57th International Film Festival of India 2026
20 – 28 Nov 2026

ಐ ಎಫ್ ಎಫ್ ಐ 2026ರ ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಗಾಗಿ ಐದು ವೆಬ್ ಸರಣಿಗಳು ಸ್ಪರ್ಧೆಗೆ ಆಯ್ಕೆಯಾಗಿವೆ


ಶಿಕ್ಷಣ, ಜನಪದ ಸಂಸ್ಕೃತಿ, ಉದ್ಯಮಶೀಲತೆ, ರಾಜಕೀಯ ಮತ್ತು ಮಾನವೀಯ ಸಂಬಂಧಗಳ ವಿವಿಧ ಕಥಾಹಂದರಗಳು ಭಾರತದ ಒ ಟಿ ಟಿ ಕ್ಷೇತ್ರದ ಸೃಜನಶೀಲತೆಯ ಅಪಾರ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತವೆ

ಪ್ರಕಟಣಾ ದಿನಾಂಕ: 18 NOV 2026 2:40PMby PIB Bengaluruಪ್ರಕಟಣೆ ಐ.ಡಿ.: 2337912Views: 6

2026ರ ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತದ ಡಿಜಿಟಲ್ ಮನರಂಜನಾ ಉದ್ಯಮದ ವಿಕಸನಗೊಳ್ಳುತ್ತಿರುವ ಚಿತ್ರಣವು ಕೇಂದ್ರಬಿಂದುವಾಗಲಿದ್ದು, ಒಟಿಟಿ ಪ್ರಶಸ್ತಿ ವಿಭಾಗದ ಅಡಿಯಲ್ಲಿ 'ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿ'ಗಾಗಿ ಐದು ವಿಶಿಷ್ಟ ವೆಬ್ ಸರಣಿಗಳು ನಾಮನಿರ್ದೇಶನಗೊಂಡಿವೆ. ಸಮಾಜದ ವಾಸ್ತವಗಳು, ಸಾಂಸ್ಕೃತಿಕ ಸಂಪ್ರದಾಯಗಳು, ಐತಿಹಾಸಿಕ ಮೈಲಿಗಲ್ಲುಗಳು ಮತ್ತು ಮಾನವ ಸಂಬಂಧಗಳಲ್ಲಿ ಬೇರೂರಿರುವ ಕಥೆಗಳನ್ನು ಒಟ್ಟುಗೂಡಿಸಿರುವ ಈ ನಾಮನಿರ್ದೇಶನಗಳು, ಭಾರತದ ಬೆಳೆಯುತ್ತಿರುವ ಒಟಿಟಿ ವ್ಯವಸ್ಥೆಯ ವೈವಿಧ್ಯತೆ ಮತ್ತು ಸೃಜನಶೀಲ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತವೆ.

ನಾಮನಿರ್ದೇಶನಗಳತ್ತ ಒಂದು ನೋಟ

ಆದರ್ಶ ಬಾಲ ವಿದ್ಯಾಲಯ

ಹಿಮಾಂಕ್ ಗೌರ್ ನಿರ್ದೇಶನದ 'ಆದರ್ಶ ಬಾಲ್ ವಿದ್ಯಾಲಯ' ಭಾರತದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ವಾಸ್ತವಗಳಿಗೆ ಹಾಸ್ಯ ಮತ್ತು ಸಾಮಾಜಿಕ ವಿಮರ್ಶೆಯ ಸ್ಪರ್ಶ ನೀಡುತ್ತದೆ. ದೆಹಲಿಯ ಸರ್ಕಾರಿ ಶಾಲೆಯೊಂದರ ಹಿನ್ನೆಲೆಯಲ್ಲಿ ಸಾಗುವ ಈ ಸರಣಿಯು, ಕೇಂಬ್ರಿಡ್ಜ್ಗೆ ಭೇಟಿ ನೀಡುವ ಕನಸು ಕಂಡಿರುವ ಮುಖ್ಯೋಪಾಧ್ಯಾಯ ಜ್ಞಾನೇಶ್ವರ್ ತ್ರಿಪಾಠಿ ಅವರ ಸುತ್ತ ಸುತ್ತುತ್ತದೆ; ಅವರ ಈ ಕನಸು ನನಸಾಗಲು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವುದು ಅನಿವಾರ್ಯವಾಗಿರುತ್ತದೆ. ನಿರಾಸಕ್ತ ವಿದ್ಯಾರ್ಥಿಗಳು, ಸಂಸ್ಥೆಯಲ್ಲಿರುವ ಕೊರತೆಗಳು ಮತ್ತು ಸವಾಲಿನ ಶೈಕ್ಷಣಿಕ ವಾತಾವರಣವು ಅವರ ದಾರಿಗೆ ಅಡ್ಡಲಾಗಿ ನಿಂತಿರುವಾಗ, ಆದರ್ಶವಾದಿ ಶಿಕ್ಷಕರೊಬ್ಬರ ಆಗಮನವು ಶಾಲೆಯನ್ನು ಪರಿವರ್ತಿಸುವ ಪ್ರಯತ್ನವನ್ನು ಹುಟ್ಟು ಹಾಕುತ್ತದೆ.

ಶಿಕ್ಷಣದ ಸವಾಲುಗಳ ಕುರಿತಾದ ಚಿಂತನೆಯೊಂದಿಗೆ ಹಾಸ್ಯವನ್ನು ಬೆರೆಸಿರುವ ಈ ಸರಣಿಯು, ಸಮರ್ಪಿತ ಶಿಕ್ಷಕರ ಪಾತ್ರ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿನ ಬದಲಾವಣೆಯ ಸಾಧ್ಯತೆಯನ್ನು ಉಲ್ಲೇಖಿಸುತ್ತದೆ.

ದೇವಖೇಲ್

ಜಾನಪದ ಮತ್ತು ಸಾಂಪ್ರದಾಯಿಕ ನಂಬಿಕೆಗಳಿಂದ ಸ್ಫೂರ್ತಿ ಪಡೆದಿರುವ, ಚಂದ್ರಕಾಂತ್ ಲತಾ ಗಾಯಕ್ವಾಡ್ ನಿರ್ದೇಶನದ 'ದೇವಖೇಲ್', ಪ್ರತಿ ವರ್ಷ ಹೋಳಿ ಹಬ್ಬದ ರಾತ್ರಿ ಸಾವು ಸಂಭವಿಸುವ ದೇವತಾಳಿ ಗ್ರಾಮದ ನಿಗೂಢ ಜಗತ್ತಿಗೆ ವೀಕ್ಷಕರನ್ನು ಕರೆದೊಯ್ಯುತ್ತದೆ. ಈ ಪುನರಾವರ್ತಿತ ಘಟನೆಗಳಿಗೆ ಸ್ಥಳೀಯ ಸಂಪ್ರದಾಯಗಳೊಂದಿಗೆ ತಳುಕು ಹಾಕಿಕೊಂಡಿರುವ 'ಶಂಕಾಸುರ' ಎಂಬ ಪೌರಾಣಿಕ ರಾಕ್ಷಸನೇ ಕಾರಣ ಎಂದು ಗ್ರಾಮಸ್ಥರು ನಂಬುತ್ತಾರೆ. ಮತ್ತೊಂದು ನಿಗೂಢ ಸಾವು ಸಂಭವಿಸಿದಾಗ, ಈ ಆತಂಕಕಾರಿ ಸರಣಿಯ ಹಿಂದಿನ ಸತ್ಯವನ್ನು ಬಯಲಿಗೆಳೆಯಲು ಇನ್ಸ್ಪೆಕ್ಟರ್ ವಿಶ್ವಾಸ್ ಮುಂದಾಗುತ್ತಾರೆ. ತನಿಖೆ ಮುಂದುವರಿದಂತೆ ಗ್ರಾಮದ ರಹಸ್ಯಗಳು, ಗುಪ್ತ ಉದ್ದೇಶಗಳು ಮತ್ತು ನಂಬಿಕೆಯ ಕುರಿತಾದ ಪ್ರಶ್ನೆಗಳು ಹೊರಬರುತ್ತವೆ.

ಅಪರಾಧ, ಸಸ್ಪೆನ್ಸ್ ಮತ್ತು ಜಾನಪದ ಅಂಶಗಳನ್ನು ಬೆರೆಸಿರುವ ಈ ಸರಣಿಯು ಮೂಢನಂಬಿಕೆ, ಸಂಪ್ರದಾಯ ಮತ್ತು ವಾಸ್ತವದ ನಡುವಿನ ಸೂಕ್ಷ್ಮ ಸಂಗಮವನ್ನು ಅನ್ವೇಷಿಸುತ್ತದೆ.

ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ

ರಾಬಿ ಗ್ರೆವಾಲ್ ನಿರ್ದೇಶನದ 'ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ', ಭಾರತದ ಅತ್ಯಂತ ಪ್ರಸಿದ್ಧ ಸ್ವದೇಶಿ ಬ್ರ್ಯಾಂಡ್ ಗಳಲ್ಲಿ ಒಂದರ ಸೃಷ್ಟಿಯ ಹಿಂದಿನ ಉದ್ಯಮಶೀಲ ದೂರದೃಷ್ಟಿಯನ್ನು ಅನಾವರಣಗೊಳಿಸುತ್ತದೆ. ಆರ್ಥಿಕ ಉದಾರೀಕರಣಕ್ಕೂ ಮುನ್ನಿನ ಕಾಲಘಟ್ಟದ ಹಿನ್ನೆಲೆಯಲ್ಲಿ ಸಾಗುವ ಈ ಸರಣಿಯು, ವಿದೇಶಿ ಉತ್ಪನ್ನಗಳು ಮತ್ತು ಕಳ್ಳಸಾಗಣೆ ಕೈಗಡಿಯಾರಗಳ  ಪ್ರಾಬಲ್ಯವಿದ್ದ ಮಾರುಕಟ್ಟೆಯಲ್ಲಿ ವಿಶ್ವದರ್ಜೆಯ ಭಾರತೀಯ ವಾಚ್ ಬ್ರ್ಯಾಂಡ್ ಅನ್ನು ಸ್ಥಾಪಿಸುವ ಜೆರ್ಕ್ಸಸ್ ದೇಸಾಯಿ ಅವರ ಮಹತ್ವಾಕಾಂಕ್ಷೆಯ ಪ್ರಯತ್ನವನ್ನು ಅನುಸರಿಸುತ್ತದೆ. ಜೆ.ಆರ್.ಡಿ. ಟಾಟಾ ಅವರ ಮಾರ್ಗದರ್ಶನ ಮತ್ತು ಬದ್ಧತೆಯ ತಂಡದ ಬೆಂಬಲದೊಂದಿಗೆ, ದೇಸಾಯಿ ಅವರು ಅಧಿಕಾರಶಾಹಿ ಅಡೆತಡೆಗಳು, ಆರ್ಥಿಕ ಮಿತಿಗಳು ಮತ್ತು ತಾಂತ್ರಿಕ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ.

ಮಹತ್ವಾಕಾಂಕ್ಷೆಯ ಕೈಗಾರಿಕಾ ದೂರದೃಷ್ಟಿಯನ್ನು ಭಾರತದ ಕಾರ್ಪೊರೇಟ್ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ಪರಿವರ್ತಿಸಿದ ದೃಢನಿಶ್ಚಯ, ನಾವೀನ್ಯತೆ ಮತ್ತು ಪ್ರವರ್ತಕ ಮನೋಭಾವವನ್ನು ಈ ಕಥನವು ಸೆರೆಹಿಡಿಯುತ್ತದೆ.

ಮಾಯಾಸಭಾ: ದಿ ರೈಸ್ ಆಫ್ ದಿ ಟೈಟಾನ್ಸ್

1970ರ ದಶಕದ ಆಂಧ್ರಪ್ರದೇಶದ ರಾಜಕೀಯ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಹೆಣೆಯಲಾದ, ದೇವ ಕಟ್ಟಾ ನಿರ್ದೇಶನದ 'ಮಾಯಾಸಭಾ: ದಿ ರೈಸ್ ಆಫ್ ದಿ ಟೈಟಾನ್ಸ್', ಆದರ್ಶವಾದಿ ವಿದ್ಯಾರ್ಥಿ ನಾಯಕ ಕಾಕರ್ಲ ಕೃಷ್ಣಮ ನಾಯ್ಡು (ಕೆಕೆಎನ್) ಮತ್ತು ಪ್ರಭಾವಿ ಕುಟುಂಬದಿಂದ ಬಂದ ಯುವಕ ಎಂ.ಎಸ್. ರಾಮಿ ರೆಡ್ಡಿ ಅವರ ಪಯಣವನ್ನು ಅನ್ವೇಷಿಸುತ್ತದೆ.

ವಿಭಿನ್ನ ಹಿನ್ನೆಲೆಗಳ ಹೊರತಾಗಿಯೂ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆ ತರುವ ಆಶಯಗಳೊಂದಿಗೆ ಒಂದಾಗಿ ಆಪ್ತ ಸ್ನೇಹಿತರಾಗಿ ಪಯಣ ಆರಂಭಿಸುವ ಇವರ ಸಂಬಂಧದಲ್ಲಿ, ಜಾತಿ ವಿಭಜನೆ, ಹಣ, ಭ್ರಷ್ಟಾಚಾರ, ಅಧಿಕಾರದ ಹೋರಾಟ ಮತ್ತು ಬದಲಾಗುತ್ತಿರುವ ಸಮೀಕರಣಗಳಂತಹ ರಾಜಕೀಯ ಜೀವನದ ಕಠಿಣ ವಾಸ್ತವಗಳನ್ನು ಎದುರಿಸುತ್ತಿದ್ದಂತೆ ಕ್ರಮೇಣ ಬಿರುಕು ಮೂಡುತ್ತದೆ. ಸ್ನೇಹಿತರಾಗಿದ್ದವರು ರಾಜಕೀಯ ಪ್ರತಿಸ್ಪರ್ಧಿಗಳಾಗಿ ಅವರು ಬದಲಾಗುವ ರೀತಿಯು ಕಥೆಯ ಜೀವಾಳವಾಗಿದ್ದು, ರಾಜಕೀಯ ತಂತ್ರಗಾರಿಕೆ, ಬದಲಾಗುವ ನಿಷ್ಠೆಗಳು ಮತ್ತು ಅಧಿಕಾರದ ಪಡಸಾಲೆಯಲ್ಲಿನ ಮಾನವ ಸಂಬಂಧಗಳ ಸಂಕೀರ್ಣತೆಗಳ ಕುರಿತು ಪ್ರಭಾವಶಾಲಿ ಒಳನೋಟವನ್ನು ನೀಡುತ್ತದೆ.

ಮುಸಾಫಿರ್ ಕೆಫೆ

 

ಕಥೆ ಹೇಳುವಲ್ಲಿ ಹೆಚ್ಚು ಆಪ್ತವಾದ ವಿಧಾನವನ್ನು ಅನುಸರಿಸಿರುವ, ರುಚಿರ್ ಅರುಣ್ ನಿರ್ದೇಶನದ 'ಮುಸಾಫಿರ್ ಕೆಫೆ', ಪ್ರೀತಿ, ಒಡನಾಟ ಮತ್ತು ಆತ್ಮಶೋಧನೆಯ ಹಲವು ಆಯಾಮಗಳನ್ನು ಅನ್ವೇಷಿಸುತ್ತದೆ. ಚಂದರ್ ಮೋಹನ್ ಶರ್ಮಾ ಹಾಗೂ ಸುಧಾ ಮತ್ತು ಪ್ರೀತಿ ಅವರೊಂದಿಗಿನ ಆತನ ಸಂಬಂಧಗಳ ಸುತ್ತ ಕೇಂದ್ರೀಕೃತವಾಗಿರುವ ಈ ಸರಣಿಯು, ಬದಲಾಗುತ್ತಿರುವ ಸಂದರ್ಭಗಳು, ವೈಯಕ್ತಿಕ ಆಯ್ಕೆಗಳು ಮತ್ತು ಮಾನವ ಬಾಂಧವ್ಯಗಳ ಸಂಕೀರ್ಣತೆಗಳ ಮೂಲಕ ಸಾಗುವ ಆತನ ಭಾವನಾತ್ಮಕ ಪಯಣವನ್ನು ಅನುಸರಿಸುತ್ತದೆ. ಭೋಪಾಲ್ ಮತ್ತು ಮಸ್ಸೂರಿಯ ಸುಂದರ ಪ್ರಕೃತಿ ತಾಣಗಳ ಹಿನ್ನೆಲೆಯಲ್ಲಿ ಸಾಗುವ ಈ ಕಥನವು ಪ್ರೀತಿ, ಕೈತಪ್ಪಿದ ಅವಕಾಶಗಳು, ಸ್ವೀಕಾರ ಮತ್ತು ಜೀವನವನ್ನು ರೂಪಿಸುವ ಅನಿರೀಕ್ಷಿತ ತಿರುವುಗಳ ಕುರಿತು ಚಿಂತಿಸುತ್ತದೆ. ಇದು ಸಂಬಂಧಗಳನ್ನು ಬೆಳವಣಿಗೆ ಮತ್ತು ಅನ್ವೇಷಣೆಯ ಪಯಣಗಳಾಗಿ ಪ್ರಸ್ತುತಪಡಿಸುತ್ತದೆ, ಇಲ್ಲಿ ಪ್ರತಿಯೊಂದು ಭೇಟಿಯೂ ಮಾನವ ಅನುಭವದ ಮೇಲೆ ತನ್ನದೇ ಆದ ಛಾಪು ಮೂಡಿಸುತ್ತದೆ.

ಒಟ್ಟಾರೆಯಾಗಿ, ಆಯ್ಕೆಯಾದ ಈ ಐದು ನಾಮನಿರ್ದೇಶನಗಳು ಭಾರತದ ಒಟಿಟಿ ಕ್ಷೇತ್ರದ ವಿಸ್ತರಿಸುತ್ತಿರುವ ಸೃಜನಶೀಲ ಸಾಧ್ಯತೆಗಳನ್ನು ಪ್ರದರ್ಶಿಸುತ್ತವೆ; ಇಲ್ಲಿ ವಿವಿಧ ಪ್ರದೇಶಗಳು, ಸಂಸ್ಕೃತಿಗಳು ಮತ್ತು ಸಾಮಾಜಿಕ ಸಂದರ್ಭಗಳ ಕಥೆಗಳು ಡಿಜಿಟಲ್ ಮಾಧ್ಯಮದ ಮೂಲಕ ಅಭಿವ್ಯಕ್ತಿ ಪಡೆಯುತ್ತವೆ. ಸರ್ಕಾರಿ ಶಾಲೆಯ ತರಗತಿಯ ಸವಾಲುಗಳು ಮತ್ತು ಗ್ರಾಮೀಣ ಜಾನಪದದ ನಿಗೂಢತೆಗಳಿಂದ ಹಿಡಿದು ಭಾರತದ ಉದ್ಯಮಶೀಲ ಪಯಣ, ರಾಜಕೀಯ ಪೈಪೋಟಿಗಳು ಮತ್ತು ಪ್ರೀತಿಯ ಸೂಕ್ಷ್ಮತೆಗಳವರೆಗೆ, ಸಮಕಾಲೀನ ಭಾರತೀಯ ಕಥೆಗಾರಿಕೆಯು ಅನ್ವೇಷಿಸುತ್ತಿರುವ ವಿಷಯಗಳ ವ್ಯಾಪ್ತಿಯನ್ನು ಈ ನಾಮನಿರ್ದೇಶಿತ ಸರಣಿಗಳು ನಿರೂಪಿಸುತ್ತವೆ.

ನವೆಂಬರ್ 20ರಿಂದ 28, 2026ರವರೆಗೆ ಗೋವಾದಲ್ಲಿ ನಡೆಯಲಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್‌ ಎಫ್‌ ಐ) 'ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿ'ಯು ಮೂಲ ವೆಬ್-ಆಧಾರಿತ ವಿಷಯಗಳಲ್ಲಿನ ಶ್ರೇಷ್ಠತೆಯನ್ನು ಗುರುತಿಸುತ್ತದೆ ಮತ್ತು ಭಾರತದ ಡಿಜಿಟಲ್ ಮನರಂಜನಾ ಉದ್ಯಮವನ್ನು ರೂಪಿಸುತ್ತಿರುವ ಬರಹಗಾರರು, ನಿರ್ದೇಶಕರು, ನಿರ್ಮಾತೃಗಳು, ನಟರು ಮತ್ತು ನಿರ್ಮಾಣ ತಂಡಗಳ ಸೃಜನಶೀಲ ದೂರದೃಷ್ಟಿ ಹಾಗೂ ಕೊಡುಗೆಗಳನ್ನು ಗೌರವಿಸುತ್ತದೆ. ನವೀನ ಕಥೆಗಾರಿಕೆ ಮತ್ತು ಸಿನಿಮೀಯ ಅಭಿವ್ಯಕ್ತಿಗೆ ಒಟಿಟಿ ವೇದಿಕೆಗಳು ಒಂದು ಪ್ರಮುಖ ಮಾಧ್ಯಮವಾಗಿ ಬೆಳೆಯುತ್ತಿರುವ ಮಹತ್ವವನ್ನು ಈ ನಾಮನಿರ್ದೇಶನಗಳು ಪುನರುಚ್ಚರಿಸುತ್ತವೆ.

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2337912
•
Media Centre: Goa
•
Festival Dates: Nov 20 – 28, 2026