ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಪ್ರಕಟಣಾ ದಿನಾಂಕ:
10 NOV 2026 4:00PM by PIB Bengaluru
|
ಕಿರು ನೋಟ:
- ಜುಲೈ-ಸೆಪ್ಟೆಂಬರ್ 2026ರಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ಎಲ್ಎಫ್ಪಿಆರ್ (LFPR) ಹಿಂದಿನ ತ್ರೈಮಾಸಿಕದ ಶೇಕಡಾ 54.6 ಕ್ಕೆ ಹೋಲಿಸಿದರೆ ಶೇಕಡಾ 55.5 ಕ್ಕೆ ಏರಿಕೆಯಾಗಿದೆ.
- ಗ್ರಾಮೀಣ ಎಲ್ಎಫ್ಪಿಆರ್ (15+ ವರ್ಷಗಳು) ಶೇಕಡಾ 58.1 ರಷ್ಟಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 0.9 ಶೇಕಡಾವಾರು ಅಂಕಗಳ ಹೆಚ್ಚಳವನ್ನು ದಾಖಲಿಸಿದೆ.
- ಒಟ್ಟಾರೆ ಡಬ್ಲ್ಯೂಪಿಆರ್ (15+ ವರ್ಷಗಳು) ಜುಲೈ-ಸೆಪ್ಟೆಂಬರ್ 2026 ರಲ್ಲಿ ಶೇಕಡಾ 52.7 ರಷ್ಟಿದ್ದು, ಹಿಂದಿನ ತ್ರೈಮಾಸಿಕಕ್ಕಿಂತ 1.0 ಶೇಕಡಾವಾರು ಅಂಕಗಳ ಹೆಚ್ಚಳವನ್ನು ನೋಂದಾಯಿಸಿದೆ.
- ಗ್ರಾಮೀಣ ಡಬ್ಲ್ಯೂಪಿಆರ್ ಜುಲೈ-ಸೆಪ್ಟೆಂಬರ್ 2026 ರಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡಾ 55.6 ಕ್ಕೆ 1.4 ಶೇಕಡಾವಾರು ಅಂಕಗಳಷ್ಟು ಹೆಚ್ಚಾಗಿದೆ.
- ನಗರ ಪ್ರದೇಶಗಳಲ್ಲಿ ನಿಯಮಿತ ವೇತನ/ಸಂಬಳದ ಉದ್ಯೋಗದ ಪಾಲು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 0.3 ಶೇಕಡಾವಾರು ಅಂಕಗಳಷ್ಟು ಹೆಚ್ಚಾಗಿ ಶೇಕಡಾ 49.6 ಕ್ಕೆ ತಲುಪಿದೆ.
- ಜುಲೈ-ಸೆಪ್ಟೆಂಬರ್ 2026ರ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗಿಗಳ ಪಾಲು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ 1.3 ಶೇಕಡಾವಾರು ಅಂಕಗಳಷ್ಟು ಹೆಚ್ಚಾಗಿ ಶೇಕಡಾ 62.7 ಕ್ಕೆ ತಲುಪಿದೆ.
- ಗ್ರಾಮೀಣ ಕೃಷಿ ಉದ್ಯೋಗವು ಜುಲೈ-ಸೆಪ್ಟೆಂಬರ್ 2026ರಲ್ಲಿ ತ್ರೈಮಾಸಿಕದಲ್ಲಿ 3.8 ಶೇಕಡಾವಾರು ಅಂಕಗಳಷ್ಟು ಹೆಚ್ಚಾಗಿ ಶೇಕಡಾ 56.7 ಕ್ಕೆ ತಲುಪಿದೆ.
- ಗ್ರಾಮೀಣ ನಿರುದ್ಯೋಗ ದರವು (UR) ಜುಲೈ-ಸೆಪ್ಟೆಂಬರ್ 2026ರಲ್ಲಿ ಹಿಂದಿನ ತ್ರೈಮಾಸಿಕದ ಶೇಕಡಾ 4.8 ರಿಂದ ಶೇಕಡಾ 4.3 ಕ್ಕೆ ಇಳಿಕೆಯಾಗಿದೆ.
|
1. ಪೀಠಿಕೆ
ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಎನ್ಎಸ್ಒ ನಡೆಸುವ ನಿಯತಕಾಲಿಕ ಶ್ರಮಶಕ್ತಿ ಸಮೀಕ್ಷೆಯು ಜನಸಂಖ್ಯೆಯ ಚಟುವಟಿಕೆ ಭಾಗಿತ್ವ ಹಾಗೂ ಉದ್ಯೋಗ-ನಿರುದ್ಯೋಗ ಸ್ಥಿತಿಗತಿಗಳ ದತ್ತಾಂಶದ ಪ್ರಾಥಮಿಕ ಮೂಲವಾಗಿದೆ. ಪ್ರಸ್ತುತ ವಾರದ ಸ್ಥಿತಿ ಚೌಕಟ್ಟಿನ ಅಡಿಯಲ್ಲಿ ಭಾರತದ ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಿಗೆ ಶ್ರಮಶಕ್ತಿ ಸೂಚಕಗಳ ಮಾಸಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಒದಗಿಸಲು ಪಿಎಲ್ಎಫ್ಎಸ್ ಸಮೀಕ್ಷಾ ವಿಧಾನವನ್ನು ಜನವರಿ 2025 ರಿಂದ ಮಾರ್ಪಡಿಸಲಾಗಿದೆ.
ವ್ಯಾಪಕ ವ್ಯಾಪ್ತಿಯೊಂದಿಗೆ ಹೆಚ್ಚಿನ ಆವರ್ತನದ ಶ್ರಮಶಕ್ತಿ ಸೂಚಕಗಳನ್ನು ರಚಿಸುವ ಅಗತ್ಯವನ್ನು ಪರಿಗಣಿಸಿ, ನಿಯತಕಾಲಿಕ ಶ್ರಮಶಕ್ತಿ ಸಮೀಕ್ಷೆಯ ಮಾದರಿ ವಿಧಾನವನ್ನು ಜನವರಿ 2025 ರಿಂದ ಪುನರ್ರಚಿಸಲಾಗಿದೆ. ಮರುರೂಪಿಸಲಾದ ಪಿಎಲ್ಎಫ್ಎಸ್ ಕೆಳಗಿನ ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ:
· ಪ್ರಸ್ತುತ ವಾರದ ಸ್ಥಿತಿಯ ಅಡಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಗ್ರಾಮೀಣ ಮತ್ತು ನಗರ, ಎರಡೂ ಪ್ರದೇಶಗಳಿಗೆ ಪ್ರತಿ ತಿಂಗಳು ಪ್ರಮುಖ ಉದ್ಯೋಗ ಮತ್ತು ನಿರುದ್ಯೋಗ ಸೂಚಕಗಳನ್ನು – ಅಂದರೆ ಶ್ರಮಶಕ್ತಿ ಭಾಗಿತ್ವ ದರ, ಕಾರ್ಮಿಕ ಜನಸಂಖ್ಯಾ ಅನುಪಾತ ಮತ್ತು ನಿರುದ್ಯೋಗ ದರ – ರಚಿಸುವುದು.
· ತ್ರೈಮಾಸಿಕ ಪಿಎಲ್ಎಫ್ಎಸ್ ಫಲಿತಾಂಶಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವುದು, ಆ ಮೂಲಕ ಸಿಡಬ್ಲ್ಯೂಎಸ್ ಚೌಕಟ್ಟಿನ ಅಡಿಯಲ್ಲಿ ಭಾರತದ ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಿಗೆ ಶ್ರಮ ಮಾರುಕಟ್ಟೆ ಸೂಚಕಗಳ ತ್ರೈಮಾಸಿಕ ಅಂದಾಜುಗಳನ್ನು ಪ್ರಕಟಿಸುವುದು.
· ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಸಾಮಾನ್ಯ ಸ್ಥಿತಿ (ps+ss) ಮತ್ತು ಪ್ರಸ್ತುತ ವಾರದ ಸ್ಥಿತಿ ಎರಡರಲ್ಲೂ ಪ್ರಮುಖ ಉದ್ಯೋಗ ಮತ್ತು ನಿರುದ್ಯೋಗ ಸೂಚಕಗಳ ವಾರ್ಷಿಕ ಅಂದಾಜುಗಳನ್ನು ಒದಗಿಸುವುದು.
ಡಿಸೆಂಬರ್ 2024 ರವರೆಗೆ ಬಿಡುಗಡೆಯಾದ ಹಿಂದಿನ ಪಿಎಲ್ಎಫ್ಎಸ್ ತ್ರೈಮಾಸಿಕ ಬುಲೆಟಿನ್ಗಳು ನಗರ ಪ್ರದೇಶಗಳಿಗೆ ಮಾತ್ರ ಶ್ರಮ ಮಾರುಕಟ್ಟೆ ಸೂಚಕಗಳನ್ನು ಪ್ರಸ್ತುತಪಡಿಸಿದ್ದವು. ಏಪ್ರಿಲ್ - ಜೂನ್ 2025 ರ ಬುಲೆಟಿನ್ ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಿಗೆ ಅಂದಾಜುಗಳನ್ನು ಒದಗಿಸಿದ ಸರಣಿಯಲ್ಲಿ ಮೊದಲನೆಯದಾಗಿದ್ದರೆ, ಜುಲೈ - ಸೆಪ್ಟೆಂಬರ್ 2026 ರ ಪ್ರಸ್ತುತ ಬುಲೆಟಿನ್ ಸರಣಿಯಲ್ಲಿ ಆರನೆಯದಾಗಿದೆ. ಈ ತ್ರೈಮಾಸಿಕ ಬುಲೆಟಿನ್ನಲ್ಲಿ, ಕಾರ್ಮಿಕರ ಸಂಪೂರ್ಣ ಸಂಖ್ಯೆಯ ಅಂದಾಜುಗಳನ್ನು ಒದಗಿಸಲೂ ಶ್ರಮಿಸಲಾಗಿದೆ.
ಈ ತ್ರೈಮಾಸಿಕ ಬುಲೆಟಿನ್ ಪ್ರಮುಖ ಶ್ರಮಶಕ್ತಿ ಸೂಚಕಗಳ – ಶ್ರಮಶಕ್ತಿ ಭಾಗಿತ್ವ ದರ (LFPR), ಕಾರ್ಮಿಕ ಜನಸಂಖ್ಯಾ ಅನುಪಾತ (WPR), ನಿರುದ್ಯೋಗ ದರ (UR), ಮತ್ತು ಉದ್ಯೋಗದ ವ್ಯಾಪಕ ಸ್ಥಿತಿ ಹಾಗೂ ಕೆಲಸದ ಉದ್ಯಮದ ಆಧಾರದ ಮೇಲೆ ಕಾರ್ಮಿಕರ ವಿತರಣೆಯ – ಅಂದಾಜುಗಳನ್ನು ಪ್ರಸ್ತುತ ವಾರದ ಸ್ಥಿತಿಯಲ್ಲಿ (CWS), ಅಖಿಲ ಭಾರತ ಮಟ್ಟದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಪ್ರತ್ಯೇಕವಾಗಿ ಪ್ರಸ್ತುತಪಡಿಸುತ್ತದೆ. ಜೊತೆಗೆ, ಆಯ್ಕೆ ಮಾಡಿದ ರಾಜ್ಯಗಳಿಗೆ ಸಿಡಬ್ಲ್ಯೂಎಸ್ ಅಡಿಯಲ್ಲಿ ಎಲ್ಎಫ್ಪಿಆರ್, ಡಬ್ಲ್ಯೂಪಿಆರ್ ಮತ್ತು ಯುಆರ್ಗಳ ರಾಜ್ಯಮಟ್ಟದ ಅಂದಾಜುಗಳನ್ನು ಒದಗಿಸಲಾಗಿದೆ.
ಸಿಡಬ್ಲ್ಯೂಎಸ್ (CWS) ಅನುಸರಿಸಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಪ್ರಮುಖ ಆವಿಷ್ಕಾರಗಳು:
· ಗ್ರಾಮೀಣ ಮತ್ತು ನಗರ ಎರಡೂ ವಲಯಗಳಲ್ಲಿ ಶ್ರಮಶಕ್ತಿ ಭಾಗಿತ್ವ ದರ (LFPR) ಸುಧಾರಣೆ: 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ಎಲ್ಎಫ್ಪಿಆರ್ ಜುಲೈ-ಸೆಪ್ಟೆಂಬರ್ 2026 ರ ಅವಧಿಯಲ್ಲಿ ಹಿಂದಿನ ತ್ರೈಮಾಸಿಕದ ಶೇಕಡಾ 54.6 ರಿಂದ ಶೇಕಡಾ 55.5 ಕ್ಕೆ ಹೆಚ್ಚಾಗಿದೆ. ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ಎಲ್ಎಫ್ಪಿಆರ್ ಹೆಚ್ಚಾಗಿದ್ದು ಈ ಸುಧಾರಣೆಗೆ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಎಲ್ಎಫ್ಪಿಆರ್ ಪ್ರಸ್ತುತ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದ ಶೇಕಡಾ 56.9 ರಿಂದ ಶೇಕಡಾ 58.1 ಕ್ಕೆ ಏರಿದೆ. ಅದೇ ರೀತಿ, ನಗರ ಎಲ್ಎಫ್ಪಿಆರ್ ಅದೇ ಅವಧಿಯಲ್ಲಿ ಶೇಕಡಾ 50.2 ರಿಂದ ಶೇಕಡಾ 50.4 ಕ್ಕೆ ಸಣ್ಣ ಪ್ರಮಾಣದಲ್ಲಿ ಹೆಚ್ಚಾಗಿದೆ.
ಒಟ್ಟಾರೆ ಮಹಿಳಾ ಎಲ್ಎಫ್ಪಿಆರ್ ಪ್ರಸ್ತುತ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದ ಶೇಕಡಾ 33.2 ರಿಂದ ಶೇಕಡಾ 34.7 ಕ್ಕೆ ಏರಿಕೆಯಾಗಿದೆ. ಪುರುಷರಲ್ಲಿ, ನಗರ ಎಲ್ಎಫ್ಪಿಆರ್ ಸಣ್ಣ ಪ್ರಮಾಣದ ಹೆಚ್ಚಳವನ್ನು ನೋಂದಾಯಿಸಿದ್ದು, ಏಪ್ರಿಲ್-ಜೂನ್ 2026 ರ ತ್ರೈಮಾಸಿಕದಲ್ಲಿ ಶೇಕಡಾ 77.0 ರಷ್ಟಿದ್ದುದ್ದು ಈ ತ್ರೈಮಾಸಿಕದಲ್ಲಿ ಶೇಕಡಾ 77.3 ಕ್ಕೆ ತಲುಪಿದೆ.
ವರ್ಷದಿಂದ ವರ್ಷಕ್ಕೆ ಲೆಕ್ಕಹಾಕಿದಾಗ, ಒಟ್ಟಾರೆ ಎಲ್ಎಫ್ಪಿಆರ್, 0.4 ಶೇಕಡಾವಾರು ಅಂಕಗಳ ಹೆಚ್ಚಳವನ್ನು ದಾಖಲಿಸಿದ್ದು, ಜುಲೈ-ಸೆಪ್ಟೆಂಬರ್ 2025 ರ ಶೇಕಡಾ 55.1 ರಿಂದ ಜುಲೈ-ಸೆಪ್ಟೆಂಬರ್ 2026 ರಲ್ಲಿ ಶೇಕಡಾ 55.5 ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಎಲ್ಎಫ್ಪಿಆರ್ ಸಹ ಅದೇ ಅವಧಿಯಲ್ಲಿ ಶೇಕಡಾ 57.2 ರಿಂದ ಶೇಕಡಾ 58.1 ಕ್ಕೆ 0.9 ಶೇಕಡಾವಾರು ಅಂಕಗಳಷ್ಟು ಸುಧಾರಿಸಿದೆ, ಆದರೆ ನಗರ ಎಲ್ಎಫ್ಪಿಆರ್ 0.3 ಶೇಕಡಾವಾರು ಅಂಕಗಳಷ್ಟು ಸಣ್ಣ ಪ್ರಮಾಣದಲ್ಲಿ ಇಳಿಕೆಯಾಗಿದೆ.



|
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ಎಲ್ಎಫ್ಪಿಆರ್ (LFPR) ಜುಲೈ-ಸೆಪ್ಟೆಂಬರ್ 2026 ರಲ್ಲಿ ಶೇಕಡಾ 55.5 ರಷ್ಟಿದ್ದು, ಹಿಂದಿನ ತ್ರೈಮಾಸಿಕ ಮತ್ತು 2025 ರ ಅನುರೂಪ ತ್ರೈಮಾಸಿಕ ಎರಡಕ್ಕೂ ಹೋಲಿಸಿದರೆ ಹೆಚ್ಚಳವನ್ನು ನೋಂದಾಯಿಸಿದೆ
|
· ಕಾರ್ಯಪಡೆಯ ಭಾಗಿತ್ವ ಹೆಚ್ಚಳ: 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ಕಾರ್ಮಿಕ ಜನಸಂಖ್ಯಾ ಅನುಪಾತ (WPR) ಜುಲೈ-ಸೆಪ್ಟೆಂಬರ್ 2026 ರ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದ ಶೇಕಡಾ 51.7 ರಿಂದ ಶೇಕಡಾ 52.7 ಕ್ಕೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಡಬ್ಲ್ಯೂಪಿಆರ್ ಕಳೆದ ತ್ರೈಮಾಸಿಕದ ಶೇಕಡಾ 54.2 ರಿಂದ ಶೇಕಡಾ 55.6 ಕ್ಕೆ ಏರಿದೆ. ನಗರ ಪ್ರದೇಶಗಳಲ್ಲಿ, ಏಪ್ರಿಲ್-ಜೂನ್ 2026 ರಲ್ಲಿ ಶೇಕಡಾ 46.8 ರಷ್ಟಿದ್ದ ಡಬ್ಲ್ಯೂಪಿಆರ್ ಜುಲೈ-ಸೆಪ್ಟೆಂಬರ್ 2026 ರ ಅವಧಿಯಲ್ಲಿ ಶೇಕಡಾ 46.9 ರಷ್ಟಿದ್ದು ಹೆಚ್ಚಾಗಿ ಸ್ಥಿರವಾಗಿದೆ. ಪುರುಷರಲ್ಲಿ, ಡಬ್ಲ್ಯೂಪಿಆರ್ ಪ್ರಸ್ತುತ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದ ಶೇಕಡಾ 73.0 ರಿಂದ ಶೇಕಡಾ 73.4 ಕ್ಕೆ ಹೆಚ್ಚಾಗಿದೆ, ಆದರೆ ಮಹಿಳಾ ಡಬ್ಲ್ಯೂಪಿಆರ್ ಅದೇ ಅವಧಿಯಲ್ಲಿ ಶೇಕಡಾ 31.3 ರಿಂದ ಶೇಕಡಾ 32.8 ಕ್ಕೆ ಗಮನಾರ್ಹವಾಗಿ ಏರಿಕೆಯಾಗಿದೆ.
ಹಿಂದಿನ ವರ್ಷದ ಅನುರೂಪ ತ್ರೈಮಾಸಿಕಕ್ಕೆ ಹೋಲಿಸಿದರೆ, ಒಟ್ಟಾರೆ ಡಬ್ಲ್ಯೂಪಿಆರ್ ಜುಲೈ-ಸೆಪ್ಟೆಂಬರ್ 2026 ರ ಅವಧಿಯಲ್ಲಿ 0.5 ಶೇಕಡಾವಾರು ಅಂಕಗಳಷ್ಟು ಹೆಚ್ಚಾಗಿದೆ. ಗ್ರಾಮೀಣ ಡಬ್ಲ್ಯೂಪಿಆರ್ ಸಹ ಅದೇ ಅವಧಿಯಲ್ಲಿ 0.9 ಶೇಕಡಾವಾರು ಅಂಕಗಳ ಹೆಚ್ಚಳವನ್ನು ದಾಖಲಿಸಿದೆ. ನಗರ ಡಬ್ಲ್ಯೂಪಿಆರ್ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ತ್ರೈಮಾಸಿಕದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ.



|
ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷ ಮತ್ತು ಮಹಿಳೆಯರಿಬ್ಬರ ಡಬ್ಲ್ಯೂಪಿಆರ್ ಸುಧಾರಿಸಿದ್ದು, ಜುಲೈ-ಸೆಪ್ಟೆಂಬರ್ 2026 ರಲ್ಲಿ ಕ್ರಮವಾಗಿ ಶೇಕಡಾ 73.4 ಮತ್ತು ಶೇಕಡಾ 32.8 ಅನ್ನು ತಲುಪಿದೆ.
|
· ಒಟ್ಟಾರೆ ಮತ್ತು ಗ್ರಾಮೀಣ ನಿರುದ್ಯೋಗ ದರ (UR) ಇಳಿಕೆ: 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ನಿರುದ್ಯೋಗ ದರವು ಪ್ರಸ್ತುತ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದ ಶೇಕಡಾ 5.4 ಕ್ಕೆ ಹೋಲಿಸಿದರೆ ಶೇಕಡಾ 5.1 ಕ್ಕೆ ಸುಧಾರಿಸಿದೆ. ಅದೇ ಅವಧಿಯಲ್ಲಿ, ಗ್ರಾಮೀಣ ನಿರುದ್ಯೋಗ ದರವು ಶೇಕಡಾ 4.8 ರಿಂದ ಶೇಕಡಾ 4.3 ಕ್ಕೆ ಇಳಿಕೆಯಾಗಿದೆ, ಆದರೆ ನಗರ ನಿರುದ್ಯೋಗ ದರವು ಹಿಂದಿನ ತ್ರೈಮಾಸಿಕದ ಶೇಕಡಾ 6.7 ಕ್ಕೆ ವಿರುದ್ಧವಾಗಿ ಶೇಕಡಾ 6.8 ರಷ್ಟಿದ್ದು ಮುಖ್ಯವಾಗಿ ಸ್ಥಿರವಾಗಿದೆ.
2025 ರ ಅನುರೂಪ ತ್ರೈಮಾಸಿಕಕ್ಕೆ ಹೋಲಿಸಿದರೆ, ಜುಲೈ-ಸೆಪ್ಟೆಂಬರ್ 2025 ರಲ್ಲಿದ್ದ ಶೇಕಡಾ 4.4 ಗೆ ಹೋಲಿಸಿದರೆ ಜುಲೈ-ಸೆಪ್ಟೆಂಬರ್ 2026 ರಲ್ಲಿ ಗ್ರಾಮೀಣ ನಿರುದ್ಯೋಗ ದರವು ಶೇಕಡಾ 4.3 ರಷ್ಟಿದ್ದು ಹೆಚ್ಚಾಗಿ ಬದಲಾಗದೆ ಉಳಿದಿದೆ. ಗ್ರಾಮೀಣ ಪುರುಷರ ನಿರುದ್ಯೋಗ ದರವು ಜುಲೈ-ಸೆಪ್ಟೆಂಬರ್ 2025 ರ ಶೇಕಡಾ 4.7 ರಿಂದ ಜುಲೈ-ಸೆಪ್ಟೆಂಬರ್ 2026 ರ ವೇಳೆಗೆ 0.3 ಶೇಕಡಾವಾರು ಅಂಕಗಳಷ್ಟು ಇಳಿಕೆಯಾಗಿ ಶೇಕಡಾ 4.4 ಕ್ಕೆ ತಲುಪಿದೆ. ಅದೇ ಅವಧಿಯಲ್ಲಿ ಪುರುಷರು (ಶೇಕಡಾ 6.2 ರಿಂದ 6.1) ಮತ್ತು ಮಹಿಳೆಯರು (ಶೇಕಡಾ 9.0 ರಿಂದ 8.8) ಇಬ್ಬರ ನಗರ ನಿರುದ್ಯೋಗ ದರದಲ್ಲೂ ಸಣ್ಣ ಪ್ರಮಾಣದ ಸುಧಾರಣೆಗಳು ದಾಖಲಾಗಿವೆ.


|
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ನಿರುದ್ಯೋಗ ದರವು ಜುಲೈ-ಸೆಪ್ಟೆಂಬರ್ 2026ರಲ್ಲಿ ಹಿಂದಿನ ತ್ರೈಮಾಸಿಕದ ಶೇಕಡಾ 5.4 ಕ್ಕೆ ಹೋಲಿಸಿದರೆ ಶೇಕಡಾ 5.1 ಕ್ಕೆ ಸುಧಾರಿಸಿದೆ.
|
· ಗ್ರಾಮೀಣ ಸ್ವಯಂ ಉದ್ಯೋಗ ಮತ್ತು ನಗರ ನಿಯಮಿತ ವೇತನ/ಸಂಬಳದ ಉದ್ಯೋಗ ಹೆಚ್ಚಳ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗದಲ್ಲಿ ತೊಡಗಿರುವ ಕಾರ್ಮಿಕರ ಪಾಲು ಪ್ರಸ್ತುತ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದ ಶೇಕಡಾ 61.4 ರಿಂದ ಶೇಕಡಾ 62.7 ಕ್ಕೆ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ, ನಿಯಮಿತ ವೇತನ/ಸಂಬಳ ಪಡೆಯುವ ಕಾರ್ಮಿಕರ ಪಾಲು ಹಿಂದಿನ ತ್ರೈಮಾಸಿಕದ ಶೇಕಡಾ 49.3 ರಿಂದ ಶೇಕಡಾ 49.6 ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ, ದಿನಗೂಲಿ/ತಾತ್ಕಾಲಿಕ ಶ್ರಮದಲ್ಲಿ (casual labour) ತೊಡಗಿರುವ ಕಾರ್ಮಿಕರ ಪಾಲು ಜುಲೈ-ಸೆಪ್ಟೆಂಬರ್ 2026 ರ ಅವಧಿಯಲ್ಲಿ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇಕಡಾ 22.5 ರಿಂದ ಶೇಕಡಾ 21.7 ಕ್ಕೆ ಇಳಿದರೆ, ನಗರ ಪ್ರದೇಶಗಳಲ್ಲಿ ಶೇಕಡಾ 11.1 ರಿಂದ ಶೇಕಡಾ 10.7 ಕ್ಕೆ ತಲುಪಿದೆ.
ವರ್ಷದಿಂದ ವರ್ಷಕ್ಕೆ ಹೋಲಿಸಿದಾಗ ದಿನಗೂಲಿ/ತಾತ್ಕಾಲಿಕ ಶ್ರಮದ ಉದ್ಯೋಗದಲ್ಲಿ ತೊಡಗಿರುವ ಕಾರ್ಮಿಕರ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ, ಈ ಪಾಲು ಜುಲೈ-ಸೆಪ್ಟೆಂಬರ್ 2025 ರ ಶೇಕಡಾ 22.2 ರಿಂದ ಜುಲೈ-ಸೆಪ್ಟೆಂಬರ್ 2026 ರಲ್ಲಿ ಶೇಕಡಾ 21.7 ಕ್ಕೆ 0.5 ಶೇಕಡಾವಾರು ಅಂಕಗಳಷ್ಟು ಕಡಿಮೆಯಾಗಿದೆ. ಅದೇ ರೀತಿ, ನಗರ ಪ್ರದೇಶಗಳಲ್ಲಿ ಅದೇ ಅವಧಿಯಲ್ಲಿ ಶೇಕಡಾ 10.9 ರಿಂದ ಶೇಕಡಾ 10.7 ಕ್ಕೆ 0.2 ಶೇಕಡಾವಾರು ಅಂಕಗಳಷ್ಟು ಸಣ್ಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗದಲ್ಲಿನ ಕಾರ್ಮಿಕರ ಪಾಲು ಸ್ಥಿರವಾಗಿದ್ದರೆ, ನಿಯಮಿತ ವೇತನ/ಸಂಬಳದ ಉದ್ಯೋಗವು ವರ್ಷದಲ್ಲಿ 0.6 ಶೇಕಡಾವಾರು ಅಂಕಗಳಷ್ಟು ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಸ್ವಯಂ ಉದ್ಯೋಗವು 0.4 ಶೇಕಡಾವಾರು ಅಂಕಗಳಷ್ಟು ಹೆಚ್ಚಿದ್ದರೆ, ನಿಯಮಿತ ವೇತನ/ಸಂಬಳದ ಉದ್ಯೋಗವು ಸಣ್ಣ ಪ್ರಮಾಣದಲ್ಲಿ ಇಳಿಕೆಯಾಗಿದೆ.


|
ಜುಲೈ-ಸೆಪ್ಟೆಂಬರ್ 2026 ರ ಅವಧಿಯಲ್ಲಿ ದಿನಗೂಲಿ/ತಾತ್ಕಾಲಿಕ ಶ್ರಮದ ಉದ್ಯೋಗದಲ್ಲಿ ತೊಡಗಿರುವ ಕಾರ್ಮಿಕರ ಪಾಲು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹಾಗೂ ವರ್ಷದಿಂದ ವರ್ಷಕ್ಕೆ ಎರಡರಲ್ಲೂ ಇಳಿಕೆಯಾಗಿದೆ.
|
· ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ವಲಯದ ಪಾಲು ಹೆಚ್ಚಳ, ನಗರ ಪ್ರದೇಶಗಳಲ್ಲಿ ತೃತೀಯಕ (ಸೇವಾ) ವಲಯ ಸ್ಥಿರ: ಉದ್ಯೋಗದ ವಲಯವಾರು ವಿತರಣೆಯು ಗ್ರಾಮೀಣ-ನಗರ ಉದ್ಯೋಗದ ವಿಶಿಷ್ಟ ಮಾದರಿಗಳನ್ನು ಪ್ರತಿಫಲಿಸುವುದನ್ನು ಮುಂದುವರಿಸಿದ್ದು, ಗ್ರಾಮೀಣ ಕಾರ್ಯಪಡೆಯು ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೆ ನಗರ ಕಾರ್ಯಪಡೆಯು ತೃತೀಯಕ ವಲಯದಲ್ಲಿ (tertiary sector) ಕೇಂದ್ರೀಕೃತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯಲ್ಲಿ ತೊಡಗಿರುವ ಕಾರ್ಮಿಕರ ಪಾಲು ಏಪ್ರಿಲ್-ಜೂನ್ 2026 ರ ಶೇಕಡಾ 52.9 ರಿಂದ ಜುಲೈ-ಸೆಪ್ಟೆಂಬರ್ 2026 ರಲ್ಲಿ ಶೇಕಡಾ 56.7 ಕ್ಕೆ ಹೆಚ್ಚಾಗಿದೆ. ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಸೇರಿದಂತೆ ದ್ವಿತೀಯಕ ವಲಯದಲ್ಲಿ ತೊಡಗಿರುವ ಕಾರ್ಮಿಕರ ಪಾಲು ಕಳೆದ ತ್ರೈಮಾಸಿಕದ ಶೇಕಡಾ 24.4 ಕ್ಕೆ ವಿರುದ್ಧವಾಗಿ ಶೇಕಡಾ 21.9 ರಷ್ಟಿದೆ. ತೃತೀಯಕ ವಲಯದಲ್ಲಿ, ಕಳೆದ ತ್ರೈಮಾಸಿಕದ ಶೇಕಡಾ 22.7 ಕ್ಕೆ ವಿರುದ್ಧವಾಗಿ ಪ್ರಸ್ತುತ ತ್ರೈಮಾಸಿಕದಲ್ಲಿ ಇದನ್ನು ಶೇಕಡಾ 21.4 ಎಂದು ಅಂದಾಜಿಸಲಾಗಿದೆ.
ಜುಲೈ-ಸೆಪ್ಟೆಂಬರ್ 2025 ಕ್ಕೆ ಹೋಲಿಸಿದರೆ, ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಸೇರಿದಂತೆ ದ್ವಿತೀಯಕ ವಲಯದಲ್ಲಿ ತೊಡಗಿರುವ ಗ್ರಾಮೀಣ ಕಾರ್ಮಿಕರ ಪಾಲು ಶೇಕಡಾ 21.0 ರಿಂದ ಶೇಕಡಾ 21.9 ಕ್ಕೆ ಹೆಚ್ಚಾಗಿದ್ದರೆ, ತೃತೀಯಕ ವಲಯದ ಪಾಲು ಮುಖ್ಯವಾಗಿ ಸ್ಥಿರವಾಗಿದ್ದು, ಜುಲೈ-ಸೆಪ್ಟೆಂಬರ್ 2026 ರಲ್ಲಿ ಶೇಕಡಾ 21.3 ರಿಂದ ಶೇಕಡಾ 21.4 ಕ್ಕೆ ಸಣ್ಣ ಪ್ರಮಾಣದಲ್ಲಿ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ದ್ವಿತೀಯಕ ಮತ್ತು ತೃತೀಯಕ ವಲಯಗಳಲ್ಲಿ ತೊಡಗಿರುವ ಕಾರ್ಮಿಕರ ಪಾಲು ಮುಖ್ಯವಾಗಿ ಸ್ಥಿರವಾಗಿದೆ.


|
ಒಂದು ವರ್ಷದ ಅವಧಿಯಲ್ಲಿ, ದ್ವಿತೀಯಕ ವಲಯದಲ್ಲಿನ ಗ್ರಾಮೀಣ ಉದ್ಯೋಗದ ಪಾಲು ಶೇಕಡಾ 21.0 ರಿಂದ ಶೇಕಡಾ 21.9 ಕ್ಕೆ ಏರಿಕೆಯಾಗಿದ್ದರೆ, ತೃತೀಯಕ ವಲಯವು ಸುಮಾರು ಶೇಕಡಾ 21.4 ರಷ್ಟಿದ್ದು ಸ್ಥಿರವಾಗಿದೆ.
|
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ಪ್ರಕ್ಷೇಪಿತ ಜನಸಂಖ್ಯಾ ಅಂಕಿ-ಅಂಶಗಳನ್ನು ಬಳಸಿ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಕಾರ್ಮಿಕರ ಸಂಪೂರ್ಣ ಸಂಖ್ಯೆಯನ್ನು ಅಂದಾಜಿಸಲಾಗಿದೆ. ಸರಾಸರಿಯಾಗಿ, ಜುಲೈ-ಸೆಪ್ಟೆಂಬರ್ 2026 ರ ತ್ರೈಮಾಸಿಕದಲ್ಲಿ ದೇಶದಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 57.9 ಕೋಟಿ ವ್ಯಕ್ತಿಗಳು ಉದ್ಯೋಗದಲ್ಲಿದ್ದರು, ಅದರಲ್ಲಿ 40.5 ಕೋಟಿ ಪುರುಷರು ಮತ್ತು 17.4 ಕೋಟಿ ಮಹಿಳೆಯರಾಗಿದ್ದರು.

|
ಜುಲೈ-ಸೆಪ್ಟೆಂಬರ್ 2026ರ ತ್ರೈಮಾಸಿಕ ಅವಧಿಯ, ತ್ರೈಮಾಸಿಕ ಬುಲೆಟಿನ್ ಸಚಿವಾಲಯದ ವೆಬ್ಸೈಟ್ನಲ್ಲಿ (https://www.mospi.gov.in) ಲಭ್ಯವಿದೆ.
|
ಪ್ರಕಟಣೆಗಳು/ವರದಿಗಳನ್ನು ಪಡೆಯಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ

|
*****