ಲೋಕಸಭಾ ಸಚಿವಾಲಯ
azadi ka amrit mahotsav

ಬಲಿಷ್ಠ ಮತ್ತು ಹೆಚ್ಚು ಸಮೃದ್ಧ ಭಾರತವನ್ನು ನಿರ್ಮಿಸಲು ಸಮರ್ಥ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವಕರಿಂದ ಮಾತ್ರ ಸಾಧ್ಯ: ಲೋಕಸಭೆ ಸ್ಪೀಕರ್


ಅಪರಾಧ ತಡೆಗಟ್ಟಲು, ಪತ್ತೆ ಹಚ್ಚಲು ಮತ್ತು ಆಂತರಿಕ ಭದ್ರತೆಯನ್ನು ಬಲಪಡಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು: ಲೋಕಸಭೆ ಸ್ಪೀಕರ್

ಸಂಸತ್ ಭವನದ ಸಂಕೀರ್ಣದಲ್ಲಿ ಐಪಿಎಸ್ ಪ್ರಶಿಕ್ಷಣಾರ್ಥಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಲೋಕಸಭೆ ಸ್ಪೀಕರ್

ಪ್ರಕಟಣಾ ದಿನಾಂಕ: 11 NOV 2026 7:35PM by PIB Bengaluru

ಸಮರ್ಥ ಸಂಸ್ಥೆಗಳು ಮತ್ತು ನಾಗರಿಕರ ಆಕಾಂಕ್ಷೆಗಳು ಹಾಗೂ ಕಳವಳಗಳಿಗೆ ಸ್ಪಂದಿಸುವ ಸಾರ್ವಜನಿಕ ಸೇವಕರಿಂದ ಮಾತ್ರ ಬಲಿಷ್ಠವಾದ ಹಾಗೂ ಹೆಚ್ಚು ಸಮೃದ್ಧ ಭಾರತವನ್ನು ನಿರ್ಮಿಸಲು ಸಾಧ್ಯ ಎಂದು ಲೋಕಸಭೆ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು ಒತ್ತಿ ಹೇಳಿದರು. ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಳ್ಳಬೇಕು, ಜನರೊಂದಿಗೆ ನಿಯಮಿತವಾಗಿ ಸಂವಹನ ನಡೆಸಬೇಕು ಮತ್ತು ಅವರ ಅಗತ್ಯಗಳು ಹಾಗೂ ಸವಾಲುಗಳ ಕುರಿತು ನಿಕಟ ತಿಳುವಳಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು. ಸಾರ್ವಜನಿಕ ವಿಶ್ವಾಸವೇ ಸಮರ್ಥ ಪೊಲೀಸ್ ವ್ಯವಸ್ಥೆಯ ಅಡಿಪಾಯ ಎಂದು ಅವರು ಹೇಳಿದರು. ನಿಷ್ಪಕ್ಷಪಾತತೆ, ಪಾರದರ್ಶಕತೆ, ಸುಲಭ ಲಭ್ಯತೆ ಮತ್ತು ತ್ವರಿತ ಕ್ರಮಗಳ ಮೂಲಕ ನಾಗರಿಕರ ವಿಶ್ವಾಸವನ್ನು ಗಳಿಸುವಂತೆ ಅವರು ಪ್ರಶಿಕ್ಷಣಾರ್ಥಿ ಅಧಿಕಾರಿಗಳಿಗೆ ಕರೆ ನೀಡಿದರು. ಪೊಲೀಸರನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವ ಏಜೆನ್ಸಿಯಾಗಿ ಮಾತ್ರ ನೋಡದೆ, ಜನರ ಪರವಾಗಿ ನಿಲ್ಲುವ ಮತ್ತು ಅವರ ಹಕ್ಕುಗಳು ಹಾಗೂ ಭದ್ರತೆಯನ್ನು ಕಾಯುವ ವಿಶ್ವಾಸಾರ್ಹ ಸಂಸ್ಥೆಯಾಗಿ ಕಾಣಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸಂಸತ್ ಭವನದ ಸಂಕೀರ್ಣದಲ್ಲಿ ಐಪಿಎಸ್ ಪ್ರಶಿಕ್ಷಣಾರ್ಥಿ ಅಧಿಕಾರಿಗಳ ತಂಡವೊಂದರ ಜೊತೆ ಸಂವಾದ ನಡೆಸುವಾಗ ಶ್ರೀ ಬಿರ್ಲಾ ಅವರು ಈ ಮಾತುಗಳನ್ನು ಹೇಳಿದರು. ಜನರು ಮತ್ತು ರಾಷ್ಟ್ರದ ಸೇವೆಗೆ ಪೂರ್ಣಮನಸ್ಸಿನಿಂದ ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಕರೆ ನೀಡಿದರು.

ಭಾರತೀಯ ಪೊಲೀಸ್ ಸೇವೆಯು (IPS) ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರಲು ಒಂದು ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ ಎಂದು ಶ್ರೀ ಬಿರ್ಲಾ ಅವರು ಅಭಿಪ್ರಾಯಪಟ್ಟರು. ತಮ್ಮ ವೃತ್ತಿಪರ ನಡವಳಿಕೆಯ ಕೇಂದ್ರದಲ್ಲಿ ಸಾರ್ವಜನಿಕ ಕಲ್ಯಾಣವನ್ನೇ ಕೇಂದ್ರಬಿಂದುವನ್ನಾಗಿಸಿಕೊಂಡು, ಬದ್ಧತೆ, ಪ್ರಾಮಾಣಿಕತೆ, ಸಂವೇದನಾಶೀಲತೆ ಮತ್ತು ಹೊಣೆಗಾರಿಕೆಯಿಂದ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವಂತೆ ಅವರು ಪ್ರಶಿಕ್ಷಣಾರ್ಥಿ ಅಧಿಕಾರಿಗಳಿಗೆ ಆಗ್ರಹಿಸಿದರು.

ಪೋಲಿಸ್ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಪರಿವರ್ತನಾತ್ಮಕ ಪಾತ್ರಡಾ ಕುರಿತು ಒತ್ತಿ ಹೇಳಿದ ಲೋಕಸಭೆ ಸ್ಪೀಕರ್, ಅಪರಾಧಗಳನ್ನು ತಡೆಯಲು ಮತ್ತು ಪತ್ತೆ ಹಚ್ಚಲು ಉದಯೋನ್ಮುಖ ತಂತ್ರಜ್ಞಾನಗಳು, ಡಿಜಿಟಲ್ ಉಪಕರಣಗಳು, ದತ್ತಾಂಶ ವಿಶ್ಲೇಷಣೆ ಮತ್ತು ಆಧುನಿಕ ತನಿಖಾ ವಿಧಾನಗಳನ್ನು ಸೂಕ್ತವಾಗಿ ಬಳಸಿಕೊಳ್ಳುವಂತೆ ಯುವ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಿದರು. ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆಯು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ, ಸ್ಪಂದನಶೀಲತೆಯನ್ನು ಸುಧಾರಿಸುತ್ತದೆ ಮತ್ತು ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆಯ ಚೌಕಟ್ಟನ್ನು ಬಲಪಡಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಸಮಾಜವು ಎದುರಿಸುತ್ತಿರುವ ಸವಾಲುಗಳು ನಿರಂತರವಾಗಿ ಬದಲಾಗುತ್ತಿರುತ್ತವೆ ಎಂದು ಶ್ರೀ ಬಿರ್ಲಾ ಅವರು ಒತ್ತಿ ಹೇಳಿದರು ಮತ್ತು ಹೊಸ ಆಲೋಚನೆಗಳನ್ನು ಮುಕ್ತವಾಗಿ ಸ್ವೀಕರಿಸಲು, ತಮ್ಮ ವೃತ್ತಿಪರ ಸಾಮರ್ಥ್ಯಗಳನ್ನು ನಿರಂತರವಾಗಿ ಉನ್ನತೀಕರಿಸಿಕೊಳ್ಳಬೇಕು ಹಾಗೂ ಪೊಲೀಸ್ ಕಾರ್ಯನಿರ್ವಹಣೆಯಲ್ಲಿ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳಲು ಅವರು ಪ್ರಶಿಕ್ಷಣಾರ್ಥಿ ಅಧಿಕಾರಿಗಳಿಗೆ ಕರೆ ನೀಡಿದರು. ಸಮರ್ಥ ಪೊಲೀಸ್ ವ್ಯವಸ್ಥೆಯು ತಾಂತ್ರಿಕ ಪ್ರಗತಿಯನ್ನು ಮಾನವ ಸಂವೇದನಾಶೀಲತೆ ಮತ್ತು ಕರುಣೆಯೊಂದಿಗೆ ಸಂಯೋಜಿಸಬೇಕು ಎಂದು ಅವರು ಒತ್ತಿ ಹೇಳಿದರು. ಯುವ ಅಧಿಕಾರಿಗಳು ತಮ್ಮ ವೃತ್ತಿಪರ ತರಬೇತಿ, ಬದ್ಧತೆ ಮತ್ತು ಉತ್ಸಾಹದಿಂದ ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುವಲ್ಲಿ ಹಾಗೂ ಸುರಕ್ಷಿತ, ಭದ್ರ ಮತ್ತು ಪ್ರಗತಿಪರ ಭಾರತವನ್ನು ನಿರ್ಮಿಸುವಲ್ಲಿ ಮೌಲ್ಯಯುತ ಕೊಡುಗೆಗಳನ್ನು ನೀಡುತ್ತಾರೆ ಎಂಬ ವಿಶ್ವಾಸವನ್ನು ಸನ್ಮಾನ್ಯ ಸ್ಪೀಕರ್ ವ್ಯಕ್ತಪಡಿಸಿದರು.

ಈ ಸಂವಾದವು ಐಪಿಎಸ್ ಪ್ರಶಿಕ್ಷಣಾರ್ಥಿ ಅಧಿಕಾರಿಗಳಿಗೆ, ಲೋಕಸಭೆ ಸ್ಪೀಕರ್ ಅವರೊಂದಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸಂಸತ್ತಿನ ಹಾಗೂ ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಕಾರ್ಯನಿರ್ವಹಣೆಯ ಕುರಿತು ಒಳನೋಟಗಳನ್ನು ಪಡೆಯಲು ಅವಕಾಶವನ್ನು ಒದಗಿಸಿತು.

 

*****


(ಪ್ರಕಟಣೆ ಐ.ಡಿ.: 2335244) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil