ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಸಿಯಲ್ಲಿ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ 

Posted On: 18 SEP 2018 7:00PM by PIB Bengaluru

ವಾರಾಣಸಿಯಲ್ಲಿ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು. 

ಇಂದು ಉದ್ಘಾಟನೆಯಾದ ಯೋಜನೆಗಳಲ್ಲಿ ಪುರಾನಿ ಕಾಶಿಯ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್); ಮತ್ತು ಬಿ.ಎಚ್.ಯು.ನಲ್ಲಿ ಅಟಲ್ ಇಕ್ಯುಬೇಷನ್ ಕೇಂದ್ರವೂ ಸೇರಿದೆ. ಶಿಲಾನ್ಯಾಸಗೊಂಡ ಯೋಜನೆಗಳಲ್ಲಿ ಬಿ.ಎಚ್.ಯು.ನಲ್ಲಿ ಪ್ರಾದೇಶಿಕ ನೇತವಿಜ್ಞಾನ ಕೇಂದ್ರವೂ ಸೇರಿದೆ. 

ಇಂದು ಉದ್ಘಾಟನೆಯಾದ ಅಥವಾ ಶಂಕುಸ್ಥಾಪನೆ ನೆರವೇರಿಸಲಾದ ಎಲ್ಲ ಯೋಜನೆಗಳ ಒಟ್ಟು ಮೌಲ್ಯ 550 ಕೋಟಿ ರೂಪಾಯಿಗಳಾಗಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ವಾರಾಣಸಿಯಲ್ಲಿ ಬದಲಾವಣೆ ತರಲು ನಡೆಸುತ್ತಿರುವ ಪ್ರಯತ್ನಗಳು, ನಗರದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನವೂ ಆಗಿದೆ ಎಂದು ಹೇಳಿದರು. ಪುರಾತನ ಗುರುತುಗಳನ್ನು ಸಂರಕ್ಷಿಸಿ, ನಗರವನ್ನು ಆಧುನೀಕರಿಸಲಾಗುವುದು ಎಂದು ಹೇಳಿದರು. ಕಳೆದ ನಾಲ್ಕು ವರ್ಷಗಳಲ್ಲಿ ತರಲಾಗಿರುವ ಬದಲಾವಣೆ ಕಾಶಿ ಜನತೆಯ ಸಂಕಲ್ಪವಾಗಿದ್ದು, ಈಗ ಅದು ಗೋಚರಿಸುತ್ತಿದೆ ಎಂದರು. 

ವಿದ್ಯುತ್, ರಸ್ತೆ ಮತ್ತು ಇತರ ಮೂಲಸೌಕರ್ಯ ವಲಯಗಳಲ್ಲಿನ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದ ಶ್ರೀ ನರೇಂದ್ರ ಮೋದಿ, ಅವು ಗಣನೀಯವಾಗಿ ಪ್ರಗತಿಯಲ್ಲಿವೆ ಮತ್ತು ವಾರಾಣಸಿ ಮತ್ತು ಸುತ್ತಮುತ್ತಲ ಪ್ರದೇಶಗಳ ಜನರ ಬದುಕಿನಲ್ಲಿ ಬದಲಾವಣೆ ತಂದಿವೆ ಎಂದು ಹೇಳಿದರು. ಜನರು ಆನ್ ಲೈನ್ ನಲ್ಲಿ ಹಾಕುವ ವಾರಾಣಸಿ ದಂಡು ನಿಲ್ದಾಣದ ಚಿತ್ರಗಳನ್ನು ಮತ್ತು ಪೋಸ್ಟ್ ಗಳನ್ನು ನೋಡಿದಾಗ ತಮಗೆ ಸಂತೋಷವಾಗುತ್ತದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಸಾರಿಗೆ ಮೂಲಸೌಕರ್ಯ ಆಧುನೀಕರಣದ ನಿಟ್ಟಿನಲ್ಲಿ ಆಗಿರುವ ಕಾಮಗಾರಿಗಳನ್ನು ಅವರು ಪ್ರಸ್ತಾಪಿಸಿದರು. ಸ್ವಚ್ಛತೆಯ ಕಡೆ ಆಗಿರುವ ಕಾರ್ಯಗಳ ಬಗ್ಗೆ ಮಾತನಾಡಿದ ಅವರು, ಅದು ನಗರದ ನೋಟವನ್ನೇ ವರ್ಧಿಸಿದೆ ಎಂದು ತಿಳಿಸಿದರು. ಈ ನಡೆಯು ಪ್ರವಾಸೋದ್ಯಮ ಪರಿವರ್ತನೆಯ ನಿರಂತರ ಪ್ರಯತ್ನ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಸಾರಾನಾಥ್ ನಲ್ಲಿ ಆಗಿರುವ ಕಾಮಗಾರಿಗಳನ್ನೂ ಉಲ್ಲೇಖಿಸಿದರು. 

ರಸ್ತೆ, ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳನ್ನು ವಾರಾಣಸಿಯ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಈಗ ಕಾಶಿ ಆರೋಗ್ಯದ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು. ಇಂದು ಉದ್ಘಾಟನೆಗೊಂಡ ಅಟಲ್ ಇಂಕ್ಯುಬೇಷನ್ ಕೇಂದ್ರದ ಪ್ರಸ್ತಾಪ ಮಾಡಿದ ಅವರು, ನವೋದ್ಯಮಗಳು ಇದರೊಂದಿಗೆ ಈಗಾಗಲೇ ಸಂಪರ್ಕ ಹೊಂದುತ್ತಿವೆ ಎಂದರು. ಕೊಳವೆ ಮಾರ್ಗದಲ್ಲಿ ಅಡುಗೆ ಅನಿಲ ದೊರೆಯುತ್ತಿರುವ ದೇಶದ ಆಯ್ದ ನಗರಗಳಲ್ಲಿ ವಾರಾಣಸಿಯೂ ಒಂದಾಗಿದೆ ಎಂದು ಅವರು ಹೇಳಿದರು. 

ನಗರವನ್ನು ಪರಿವರ್ತನೆ ಮಾಡುವ ಸಮಾನ ಸಂಕಲ್ಪದ ಸಾಕಾರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವಂತೆ ವಾರಾಣಸಿಯ ಜನತೆಗೆ ಪ್ರಧಾನಮಂತ್ರಿ ಕರೆ ನೀಡಿದರು. 
 

***



(Release ID: 1546699) Visitor Counter : 78