ಪ್ರಕಟಣಾ ದಿನಾಂಕ:
13 NOV 2026 3:50PM by PIB Bengaluru
ಕೇಂದ್ರ ಶಿಕ್ಷಣ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ವಿಶಾಖಪಟ್ಟಣದಲ್ಲಿ ನಡೆದ 31 ನೇ ಸಿಐಐ (CII) ಪಾಲುದಾರಿಕೆ ಶೃಂಗಸಭೆಯಲ್ಲಿ "ಸುಸ್ಥಿರ ಭವಿಷ್ಯವನ್ನು ಭದ್ರಪಡಿಸುವುದು: ಇಂಧನ ಸ್ಥಿತಿಸ್ಥಾಪಕತ್ವ, ಶುದ್ಧ ತಂತ್ರಜ್ಞಾನಗಳು ಮತ್ತು ಜಾಗತಿಕ ಪಾಲುದಾರಿಕೆ" ಕುರಿತ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಶೃಂಗಸಭೆಯಲ್ಲಿ ವಿನಿಮಯ ಮಾಡಿಕೊಳ್ಳಲಾದ ತಿಳುವಳಿಕಾ ಒಡಂಬಡಿಕೆಗಳನ್ನು ಉಲ್ಲೇಖಿಸಿದ ಶ್ರೀ ಜೋಶಿ ಅವರು, ನವೀಕರಿಸಬಹುದಾದ ಇಂಧನ ವಲಯದಲ್ಲಿನ 17 ತಿಳುವಳಿಕಾ ಒಡಂಬಡಿಕೆಗಳು ಮತ್ತು 3 ಸರ್ಕಾರಿ ಆದೇಶಗಳು ಸುಮಾರು 4,700 ಜನರಿಗೆ ಉದ್ಯೋಗಾವಕಾಶಗಳೊಂದಿಗೆ ₹43,871 ಕೋಟಿ ಮೌಲ್ಯದ ಹೂಡಿಕೆಗಳನ್ನು ಪ್ರತಿನಿಧಿಸುತ್ತವೆ ಎಂದು ತಿಳಿಸಿದರು. ಶುದ್ಧ ಇಂಧನ ಮತ್ತು ಸುಸ್ಥಿರ ಬೆಳವಣಿಗೆಯ ವಿಷಯದಲ್ಲಿ ಭಾರತ ಮತ್ತು ಆಂಧ್ರಪ್ರದೇಶಗಳು "ನುಡಿದಂತೆ ನಡೆಯುತ್ತಿವೆ" ಎಂಬುದನ್ನು ಈ ಬದ್ಧತೆಗಳು ತೋರಿಸುತ್ತವೆ ಎಂದು ಅವರು ಹೇಳಿದರು.
ಭಾರತದ ಇಂಧನ ಭದ್ರತೆಯ ಪ್ರಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸಚಿವರು, 2012 ರಲ್ಲಿ ಪ್ರಮುಖ ಗ್ರಿಡ್ ವೈಫಲ್ಯವು ಉತ್ತರ ಭಾರತವನ್ನು ಸುಮಾರು 72 ಗಂಟೆಗಳ ಕಾಲ ಕತ್ತಲೆಯಲ್ಲಿ ಮುಳುಗಿಸಿದಾಗ 123 GW ಇದ್ದ ಗರಿಷ್ಠ ಬೇಡಿಕೆಯು ಇತ್ತೀಚೆಗೆ 270 GW ಗೆ ಏರಿದೆ ಎಂದು ಸ್ಮರಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಅವರ ನಾಯಕತ್ವದಲ್ಲಿ, ಪಳೆಯುಳಿಕೆಯೇತರ ಮೂಲಗಳಿಂದ ಸುಮಾರು ಶೇಕಡಾ 33 ರಷ್ಟು ಕೊಡುಗೆಯೊಂದಿಗೆ ಯಾವುದೇ ಅಡೆತಡೆಯಿಲ್ಲದೆ ಈ ಬೇಡಿಕೆಯನ್ನು ಪೂರೈಸಲಾಗಿದೆ.

ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನದ ಮಹತ್ವವನ್ನು ಪ್ರತಿಪಾದಿಸಿದ ಶ್ರೀ ಜೋಶಿ ಅವರು, ಆಂಧ್ರಪ್ರದೇಶವೊಂದರಲ್ಲೇ 7.86 ಲಕ್ಷ ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು. ರಾಷ್ಟ್ರಮಟ್ಟದಲ್ಲಿ, ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಆರಂಭಿಕ 1 ಕೋಟಿ ಗುರಿಯ ವಿರುದ್ಧ ಈಗಾಗಲೇ 66 ಲಕ್ಷ ಕುಟುಂಬಗಳು ಪ್ರಯೋಜನ ಪಡೆದಿವೆ ಎಂದೂ ಅವರು ತಿಳಿಸಿದರು. ಮೊದಲ 1 ಲಕ್ಷ ಸ್ಥಾಪನೆಗಳಿಗೆ 118 ದಿನಗಳಾಗುತ್ತಿದ್ದ ಸ್ಥಾಪನೆಯ ವೇಗವು ಈಗ ಸರಾಸರಿ 6 ದಿನಗಳಿಗೆ ಗಮನಾರ್ಹವಾಗಿ ಸುಧಾರಿಸಿದ್ದು, ಸಚಿವಾಲಯವು ಶೀಘ್ರದಲ್ಲೇ 5 ದಿನಗಳ ಗುರಿಯನ್ನು ಹೊಂದಿದೆ. ರೈತರು ಮತ್ತು ಕುಟುಂಬಗಳು ಶೂನ್ಯ ವಿದ್ಯುತ್ ಬಿಲ್ಲುಗಳನ್ನು ಸಾಧಿಸುವುದು ಮಾತ್ರವಲ್ಲದೆ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಿಂದ ಆದಾಯವನ್ನೂ ಗಳಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ನವೀಕರಿಸಬಹುದಾದ ಇಂಧನದ ವ್ಯಾಪಕ ಪಯಣದ ಕುರಿತು ಮಾತನಾಡಿದ ಸಚಿವರು, ಸೌರ ಶಕ್ತಿ ಸಾಮರ್ಥ್ಯವು 2014 ರಲ್ಲಿದ್ದ 2.8 GW ನಿಂದ ಇಂದು 175 GW ಗೆ ಬೆಳೆದಿದೆ ಎಂದು ತಿಳಿಸಿದರು. ಪಳೆಯುಳಿಕೆಯೇತರ ಮೂಲಗಳು ಈಗ ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಸುಮಾರು ಶೇಕಡಾ 55 ರಷ್ಟನ್ನು ಹೊಂದಿದ್ದು, 2030 ರ ವೇಳೆಗೆ 500 GW ಪಳೆಯುಳಿಕೆಯೇತರ ಸಾಮರ್ಥ್ಯದ ಗುರಿಯನ್ನು ಸಾಧಿಸುವ ದೃಢವಾದ ಹಾದಿಯಲ್ಲಿ ದೇಶವನ್ನು ಇರಿಸಿವೆ. "ಶೂನ್ಯ ದೋಷ, ಶೂನ್ಯ ಪರಿಣಾಮ" ಉತ್ಪಾದನೆಯ ಪ್ರಧಾನಮಂತ್ರಿ ಶ್ರೀ ಮೋದಿ ಅವರ ದೃಷ್ಟಿಕೋನವನ್ನು ಪುನರುಚ್ಚರಿಸಿದ ಅವರು, ಹಸಿರು ಇಂಧನವು ಭಾರತವನ್ನು ಜಾಗತಿಕ ಹಸಿರು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲು ಅನುವು ಮಾಡಿಕೊಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಚಂದ್ರಬಾಬು ನಾಯ್ಡು ಅವರ ನಾಯಕತ್ವದಲ್ಲಿ ಭಾರತ ಮತ್ತು ಆಂಧ್ರಪ್ರದೇಶಗಳು ರಾಜಕೀಯ ಸ್ಥಿರತೆ, ನೀತಿ ಸ್ಥಿರತೆ ಮತ್ತು ಬಲವಾದ ಅನುಷ್ಠಾನದ ಕಾರಣದಿಂದಾಗಿ ಹೂಡಿಕೆಗೆ ಅತ್ಯುತ್ತಮ ಮತ್ತು ಸುರಕ್ಷಿತ ತಾಣವಾಗಿದೆ ಎಂದು ಶ್ರೀ ಜೋಶಿ ಬಣ್ಣಿಸಿದರು. ಕೃಷಿ ಉಪಕರಣಗಳು ಮತ್ತು ಪಂಪ್ಗಳನ್ನು ಮತ್ತಷ್ಟು ಸೌರೀಕರಣಗೊಳಿಸಲಿರುವ ಮುಂಬರುವ 'ಪಿಎಂ-ಕುಸುಮ್ 2' ಕುರಿತೂ ಅವರು ಉಲ್ಲೇಖಿಸಿದರು.
ಉತ್ಪಾದನಾ ಕೇಂದ್ರವಾಗಿ ಭಾರತವು ಹಸಿರು ಇಂಧನದಿಂದ ಶಕ್ತಿ ಪಡೆಯಲಿದ್ದು, ಇದು ಜಾಗತಿಕ ಮಾರುಕಟ್ಟೆಗಳಲ್ಲಿ ನಮ್ಮ ಉತ್ಪನ್ನಗಳಿಗೆ ಬಲವಾದ ಪ್ರಯೋಜನವನ್ನು ನೀಡುತ್ತದೆ ಎಂದು ಪುನರುಚ್ಚರಿಸುವ ಮೂಲಕ ಶ್ರೀ ಜೋಶಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
*****