57th International Film Festival of India 2026
20 – 28 Nov 2026

ಚಲನಚಿತ್ರೋತ್ಸವದ ಮೊಟ್ಟಮೊದಲ 'ಫಿಲ್ಮ್ಸ್ ಅಬೌಟ್ ಫಿಲ್ಮ್ಸ್' ವಿಭಾಗದೊಂದಿಗೆ ಹೊಸ ಆರಂಭಕ್ಕೆ ನಾಂದಿ ಹಾಡಿದ 57ನೇ ಐಎಫ್‌ಎಫ್‌ಐ


ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ಪ್ರದರ್ಶನಗೊಳ್ಳಲಿರುವ ಹತ್ತು ದೇಶಗಳ ಐದು ಅಂತಾರಾಷ್ಟ್ರೀಯ ನಿರ್ಮಾಣದ ಚಿತ್ರಗಳು

ಪ್ರಸಿದ್ಧ ಚಲನಚಿತ್ರ ನಿರ್ಮಾಪಕರ ಸಲಹೆಯ ಮೇರೆಗೆ ಸಂಯೋಜಿಸಲಾದ ಈ ಚೊಚ್ಚಲ ಪಟ್ಟಿಯು ಸಿನಿಮಾದ ಹಿಂದಿನ ಜೀವನಗಳು, ಪರಂಪರೆಗಳು ಮತ್ತು ಸೃಜನಶೀಲ ಪಯಣಗಳನ್ನು ಅನ್ವೇಷಿಸುತ್ತದೆ

ಪ್ರಕಟಣಾ ದಿನಾಂಕ: 18 NOV 2026 2:26PMby PIB Bengaluruಪ್ರಕಟಣೆ ಐ.ಡಿ.: 2337890Views: 3

ಸಿನಿಮಾ ಯಾವಾಗಲೂ ಗಡಿಗಳು, ತಲೆಮಾರುಗಳು ಮತ್ತು ಸಂಸ್ಕೃತಿಗಳನ್ನು ದಾಟಿ ಸಾಗುವ ಕಥೆಗಳ ಬಗ್ಗೆಯೇ ಆಗಿದೆ. ಆದರೆ ಪ್ರತಿಯೊಂದು ಚಲನಚಿತ್ರದ ಹಿಂದೆಯೂ ಹೇಳಲು ಕಾಯುತ್ತಿರುವ ಮತ್ತೊಂದು ಕಥೆ ಇರುತ್ತದೆ; ಅದು ಚಲನಚಿತ್ರ ನಿರ್ಮಾಪಕರ ಕಥೆ, ಸೃಜನಶೀಲ ಪ್ರಕ್ರಿಯೆ, ಹೋರಾಟಗಳು ಮತ್ತು ಅದನ್ನು ರೂಪಿಸುವ ಜನರ ಕಥೆಯಾಗಿರುತ್ತದೆ.

ಈ ಕಥೆಗಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ, 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಈ ವರ್ಷದ ಧ್ಯೇಯವಾಕ್ಯವಾದ "ಗಡಿಗಳಿಲ್ಲದ ಕಥೆಗಳು" ಅಡಿಯಲ್ಲಿ, ಸ್ವತಃ ಸಿನಿಮಾದ ಮೇಲೆಯೇ ಬೆಳಕು ಚೆಲ್ಲುವ ಹೊಸ ವಿಭಾಗವನ್ನು ಪರಿಚಯಿಸಿದೆ. ದಿಗ್ಗಜ ಚಲನಚಿತ್ರ ನಿರ್ಮಾಪಕರು, ನಟರು ಮತ್ತು ಎಂದಿಗೂ ನಿರ್ಮಾಣವಾಗದ ಚಲನಚಿತ್ರಗಳ ಕಥೆಗಳ ಮೂಲಕ, ಸಿನಿಮಾವನ್ನು ಇಂದಿನ ರೂಪಕ್ಕೆ ತಂದ ಅನೇಕ ಪಯಣಗಳನ್ನು ಅನ್ವೇಷಿಸುವ ಅವಕಾಶವನ್ನು ಈ ವಿಭಾಗವು ಪ್ರೇಕ್ಷಕರಿಗೆ ನೀಡುತ್ತದೆ.

ಚಲನಚಿತ್ರಕ್ಕೆ ಜೀವ ತುಂಬುವ ಕಥೆಗಳು, ಕಥೆಗಾರರು ಮತ್ತು ಸೃಜನಶೀಲ ಪಯಣಗಳನ್ನು ಅನ್ವೇಷಿಸಲು ಕ್ಯಾಮೆರಾದ ಹಿಂದೆ ಹೆಜ್ಜೆ ಹಾಕುತ್ತಾ, 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಸಿನಿಮಾವೇ ಕಥೆಗಾರ ಮತ್ತು ಕಥೆಯಾಗುವ ವಿಶೇಷ ವೇದಿಕೆಯನ್ನು ಪರಿಚಯಿಸಿದೆ. ಉತ್ಸವದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಪಾದಾರ್ಪಣೆ ಮಾಡುತ್ತಿರುವ ಹೊಸ 'ಫಿಲ್ಮ್ಸ್ ಅಬೌಟ್ ಫಿಲ್ಮ್ಸ್' ವಿಭಾಗವು, 2026 ರ ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿರುವ 57 ನೇ ಐಎಫ್‌ಎಫ್‌ಐನಲ್ಲಿ ಚಲನಚಿತ್ರ ನಿರ್ಮಾಣದ ಕಲೆ ಮತ್ತು ಕೌಶಲ್ಯವನ್ನು ಹತ್ತಿರದಿಂದ ನೋಡಲು ಪ್ರೇಕ್ಷಕರನ್ನು ಆಹ್ವಾನಿಸುತ್ತದೆ.

ಚಲನಚಿತ್ರ ನಿರ್ಮಾಣದ ಕಲೆ ಮತ್ತು ಕೌಶಲ್ಯವನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಹೆಸರಾಂತ ಚಲನಚಿತ್ರ ನಿರ್ಮಾಪಕರ ಸಲಹೆಗಳಿಗೆ ಸ್ಪಂದಿಸಿ ಸೇರ್ಪಡೆಗೊಳಿಸಲಾದ ಈ ಉದ್ಘಾಟನಾ ವಿಭಾಗವು ಐದು ಅಂತಾರಾಷ್ಟ್ರೀಯ ನಿರ್ಮಾಣಗಳನ್ನು ಒಳಗೊಂಡಿದೆ. ಯುಕೆ, ಯುಎಸ್‌ಎ, ರಷ್ಯಾ, ಜಾರ್ಜಿಯಾ, ಎಸ್ಟೋನಿಯಾ, ಟರ್ಕಿ, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿ ಸೇರಿದಂತೆ ಹತ್ತು ದೇಶಗಳ ನಿರ್ಮಾಣ ಮತ್ತು ಸಹ-ನಿರ್ಮಾಣಗಳನ್ನು ವ್ಯಾಪಿಸಿರುವ ಈ ಪಟ್ಟಿಯು, ವಿಶ್ವ ಸಿನಿಮಾವನ್ನು ರೂಪಿಸುವ ಜೀವನಗಳು ಮತ್ತು ಪರಂಪರೆಗಳ ಅಪರೂಪದ ನೋಟವನ್ನು ಸಿನಿಮಾ ಆಸಕ್ತರಿಗೆ ನೀಡುತ್ತದೆ.

ಸಿನಿಮಾ ಭಾಷೆಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದ ಚಲನಚಿತ್ರ ನಿರ್ಮಾಪಕರೊಬ್ಬರೊಂದಿಗೆ ಈ ಪಯಣ ಪ್ರಾರಂಭವಾಗುತ್ತದೆ.

ಬಾರ್ನಾಬಿ ಥಾಂಪ್ಸನ್ ನಿರ್ದೇಶನದ 'ಮಾವೆರಿಕ್: ದಿ ಎಪಿಕ್ ಅಡ್ವೆಂಚರ್ಸ್ ಆಫ್ ಡೇವಿಡ್ ಲೀನ್' (ಯುಕೆ, ಯುಎಸ್‌ಎ | 2026 | ಇಂಗ್ಲಿಷ್ | 105 ನಿಮಿಷಗಳು) ದಿಗ್ಗಜ ಚಲನಚಿತ್ರ ನಿರ್ಮಾಪಕ ಡೇವಿಡ್ ಲೀನ್ ಅವರ ಜೀವನ ಮತ್ತು ವೃತ್ತಿಜೀವನವನ್ನು ಅನ್ವೇಷಿಸುತ್ತದೆ. ಈ ಸಾಕ್ಷ್ಯಚಿತ್ರವು ಅವರ ಸೃಜನಶೀಲ ದೃಷ್ಟಿಕೋನ, ಮಹತ್ವಾಕಾಂಕ್ಷೆಯ ಯೋಜನೆಗಳು ಮತ್ತು ಸಿನಿಮೀಯ ಗಡಿಗಳನ್ನು ವಿಸ್ತರಿಸುವ ದೃಢನಿಶ್ಚಯವನ್ನು ನೋಡುತ್ತದೆ, ಜೊತೆಗೆ ಅವರ ವೃತ್ತಿಪರ ಸಾಧನೆಗಳ ಹಿಂದಿನ ವೈಯಕ್ತಿಕ ಹೋರಾಟಗಳು ಮತ್ತು ಆಧುನಿಕ ಸಿನಿಮಾದ ಮೇಲಿನ ಅವರ ಶಾಶ್ವತ ಪ್ರಭಾವವನ್ನು ಪರಿಶೀಲಿಸುತ್ತದೆ.

ಪ್ರಸಿದ್ಧ ಚಲನಚಿತ್ರ ನಿರ್ಮಾಪಕರ ಪರಂಪರೆಯಿಂದ, ನಾವು ಹೇಳುವ ಕಥೆಗಳನ್ನು, ರೂಪಿಸುವ ಜೀವನಗಳು ಮತ್ತು ಸಂಬಂಧಗಳತ್ತ ಸಾಗುತ್ತಾ, ಈ ಆಯ್ಕೆಯು ಮಾನವ ಅನುಭವದ ಹೆಚ್ಚು ಆತ್ಮೀಯ ಅನ್ವೇಷಣೆಯತ್ತ ಮುಂದೆ ಸಾಗುತ್ತದೆ.

ರಷ್ಯಾದ ರೌಲ್ ಗೀದರೋವ್ ಅವರ 'ಸಿಡ್ನಿ ಲುಮೆಟ್ಸ್ ಬರ್ತ್‌ಡೇ' (ರಷ್ಯಾ | 2025 | ರಷ್ಯನ್ | 92 ನಿಮಿಷಗಳು), ಒಂದು ಕಾಲದಲ್ಲಿ ದೊಡ್ಡದಾಗಿದ್ದ ಕುಟುಂಬದ ಉಳಿದ ಸದಸ್ಯರ ನಡುವೆ ತನ್ನ ಅಜ್ಜಿಯೊಂದಿಗೆ ವಾಸಿಸುವ 17 ವರ್ಷದ ಜಾರ್ಜಿಯನ್ ಬಾಲಕ ಡಾಟೊ (Dato) ಕಥೆಯನ್ನು ಅನುಸರಿಸುತ್ತದೆ. ದೀರ್ಘಕಾಲದ ಗೈರುಹಾಜರಿಯ ನಂತರ ಅವನ ತಾಯಿ ಅನಿರೀಕ್ಷಿತವಾಗಿ ಮರಳಿದಾಗ, ಕೌಟುಂಬಿಕ ಸಂಬಂಧಗಳು, ಬೆಳವಣಿಗೆ ಮತ್ತು ಕಷ್ಟಕರ ಸಂದರ್ಭಗಳಲ್ಲಿ ಮಾನವೀಯವಾಗಿ ಉಳಿಯುವ ಹೋರಾಟವನ್ನು ಅನ್ವೇಷಿಸುವ ಕಥೆಯಲ್ಲಿ ಅವರ ಶಾಂತ ದಿನಚರಿಯು ಅಸ್ತವ್ಯಸ್ತಗೊಳ್ಳುತ್ತದೆ.

ಮುಂದಿನ ಚಿತ್ರದಲ್ಲಿ ಜೀವನ ಮತ್ತು ಅಭಿನಯದ ನಡುವಿನ ಸಂಬಂಧವು ಕೇಂದ್ರಬಿಂದುವಾಗುತ್ತದೆ, ಅಲ್ಲಿ ನಟ ಮತ್ತು ಅವನು ನಿರ್ವಹಿಸುವ ಪಾತ್ರದ ನಡುವಿನ ಗಡಿಗಳು ಮಸುಕಾಗಲು ಪ್ರಾರಂಭಿಸುತ್ತವೆ.

ಅನಾ ಉರುಶಾಡ್ಜೆ ಅವರ 'ಸಪೋರ್ಟಿಂಗ್ ರೋಲ್ (ಮಿಯೊರೆಖಾರಿಸ್ಖೋವಾನಿ ರೋಲಿ)' (ಜಾರ್ಜಿಯಾ, ಎಸ್ಟೋನಿಯಾ, ಟರ್ಕಿ, ಸ್ವಿಟ್ಜರ್ಲೆಂಡ್, ಯುಎಸ್‌ಎ | 2026 | ಜಾರ್ಜಿಯನ್, ಅರ್ಮೇನಿಯನ್ | 139 ನಿಮಿಷಗಳು) ದೀರ್ಘ ವಿರಾಮದ ನಂತರ ನಟನೆಗೆ ಮರಳುವ ಮತ್ತು ಯುವ ನಿರ್ದೇಶಕರೊಬ್ಬರ ಮೊದಲ ಚಿತ್ರಕ್ಕಾಗಿ ಆಡಿಷನ್ ನೀಡುವ ಖ್ಯಾತ ಜಾರ್ಜಿಯನ್ ನಟನ ಸುತ್ತ ಕೇಂದ್ರೀಕೃತವಾಗಿದೆ. ತಾನು ನಟಿಸಲು ಒಗ್ಗಿಕೊಂಡಿರುವ ನಾಯಕನ ಪಾತ್ರಗಳ ಬದಲಿಗೆ ಅಸಾಮಾನ್ಯ ಪೋಷಕ ಪಾತ್ರವನ್ನು ನೀಡಲಾದಾಗ, ಅವನು ಕ್ರಮೇಣ ಆ ಪಾತ್ರದೊಂದಿಗೆ ಬೆಸೆದುಕೊಳ್ಳುತ್ತಾನೆ ಮತ್ತು ಆ ಅನುಭವವು ಅವನನ್ನು ಪರಿವರ್ತಿಸಲು ಪ್ರಾರಂಭಿಸುತ್ತದೆ.

ಒಬ್ಬ ನಟನ ವೈಯಕ್ತಿಕ ಜೀವನ ಪಯಣದಿಂದ, ಈ ಆಯ್ಕೆಯು ಪರದೆಯ ಮೇಲೆ ಎಂದೂ ಬಾರದ ಚಲನಚಿತ್ರವೊಂದರ ಕಥೆಯತ್ತ ಸಾಗುತ್ತದೆ, ಸಿನಿಮಾದ ಸೃಷ್ಟಿಯ ಸುತ್ತಲಿನ ರಾಜಕೀಯ ಮತ್ತು ಐತಿಹಾಸಿಕ ಸಂದರ್ಭಗಳಿಂದ ಅದು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಇದು ಬಹಿರಂಗಪಡಿಸುತ್ತದೆ.

'ದಿ ಮ್ಯಾಡ್ ಡಾಗ್ ಆಫ್ ಯುರೋಪ್' (ಫ್ರಾನ್ಸ್, ಜರ್ಮನಿ | 2026 | ಇಂಗ್ಲಿಷ್ | 83 ನಿಮಿಷಗಳು) ಚಿತ್ರದಲ್ಲಿ, ನಿರ್ದೇಶಕರಾದ ರುಬಿಕಾ ಶಾ ಅವರು ಹಿಟ್ಲರ್ ಮತ್ತು ನಾಜಿವಾದದ ಉದಯವನ್ನು ಎದುರಿಸುತ್ತಿರುವ ಜರ್ಮನ್-ಯಹೂದಿ ಕುಟುಂಬದ ಕುರಿತು 1932 ರಲ್ಲಿ ಹರ್ಮನ್ ಜೆ. ಮ್ಯಾಂಕಿವಿಚ್ ಬರೆದ ನಿರ್ಮಾಣವಾಗದ ಚಿತ್ರಕಥೆಯನ್ನು ಮರುಪರಿಶೀಲಿಸುತ್ತಾರೆ. ರಾಜಕೀಯ ಒತ್ತಡ ಮತ್ತು ವಾಣಿಜ್ಯ ಹಿತಾಸಕ್ತಿಗಳ ಕಾರಣದಿಂದಾಗಿ ಹಾಲಿವುಡ್ ಸ್ಟುಡಿಯೋಗಳಿಂದ ಎಂದಿಗೂ ನಿರ್ಮಾಣವಾಗದ ಈ ಚಿತ್ರವನ್ನು ಏಕೆ ತಡೆಹಿಡಿಯಲಾಯಿತು ಎಂಬುದರ ಬಗೆಗಿನ ಕಾರಣಗಳನ್ನು ಮತ್ತು ಪ್ರಸ್ತುತ ಸಂದರ್ಭದಲ್ಲಿ ಅದರ ಪ್ರಸ್ತುತತೆಯನ್ನು ಈ ಸಾಕ್ಷ್ಯಚಿತ್ರವು ಪರಿಶೀಲಿಸುತ್ತದೆ.

ಸಿನಿಮಾವನ್ನು ರೂಪಿಸುವ ಜೀವನಗಳು, ಸೃಜನಶೀಲ ಹೋರಾಟಗಳು ಮತ್ತು ಪರಂಪರೆಗಳ ಮೂಲಕ ಸಾಗುವ ಈ ಪಯಣವನ್ನು ಅದರ ಅತ್ಯಂತ ಪ್ರಭಾವಶಾಲಿ ಗುರುಗಳಲ್ಲಿ ಒಬ್ಬರಿಗೆ ಗೌರವ ಸಲ್ಲಿಸುವ ಮೂಲಕ ಪೂರ್ಣಗೊಳಿಸಲಾಗುತ್ತದೆ.

ಈ ಪಟ್ಟಿಯನ್ನು ಪೂರ್ಣಗೊಳಿಸುವ ಫ್ರಾನ್ಸೆಸ್ಕೊ ಜಿಪ್ಪೆಲ್ ಅವರ 'ವಿಟ್ಟೋರಿಯೊ ಡಿ ಸಿಕಾ - ಸ್ಟೇಜಿಂಗ್ ಲೈಫ್' (ಇಟಲಿ | 2026 | ಇಟಾಲಿಯನ್, ಫ್ರೆಂಚ್, ಇಂಗ್ಲಿಷ್, ರಷ್ಯನ್, ಫಾರ್ಸಿ | 100 ನಿಮಿಷಗಳು) ವಿಶ್ವ ಸಿನಿಮಾದ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವಿಟ್ಟೋರಿಯೊ ಡಿ ಸಿಕಾ ಅವರ ಆತ್ಮೀಯ ವ್ಯಕ್ತಿಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಅಪರೂಪದ ಆರ್ಕೈವಲ್ ಸಾಮಗ್ರಿಗಳು, ಕುಟುಂಬದ ಒಡನಾಟ ಮತ್ತು ಚಲನಚಿತ್ರ ನಿರ್ಮಾಪಕರು ಹಾಗೂ ಸಮಕಾಲೀನ ಕಲಾವಿದರ ಸಾಕ್ಷ್ಯಗಳನ್ನು ಆಧರಿಸಿ, ಈ ಸಾಕ್ಷ್ಯಚಿತ್ರವು ಅವರ ಜೀವನ, ಕೆಲಸ ಮತ್ತು ಸಿನಿಮೀಯ ಪರಂಪರೆಯನ್ನು ಪತ್ತೆಹಚ್ಚುತ್ತದೆ.

ಒಟ್ಟಾರೆಯಾಗಿ, ಈ ಐದು ಚಲನಚಿತ್ರಗಳು, ಸಿನಿಮಾ ನಿರ್ಮಾಣದ ಒಂದು ಒಂದು ಕಿರು ನೋಟವನ್ನು ಮಾತ್ರ ನೀಡುತ್ತವೆ. ಅವು ಕ್ಯಾಮೆರಾದ ಹಿಂದಿರುವ ಜನರು, ಅಭಿನಯಕ್ಕೆ ಸ್ಫೂರ್ತಿ ನೀಡುವ ಜೀವನಗಳು, ಹೇಳದೆ ಉಳಿದಿರುವ ಕಥೆಗಳು ಮತ್ತು ತಲೆಮಾರುಗಳಿಂದ ಚಲನಚಿತ್ರ ನಿರ್ಮಾಪಕರ ಮೇಲೆ ಪ್ರಭಾವ ಬೀರುತ್ತಲೇ ಇರುವ ಪರಂಪರೆಗಳನ್ನು ಪರಿಶೋಧಿಸುತ್ತದೆ. ಈ ವೈವಿಧ್ಯಮಯ ಪಯಣಗಳನ್ನು ಒಂದೆಡೆ ತರುವ ಮೂಲಕ, ಈ ಹೊಸ ವಿಭಾಗವು ಐಎಫ್‌ಎಫ್‌ಐನ "ಗಡಿಗಳಿಲ್ಲದ ಕಥೆಗಳು" ಧ್ಯೇಯವಾಕ್ಯಕ್ಕೆ ಮತ್ತೊಂದು ಆಯಾಮವನ್ನು ಜೋಡಿಸುತ್ತದೆ, ಸಿನಿಮಾದ ವ್ಯಾಪ್ತಿಯು, ಪರದೆಯ ಮೇಲಿನ ಕಥೆಗಳನ್ನು ಮೀರಿ ಅವುಗಳಿಗೆ ಜೀವ ತುಂಬುವ ಸೃಜನಶೀಲ ಪಯಣಗಳು, ಐತಿಹಾಸಿಕ ಸಂದರ್ಭಗಳು ಮತ್ತು ಮಾನವ ಅನುಭವಗಳವರೆಗೆ ವಿಸ್ತರಿಸುತ್ತದೆ ಎಂಬುದನ್ನು ಪ್ರೇಕ್ಷಕರಿಗೆ ನೆನಪಿಸುತ್ತದೆ. ತನ್ನ ಚೊಚ್ಚಲ ಪ್ರವೇಶದೊಂದಿಗೆ, 'ಫಿಲ್ಮ್ಸ್ ಅಬೌಟ್ ಫಿಲ್ಮ್ಸ್' ಪ್ರೇಕ್ಷಕರಿಗೆ ಹೊಸ ದೃಷ್ಟಿಕೋನದಿಂದ ಚಲನಚಿತ್ರ ನಿರ್ಮಾಣದ ಕಲೆ ಮತ್ತು ಕೌಶಲ್ಯದೊಂದಿಗೆ ತೊಡಗಿಸಿಕೊಳ್ಳಲು ಒಂದು ವೇದಿಕೆಯನ್ನು ಸಹ ಸೃಷ್ಟಿಸುತ್ತದೆ.

2026 ರ ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು, "ಗಡಿಗಳಿಲ್ಲದ ಕಥೆಗಳು" ಎಂಬ ಧ್ಯೇಯವಾಕ್ಯದಡಿ ಭಾರತ ಮತ್ತು ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರು, ಉದ್ಯಮದ ವೃತ್ತಿಪರರು ಮತ್ತು ಸಿನಿಮಾ ಆಸಕ್ತರನ್ನು ಒಂದೆಡೆ ಸೇರಿಸಲಿದೆ.

ಹೊಸದಾಗಿ ಪರಿಚಯಿಸಲಾದ 'ಫಿಲ್ಮ್ಸ್ ಅಬೌಟ್ ಫಿಲ್ಮ್ಸ್' ವಿಭಾಗವು ವಿವಿಧ ದೇಶಗಳು ಮತ್ತು ಸಂಸ್ಕೃತಿಗಳ ಚಲನಚಿತ್ರ ನಿರ್ಮಾಪಕರು, ನಟರು ಮತ್ತು ಸಿನಿಮೀಯ ಪರಂಪರೆಗಳ ಕಥೆಗಳನ್ನು ಒಂದೆಡೆ ತರುವ ಮೂಲಕ ಈ ಧ್ಯೇಯವಾಕ್ಯವನ್ನು ಸಾಕಾರಗೊಳಿಸುತ್ತದೆ, ಸ್ವತಃ ಚಲನಚಿತ್ರ ನಿರ್ಮಾಣದ ಕಲೆಯೇ ಭೌಗೋಳಿಕ ಗಡಿಗಳನ್ನು ಹೇಗೆ ಮೀರುತ್ತದೆ ಎಂಬುದನ್ನು ತೋರಿಸುತ್ತದೆ.

ಸಿನಿಮಾ ತಯಾರಿಸುವುದರ ಹಿಂದಿರುವ ಜನರು, ಅವರ ಆಲೋಚನೆಗಳು ಮತ್ತು ಅನುಭವಗಳನ್ನು ಅನ್ವೇಷಿಸುವ ಮೂಲಕ, ಈ ವಿಭಾಗವು ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರನ್ನು ಬೆಸೆಯುವ ಸಾರ್ವತ್ರಿಕ ಸೃಜನಶೀಲ ಪಯಣಗಳನ್ನು ಎತ್ತಿಹಿಡಿಯುತ್ತದೆ. ಭಾರತೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳ ವೈವಿಧ್ಯಮಯ ಪಟ್ಟಿ, ವಿಶೇಷ ದೇಶಗಳ ಪ್ರದರ್ಶನಗಳು, ಪ್ರೀಮಿಯರ್‌ಗಳು, ಸ್ಪರ್ಧೆಗಳು ಮತ್ತು ಉದ್ಯಮದ ಸಂವಾದಗಳೊಂದಿಗೆ, ಐಎಫ್‌ಎಫ್‌ಐ 2026 ಸಿನಿಮೀಯ ಶ್ರೇಷ್ಠತೆಯನ್ನು ಸಂಭ್ರಮಿಸುವ ಮತ್ತು ಸಿನಿಮಾದ ಮೂಲಕ ಅಂತರ್-ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವ ತನ್ನ ಪರಂಪರೆಯನ್ನು ಮುಂದುವರಿಸಿದೆ.

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2337890
•
Media Centre: Goa
•
Festival Dates: Nov 20 – 28, 2026