• Skip to Content
  • Sitemap
  • Advance Search
Social Welfare

ಐಎಫ್‍ಎಫ್‍ಐ: ಫ್ರೇಮ್‌ಗಳಲ್ಲಿ ಬರೆದ ಒಂದು ಪಯಣ

Posted On: 15 NOV 2025 3:47PM

ಪ್ರಮುಖಾಂಶಗಳು

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2025 ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿದೆ, ಇದು 1952 ರಿಂದ ದಕ್ಷಿಣ ಏಷ್ಯಾದ ಏಕೈಕ ಎಫ್‍ಐಎಪಿಎಫ್‍-ಮಾನ್ಯತೆ ಪಡೆದ ಸ್ಪರ್ಧಾತ್ಮಕ ಚಲನಚಿತ್ರೋತ್ಸವದ ಪರಂಪರೆಯನ್ನು ಮುಂದುವರೆಸುತ್ತದೆ.

ಈ ವರ್ಷದ ಅಂತಾರಾಷ್ಟ್ರೀಯ ಸಹಯೋಗಗಳಲ್ಲಿ ಜಪಾನ್ (ಕಂಟ್ರಿ ಆಫ್ ಫೋಕಸ್), ಸ್ಪೇನ್ (ಪಾಲುದಾರ ದೇಶ) ಮತ್ತು ಆಸ್ಟ್ರೇಲಿಯಾ (ಸ್ಪಾಟ್ಲೈಟ್ ದೇಶ) ಪ್ರಮುಖವಾಗಿವೆ.

ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು, ಶತಾಬ್ದಿಯ ಗೌರವಾರ್ಪಣೆಗಳು, ನಿರ್ದಿಷ್ಟ ಜಾಗತಿಕ ವಿಭಾಗಗಳು, ಮೊದಲ ಬಾರಿಗೆ ಇಫಿಸ್ಟಾ (ಐಎಫ್ಎಫ್ESTA), ವಿಸ್ತರಿಸಿದ ವೇವ್ಸ್ ಫಿಲ್ಮ್ ಬಜಾರ್ ಮತ್ತು ಮೊದಲಿನಿಂದಲೇ ಆರಂಭವಾಗುವ ಸಿನಿಮಾ ಎಐ ಹ್ಯಾಕಥಾನ್ ಪ್ರಮುಖ ಆಕರ್ಷಣೆಗಳಾಗಿವೆ.

ಐಎಫ್‍ಎಫ್‍ಐ 2025ರಲ್ಲಿ 81 ದೇಶಗಳ 240 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ, ಇದು ಉತ್ಸವದ ವ್ಯಾಪಕ ಜಾಗತಿಕ ಭಾಗವಹಿಸುವಿಕೆಯನ್ನು ಬಿಂಬಿಸುತ್ತದೆ.

ಪರಿಚಯ

1952 ರಿಂದ, ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐಎಫ್‍ಎಫ್‍ಐ) ಸ್ಪರ್ಧಾತ್ಮಕ ಚಲನಚಿತ್ರಗಳ ವಿಭಾಗದಲ್ಲಿ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ಸ್ (ಎಫ್ಐಎಪಿಎಫ್‍) ನಿಂದ ಮಾನ್ಯತೆ ಪಡೆದ ದಕ್ಷಿಣ ಏಷ್ಯಾದ ಏಕೈಕ ಚಲನಚಿತ್ರೋತ್ಸವವಾಗಿ ನಿಂತಿದೆ. ಇದು ಜಾಗತಿಕ ಸಿನಿಮಾ ನಕ್ಷೆಯಲ್ಲಿ ಅದರ ಸ್ಥಾನಮಾನವನ್ನು ಸೂಚಿಸುತ್ತದೆ. ವಿಶ್ವದ ಅತ್ಯುತ್ತಮ ಚಲನಚಿತ್ರಗಳನ್ನು ಭಾರತೀಯ ಪ್ರೇಕ್ಷಕರಿಗೆ ತರುವ ಪ್ರಯತ್ನವಾಗಿ ಪ್ರಾರಂಭವಾದ ಈ ಉತ್ಸವವು, ದಶಕಗಳಿಂದ ಖಂಡಾಂತರಗಳ ಚಲನಚಿತ್ರ ನಿರ್ಮಾಪಕರು, ಸಿನಿಮಾ ಪ್ರೇಮಿಗಳು ಮತ್ತು ಸೃಜನಾತ್ಮಕ ವೃತ್ತಿಪರರಿಗೆ ಒಂದು ರೋಮಾಂಚಕ ಕೂಡುವ ತಾಣವಾಗಿ ಪರಿವರ್ತನೆಗೊಂಡಿದೆ.

ಈ ವರ್ಷ, ನವೆಂಬರ್ 20 ರಿಂದ 28 ರವರೆಗೆ ಗೋವಾದ ಹೃದಯಭಾಗದಲ್ಲಿ ಮತ್ತೊಂದು ಕ್ರಿಯಾತ್ಮಕ ಆವೃತ್ತಿಯನ್ನು ಜೀವಂತಗೊಳಿಸಲಾಗುತ್ತದೆ.

ತನ್ನ ಮೂಲಭೂತ ಸ್ವರೂಪದಲ್ಲಿ, ಸಂಸ್ಕೃತಿಗಳು ಒಂದಾದಾಗ ಉತ್ತಮ ಸಿನಿಮಾವು ಅಭಿವೃದ್ಧಿ ಹೊಂದುತ್ತದೆ ಎಂಬ ನಂಬಿಕೆಯನ್ನು ಐಎಫ್‍ಎಫ್‍ಐ ಸಾಕಾರಗೊಳಿಸುತ್ತದೆ. ಪ್ರತಿ ಆವೃತ್ತಿಯು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಮತ್ತು ವಿಶಿಷ್ಟ ಉದ್ಯಮ ತಜ್ಞರಿಂದ ಚಿಂತನಶೀಲವಾಗಿ ಸಂಗ್ರಹಿಸಲಾದ ವೈವಿಧ್ಯಮಯ ಚಲನಚಿತ್ರಗಳ ಆಯ್ಕೆಯನ್ನು ಒಟ್ಟುಗೂಡಿಸುತ್ತದೆ – ಈ ಮೂಲಕ ಕಲಾತ್ಮಕ ಶ್ರೇಷ್ಠತೆಗೆ ಉತ್ಸವವು ವಿಶ್ವಾಸಾರ್ಹ ವೇದಿಕೆಯಾಗಿ ಉಳಿದಿದೆ. ಇದರ ಅಂತಾರಾಷ್ಟ್ರೀಯ ಸಿನಿಮಾ ವಿಭಾಗವು, ವಿಶೇಷವಾಗಿ, ಸಂಪ್ರದಾಯಗಳನ್ನು ಪ್ರಶ್ನಿಸುವ ಮತ್ತು ಕಥೆ ಹೇಳುವ ಶೈಲಿಯನ್ನು ವಿಸ್ತರಿಸುವ ಕೃತಿಗಳನ್ನು ಪ್ರದರ್ಶಿಸುತ್ತದೆ, ಆ ವರ್ಷದ ಅತ್ಯಂತ ಮನಮೋಹಕ ಜಾಗತಿಕ ಧ್ವನಿಗಳನ್ನು ಪ್ರಸ್ತುತಪಡಿಸುವ ಐಎಫ್‍ಎಫ್‍ಐ ಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ಈ ಉತ್ಸವವು 2004ರಲ್ಲಿ ಗೋವಾದಲ್ಲಿ ತನ್ನ ಶಾಶ್ವತ ನೆಲೆಯನ್ನು ಕಂಡುಕೊಂಡಿತು. ಇದನ್ನು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‍ಎಫ್‍ಡಿಸಿ) ಮತ್ತು ಎಂಟರ್‌ಟೈನ್‌ಮೆಂಟ್ ಸೊಸೈಟಿ ಆಫ್ ಗೋವಾ (ಇಎಸ್‍ಜಿ) ಜಂಟಿಯಾಗಿ ಆಯೋಜಿಸುತ್ತವೆ. ಕರಾವಳಿ ಗೋವಾದ ರಮಣೀಯ ಹಿನ್ನೆಲೆಯಲ್ಲಿ, ಐಎಫ್‍ಎಫ್‍ಐ ನಿಜವಾಗಿಯೂ ವಿಶಿಷ್ಟವಾಗಲು ಕಾರಣವೆಂದರೆ ಅದರ ಅಂತರ್ಗತ ಸಾಂಸ್ಕೃತಿಕ ಮನೋಭಾವ. ಈ ಉತ್ಸವವು ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಭಾರತದ ವಿಶಾಲವಾದ ನೈತಿಕತೆಯನ್ನು ಪ್ರತಿಬಿಂಬಿಸುತ್ತದೆ—ವೈವಿಧ್ಯಮಯ ಸೃಷ್ಟಿಕರ್ತರು, ಪ್ರೇಕ್ಷಕರು ಮತ್ತು ಕಲಾತ್ಮಕ ಸಂಪ್ರದಾಯಗಳನ್ನು ಒಟ್ಟುಗೂಡಿಸುತ್ತದೆ. ಮಹಿಳಾ-ನೇತೃತ್ವದ ಸೃಜನಾತ್ಮಕ ತಂಡಗಳ ಹೆಚ್ಚುತ್ತಿರುವ ಭಾಗವಹಿಸುವಿಕೆ, ಯುವ ವೃತ್ತಿಪರರ ಹೆಚ್ಚುತ್ತಿರುವ ಉಪಸ್ಥಿತಿ, ಅಥವಾ ಬುಡಕಟ್ಟು ಮತ್ತು ಸ್ಥಳೀಯ ನಿರೂಪಣೆಗಳ ಪ್ರಾತಿನಿಧ್ಯ ಇರಲಿ, ದೇಶದ ಆಳ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಧ್ವನಿಗಳಿಗೆ ಐಎಫ್‍ಎಫ್‍ಐ ಅವಕಾಶ ನೀಡುತ್ತದೆ. ಈ ಅಂತರ್ಗತ ಭಾವನೆಯು ಸೃಜನಾತ್ಮಕ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ಸಂಸ್ಕೃತಿ ಮತ್ತು ಅವಕಾಶವನ್ನು ಎಲ್ಲರಿಗೂ ಪ್ರವೇಶಿಸುವಂತೆ ಮಾಡುವ ಭಾರತದ ಬದ್ಧತೆಯನ್ನು ಪ್ರತಿಧ್ವನಿಸುತ್ತದೆ.

ಐಎಫ್‍ಎಫ್‍ಐ 2025: ನಾವೀನ್ಯತೆ, ಅಂತರ್ಗತ ಭಾವನೆ ಮತ್ತು ಜಾಗತಿಕ ಸಿನಿಮಾ ವೈಭವ

ಈ ವರ್ಷ, ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿರುವ 56 ನೇ ಅಂತಾರಾಷ್ಟ್ರೀಐ ಚಲನಚಿತ್ರೋತ್ಸವವು ಐಎಫ್‍ಎಫ್‍ಐ ಯ ಬೆಳೆಯುತ್ತಿರುವ ಜಾಗತಿಕ ಸ್ಥಾನಮಾನವನ್ನು ಪ್ರತಿಬಿಂಬಿಸುವ ವಿಸ್ತಾರವಾದ ಕಾರ್ಯಕ್ರಮವನ್ನು ಪ್ರದರ್ಶಿಸುತ್ತದೆ.

  • ಈ ಆವೃತ್ತಿಯು ಜಪಾನ್ನೊಂದಿಗೆ ಕಂಟ್ರಿ ಆಫ್ ಫೋಕಸ್ ಆಗಿ ಉತ್ಸವದ ಅಂತಾರಾಷ್ಟ್ರೀಐ ಸಹಭಾಗಿತ್ವವನ್ನು ಗಾಢಗೊಳಿಸುತ್ತದೆ, ಇದು ವಿವಿಧ ಪ್ರಕಾರಗಳು ಮತ್ತು ರೂಪಗಳಲ್ಲಿ ಆರು ಸಮಕಾಲೀನ ಜಪಾನೀ ಚಲನಚಿತ್ರಗಳ ವಿಹಂಗಮ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತದೆ.
  • ಸ್ಪೇನ್ ಪಾಲುದಾರ ದೇಶವಾಗಿ ಸೇರಿಕೊಳ್ಳುತ್ತದೆ.
  • ಆಸ್ಟ್ರೇಲಿಯಾ ಸ್ಪಾಟ್ಲೈಟ್ ದೇಶವಾಗಿ ಉತ್ಸವವನ್ನು ಪ್ರವೇಶಿಸುತ್ತದೆ. ಈ ಪ್ರತಿಯೊಂದು ದೇಶವೂ ಜಾಗತಿಕ ಸಂವಾದವನ್ನು ಉತ್ಕೃಷ್ಟಗೊಳಿಸುವ ವಿಶೇಷ ಪ್ಯಾಕೇಜ್‌ಗಳು, ಸಾಂಸ್ಥಿಕ ಸಹಯೋಗಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತರಲಿವೆ.

ಕಾರ್ಯಕ್ರಮದ ಪ್ರಮಾಣ, ಪ್ರಥಮ ಪ್ರದರ್ಶನಗಳು ಮತ್ತು ಆಯ್ಕೆಗಳು

ಐಎಫ್‍ಎಫ್‍ಐ 2025, 81 ದೇಶಗಳ 240 ಕ್ಕೂ ಹೆಚ್ಚು ಚಲನಚಿತ್ರಗಳ ಅಸಾಧಾರಣ ಶ್ರೇಣಿಯನ್ನು ಪ್ರಸ್ತುತಪಡಿಸುತ್ತದೆ. ಇದರಲ್ಲಿ 13 ವಿಶ್ವ ಪ್ರಥಮ ಪ್ರದರ್ಶನಗಳು, 5 ಅಂತಾರಾಷ್ಟ್ರೀ ಪ್ರಥಮ ಪ್ರದರ್ಶನಗಳು, ಮತ್ತು 44 ಏಷ್ಯಾ ಪ್ರಥಮ ಪ್ರದರ್ಶನಗಳು ಸೇರಿವೆ. 127 ದೇಶಗಳಿಂದ ಬಂದಿರುವ 2,314 ಅರ್ಜಿಗಳ ದಾಖಲೆಯು ಉತ್ಸವದ ಹೆಚ್ಚುತ್ತಿರುವ ಜಾಗತಿಕ ಅನುರಣನವನ್ನು ಪ್ರತಿಬಿಂಬಿಸುತ್ತದೆ.

ಉದ್ಘಾಟನಾ ಚಿತ್ರ: ಬರ್ಲಿನಾಲೆ 2025ರಲ್ಲಿ ಸಿಲ್ವರ್ ಬೇರ್ ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿ ವಿಜೇತರಾದ ಬ್ರೆಜಿಲಿಯನ್ ನಿರ್ದೇಶಕ ಗೇಬ್ರಿಯಲ್ ಮಸ್ಕರೋ ಅವರ 'ದಿ ಬ್ಲೂ ಟ್ರಯಲ್' ಚಿತ್ರವು ಈ ಆವೃತ್ತಿಯ ಬೋಲ್ಡ್ ಕಥಾ ನಿರೂಪಣೆ ಮತ್ತು ಸಿನಿಮೀಯ ಮಹತ್ವಾಕಾಂಕ್ಷೆಯ ಸ್ವರವನ್ನು ಹೊಂದಿಸಲಿದೆ.

ಗಾಲಾ ಪ್ರಥಮ ಪ್ರದರ್ಶನಗಳು: ಈ ವಿಭಾಗದಲ್ಲಿ 18 ಚಲನಚಿತ್ರಗಳನ್ನು ಪ್ರಸ್ತುತಪಡಿಸಲಾಗುವುದು. ಇದರಲ್ಲಿ 13 ವಿಶ್ವ ಪ್ರಥಮ ಪ್ರದರ್ಶನಗಳು, 2 ಏಷ್ಯಾ ಪ್ರಥಮ ಪ್ರದರ್ಶನಗಳು, 1 ಭಾರತ ಪ್ರಥಮ ಪ್ರದರ್ಶನ ಮತ್ತು 2 ವಿಶೇಷ ಪ್ರದರ್ಶನಗಳು ಇರಲಿವೆ. ರೆಡ್ ಕಾರ್ಪೆಟ್‌ನಲ್ಲಿ ಗಣ್ಯ ಕಲಾವಿದರು ಮತ್ತು ಚಲನಚಿತ್ರ ನಿರ್ಮಾಪಕರ ವಿಶಿಷ್ಟ ತಂಡಕ್ಕೆ ಸ್ವಾಗತವಿರುತ್ತದೆ.

ಅಂತಾರಾಷ್ಟ್ರೀಯ ಸ್ಪರ್ಧೆಗಳು ಮತ್ತು ಪ್ರಶಸ್ತಿಗಳು

ಮೂರು ಪ್ರಮುಖ ಅಂತಾರಾಷ್ಟ್ರೀಐ ಸ್ಪರ್ಧೆಗಳು ಐದು ಖಂಡಗಳ 32 ಚಲನಚಿತ್ರಗಳನ್ನು ಒಳಗೊಂಡಿರುತ್ತವೆ, ಈ ವರ್ಷದ ಅತ್ಯಂತ ಮೆಚ್ಚುಗೆ ಪಡೆದ ಕೆಲವು ಚಿತ್ರಗಳನ್ನು ಮೊದಲ ಬಾರಿಗೆ ಭಾರತೀಯ ಪ್ರೇಕ್ಷಕರಿಗೆ ತರಲಿವೆ. ಐಎಫ್‍ಎಫ್‍ಐ ಯು ಕ್ಯಾನೆಸ್, ಬರ್ಲಿನಾಲೆ, ವೆನಿಸ್, ಲೊಕಾರ್ನೋ, ಟಿಐಎಫ್ಎಫ್, ಬುಸಾನ್ ಮತ್ತು ಐಎಫ್ಎಫ್ಆರ್‌ನಿಂದ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಸಹ ಪ್ರಸ್ತುತಪಡಿಸಲಿದೆ, ಇದು ಅತ್ಯುತ್ತಮ ಸಮಕಾಲೀನ ಸಿನಿಮಾಗೆ ಭಾರತದ ಹೆಬ್ಬಾಗಿಲಾಗಿ ತನ್ನ ಪಾತ್ರವನ್ನು ಬಲಪಡಿಸುತ್ತದೆ.

ಸಂಗ್ರಹಿಸಲಾದ ವಿಭಾಗಗಳು

ಈ ವರ್ಷದ ಕಾರ್ಯಕ್ರಮವು ಒಂಬತ್ತು ಸಂಗ್ರಹಿಸಲಾದ ವಿಭಾಗಗಳನ್ನು ಒಳಗೊಂಡಿದೆ: ಡಾಕ್ಯು-ಮೊಂಟಾಜ್, ಫ್ರಂ ದಿ ಫೆಸ್ಟಿವಲ್ಸ್, ರೈಸಿಂಗ್ ಸ್ಟಾರ್ಸ್, ಮಿಷನ್ ಲೈಫ್, ಪ್ರಾಯೋಗಿಕ ಚಲನಚಿತ್ರಗಳು, ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು, ಮ್ಯಾಕಾಬ್ರೆ ಡ್ರೀಮ್ಸ್, ಯುನಿಸೆಫ್ ಮತ್ತು ಸಿನಿಮಾ ಆಫ್ ದಿ ವರ್ಲ್ಡ್. ಒಟ್ಟಾರೆಯಾಗಿ, ಐಎಫ್‍ಎಫ್‍ಐ ಯು ಅಂತಾರಾಷ್ಟ್ರೀಯ ಸ್ಪರ್ಧೆ, ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ ಮತ್ತು ಐಸಿಎಫ್‍ಟಿ-ಯುನೆಸ್ಕೋ ಗಾಂಧಿ ಪದಕ ಸೇರಿದಂತೆ 15 ಸ್ಪರ್ಧಾತ್ಮಕ ಮತ್ತು ಸಂಗ್ರಹಿಸಲಾದ ವಿಭಾಗಗಳನ್ನು ಪ್ರಸ್ತುತಪಡಿಸಲಿದೆ.

ಶತಮಾನದ ಗೌರವಗಳು

ಭಾರತೀಯ ಸಿನಿಮಾದ ಕೇಂದ್ರ ಪರಂಪರೆಯನ್ನು ಆಚರಿಸುತ್ತಾ, ಐಎಫ್‍ಎಫ್‍ಐ 2025 ಈ ಕೆಳಗಿನವರ ಜನ್ಮ ಶತಮಾನೋತ್ಸವವನ್ನು ಗೌರವಿಸಲಿದೆ: ಗುರು ದತ್, ರಾಜ್ ಖೋಸ್ಲಾ, ಋತ್ವಿಕ್ ಘಟಕ್, ಪಿ. ಭಾನುಮತಿ, ಭೂಪೇನ್ ಹಜಾರಿಕಾ ಮತ್ತು ಸಲೀಲ್ ಚೌಧರಿ. 'ಮುಸಾಫಿರ್' ಮತ್ತು 'ಸುಬರ್ಣರೇಖಾ' ದಂತಹ ಪುನಃಸ್ಥಾಪಿಸಲಾದ ಮೇರುಕೃತಿಗಳು ಪ್ರೇಕ್ಷಕರಿಗೆ ಸಿನಿಮೀಯ ಪರಂಪರೆಯ ಅಪೂರ್ವ ಅನುಭವವನ್ನು ನೀಡಲಿವೆ.

ರಜನಿಕಾಂತ್ ಅವರ ಸುವರ್ಣ ಮಹೋತ್ಸವ

ದಂತಕಥೆಯ ನಟ ರಜನಿಕಾಂತ್ ಅವರು ಸಿನಿಮಾದಲ್ಲಿ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಐಎಫ್‍ಎಫ್‍ಐ 2025 ಅವರನ್ನು ಗೌರವಿಸಲಿದೆ. ಇದು ಭಾರತೀಯ ಚಲನಚಿತ್ರ ಸಂಸ್ಕೃತಿಯ ಮೇಲೆ ಅವರ ಶಾಶ್ವತ ಪ್ರಭಾವವನ್ನು ಆಚರಿಸುವ ಒಂದು ಮೈಲಿಗಲ್ಲಾಗಿದೆ. ಅವರ ವಿಶಿಷ್ಟ ಕಾರ್ಯ, ವ್ಯಾಪಕ ಜನಪ್ರಿಯತೆ ಮತ್ತು ದಶಕಗಳಾದ್ಯಂತ ಭಾರತೀಯ ಕಥಾ ನಿರೂಪಣೆಯನ್ನು ರೂಪಿಸುವಲ್ಲಿನ ಅವರ ಕೊಡುಗೆಯನ್ನು ಗುರುತಿಸಿ ಸಮಾರೋಪ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗುತ್ತದೆ.

ಇಂಡಿಯನ್ ಪನೋರಮಾ ಮತ್ತು ಹೊಸ ವ್ಯಾಪ್ತಿಗಳು

ಇಂಡಿಯನ್ ಪನೋರಮಾ 2025ರಲ್ಲಿ 25 ಫೀಚರ್ ಚಲನಚಿತ್ರಗಳು, 20 ನಾನ್-ಫೀಚರ್ ಚಲನಚಿತ್ರಗಳು ಮತ್ತು 5 ಚೊಚ್ಚಲ ಫೀಚರ್ ಚಲನಚಿತ್ರಗಳನ್ನು ಪ್ರಸ್ತುತಪಡಿಸಲಾಗುತ್ತದೆ. 'ಅಮರನ್' (ತಮಿಳು) ಉದ್ಘಾಟನಾ ಫೀಚರ್ ಚಿತ್ರವಾಗಿದ್ದರೆ, 'ಕಕೋರಿ' ಉದ್ಘಾಟನಾ ನಾನ್-ಫೀಚರ್ ಚಿತ್ರವಾಗಿದೆ.

ಹೊಸ ವ್ಯಾಪ್ತಿಗಳು: ವಿಶೇಷವಾದ 'ಹೊಸ ವ್ಯಾಪ್ತಿಗಳು' (ನ್ಯೂ ಹಾರಿಜಾನ್) ವಿಭಾಗವು ತಮ್ಮ ಹೊಸ ಸಿನಿಮೀಯ ವಿಧಾನಗಳಿಗಾಗಿ ಆಯ್ಕೆಯಾದ ಐದು ಸಂಗ್ರಹಿಸಲಾದ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ.

ಮಹಿಳೆಯರು, ಚೊಚ್ಚಲ ಧ್ವನಿಗಳು ಮತ್ತು ಉದಯೋನ್ಮುಖ ಪ್ರತಿಭೆ: ಈ ವರ್ಷವೂ ಅಂತರ್ಗತ ಭಾವನೆ ಐಎಫ್‍ಎಫ್‍ಐ ಯ ಕೇಂದ್ರಬಿಂದುವಾಗಿದೆ. ಈ ನಿಟ್ಟಿನಲ್ಲಿ, ಮಹಿಳೆಯರು ನಿರ್ದೇಶಿಸಿದ 50ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು 50ಕ್ಕೂ ಹೆಚ್ಚು ಚೊಚ್ಚಲ ನಿರ್ಮಾಣದ ಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.

  • ಅತ್ಯುತ್ತಮ ಚೊಚ್ಚಲ ಭಾರತೀಯ ನಿರ್ದೇಶಕ ಪ್ರಶಸ್ತಿಯು ₹5 ಲಕ್ಷ ನಗದು ಬಹುಮಾನವನ್ನು ಹೊಂದಿದೆ.
  • ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಯು ಸ್ಟ್ರೀಮಿಂಗ್ ಕಂಟೆಂಟ್‌ನಲ್ಲಿನ ಶ್ರೇಷ್ಠತೆಗಾಗಿ ₹10 ಲಕ್ಷ ಬಹುಮಾನದೊಂದಿಗೆ ಗೌರವಿಸಲಿದೆ.

ನಾಳಿನ ಸೃಜನಶೀಲ ಮನಸ್ಸುಗಳು: ಈ ವರ್ಷ 799 ಅರ್ಜಿಗಳು ಬಂದಿದ್ದು, 13 ಚಲನಚಿತ್ರ ತಯಾರಿಕಾ ಕರಕುಶಲತೆಯನ್ನು ಪ್ರತಿನಿಧಿಸುವ 124 ಆಯ್ದ ಪಾಲ್ಗೊಳ್ಳುವವರೊಂದಿಗೆ ಸಿಎಂಒಟಿ ಕಾರ್ಯಕ್ರಮವು ವಿಸ್ತರಿಸಿದೆ. ಶಾರ್ಟ್ಸ್‍ ಟಿವಿ ಸಹಯೋಗದೊಂದಿಗೆ ನಡೆಯುವ 48-ಗಂಟೆಗಳ ಚಲನಚಿತ್ರ ತಯಾರಿಕೆ ಸವಾಲು ಈ ಕಾರ್ಯಕ್ರಮದ ಪ್ರಮುಖ ಹೈಲೈಟ್ ಆಗಿ ಉಳಿದಿದೆ.

ಮಾಸ್ಟರ್ ಕ್ಲಾಸ್‌ಗಳು, ಪ್ಯಾನೆಲ್‌ಗಳು ಮತ್ತು ಜ್ಞಾನ ಸರಣಿ

ಉತ್ಸವದ ಪಾಲ್ಗೊಳ್ಳುವವರು 21 ಮಾಸ್ಟರ್ ಕ್ಲಾಸ್‌ಗಳು ಮತ್ತು ಪ್ಯಾನೆಲ್ ಚರ್ಚೆಗಳನ್ನು ನಿರೀಕ್ಷಿಸಬಹುದು. ಇವುಗಳಲ್ಲಿ ವಿಧು ವಿನೋದ್ ಚೋಪ್ರಾ, ಅನುಪಮ್ ಖೇರ್, ಕ್ರಿಸ್ಟೋಫರ್ ಚಾರ್ಲ್ಸ್ ಕಾರ್ಬೌಲ್ಡ್ ಒಬಿಇ, ಬಾಬಿ ಡಿಯೋಲ್, ಅಮೀರ್ ಖಾನ್, ಸುಹಾಸಿನಿ ಮಣಿರತ್ನಂ, ಪೀಟ್ ಡ್ರೇಪರ್, ಶ್ರೀಕರ್ ಪ್ರಸಾದ್ ಮತ್ತು ಇತರರು ಭಾಗವಹಿಸಲಿದ್ದಾರೆ. ಈ ಚರ್ಚೆಗಳು ಕಥಾ ಕರಕುಶಲತೆ, ನಟನೆ, ಎಡಿಟಿಂಗ್, ಸಿನಿಮಾಟೋಗ್ರಫಿ, ವಿಎಫ್ಎಕ್ಸ್, ಎಐ ಮತ್ತು ಚಲನಚಿತ್ರ ತಯಾರಿಕೆಯ ಭವಿಷ್ಯದಂತಹ ವಿಷಯಗಳನ್ನು ಒಳಗೊಂಡಿರುತ್ತವೆ.

ಈ ವರ್ಷದ ಪ್ರಮುಖಾಂಶಗಳು

ವೇವ್ಸ್ ಫಿಲ್ಮ್ ಬಜಾರ್: ಭಾರತದ ಸೃಜನಶೀಲ ಮಾರುಕಟ್ಟೆ ಜಾಗತಿಕವಾಗಿ ಮುನ್ನುಗ್ಗುತ್ತಿದೆ

ಭಾರತದ ಪ್ರಮುಖ ಚಲನಚಿತ್ರ ಮಾರುಕಟ್ಟೆ—ಈ ಹಿಂದೆ ಕೇವಲ ಫಿಲ್ಮ್ ಬಜಾರ್ ಎಂದು ಕರೆಯಲ್ಪಡುತ್ತಿತ್ತು ಮತ್ತು ಈಗ ವೇವ್ಸ್‍ ಫಿಲ್ಮ್ ಬಜಾರ್ ಎಂದು ಪುನರ್ ರಚಿಸಲಾಗಿದೆ—ಇದು 2007 ರಿಂದ ಏಷ್ಯಾದ ಅತ್ಯಂತ ಪ್ರಭಾವಶಾಲಿ ಸಹ-ನಿರ್ಮಾಣ ಮತ್ತು ವಿಷಯ-ಶೋಧ ವೇದಿಕೆಗಳಲ್ಲಿ ಒಂದಾಗಿ ಬೆಳೆದಿದೆ. ಐಎಫ್‍ಎಫ್‍ಐ ಜೊತೆಗೆ ಪ್ರತಿ ವರ್ಷ ನಡೆಯುವ ಇದು, ಭಾರತೀಯ ಕಥೆಗಾರರು, ಜಾಗತಿಕ ನಿರ್ಮಾಪಕರು, ಉತ್ಸವ ಕ್ಯೂರೇಟರ್‌ಗಳು, ತಂತ್ರಜ್ಞಾನ ಪಾಲುದಾರರು ಮತ್ತು ಹೂಡಿಕೆದಾರರು ಒಗ್ಗೂಡಿ ನಾಳಿನ ಚಲನಚಿತ್ರಗಳಿಗೆ ರೂಪ ನೀಡುವ ಕೂಡುವ ತಾಣವಾಗಿದೆ.

ಈ ವರ್ಷ ಏನೆಲ್ಲ ನಡೆಯುತ್ತಿದೆ:

19ನೇ ಆವೃತ್ತಿಯ ಈ ಮಾರುಕಟ್ಟೆಯು ನವೆಂಬರ್ 20 ರಿಂದ 24, 2025 ರವರೆಗೆ ಗಮನಾರ್ಹವಾಗಿ ವಿಸ್ತರಿಸಲ್ಪಟ್ಟ ಮತ್ತು ಹೆಚ್ಚು ಕ್ರಿಯಾತ್ಮಕ ವೇದಿಕೆಯಾಗಿರಲಿದೆ. ಈ ವರ್ಷದ ಬಜಾರ್ ತನ್ನ ಜಾಗತಿಕ ಹೆಜ್ಜೆಗುರುತನ್ನು ಈ ಕೆಳಗಿನವುಗಳೊಂದಿಗೆ ಬಲಪಡಿಸಲಿದೆ:

  • ಫೀಚರ್ ಮತ್ತು ಸಾಕ್ಷ್ಯಚಿತ್ರಗಳಿಗಾಗಿ ಒಂದು ದೃಢವಾದ ಸಹ-ನಿರ್ಮಾಣ ಮಾರುಕಟ್ಟೆ, ಇದು ಅಂತಾರಾಷ್ಟ್ರೀಐ ಹಣಕಾಸು ಮತ್ತು ಉತ್ಸವ ಪ್ರಸಾರಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾದ ಸಂಗ್ರಹಿಸಲಾದ ಯೋಜನೆಗಳನ್ನು ಒಳಗೊಂಡಿದೆ.
  • ಪರದೆಯ ಬರಹಗಾರರ ಪ್ರಯೋಗಾಲಯ, ಪ್ರಗತಿಯಲ್ಲಿರುವ ಕೆಲಸದ ಪ್ರಯೋಗಾಲಯ ಮತ್ತು ವೇಗವಾಗಿ ಬೆಳೆಯುತ್ತಿರುವ ವೀಕ್ಷಣೆ ಕೊಠಡಿ - ಇದು ನಿರ್ಮಾಪಕರು ಮತ್ತು ಮಾರಾಟ ಏಜೆಂಟರು ವಿವಿಧ ಭಾಷೆಗಳು ಮತ್ತು ಪ್ರಕಾರಗಳಲ್ಲಿ ಹೊಸ ಧ್ವನಿಗಳನ್ನು ಕಂಡುಹಿಡಿಯಲು ಅನುವು ಮಾಡಿಕೊಡುತ್ತದೆ.
  • ಪಿಚಿಂಗ್ ಸೆಷನ್‌ಗಳು, ದೇಶ ಮತ್ತು ರಾಜ್ಯ ಪ್ರದರ್ಶನಗಳು ಮತ್ತು ಉತ್ಪಾದನೆ, ವಿತರಣೆ ಹಾಗೂ ಉದಯೋನ್ಮುಖ ಕಥೆ ಹೇಳುವ ಸಾಧನಗಳ ಕುರಿತ ಪ್ರಾಯೋಗಿಕ ಕಾರ್ಯಾಗಾರಗಳನ್ನು ಒಳಗೊಂಡ ಪುನಶ್ಚೇತನಗೊಂಡ ಜ್ಞಾನ ಸರಣಿ.
  • ಹತ್ತು ಭಾರತೀಯ ರಾಜ್ಯಗಳು ಮತ್ತು ಹಲವಾರು ಪಾಲುದಾರ ರಾಷ್ಟ್ರಗಳಿಂದ ಪ್ರೋತ್ಸಾಹಕಗಳನ್ನು ಪ್ರದರ್ಶಿಸುವ ಸಮರ್ಪಿತ ಮಂಟಪಗಳು, ನಿಯೋಗಗಳು ಮತ್ತು ಮಳಿಗೆಗಳ ಮೂಲಕ ವರ್ಧಿತ ಅಂತಾರಾಷ್ಟ್ರೀಐ ಭಾಗವಹಿಸುವಿಕೆ.

ತಂತ್ರಜ್ಞಾನ, ಸಹಯೋಗ ಮತ್ತು ಹೊಸ ಪ್ರತಿಭೆಯ ಮೇಲೆ ಹೆಚ್ಚುತ್ತಿರುವ ಒತ್ತು ನೀಡುವ ಮೂಲಕ, ವೇವ್ಸ್‍ ಫಿಲ್ಮ್ ಬಜಾರ್ ಐಎಫ್‍ಎಫ್‍ಐ ಯಲ್ಲಿ ಸೃಜನಾತ್ಮಕ ವಿನಿಮಯದ ಎಂಜಿನ್ ಕೊಠಡಿಯಾಗಿ ಮುಂದುವರಿಯುತ್ತದೆ—ಇಲ್ಲಿ ಯೋಜನೆಗಳು ಕಂಡುಹಿಡಿಯಲ್ಪಡುತ್ತವೆ, ಪಾಲುದಾರಿಕೆಗಳು ರೂಪುಗೊಳ್ಳುತ್ತವೆ ಮತ್ತು ಮುಂದಿನ ಪೀಳಿಗೆಯ ಸಿನಿಮಾಗೆ ಮೊದಲ ಬೆಂಬಲಿಗರು ದೊರೆಯುತ್ತಾರೆ.

ಇಫೀಸ್ಟಾ

ಈ ವರ್ಷ ಮೊದಲ ಬಾರಿಗೆ ಪ್ರಾರಂಭವಾಗುತ್ತಿರುವ ಇಫೀಸ್ಟಾ ಐಎಫ್‍ಎಫ್‍ಐ ಯ 56 ನೇ ಆವೃತ್ತಿಗೆ ಒಂದು ರೋಮಾಂಚಕ ಸಾಂಸ್ಕೃತಿಕ ಆಯಾಮವನ್ನು ಪರಿಚಯಿಸುತ್ತದೆ. ಇಫೀಸ್ಟಾ 2025 ನವೆಂಬರ್ 21 ರಿಂದ 24 ರವರೆಗೆ ಗೋವಾದಲ್ಲಿ ರೋಮಾಂಚಕ ಸಂಗೀತ, ಅಭಿವ್ಯಕ್ತಿಶೀಲ ನೇರ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಥಾ ನಿರೂಪಣೆಯ ನಾಲ್ಕು ಸಂಜೆಗಳನ್ನು ಒಟ್ಟಿಗೆ ತರಲಿದೆ. ಧ್ವನಿ ಮತ್ತು ವೇದಿಕೆ ಕರಕುಶಲತೆಯ ಆಚರಣೆಯಾಗಿ ವಿನ್ಯಾಸಗೊಳಿಸಲಾದ ಈ ಉತ್ಸವವು ಸಮಕಾಲೀನ ಇಂಡೀ ಸಂಗೀತದಿಂದ ಶಾಸ್ತ್ರೀಯ ಕಲೆ ಮತ್ತು ನೇರ ನಾಟಕೀಯ ಕ್ಷಣಗಳವರೆಗೆ ಎಲ್ಲವನ್ನೂ ಅನುಭವಿಸಲು ಪ್ರೇಕ್ಷಕರಿಗೆ ಅವಕಾಶ ನೀಡುತ್ತದೆ. ಯುವ ಪ್ರತಿಭೆಗಳು, ಅನುಭವಿ ಕಲಾವಿದರು ಮತ್ತು ವೈವಿಧ್ಯಮಯ ಪ್ರಕಾರಗಳು ಒಗ್ಗೂಡುವುದರಿಂದ, ಇಫೀಸ್ಟಾ ಜನರು ಆನಂದಿಸಲು, ಪಾಲ್ಗೊಳ್ಳಲು ಮತ್ತು ಹಂಚಿಕೆಯ ಸಾಂಸ್ಕೃತಿಕ ಅನುಭವದ ಭಾಗವಾಗಲು ಸಾಧ್ಯವಾಗುವ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ಕಾರ್ಯಕ್ರಮದ ವೇಳಾಪಟ್ಟಿ (ಇಫೀಸ್ಟಾ)

ದಿನಾಂಕ

ಕಾರ್ಯಕ್ರಮ

ವಿವರಗಳು

ನವೆಂಬರ್ 21, 2025

ಓಷೋ ಜೈನ್ ನೇರ ಸಂಗೀತ ಕಾರ್ಯಕ್ರಮ (Osho Jain Live Concert)

ಉದ್ಘಾಟನಾ ರಾತ್ರಿಯ ಪ್ರದರ್ಶನ

ನವೆಂಬರ್ 22, 2025

ಉತ್ಸವ ಪ್ರದರ್ಶನ

ಬ್ಯಾಂಡ್‌ಗಳ ಕದನ (ಭಾರತ ಮತ್ತು ಅಂತಾರಾಷ್ಟ್ರೀಐ), ಸುರೋನ್ ಕಾ ಏಕಲವ್ಯ, ವಾಹ್ ಉಸ್ತಾದ್

ನವೆಂಬರ್ 23, 2025

ಉತ್ಸವ ಪ್ರದರ್ಶನ

ಬ್ಯಾಂಡ್‌ಗಳ ಕದನ (ಭಾರತ ಮತ್ತು ಅಂತಾರಾಷ್ಟ್ರೀಐ), ಸುರೋನ್ ಕಾ ಏಕಲವ್ಯ, ವಾಹ್ ಉಸ್ತಾದ್, ದೇವಾಂಚಲ್ ಕಿ ಪ್ರೇಮಕಥಾ

ನವೆಂಬರ್ 24, 2025

ಉತ್ಸವ ಪ್ರದರ್ಶನ

ಬ್ಯಾಂಡ್‌ಗಳ ಕದನ (ಭಾರತ ಮತ್ತು ಅಂತಾರಾಷ್ಟ್ರೀಯ), ಸುರೋನ್ ಕಾ ಏಕಲವ್ಯ, ವಾಹ್ ಉಸ್ತಾದ್

ಸಿನಿಮ್‌ಎಐ ಹ್ಯಾಕಥಾನ್

ವೇವ್ಸ್ಫಿಲ್ಮ್ ಬಜಾರ್ ಅನ್ನು ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‍ಎಫ್‍ಡಿಸಿ) ಮತ್ತು ಎಲ್‍ಟಿಐಮೈಂಡ್‍ಟ್ರೀ ಸಹಭಾಗಿತ್ವದಲ್ಲಿ ಆಯೋಜಿಸಲಾದ ಸಿನಿಮ್ಎಐ ಹ್ಯಾಕಥಾನ್ ಭಾರತದ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‍ಎಫ್‍ಐ) ಭಾಗವಾಗಿ ನಡೆಯುತ್ತಿರುವ ಮೊದಲ ಎಐ ಚಲನಚಿತ್ರ ಹ್ಯಾಕಥಾನ್ ಆಗಿದೆ. ಇದು ಕಥಾ ನಿರೂಪಣೆಯಲ್ಲಿ ಕಲೆ, ತಂತ್ರಜ್ಞಾನ ಮತ್ತು ನೈತಿಕ ನಾವೀನ್ಯತೆಯನ್ನು ಒಟ್ಟುಗೂಡಿಸುತ್ತದೆ.

ಈ ಹ್ಯಾಕಥಾನ್ ಜಾಗತಿಕವಾಗಿ, 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಅಥವಾ ತಂಡಗಳಿಗೆ (ಗರಿಷ್ಠ 5 ಸದಸ್ಯರು) ಮುಕ್ತವಾಗಿದೆ.

ಅರ್ಜಿಗಳ ಸಲ್ಲಿಕೆ: ನವೆಂಬರ್ 1, 2025 ರಂದು ಪ್ರಾರಂಭವಾಯಿತು, ಮತ್ತು ನವೆಂಬರ್ 10 ರಂದು ಗಡುವು ಮುಗಿದಿದೆ.

ಅಂತಿಮ ತಂಡಗಳ ಘೋಷಣೆ: ಅಂತಿಮವಾಗಿ ಆಯ್ಕೆಯಾದ ತಂಡಗಳನ್ನು ನವೆಂಬರ್ 16 ರ ಸುಮಾರಿಗೆ ಘೋಷಿಸಲಾಗುವುದು.

ಆಯ್ಕೆಯಾದ ಹತ್ತು ತಂಡಗಳು ಐಎಫ್‍ಎಫ್‍ಐ ಸಮಯದಲ್ಲಿ 48 ಗಂಟೆಗಳ ಸೃಜನಾತ್ಮಕ ಸ್ಪರ್ಧೆಯಲ್ಲಿ ಭಾಗವಹಿಸಲಿವೆ (ವಿಷಯವನ್ನು ನವೆಂಬರ್ 20 ರಂದು ಬಹಿರಂಗಪಡಿಸಲಾಗುತ್ತದೆ). ಪ್ರತಿ ತಂಡವು ಸಂಪೂರ್ಣವಾಗಿ ಎಐ ಪರಿಕರಗಳನ್ನು ಬಳಸಿ 1-2 ನಿಮಿಷಗಳ ಕಿರುಚಿತ್ರವನ್ನು ಕಲ್ಪಿಸಿ, ನಿರ್ಮಿಸಿ ಮತ್ತು ಸಂಕಲನ ಮಾಡಬೇಕು.

ಗುರುತಿಸುವಿಕೆ ಮತ್ತು ಪ್ರಶಸ್ತಿಗಳು ಒಳಗೊಂಡಿದೆ:

ಗುರುತಿಸುವಿಕೆ ಮತ್ತು ಪ್ರಶಸ್ತಿಗಳು

ವಿಭಾಗ

ಬಹುಮಾನದ ಮೊತ್ತ (Prize Amount)

ಅತ್ಯುತ್ತಮ ಎಐ ಚಲನಚಿತ್ರ

₹ 4,00,000

ಎಐನ ಅತ್ಯಂತ ನವೀನ ಬಳಕೆ

₹ 2,00,000

ಅತ್ಯುತ್ತಮ ಕಥಾ ನಿರೂಪಣೆ

₹ 1,00,000

ಅತ್ಯುತ್ತಮ ದೃಶ್ಯಗಳು

₹ 1,00,000

ಅತ್ಯುತ್ತಮ ಧ್ವನಿ/ಸಂಗೀತ ವಿನ್ಯಾಸ

₹ 1,00,000

ಗೆದ್ದ ಚಲನಚಿತ್ರಗಳು ಐಎಫ್‍ಎಫ್‍ಐ ಗೋವಾದಲ್ಲಿ ಪ್ರಥಮ ಪ್ರದರ್ಶನಗೊಳ್ಳುತ್ತವೆ ಮತ್ತು ಎನ್‍ಎಫ್‍ಡಿಸಿ ಹಾಗೂ ಎಲ್‍ಟಿಐಮೈಂಡ್‍ಟ್ರಿ ವೇದಿಕೆಗಳಲ್ಲಿ ಪ್ರದರ್ಶಿಸಲ್ಪಡುತ್ತವೆ.

ಐಎಫ್ಎಫ್ ಪಯಣ: ನೆನಪುಗಳು ಮತ್ತು ವಿಕಾ

ಭಾರತಕ್ಕೆ ಸ್ವಾತಂತ್ರ್ಯ ಬಂದ ಸ್ವಲ್ಪ ಸಮಯದ ನಂತರ 1952ರಲ್ಲಿ ಐಎಫ್‍ಎಫ್‍ಐ ಸ್ಥಾಪನೆಯಾಯಿತು. ಇದು ದೇಶದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಅಹಿಂಸೆ, ವೈವಿಧ್ಯತೆಯಲ್ಲಿ ಏಕತೆ ಮತ್ತು ಒಗ್ಗಟ್ಟಿನ ಸಾಕಾರವಾಗಿತ್ತು. ಭಾರತ ಸರ್ಕಾರದ ಅಧೀನದಲ್ಲಿರುವ ಫಿಲ್ಮ್ಸ್ ವಿಭಾಗದಿಂದ ಆಯೋಜಿಸಲ್ಪಟ್ಟ ಇದು, 'ವಸುಧೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ಎಂಬ ವೈದಿಕ ತತ್ವವನ್ನು ಮೈಗೂಡಿಸಿಕೊಂಡಿತು. ಈ ನುಡಿಗಟ್ಟು ಭಾರತೀಯ ಅಹಿಂಸೆ ಮತ್ತು ಶಾಂತಿಯುತ ಸಹಬಾಳ್ವೆಯ ಕಲ್ಪನೆಯನ್ನು ನಿರೂಪಿಸುತ್ತದೆ.

ಮೊದಲ ಆವೃತ್ತಿಯು 1952 ರ ಜನವರಿ 24 ರಿಂದ ಫೆಬ್ರವರಿ 1 ರವರೆಗೆ ಮುಂಬೈನಲ್ಲಿ ನಡೆಯಿತು. ಇದರಲ್ಲಿ ಸುಮಾರು 40 ಫೀಚರ್ ಚಲನಚಿತ್ರಗಳು ಮತ್ತು 100 ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ನಂತರ ಇದು ಮದ್ರಾಸ್, ದೆಹಲಿ ಮತ್ತು ಕಲ್ಕತ್ತಾಗಳಲ್ಲಿ ಸಂಚರಿಸಿ, ದಕ್ಷಿಣ ಏಷ್ಯಾದ ಪ್ರಧಾನ ಕಾರ್ಯಕ್ರಮವಾಗಿ ಜಾಗತಿಕ ಚಲನಚಿತ್ರೋತ್ಸವದ ಜಗತ್ತಿಗೆ ಭಾರತದ ಪ್ರವೇಶವನ್ನು ಗುರುತಿಸಿತು.

1952 ರಲ್ಲಿ ಪ್ರಾರಂಭವಾದಾಗಿನಿಂದ, ಐಎಫ್‍ಎಫ್‍ಐ ಭಾರತದಲ್ಲಿ ತನ್ನ ರೀತಿಯ ಅತಿದೊಡ್ಡ ಕಾರ್ಯಕ್ರಮವಾಗಿದೆ. ನಂತರದ ಆವೃತ್ತಿಗಳು ನವದೆಹಲಿಯಲ್ಲಿ ನಡೆದವು. 1965 ರ ಜನವರಿಯಲ್ಲಿ ನಡೆದ 3ನೇ ಆವೃತ್ತಿಯಿಂದ, ಐಎಫ್‍ಎಫ್‍ಐ ಸ್ಪರ್ಧಾತ್ಮಕ ಸ್ವರೂಪವನ್ನು ಪಡೆಯಿತು. 1975ರಲ್ಲಿ, ಪರ್ಯಾಯ ವರ್ಷಗಳಲ್ಲಿ ವಿವಿಧ ಚಲನಚಿತ್ರ ತಯಾರಿಕಾ ನಗರಗಳಲ್ಲಿ ನಡೆಸಲು ಚಲನಚಿತ್ರೋತ್ಸವ ಎಂಬ ಸ್ಪರ್ಧಾತ್ಮಕವಲ್ಲದ ಉತ್ಸವವನ್ನು ಪರಿಚಯಿಸಲಾಯಿತು. ನಂತರ, ಫಿಲ್ಮೋತ್ಸವಗಳನ್ನು ಐಎಫ್‍ಎಫ್‍ಐ ಯೊಂದಿಗೆ ವಿಲೀನಗೊಳಿಸಲಾಯಿತು. 2004ರಲ್ಲಿ, ಈ ಉತ್ಸವವು ಗೋವಾದಲ್ಲಿ ಶಾಶ್ವತ ನೆಲೆಯನ್ನು ಕಂಡುಕೊಂಡಿತು ಮತ್ತು ಅಂದಿನಿಂದ ಪ್ರತಿ ವರ್ಷ ಸ್ಪರ್ಧಾತ್ಮಕ ಕಾರ್ಯಕ್ರಮವಾಗಿ ಅಲ್ಲಿ ಆಯೋಜಿಸಲಾಗುತ್ತಿದೆ.

ಐಎಫ್‍ಎಫ್‍ಐ ಕಾರ್ಯತಂತ್ರದ ಪ್ರಭಾವ: ಸಿನಿಮಾ, ಸಂಸ್ಕೃತಿ ಮತ್ತು ವಾಣಿಜ್ಯದ ಚಾಲಕ ಶಕ್ತಿ

ಐಎಫ್‍ಎಫ್‍ಐ, ಏಷ್ಯಾದ ಅತ್ಯಂತ ಹಳೆಯ ಮತ್ತು ಭಾರತದ ಪ್ರಮುಖ ಸಿನಿಮೀಯ ವೇದಿಕೆಯಾಗಿ ವಿಕಸನಗೊಂಡಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಗೋವಾ ಸರ್ಕಾರದ ಬೆಂಬಲದೊಂದಿಗೆ, ಇದು ಮೃದು ಶಕ್ತಿಯ ರಾಜತಾಂತ್ರಿಕತೆ, ಉದ್ಯಮದ ಬೆಳವಣಿಗೆ ಮತ್ತು ಭಾರತೀಯ ಸಿನಿಮಾದಲ್ಲಿ ತಾಂತ್ರಿಕ ನಾವೀನ್ಯತೆಗೆ ಉತ್ತೇಜನ ನೀಡುತ್ತದೆ. ಆದ್ದರಿಂದ, ಐಎಫ್‍ಎಫ್‍ಐ ಅನೇಕ ವಿಧಗಳಲ್ಲಿ ಮಹತ್ವವನ್ನು ಹೊಂದಿದೆ:

ಸಾಂಸ್ಕೃತಿಕ ಮಹತ್ವ: ಭಾರತೀಯ ಮತ್ತು ವಿಶ್ವ ಸಿನಿಮಾಗಳಿಗೆ ಸೇತುವೆ

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಕೇವಲ ಚಲನಚಿತ್ರ ಪ್ರದರ್ಶನ ಸ್ಥಳಕ್ಕಿಂತ ಹೆಚ್ಚಾಗಿದೆ; ಇದು ಭಾರತೀಯ ಸಿನಿಮಾವನ್ನು ಜಾಗತಿಕ ಸಂವಾದದಲ್ಲಿ ಉದ್ದೇಶಪೂರ್ವಕವಾಗಿ ಇರಿಸುವ ಸರ್ಕಾರಿ-ಬೆಂಬಲಿತ ವೇದಿಕೆಯಾಗಿದೆ. ಐಎಫ್‍ಎಫ್‍ಐ, ಭಾರತೀಯ ಸಿನಿಮಾವನ್ನು ಜಗತ್ತಿಗೆ ಸಂಪರ್ಕಿಸುವ ಮತ್ತು ವಿಶ್ವ ಸಿನಿಮಾವನ್ನು ಭಾರತಕ್ಕೆ ತರುವ ದೃಷ್ಟಿಯೊಂದಿಗೆ ಪ್ರಕಾರಗಳು, ಸಂಸ್ಕೃತಿಗಳು ಮತ್ತು ಭಾಷೆಗಳಾದ್ಯಂತ ಚಲನಚಿತ್ರಗಳ ಶೋಧ, ಬೆಂಬಲ ಮತ್ತು ಪ್ರಚಾರಕ್ಕಾಗಿ ಕೆಲಸ ಮಾಡುತ್ತದೆ. 'ವಸುಧೈವ ಕುಟುಂಬಕಂ' (ಇಡೀ ಜಗತ್ತೇ ಒಂದು ಕುಟುಂಬ) ಎಂಬ ಘೋಷಣೆಗೆ ಅನುಗುಣವಾಗಿ ಸ್ಥಿರವಾಗಿ ಬೆಳೆಯುತ್ತಿರುವ ಉತ್ಸವವು ಭಾರತೀಯ ಸಿನಿಮಾ ಮತ್ತು ವಿಶ್ವ ಸಿನಿಮಾದ ನಡುವಿನ ಸಂವಾದವನ್ನು ಸುಗಮಗೊಳಿಸಿದೆ.

ಭಾರತದ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ವಿಶ್ವಾದ್ಯಂತ ಹೆಚ್ಚಿಸಲು ಚಲನಚಿತ್ರಗಳು ಯಶಸ್ವಿ ಸಾಧನವಾಗಿ ಕಾರ್ಯನಿರ್ವಹಿಸಿವೆ. ಇದು ಭಾರತದ ಮೃದು ಶಕ್ತಿಯನ್ನು ಪ್ರಕ್ಷೇಪಿಸುವಲ್ಲಿ ಮತ್ತು ಹೊಸ ಅವಕಾಶಗಳಿಗೆ ಕಾರಣವಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತವು ವಾರ್ಷಿಕವಾಗಿ 20 ಕ್ಕೂ ಹೆಚ್ಚು ಭಾಷೆಗಳಲ್ಲಿ 2,000 ಕ್ಕಿಂತ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುತ್ತದೆ - ಇದು ವಿಶ್ವದಲ್ಲೇ ಅತಿ ದೊಡ್ಡದು.

ಚಲನಚಿತ್ರ ಮಾರುಕಟ್ಟೆ ಮತ್ತು ಸಹ-ನಿರ್ಮಾಣ ಅವಕಾಶಗಳು

2007 ರಿಂದ ಐಎಫ್‍ಎಫ್‍ಐ ಯೊಂದಿಗೆ ನಡೆಯುತ್ತಿರುವ ವೇವ್ಸ್ ಫಿಲ್ಮ್ ಬಜಾರ್ ಸಹ-ನಿರ್ಮಾಣ ಮಾರುಕಟ್ಟೆ, ಪ್ರಗತಿಯಲ್ಲಿರುವ ಕೆಲಸದ ಪ್ರಯೋಗಾಲಯಗಳು, ವೀಕ್ಷಣೆ ಕೊಠಡಿಗಳು ಮತ್ತು ನೆಟ್‌ವರ್ಕಿಂಗ್ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇವು ಉತ್ಸವದ ಗಮನವನ್ನು ಹಣಕಾಸು, ವಿತರಣೆ ಮತ್ತು ಉತ್ಸವದ ತಂತ್ರಗಳಾಗಿ ಪರಿವರ್ತಿಸುತ್ತವೆ. ಫಿಲ್ಮ್ ಬಜಾರ್‌ನ ಸಂಗ್ರಹಿಸಲಾದ ಕಾರ್ಯಕ್ರಮಗಳು ಭಾರತೀಯ ಯೋಜನೆಗಳಿಗೆ ನೇರವಾಗಿ ಸಹ-ನಿರ್ಮಾಣಗಳು, ಮಾರಾಟ ಮತ್ತು ಅಂತಾರಾಷ್ಟ್ರೀಯ ಉತ್ಸವದ ನಿಯೋಜನೆಗಳಿಗೆ ಅನುಕೂಲ ಮಾಡಿಕೊಟ್ಟಿವೆ, ಚಲನಚಿತ್ರ ನಿರ್ಮಾಪಕರು ಮತ್ತು ನಿರ್ಮಾಪಕರಿಗೆ ಸ್ಪಷ್ಟವಾದ ವೃತ್ತಿ ಮತ್ತು ಆದಾಯದ ಮಾರ್ಗಗಳನ್ನು ಸೃಷ್ಟಿಸುತ್ತಿವೆ. ಭಾರತದ ಪ್ರಮುಖ ಚಲನಚಿತ್ರ ಮಾರುಕಟ್ಟೆಯಾದ ವೇವ್ಸ್‍ ಫಿಲ್ಮ್ ಬಜಾರ್‌ನ 19ನೇ ಆವೃತ್ತಿಯು ಸಹ-ನಿರ್ಮಾಣ ಮತ್ತು ವಿತರಣಾ ಅವಕಾಶಗಳಿಗಾಗಿ 300 ಕ್ಕೂ ಹೆಚ್ಚು ಚಲನಚಿತ್ರ ಯೋಜನೆಗಳನ್ನು ಪ್ರಸ್ತುತಪಡಿಸಲಿದೆ ಮತ್ತು ವಿಜೇತ ಪ್ರವೇಶಗಳಿಗೆ $20,000 ಮೌಲ್ಯದ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಎವಿಜಿಸಿ-ಎಕ್ಸ್‌ಆರ್ ಉದ್ಯಮದ ಅಭಿವೃದ್ಧಿ

ಐಎಫ್‍ಎಫ್‍ಐ ಯಲ್ಲಿನ ಸಮರ್ಪಿತ ತಂತ್ರಜ್ಞಾನ ಮಂಟಪವು ವಿಎಫ್‌ಎಕ್ಸ್, ಅನಿಮೇಷನ್ ಮತ್ತು ಸಿಜಿಐನಲ್ಲಿನ ನಾವೀನ್ಯತೆಗಳನ್ನು ಹೈಲೈಟ್ ಮಾಡುತ್ತದೆ, ಇದು ತಾಂತ್ರಿಕ ಸೃಜನಶೀಲತೆಯ ಉತ್ಸವದ ವಿಷಯಕ್ಕೆ ಅನುಗುಣವಾಗಿರುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೇವ್ಸ್‍ ಉಪಕ್ರಮದ ಅಡಿಯಲ್ಲಿರುವ ವೇವ್ಎಕ್ಸ್ ಪ್ಲಾಟ್ಫಾರ್ಮ್ ಮೀಡಿಯಾ, ಮನರಂಜನೆ, ಎವಿಜಿಸಿ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್) ಮತ್ತು ಎಕ್ಸ್‌ಆರ್ (ವಿಸ್ತೃತ ರಿಯಾಲಿಟಿ) ವಲಯಗಳಲ್ಲಿನ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು ಇನ್ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸಿದೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ , ಎವಿಜಿಸಿ-ಎಕ್ಸ್‌ಆರ್ ಗಾಗಿ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರವಾಗಿದ್ದು, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್, ಚಲನಚಿತ್ರ ಮತ್ತು ವಿಸ್ತೃತ ರಿಯಾಲಿಟಿಗಳಲ್ಲಿ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ. ಇದು ಎನ್‍ವಿಐಡಿಐಎ, ಗೂಗಲ್, ಅಡೋಬ್, ಮೆಟಾ ಮತ್ತು ಮೈಕ್ರೊಸಾಫ್ಟ್ ಸೇರಿದಂತೆ ಜಾಗತಿಕ ಉದ್ಯಮ ದೈತ್ಯರೊಂದಿಗೆ ಪಾಲುದಾರಿಕೆಗಳನ್ನು ಹೊಂದಿದೆ.

ಗೋವಾದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಪ್ರಭಾವ

ಗೋವಾದ ಶಾಶ್ವತ ಅತಿಥೇಯನಾಗಿ, ಐಎಫ್‍ಎಫ್‍ಐ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಮತ್ತು ಜಾಗತಿಕ ಸಂದರ್ಶಕರನ್ನು ಆಕರ್ಷಿಸುವ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಎಂಟರ್‌ಟೈನ್‌ಮೆಂಟ್ ಸೊಸೈಟಿ ಆಫ್ ಗೋವಾ ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಗೋವಾದಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ಎಲ್ಲಾ ಕಾರ್ಯವಿಧಾನಗಳು ಮತ್ತು ಅನುಮತಿಗಳಿಗೆ ಅನುಕೂಲ ಮಾಡಿಕೊಡುತ್ತದೆ. ಪ್ರತಿ ವರ್ಷ ಗೋವಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಚಲನಚಿತ್ರ ಪ್ರವಾಸೋದ್ಯಮವನ್ನು ಗಮನಾರ್ಹ ರೀತಿಯಲ್ಲಿ ಉತ್ತೇಜಿಸುತ್ತದೆ. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಐಎಫ್‍ಎಫ್‍ಐ ಮತ್ತು ಗೋವಾ ಉತ್ತಮವಾಗಿ ಸಂಪರ್ಕ ಹೊಂದಿದ್ದು, ಈ ಉತ್ಸವವು ಕ್ಯಾಲೆಂಡರ್‌ನಲ್ಲಿ ಪ್ರಮುಖ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ ಮತ್ತು ಅದನ್ನು ವಿಶ್ವ ದರ್ಜೆಯ ಅನುಭವವನ್ನಾಗಿ ಮಾಡಲು ಪ್ರತಿ ವರ್ಷ ಮೂಲಸೌಕರ್ಯವನ್ನು ನವೀಕರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಉಪಸಂಹಾರ

ಐಎಫ್‍ಎಫ್‍ಐ 56ನೇ ಆವೃತ್ತಿಯು ಅನಾವರಣಗೊಳ್ಳಲು ಸಿದ್ಧವಾಗುತ್ತಿರುವಾಗ, ಈ ಉತ್ಸವವು ಪರಂಪರೆ ಮತ್ತು ನಾವೀನ್ಯತೆಯ ಪ್ರಬಲ ಅಡ್ಡಹಾದಿಯಲ್ಲಿ ನಿಂತಿದೆ. ಸಿನಿಮೀಯ ದಂತಕಥೆಗಳನ್ನು ಆಚರಿಸುವುದರಿಂದ ಹಿಡಿದು ಹೊಸ ಧ್ವನಿಗಳಿಗೆ ಬೆಂಬಲ ನೀಡುವುದು, ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳನ್ನು ಪ್ರದರ್ಶಿಸುವುದರಿಂದ ಹಿಡಿದು ಎಐ-ಚಾಲಿತ ಸೃಜನಶೀಲತೆಯ ಸಾಧ್ಯತೆಗಳನ್ನು ಸ್ವೀಕರಿಸುವವರೆಗೆ, ಐಎಫ್‍ಎಫ್‍ಐ ಕಥಾ ನಿರೂಪಣೆಯ ಭೂತಕಾಲ, ವರ್ತಮಾನ ಮತ್ತು ಭವಿಷ್ಯವು ಒಗ್ಗೂಡುವ ವೇದಿಕೆಯಾಗಿ ತನ್ನ ಪಾತ್ರವನ್ನು ಪುನರುಚ್ಚರಿಸುತ್ತಲೇ ಇದೆ. ತನ್ನ ವಿಸ್ತೃತ ಕಾರ್ಯಕ್ರಮ, ಜಾಗತಿಕ ಪಾಲುದಾರಿಕೆಗಳು ಮತ್ತು ಮೊದಲ ಬಾರಿಗೆ ಇಫೀಸ್ಟಾ ಮೂಲಕ ಹೊಸದಾಗಿ ಪಡೆದ ಸಾಂಸ್ಕೃತಿಕ ಆಯಾಮದೊಂದಿಗೆ, ಈ ವರ್ಷದ ಉತ್ಸವವು ಪ್ರೇಕ್ಷಕರಿಗೆ ಕೇವಲ ವೀಕ್ಷಣೆಯ ಅನುಭವಕ್ಕಿಂತ ಹೆಚ್ಚಿನದನ್ನು ನೀಡಲು ಭರವಸೆ ನೀಡುತ್ತದೆ—ಇದು ಜೀವಂತವಾಗಿರುವ, ವಿಕಸನಗೊಳ್ಳುತ್ತಿರುವ ಸಾಂಸ್ಕೃತಿಕ ಪಯಣದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತದೆ.

ಕಲಾವಿದರು, ಪ್ರೇಕ್ಷಕರು, ಸೃಷ್ಟಿಕರ್ತರು ಮತ್ತು ಸಮುದಾಯಗಳನ್ನು ಒಟ್ಟಿಗೆ ತರುವಲ್ಲಿ, ಗಡಿಗಳು, ಭಾಷೆಗಳು ಮತ್ತು ಕಲ್ಪನೆಗಳಾದ್ಯಂತ ಜನರನ್ನು ಸಂಪರ್ಕಿಸುವ ಸಿನಿಮಾದ ಶಾಶ್ವತ ಶಕ್ತಿಗೆ ಐಎಫ್‍ಎಫ್‍ಐ ಸಾಕ್ಷಿಯಾಗಿದೆ. ಗೋವಾ ಮತ್ತೊಂದು ಸ್ಮರಣೀಯ ಆವೃತ್ತಿಯನ್ನು ಆಯೋಜಿಸಲು ಸಿದ್ಧವಾಗುತ್ತಿರುವಾಗ, ಈ ಉತ್ಸವವು ಆಶಾವಾದ, ಸೃಜನಶೀಲತೆ ಮತ್ತು ಇನ್ನೂ ಹೇಳಬೇಕಾದ ಕಥೆಗಳ ಬಗ್ಗೆ ಅಚಲವಾದ ನಂಬಿಕೆಯೊಂದಿಗೆ ಮುಂದಕ್ಕೆ ನೋಡುತ್ತಿದೆ.

Click here to see PDF

 

*****

 

 

(Backgrounder ID: 156049) Visitor Counter : 6
Provide suggestions / comments
Link mygov.in
National Portal Of India
STQC Certificate