ರಕ್ಷಣಾ ಸಚಿವಾಲಯ
azadi ka amrit mahotsav

ಏರೋ ಇಂಡಿಯಾ 2027: ಪ್ರದರ್ಶಕರ ದಾಖಲೆಯ ಬೇಡಿಕೆಯಿಂದಾಗಿ ರಕ್ಷಣಾ ಸಚಿವಾಲಯದಿಂದ ಪ್ರದರ್ಶನದ ಸೌಕರ್ಯಗಳ ಬೃಹತ್ ವಿಸ್ತರಣೆ


ಎರಡು ಹೊಸ ಪ್ರದರ್ಶನ ಹ್ಯಾಂಗರ್ ಗಳ ನಿರ್ಮಾಣ ಪ್ರಗತಿಯಲ್ಲಿದೆ; ಗರಿಷ್ಠ ಉದ್ಯಮದ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲು ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗಳಿಗೆ ಅನುಮತಿ

ಪ್ರಕಟಣಾ ದಿನಾಂಕ: 25 NOV 2026 3:59PM by PIB Bengaluru

ಜಾಗತಿಕ ಮತ್ತು ದೇಶದ ಪ್ರದರ್ಶಕರ ಬೇಡಿಕೆಯಲ್ಲಿ ಭಾರೀ ಬೇಡಿಕೆಗೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯು (ಡಿಡಿಪಿ) 'ಏರೋ ಇಂಡಿಯಾ 2027' ಕ್ಕಾಗಿ ಪ್ರಮುಖ ಮೂಲಸೌಕರ್ಯವನ್ನು ವಿಸ್ತಾರ ಮಾಡಲು ಪ್ರಾರಂಭಿಸಿದೆ. ಫೆಬ್ರವರಿ 8 ರಿಂದ 12, 2027ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಮತ್ತು ವಿಶ್ವದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನಗಳಲ್ಲಿ ಒಂದಾದ ಇದರ 16ನೇ ಆವೃತ್ತಿಯು, ಮೊದಲಿದ್ದ ಸಾಮರ್ಥ್ಯಕ್ಕಿಂತ ಸುಮಾರು 12,000 ಚದರ ಮೀಟರ್ ಗಳಷ್ಟು ಹೆಚ್ಚಿನ ಪ್ರದರ್ಶನ ಸ್ಥಳದ ಬೇಡಿಕೆಯನ್ನು ಕಂಡಿದೆ.  ಇದು ಭಾರತದ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಗೆ ಸಾಕ್ಷಿಯಾಗಿದೆ.

ಸಕ್ರಿಯ ಭಾರತೀಯ ವಾಯುಪಡೆಯ ತರಬೇತಿ ನೆಲೆಯ ಕಟ್ಟುನಿಟ್ಟಾದ ವಾಯುಯಾನ ಸುರಕ್ಷತೆ ಮತ್ತು ಕಾರ್ಯಾಚರಣೆಯ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಯಲಹಂಕ ಸ್ಥಳದಲ್ಲಿ ಸಮತಲ ವಿಸ್ತರಣೆಗೆ  ಮಿತಿಗಳಿವೆ. ಈ ಸ್ಥಳಾವಕಾಶದ ಮಿತಿಗಳನ್ನು ನಿವಾರಿಸಲು ಮತ್ತು ಸಾಧ್ಯವಾದಷ್ಟು ಗರಿಷ್ಠ ಸಂಖ್ಯೆಯ ಪ್ರದರ್ಶಕರಿಗೆ ಅವಕಾಶ ಕಲ್ಪಿಸಲು, ಡಿಡಿಪಿ ಎರಡು ಪ್ರಮುಖ ಪರಿಹಾರಗಳನ್ನು ಜಾರಿಗೆ ತಂದಿದೆ:

  • ಎರಡು ಹೆಚ್ಚುವರಿ ಹ್ಯಾಂಗರ್ ಗಳ ನಿರ್ಮಾಣ: ಒಟ್ಟಾರೆ ನೆಲದ ಸಾಮರ್ಥ್ಯವನ್ನು ಗಮನಾರ್ಹವಾಗಿ ವಿಸ್ತರಿಸಲು ಎರಡು ಹೊಚ್ಚಹೊಸ ಪ್ರದರ್ಶನ ಹ್ಯಾಂಗರ್ ಗಳನ್ನು ನಿರ್ಮಿಸಲಾಗುತ್ತಿದೆ.
  • ಮೆಜ್ಜನೈನ್ ಮಹಡಿಗಳಿಗೆ  ಮೊದಲ ಬಾರಿಗೆ ಅನುಮತಿ: ನೆಲದ ವಿಸ್ತೀರ್ಣವನ್ನು ಹೆಚ್ಚಿಸದೆಯೇ ಲಂಬವಾದ ಸ್ಥಳವನ್ನು ಸಮರ್ಪಕವಾಗಿ ಬಳಸಿಕೊಳ್ಳಲು, ಏರೋ ಇಂಡಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ, ಹ್ಯಾಂಗರ್ ಎತ್ತರವು ಅನುಮತಿಸುವ ಕಡೆಗಳಲ್ಲಿ ಪ್ರದರ್ಶಕರಿಗೆ ತಮಗೆ ಹಂಚಿಕೆಯಾದ ಮಳಿಗೆಗಳ ಒಳಗೆ ಮೆಜ್ಜನೈನ್ ಮಹಡಿಗಳನ್ನು ನಿರ್ಮಿಸಲು ಅನುಮತಿ ನೀಡಲಾಗುವುದು. ಎಲ್ಲಾ ಮೆಜ್ಜನೈನ್ ರಚನೆಗಳು ನಿಗದಿತ ರಚನಾತ್ಮಕ ಸ್ಥಿರತೆ, ಭಾರವನ್ನು ತಡೆದುಕೊಳ್ಳುವ ಹಾಗು ಹೊರುವ ಸಾಮರ್ಥ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

ಏರೋ ಇಂಡಿಯಾ 2027 ರಲ್ಲಿ ಜಾಗತಿಕ ಏರೋಸ್ಪೇಸ್ ಕ್ಷೇತ್ರದ  ದಿಗ್ಗಜರು, ಭಾರತದ  ತಯಾರಕರು ಮತ್ತು ನಾವೀನ್ಯಕಾರರು ತಮ್ಮ ಅತ್ಯಾಧುನಿಕ ಸಾಮರ್ಥ್ಯಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶವನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಡಿಡಿಪಿ ಹೊಂದಿದೆ.

 

*****

 


(ಪ್ರಕಟಣೆ ಐ.ಡಿ.: 2341430) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu