ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಕಾನೂನು ದಿನ-2017ರ ಸಮಾರೋಪ ಸಮಾರಂಭದಲ್ಲಿ ಪ್ರಧಾನಿಯವರ ಭಾಷಣ

Posted On: 26 NOV 2017 7:21PM by PIB Bengaluru

ರಾಷ್ಟ್ರೀಯ ಕಾನೂನು ದಿನ-2017ರ ಸಮಾರೋಪ ಸಮಾರಂಭದಲ್ಲಿ ಪ್ರಧಾನಿಯವರ ಭಾಷಣ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರೀಯ ಕಾನೂನು ದಿನ -2017 ಅಂಗವಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.

ಸಂವಿಧಾನವು ನಮ್ಮ ಪ್ರಜಾಪ್ರಭುತ್ವ ಸ್ವರೂಪದ ಆತ್ಮ ಎಂದು ಅವರು ಬಣ್ಣಿಸಿದರು. ಈ ದಿನವು ಸಂವಿಧಾನ ನಿರ್ಮಾತೃಗಳಿಗೆ ಗೌರವ ನಮನ ಸಲ್ಲಿಸುವ ದಿನವಾಗಿದೆ ಎಂದು ಅವರು ಹೇಳಿದರು. ಸಂವಿಧಾನವು ಪರೀಕ್ಷೆಯ ಸಮಯದಲ್ಲೂ ಸ್ಥಿರವಾಗಿ ನಿಂತಿದೆ ಮತ್ತು ಅದು ನೇತ್ಯಾತ್ಮಕ ಧೋರಣೆ ಹೊಂದಿರುವವರು ತಪ್ಪು ಎಂಬುದನ್ನು ಸಾಬೀತು ಪಡಿಸಿದೆ ಎಂದು ಹೇಳಿದರು.

ಪ್ರಧಾನಿಯವರು ತಮ್ಮ ಭಾಷಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಡಾ. ಸಚ್ಚಿದಾನಂದ ಸಿನ್ಹಾ, ಡಾ. ರಾಜೇಂದ್ರ ಪ್ರಸಾದ್ ಮತ್ತು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿದರು. ಈ ಹೇಳಿಕೆಗಳನ್ನು ಅವರು ಸಂವಿಧಾನ ಮತ್ತು ಆಡಳಿತದ ಹಲವು ಮಹತ್ವದ ಅಂಶಗಳನ್ನು ಒತ್ತಿ ಹೇಳಲು ಬಳಸಿದರು. ಇವುಗಳಲ್ಲಿ ಸಂವಿಧಾನದ ದೀರ್ಘಾಯುಷ್ಯ (ಅಥವಾ ಅಮರತ್ವ), ಅದರ ಕಾರ್ಯಸಾಧ್ಯತೆ ಮತ್ತು ನಮ್ಯತೆಗಳೂ ಸೇರಿದ್ದವು.

ಸಂವಿಧಾನವು ನಮಗೆ ರಕ್ಷಕನಂತಿದೆ ಎಂದು ಪ್ರಧಾನಿ ಹೇಳಿದರು. ನಾವು, ಜನರು ನಮ್ಮ ರಕ್ಷಕ – ಸಂವಿಧಾನ-ದ ಆಶಯದಂತೆ ನಡೆಯಬೇಕು ಎಂದರು.  ದೇಶದ ಅಗತ್ಯಗಳು ಮತ್ತು ಅದು ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ವಿವಿಧ ಆಡಳಿತ ಸಂಸ್ಥೆಗಳು ಪರಸ್ಪರ ಬೆಂಬಲ ನೀಡಬೇಕು ಮತ್ತು ಬಲಪಡಿಸಬೇಕು ಎಂದರು ಮುಂದಿನ ಐದು ವರ್ಷಗಳಲ್ಲಿ ನಾವು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಿನಂತೆ ನವ ಭಾರತ ನಿರ್ಮಾಣಕ್ಕೆ ನಮ್ಮ ಶಕ್ತಿಯನ್ನು ಸಂಘಟಿಸಿ ಹರಿಸಬೇಕು ಎಂದರು.

ಸಂವಿಧಾನವನ್ನು ಸಾಮಾಜಿಕ ದಸ್ತಾವೇಜು ಎಂದು ಬಣ್ಣಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದರು. ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ಉದಯದ ಕಾಲದಲ್ಲಿ ಗುರುತಿಸಲ್ಪಟ್ಟ ದೌರ್ಬಲ್ಯಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡದಿರುವುದು ನಿಜಕ್ಕೂ ದುರದೃಷ್ಟಕರವೆಂದು ಅವರು ಹೇಳಿದರು. ಭಾರತವು ಸಂಪೂರ್ಣವಾಗಿ ಆತ್ಮ ವಿಶ್ವಾಸ ಹೊಂದಿರುವ ಪ್ರಸಕ್ತ ಸಮಯವನ್ನು ಸುವರ್ಣಯುಗ ಎಂದು ಕರೆಯಬಹುದು ಎಂದು ಅವರು ಹೇಳಿದರು. ಈ ರಚನಾತ್ಮಕ ವಾತಾವರಣವನ್ನು ನವ ಭಾರತ ನಿರ್ಮಾಣದತ್ತ ಸಾಗಲು ತ್ವರಿತವಾಗಿ ಬಳಸಿಕೊಳ್ಳಬೇಕು ಎಂದರು.

"ಸುಲಭವಾಗಿ ಜೀವಿಸುವ" ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಿ, ಸರ್ಕಾರದ ಪಾತ್ರ ನಿಯಂತ್ರಣಕ್ಕಿಂತ ಮಿಗಿಲಾಗಿ ಅನಕೂಲಕರವಾಗಿರಬೇಕು ಎಂದು ಹೇಳಿದರು. "ಸುಲಭವಾಗಿ ಜೀವಿಸುವ" ಕುರಿತಂತೆ ಹಲವು ಉದಾಹರಣೆಗಳನ್ನು ನೀಡಿದ ಪ್ರಧಾನಿ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ತ್ವರಿತವಾಗಿ ಆದಾಯ ತೆರಿಗೆ ಮರು ಪಾವತಿ, ತ್ವರಿತ ಪಾಸ್ ಪೋರ್ಟ್ ನೀಡಿಕೆ ಇತ್ಯಾದಿ ಜಾರಿಗೆ ತರಲಾಗಿದೆ ಎಂದರು. ಈ ಉಪಕ್ರಮಗಳು ಸಮಾಜದ ಎಲ್ಲ ವರ್ಗದ ಮೇಲೂ ಧನಾತ್ಮಕ ಪರಿಣಾಮ ಬೀರಿದೆ ಎಂದರು. ಸುಮಾರು 1200 ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದರು."ಸುಲಭವಾಗಿ ಜೀವಿಸುವುವುದು ಸುಗಮ ವ್ಯಾಪಾರದ ಮೇಲೂ ಧನಾತ್ಮಕ ಪರಿಣಾಮ ಬೀರಿದೆ ಎಂದರು. ಲೋಕ ಅದಾಲತ್ ಗಳು ನ್ಯಾಯಾಂಗದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದರು. ಸುಲಭವಾಗಿ ನ್ಯಾಯ ಪಡೆಯುವ ಕುರಿತಂತೆ ಕೈಗೊಂಡಿರುವ ಸುಧಾರಣೆಗಳ ಬಗ್ಗೆಯೂ ಅವರು ಒತ್ತಿ ಹೇಳಿದರು.

ಸತತ ಚುನಾವಣೆಗಳಿಂದ ಮತ್ತು ಸಂಬಂಧಿತ ವಿಚಾರಗಳು ಅಂದರೆ, ಭದ್ರತಾ ಪಡೆಗಳು ಮತ್ತು ನಾಗರಿಕ ಸಿಬ್ಬಂದಿಯನ್ನು ಅದಕ್ಕೆ ನಿಯೋಜಿಸುವುದರಿಂದ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಆಗುತ್ತಿರುವ ಪರಿಣಾಮಗಳಿಂದ  ದೇಶದ ಬೊಕ್ಕಸಕ್ಕೆ ಆಗುತ್ತಿರುವ ಅಗಾಧ ವೆಚ್ಚದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳ ಕುರಿತಂತೆ ರಚನಾತ್ಮಕ ಚರ್ಚೆಗೆ ಕರೆ ನೀಡಿದರು.

ಸಂವಿಧಾನದ ಬೆನ್ನೆಲುಬಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ನಡುವೆ ಸಮತೋಲನದ ಅಗತ್ಯದ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು.  ಈ ನಿಟ್ಟಿನಲ್ಲಿ ಪ್ರಧಾನಿಯವರು ಸರ್ವೋನ್ನತ ನ್ಯಾಯಾಲಯದ ತೀರ್ಪುಗಳನ್ನೂ ಉಲ್ಲೇಖಿಸಿದರು.


(Release ID: 1510960) Visitor Counter : 164


Read this release in: English , Gujarati , Tamil