ಹಣಕಾಸು ಸಚಿವಾಲಯ

ಅಂತರ್ಗತ ಬೆಳವಣಿಗೆಗೆ ಭಾರತದಲ್ಲಿ ಕನಿಷ್ಠ ವೇತನ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಬೇಕೆಂದು ಆರ್ಥಿಕ ಸಮೀಕ್ಷೆಯು ಹೇಳಿದೆ.

Posted On: 04 JUL 2019 12:05PM by PIB Bengaluru

ಅಂತರ್ಗತ ಬೆಳವಣಿಗೆಗೆ ಭಾರತದಲ್ಲಿ ಕನಿಷ್ಠ ವೇತನ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಬೇಕೆಂದು ಆರ್ಥಿಕ ಸಮೀಕ್ಷೆಯು ಹೇಳಿದೆ.

 

ಕನಿಷ್ಠ ವೇತನ ವ್ಯವಸ್ಥೆಯ ಪರಿಣಾಮಕಾರಿ ವಿನ್ಯಾಸಕ್ಕಾಗಿ ಶಿಫಾರಸು.

ಕನಿಷ್ಠ ವೇತನದ ಉತ್ತಮ ವಿನ್ಯಾಸ ಮತ್ತು ಪರಿಣಾಮಕಾರಿ ಅನುಷ್ಠಾನವು ವೇತನ ಅಸಮಾನತೆಯನ್ನು ಕಡಿಮೆ ಮಾಡುತ್ತದೆ.

ಕನಿಷ್ಠ ವೇತನವನ್ನು ನಿಯಮಿತವಾಗಿ ಮತ್ತು ಹೆಚ್ಚಾಗಿ ಹೊಂದಿಸಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು.

ರಾಜ್ಯ ಸರ್ಕಾರಗಳಿಗೆ ಪ್ರವೇಶದೊಂದಿಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಮಟ್ಟದ ಡ್ಯಾಶ್‌ಬೋರ್ಡ್ ಸ್ಥಾಪಿಸಬೇಕು.

ಕನಿಷ್ಠ ವೇತನವನ್ನು ಪಾವತಿಸದಿರುವ ಬಗ್ಗೆ ಕುಂದುಕೊರತೆಗಳನ್ನು ನೋಂದಾಯಿಸಲು ಟೋಲ್-ಫ್ರೀ ಸಂಖ್ಯೆಯನ್ನು ಸ್ಥಾಪಿಸುವುದು.

 

ಕನಿಷ್ಠ ವೇತನವನ್ನು ಉತ್ತಮವಾಗಿ ವಿನ್ಯಾಸಗೊಳಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಿಂದ ವಿಶೇಷವಾಗಿ ಕೆಳಮಟ್ಟದಲ್ಲಿ ವೇತನ ಅಸಮಾನತೆಯನ್ನು ಕಡಿಮೆ ಮಾಡಬಹುದು. ವೇತನ ವಿತರಣೆಯ ಕೆಳಭಾಗದ ಬಹುಪಾಲು ಮಹಿಳೆಯರನ್ನು ಹೊಂದಿರುವುದರಿಂದ ಇದು ಹೆಚ್ಚು ಮಹತ್ವದ್ದಾಗಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್  ಅವರು ಇಂದು ಸಂಸತ್ತಿನಲ್ಲಿ.ಮಂಡಿಸಿದ 2018-19 ರ ಆರ್ಥಿಕ ಸಮೀಕ್ಷೆ ಯಲ್ಲಿ ಇದನ್ನು ಹೇಳಲಾಗಿದೆ..

ಆರ್ಥಿಕ ಸಮೀಕ್ಷೆ 2018-19 ರ ಪ್ರಕಾರ ಕನಿಷ್ಠ ವೇತನ ವ್ಯವಸ್ಥೆಯ ಪರಿಣಾಮಕಾರಿ ವಿನ್ಯಾಸಕ್ಕಾಗಿ ಮಾಡಿರುವ ಶಿಫಾರಸುಗಳು ಈ ಕೆಳಗಿನಂತಿವೆ:

·        ಸರಳೀಕರಣ ಮತ್ತು ತರ್ಕಬದ್ಧಗೊಳಿಸುವಿಕೆ: ವೇತನ ಮಸೂದೆ ಸಂಹಿತೆಯಡಿ ಪ್ರಸ್ತಾಪಿಸಿದಂತೆ ಕನಿಷ್ಠ ವೇತನದ ತರ್ಕಬದ್ಧಗೊಳಿಸುವಿಕೆಯನ್ನು ಬೆಂಬಲಿಸುವ ಅಗತ್ಯವಿದೆ. ಈ ಸಂಹಿತೆಯು ಕನಿಷ್ಠ ವೇತನ ಕಾಯ್ದೆ- 1948, ವೇತನ ಪಾವತಿ ಕಾಯ್ದೆ- 1936, ಬೋನಸ್ ಪಾವತಿ ಕಾಯ್ದೆ- 1965 ಮತ್ತು ಸಮಾನ ಸಂಭಾವನೆ ಕಾಯ್ದೆ- 1976 ಅನ್ನು ಒಂದೇ ಶಾಸನದಂತೆ ಸಂಯೋಜಿಸುತ್ತದೆ. ಹೊಸ ಕಾಯ್ದೆಯಲ್ಲಿ ‘ವೇತನದ ವ್ಯಾಖ್ಯಾನವು ವಿವಿಧ ಕಾರ್ಮಿಕ ಕಾಯಿದೆಗಳಲ್ಲಿನ ವೇತನದ 12 ವಿಭಿನ್ನ ವ್ಯಾಖ್ಯಾನಗಳ ಪ್ರಸ್ತುತ ಪರಿಸ್ಥಿತಿಯನ್ನು ಒಳಗೊಳ್ಳಬೇಕು.

 ·        ರಾಷ್ಟ್ರೀಯ ಮಟ್ಟದ ಕನಿಷ್ಠ ವೇತನವನ್ನು ನಿಗದಿಪಡಿಸುವುದು: ಐದು ಭೌಗೋಳಿಕ ಪ್ರದೇಶಗಳಲ್ಲಿ ವ್ಯಾಪಕವಾಗಿ ಬದಲಾಗಬಹುದಾದ “ರಾಷ್ಟ್ರೀಯ ಕನಿಷ್ಠ ವೇತನ ವನ್ನು ಕೇಂದ್ರ ಸರ್ಕಾರ ಪ್ರಕಟಿಸಬೇಕು. ಅದರ ನಂತರ, ರಾಜ್ಯಗಳು ತಮ್ಮ ಕನಿಷ್ಠ ವೇತನವನ್ನು “floor wage”ಗಿಂತ ಕಡಿಮೆಯಿಲ್ಲದ ಮಟ್ಟದಲ್ಲಿ ನಿಗದಿಪಡಿಸಬಹುದು. ಇದು ದೇಶಾದ್ಯಂತ ಕನಿಷ್ಠ ವೇತನದಲ್ಲಿ ಸ್ವಲ್ಪ ಏಕರೂಪತೆಯನ್ನು ತರುತ್ತದೆ

 ·        ಕನಿಷ್ಠ ವೇತನವನ್ನು ನಿಗದಿಪಡಿಸುವ ಮಾನದಂಡಗಳು: ವೇತನ ಮಸೂದೆ ಸಂಹಿತೆಯು ಎರಡು ಅಂಶಗಳ ಆಧಾರದ ಮೇಲೆ ಕನಿಷ್ಠ ವೇತನವನ್ನು ನಿಗದಿಪಡಿಸುವ ಬಗ್ಗೆ ಪರಿಗಣಿಸಬೇಕು; (i) ಕೌಶಲ್ಯ ವರ್ಗ ಅಂದರೆ ಕೌಶಲ್ಯರಹಿತ, ಅರೆ-ಕುಶಲ, ಕುಶಲ ಮತ್ತು ಹೆಚ್ಚು ಕುಶಲ; ಮತ್ತು (ii) ಭೌಗೋಳಿಕ ಪ್ರದೇಶ, ಅಥವಾ ಇವೆರಡೂ. ಈ ಪ್ರಮುಖ ಬದಲಾವಣೆಯು ದೇಶದ ಕನಿಷ್ಠ ವೇತನದ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

 ·        ನಿಯಮಿತ ಹೊಂದಾಣಿಕೆ ಮತ್ತು ತಂತ್ರಜ್ಞಾನದ ಪಾತ್ರ: ಕನಿಷ್ಠ ವೇತನವನ್ನು ನಿಯಮಿತವಾಗಿ ಮತ್ತು ಹೆಚ್ಚಾಗಿ ಹೊಂದಿಸಲು ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಬೇಕು. ರಾಜ್ಯ ಸರ್ಕಾರಗಳಿಗೆ ಪ್ರವೇಶದೊಂದಿಗೆ ಕೇಂದ್ರದಲ್ಲಿ ರಾಷ್ಟ್ರೀಯ ಮಟ್ಟದ ಡ್ಯಾಶ್‌ಬೋರ್ಡ್ ರಚಿಸಬಹುದು, ಆ ಮೂಲಕ ರಾಜ್ಯಗಳು ನಿಯಮಿತವಾಗಿ ಕನಿಷ್ಠ ವೇತನಕ್ಕೆ ಸಂಬಂಧಿಸಿದ ಅಧಿಸೂಚನೆಗಳನ್ನು ನವೀಕರಿಸಬಹುದು. ಈ ಪೋರ್ಟಲ್ ಅನ್ನು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ಸಿ) ಇತ್ಯಾದಿಗಳಲ್ಲಿ ಲಭ್ಯವಾಗುವಂತೆ ಮಾಡಬೇಕು,

 ·         ಕುಂದುಕೊರತೆ ನಿವಾರಣೆ: ಶಾಸನಬದ್ಧ ಕನಿಷ್ಠ ವೇತನವನ್ನು ಪಾವತಿಸದಿರುವ ಬಗ್ಗೆ ದೂರುಗಳನ್ನು ನೋಂದಾಯಿಸಲು ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಟೋಲ್-ಫ್ರೀ ಸಂಖ್ಯೆಯನ್ನು ಸ್ಥಾಪಿಸಬೇಕು.

 

ಪ್ರಗತಿಯ ಬಹು ಆಯಾಮಗಳ ಮೇಲೆ ಅನುಕೂಲಕರ ಪರಿಣಾಮವನ್ನು ಬೀರುವ ಪರಿಣಾಮಕಾರಿ ಕನಿಷ್ಠ ವೇತನ ವ್ಯವಸ್ಥೆಯನ್ನು ಸ್ಥಾಪಿಸುವುದು ತುರ್ತು ಅವಶ್ಯಕತೆಯಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

*******



(Release ID: 1577157) Visitor Counter : 102