ಪ್ರಧಾನ ಮಂತ್ರಿಯವರ ಕಛೇರಿ

ನಾಲ್ಕನೇ ಕೈಗಾರಿಕಾ ಕ್ರಾಂತಿಯ ಕೇಂದ್ರದ ಉದ್ಘಾಟನೆಯ ಅಂಗವಾಗಿ ನಡೆದ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ 

Posted On: 11 OCT 2018 5:28PM by PIB Bengaluru

ನಾಲ್ಕನೇ ಕೈಗಾರಿಕಾ ಕ್ರಾಂತಿಯ ಕೇಂದ್ರದ ಉದ್ಘಾಟನೆಯ ಅಂಗವಾಗಿ ನಡೆದ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಕುರಿತ ಕೇಂದ್ರದ ಉದ್ಘಾಟನೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾಗಿಯಾಗಿ ಭಾಷಣ ಮಾಡಿದರು. 

“ಕೈಗಾರಿಕೆ 4.0” ಅಂಶಗಳು ವಾಸ್ತವವಾಗಿ ಮಾನವನ ಬದುಕಿನ ವರ್ತಮಾನ ಮತ್ತು ಭವಿಷ್ಯವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದರು. ಈ ಕೇಂದ್ರದ ಉದ್ಘಾಟನೆಯು ಸ್ಯಾನ್ ಫ್ರಾನ್ಸಿಸ್ಕೋ, ಟೋಕಿಯೋ ಮತ್ತು ಬೀಜಿಂಗ್ ನಂತರ ನಾಲ್ಕನೆಯದಾಗಿದ್ದು, ಭವಿಷ್ಯದಲ್ಲಿ ವಿಪುಲ ಸಾಧ್ಯತೆಗಳ ಬಾಗಿಲು ತೆರೆಯಲಿದೆ ಎಂದರು. 

ಕೃತಕ ಬುದ್ಧಿಮತ್ತೆ, ಮೆಷಿನ್ ಕಲಿಕೆ, ಇಂಟರ್ ನೆಟ್ ಆಫ್ ಥಿಂಗ್ಸ್, ಬ್ಲಾಕ್ ಚೈನ್ ಮತ್ತು ಬೃಹತ್ ದತ್ತಾಂಶ ಸೇರಿದಂತೆ ಹೊರ ಹೊಮ್ಮುತ್ತಿರುವ ಕ್ಷೇತ್ರಗಳು ಭಾರತವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲವಾಗಿದ್ದು, ದೇಶದ ನಾಗರಿಕರ ಜೀವನ ಗುಣಮಟ್ಟವನ್ನು ಸುಧಾರಿಸಲಿದೆ ಎಂದರು. ಭಾರತಕ್ಕೆ ಇದು ಕೇವಲ ಕೈಗಾರಿಕಾ ಪರಿವರ್ತನೆಯಲ್ಲ, ಜೊತೆಗೆ ಸಾಮಾಜಿಕ ಬದಲಾವಣೆಯೂ ಆಗಿದೆ ಎಂದರು. ಕೈಗಾರಿಕೆ 4.0 ಭಾರತದಲ್ಲಿ ಮಾರ್ಪಡಿಸಲಾಗದಂಥ ಧನಾತ್ಮಕ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ ಎಂದರು. ಇದು ಭಾರತದಲ್ಲಿ ಆಗುತ್ತಿರುವ ಕಾಮಗಾರಿಗಳಿಗೆ ವೇಗ ಮತ್ತು ಮಾನದಂಡವನ್ನು ತರಲು ನೆರವಾಗುತ್ತದೆ ಎಂದೂ ಹೇಳಿದರು. 

ಪ್ರಧಾನಮಂತ್ರಿಯವರು ಡಿಜಿಟಲ್ ಇಂಡಿಯಾ ಆಂದೋಲನ ಹೇಗೆ ಭಾರತದ ಗ್ರಾಮಗಳಿಗೂ ದತ್ತಾಂಶವನ್ನು ತರುತ್ತಿದೆ ಎಂಬುದನ್ನು ಪ್ರಸ್ತಾಪಿಸಿದರು. ಟೆಲಿ-ಡೆನ್ಸಿಟಿ, ಅಂತರ್ಜಾಲ ವ್ಯಾಪ್ತಿ, ಮತ್ತು ಮೊಬೈಲ್ ಅಂತರ್ಜಾಲ ಬಳಕೆ ಇತ್ತೀಚಿನ ದಿನಗಳಲ್ಲಿ ಹೇಗೆ ಹೆಚ್ಚಳವಾಗಿದೆ ಎಂಬುದನ್ನು ವಿವರಿಸಿದರು. ಭಾರತದಲ್ಲಿ ಸಮಾನ ಸೇವಾ ಕೇಂದ್ರಗಳ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳ ಆಗುತ್ತಿರುವ ಕುರಿತೂ ಮಾತನಾಡಿದರು. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮೊಬೈಲ್ ದತ್ತಾಂಶ ಬಳಕೆ ಮಾಡುತ್ತಿರುವ ರಾಷ್ಟ್ರವಾಗಿದೆ ಮತ್ತು ಅತ್ಯಂತ ಕಡಿಮೆ ದರದಲ್ಲಿ ದತ್ತಾಂಶ ದೊರಕುವ ರಾಷ್ಟ್ರವೂ ಆಗಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಭಾರತದ ಡಿಜಿಟಲ್ ಮೂಲಸೌಕರ್ಯ ಮತ್ತು ಆಧಾರ್, ಯುಪಿಐ, ಇ-ನಾಮ್ ಮತ್ತು ಜಿಇಎಂ ಸೇರಿದಂತೆ ಅದರ ಸಂಪರ್ಕ ಸಾಧನಗಳ ಬಗ್ಗೆಯೂ ಮಾತನಾಡಿದರು. ಕೃತಕ ಬುದ್ಧಿಮತ್ತೆಯ ಸಂಶೋಧನೆಗಾಗಿ ದೃಢವಾದ ಮೂಲಸೌಕರ್ಯವನ್ನು ರಚಿಸುವ ರಾಷ್ಟ್ರೀಯ ತಂತ್ರವನ್ನು ಕೆಲವು ತಿಂಗಳ ಹಿಂದಷ್ಟೇ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. ಈ ಹೊಸ ಕೇಂದ್ರವು ಪ್ರಕ್ರಿಯೆಯನ್ನು ಬಲಪಡಿಸಲಿದೆ ಎಂದರು. ಕೈಗಾರಿಕೆ 4.0 ಮತ್ತು ಕೃತಕ ಬುದ್ಧಿಮತ್ತೆಯ ವಿಸ್ತರಣೆಯು ಉತ್ತಮ ಆರೋಗ್ಯ ಆರೈಕೆಕ್ಕೆ ಇಂಬು ನೀಡುತ್ತದೆ ಮತ್ತು ಆರೋಗ್ಯ ಸೇವೆಯ ವೆಚ್ಚವನ್ನು ತಗ್ಗಿಸುತ್ತದೆ ಎಂದರು. ಇದು ರೈತರಿಗೂ ನೆರವಾಗಲಿದ್ದು, ಕೃಷಿ ಕ್ಷೇತ್ರಕ್ಕೂ ಅಪಾರ ನೆರವು ನೀಡಲಿದೆ ಎಂದರು. ಸಾರಿಗೆ ಮತ್ತು ಸ್ಮಾರ್ಟ್ ಚಲನಶೀಲತೆಯಂಥ ಇತರ ಕ್ಷೇತ್ರಗಳ ಪ್ರಸ್ತಾಪ ಮಾಡಿದ ಅವರು, ಇವು ಪ್ರಮುಖ ಪಾತ್ರ ವಹಿಸಲಿವೆ ಎಂದರು. ಈ ಕ್ಷೇತ್ರಗಳಲ್ಲಿ ಭಾರತದಲ್ಲಿ ಕಾಮಗಾರಿ ಮುಂದುವರಿದಂತೆ ಇವುಗಳ ಒಂದು ಗುರಿ ಭಾರತಕ್ಕಾಗಿ ಪರಿಹಾರ, ವಿಶ್ವಕ್ಕಾಗಿ ಪರಿಹಾರ ಆಗಿರುತ್ತದೆ ಎಂದರು. 

ನಾಲ್ಕನೇ ಕೈಗಾರಿಕಾ ಕ್ರಾಂತಿಯ ಪ್ರಯೋಜನವನ್ನು ಭಾರತ ಪಡೆದುಕೊಳ್ಳುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು. ಭಾರತವು ಕೂಡ ಇದಕ್ಕೆ ಅಪಾರ ಕೊಡುಗೆ ನೀಡಲಿದೆ ಎಂದೂ ಹೇಳಿದರು. ಕೌಶಲ ಭಾರತ ಅಭಿಯಾನ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಅಟಲ್ ನಾವಿನ್ಯ ಅಭಿಯಾನ ಸೇರಿದಂತೆ ಕೇಂದ್ರ ಸರ್ಕಾರದ ಉಪಕ್ರಮಗಳು ನಮ್ಮ ಯುವಜನರನ್ನು ಹೊಸ ಮತ್ತು ಹೊರಹೊಮ್ಮುತ್ತಿರುವ ತಂತ್ರಜ್ಞಾನಕ್ಕೆ ಸಜ್ಜುಗೊಳಿಸುತ್ತಿವೆ ಎಂದರು.


(Release ID: 1549733)