ಪ್ರಧಾನ ಮಂತ್ರಿಯವರ ಕಛೇರಿ

ಮಾನ್ಯ ಪ್ರಧಾನಮಂತ್ರಿಗಳು ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷರಿಂದ ನೋಯಿಡಾದಲ್ಲಿ ಮೊಬೈಲ್ ಉತ್ಪಾದನಾ ಘಟಕಕ್ಕೆ ಚಾಲನೆ.

Posted On: 09 JUL 2018 6:13PM by PIB Bengaluru

ಮಾನ್ಯ ಪ್ರಧಾನಮಂತ್ರಿಗಳು ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷರಿಂದ ನೋಯಿಡಾದಲ್ಲಿ ಮೊಬೈಲ್ ಉತ್ಪಾದನಾ ಘಟಕಕ್ಕೆ ಚಾಲನೆ. 
 

ಮಾನ್ಯ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರು ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷರಾದ ಶ್ರೀ ಮೂನ್ ಜೇ-ಇನ್ ಅವರು ನೋಯಿಡಾದಲ್ಲಿ ಇಂದು ಸ್ಯಾಮ್ಸಂಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ನ ಬೃಹತ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಪ್ರಧಾನಮಂತ್ರಿಗಳು ``ಭಾರತವನ್ನು ಜಾಗತಿಕ ಮಟ್ಟದ ಉತ್ಪಾದನಾ ಆಡೊಂಬೊಲವನ್ನಾಗಿ ಮಾಡುವ ನಮ್ಮ ಪಯಣದಲ್ಲಿ ಇದೊಂದು ವಿಶೇಷವಾದ ಸಂದರ್ಭವಾಗಿದೆ. ಈ ಉತ್ಪಾದನಾ ಘಟಕಕ್ಕೆ ಹೂಡಿರುವ 5,000 ಕೋಟಿ ರೂ.ಗಳಷ್ಟು ಬಂಡವಾಳವು ಕೇವಲ ಸ್ಯಾಮ್ಸಂಗ್ನ ವ್ಯಾಪಾರ-ವಹಿವಾಟನ್ನಷ್ಟೇ ವೃದ್ಧಿಸುವುದಿಲ್ಲ. ಬದಲಿಗೆ, ಭಾರತ ಮತ್ತು ದಕ್ಷಿಣ ಕೊರಿಯಾದ ಸಂದರ್ಭಗಳ ದೃಷ್ಟಿಯಿಂದಲೂ ಇದಕ್ಕೆ ತುಂಬಾ ಮಹತ್ತ್ವವಿದೆ,'' ಎಂದು ಬಣ್ಣಿಸಿದರು. 

``ಡಿಜಿಟಲ್ ತಂತ್ರಜ್ಞಾನವು ಇಂದು ನಮ್ಮೆಲ್ಲರ ಜೀವನವನ್ನು ಸುಗಮ ಮತ್ತು ಸರಳಗೊಳಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದರಿಂದಾಗಿ ಇಂದು ಸೇವೆಗಳನ್ನು ಕ್ಷಿಪ್ರವಾಗಿಯೂ ಪಾರದರ್ಶಕವಾಗಿಯೂ ಪೂರೈಸುವುದು ಸಾಧ್ಯವಾಗುತ್ತಿದೆ. ದೇಶಾದ್ಯಂತ ಸ್ಮಾರ್ಟ್ ಫೋನುಗಳು, ಬ್ರಾಡ್ ಬ್ಯಾಂಡ್ ಮತ್ತು ಡೇಟಾ ಸಂಪರ್ಕವನ್ನು ವ್ಯಾಪಕಗೊಳಿಸಲಾಗುತ್ತಿದ್ದು, ಈ ಮೂರು ಅಂಶಗಳು ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿಯ ಸಂಕೇತಗಳಾಗಿವೆ,'' ಎಂದರು. ಇದಕ್ಕೆ ಪೂರಕವಾಗಿ ಅವರು, ಕೇಂದ್ರ ಸರಕಾರವು ರೂಪಿಸಿರುವ ಇ-ಮಾರುಕಟ್ಟೆ, ದಿನದಿಂದ ದಿನಕ್ಕೆ ವರ್ಧಿಸುತ್ತಿರುವ ಡಿಜಿಟಲ್ ವಹಿವಾಟು, ಭೀಮ್ ಆಪ್ ಮತ್ತು ರೂಪೇ ಕಾರ್ಡುಗಳ ಬಗ್ಗೆಯೂ ವಿವರಿಸಿದರು. 

``ಕೇಂದ್ರ ಸರಕಾರದ ಮಹತ್ತ್ವಾಕಾಂಕ್ಷಿ ಯೋಜನೆಯಾದ `ಮೇಕ್ ಇನ್ ಇಂಡಿಯಾ' ಕೇವಲ ಆರ್ಥಿಕ ದೃಷ್ಟಿಯನ್ನು ಹೊಂದಿರುವ ಕ್ರಮವಷ್ಟೆ ಅಲ್ಲ. ಬದಲಿಗೆ, ಭಾರತದೊಂದಿಗೆ ಸ್ನೇಹಶೀಲವಾಗಿರುವ ದಕ್ಷಿಣ ಕೊರಿಯಾದಂತಹ ದೇಶಗಳೊಂದಿಗೆ ಇನ್ನೂ ಉತ್ತಮ ಬಾಂಧವ್ಯವನ್ನು ಹೊಂದುವ ನಿರ್ಣಯವೂ ಆಗಿದೆ. ಇಂದು ಇಡೀ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಮುಕ್ತ ಆಹ್ವಾನವಿದೆ. ಹೀಗಿರುವಾಗ ಭಾರತದಲ್ಲಿ ಬೇರೂರಿರುವ ಪಾರದರ್ಶಕ ವಾಣಿಜ್ಯ ಸಂಸ್ಕೃತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಭಾರತದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಹೊಸ ಮಧ್ಯಮ ವರ್ಗದ ಸೃಷ್ಟಿಯಿಂದಾಗಿ ಬಂಡವಾಳ ಹೂಡಿಕೆಗೆ ಅಪಾರ ಅವಕಾಶಗಳು ಉದ್ಭವಿಸಿವೆ,'' ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಪಾದಿಸಿದರು. 

``ನಾಲ್ಕು ವರ್ಷಗಳ ಹಿಂದೆ ನಮ್ಮಲ್ಲಿ ಕೇವಲ ಎರಡು ಮೊಬೈಲ್ ಉತ್ಪಾದನಾ ಘಟಕಗಳಿದ್ದವು. ಆದರೆ, ಇವುಗಳ ಸಂಖ್ಯೆ ಈಗ 120ಕ್ಕೇರಿದೆ. ಭಾರತವು ಈಗ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಇಡೀ ಜಗತ್ತಿಗೇ ದ್ವಿತೀಯ ಸ್ಥಾನದಲ್ಲಿದೆ. ಇದರಿಂದಾಗಿ ಲಕ್ಷಾಂತರ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ,'' ಎಂದು ಪ್ರಧಾನಮಂತ್ರಿಗಳು ನುಡಿದರು. 

``ಇಂದು ಲೋಕಾರ್ಪಣೆಗೊಂಡಿರುವ ಈ ಉತ್ಪಾದನಾ ಘಟಕದಲ್ಲಿ ಕೊರಿಯಾದ ತಂತ್ರಜ್ಞಾನ ಮತ್ತು ಭಾರತದ ಉತ್ಪಾದನೆ ಹಾಗೂ ಸಾಫ್ಟ್ ವೇರ್ ಪರಿಣತಿ ಮೇಳೈಸಿದ್ದು, ಇದರಿಂದಾಗಿ ಇಡೀ ಜಗತ್ತಿಗೆ ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನುಗಳು ಸಿಗಲಿವೆ. ಇದು ಎರಡೂ ದೇಶಗಳ ಶಕ್ತಿಯಾಗಿದ್ದು, ಪರಸ್ಪರ ಹಂಚಿಕೊಂಡಿರುವ ದೃಷ್ಟಿಕೋನವಾಗಿದೆ,'' ಎಂದು ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಹೇಳಿದರು. 
 

***



(Release ID: 1538346) Visitor Counter : 74