ಪ್ರಧಾನ ಮಂತ್ರಿಯವರ ಕಛೇರಿ

ಒರಿಸ್ಸಾದ ಜರಸುಗುಡ ವಿಮಾನ ನಿಲ್ದಾಣ ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ 

Posted On: 22 SEP 2018 7:49PM by PIB Bengaluru

ಒರಿಸ್ಸಾದ ಜರಸುಗುಡ ವಿಮಾನ ನಿಲ್ದಾಣ ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ 
 

ಒಡಿಶಾದ ಮಾನ್ಯ ರಾಜ್ಯಪಾಲರಾದ ಶ್ರೀಮಾನ್ ಪ್ರೊ.ಗಣೇಶಿ ಲಾಲ್ ಅವರೇ, ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀಮಾನ್ ನವೀನ್ ಪಟ್ನಾಯಕ್ ಅವರೇ, ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ಶ್ರೀಮಾನ್ ಜುಅಲ್ ಓರಂ ಅವರೇ, ಶ್ರೀಮಾನ್ ಧರ್ಮೇಂದ್ರ ಪ್ರಧಾನ್ ಅವರೇ ಮತ್ತು ಇಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯರೇ, 

ನಾನು ಇಂದು ತಲ್ಚೇರ್ ನಿಂದ ಇಲ್ಲಿಗೆ ಬಂದಿದ್ದೇನೆ. ಅಲ್ಲಿ ಸ್ಥಗಿತಗೊಂಡಿದ್ದ ರಸಗೊಬ್ಬರ ತಯಾರಿಕಾ ಸ್ಥಾವರನ್ನು 13,000 ಕೋಟಿ ರೂಪಾಯಿ ವೆಚ್ಚದಲ್ಲಿ ಪುನಶ್ಚೇತನಗೊಳಿಸುವ ಕಾರ್ಯವನ್ನು ನಾವು ಆರಂಭಿಸಿದ್ದೆವು. ಒಂದು ವಿಧದಲ್ಲಿ , ಈ ರಸಗೊಬ್ಬರ ಕಾರ್ಖಾನೆ ಆ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಲಿದೆ. ಆಧುನಿಕ ಒಡಿಶಾ, ಆಧುನಿಕ ಭಾರತ, ಇವೆರಡೂ ಆಧುನಿಕ ಮೂಲಸೌಲಭ್ಯಗಳನ್ನು ಹೊಂದಿರಬೇಕು. ಹಾಗಾಗಿಯೇ ನಾನಿಂದು, ವೀರ ಸುರೇಂದ್ರ ಸೈನ್ ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಅವಕಾಶವನ್ನು ಪಡೆದಿದ್ದೇನೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ವೀರ ಸುರೇಂದ್ರ ಸೈನ್ ಅವರ ವಿಚಾರ ತಿಳಿದಾಗ ಒಡಿಶಾದ ಶೌರ್ಯ-ಸಾಹಸ, ತ್ಯಾಗ ಮತ್ತು ರಾಜ್ಯದ ಶ್ರದ್ಧೆಯ ಬಗೆಗಿನ ಕಥೆಗಳೆಡೆಗೆ ಆಕರ್ಷಿತರಾಗುತ್ತಾರೆ. 

ಇಂದು, ಇಲ್ಲಿಂದ ಸಾಕಷ್ಟು ಪ್ರಮುಖ ಯೋಜನೆಗಳನ್ನು ಉದ್ಘಾಟಿಸುವ ಅವಕಾಶವೂ ಲಭಿಸಿದೆ. ಇದು ಒಡಿಶಾದ ಎರಡನೇ ದೊಡ್ಡ ವಿಮಾನ ನಿಲ್ದಾಣವಾಗಿದೆ. ಆದರೆ ಇಷ್ಟು ವರ್ಷಗಳ ಕಾಲ ಇದರ ನಿರ್ಮಾಣವೇಕೆ ಸಾಧ್ಯವಾಗಲಿಲ್ಲ ಎನ್ನುವುದನ್ನು ನೀವೇ ತಿಳಿದುಕೊಳ್ಳಬೇಕು. ಪ್ರಾಯಶಃ, ಈ ನಿಲ್ದಾಣ ನನಗಾಗಿ ಕಾಯುತ್ತಿತ್ತೆನಿಸುತ್ತದೆ. 

ನಾನು ಗುಜರಾತಿನ ಕಛ್ ಜಿಲ್ಲೆಗೆ ಸೇರಿದವನು. ಅದೊಂದು ಮರುಭೂಮಿಯಾಗಿದ್ದು, ಅದರಾಚೆಗೆ ಪಾಕಿಸ್ತಾನವಿದೆ. ಆ ಜಿಲ್ಲೆಯಲ್ಲಿ ಐದು ವಿಮಾನ ನಿಲ್ದಾಣಗಳಿವೆ. ಇಂದು ಒಡಿಶಾದಲ್ಲಿ ಎರಡನೇ ವಿಮಾನ ನಿಲ್ದಾಣದ ಕಾಮಗಾರಿ ಅದೆಷ್ಟೋ ವರುಷಗಳ ನಂತರ ಆರಂಭವಾಗಿದೆ. ದೇಶದ ನಾಗರಿಕ ವಿಮಾನಯಾನ ವಲಯದಲ್ಲಿ ಎಷ್ಟೊಂದು ಪ್ರಗತಿ ನಡೆಯುತ್ತಿದೆ ಎನ್ನುವುದನ್ನು ಶ್ರೀ ಸುರೇಶ್ ಅವರು ಕೆಲ ಹೊತ್ತಿನ ಹಿಂದಷ್ಟೇ ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದಂದಿನಿಂದ ತೀರಾ ಇತ್ತೀಚಿನವರೆಗೂ ಕೇವಲ 450 ವಿಮಾನಗಳು ಮಾತ್ರ ಓಡಾಡುತ್ತಿದ್ದವು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇದು ದೇಶಕ್ಕೆ ಸ್ವಾತಂತ್ರ್ಯ ಬಂದಂದಿನಿಂದ ಹಿಡಿದು ಇಲ್ಲಿಯವರೆಗಿನ ಕಥೆ. ಆದರೆ ಈ ವರ್ಷವೊಂದರಲ್ಲೇ 950 ಹೊಸ ವಿಮಾನಗಳನ್ನು ಖರೀದಿಸಲಾಗಿದೆ. ನಾವೀಗ ಏನನ್ನು ಸಾಧಿಸಲು ಹೊರಟಿದ್ದೇವೆ ಮತ್ತು ಅಂದುಕೊಂಡದ್ದನ್ನು ಎಷ್ಟು ಕ್ಷಿಪ್ರಗತಿಯಲ್ಲಿ ಸಾಧಿಸುತ್ತಿದ್ದೇವೆ ಎನ್ನುವುದನ್ನು ನೀವು ಯಾರಾದರೂ ಊಹಿಸಬಲ್ಲಿರಾ? ವೀರ ಸುರೇಂದ್ರ ಸೈನ್ ವಿಮಾನ ನಿಲ್ದಾಣವನ್ನು ಭುವನೇಶ್ವರ, ರಾಂಚಿ ಮತ್ತು ರಾಯಪುರ ಈ ಮೂರೂ ಸ್ಥಳಗಳಿಗೆ ಕೇಂದ್ರವಾಗಿರುವ ಜಾಗದಲ್ಲಿ ನಿರ್ಮಿಸಲಾಗುತ್ತಿದೆ ಎಂದು ನಾನು ನಂಬಿದ್ದೇನೆ. ವಿಮಾನ ನಿಲ್ದಾಣದ ನಿರ್ಮಾಣ ಅಭಿವೃದ್ಧಿಯ ಸಾಧ್ಯತೆಗಳಿಗೆ ಇಂಬು ನೀಡಲಿದೆ, ಆ ಮೂಲಕ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. 

ಒರಿಸ್ಸಾದಲ್ಲಿರುವ ಜರಸುಗುಡ, ಸಂಭಾಲ್ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂಡವಾಳ ಹೂಡಲು ಆಸಕ್ತಿ ಹೊಂದಿರುವ ಉದ್ಯಮಿಗಳಿಗೆ ಇಂತಹ ಅನುಕೂಲಗಳು ತುಂಬಾ ಮುಖ್ಯ. ಈ ಜಾಗಕ್ಕೆ ತಲುಪುವುದು ಸುಲಭವಾದರೆ ಖಂಡಿತವಾಗಿಯೂ ಉದ್ಯಮಿಗಳು ಇವನ್ನು ತಮ್ಮ ವ್ಯಾಪಾರದ ದೃಷ್ಟಿಯಿಂದ ಇಷ್ಟಪಡುತ್ತಾರೆ. ಪ್ರಾದೇಶಿಕ ವಲಯಗಳ ಮಧ್ಯೆ ಸಮತೋಲನ ಇರಬೇಕೆಂಬುದೇ ನಾವು ಅನುಸರಿಸುತ್ತಿರುವ `ಎಲ್ಲರೊಂದಿಗೆ, ಎಲ್ಲರ ವಿಕಾಸ’ (ಸಬ್ ಕಾ ಸಾಥ್, ಸಬ್ ಕಾ ವಿಕಾಸ್) ದ ಅರ್ಥವಾಗಿದೆ. ಕೇವಲ ದೇಶದ ಪಶ್ಚಿಮ ಭಾಗ ಮಾತ್ರ ಅಭಿವೃದ್ಧಿ ಹೊಂದಿ, ಪೂರ್ವ ಭಾಗ ಪ್ರಗತಿ ಆಗದಿದ್ದರೆ ಅದು ದೇಶಕ್ಕೆ ಸಂಕಷ್ಟವನ್ನು ತಂದೊಡ್ಡಲಿದೆ. ಹೀಗಾಗಿ, ಪೂರ್ವ ಭಾರತ ಕೂಡ ಅಭಿವೃದ್ಧಿ ಸಾಧಿಸುವಂತೆ ಮಾಡುವುದು ನಮ್ಮ ದೃಢ ಪ್ರಯತ್ನ. ಒಡಿಶಾದ ಅಭಿವೃದ್ಧಿ ಇದರಲ್ಲಿ ಅತ್ಯಂತ ಪ್ರಮುಖ ಭಾಗವಾಗಿದೆ. ಉತ್ತರಪ್ರದೇಶದ ಪೂರ್ವ ಭಾಗವೇ ಇರಲಿ, ಒಡಿಶಾವೇ ಇರಲಿ, ಪಶ್ಚಿಮ ಬಂಗಾಳವೇ ಇರಲಿ, ಅಸ್ಸಾಂ ರಾಜ್ಯವೇ ಆಗಿರಲಿ ಅಥವಾ ಈಶಾನ್ಯ ಭಾರತವೇ ಆಗಿರಲಿ, ಸಂಪೂರ್ಣ ಭಾಗದ ಅಭಿವೃದ್ಧಿ ಅತಿಮುಖ್ಯವಾದುದಾಗಿದೆ. 

ನಾನು ಇಲ್ಲಿ ಇಂದು ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದೇನೆ. ನಾಡಿದ್ದು ವಿಮಾನ ನಿಲ್ದಾಣವೊಂದನ್ನು ಉದ್ಘಾಟಿಸಲು ಸಿಕ್ಕಿಂಗೆ ಹೋಗುತ್ತಿದ್ದೇನೆ. ಎಷ್ಟೊಂದು ಕೆಲಸಗಳು, ಯಾವ ವೇಗದಲ್ಲಿ ಆಗುತ್ತಿವೆ ಎಂಬುದನ್ನು ನೀವು ಊಹಿಸಬಹುದು. ಇಂದು ಕಲ್ಲಿದ್ದಲು ಗಣಿಯೊಂದನ್ನು ಕೂಡ ರಾಷ್ಟ್ರಕ್ಕೆ ಸಮರ್ಪಿಸುವ ಅವಕಾಶ ನನಗೆ ಸಿಕ್ಕಿದೆ. ಸಮಸ್ತ ಚಟುವಟಿಕೆಗಳಿಗೂ ಇಂಧನವೇ ಮೂಲಾಧಾರವೆನ್ನುವುದನ್ನು ನಾವು ಅರಿತಿದ್ದು, ಒಡಿಶಾ ರಾಜ್ಯ ಕಪ್ಪುವಜ್ರದ ಅಪಾರ ರಾಶಿಯನ್ನು ಹೊಂದಲು ಅದೃಷ್ಟ ಮಾಡಿದೆ. ಗಣಿಯಿಂದ ಕಲ್ಲಿದ್ದಲನ್ನು ತೆಗೆಯುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಜತೆಗೆ, ಈ ಕಲ್ಲಿದ್ದಲಿನಿಂದ ಇಂಧನವನ್ನು ಉತ್ಪಾದಿಸುವ ಕಾರ್ಯ ಕೂಡ ಇಂದಿನಿಂದ ಇಲ್ಲಿ ಆರಂಭವಾಗಲಿದ್ದು, ಇದರಿಂದ ಅಭಿವೃದ್ಧಿ ಮತ್ತಷ್ಟು ಪ್ರಖರವಾಗಲಿದೆ. 

ಇಂದು, ಒಂದು ರೈಲ್ವೆ ಯೋಜನೆ ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಬೆಸೆಯಬಹುದು; ಅಭಿವೃದ್ಧಿಯನ್ನು ಹೆಚ್ಚುಗೊಳಿಸುವುದರಲ್ಲಿ ಸರಿಯಾದ ಸಂರ್ಪಕ ವ್ಯವಸ್ಥೆ ಬಹುದೊಡ್ಡ ಪಾತ್ರ ವಹಿಸುತ್ತಿದೆ. ಅದು ಹೆದ್ದಾರಿಯಾಗಿರಬಹುದು, ರೈಲುಮಾರ್ಗವಾಗಿರಬಹುದು, ವಾಯುಮಾರ್ಗವಾಗಿರಬಹುದು, ಇಲ್ಲವೇ ಜಲಮಾರ್ಗವಾಗಿರಬಹುದು- ಇವೆಲ್ಲಕ್ಕೂ ಈ ಮಾತು ಅನ್ವಯವಾಗುತ್ತದೆ. ಅಂತರ್ಜಾಲದ ಮೂಲಕ ಎಲ್ಲ ಸ್ಥಳಗಳನ್ನು ಪರಸ್ಪರ ಬೆಸೆಯುವ ಕೆಲಸ ಕೂಡ ವೇಗವಾಗಿ ನಡೆಯುತ್ತಿದೆ. 

ಈ ಬುಡಕಟ್ಟು ಪ್ರದೇಶ ಇಂದು ರೈಲು ಸಂಪರ್ಕವನ್ನು ಕಂಡಿದೆ; ಇದು ಮುಖ್ಯವಾದ ಒಂದು ಹೆಜ್ಜೆಯಾಗಿದೆ. ಮುಂಬರುವ ದಿನಗಳಲ್ಲಿ ಒಡಿಶಾದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಂಪರ್ಕ ವ್ಯವಸ್ಥೆಯು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ನಾನು ನಂಬಿದ್ದೇನೆ. ವೀರ ಸುರೇಂದ್ರ ಸೈನ್ ವಿಮಾನ ನಿಲ್ದಾಣವನ್ನು ಈ ಪ್ರದೇಶದ ಜನರಿಗೆ ಸಮರ್ಪಿಸಲು ನನಗೆ ಹೆಮ್ಮೆ ಎನಿಸುತ್ತಿದೆ. 

ನಿಮ್ಮೆಲ್ಲರಿಗೂ ಧನ್ಯವಾದಗಳು. 



(Release ID: 1549586) Visitor Counter : 141


Read this release in: English , Marathi , Bengali , Tamil