯ, ಅಸ್ಸಾಂ ರಾಜ್ಯಗಳಿಗೆ ಕಳುಹಿಸಿಕೊಡಲಿದೆ. ಎಚ್.ಎಲ್.ಸಿ.ಯು ದೇಶದ ವಿವಿಧೆಡೆ ಈಗಿನ ನೆರೆ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿತು. ದೇಶದ ನೆರೆ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವರು ಸತತ ನಿಗಾ ಇರಿಸಿದ್ದಾರೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಎನ್.ಡಿ.ಆರ್.ಎಫ್., ಸೇನೆ, ವಾಯು ದಳ, ನೌಕಾ ದಳ ಮತ್ತು ಕರಾವಳಿ ರಕ್ಷಣಾ ಪಡೆಗಳು 1,53,000 ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿವೆ ಯಾ ರಕ್ಷಿಸಿವೆ.
ನೆರೆ ಹಾನಿ ಪೀಡಿತ ರಾಜ್ಯಗಳಿಗೆ ಅಗತ್ಯ ಇರುವ ಎಲ್ಲಾ ನೆರವನ್ನು ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಗೃಹ ಸಚಿವರಾದ ಶ್ರೀ ಅಮಿತ್ ಶಾ ನಿರ್ದೇಶನವನ್ನು ನೀಡಿದ್ದಾರೆ.
******
(ಪ್ರಕಟಣೆ ಐ.ಡಿ.: 1582425)
ವಿಸಿಟರ್ ಕೌಂಟರ್ : 133