ಸಂಪುಟ

ಭಾರತ ಮತ್ತು ನಮೀಬಿಯಾ ಹಾಗೂ ಪನಾಮಾದ ಚುನಾವಣಾ ನಿರ್ವಹಣಾ ಸಂಸ್ಥೆಗಳೊಂದಿಗೆ ಪರಸ್ಪರ ತಿಳುವಳಿಕೆ ಪತ್ರಕ್ಕೆ ಸಂಪುಟದ ಅನುಮೋದನೆ

Posted On: 06 FEB 2019 9:54PM by PIB Bengaluru

ಭಾರತ ಮತ್ತು ನಮೀಬಿಯಾ ಹಾಗೂ ಪನಾಮಾದ ಚುನಾವಣಾ ನಿರ್ವಹಣಾ ಸಂಸ್ಥೆಗಳೊಂದಿಗೆ ಪರಸ್ಪರ ತಿಳುವಳಿಕೆ ಪತ್ರಕ್ಕೆ ಸಂಪುಟದ ಅನುಮೋದನೆ 
 

ಭಾರತ ಮತ್ತು ನಮೀಬಿಯಾ ಚುನಾವಣಾ ಆಯೋಗ (ECN) ಹಾಗೂ ಪನಾಮಾ ಚುನಾವಣಾ ನ್ಯಾಯಮಂಡಳಿ (ETP) ಗಳೊಂದಿಗೆ ಚುನಾವಣಾ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಪರಸ್ಪರ ತಿಳುವಳಿಕೆ ಪತ್ರದ ಪ್ರಸ್ತಾವವನ್ನು ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನಮೋದಿಸಿದೆ. 

ಪ್ರಮುಖ ಅಂಶಗಳು: 

ಈ ಪರಸ್ಪರ ತಿಳುವಳಿಕೆ ಪತ್ರವು ಚುನಾವಣಾ ನಿರ್ವಹಣೆ ಮತ್ತು ಆಡಳಿತದಲ್ಲಿ ಉತ್ತೇಜನ ಮತ್ತು ಸಹಕಾರವೃದ್ಧಿಗೆ ಸಂಬಂಧಿಸಿದಂತೆ ನಿಯಮ/ಷರತ್ತುಗಳನ್ನು ಒಳಗೊಂಡಿದೆ. ಚುನಾವಣಾ ಪ್ರಕ್ರಿಯೆಯ ಸಾಂಸ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿ ಕ್ಷೇತ್ರಗಳ ಜ್ಞಾನ ಮತ್ತು ಅನುಭವವದ ವಿನಿಮಯ, ಮಾಹಿತಿ ವಿನಿಮಯಕ್ಕೆ ನೆರವು, ಸಾಂಸ್ಥಿಕ ಬಲಪಡಿಸುವಿಕೆ ಮತ್ತು ಸಾಮರ್ಥ್ಯ ನಿರ್ವಹಣೆ, ಸಿಬ್ಬಂದಿ ತರಬೇತಿ, ನಿರಂತರ ಸಲಹಾ ಸಭೆಗಳ ಆಯೋಜನೆ ಇತ್ಯಾದಿಗಳು ಈ ತಿಳುವಳಿಕೆ ಪತ್ರದಲ್ಲಿರುತ್ತವೆ. 

ಪರಿಣಾಮ: 

ಈ ಪರಸ್ಪರ ತಿಳುವಳಿಕೆ ಪತ್ರವು ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲಿದೆ. ನಮೀಬಿಯಾ ಚುನಾವಣಾ ಆಯೋಗ (ECN) ಹಾಗೂ ಪನಾಮಾ ಚುನಾವಣಾ ನ್ಯಾಯಮಂಡಳಿ (ETP) ಗಳಿಗೆ ತಾಂತ್ರಿಕ ನೆರವು/ಸಾಮರ್ಥ್ಯದ ನಿರ್ಮಾಣ ಗುರಿಯನ್ನು ಹೊಂದಿದೆ. ಇದು ಚುನಾವಣಾ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಹಕಾರಕ್ಕೆ ಅವಕಾಶ ಕಲ್ಪಿಸುತ್ತದೆ ಮತ್ತು ಆಯಾ ದೇಶಗಳಲ್ಲಿ ಚುನಾವಣೆಗಳನ್ನು ನಡೆಸಲು ಸಹಕಾರವನ್ನು ಒದಗಿಸುತ್ತದೆ. ಭಾರತದ ಅಂತರರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಕೂಡ ಇದು ಕಾರಣವಾಗುತ್ತದೆ. 

ಹಿನ್ನೆಲೆ: 

ಚುನಾವಣಾ ವಿಷಯಗಳು ಮತ್ತು ಚುನಾವಣಾ ಪ್ರಕ್ರಿಯೆಗಳನ್ನು ಕುರಿತು ಸಹಕಾರವನ್ನು ಉತ್ತೇಜಿಸಲು ಚುನಾವಣಾ ಆಯೋಗ (EC) ವು ವಿಶ್ವದಾದ್ಯಂತ ಮತ್ತು ಕೆಲವು ನಿರ್ದಿಷ್ಟ ವಿದೇಶಿ ರಾಷ್ಟ್ರಗಳು ಮತ್ತು ಸಂಸ್ಥೆಗಳೊಂದಿಗೆ ತಿಳುವಳಿಕೆ ಪತ್ರಳಿಗೆ ಸಹಿ ಹಾಕುವ ರೂಪದಲ್ಲಿ ಭಾಗವಹಿಸುತ್ತಿದೆ. ಚುನಾವಣಾ ಆಯೋಗವು ವಿಶ್ವದ ಬೃಹತ್ ಚುನಾವಣಾ ಪ್ರಕ್ರಿಯೆ ನಡೆಸುವ ಸ್ವಾಯತ್ತ ಸಂಸ್ಥೆಯಾಗಿದೆ. ವೈವಿಧ್ಯಮಯ ಸಮಾಜ-ರಾಜಕೀಯ ಮತ್ತು ಆರ್ಥಿಕ ಹಿನ್ನೆಲೆಯಿರುವ ಸುಮಾರು 85 ಕೋಟಿ ಮತದಾರರ ದೇಶದಲ್ಲಿ ಮುಕ್ತ ಹಾಗೂ ನ್ಯಾಯಯುತವಾದ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಭಾರತ ಪ್ರಜಾಪ್ರಭುತ್ವದ ಯಶಸ್ಸು ವಿಶ್ವದ ಬಹುತೇಕ ಎಲ್ಲ ರಾಜಕೀಯ ವ್ಯವಸ್ಥೆಯ ಗಮನ ಸೆಳೆಯುತ್ತಿದೆ. 

ಚುನಾವಣಾ ಆಯೋಗವು ತನ್ನ ಉತ್ಕೃಷ್ಟತೆಯ ಅನ್ವೇಷಣೆಯಲ್ಲಿ ಚುನಾವಣೆ ಮತ್ತು ಇದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಗೆ ಹಲವಾರು ವಿದೇಶಿ ಚುನಾವಣಾ ಸಂಸ್ಥೆಗಳಿಂದ ಹಲವಾರು ಪ್ರಸ್ತಾವಗಳನ್ನು ಸ್ವೀಕರಿಸುತ್ತಿದೆ. ಚುನಾವಣಾ ನಿರ್ವಹಣೆ ಮತ್ತು ಆಡಳಿತದಲ್ಲಿ ಸಹಕಾರಕ್ಕಾಗಿ ನಮೀಬಿಯಾ ಚುನಾವಣಾ ಆಯೋಗ (ECN) ಹಾಗೂ ಪನಾಮಾ ಚುನಾವಣಾ ನ್ಯಾಯಮಂಡಳಿ (ETP) ಯ ಪರಸ್ಪರ ತಿಳುವಳಿಕೆ ಪ್ರಸ್ತಾವಗಳನ್ನು ಚುನಾವಣಾ ಆಯೋಗವು ಕಾನೂನು ಮತ್ತು ನ್ಯಾಯ ಸಚಿವಾಲಯದ ಶಾಸನ ಇಲಾಖೆಗೆ ರವಾನಿಸಿತ್ತು. 



(Release ID: 1563121) Visitor Counter : 75