ಲೋಕಸಭಾ ಸಚಿವಾಲಯ
azadi ka amrit mahotsav

ಭಾರತದ ಸಂವಿಧಾನವು ಅದರ ಪ್ರಜಾಪ್ರಭುತ್ವ, ರಾಷ್ಟ್ರೀಯ ಐಕ್ಯತೆ ಮತ್ತು ಭವಿಷ್ಯದ ಪ್ರಗತಿಯ ಅಡಿಪಾಯವಾಗಿದೆ: ಲೋಕಸಭಾ ಸ್ಪೀಕರ್


ಸಂವಿಧಾನಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಹಾಗೂ ದೇಶಭಕ್ತಿ, ಬದ್ಧತೆ ಮತ್ತು ಸಮರ್ಪಣಾ ಭಾವದಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಯುವಜನರಿಗೆ ಲೋಕಸಭಾ ಸ್ಪೀಕರ್ ಕರೆ

ಸಂವಿಧಾನ ಸಭೆಯ ಚರ್ಚೆಗಳು, ಭಾರತದ ಸಂವಾದ, ವಾದ-ವಿವಾದ ಮತ್ತು ಒಮ್ಮತ ಮೂಡಿಸುವ ಸುದೀರ್ಘ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ: ಲೋಕಸಭಾ ಸ್ಪೀಕರ್

ಸಂವಿಧಾನದ ಆದರ್ಶಗಳನ್ನು ಮತ್ತು ಪರಿವರ್ತನೆಯ ಸ್ಫೂರ್ತಿಯನ್ನು ದೇಶದ ಮೂಲೆಮೂಲೆಗೂ ಕೊಂಡೊಯ್ಯುವಂತೆ ಯುವ ಭಾಗೀದಾರರನ್ನು ಒತ್ತಾಯಿಸಿದ ಲೋಕಸಭಾ ಸ್ಪೀಕರ್

'ಸಂವಿಧಾನ ದಿವಸ'ದ (ಸಂವಿಧಾನ ದಿನ) ಅಂಗವಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಭಾಷಣ

ಪ್ರಕಟಣಾ ದಿನಾಂಕ: 26 NOV 2026 5:44PM by PIB Bengaluru

ಭಾರತದ ಸಂವಿಧಾನವು ಕೇವಲ ಈ ದೇಶದ ಸರ್ವೋಚ್ಚ ಕಾನೂನು ಮಾತ್ರವಲ್ಲ, ರಾಷ್ಟ್ರದ ಪ್ರಜಾಪ್ರಭುತ್ವ ನೀತಿ, ರಾಷ್ಟ್ರೀಯ ಏಕತೆ ಮತ್ತು ಸಾಮೂಹಿಕ ಆಕಾಂಕ್ಷೆಗಳ ಅಡಿಪಾಯವಾಗಿದೆ ಎಂದು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಇಂದು ಹೇಳಿದರು. ಅಸಾಧಾರಣ ವೈವಿಧ್ಯತೆಯ ನಡುವೆಯೂ ಅದರ ಏಕತೆಯನ್ನು ಕಾಪಾಡಿಕೊಂಡು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಪರಿವರ್ತನೆಯ ಸತತ ಹಂತಗಳ ಮೂಲಕ ಮಾರ್ಗದರ್ಶನ ಮಾಡಿದೆ. ಸಂವಿಧಾನ ನಿರ್ಮಾತೃಗಳ ನಿರಂತರ ಶಾಶ್ವತ ದೃಷ್ಟಿಕೋನ ಮತ್ತು ದೂರದೃಷ್ಟಿಯನ್ನು ಒತ್ತಿ ಹೇಳಿದ ಅವರು, ಸಂವಿಧಾನವು ದೃಢವಾದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಅಡಿಪಾಯವನ್ನು ಹಾಕಿದೆ ಮತ್ತು ಶಾಂತಿ, ಸಮೃದ್ಧಿ ಹಾಗು ಪ್ರಗತಿಯತ್ತ ಭಾರತದ ಪ್ರಯಾಣವನ್ನು ಬೆಳಗಿಸುತ್ತಿದೆ ಎಂದು ಹೇಳಿದರು.

'ಸಂವಿಧಾನ ದಿವಸ'ದ ಅಂಗವಾಗಿ ಐತಿಹಾಸಿಕ 'ಸೆಂಟ್ರಲ್ ಹಾಲ್'ನಲ್ಲಿ  ಭಾಗವಹಿಸಿದ ಯುವಜನರನ್ನು  ಉದ್ದೇಶಿಸಿ ಮಾತನಾಡಿದ ಶ್ರೀ ಬಿರ್ಲಾ ಅವರು, ಸಂವಿಧಾನವನ್ನು ಕೇವಲ ಓದುವುದಕ್ಕೆ ಮಾತ್ರ ಸೀಮಿತಗೊಳಿಸದೆ , ಅದರ ಆದರ್ಶಗಳನ್ನು ತಮ್ಮ ಆಲೋಚನೆಗಳು, ನಡವಳಿಕೆ ಮತ್ತು ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವಂತೆ ಯುವಜನರಿಗೆ ಕರೆ ನೀಡಿದರು. ಪ್ರಜಾಪ್ರಭುತ್ವದ ಜೀವಂತಿಕೆಯು ಕೇವಲ ನಾಗರಿಕರಿಗೆ ನೀಡಲಾದ ಹಕ್ಕುಗಳ ಮೇಲೆ ಮಾತ್ರವಲ್ಲದೆ, ಸಮಾಜ ಮತ್ತು ರಾಷ್ಟ್ರದ ಕಡೆಗೆ ತಮ್ಮ ಕರ್ತವ್ಯಗಳು ಹಾಗೂ ಜವಾಬ್ದಾರಿಗಳನ್ನು ಪೂರೈಸಲು ನಾಗರಿಕರು ತೋರುವ ಸಿದ್ಧತೆಯ ಮೇಲೆಯೂ ಸಮಾನವಾಗಿ ಅವಲಂಬಿತವಾಗಿರುತ್ತದೆ ಎಂದು ಅವರು ಒತ್ತಿ ಹೇಳಿದರು.

'ಸಂವಿಧಾನ ಸದನ'ದ ಐತಿಹಾಸಿಕ ಪರಂಪರೆಯನ್ನು ಸ್ಮರಿಸಿದ ಶ್ರೀ ಬಿರ್ಲಾ ಅವರು, ಈ ಕಟ್ಟಡವು ಭಾರತದ ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಘಟ್ಟಗಳಿಗೆ ಹಾಗೂ ತರುವಾಯ ಸ್ವತಂತ್ರ ಭಾರತದ ಭವಿಷ್ಯವನ್ನು ರೂಪಿಸಿದ ಮಹತ್ವಪೂರ್ಣ ಚರ್ಚೆಗಳಿಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಐತಿಹಾಸಿಕ ತಾಣವು ಗಣರಾಜ್ಯವನ್ನು ರೂಪಿಸಿದ ತ್ಯಾಗಗಳು, ದೃಢ ನಂಬಿಕೆಗಳು ಮತ್ತು ದೂರದೃಷ್ಟಿಯ ಆಕಾಂಕ್ಷೆಗಳಿಗೆ ಶಾಶ್ವತ ಸಾಕ್ಷಿಯಾಗಿ ನಿಂತಿದೆ ಎಂದು ಅವರು ಹೇಳಿದರು. ಸಂವಿಧಾನವು ತನ್ನ ಸಾರ್ವತ್ರಿಕ ಆದರ್ಶಗಳು ಮತ್ತು ಪ್ರಜಾಸತ್ತಾತ್ಮಕ ತತ್ವಗಳೊಂದಿಗೆ, ಕೇವಲ ಭಾರತಕ್ಕಷ್ಟೇ ಅಲ್ಲದೆ, ಪ್ರಪಂಚದಾದ್ಯಂತ ಇರುವ ಪ್ರಜಾಸತ್ತಾತ್ಮಕ ಸಮಾಜಗಳಿಗೂ ದಾರಿದೀಪವಾಗಿ ಮುಂದುವರಿದಿದೆ ಎಂದು ಅವರು ತಿಳಿಸಿದರು.

ಸಂವಿಧಾನ ಸಭೆಯ ಅಸಾಧಾರಣ ಪ್ರಯಾಣವನ್ನು ಸ್ಮರಿಸುತ್ತಾ, ಅದರ ಸದಸ್ಯರು ಎರಡು ವರ್ಷ ಹನ್ನೊಂದು ತಿಂಗಳುಗಳ ಕಾಲ ಸಮಾಲೋಚನೆ ನಡೆಸಿದರು ಎಂದೂ ಸ್ಪೀಕರ್ ಹೇಳಿದರು. ಅವರು ವೈವಿಧ್ಯಮಯ ದೃಷ್ಟಿಕೋನಗಳನ್ನು ಒಗ್ಗೂಡಿಸಿ, ವಿಸ್ತೃತ ಚರ್ಚೆಗಳಲ್ಲಿ ತೊಡಗಿದರು; ಸಂವಾದ, ತಾರ್ಕಿಕ ವಾದ-ವಿವಾದ ಮತ್ತು ಪರಸ್ಪರ ತಿಳುವಳಿಕೆಯ ಮೂಲಕ ಸಂಕೀರ್ಣ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಂಡರು. ಭಿನ್ನಾಭಿಪ್ರಾಯಗಳಿದ್ದರೂ, ಸದಸ್ಯರು ಹೊಂದಾಣಿಕೆ ಮತ್ತು ಒಮ್ಮತದ ಮಾದರಿ ಮನೋಭಾವವನ್ನು ಪ್ರದರ್ಶಿಸಿದರು; ರಾಷ್ಟ್ರದ ಹಿತಾಸಕ್ತಿಯನ್ನು ಎಲ್ಲಕ್ಕಿಂತ ಮಿಗಿಲಾಗಿ ಪರಿಗಣಿಸಿದರು. ಈ ಗಮನಾರ್ಹ ಪ್ರಕ್ರಿಯೆಯು ಭಾರತದ ಪ್ರಜಾಪ್ರಭುತ್ವ ಮನೋಭಾವಕ್ಕೆ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ಅದರ ಸುದೀರ್ಘ ಪರಂಪರೆಗೆ ಒಂದು ಪ್ರಕಾಶಮಾನವಾದ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಭಾರತದ ಭಾಷೆಗಳು, ಉಪಭಾಷೆಗಳು, ಧರ್ಮಗಳು, ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಅಪಾರ ವೈವಿಧ್ಯತೆಯನ್ನು ಗೌರವಿಸುತ್ತಲೇ, ದೇಶದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಸಂವಿಧಾನವು ಒಂದು ಶಾಶ್ವತ ಚೌಕಟ್ಟನ್ನು ಒದಗಿಸಿದೆ ಎಂದು ಶ್ರೀ ಬಿರ್ಲಾ ಅಭಿಪ್ರಾಯಪಟ್ಟರು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಭೂತ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ, ಇದು ಎಲ್ಲಾ ನಾಗರಿಕರಿಗೆ ಒಂದು ಸಾಮಾನ್ಯ ಸಾಂವಿಧಾನಿಕ ಗುರುತನ್ನು ಖಚಿತಪಡಿಸಿದೆ ಮತ್ತು ರಾಷ್ಟ್ರದ ಭವಿಷ್ಯಕ್ಕಾಗಿ ಒಂದು ಸಮಾನ ದೃಷ್ಟಿಕೋನವನ್ನು ರೂಪಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವವು ಈ ಸಾಂವಿಧಾನಿಕ ಆದರ್ಶಗಳಿಂದ ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಜನರಿಗಿರುವ ನಂಬಿಕೆಯಿಂದ ತನ್ನ ಶಕ್ತಿಯನ್ನು ಮತ್ತು ನ್ಯಾಯಸಮ್ಮತತೆಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.

ರಾಜ್ಯಾಂಗದ ಮೂರು ಅಂಗಗಳ ವಿಶಿಷ್ಟ ಮತ್ತು ಪೂರಕ ಜವಾಬ್ದಾರಿಗಳ ಕುರಿತು ವಿವರಿಸಿದ ಶ್ರೀ ಬಿರ್ಲಾ, ಶಾಸಕಾಂಗವು ಜನರ ಆಕಾಂಕ್ಷೆಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅವರ ನಿರೀಕ್ಷೆಗಳನ್ನು ಕಾನೂನುಗಳು ಮತ್ತು ನೀತಿಗಳಾಗಿ ಪರಿವರ್ತಿಸುತ್ತದೆ; ಕಾರ್ಯಾಂಗವು ಈ ನೀತಿಗಳನ್ನು ಅವುಗಳ ಅನುಷ್ಠಾನದ ಮೂಲಕ ಜಾರಿಗೆ ತರುತ್ತದೆ; ಮತ್ತು ನ್ಯಾಯಾಂಗವು ಸಂವಿಧಾನವನ್ನು ಎತ್ತಿಹಿಡಿಯುತ್ತದೆ, ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ನ್ಯಾಯವನ್ನು ಖಚಿತಪಡಿಸುತ್ತದೆ. ಆಯಾ ಸಾಂವಿಧಾನಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆಗಳು ಸಾಮೂಹಿಕವಾಗಿ ಪ್ರಜಾಪ್ರಭುತ್ವ ಆಡಳಿತದ ಅಡಿಪಾಯವನ್ನು ಬಲಪಡಿಸುತ್ತವೆ ಮತ್ತು ಸಾಂವಿಧಾನಿಕ ಕ್ರಮದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುತ್ತವೆ. ಎಂದರು.

ಲೋಕಸಭಾ ಸ್ಪೀಕರ್ ಅವರು ಸಂವಿಧಾನದ ರಚನೆಕಾರರು ತಮ್ಮ ಕಾಲದ ತಕ್ಷಣದ ಸವಾಲುಗಳನ್ನು ಮೀರಿದ ಚೌಕಟ್ಟನ್ನು ಕಲ್ಪಿಸಿಕೊಳ್ಳುವ ಮೂಲಕ ಅಸಾಧಾರಣ ಬುದ್ಧಿವಂತಿಕೆ ಮತ್ತು ದೂರದೃಷ್ಟಿಯನ್ನು ಪ್ರದರ್ಶಿಸಿದ್ದಾರೆ ಮತ್ತು ಬದಲಾಗುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಮೂಲಕ ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯವನ್ನು ತೋರಿದ್ದಾರೆ ಎಂದು ಗಮನಿಸಿದರು. ಸಂಸತ್ತು ಮತ್ತು ಇತರ ಪ್ರಜಾಪ್ರಭುತ್ವ ಸಂಸ್ಥೆಗಳು ಸಾರ್ವಜನಿಕ ಆಕಾಂಕ್ಷೆಗಳು, ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ರಚನಾತ್ಮಕ ಚರ್ಚೆಗಳಿಗೆ ರೋಮಾಂಚಕ ವೇದಿಕೆಗಳಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕು, ಅಲ್ಲಿ ಆಲೋಚನೆಗಳು ಜನರಿಗೆ ಅರ್ಥಪೂರ್ಣ ಫಲಿತಾಂಶಗಳಾಗಿ ರೂಪಾಂತರಗೊಳ್ಳುತ್ತವೆ ಎಂದು ಅವರು ಒತ್ತಿ ಹೇಳಿದರು.

ಭಾರತದ ಯುವಜನರು ದೇಶದ ಅತಿ ದೊಡ್ಡ ಶಕ್ತಿಯಾಗಿದ್ದು, ಅವರು ಪ್ರತಿಭೆ, ಉದ್ಯಮಶೀಲತೆ, ನಾವೀನ್ಯತೆ ಮತ್ತು ಸೃಜನಶೀಲತೆಯ ಅಪಾರ ಭಂಡಾರವನ್ನು ಹೊಂದಿದ್ದಾರೆ ಎಂದು ಶ್ರೀ ಬಿರ್ಲಾ ಹೇಳಿದರು. ಯುವ ಭಾರತೀಯರು ವಿಜ್ಞಾನ, ತಂತ್ರಜ್ಞಾನ ಮತ್ತು ಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿರುವ ಈ ಸಮಯದಲ್ಲಿ, ಅವರ ದೂರದೃಷ್ಟಿ, ಶಕ್ತಿ ಮತ್ತು ದೃಢನಿಶ್ಚಯವು ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಹಾಗೂ 'ವಿಕಸಿತ ಭಾರತ'ದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಸಂವಿಧಾನವು ತಮಗೆ ನೀಡಿರುವ ಹಕ್ಕುಗಳು ಮತ್ತು ಅವಕಾಶಗಳ ಬಗ್ಗೆ ಸಂಪೂರ್ಣ ಅರಿವು ಹೊಂದುವಂತೆ ಯುವಜನರನ್ನು ಪ್ರೇರೇಪಿಸಿದ ಅವರು, ಅದೇ ಸಮಯದಲ್ಲಿ ಸಮಾಜ ಮತ್ತು ರಾಷ್ಟ್ರದ ಕಡೆಗೆ ತಮಗಿರುವ ಜವಾಬ್ದಾರಿಗಳು ಕೂಡ ಅಷ್ಟೇ ಮಹತ್ವದ್ದಾಗಿವೆ ಎಂಬುದನ್ನು ಗುರುತಿಸುವಂತೆ ಕರೆ ನೀಡಿದರು. ಸಾಂವಿಧಾನಿಕ ಅರಿವು, ಕಾನೂನು ಜ್ಞಾನ ಮತ್ತು ಸಾರ್ವಜನಿಕ ಸೇವೆಯ ಬಲವಾದ ಬದ್ಧತೆಯನ್ನು ಹೊಂದಿರುವ ಇಂದಿನ ಪೀಳಿಗೆಯು, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಮತ್ತು ಸಾಂವಿಧಾನಿಕ ಆಡಳಿತದ ಬೇರುಗಳನ್ನು ಇನ್ನಷ್ಟು ಆಳವಾಗಿಸುವಲ್ಲಿ ಅಮೂಲ್ಯವಾದ ಕೊಡುಗೆ ನೀಡಬಲ್ಲದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಭಾಗವಹಿಸಿದ ಯುವಜನರ ಉತ್ಸಾಹ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಶ್ರೀ ಬಿರ್ಲಾ, ಸಂವಿಧಾನ ಭವನದಲ್ಲಿ ಪಡೆದ ಒಳನೋಟಗಳು ಮತ್ತು ಅನುಭವಗಳನ್ನು ಅದರ ಐತಿಹಾಸಿಕ ಗೋಡೆಗಳನ್ನು ಮೀರಿ ಹೊರಗೆ ತೆಗೆದುಕೊಂಡು ಹೋಗಿ ಸಾಂವಿಧಾನಿಕ ಮೌಲ್ಯಗಳ ಸಂದೇಶವನ್ನು ಆಯಾ ರಾಜ್ಯಗಳು, ಶಿಕ್ಷಣ ಸಂಸ್ಥೆಗಳು, ಕೆಲಸದ ಸ್ಥಳಗಳು ಮತ್ತು ಸಮುದಾಯಗಳಿಗೆ ಕೊಂಡೊಯ್ಯುವಂತೆ ಅವರನ್ನು ಒತ್ತಾಯಿಸಿದರು. ಅವರು ಸಂವಿಧಾನದ ರಾಯಭಾರಿಗಳಾಗಲು ಅವರನ್ನು ಪ್ರೋತ್ಸಾಹಿಸಿದರು, ಜೊತೆಯಲ್ಲಿರುವ ವಿದ್ಯಾರ್ಥಿಗಳು ಮತ್ತು ಯುವ ನಾಗರಿಕರು ಅದರ ಆದರ್ಶಗಳನ್ನು ಅರ್ಥಮಾಡಿಕೊಳ್ಳಲು, ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಮತ್ತು ಸಕಾರಾತ್ಮಕ ಮತ್ತು ಪರಿವರ್ತನಾತ್ಮಕ ಬದಲಾವಣೆಗೆ ಕೊಡುಗೆ ನೀಡಲು ಪ್ರೇರೇಪಿಸಿದರು. ಅಭಿವೃದ್ಧಿ, ನ್ಯಾಯ ಮತ್ತು ಅವಕಾಶದ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕನನ್ನು, ವಿಶೇಷವಾಗಿ ಕೊನೆಯ ಹಂತದಲ್ಲಿರುವವರನ್ನು ತಲುಪುವಂತೆ ಖಚಿತಪಡಿಸಿಕೊಳ್ಳುವ ಮಹತ್ವವನ್ನು ಅವರು ವಿಶೇಷವಾಗಿ ಒತ್ತಿ ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಸುವಾಗ ಸ್ಪೀಕರ್, ದೇಶಭಕ್ತಿ, ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ದೃಢವಾದ ಬದ್ಧತೆಯನ್ನು ತಮ್ಮ ಜೀವನದ ಮಾರ್ಗದರ್ಶಿ ತತ್ವಗಳನ್ನಾಗಿ ಮಾಡಿಕೊಳ್ಳಲು ಭಾಗವಹಿಸಿದವರಿಗೆ ಕರೆ ನೀಡಿದರು. ಸಂವಿಧಾನ ಸದನದಿಂದ ಹೊರನಡೆಯುವಾಗ ಹೊಸ  ಉತ್ಸಾಹ, ಶ್ರೀಮಂತ ದೃಷ್ಟಿಕೋನಗಳು ಮತ್ತು ಸಂವಿಧಾನವನ್ನು ಓದಲು, ಅರ್ಥಮಾಡಿಕೊಳ್ಳಲು ಮತ್ತು ಅದರ ಉತ್ಸಾಹದಲ್ಲಿ ತೊಡಗಿಸಿಕೊಳ್ಳುವ ದೃಢ ಸಂಕಲ್ಪ ಜೊತೆಯಾಗಲಿ ಎಂದವರು ಹಾರೈಸಿದರು. ಸಾಂವಿಧಾನಿಕ ಆದರ್ಶಗಳಿಗೆ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಬದ್ಧತೆಯು ಬಲವಾದ, ಅಂತರ್ಗತ, ಪ್ರಗತಿಪರ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಮೂಲಾಧಾರವಾಗಿ ಉಳಿಯುತ್ತದೆ ಎಂದು ಅವರು ಒತ್ತಿ ಹೇಳಿದರು.

 

*****


(ಪ್ರಕಟಣೆ ಐ.ಡಿ.: 2342375) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati