ಪ್ರಧಾನ ಮಂತ್ರಿಯವರ ಕಛೇರಿ

ಆಗ್ರಾದಲ್ಲಿ ಉತ್ತಮ ಮತ್ತು ಹೆಚ್ಚು ಭರವಸೆದಾಯಕ ನೀರು ಪೂರೈಕೆ ಮಾಡುವ ಗಂಗಾಜಲ ಯೋಜನೆ, ಪ್ರಧಾನಮಂತ್ರಿ ಅವರಿಂದ ಆರಂಭ.

Posted On: 09 JAN 2019 7:30PM by PIB Bengaluru

ಆಗ್ರಾದಲ್ಲಿ ಉತ್ತಮ ಮತ್ತು ಹೆಚ್ಚು ಭರವಸೆದಾಯಕ ನೀರು ಪೂರೈಕೆ ಮಾಡುವ ಗಂಗಾಜಲ ಯೋಜನೆ, ಪ್ರಧಾನಮಂತ್ರಿ ಅವರಿಂದ ಆರಂಭ.

 

ಆಗ್ರಾವನ್ನು ಪ್ರವಾಸೀ ಸ್ನೇಹೀ ನಗರವಾಗಿಸಲು ಆಗ್ರಾ ಸ್ಮಾರ್ಟ್ ಸಿಟಿಗಾಗಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ  ಕೇಂದ್ರ ನಿರ್ಮಾಣ, ಎಸ್.ಎನ್. ವೈದ್ಯಕೀಯ ಕಾಲೇಜು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಪ್ರಧಾನಮಂತ್ರಿ ಅವರಿಂದ ಶಿಲಾನ್ಯಾಸ, ಆಗ್ರಾ ಪಂಚಧಾರಾ- ಅಭಿವೃದ್ಧಿಯ ಐದು ಧಾರೆಗಳು ರಾಷ್ಟಾಭಿವೃದ್ಧಿಯ ಪ್ರಮುಖ ಕೀಲಿ ಕೈ: ಪ್ರಧಾನಮಂತ್ರಿ

 

ಆಗ್ರಾಕ್ಕಾಗಿ  2900 ಕೋ.ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

 

 

ಆಗ್ರಾದಲ್ಲಿ ಅಭಿವೃದ್ಧಿಗೆ ವೇಗ ಕೊಡಲು ಮತ್ತು ಪ್ರವಾಸೀ ಮೂಲಸೌಕರ್ಯಗಳನ್ನು ಹೆಚ್ಚಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಆಗ್ರಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ರೂಪಾಯಿ 2900 ಕೋಟಿ ಮೌಲ್ಯದ ಸರಣಿ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿದರು. 

ಪ್ರಧಾನಮಂತ್ರಿ ಅವರು ಆಗ್ರಾಕ್ಕೆ ಉತ್ತಮ ಮತ್ತು ಹೆಚ್ಚು ಭರವಸೆದಾಯಕ, ಖಚಿತ ನೀರು ಪೂರೈಕೆ ಯೋಜನೆಯಾದ ಗಂಗಾಜಲ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದರ ಅಂದಾಜು ವೆಚ್ಚ 2880 ಕೋ.ರೂ. ಗಂಗಾಜಲ ಯೋಜನೆ 140  ಕ್ಯೂಸೆಕ್ಸ್ ಗಂಗಾ ನೀರನ್ನು ಆಗ್ರಾಕ್ಕೆ ತರುವ ಉದ್ದೇಶವನ್ನು ಹೊಂದಿದೆ. ಇದು ನಗರದ ಕುಡಿಯುವ ನೀರಿನ ಬೇಡಿಕೆಯನ್ನು ಈಡೇರಿಸಲಿದೆ. 

 

ಆಗ್ರಾ ಸ್ಮಾರ್ಟ್ ಸಿಟಿಗಾಗಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಕ್ಕೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಯೋಜನೆ ಅಡಿಯಲ್ಲಿ ಸಿ.ಸಿ.ಟಿ.ವಿ. ಗಳನ್ನು ಆಗ್ರಾ ನಗರದಾದ್ಯಂತ ಸುರಕ್ಷಾ ಮತ್ತು ಭದ್ರತೆಯ ಉದ್ದೇಶದ ನಿಗಾ ಮತ್ತು  ಕಣ್ಗಾವಲಿಗಾಗಿ

ಅಳವಡಿಸಲಾಗುವುದು. ಇದು ಆಗ್ರಾವನ್ನು ಆಧುನಿಕ ವಿಶ್ವದರ್ಜೆಯ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಮಾಡಲು ಸಹಕಾರಿಯಾಗಲಿದೆ. ಪ್ರವಾಸಿಗರ ಆದ್ಯತೆಯ ತಾಣವಾಗಿರುವ ಈ ನಗರಕ್ಕೆ   285 ಕೋ.ರೂ. ಒಟ್ಟು ವೆಚ್ಚದ ಈ ಯೋಜನೆ ಸೂಕ್ತವಾದ ಸೌಲಭ್ಯ ಒದಗಿಸಲಿದೆ ಎಂದೂ  ಪ್ರಧಾನಮಂತ್ರಿ   ನುಡಿದರು.  

 

ಆಗ್ರಾದ ಕೋಥಿ ಮೀನಾ ಬಜಾರಿನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು “ ಗಂಗಾಜಲದಂತಹ ಯೋಜನೆಗಳು ಮತ್ತು ಸಿ.ಸಿ.ಟಿ.ವಿ.ಗಳಂತಹ ಕ್ಯಾಮರಾ ಸೌಲಭ್ಯಗಳಿಂದ ನಾವು ಆಗ್ರಾವನ್ನು ಸ್ಮಾರ್ಟ್ ಸಿಟಿಯನ್ನಾಗಿಸುತ್ತಿದ್ದೇವೆ” ಎಂದರು. ಈ ಸವಲತ್ತುಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂದೂ ಅವರು ಅಭಿಪ್ರಾಯಪಟ್ಟರು.  

 

ಆಯುಷ್ಮಾನ್ ಭಾರತ್ ಯೋಜನಾ ಅಡಿಯಲ್ಲಿ ಆಗ್ರಾದ ಎಸ್.ಎನ್. ವೈದ್ಯಕೀಯ ಕಾಲೇಜು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಪ್ರಧಾನ ಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಿದರು. ಇದರ ಪರಿಣಾಮವಾಗಿ ಮಹಿಳಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಹೆರಿಗೆ ವಿಭಾಗ ರೂಪುಗೊಳ್ಳಲಿದೆ. ಇದರ ಅಂದಾಜು ವೆಚ್ಚ 200 ಕೋ.ರೂ. ಗಳು. ಇದರಿಂದ ದುರ್ಬಲ ವರ್ಗದವರಿಗೆ ಆರೋಗ್ಯ ಮತ್ತು ಹೆರಿಗೆ ಶುಶ್ರೂಷೆ ಸೌಲಭ್ಯ ಲಭಿಸಲಿದೆ. ಪ್ರಧಾನಮಂತ್ರಿ ಅವರು ಆಯುಷ್ಮಾನ್ ಭಾರತ ಯೋಜನೆಯನ್ನು ಪ್ರಶಂಶಿಸಿದರಲ್ಲದೆ ಈ ಯೋಜನೆಯು ಆರಂಭಗೊಂಡ ನೂರು ದಿನಗಳ ಅವಧಿಯಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದಿದ್ದಾರೆ ಎಂದರು. 

 

ಸಾಮಾನ್ಯ ವರ್ಗದ ಬಡವರಿಗೆ 10% ಮೀಸಲಾತಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು ಇದು ಸರಿಯಾದ ದಿಕ್ಕಿನಲ್ಲಿಯ ಹೆಜ್ಜೆ ಎಂದರು. ಇತರ ವರ್ಗದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಖಾತ್ರಿಪಡಿಸಲು  ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರವು ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಿದೆ ಎಂದರು. “ನಾವು ಉನ್ನತ ಶಿಕ್ಷಣ, ತಾಂತ್ರಿಕ ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗದ  ಬಡವರಿಗೆ ಮೀಸಲಾತಿ ಒದಗಿಸುವುದಕ್ಕೆ ಸಂಬಂಧಿಸಿ ಶಿಕ್ಷಣ ಸೌಲಭ್ಯಗಳನ್ನು ಹೆಚ್ಚಿಸುವ ಪ್ರಮುಖ ನಿರ್ಧಾರ ಕೈಗೊಂಡಿದ್ದೇವೆ. ನಾವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳ ಸಂಖ್ಯೆಯನ್ನು 10% ಹೆಚ್ಚಿಸಿದ್ದೇವೆ. ನಾವು ಯಾರದೇ ವ್ಯಕ್ತಿಯ ಹಕ್ಕನ್ನು ಕಸಿದುಕೊಳ್ಳುವಂತಹ ವ್ಯವಸ್ಥೆಯನ್ನು ಹೊಂದಿಲ್ಲ” ಎಂದು ಪ್ರಧಾನ ಮಂತ್ರಿ ಹೇಳಿದರು. 

 

ತಮ್ಮ ಸರಕಾರದ ಆದ್ಯತೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು ಪಂಚಧಾರಾ -ಅಭಿವೃದ್ಧಿಯ ಐದು ಮುಖಗಳು ರಾಷ್ಟ್ರದ ಪ್ರಗತಿಯ ಕೀಲಿ ಕೈಗಳು . ಇವುಗಳೆಂದರೆ –ಮಕ್ಕಳಿಗೆ ಶಿಕ್ಷಣ, ರೈತರಿಗೆ ನೀರಾವರಿ, ಯುವಕರಿಗೆ ಜೀವನೋಪಾಯ, ಹಿರಿಯರಿಗೆ ಔಷಧಿ, ಪ್ರತಿಯೊಬ್ಬರ ಕುಂದು ಕೊರತೆ ನಿವಾರಣೆ, ಎಂದು ಅವರು ಹೇಳಿದರು. 

 

ಅಮೃತ್ ಯೋಜನೆ ಅಡಿಯಲ್ಲಿ ಆಗ್ರಾದ ಪಶ್ಚಿಮ ಭಾಗದ ತ್ಯಾಜ್ಯ ಚರಂಡಿ ಜಾಲ ಯೋಜನೆಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಯೋಜನೆ 50,000 ಕ್ಕೂ ಅಧಿಕ ಮನೆಗಳಿಗೆ ಸುಧಾರಿತ ನೈರ್ಮಲ್ಯೀಕರಣ ಸೌಲಬ್ಯವನ್ನು ಒದಗಿಸಲಿದೆ. 

 

###



(Release ID: 1559334) Visitor Counter : 59


Read this release in: English , Marathi , Bengali , Tamil