ರಕ್ಷಣಾ ಸಚಿವಾಲಯ
azadi ka amrit mahotsav

ಟೋಕಿಯೊದಲ್ಲಿ ರಕ್ಷಣಾ ಸಚಿವರು ಮತ್ತು ಜಪಾನ್‌ನ ರಕ್ಷಣಾ ಸಚಿವರ ನಡುವೆ ದ್ವಿಪಕ್ಷೀಯ ಮಾತುಕತೆ


ಪ್ರಮುಖ ಕ್ಷೇತ್ರಗಳಲ್ಲಿ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಭಾರತ ಮತ್ತು ಜಪಾನ್ ಒಪ್ಪಿಗೆ; ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬದ್ಧತೆಯ ಪುನರುಚ್ಚಾರ

ಪ್ರಕಟಣಾ ದಿನಾಂಕ: 19 NOV 2026 7:06PM by PIB Bengaluru

ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು 2026ರ ನವೆಂಬರ್ 19ರಂದು ಟೋಕಿಯೊದಲ್ಲಿ ಜಪಾನ್‌ನ ರಕ್ಷಣಾ ಸಚಿವರಾದ ಶ್ರೀ ಶಿಂಜಿರೊ ಕೊಯಿಜುಮಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಈ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ನಡೆದ ಮಾತುಕತೆಗಳ ಬಳಿಕ, ಅಲ್ಪಾವಧಿಯಲ್ಲೇ ಮೂರನೇ ರಕ್ಷಣಾ ಸಚಿವರ ಸಭೆ ನಡೆಸಿರುವುದು ಸೇರಿದಂತೆ, ಉಭಯ ದೇಶಗಳ ನಡುವಿನ ನಿಕಟ ಸಂವಹನದ ಮೂಲಕ ರಕ್ಷಣಾ ಸಹಕಾರವು ಸ್ಥಿರವಾಗಿ ಸಾಕಾರಗೊಳ್ಳುತ್ತಿರುವುದನ್ನು ಇಬ್ಬರೂ ಸಚಿವರು ಸ್ವಾಗತಿಸಿದರು.

ಭಾರತದಲ್ಲಿರುವ ಗುಂಡು ಹಾರಿಸುವ ತರಬೇತಿ ಕೇಂದ್ರಗಳನ್ನು (ಫೈರಿಂಗ್ ರೇಂಜ್‌ಗಳು) ಬಳಸಿಕೊಳ್ಳುವ ಸಂಬಂಧ ಉದ್ದೇಶ ಪತ್ರಕ್ಕೆ (ಎಲ್‌ಒಐ) ಸಹಿ ಹಾಕಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಇದರನ್ವಯ, ಜಪಾನ್‌ನ ಸೆಲ್ಫ್-ಡಿಫೆನ್ಸ್ ಫೋರ್ಸಸ್ ಮೊದಲ ಬಾರಿಗೆ ಭಾರತದಲ್ಲಿನ ತರಬೇತಿ ಕೇಂದ್ರಗಳಲ್ಲಿ ನೈಜ ಗುಂಡು ಹಾರಿಸುವ ತರಬೇತಿ ನಡೆಸಲಿವೆ. ಇದರಲ್ಲಿ ಭೂಮಿಯಿಂದ ಹಡಗುಗಳನ್ನು ಗುರಿಯಾಗಿಸುವ ಕ್ಷಿಪಣಿಗಳ ಬಳಕೆಯ ತರಬೇತಿಯೂ ಸೇರಿದೆ. ಈ ವ್ಯವಸ್ಥೆಯನ್ನು ಶೀಘ್ರವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಎರಡೂ ದೇಶಗಳ ರಕ್ಷಣಾ ಅಧಿಕಾರಿಗಳ ನಡುವಿನ ಸಮನ್ವಯವನ್ನು ತ್ವರಿತಗೊಳಿಸಲು ಅವರು ಒಪ್ಪಿಕೊಂಡರು.

ಈ ವರ್ಷದ ಆಗಸ್ಟ್‌ನಲ್ಲಿ ಸಹಿ ಹಾಕಲಾದ ‘ಸಾಗರ ಭದ್ರತಾ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದ’ದಡಿ ಸಾಗರ ಭದ್ರತಾ ಸಹಕಾರವನ್ನು ಕಾರ್ಯರೂಪಕ್ಕೆ ತರುವಲ್ಲಿ ಆಗುತ್ತಿರುವ ಪ್ರಗತಿಯನ್ನು ಉಭಯ ಸಚಿವರು ಸ್ವಾಗತಿಸಿದರು. ವಿಶೇಷವಾಗಿ, ಸಾಗರದಾಳದ ಸ್ಫೋಟಕಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ನೌಕಾಪಡೆಯ ಹಡಗುಗಳ ನಿರ್ಮಾಣ ಮತ್ತು ವಿನ್ಯಾಸದಲ್ಲಿ ಜಂಟಿ ಅಭಿವೃದ್ಧಿಯ ಸಾಧ್ಯತೆಗಳನ್ನು ಪರಿಶೀಲಿಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಕಾರ್ಯಕಾರಿ ತಂಡದ ಮಟ್ಟದ ಮಾತುಕತೆಗಳ ಮುಂದಿನ ಪ್ರಗತಿಯನ್ನು ಜಂಟಿ ಕಾರ್ಯದರ್ಶಿ/ಮಹಾನಿರ್ದೇಶಕ ಮಟ್ಟದ ಕಾರ್ಯಕಾರಿ ಸಮಿತಿಯು ಪರಿಶೀಲಿಸಲಿದೆ ಎಂದು ಅವರು ದೃಢಪಡಿಸಿದರು.

ಭಾರತೀಯ ನೌಕಾಪಡೆ ಮತ್ತು ಜಪಾನ್‌ನ ಮ್ಯಾರಿಟೈಮ್ ಸೆಲ್ಫ್-ಡಿಫೆನ್ಸ್ ಫೋರ್ಸ್‌ಗಳ ನಡುವೆ ಮಾಹಿತಿ ವಿನಿಮಯಕ್ಕೆ ಅನುಕೂಲಕರ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸಹಕಾರವನ್ನು ಮತ್ತಷ್ಟು ಆಳಗೊಳಿಸಲು ಉಭಯ ಸಚಿವರು ಒಪ್ಪಿಕೊಂಡರು.

ಎರಡೂ ದೇಶಗಳ ನೌಕಾಪಡೆ ಮತ್ತು ಇತರ ಸಶಸ್ತ್ರ ಪಡೆಗಳು ಜಂಟಿ ಸಮರಾಭ್ಯಾಸಗಳ ಮೂಲಕ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತಿರುವುದನ್ನು ಸಚಿವರು ಸ್ವಾಗತಿಸಿದರು. ಈ ತಿಂಗಳು ಜಪಾನ್‌ನಲ್ಲಿ ನಡೆದ ಜಪಾನ್, ಅಮೆರಿಕ, ಭಾರತ ಮತ್ತು ಆಸ್ಟ್ರೇಲಿಯಾ ಭಾಗವಹಿಸಿದ್ದ ಬಹುಪಕ್ಷೀಯ ನೌಕಾ ಸಮರಾಭ್ಯಾಸ ‘ಮಲಬಾರ್ 2026’ ಹಾಗೂ ಭಾರತ-ಜಪಾನ್ ಸಾಗರ ಸಮರಾಭ್ಯಾಸ ‘ಜೈಮೆಕ್ಸ್ 26’ ಇದರಲ್ಲಿ ಸೇರಿವೆ. ಉಭಯ ದೇಶಗಳ ವಿಶೇಷ ಕಾರ್ಯಾಚರಣೆ ಪಡೆಗಳ ನಡುವಿನ ವಿನಿಮಯವನ್ನು ಮತ್ತಷ್ಟು ಹೆಚ್ಚಿಸಲು ಅವರು ಒಪ್ಪಿಕೊಂಡರು.

ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನ ಕ್ಷೇತ್ರದ ಸಹಕಾರಕ್ಕೆ ಸಂಬಂಧಿಸಿದಂತೆ, ಯುನಿಕಾರ್ನ್ ಯೋಜನೆಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಶೀಘ್ರವಾಗಿ ಅಂತಿಮಗೊಳಿಸುವ ಹಾಗೂ 2027ರ ಫೆಬ್ರವರಿಯೊಳಗೆ ಭಾರತದಿಂದ ಅಗತ್ಯತೆಯ ಅನುಮೋದನೆ (ಎಒಎನ್) ದೊರೆಯುವ ನಿರೀಕ್ಷೆಯನ್ನು ಉಭಯ ಸಚಿವರು ವ್ಯಕ್ತಪಡಿಸಿದರು. ಅತ್ಯಾಧುನಿಕ ಕ್ಷಿಪಣಿ ಮತ್ತು ರಕ್ಷಣಾ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಜಪಾನ್‌ನ ರಕ್ಷಣಾ ಉಪಕರಣಗಳ ಮತ್ತು ತಂತ್ರಜ್ಞಾನ ಸಂಸ್ಥೆ (ಎಟಿಎಲ್‌ಎ) ನಡುವಿನ ಸಂಶೋಧನೆ ಮತ್ತು ಅಭಿವೃದ್ಧಿ ಸಹಕಾರವನ್ನು ಕಾರ್ಯರೂಪಕ್ಕೆ ತರುವುದಾಗಿಯೂ ಅವರು ದೃಢಪಡಿಸಿದರು.

ವಾಯು ಕ್ಷೇತ್ರದ ಚಟುವಟಿಕೆಗಳ ಕುರಿತು ಅರಿವು ಮೂಡಿಸಲು ಎರಡೂ ದೇಶಗಳ ವಾಯುಪಡೆಗಳ ನಡುವಿನ ಸಹಕಾರವನ್ನು ಉತ್ತೇಜಿಸಲು ಉಭಯ ಸಚಿವರು ಒಪ್ಪಿಕೊಂಡರು. ಈ ಸಂಬಂಧ ಕಾರ್ಯಕಾರಿ ಗುಂಪಿನ ಮಟ್ಟದಲ್ಲಿ ನಡೆಯುವ ಮಾತುಕತೆಗಳ ಮುಂದಿನ ಪ್ರಗತಿಯನ್ನು ಜಂಟಿ ಕಾರ್ಯದರ್ಶಿ/ಮಹಾನಿರ್ದೇಶಕ ಮಟ್ಟದ ಕಾರ್ಯಕಾರಿ ಸಮಿತಿಯು ಪರಿಶೀಲಿಸಲಿದೆ ಎಂದೂ ಅವರು ದೃಢಪಡಿಸಿದರು.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯು ಹೆಚ್ಚುತ್ತಿರುವ ಸಂಕೀರ್ಣತೆ ಮತ್ತು ಅನಿಶ್ಚಿತತೆಯಿಂದ ಕೂಡಿರುವ ಹಿನ್ನೆಲೆಯಲ್ಲಿ, ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರದ ಜೊತೆಗೆ ತ್ರಿಪಕ್ಷೀಯ ಸಹಕಾರ ಸೇರಿದಂತೆ ಬಹುಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಉತ್ತೇಜಿಸಲು ಉಭಯ ಸಚಿವರು ಒಪ್ಪಿಕೊಂಡರು. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಯೋಗಿಕ ಸಹಕಾರವನ್ನು ಮುಂದುವರಿಸಲು ನಿರ್ಧರಿಸಿದರು.

ಈ ನಿರ್ದಿಷ್ಟ ಸಹಕಾರ ಕ್ಷೇತ್ರಗಳನ್ನು ದೃಢವಾಗಿ ಕಾರ್ಯರೂಪಕ್ಕೆ ತರುವ ಹಾಗೂ ಭಾರತ-ಜಪಾನ್ ರಕ್ಷಣಾ ಸಹಕಾರವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಂಕಲ್ಪವನ್ನು ಉಭಯ ಸಚಿವರು ವ್ಯಕ್ತಪಡಿಸಿದರು. ಈ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಒಟ್ಟಾಗಿ ಕೊಡುಗೆ ನೀಡುವ ಬದ್ಧತೆಯನ್ನು ಪುನರುಚ್ಚರಿಸಿದರು.

 

*****

 


(ಪ್ರಕಟಣೆ ಐ.ಡಿ.: 2338758) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Gujarati