ಸಂಸದೀಯ ವ್ಯವಹಾರಗಳ ಸಚಿವಾಲಯ
ಸಾರ್ವತ್ರಿಕ ಚುನಾವಣೆ, 2019ರ ತರುವಾಯ ಸಂಸತ್ತಿನ ಅಧಿವೇಶನ ಕರೆಯಲು ಸಂಪುಟದ ಅನುಮೋದನೆ
Posted On:
31 MAY 2019 8:39PM by PIB Bengaluru
ಸಾರ್ವತ್ರಿಕ ಚುನಾವಣೆ, 2019ರ ತರುವಾಯ ಸಂಸತ್ತಿನ ಅಧಿವೇಶನ ಕರೆಯಲು ಸಂಪುಟದ ಅನುಮೋದನೆ
ಜೂನ್ 17ರಿಂದ ಜುಲೈ 26ರವರೆಗೆ ಲೋಕಸಭಾ ಅಧಿವೇಶನ, ಜೂನ್ 20ರಿಂದ ಜುಲೈ 26ರವರೆಗೆ ರಾಜ್ಯಸಭಾ ಅಧಿವೇಶನ, ಜುಲೈ 4ರಂದು ಆರ್ಥಿಕ ಸಮೀಕ್ಷೆಯ ಮಂಡನೆ, ಜುಲೈ 5ರಂದು ಕೇಂದ್ರ ಬಜೆಟ್ ಮಂಡನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟದ ಪ್ರಥಮ ಸಭೆಯಲ್ಲಿ 2019ರ ಜೂನ್ 17ರ ಸೋಮವಾರದಿಂದ 17ನೇ ಲೋಕಸಭೆಯನ್ನು ಕರೆಯಲು ಮತ್ತು ಅವಶ್ಯವಾದ ಸರ್ಕಾರಿ ಕಲಾಪಗಳ ವಿಷಯಗಳಿಗೆ ತನ್ನ ಅನುಮೋದನೆ ನೀಡಿದ್ದು, ಅಧಿವೇಶನ 2019ರ ಜುಲೈ 26ರ ಶುಕ್ರವಾರದವರೆಗೆ ನಡೆಯಲಿದೆ..
ರಾಜ್ಯಸಭೆಯ ಅಧಿವೇಶನವನ್ನು 2019ರ ಜೂನ್ 20ರಿಂದ ಕರೆಯಲಾಗಿದೆ ಮತ್ತು ಸರ್ಕಾರಿ ಕಾರ್ಯ ಕಲಾಪದ ಜರೂರು ವಿಷಯಗಳನ್ನು ಅನುಮೋದಿಸಲಾಗಿದೆ. ಅಧಿವೇಶನ 2019ರ ಜುಲೈ 26ರಂದು ಕೊನೆಗೊಳ್ಳಲಿದೆ.
2019ರ ಜೂನ್ 19ರಂದು ಬುಧವಾರ ಲೋಕಸಭಾಧ್ಯಕ್ಷರ ಚುನಾವಣೆ ನಡೆಯಲಿದೆ.
ಸಂವಿಧಾನದ ವಿಧಿ 87 (1)ರಂತೆ 2019ರ ಜೂನ್ 20ರಂದು ಬೆಳಗ್ಗೆ 11 ಗಂಟೆಗೆ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಸಮಾವೇಶಗೊಳ್ಳುವ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವಂತೆ ರಾಷ್ಟ್ರಪತಿಯವರಿಗೆ ಮನವಿ ಮಾಡಲಾಗುವುದು.
2019-20ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಶುಕ್ರವಾರ ಅಂದರೆ 2019ರ ಜುಲೈ 5ರಂದು ಬೆಳಗ್ಗೆ 11 ಗಂಟೆಗೆ ಮಂಡಿಸಲಾಗುವುದು ಮತ್ತು ಬಜೆಟ್ ಅನ್ನು ಸದನದಲ್ಲಿ ಮಂಡಿಸಿದ ತರುವಾಯ ಆಯಾ ಸದನಗಳನ್ನು ದಿನದ ಮಟ್ಟಿಗೆ ಮುಂದೂಡಲಾಗುವುದು.
(Release ID: 1573215)
Visitor Counter : 118