57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು 2026ರ ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ 'ಗಡಿಗಳಿಲ್ಲದ ಕಥೆಗಳು' ಎಂಬ ಧ್ಯೇಯವಾಕ್ಯದಡಿ ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರು, ಸಿನಿಮಾ ಆಸಕ್ತರು ಮತ್ತು ಸೃಜನಶೀಲ ಧ್ವನಿಗಳನ್ನು ಒಂದೆಡೆ ಸೇರಿಸಲಿದೆ. ತನ್ನ ಬೆಳೆಯುತ್ತಿರುವ ಜಾಗತಿಕ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತಾ, ಈ ಉತ್ಸವವು 137 ದೇಶಗಳಿಂದ 1,900 ಕ್ಕೂ ಹೆಚ್ಚು ಚಲನಚಿತ್ರ ಅರ್ಜಿಗಳನ್ನು ಸ್ವೀಕರಿಸಿದೆ ಮತ್ತು 86 ದೇಶಗಳನ್ನು ಪ್ರತಿನಿಧಿಸುವ 150ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಲನಚಿತ್ರಗಳನ್ನು ಪ್ರದರ್ಶಿಸಲಿದೆ, ಆ ಮೂಲಕ ಅಂತರ್-ಸಾಂಸ್ಕೃತಿಕ ವಿನಿಮಯ, ವೈವಿಧ್ಯಮಯ ಕಥೆ ಹೇಳುವಿಕೆ ಮತ್ತು ಸಿನಿಮೀಯ ಶ್ರೇಷ್ಠತೆಗೆ ಒಂದು ರೋಮಾಂಚಕ ವೇದಿಕೆಯನ್ನು ಸೃಷ್ಟಿಸಲಿದೆ.
ಗೋವಾದ ತಾಜ್ ಸಿಡಾಡೆ ಡಿ ಗೋವಾ ಹಾರಿಜಾನ್ನಲ್ಲಿ ನಡೆದ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಪೂರ್ವಭಾವಿ ಪತ್ರಿಕಾಗೋಷ್ಠಿಯನ್ನು ಗೋವಾದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಾ. ಪ್ರಮೋದ್ ಸಾವಂತ್ ಅವರು ಉದ್ಘಾಟಿಸಿದರು ಮತ್ತು ಭಾರತೀಯ ಹಾಗೂ ಅಂತಾರಾಷ್ಟ್ರೀಯ ಸಿನಿಮಾವನ್ನು ಸಂಭ್ರಮಿಸುವ ಉತ್ಸವದ ವಿಸ್ತೃತ ಕಾರ್ಯಕ್ರಮವನ್ನು ಅನಾವರಣಗೊಳಿಸಿದರು. ಐಎಫ್ಎಫ್ಐನೊಂದಿಗೆ ಗೋವಾದ ಒಡನಾಟದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಈ ಉತ್ಸವವನ್ನು ರಾಜ್ಯದ ಸಾಂಸ್ಕೃತಿಕ ಗುರುತು ಮತ್ತು ಕ್ಯಾಲೆಂಡರ್ನ ಅವಿಭಾಜ್ಯ ಅಂಗವೆಂದು ಬಣ್ಣಿಸಿದರು. ಪ್ರದರ್ಶನ ಸ್ಥಳಗಳು, ಸಾರಿಗೆ, ಆತಿಥ್ಯ ಮತ್ತು ಸಾರ್ವಜನಿಕ ಸೌಲಭ್ಯಗಳ ವ್ಯವಸ್ಥೆಗಳೊಂದಿಗೆ ಜಾಗತಿಕ ಚಲನಚಿತ್ರ ಭ್ರಾತೃತ್ವವನ್ನು ಸ್ವಾಗತಿಸಲು ರಾಜ್ಯ ಸರ್ಕಾರ ನಡೆಸಿರುವ ಸಿದ್ಧತೆಗಳನ್ನೂ ಅವರು ಶ್ಲಾಘಿಸಿದರು.
ಈ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಗೋವಾ ಮನರಂಜನಾ ಸೊಸೈಟಿಯ ಉಪಾಧ್ಯಕ್ಷರಾದ ಶ್ರೀಮತಿ ಎಂ. ಡೆಲಿಲಾ ಎಂ. ಲೋಬೋ, ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್, ಎನ್ಎಫ್ಡಿಸಿ ಅಧ್ಯಕ್ಷರಾದ ಶ್ರೀ ಕೃಷ್ಣ ಕುಮಾರ್, ಐಎಫ್ಎಫ್ಐ 2026 ರ ಉತ್ಸವದ ನಿರ್ದೇಶಕರಾದ ಶ್ರೀ ಅಶುತೋಷ್ ಗೋವಾರಿಕರ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್, ಚಲನಚಿತ್ರ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾದ ಶ್ರೀ ಮಧುರ್ ಭಂಡಾರ್ಕರ್, ಕಿರುಚಿತ್ರ/ಸಾಕ್ಷ್ಯಚಿತ್ರ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾದ ಶ್ರೀ ಹಿಮಾಂಶು ಶೇಖರ್ ಖಟುವಾ, ಗೋವಾ ಮನರಂಜನಾ ಸೊಸೈಟಿಯ ಸಿಇಒ ಶ್ರೀ ದೀಪಕ್ ಮಾಂಡೇಕರ್, ಎನ್ಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಧೀರಜ್ ಸಿಂಗ್ ಮತ್ತು ಪಿಐಬಿ ಪಶ್ಚಿಮ ವಲಯದ ಮಹಾನಿರ್ದೇಶಕರಾದ ಸ್ಮಿತಾ ವತ್ಸ್ ಶರ್ಮಾ ಅವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು ಸಿನಿಮೀಯ ಶ್ರೇಷ್ಠತೆ, ಸಾಂಸ್ಕೃತಿಕ ವಿನಿಮಯ ಮತ್ತು ವೈವಿಧ್ಯಮಯ ಧ್ವನಿಗಳೊಂದಿಗಿನ ಸಂವಾದವನ್ನು ಉತ್ತೇಜಿಸುವ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಸಿನಿಮಾದ ಪ್ರಮುಖ ವೇದಿಕೆಯಾಗಿ ಐಎಫ್ಎಫ್ಐ ವಿಕಸನಗೊಂಡಿರುವುದನ್ನು ಪ್ರಶಂಶಿಸಿದರು. "ಕಥೆಗಳಿಗೆ ವಿಳಾಸವಿರಬಹುದು, ಆದರೆ ಭಾವನೆಗಳಿಗೆ ಗಡಿಗಳಿಲ್ಲ," ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾತನ್ನು ಅವರು ಸ್ಮರಿಸಿದರು. ಈ ಆಲೋಚನೆಯನ್ನು ವಿಸ್ತರಿಸುತ್ತಾ, ಈ ವರ್ಷದ ಧ್ಯೇಯವಾಕ್ಯವಾದ 'ಗಡಿಗಳಿಲ್ಲದ ಕಥೆಗಳು' ಮತ್ತು ಭೌಗೋಳಿಕ, ಭಾಷಾ ಹಾಗೂ ಸಾಂಸ್ಕೃತಿಕ ಅಡೆತಡೆಗಳನ್ನು ಮೀರುವ ಸಿನಿಮಾದ ಸಾಮರ್ಥ್ಯವನ್ನು ಅವರು ಒತ್ತಿ ಹೇಳಿದರು. ಭಾಷೆಗಳು, ಸಂಸ್ಕೃತಿಗಳು ಮತ್ತು ಸಮುದಾಯಗಳಾದ್ಯಂತ ಭಾರತದ ಶ್ರೀಮಂತ ಕಥೆ ಹೇಳುವ ಪರಂಪರೆಯನ್ನೂ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು 57 ನೇ ಐಎಫ್ಎಫ್ಐ ಅಂತಾರಾಷ್ಟ್ರೀಯ ಸಿನಿಮಾ ವೇದಿಕೆಯಲ್ಲಿ ಉತ್ಸವದ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಉತ್ಸವದ ನಿರ್ದೇಶಕ ಶ್ರೀ ಅಶುತೋಷ್ ಗೋವಾರಿಕರ್ ಅವರು 'ಗಡಿಗಳಿಲ್ಲದ ಕಥೆಗಳು' ಧ್ಯೇಯವಾಕ್ಯವನ್ನು ವಿವರಿಸುತ್ತಾ, ಭೌಗೋಳಿಕ, ಭಾಷಾ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿ ಸಾರ್ವತ್ರಿಕ ಮಾನವ ಭಾವನೆಗಳು ಹಾಗೂ ಕಥೆ ಹೇಳುವಿಕೆಯ ಮೂಲಕ ಪ್ರೇಕ್ಷಕರನ್ನು ಬೆಸೆಯುವ ಸಿನಿಮಾದ ಶಕ್ತಿಯ ಬಗ್ಗೆ ಒತ್ತಿ ಹೇಳಿದರು.

ಎನ್ಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಧೀರಜ್ ಸಿಂಗ್ ಅವರು ಉತ್ಸವದ ಒಟ್ಟಾರೆ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು, ಅದರ ಜಾಗತಿಕ ವ್ಯಾಪ್ತಿ, ವೈವಿಧ್ಯಮಯ ಸಿನಿಮಾ ಕೊಡುಗೆಗಳು ಮತ್ತು ವಿಕಸನಗೊಳ್ಳುತ್ತಿರುವ ಗುರುತನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

57 ನೇ ಆವೃತ್ತಿಯ ಪ್ರಮುಖ ಮುಖ್ಯಾಂಶಗಳು
ಉದ್ಘಾಟನಾ ಚಿತ್ರ
ಪಾವೆಲ್ ಪಾವ್ಲಿಕೋವ್ಸ್ಕಿ ನಿರ್ದೇಶನದ ಉದ್ಘಾಟನಾ ಚಿತ್ರ 'ಫಾದರ್ಲ್ಯಾಂಡ್', 1949ರಲ್ಲಿ ಯುದ್ಧಾನಂತರದ ವಿಭಜಿತ ಜರ್ಮನಿಯ ಮೂಲಕ ನೊಬೆಲ್ ಪ್ರಶಸ್ತಿ ವಿಜೇತ ಥಾಮಸ್ ಮ್ಯಾನ್ ಮತ್ತು ಅವರ ಪುತ್ರಿ ಎರಿಕಾ ಪ್ರಯಾಣಿಸುವ ಕಥೆಯನ್ನು ಹೊಂದಿದ್ದು, ಆ ಕಾಲದ ರಾಜಕೀಯ ಮತ್ತು ವೈಯಕ್ತಿಕ ವಿಭಜನೆಗಳನ್ನು ಅನ್ವೇಷಿಸುತ್ತದೆ. ಈ ಚಿತ್ರವು 2026 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದೆ ಮತ್ತು 2026 ರ ಸಿಡ್ನಿ ಫಿಲ್ಮ್ ಪ್ರೈಜ್ಗೂ ನಾಮನಿರ್ದೇಶನಗೊಂಡಿತ್ತು.
57ನೇ ಐಎಫ್ಎಫ್ಐ 2026 ರ ಮಧ್ಯಂತರ ಚಿತ್ರವಾಗಿ 'ಐ ಮ್ಯಾಟರ್' ಆಯ್ಕೆ
57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026 ತನ್ನ ಮಧ್ಯಂತರ ಚಿತ್ರವಾಗಿ ಅಲೀನಾ ಸೆರ್ಬನ್ ನಿರ್ದೇಶನದ 'ಐ ಮ್ಯಾಟರ್' ಚಿತ್ರವನ್ನು ಪ್ರದರ್ಶಿಸಲಿದೆ. ರೊಮೇನಿಯಾ, ಜರ್ಮನಿ ಮತ್ತು ಬೆಲ್ಜಿಯಂ ಸಹ-ನಿರ್ಮಾಣದ 101 ನಿಮಿಷಗಳ ಈ ಚಿತ್ರವು ರೊಮೇನಿಯನ್ ಮತ್ತು ರೋಮಾನಿ ಭಾಷೆಗಳಲ್ಲಿ ಸಂಭಾಷಣೆಗಳನ್ನು ಹೊಂದಿದ್ದು, ಉತ್ಸವಕ್ಕೆ ವೈವಿಧ್ಯಮಯ ಯುರೋಪಿಯನ್ ಸಿನಿಮಾ ದೃಷ್ಟಿಕೋನವನ್ನು ತರಲಿದೆ.

ಗಾಲಾ ಪ್ರೀಮಿಯರ್ಗಳು
ಗಾಲಾ ಪ್ರೀಮಿಯರ್ ವಿಭಾಗವು 14 ಪ್ರದರ್ಶನಗಳನ್ನು ಒಳಗೊಂಡಿರಲಿದ್ದು, 87 ದೇಶಗಳ ಭಾಗವಹಿಸುವಿಕೆಯೊಂದಿಗೆ ಆಯ್ದ ಚಲನಚಿತ್ರಗಳನ್ನು ಪ್ರದರ್ಶಿಸಲಿದೆ ಮತ್ತು ಪ್ರೇಕ್ಷಕರಿಗೆ ವೈವಿಧ್ಯಮಯ ಸಿನಿಮಾ ಕಥೆಗಳು ಹಾಗೂ ಪ್ರಶಂಸಿತ ಚಲನಚಿತ್ರ ನಿರ್ಮಾಣವನ್ನು ಅನುಭವಿಸುವ ಅವಕಾಶವನ್ನು ಒದಗಿಸಲಿದೆ.
ಗೌರವ ರಾಷ್ಟ್ರ: ಸ್ಪೇನ್
57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಸ್ಪೇನ್ ಅನ್ನು ಗೌರವ ರಾಷ್ಟ್ರವಾಗಿ ಗುರುತಿಸಿದ್ದು, ನಾಲ್ಕು ಸ್ಪ್ಯಾನಿಷ್ ಚಲನಚಿತ್ರಗಳನ್ನು ಪ್ರದರ್ಶಿಸಲಿದೆ: ಜೈಮ್ ಲೊರೆಂಟೆ ನಿರ್ದೇಶನದ 'ದಿ ಬ್ಯಾಡ್ ಸನ್'; 'ಟ್ರಿನಿಡಾಡ್'; ಪೆಡ್ರೊ ಅಲ್ಮೋಡೋವರ್ ನಿರ್ದೇಶನದ 'ಬಿಟರ್ ಕ್ರಿಸ್ಮಸ್'; ಮತ್ತು ಜೈಮ್ ಮಚಿಯಾ ನಿರ್ದೇಶನದ 'ಪರ್ಸೆಗ್ಯುಯೆಂಡೋ ಎ ಮೈಕೆಲ್'. ಈ ಆಯ್ಕೆಯು ಸ್ಪ್ಯಾನಿಷ್ ಸಿನಿಮಾ ಮತ್ತು ಅದರ ವೈವಿಧ್ಯಮಯ ಕಥೆ ಹೇಳುವಿಕೆಯನ್ನು ಸಂಭ್ರಮಿಸುತ್ತದೆ, ಜೊತೆಗೆ ಸ್ಪ್ಯಾನಿಷ್ ಚಲನಚಿತ್ರ ನಿರ್ಮಾಪಕರು ಮತ್ತು ಸಿನಿಮಾ ದೃಷ್ಟಿಕೋನಗಳನ್ನು ಐಎಫ್ಎಫ್ಐನ ಅಂತಾರಾಷ್ಟ್ರೀಯ ವೇದಿಕೆಗೆ ತರುತ್ತದೆ.

ಪಾಲುದಾರ ರಾಷ್ಟ್ರ: ರಷ್ಯಾ
57 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ರಷ್ಯಾವನ್ನು ಪಾಲುದಾರ ರಾಷ್ಟ್ರವಾಗಿ ಪ್ರಸ್ತುತಪಡಿಸುತ್ತಿದ್ದು, ರಷ್ಯನ್ ಸಿನಿಮಾದ ವೈವಿಧ್ಯತೆ ಮತ್ತು ಸೃಜನಶೀಲ ಶ್ರೀಮಂತಿಕೆಯನ್ನು ಪ್ರತಿನಿಧಿಸುವ ನಾಲ್ಕು ಚಲನಚಿತ್ರಗಳ ವಿಶೇಷ ಪ್ರದರ್ಶನವನ್ನು ಆಯೋಜಿಸಿದೆ. ಪ್ರದರ್ಶನಗೊಳ್ಳಲಿರುವ ಚಿತ್ರಗಳಲ್ಲಿ 'ಫೋರ್', 'ನ್ಯೂ ಹೋಮ್', ಅನಸ್ತಾಸಿಯಾ ಕುಜಿನಾ ನಿರ್ದೇಶನದ 'ಬೋ ಬೋ', ಮತ್ತು 'ಸಿಡ್ನಿ ಲುಮೆಟ್ಸ್ ಬರ್ತ್ಡೇ' ಸೇರಿವೆ. ಈ ಪ್ರದರ್ಶನವು ಭಾರತೀಯ ಮತ್ತು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಸಮಕಾಲೀನ ರಷ್ಯನ್ ಚಲನಚಿತ್ರ ನಿರ್ಮಾಣವನ್ನು ಅನ್ವೇಷಿಸಲು, ಅದರ ವಿಕಸನಗೊಳ್ಳುತ್ತಿರುವ ಸಿನಿಮಾ ಕ್ಷೇತ್ರದೊಂದಿಗೆ ಸಂವಾದ ನಡೆಸಲು ಮತ್ತು ಸಿನಿಮಾ ಮಾಧ್ಯಮದ ಮೂಲಕ ಭಾರತ ಹಾಗೂ ರಷ್ಯಾ ನಡುವಿನ ಸಾಂಸ್ಕೃತಿಕ ಮತ್ತು ಕಲಾತ್ಮಕ ವಿನಿಮಯವನ್ನು ಮೆಚ್ಚಲು ಅವಕಾಶವನ್ನು ಒದಗಿಸುತ್ತದೆ.

ಎರಡು ಹೊಸ ವಿಭಾಗಗಳನ್ನು ಪರಿಚಯಿಸಿದ ಐಎಫ್ಎಫ್ಐ 2026
57 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026 ತನ್ನ ಸಿನಿಮಾ ಕೊಡುಗೆಗಳನ್ನು ವಿಸ್ತರಿಸಲು ಮತ್ತು ಕಥೆ ಹೇಳುವಿಕೆಯ ವೈವಿಧ್ಯಮಯ ರೂಪಗಳನ್ನು ಸಂಭ್ರಮಿಸಲು ಈ ವರ್ಷ ಎರಡು ಹೊಸ ವಿಭಾಗಗಳನ್ನು ಪರಿಚಯಿಸಿದೆ. ಮೊದಲ ವಿಭಾಗವಾದ 'ಅನಿಮೇಷನ್' ಐದು ಅತ್ಯುತ್ತಮ ಚಲನಚಿತ್ರಗಳನ್ನು ಒಳಗೊಂಡಿರಲಿದ್ದು, ಅನಿಮೇಟೆಡ್ ಸಿನಿಮಾದಲ್ಲಿನ ಸೃಜನಶೀಲತೆ ಮತ್ತು ಆವಿಷ್ಕಾರವನ್ನು ಪ್ರದರ್ಶಿಸಲಿದೆ. ಎರಡನೇ ವಿಭಾಗವಾದ 'ಫಿಲ್ಮ್ಸ್ ಅಬೌಟ್ ಫಿಲ್ಮ್ಸ್' (ಚಲನಚಿತ್ರಗಳ ಕುರಿತಾದ ಚಲನಚಿತ್ರ) ಸಹ ಐದು ಚಲನಚಿತ್ರಗಳನ್ನು ಪ್ರಸ್ತುತಪಡಿಸಲಿದ್ದು, ಚಲನಚಿತ್ರ ನಿರ್ಮಾಣದ ಕಲೆ ಮತ್ತು ಕೌಶಲ್ಯವನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಹೆಸರಾಂತ ಚಲನಚಿತ್ರ ನಿರ್ಮಾಪಕರ ಸಲಹೆಗಳಿಗೆ ಸ್ಪಂದಿಸಿ ಇದನ್ನು ಪರಿಚಯಿಸಲಾಗಿದೆ.
ಬ್ರಿಕ್ಸ್ ಸಿನಿಮಾಕ್ಕೆ ವಿಶೇಷ ಒತ್ತು ನೀಡಲಿರುವ ಐಎಫ್ಎಫ್ಐ 2026
57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಬ್ರಿಕ್ಸ್ (BRICS) ಸಿನಿಮಾದ ಮೇಲಿನ ವಿಶೇಷ ಗಮನ. ಬ್ರಿಕ್ಸ್ ವಿಭಾಗದ ಉದ್ಘಾಟನಾ ಚಿತ್ರವಾಗಿ ಭಾರತದ 'ರಾಮಾಯಣ' ಪ್ರದರ್ಶನಗೊಳ್ಳಲಿದ್ದು, ಇದು ಎಲ್ಲಾ 11 ಸದಸ್ಯ ರಾಷ್ಟ್ರಗಳ ಚಲನಚಿತ್ರಗಳನ್ನು ಹಾಗೂ ಪಾಲುದಾರ ರಾಷ್ಟ್ರಗಳ ಕೊಡುಗೆಗಳನ್ನು ಪ್ರದರ್ಶಿಸಲಿದೆ. ಇದು ಪ್ರೇಕ್ಷಕರಿಗೆ ಬ್ರಿಕ್ಸ್ ರಾಷ್ಟ್ರಗಳ ವೈವಿಧ್ಯಮಯ ಸಿನಿಮಾ ಸಂಪ್ರದಾಯಗಳು ಮತ್ತು ಕಥೆ ಹೇಳುವಿಕೆಯನ್ನು ಅನ್ವೇಷಿಸುವ ಅವಕಾಶವನ್ನು ನೀಡುತ್ತದೆ.
ಭಾರತೀಯ ಪನೋರಮಾ
ದೇಶದ ವೈವಿಧ್ಯಮಯ ಕಥೆ ಹೇಳುವ, ಪರಂಪರೆ ಮತ್ತು ಸೃಜನಶೀಲ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವಂತೆ, ಭಾರತೀಯ ಸಿನಿಮಾ ವಿಭಾಗದ ಅಡಿಯಲ್ಲಿ 18 ವಿವಿಧ ಭಾಷೆಗಳಲ್ಲಿ ಒಟ್ಟು 76 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ 404 ಚಲನಚಿತ್ರ ಅರ್ಜಿಗಳು ಮತ್ತು ಕಿರುಚಿತ್ರ/ಸಾಕ್ಷ್ಯಚಿತ್ರ ವಿಭಾಗದಲ್ಲಿ 358 ಅರ್ಜಿಗಳು ಸ್ವೀಕೃತವಾಗಿದ್ದವು. ಅತ್ಯುತ್ತಮ ವೆಬ್ ಸರಣಿ (OTT) ವಿಭಾಗವು 46 ಅರ್ಹ ಪ್ರವೇಶಗಳನ್ನು ಸ್ವೀಕರಿಸಿದೆ.


ಐಎಫ್ಎಫ್ಐ 2026 ರಲ್ಲಿ ಇಂಡಿಯನ್ ಪನೋರಮಾವನ್ನು ಉದ್ಘಾಟಿಸಲಿರುವ 'ಧುರಂಧರ್' ಮತ್ತು 'ಬಿಕಮಿಂಗ್'
57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026 ರ ಇಂಡಿಯನ್ ಪನೋರಮಾ ವಿಭಾಗವು ಹಿಂದಿ ಚಲನಚಿತ್ರ 'ಧುರಂಧರ್' ಮತ್ತು ಲಡಾಖಿ ಭಾಷೆಯ ಸಾಕ್ಷ್ಯಚಿತ್ರ 'ಬಿಕಮಿಂಗ್' ಪ್ರದರ್ಶನದೊಂದಿಗೆ ಪ್ರಾರಂಭವಾಗಲಿದೆ. ಎರಡು ವಿಭಿನ್ನ ಭಾಷಾ ಮತ್ತು ಸಿನಿಮಾ ಹಿನ್ನೆಲೆಯ ಚಿತ್ರಗಳನ್ನು ಒಂದೆಡೆ ತರುವ ಈ ಉದ್ಘಾಟನಾ ಆಯ್ಕೆಯು, ಭಾರತದ ವೈವಿಧ್ಯಮಯ ಕಥೆ ಹೇಳುವ ಪರಂಪರೆಯನ್ನು ಸಂಭ್ರಮಿಸುವ ಮತ್ತು ಗಡಿಗಳಿಲ್ಲದ ಸಿನಿಮಾವನ್ನು ಪ್ರದರ್ಶಿಸುವ ಐಎಫ್ಎಫ್ಐನ ದೃಷ್ಟಿಕೋನವನ್ನು ಪ್ರತಿಫಲಿಸುತ್ತದೆ.
ಅತ್ಯುತ್ತಮ ಚೊಚ್ಚಲ ಚಲನಚಿತ್ರಗಳ ಸ್ಪರ್ಧೆ
57 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ವಿವಿಧ ದೇಶಗಳ ಏಳು ಚಲನಚಿತ್ರಗಳನ್ನು ಒಳಗೊಂಡ 'ಅತ್ಯುತ್ತಮ ಚೊಚ್ಚಲ ಚಲನಚಿತ್ರಗಳ ಸ್ಪರ್ಧೆ'ಯನ್ನು ಪ್ರಸ್ತುತಪಡಿಸುತ್ತಿದ್ದು, ಪ್ರಪಂಚದಾದ್ಯಂತದ ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು ಮತ್ತು ತಾಜಾ ಸಿನಿಮಾ ದೃಷ್ಟಿಕೋನಗಳನ್ನು ಸಂಭ್ರಮಿಸುತ್ತಿದೆ. ಈ ಸ್ಪರ್ಧೆಯಲ್ಲಿ ಜರ್ಮನಿಯ 'ಫೇಡಿಂಗ್ ಮ್ಯಾನ್', ಭಾರತದ 'ದಿ ಸ್ಲೆಡ್ಜ್', ಬೆಲ್ಜಿಯಂನ 'ಪ್ಯಾರಿಸ್', ಈಜಿಪ್ಟ್ನ 'ದಿ ಬ್ಲ್ಯಾಕ್ ಸೀ', ಫ್ರಾನ್ಸ್ ಮತ್ತು ಇಟಲಿಯ 'ಎಲ್'ಏಜ್ ಡಿ'ಓರ್', ಭಾರತದ 'ಬರ್ಡ್ಸ್ ಆನ್ ಐಸ್', ಮತ್ತು ಚೀನಾದ 'ಅಟ್ಲಾಂಟಿಕ್' ಚಿತ್ರಗಳು ಸೇರಿವೆ. ಹೊಸ ಧ್ವನಿಗಳನ್ನು ಪ್ರೋತ್ಸಾಹಿಸುವ ಮತ್ತು ಮುಂದಿನ ಪೀಳಿಗೆಯ ಚಲನಚಿತ್ರ ನಿರ್ಮಾಪಕರನ್ನು ಪೋಷಿಸುವ ಐಎಫ್ಎಫ್ಐನ ಬದ್ಧತೆಯನ್ನು ಎತ್ತಿಹಿಡಿಯುವ ಜೊತೆಗೆ, ಮೊದಲ ಬಾರಿಗೆ ಚಲನಚಿತ್ರ ನಿರ್ದೇಶಿಸಿದವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ವ್ಯಾಪಕ ಮನ್ನಣೆ ಪಡೆಯಲು ಮತ್ತು ಜಾಗತಿಕ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಈ ಸ್ಪರ್ಧೆಯು ಅಂತಾರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ.

ಮಹಿಳಾ ಚಲನಚಿತ್ರ ನಿರ್ಮಾಪಕರು, ಚೊಚ್ಚಲ ಧ್ವನಿಗಳು ಮತ್ತು ಉದಯೋನ್ಮುಖ ಪ್ರತಿಭೆಗಳು
ತಾಜಾ ದೃಷ್ಟಿಕೋನಗಳು ಮತ್ತು ವೈವಿಧ್ಯಮಯ ಕಥೆ ಹೇಳುವಿಕೆಯನ್ನು ಸಂಭ್ರಮಿಸುತ್ತಾ, 57 ನೇ ಐಎಫ್ಎಫ್ಐ 52 ಮಹಿಳಾ ಚಲನಚಿತ್ರ ನಿರ್ಮಾಪಕರು ಮತ್ತು 62 ಚೊಚ್ಚಲ ಚಲನಚಿತ್ರ ನಿರ್ಮಾಪಕರನ್ನು ಒಂದೆಡೆ ಸೇರಿಸಲಿದ್ದು, ಇದು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನಿಮಾದ ವಿಸ್ತರಿಸುತ್ತಿರುವ ಸೃಜನಶೀಲ ಕ್ಷೇತ್ರವನ್ನು ಪ್ರತಿಫಲಿಸುತ್ತದೆ. ಸ್ಪರ್ಧಾತ್ಮಕ ವಿಭಾಗಗಳು 10 ಮಹಿಳಾ ಚಲನಚಿತ್ರ ನಿರ್ಮಾಪಕರು ಮತ್ತು 12 ಚೊಚ್ಚಲ ಚಲನಚಿತ್ರ ನಿರ್ಮಾಪಕರನ್ನು ಮತ್ತಷ್ಟು ಮುನ್ನೆಲೆಗೆ ತರಲಿದ್ದು, ಮಹಿಳೆಯರ ಧ್ವನಿಯನ್ನು ಬಲಪಡಿಸುವ, ಹೊಸ ಪ್ರತಿಭೆಗಳನ್ನು ಪೋಷಿಸುವ ಮತ್ತು ಮುಂದಿನ ಪೀಳಿಗೆಯ ಸಿನಿಮಾ ಕಥೆಗಾರರಿಗೆ ಜಾಗತಿಕ ವೇದಿಕೆಯನ್ನು ಒದಗಿಸುವ ಉತ್ಸವದ ಬದ್ಧತೆಯನ್ನು ಒತ್ತಿ ಹೇಳುತ್ತವೆ.
ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ (CMOT)
'ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ'ದ ಆರನೇ ಆವೃತ್ತಿಯು 13 ಚಲನಚಿತ್ರ ನಿರ್ಮಾಣ ಕೌಶಲ್ಯಗಳಾದ್ಯಂತ ಆಯ್ಕೆಯಾದ 100 ಸ್ಪರ್ಧಿಗಳನ್ನು ಒಂದೆಡೆ ಸೇರಿಸಲಿದೆ.
ಈ ಕಾರ್ಯಕ್ರಮವು ವಿಶೇಷವಾಗಿ ಆಯೋಜಿಸಲಾದ ಮಾಸ್ಟರ್ಕ್ಲಾಸ್ಗಳು, ಕಾರ್ಯಾಗಾರಗಳು, ಸಂವಾದ ಗೋಷ್ಠಿಗಳು, 48 ಗಂಟೆಗಳ ಚಲನಚಿತ್ರ ನಿರ್ಮಾಣ ಸವಾಲು ಮತ್ತು ಸಿಎಂಒಟಿ ಟ್ಯಾಲೆಂಟ್ ಕ್ಯಾಂಪ್ ಅನ್ನು ಒಳಗೊಂಡಿರುತ್ತದೆ. ಸ್ಪರ್ಧಿಗಳು ಪ್ರಮುಖ ಚಲನಚಿತ್ರ ನಿರ್ಮಾಪಕರು ಮತ್ತು ಉದ್ಯಮದ ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ, ಸೃಜನಶೀಲ ಪರಿಕಲ್ಪನೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಮತ್ತು ಮಾಧ್ಯಮ ಹಾಗೂ ಮನರಂಜನಾ ಉದ್ಯಮದಾದ್ಯಂತ ಇರುವ ಅವಕಾಶಗಳನ್ನು ಅನ್ವೇಷಿಸಲಿದ್ದಾರೆ.
ವೇವ್ಸ್ ಫಿಲ್ಮ್ ಬಜಾರ್
ಸಹಯೋಗ, ಸಹ-ನಿರ್ಮಾಣ ಮತ್ತು ವ್ಯಾಪಾರ ಅವಕಾಶಗಳನ್ನು ಸುಗಮಗೊಳಿಸಲು ವೇವ್ಸ್ ಫಿಲ್ಮ್ ಬಜಾರ್ ಚಲನಚಿತ್ರ ನಿರ್ಮಾಪಕರು, ನಿರ್ಮಾಪಕರು, ಖರೀದಿದಾರರು, ವಿತರಕರು ಮತ್ತು ಉದ್ಯಮದ ಪಾಲುದಾರರನ್ನು ಒಂದೆಡೆ ಸೇರಿಸಲಿದೆ.
ಖರೀದಿದಾರರು ಮತ್ತು ನಿರ್ಮಾಣ ಸಂಸ್ಥೆಗಳು ಸೇರಿದಂತೆ 150 ಆಹ್ವಾನಿತ ಅತಿಥಿಗಳನ್ನು ಈ ಬಜಾರ್ ಸ್ವಾಗತಿಸಲಿದೆ. ಇದರ ಪ್ರಮುಖ ಉಪಕ್ರಮಗಳಲ್ಲಿ ಸ್ಕ್ರೀನ್ರೈಟರ್ಸ್ ಲ್ಯಾಬ್, ಸಹ-ನಿರ್ಮಾಣ ಮಾರುಕಟ್ಟೆ, ವೀಕ್ಷಣಾ ಕೊಠಡಿ ಮತ್ತು ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್ ಸೇರಿವೆ.

ವೇವ್ಸ್ ಬಜಾರ್ನಲ್ಲಿ ನಾಲೆಡ್ಜ್ ಸೀರೀಸ್ ಪಾಲುದಾರರಾಗಿರುವ ನೆಟ್ಫ್ಲಿಕ್ಸ್, ಉದ್ಯಮದ ಸಾಮರ್ಥ್ಯ ವೃದ್ಧಿಯನ್ನು ಬೆಂಬಲಿಸಲಿದೆ ಮತ್ತು ಭಾರತದ ವಿಎಫ್ಎಕ್ಸ್ ಸಾಮರ್ಥ್ಯಗಳನ್ನು ಬಲಪಡಿಸಲು ಹಾಗೂ ಭವಿಷ್ಯಕ್ಕೆ ಸಿದ್ಧವಾಗಿರುವ ಪ್ರತಿಭೆಗಳ ಸರಪಳಿಯನ್ನು ಪೋಷಿಸಲು ಸರ್ಕಾರದೊಂದಿಗೆ ತಾನು ಮಾಡಿಕೊಂಡಿರುವ ಸಹಯೋಗವನ್ನು ಪ್ರದರ್ಶಿಸಲಿದೆ. ಇದರ ಭಾಗವಹಿಸುವಿಕೆಯು 'ಪುಷ್ಪಕ ವಿಮಾನ'ದ ಗಾಲಾ ಪ್ರೀಮಿಯರ್, 'ರೇ ಗನ್' ನ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಉದಯೋನ್ಮುಖ ಸೃಜನಶೀಲ ಪ್ರತಿಭೆಗಳನ್ನು ಬೆಂಬಲಿಸಲು ಹಾಗೂ ಉದ್ಯಮದ ಅವಕಾಶಗಳನ್ನು ಪೋಷಿಸಲು ಪಿಚಿಂಗ್ ಗೋಷ್ಠಿಗಳಲ್ಲಿ ತೊಡಗಿಸಿಕೊಳ್ಳುವುದನ್ನೂ ಒಳಗೊಂಡಿರುತ್ತದೆ.
ಮಾಸ್ಟರ್ಕ್ಲಾಸ್ಗಳು, ಸಮಿತಿಗಳು ಮತ್ತು ಸಂವಾದಾತ್ಮಕ ಕಾರ್ಯಕ್ರಮಗಳು
ಐಎಫ್ಎಫ್ಐ 2026 ನವೆಂಬರ್ 21 ರಿಂದ 27, 2026 ರವರೆಗೆ ಕಲಾ ಅಕಾಡೆಮಿಯಲ್ಲಿ 14 ಗೋಷ್ಠಿಗಳನ್ನು ಆಯೋಜಿಸಲಿದ್ದು, ಇವು ಮಾಸ್ಟರ್ಕ್ಲಾಸ್ಗಳು, ಕಾರ್ಯಾಗಾರಗಳು, ಚರ್ಚಾ ಗೋಷ್ಠಿಗಳು, ಸಿಂಹಾವಲೋಕನಗಳು, ಸಂವಾದ ಮತ್ತು ಸಂದರ್ಶನ ಗೋಷ್ಠಿಗಳನ್ನು ಒಳಗೊಂಡಿರುತ್ತವೆ.
ಸಾಕ್ಷ್ಯಚಿತ್ರ ಸಿನಿಮಾ ಮತ್ತು ಗಡಿಗಳನ್ನು ಮೀರಿದ ಚಲನಚಿತ್ರ ನಿರ್ಮಾಣದಿಂದ ಹಿಡಿದು ವಿಶ್ವ ಸಿನಿಮಾವನ್ನು ರೂಪಿಸುತ್ತಿರುವ ಮಹಿಳೆಯರು, ಕಥೆ ಹೇಳುವಿಕೆ, ಪಾತ್ರವರ್ಗದ ಆಯ್ಕೆ, ಉಪಶೀರ್ಷಿಕೆ ಮತ್ತು ಉದಯೋನ್ಮುಖ ಸಿನಿಮಾ ಪದ್ಧತಿಗಳವರೆಗಿನ ವಿಷಯಗಳನ್ನು ಅನ್ವೇಷಿಸಲು ಈ ಗೋಷ್ಠಿಗಳು ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಉದ್ಯಮದ ವೃತ್ತಿಪರರನ್ನು ಒಂದೆಡೆ ಸೇರಿಸಲಿವೆ.
ಶತಮಾನೋತ್ಸವ ಗೌರವಗಳು ಮತ್ತು ಪುನಃಸ್ಥಾಪಿಸಲಾದ ಕ್ಲಾಸಿಕ್ ಚಿತ್ರಗಳು
ಶತಮಾನೋತ್ಸವ ಗೌರವಗಳು, ಸಿಂಹಾವಲೋಕನಗಳು ಮತ್ತು ಪುನಃಸ್ಥಾಪಿಸಲಾದ ಕ್ಲಾಸಿಕ್ ಚಿತ್ರಗಳ ಮೂಲಕ ಈ ಉತ್ಸವವು ಗಣ್ಯ ಚಲನಚಿತ್ರ ನಿರ್ಮಾಪಕರು ಮತ್ತು ಕಲಾವಿದರ ಪರಂಪರೆಯನ್ನು ಸಂಭ್ರಮಿಸಲಿದೆ.
ಚಲನಚಿತ್ರ ನಿರ್ಮಾಪಕ ಆಂಡ್ರೆಜ್ ವಾಜ್ಡಾ ಅವರಿಗೆ ವಿಶೇಷ ಶತಮಾನೋತ್ಸವ ಗೌರವವು ಐದು ಚಲನಚಿತ್ರಗಳನ್ನು ಒಳಗೊಂಡಿರುತ್ತದೆ. 'ರಿಸ್ಟೋರ್ಡ್ ಕ್ಲಾಸಿಕ್ಸ್' ವಿಭಾಗವೂ ಸಹ ಐದು ಚಲನಚಿತ್ರಗಳನ್ನು ಪ್ರಸ್ತುತಪಡಿಸಲಿದ್ದು, ಸಿನಿಮಾ ಇತಿಹಾಸದ ಮಹತ್ವದ ಕೃತಿಗಳನ್ನು ಮರುಪರಿಶೀಲಿಸಲು ಪ್ರೇಕ್ಷಕರಿಗೆ ಅವಕಾಶವನ್ನು ಒದಗಿಸುತ್ತದೆ.

ಉತ್ಸವದ ಸ್ಥಳಗಳು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ
57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನಾಲ್ಕು ಸ್ಥಳಗಳಲ್ಲಿನ 13 ಒಳಾಂಗಣ ಪರದೆಗಳಲ್ಲಿ ಒಂಬತ್ತು ದಿನಗಳ ಚಲನಚಿತ್ರ ಪ್ರದರ್ಶನಗಳೊಂದಿಗೆ ಗೋವಾವನ್ನು ರೋಮಾಂಚಕ ಸಿನಿಮಾ ತಾಣವಾಗಿ ಪರಿವರ್ತಿಸಲು ಸಜ್ಜಾಗಿದೆ. ಐನಾಕ್ಸ್, ಮ್ಯಾಕ್ವಿನೆಜ್, ಸಾಮ್ರಾಟ್ ಮತ್ತು ಅಶೋಕಾದಾದ್ಯಂತ ಏಳು ಪರದೆಗಳನ್ನು ಹೊಂದಿರುವ ಉತ್ಸವದ ಗಿಜಿಗುಡುವ ಕೇಂದ್ರವಾದ ಪಣಜಿಯಿಂದ ಹಿಡಿದು, ಪೋರ್ವೊರಿಮ್ನಲ್ಲಿರುವ ಐನಾಕ್ಸ್ ಪರದೆಗಳು, ಮಡ್ಗಾಂವ್ನ ಪ್ರತಿಷ್ಠಿತ ರವೀಂದ್ರ ಭವನ ಮತ್ತು ಪೋಂಡಾದ ಮ್ಯಾಜಿಕ್ ಮೂವಿಯವರೆಗೆ, ಈ ಉತ್ಸವವು ಚಲನಚಿತ್ರ ಆಸಕ್ತರಿಗೆ ತಲ್ಲೀನಗೊಳಿಸುವ ಸಿನಿಮಾ ಅನುಭವವನ್ನು ನೀಡುವ ಭರವಸೆ ನೀಡುತ್ತದೆ. ವೈವಿಧ್ಯಮಯ ಪ್ರದರ್ಶನ ಸ್ಥಳಗಳು ಮತ್ತು 4,000 ಕ್ಕೂ ಹೆಚ್ಚು ಸಂಯೋಜಿತ ಆಸನ ಸಾಮರ್ಥ್ಯದೊಂದಿಗೆ, ಐಎಫ್ಎಫ್ಐ ಗೋವಾದಾದ್ಯಂತದ ಪ್ರೇಕ್ಷಕರಿಗೆ ವಿಶ್ವ ಸಿನಿಮಾದ ಮಾಂತ್ರಿಕತೆಯನ್ನು ಮತ್ತಷ್ಟು ಹತ್ತಿರ ತರಲಿದೆ.
ಶತಮಾನೋತ್ಸವ ಆಚರಣೆಗಳು
ಐಎಫ್ಎಫ್ಐ 2026 ಭಾರತೀಯ ಸಿನಿಮಾದ ಗಣ್ಯ ವ್ಯಕ್ತಿಗಳ ಜನ್ಮ ಶತಮಾನೋತ್ಸವವನ್ನು ಆಚರಿಸಲಿದ್ದು, ದಿಗ್ಗಜ ಚಲನಚಿತ್ರ ನಿರ್ಮಾಪಕರಾದ ಶಕ್ತಿ ಸಾಮಂತ ಮತ್ತು ರಾಜ್ ಖೋಸ್ಲಾ, ನಟರಾದ ಉತ್ತಮ್ ಕುಮಾರ್, ಸೂರ್ಯಕಾಂತ್ ಮಾಂಧರೆ, ಪ್ರೇಮ್ ನಜೀರ್ ಮತ್ತು ರಾಜ್ ಕುಮಾರ್, ಹಾಗೂ ಖ್ಯಾತ ಸಂಗೀತ ಸಂಯೋಜಕರಾದ ಒ. ಪಿ. ನಯ್ಯರ್ ಮತ್ತು ರವಿ ಅವರಿಗೆ ಗೌರವ ಸಲ್ಲಿಸಲಿದೆ. ಭಾರತೀಯ ಸಿನಿಮಾಕ್ಕೆ ಅವರು ನೀಡಿದ ಅಸಾಧಾರಣ ಕೊಡುಗೆಗಳನ್ನು ಮತ್ತು ದೇಶದ ಸಿನಿಮಾ ಹಾಗೂ ಸಂಗೀತ ಪರಂಪರೆಯನ್ನು ರೂಪಿಸುವಲ್ಲಿ ಅವರ ಶಾಶ್ವತ ಪರಂಪರೆಯನ್ನು ಉತ್ಸವವು ಗೌರವಿಸಲಿದೆ.

ಆಂಥೋನಿ ಚೆನ್ ಅವರ 'ವಿ ಆರ್ ಆಲ್ ಸ್ಟ್ರೇಂಜರ್ಸ್' ಚಿತ್ರದೊಂದಿಗೆ ಮುಕ್ತಾಯಗೊಳ್ಳಲಿರುವ 57 ನೇ ಐಎಫ್ಎಫ್ಐ
ಆಂಥೋನಿ ಚೆನ್ ನಿರ್ದೇಶನದ 57 ನೇ ಐಎಫ್ಎಫ್ಐನ ಸಮಾರೋಪ ಚಿತ್ರ 'ವಿ ಆರ್ ಆಲ್ ಸ್ಟ್ರೇಂಜರ್ಸ್', ಸಿಂಗಾಪುರವನ್ನು ಪ್ರತಿನಿಧಿಸುತ್ತದೆ ಮತ್ತು 157 ನಿಮಿಷಗಳ ಅವಧಿಯನ್ನು ಹೊಂದಿದೆ. ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಸ್ತುತಪಡಿಸಲಾದ ಈ ಚಿತ್ರವು ಸಮಕಾಲೀನ ಸಿಂಗಾಪುರ ಸಿನಿಮಾದ ವಿಶಿಷ್ಟ ಸಿನಿಮಾ ಕೊಡುಗೆಯೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಿದೆ.

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕುರಿತು
1952ರಲ್ಲಿ ಸ್ಥಾಪಿತವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಏಷ್ಯಾದ ಅತ್ಯಂತ ಹಳೆಯ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಗೋವಾ ಸರ್ಕಾರ ಮತ್ತು ಗೋವಾ ಮನರಂಜನಾ ಸೊಸೈಟಿಯ ಸಹಯೋಗದೊಂದಿಗೆ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆಯೋಜಿಸುವ ಐಎಫ್ಎಫ್ಐ, ಜಾಗತಿಕ ವೇದಿಕೆಯಲ್ಲಿ ಭಾರತೀಯ ಚಲನಚಿತ್ರಗಳು ಮತ್ತು ಪ್ರತಿಭೆಗಳನ್ನು ಉತ್ತೇಜಿಸುವ ಜೊತೆಗೆ ವಿಶ್ವ ಸಿನಿಮಾದ ಅತ್ಯುತ್ತಮ ಚಿತ್ರಗಳನ್ನು ಸಂಭ್ರಮಿಸುತ್ತದೆ. ಗೋವಾದಲ್ಲಿ ವಾರ್ಷಿಕವಾಗಿ ನಡೆಯುವ ಈ ಉತ್ಸವವು ಸೃಜನಶೀಲ ವಿನಿಮಯ, ಹೊಸ ಧ್ವನಿಗಳ ಅನ್ವೇಷಣೆ ಮತ್ತು ಸಿನಿಮಾದ ಮೂಲಕ ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಕುರಿತು
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾಗಿದೆ. 1975ರಲ್ಲಿ ಸ್ಥಾಪಿತವಾದ ಎನ್ಎಫ್ಡಿಸಿ ಭಾರತೀಯ ಸಿನಿಮಾವನ್ನು ಉತ್ತೇಜಿಸುವಲ್ಲಿ, ಸ್ವತಂತ್ರ ಚಲನಚಿತ್ರ ನಿರ್ಮಾಪಕರನ್ನು ಬೆಂಬಲಿಸುವಲ್ಲಿ ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಸಹ-ನಿರ್ಮಾಣಗಳನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಭಾರತೀಯ ಸೃಷ್ಟಿಕರ್ತರನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಬೆಸೆಯುವ ಮತ್ತು ಮಾಧ್ಯಮ ಹಾಗೂ ಮನರಂಜನಾ ಉದ್ಯಮದಾದ್ಯಂತ ಸಹಯೋಗದ ಅವಕಾಶಗಳನ್ನು ಸುಗಮಗೊಳಿಸುವ ವೇವ್ಸ್ ಫಿಲ್ಮ್ ಬಜಾರ್ ಅನ್ನೂ ನಿರ್ವಹಿಸುತ್ತದೆ.

*****