57th International Film Festival of India 2026
20 – 28 Nov 2026

57ನೇ ಐಎಫ್ಎಫ್ಐನಲ್ಲಿ ಐಐಸಿಟಿ–ವಾಕಾಮ್ ಇಂಡಿಯಾ ಮಹತ್ವದ ಒಪ್ಪಂದಕ್ಕ ಸಹಿ: ಭಾರತ–ಜಪಾನ್ ಸೃಜನಶೀಲ ಸಹಕಾರಕ್ಕೆ ಬಲವರ್ಧನೆ


ವಿದ್ಯಾರ್ಥಿವೇತನ, ವೃತ್ತಿಪರ ಸಾಧನಗಳು, ಜಾಗತಿಕ ಮಾರ್ಗದರ್ಶನ ಮತ್ತು ಕೈಗಾರಿಕಾ ಅನುಭವದ ಮೂಲಕ ಎವಿಜಿಸಿ-ಎಕ್ಸ್ ಆರ್ (AVGC-XR) ಪ್ರತಿಭೆಗಳಿಗೆ ನೆರವು

ಪ್ರಕಟಣಾ ದಿನಾಂಕ: 23 NOV 2026 3:06PMby PIB Bengaluruಪ್ರಕಟಣೆ ಐ.ಡಿ.: 2340355Views: 9

ಭಾರತದ ಅನಿಮೇಷನ್, ವಿಸುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ ಕ್ಷೇತ್ರದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವಾಗಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್, ವಾಕಾಮ್ ಇಂಡಿಯಾದೊಂದಿಗೆ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು. ಸೃಜನಶೀಲ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಭಾರತ–ಜಪಾನ್ ಸಹಕಾರವನ್ನು ಮತ್ತಷ್ಟು ಬಲವರ್ಧನೆಗೊಳಿಸಲಿದೆ.

ಈ ಸಹಭಾಗಿತ್ವದ ಮೂಲಕ ಭಾರತೀಯ ವಿದ್ಯಾರ್ಥಿಗಳಿಗೆ ವೃತ್ತಿಪರ ಸೃಜನಾತ್ಮಕ ಸಾಧನಗಳು ಹಾಗೂ ಕೈಗಾರಿಕೆ ಆಧಾರಿತ ತರಬೇತಿಗೆ ಹೆಚ್ಚಿನ ಪ್ರವೇಶ ಕಲ್ಪಿಸಲಾಗುತ್ತದೆ. ಒಪ್ಪಂದದ ಪ್ರಕಾರ, IICTಯ ಎರಡು ವರ್ಷಗಳ ಅವಧಿಯ ಮೂರು ಡಿಪ್ಲೊಮಾ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ 18 ವಿದ್ಯಾರ್ಥಿಗಳಿಗೆ ಶೇಕಡ 50ರಷ್ಟು ಶುಲ್ಕ ವಿದ್ಯಾರ್ಥಿವೇತನದ ರೂಪದಲ್ಲಿ ನೀಡಲಾಗುವುದು.  ಈ ವಿದ್ಯಾರ್ಥಿವೇತನವು ಅನಿಮೇಷನ್ ಫಿಲ್ಮ್ ಡಿಸೈನ್, ಇಂಟರಾಕ್ಟಿವ್ ವಿಡಿಯೊ ಗೇಮ್ ಡಿಸೈನ್ ಮತ್ತು ಡೆವಲಪ್‌ಮೆಂಟ್, ಪೋಸ್ಟ್ ಪ್ರೊಡಕ್ಷನ್ ಮತ್ತು ವಿಸುವಲ್ ಎಫೆಕ್ಟ್ಸ್ ಗೆ ಅನ್ವಯವಾಗುತ್ತದೆ. ಅದರ ಜೊತೆಗೆ, ಬೇರೆ ನಗರಗಳಿಂದ ಬರುವ ಅರ್ಹ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯಕ್ಕೂ ನೆರವು ಒದಗಿಸಲಾಗುತ್ತದೆ.

ಸ್ಪರ್ಧೆಗಳು ಮತ್ತು ಮಾಸ್ಟರ್‌ಕ್ಲಾಸ್‌ಗಳ ಮೂಲಕ ಜಾಗತಿಕ ಅನುಭವ

ಸಹಭಾಗಿತ್ವದಡಿ, ಡಿಸೆಂಬರ್ 2027ರೊಳಗೆ ವಾಕಾಮ್ ಬ್ರ್ಯಾಂಡ್‌ನ 10 ಸೃಜನಾತ್ಮಕ ಸ್ಪರ್ಧೆಗಳು ಹಾಗೂ ತ್ರೈಮಾಸಿಕ ಮಾಸ್ಟರ್‌ಕ್ಲಾಸ್‌ಗಳನ್ನು ಆಯೋಜಿಸಲಾಗುತ್ತದೆ. ಜಪಾನ್ ಮತ್ತು ಭಾರತದ ಕಲಾವಿದರು ಹಾಗೂ ಕ್ಷೇತ್ರದ ತಜ್ಞರು ಮಾಂಗಾ, ಅನಿಮೆ ಮತ್ತು ಇತರ ಸೃಜನಾತ್ಮಕ ವಿಭಾಗಗಳ ಕುರಿತು ಈ ಮಾಸ್ಟರ್‌ಕ್ಲಾಸ್‌ಗಳನ್ನು ನಡೆಸಲಿದ್ದಾರೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಸ್ಪರ್ಧಾತ್ಮಕ ಅನುಭವ ಹಾಗೂ ಜಾಗತಿಕ ಸೃಜನಾತ್ಮಕ ಪರಿಸರದ ಪರಿಚಯ ದೊರೆಯಲಿದೆ. ಡಿಜಿಟಲ್ ಇಲಸ್ಟ್ರೇಷನ್, ಕಾನ್ಸೆಪ್ಟ್ ಆರ್ಟ್, ಕ್ಯಾರೆಕ್ಟರ್ ಡಿಸೈನ್, ಅನಿಮೇಷನ್ ಮತ್ತು ಗೇಮ್ ಆರ್ಟ್ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸುವ ಕೃತಿಗಳನ್ನು ಒಳಗೊಂಡ ಜಾಗತಿಕ ವಿದ್ಯಾರ್ಥಿ ಪೋರ್ಟ್‌ಫೋಲಿಯೊ ಪ್ರದರ್ಶನವನ್ನು IICT ಮತ್ತು ವಾಕಾಮ್ ಜಂಟಿಯಾಗಿ ರೂಪಿಸಲಿವೆ. ಈ ಪ್ರದರ್ಶನವು ವಿದ್ಯಾರ್ಥಿಗಳಿಗೆ ಕೈಗಾರಿಕೆಗೆ ತಕ್ಕ ಗುಣಮಟ್ಟದ ಪೋರ್ಟ್‌ಫೋಲಿಯೊ ನಿರ್ಮಿಸಲು ಹಾಗೂ ಉದ್ಯೋಗ ಮತ್ತು ಜಾಗತಿಕ ಅವಕಾಶಗಳಿಗೆ ಸಿದ್ಧರಾಗಲು ನೆರವಾಗಲಿದೆ. ಒಪ್ಪಂದದ ಭಾಗವಾಗಿ, ಪರಸ್ಪರ ಒಪ್ಪಿಗೆಯ ಅನುಷ್ಠಾನ ಯೋಜನೆಗಳಿಗೆ ಒಳಪಟ್ಟು IICTಯನ್ನು ವಾಕಾಮ್ ಟ್ಯಾಬ್ಲೆಟ್‌ಗಳ ಪ್ಯಾಕೇಜಿಂಗ್ ಮತ್ತು ಅದರ ‘ಪಿಕ್ಸೆಲ್ ಪರ್ಚ್’ ಕ್ರಿಯೇಟರ್ ಪ್ಲಾಟ್‌ಫಾರ್ಮ್‌ನಲ್ಲೂ ಪರಿಚಯಿಸುವ ಅವಕಾಶ ಕಲ್ಪಿಸಲಾಗುವುದು.

ಕಾರ್ಯಕ್ರಮದಲ್ಲಿ ಮಾತನಾಡಿದ IICTಯ ಸಂಸ್ಥಾಪಕ ನಿರ್ದೇಶಕ ಡಾ. ಆಶಿಷ್ ಕುಲಕರ್ಣಿ, ಯುವ ಸೃಜನಶೀಲರನ್ನು ಜಾಗತಿಕ ಸೃಜನಶೀಲ ಪರಿಸರದೊಂದಿಗೆ ಬೆಸೆಯುವುದು ಭಾರತದ ಸೃಜನಾತ್ಮಕ ಆರ್ಥಿಕತೆಯ ಬೆಳವಣಿಗೆಗೆ ಅತ್ಯಗತ್ಯ ಎಂದು ಹೇಳಿದರು. ಈ ಸಹಭಾಗಿತ್ವ ಜಪಾನ್‌ನ ಅನಿಮೇಷನ್, ಮಾಂಗಾ ಮತ್ತು ಗೇಮಿಂಗ್ ಕ್ಷೇತ್ರಗಳ ಬಲವನ್ನು ಭಾರತದ ವೈವಿಧ್ಯಮಯ ಕಥನ ಪರಂಪರೆಯೊಂದಿಗೆ ಜೋಡಿಸುತ್ತದೆ ಎಂದು ಅವರು ತಿಳಿಸಿದರು. “ಜಾಗತಿಕ ಪ್ರೇಕ್ಷಕರಿಗಾಗಿ ಮೂಲ ಬೌದ್ಧಿಕ ಸ್ವತ್ತುಗಳನ್ನು ಸೃಷ್ಟಿಸಲು ವಿದ್ಯಾರ್ಥಿಗಳಿಗೆ ಈ ಸಹಕಾರ ನೆರವಾಗಲಿದೆ. ಭಾರತದ ಕಥೆ ಹೇಳುವ ಪರಂಪರೆ ಮತ್ತು ಜಪಾನ್‌ನ ಸೃಜನಾತ್ಮಕ ತಂತ್ರಜ್ಞಾನ ಪರಿಣತಿ ಒಂದಾಗುವುದರಿಂದ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ,” ಎಂದು ಅವರು ಹೇಳಿದರು.

IICTಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಶ್ವಾಸ್ ದೇವಸ್ಕರ್, AVGC-XR ಕ್ಷೇತ್ರದಲ್ಲಿ ಉದ್ಯೋಗಾರ್ಹತೆ ಹೆಚ್ಚಿಸಲು ಪ್ರಾಯೋಗಿಕ ಅನುಭವ ಅತ್ಯಂತ ಮುಖ್ಯ ಎಂದು ಹೇಳಿದರು. ಸ್ಪರ್ಧೆಗಳು, ಮಾಸ್ಟರ್‌ಕ್ಲಾಸ್‌ಗಳು, ವೃತ್ತಿಪರ ಸಾಧನಗಳು ಮತ್ತು ಪೋರ್ಟ್‌ಫೋಲಿಯೊ ನಿರ್ಮಾಣದ ಅವಕಾಶಗಳು ವಿದ್ಯಾರ್ಥಿಗಳಿಗೆ ನೈಜ ಜಗತ್ತಿನ ಕೆಲಸದ ಮಾದರಿಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗಲಿವೆ. ಇದರಿಂದ ತಮ್ಮ ಕೈಗಾರಿಕಾ ಸಿದ್ಧತೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ವಾಕಾಮ್‌ನ ಕ್ರಿಯೇಟಿವ್ ಎಕ್ಸ್‌ಪೀರಿಯನ್ಸ್ ಯೂನಿಟ್‌ನ ಜಾಗತಿಕ ಮುಖ್ಯಸ್ಥ ಕೊಜಿ ಯಾನೋ, ಅನಿಮೇಷನ್, ಮಾಂಗಾ, ಗೇಮಿಂಗ್ ಮತ್ತು ಡಿಜಿಟಲ್ ಕಂಟೆಂಟ್ ಕ್ಷೇತ್ರಗಳಲ್ಲಿ ಭಾರತ ಮತ್ತು ಜಪಾನ್ ನಡುವೆ ಸೃಜನಾತ್ಮಕ ಸಹಕಾರ ಹಾಗೂ ಜ್ಞಾನ ವಿನಿಮಯಕ್ಕೆ ಅಪಾರ ಅವಕಾಶಗಳಿವೆ ಎಂದು ಹೇಳಿದರು. ಡಿಜಿಟಲ್ ಇಂಕ್ ಸೇರಿದಂತೆ ವಾಕಾಮ್‌ನ ತಂತ್ರಜ್ಞಾನಗಳು ಯುವ ಭಾರತೀಯ ಸೃಜನಶೀಲರಿಗೆ ಜಾಗತಿಕ ಸಹಭಾಗಿತ್ವಗಳಲ್ಲಿ ಪಾಲ್ಗೊಳ್ಳಲು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕೃತಿಗಳನ್ನು ರೂಪಿಸಲು ನೆರವಾಗಲಿವೆ ಎಂದು ಅವರು ಹೇಳಿದರು.

ಐಐಸಿಟಿ ಕುರಿತು:

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಭಾರತದಲ್ಲಿ ಅನಿಮೇಷನ್, ವಿಸುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ ಕ್ಷೇತ್ರದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವಾಗಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ; ಮಹಾರಾಷ್ಟ್ರ ಸರ್ಕಾರ; ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಗಳ ಸಹಯೋಗದಲ್ಲಿ IICT ಸ್ಥಾಪನೆಯಾಗಿದೆ. ಇದರ ಮೊದಲ ಕ್ಯಾಂಪಸ್ ಮುಂಬೈನ NFDC ಕಾಂಪ್ಲೆಕ್ಸ್‌ನಲ್ಲಿ 2025ರ ಜುಲೈನಲ್ಲಿ ಕಾರ್ಯಾರಂಭ ಮಾಡಿತು. ಪ್ರಸ್ತುತ ಫಿಲ್ಮ್ ಸಿಟಿಯಲ್ಲಿ IICTಯ ಶಾಶ್ವತ ಕ್ಯಾಂಪಸ್ ನಿರ್ಮಾಣ ಹಂತದಲ್ಲಿದೆ. ಐಐಸಿಟಿ ಈಗ 18 ಕೋರ್ಸ್‌ಗಳನ್ನು ನೀಡುತ್ತಿದ್ದು, ಜಾಗತಿಕ ಮಟ್ಟದ ಪ್ರಮುಖ ತಂತ್ರಜ್ಞಾನ ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದೆ.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2340355
•
Media Centre: Goa
•
Festival Dates: Nov 20 – 28, 2026