ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ
azadi ka amrit mahotsav

ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ವಿಜ್ಞಾನ ಸಂಸ್ಥೆ, ಒಆರ್‌ಎಫ್‌ ಮತ್ತು ಜಿಐಎಸ್‌ ಸಹಯೋಗದೊಂದಿಗೆ 2026ರ ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ 'ತಾಂತ್ರಿಕ ಒಮ್ಮುಖತೆಯ ರೂಪುರೇಷೆ' ಕುರಿತು 3ನೇ ಆವೃತ್ತಿಯ ‘ತಂತ್ರಜ್ಞಾನ ಸಂವಾದ’ ಆಯೋಜಿಸಲು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಸಜ್ಜು

ಪ್ರಕಟಣಾ ದಿನಾಂಕ: 26 NOV 2026 7:33PM by PIB Bengaluru

“ತಾಂತ್ರಿಕ ಒಮ್ಮುಖತೆಯ ರೂಪುರೇಷೆ” ಎಂಬ ವಿಷಯಾಧಾರಿತ ‘ತಂತ್ರಜ್ಞಾನ ಸಂವಾದ’ದ (ಟೆಕ್ನಾಲಜಿ ಡೈಲಾಗ್‌) ಮೂರನೇ ಆವೃತ್ತಿಯು 2026ರ ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ನಡೆಯಲಿದೆ. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ), ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ‘ಅಬ್ಸರ್ವರ್ ರಿಸರ್ಚ್ ಫೌಂಡೇಶನ್’ (ಒಆರ್‌ಎಫ್‌) ಹಾಗೂ ‘ಗ್ಲೋಬಲ್ ಇನ್ನೋವೇಶನ್ ಸ್ಕ್ವೇರ್’ (ಜಿಐಎಸ್‌) ಸಹಭಾಗಿತ್ವದಲ್ಲಿ ಈ ಸಂವಾದವನ್ನು ಆಯೋಜಿಸುತ್ತಿದೆ.

ಕಳೆದ ಕೆಲವು ವರ್ಷಗಳಲ್ಲಿ, ತಂತ್ರಜ್ಞಾನದ ರಾಜತಾಂತ್ರಿಕತೆಗಾಗಿ ಭಾರತದ ಪ್ರಮುಖ 'ಟ್ರ್ಯಾಕ್ 1.5' ವೇದಿಕೆಗಳಲ್ಲಿ ಒಂದಾಗಿ ‘ತಂತ್ರಜ್ಞಾನ ಸಂವಾದ’ವು ಹೊರಹೊಮ್ಮಿದೆ. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಚರ್ಚಿಸಲು ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಬೆಳೆಸಲು ಇದು ಭಾರತ ಮತ್ತು ಪ್ರಪಂಚದಾದ್ಯಂತದ ಹಿರಿಯ ಸರ್ಕಾರಿ ಅಧಿಕಾರಿಗಳು, ನೀತಿ ನಿರೂಪಕರು,ಸಂಶೋಧಕರು, ಉದ್ಯಮದ ನಾಯಕರು, ಹೂಡಿಕೆದಾರರು ಮತ್ತು ನಾವೀನ್ಯಕಾರರನ್ನು ಒಟ್ಟುಗೂಡಿಸುತ್ತದೆ. 2023ರ ಆವೃತ್ತಿಯು ವಿಚ್ಛಿದ್ರಕಾರಕ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಅವಕಾಶಗಳು ಮತ್ತು ಅಪಾಯಗಳನ್ನು ಅನ್ವೇಷಿಸಿದ್ದರೆ, 2025ರ ಆವೃತ್ತಿಯು ತಂತ್ರಜ್ಞಾನ ರಾಜತಾಂತ್ರಿಕತೆ ಮತ್ತು ನಿರ್ಣಾಯಕ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ಕಾರ್ಯತಂತ್ರದ ಪಾಲುದಾರಿಕೆಯ ಮೇಲೆ ಕೇಂದ್ರೀಕರಿಸಿತ್ತು.

ಈ ಚರ್ಚೆಗಳ ಮುಂದುವರಿದ ಭಾಗವಾಗಿ, 2026ರ ಆವೃತ್ತಿಯು ವಿವಿಧ ವಲಯಗಳು ಮತ್ತು ಕ್ಷೇತ್ರಗಳಲ್ಲಿ ಮುಂಚೂಣಿ ತಂತ್ರಜ್ಞಾನಗಳ ಹೆಚ್ಚುತ್ತಿರುವ ಒಮ್ಮುಖತೆಯ ಮೇಲೆ ಗಮನಹರಿಸಲಿದೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌ಗಳು, ಜೈವಿಕ ಆರ್ಥಿಕತೆ, ನ್ಯೂರೋಟೆಕ್ನಾಲಜಿ, ಸೈಬರ್ ಭದ್ರತೆ ಮತ್ತು ಪೋಸ್ಟ್-ಕ್ವಾಂಟಮ್ ಸಿದ್ಧತೆ,ಹಾಗೂ ಬಾಹ್ಯಾಕಾಶ ಸಾಮರ್ಥ್ಯಗಳು ಈ ಸಂವಾದದ ಪ್ರಮುಖ ಕ್ಷೇತ್ರಗಳಾಗಿವೆ. ಈ ತಂತ್ರಜ್ಞಾನಗಳು ಪರಸ್ಪರ ಬೆಸೆದುಕೊಳ್ಳುತ್ತಿದ್ದಂತೆ, ಅವು ಜಾಗತಿಕ ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಪರಿವರ್ತಿಸುತ್ತಿವೆ ಮತ್ತು ವೈಜ್ಞಾನಿಕ ಪ್ರಗತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಇದೇ ವೇಳೆ, ಆರ್ಥಿಕ ಸ್ಪರ್ಧಾತ್ಮಕತೆ, ರಾಷ್ಟ್ರೀಯ ಭದ್ರತೆ, ತಂತ್ರಜ್ಞಾನ ಆಡಳಿತ ಮತ್ತು ಅಂತಾರಾಷ್ಟ್ರೀಯ ಸಹಕಾರದ ಕುರಿತು ಮಹತ್ವದ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಈ ತಂತ್ರಜ್ಞಾನಗಳನ್ನು ರಾಷ್ಟ್ರೀಯ ತಂತ್ರಜ್ಞಾನ ದೃಕ್ಪಥಗಳೊಂದಿಗೆ ಹೇಗೆ ಸಂಯೋಜಿಸಬಹುದು ಮತ್ತು ಅಂತಿಮವಾಗಿ ಜಾಗತಿಕವಾಗಿ ಸ್ಪರ್ಧಾತ್ಮಕ,ಸ್ಥಿತಿಸ್ಥಾಪಕ ಮತ್ತು ಕಾರ್ಯತಂತ್ರದ ಸ್ವಾಯತ್ತ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಈ ಸಂವಾದವು ಪರಿಶೀಲಿಸಲಿದೆ.

ಈ ಸಂವಾದದಲ್ಲಿ ಭಾರತ ಸರ್ಕಾರ ಮತ್ತು ರಾಜತಾಂತ್ರಿಕ ನಿಯೋಗಗಳ ಹಿರಿಯ ಪ್ರತಿನಿಧಿಗಳು, ಅಂತಾರಾಷ್ಟ್ರೀಯ ಏಜೆನ್ಸಿಗಳು ಮತ್ತು ಬಹುಪಕ್ಷೀಯ ಸಂಸ್ಥೆಗಳು, ಪ್ರಮುಖ ವಿಜ್ಞಾನಿಗಳು, ಜಾಗತಿಕ ತಂತ್ರಜ್ಞಾನ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಸಾಹಸೋದ್ಯಮ ಬಂಡವಾಳ ಸಂಸ್ಥೆಗಳು ಮತ್ತು ಡೀಪ್-ಟೆಕ್ ನವೋದ್ಯಮಗಳ ಪ್ರತಿನಿಧಿಗಳು ಸೇರಿದಂತೆ ವಿಶಿಷ್ಟ ಮತ್ತು ವೈವಿಧ್ಯಮಯ ಚಿಂತಕರ ಗುಂಪು ಭಾಗವಹಿಸಲಿದೆ. ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿವಿಧ ಸಂಸ್ಥೆಗಳ ನಾಯಕರು ಮತ್ತು ತಜ್ಞರು ವೈಜ್ಞಾನಿಕ ಸಂಶೋಧನೆ, ಕೈಗಾರಿಕಾ ನಾವೀನ್ಯತೆ, ಹೂಡಿಕೆ, ನೀತಿ ಮತ್ತು ಅಂತಾರಾಷ್ಟ್ರೀಯ ಸಹಕಾರದ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ. ಇವರ ಭಾಗವಹಿಸುವಿಕೆಯು ತಂತ್ರಜ್ಞಾನ ನೀತಿಯನ್ನು ರೂಪಿಸುವವರು, ಮುಂಚೂಣಿ ಸಂಶೋಧನೆಯನ್ನು ಮುನ್ನಡೆಸುವವರು, ವಾಣಿಜ್ಯ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸುವವರು ಮತ್ತು ಉದಯೋನ್ಮುಖ ನಾವೀನ್ಯತೆಗಳಿಗೆ ಹಣಕಾಸು ಒದಗಿಸುವವರ ನಡುವೆ ವಿಚಾರ ವಿನಿಮಯಕ್ಕೆ ಅನುವು ಮಾಡಿಕೊಡುತ್ತದೆ.

ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಉನ್ನತ ಮಟ್ಟದ ಸಮಗ್ರ ಅಧಿವೇಶನಗಳು, ತಜ್ಞರ ಸಮಿತಿ ಚರ್ಚೆಗಳು, ಸಂವಾದಾತ್ಮಕ ಗೋಷ್ಠಿಗಳು, ಗೌಪ್ಯ ನೀತಿ ದುಂಡುಮೇಜಿನ ಸಭೆಗಳು ಮತ್ತು ಭಾರತದ ಡೀಪ್-ಟೆಕ್ ಹಾಗೂ ನಾವೀನ್ಯತೆ ಪರಿಸರ ವ್ಯವಸ್ಥೆಯ ವಿಶೇಷ ಪ್ರದರ್ಶನಗಳು ಇರಲಿವೆ. ಚರ್ಚೆಗಳು ಈ ಕೆಳಗಿನ ವಿಷಯಾಧಾರಿತ ಕ್ಷೇತ್ರಗಳನ್ನು ಒಳಗೊಂಡಿರುತ್ತವೆ:

  • ಎಐ x ಕ್ವಾಂಟಮ್‌: ಕಂಪ್ಯೂಟಿಂಗ್‌ ಬುದ್ಧಿಮತ್ತೆಯ ಭವಿಷ್ಯವನ್ನು ರೂಪಿಸುವುದು
  • ಜೈವಿಕ ಆರ್ಥಿಕತೆಯ ಶತಮಾನವನ್ನು ತೆರೆಯುವ ಮುಂಚೂಣಿ ತಂತ್ರಜ್ಞಾನಗಳು
  • ಮೆದುಳು, ಮುಂದಿನ ಗಡಿ: ಮಾನವ ಸಾಮರ್ಥ್ಯವನ್ನು ಹೆಚ್ಚಿಸುವ ನ್ಯೂರೋಟೆಕ್ನಾಲಜಿ
  • ಸೈಬರ್ ಭದ್ರತೆಯ ಆಚೆಗೆ: ನಿರ್ಣಾಯಕ ವ್ಯವಸ್ಥೆಗಳನ್ನು ಸುರಕ್ಷಿತಗೊಳಿಸುವುದು ಹೇಗೆ?
  • ಮುಂಬರುವ ದಶಕಗಳಲ್ಲಿ ಸೆಮಿಕಂಡಕ್ಟರ್ ಸ್ಪರ್ಧಾತ್ಮಕತೆಯನ್ನು ನಿರ್ಧರಿಸುವವರು ಯಾರು ಮತ್ತು ಯಾವುದು?
  • ಬಾಹ್ಯಾಕಾಶ 2050: ಬೃಹತ್‌ ಒಮ್ಮುಖತೆಗಾಗಿ ತಾಂತ್ರಿಕ ಗಡಿಗಳನ್ನು ಮುನ್ನಡೆಸುವುದು

ಈ ಕ್ಷೇತ್ರ-ನಿರ್ದಿಷ್ಟ ಚರ್ಚೆಗಳಿಗೆ ಪೂರಕವಾಗಿ, ಡೀಪ್-ಟೆಕ್ ಹಣಕಾಸು ಮತ್ತು ವಾಣಿಜ್ಯೀಕರಣ, ಸುಧಾರಿತ ಕಂಪ್ಯೂಟಿಂಗ್ ಮತ್ತು ಫೌಂಡೇಶನ್ ಮಾಡೆಲ್‌ಗಳ ಲಭ್ಯತೆ, ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆಗಳು, ಭದ್ರತಾ ತಂತ್ರಜ್ಞಾನಗಳಲ್ಲಿನ ಪ್ರಗತಿ ಮತ್ತು ಜವಾಬ್ದಾರಿಯುತ ‘ಎಐ’ ಆಡಳಿತಕ್ಕೆ ಸಂಬಂಧಿಸಿದ ವಿಶಾಲ ವಿಷಯಗಳ ಕುರಿತು ಸಂವಾದದಲ್ಲಿ ಚರ್ಚಿಸಲಾಗುವುದು.

2027ರ ಜಿನೀವಾ ‘ಎಐ ಶೃಂಗಸಭೆ’ಗೆ ಪೂರ್ವಭಾವಿಯಾಗಿ 'ರೋಡ್ ಟು ಜಿನೀವಾ' ಉಪಕ್ರಮದಡಿಯಲ್ಲಿ ‘ಸ್ವಿಸ್‌ನೆಕ್ಸ್’ ಸಹಭಾಗಿತ್ವದಲ್ಲಿ ಆಯೋಜಿಸಲಾದ 'ಭಾರತ-ಸ್ವಿಟ್ಜರ್ಲೆಂಡ್ ಎಐ ನೀತಿ ದುಂಡುಮೇಜಿನ ಸಭೆ'ಯಂತಹ ವಿಶೇಷ ಕಾರ್ಯಕ್ರಮಗಳು ದ್ವಿಪಕ್ಷೀಯ ತಂತ್ರಜ್ಞಾನ ಸಹಕಾರವನ್ನು ಗಾಢವಾಗಿಸಲು ಅವಕಾಶಗಳನ್ನು ಒದಗಿಸುತ್ತವೆ. ಇದಕ್ಕೆ ಸಮಾನಾಂತರವಾಗಿ, ಭದ್ರತಾ ತಂತ್ರಜ್ಞಾನಗಳಲ್ಲಿನ ಪ್ರಗತಿಯ ಕುರಿತಾದ ಚರ್ಚೆಯು ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸಲು ಅವುಗಳ ಸಿದ್ಧತೆಯನ್ನು ಪರಿಶೀಲಿಸುತ್ತದೆ; ನಿಯೋಜನೆಗೆ ಸಿದ್ಧವಾಗಿರುವ ಪರಿಹಾರಗಳು ಮತ್ತು ಹೆಚ್ಚಿನ ಪರೀಕ್ಷೆ ಹಾಗೂ ಮೌಲ್ಯೀಕರಣದ ಅಗತ್ಯವಿರುವ ಪರಿಹಾರಗಳನ್ನು ಗುರುತಿಸುತ್ತದೆ.

ಕಾರ್ಯತಂತ್ರದ ‘ಎಐ’ನಲ್ಲಿ ಜವಾಬ್ದಾರಿಯುತ ಕೈಗಾರಿಕಾ ನಡವಳಿಕೆಯ ಕುರಿತಾದ ಸಮಾಲೋಚನೆಗಳು ತಂತ್ರಜ್ಞಾನ ಆಡಳಿತದ ಕುರಿತಾದ ವಿಕಸನಗೊಳ್ಳುತ್ತಿರುವ ಜಾಗತಿಕ ಚರ್ಚೆಗೆ ಕೊಡುಗೆ ನೀಡಲು ನೀತಿ ನಿರೂಪಕರು, ಉದ್ಯಮದ ನಾಯಕರು ಮತ್ತು ತಂತ್ರಜ್ಞಾನ ತಜ್ಞರನ್ನು ಒಟ್ಟುಗೂಡಿಸಲಿವೆ. ಈ ನೀತಿ ಚರ್ಚೆಗಳಿಗೆ ಪೂರಕವಾಗಿ, ಭಾರತದ ಬಾಹ್ಯಾಕಾಶ, ರಕ್ಷಣಾ ಮತ್ತು ಡೀಪ್-ಟೆಕ್ ನಾವೀನ್ಯತೆ ಘಟಕಗಳಿಗೆ ಆಯೋಜಿಸಲಾದ ವಿಶೇಷ ಭೇಟಿಗಳು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಮತ್ತು ಪಾಲುದಾರರಿಗೆ ಭಾರತದ ಉದಯೋನ್ಮುಖ ತಾಂತ್ರಿಕ ಸಾಮರ್ಥ್ಯಗಳು ಮತ್ತು ಅವುಗಳ ನೈಜ-ಪ್ರಪಂಚದ ಅನ್ವಯಿಕೆಗಳ ಬಗ್ಗೆ ನೇರ ಒಳನೋಟಗಳನ್ನು ನೀಡಲಿವೆ.

‘ಡಿಎಸ್‌ಸಿಐ’  ಮತ್ತು ‘ಜಿಎಎಸ್‌ಡಿಎ’ ಸಹಭಾಗಿತ್ವದಲ್ಲಿ ಆಯೋಜಿಸಲಾದ ವಿಶೇಷ, ಚಟುವಟಿಕೆ-ಆಧಾರಿತ ಕಾರ್ಯಾಗಾರವು ತಂತ್ರಜ್ಞಾನದ ಮುನ್ನೋಟವನ್ನು ಕೇವಲ ಪರಿಕಲ್ಪನಾ ಚರ್ಚೆಗಳಿಗೆ ಸೀಮಿತಗೊಳಿಸದೆ ಪ್ರಾಯೋಗಿಕವಾಗಿ ಹೇಗೆ ಅನ್ವಯಿಸಬಹುದು ಎಂಬುದನ್ನು ಪ್ರದರ್ಶಿಸಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞರನ್ನು ಒಟ್ಟುಗೂಡಿಸುತ್ತದೆ. ಈ ಕಾರ್ಯಾಗಾರವು ಪರಿಮಾಣಾತ್ಮಕ ಮತ್ತು ಗುಣಾತ್ಮಕ ವಿಧಾನಗಳನ್ನು ಪರಿಚಯಿಸುತ್ತದೆ. ಜೊತೆಗೆ, ಕೃತಕ ಬುದ್ಧಿಮತ್ತೆ ಹಾಗೂ ‘ಮಷಿನ್ ಲರ್ನಿಂಗ್’ ಸೇರಿದಂತೆ ಸುಧಾರಿತ ಡಿಜಿಟಲ್ ಉಪಕರಣಗಳು ಮುನ್ನೋಟದ ಸಾಮರ್ಥ್ಯಗಳನ್ನು ಹೇಗೆ ಹೆಚ್ಚಿಸುತ್ತಿವೆ ಮತ್ತು ಕಾರ್ಯತಂತ್ರದ ನಿರ್ಧಾರ ತೆಗೆದುಕೊಳ್ಳುವಿಕೆಗೆ ಹೇಗೆ ಮಾಹಿತಿ ನೀಡುತ್ತಿವೆ ಎಂಬುದನ್ನು ಪ್ರದರ್ಶಿಸುತ್ತದೆ.

ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಗಾಗಿ ಭಾರತದ ಅಗ್ರಗಣ್ಯ ಸಂಸ್ಥೆಗಳಲ್ಲಿ ಒಂದಾದ ‘ಐಐಎಸ್‌ಇ’ನಲ್ಲಿ ಆಯೋಜಿಸಲಾಗಿರುವ ಈ ಸಂವಾದವು ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು, ಅಂತರ-ವಲಯ ಸಹಯೋಗವನ್ನು ಉತ್ತೇಜಿಸಲು ಮತ್ತು ತಂತ್ರಜ್ಞಾನದ ಒಮ್ಮುಖತೆ, ರಾಜತಾಂತ್ರಿಕತೆ, ಆಡಳಿತ ಹಾಗೂ ನಾವೀನ್ಯತೆಯ ಭವಿಷ್ಯವನ್ನು ರೂಪಿಸಲು ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.

ಸಂವಾದದ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: www.technologydialogue.in

 

*****


(ಪ್ರಕಟಣೆ ಐ.ಡಿ.: 2342422) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी