ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ವಿಶೇಷ ಅಭಿಯಾನ 6.0ರಲ್ಲಿ ದಾಖಲೆಯ ಸಾಧನೆ: ಸರ್ಕಾರಿ ಕಚೇರಿಗಳಾದ್ಯಂತ 19.89 ಲಕ್ಷ ಸ್ವಚ್ಛತಾ ಅಭಿಯಾನ ಸ್ಥಳಗಳಲ್ಲಿ ಕಾರ್ಯಾಚರಣೆ; ಗುಜರಿ ಮತ್ತು ಇ-ತ್ಯಾಜ್ಯ ವಿಲೇವಾರಿಯಿಂದ ₹970.33 ಕೋಟಿ ಆದಾಯ ಗಳಿಕೆ


ಕಚೇರಿಗಳ 277.82 ಲಕ್ಷ ಚದರ ಅಡಿ ಸ್ಥಳಾವಕಾಶ ಮುಕ್ತ; 9.96 ಲಕ್ಷ ಸಾರ್ವಜನಿಕ ಕುಂದುಕೊರತೆಗಳು ಮತ್ತು 41,000 ಸಾರ್ವಜನಿಕ ಕುಂದುಕೊರತೆಗಳ ಮೇಲ್ಮನವಿಗಳ ವಿಲೇವಾರಿ

ಅಭಿಯಾನದ ಅವಧಿಯಲ್ಲಿ 15.77 ಲಕ್ಷಕ್ಕೂ ಅಧಿಕ ಭೌತಿಕ ಕಡತಗಳ ವಿಲೇವಾರಿ

ಸಂಸದರು, ಪ್ರಧಾನಮಂತ್ರಿ ಕಚೇರಿ (ಪಿಎಂಒ), ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಂದ ಬಂದಿದ್ದ ಬಾಕಿ ಉಲ್ಲೇಖಗಳ ವಿಲೇವಾರಿಯಲ್ಲಿ ಭಾರಿ ಹೆಚ್ಚಳ

ಅಧಿಕೃತ ಮಾರ್ಗಗಳ ಮೂಲಕ ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ವಿಶೇಷ ಆದ್ಯತೆ

ಪ್ರಕಟಣಾ ದಿನಾಂಕ: 06 NOV 2026 4:18PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಮಾರ್ಗದರ್ಶನದಿಂದ ಪ್ರೇರಣೆ ಪಡೆದು, ಮಾನ್ಯ ರಾಜ್ಯ ಸಚಿವರಾದ (ಪಿಪಿ) ಡಾ. ಜಿತೇಂದ್ರ ಸಿಂಗ್ ಅವರ ಮಾರ್ಗದರ್ಶನದಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆಯನ್ನು ಸಾಂಸ್ಥಿಕಗೊಳಿಸುವುದು ಮತ್ತು ಬಾಕಿ ಉಳಿದಿರುವ ಕೆಲಸಗಳನ್ನು ಕಡಿಮೆಗೊಳಿಸುವ ಉದ್ದೇಶದ ವಿಶೇಷ ಅಭಿಯಾನ 6.0, 2021ರಲ್ಲಿ ವಾರ್ಷಿಕ ವಿಶೇಷ ಅಭಿಯಾನ ಆರಂಭವಾದಾಗಿನಿಂದ ಈವರೆಗಿನ ಎಲ್ಲ ಪ್ರಮುಖ ನಿಯತಾಂಕಗಳಲ್ಲಿ ಅತ್ಯಧಿಕ ಸಾಧನೆಯನ್ನು ದಾಖಲಿಸಿದೆ.

2026ರ ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ ನಡೆದ ಈ ಅಭಿಯಾನಕ್ಕೆ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG) ನೋಡಲ್ ಇಲಾಖೆಯಾಗಿತ್ತು. ದೇಶಾದ್ಯಂತದ ಸಚಿವಾಲಯಗಳು ಮತ್ತು ಇಲಾಖೆಗಳು ಸಕ್ರಿಯವಾಗಿ ಭಾಗವಹಿಸಿದ್ದು, ಸರ್ಕಾರಿ ಕಚೇರಿಗಳು, ಕ್ಷೇತ್ರಮಟ್ಟದ ಘಟಕಗಳು ಹಾಗೂ ಸಾರ್ವಜನಿಕ ಸೇವೆಗಳನ್ನು ಒದಗಿಸುವ ಸಂಸ್ಥೆಗಳಿಗೂ ಈ ಅಭಿಯಾನವನ್ನು ವಿಸ್ತರಿಸಲಾಯಿತು.

ವಿಶೇಷ ಅಭಿಯಾನ 6.0ರ ಪೋರ್ಟಲ್‌ನಲ್ಲಿ ಸಚಿವಾಲಯಗಳು ಮತ್ತು ಇಲಾಖೆಗಳು ಸಲ್ಲಿಸಿರುವ ಇತ್ತೀಚಿನ ಕ್ರೋಡೀಕೃತ ಮಾಹಿತಿಯ ಪ್ರಕಾರ, ಒಟ್ಟು 19,88,826 ಸ್ವಚ್ಛತಾ ಅಭಿಯಾನ ಸ್ಥಳಗಳನ್ನು ಒಳಗೊಳ್ಳಲಾಗಿದೆ. ಇದು ಹಿಂದಿನ ವರ್ಷದ 11,59,783 ಸ್ಥಳಗಳ ಸಾಧನೆಗಿಂತ ಸುಮಾರು ಶೇ. 71ರಷ್ಟು ಹೆಚ್ಚಾಗಿದೆ. ಇ-ತ್ಯಾಜ್ಯ ಸೇರಿದಂತೆ ಗುಜರಿ ವಸ್ತುಗಳ ವಿಲೇವಾರಿಯಿಂದ ₹970.33 ಕೋಟಿ ಆದಾಯ ಗಳಿಸಲಾಗಿದೆ. ಇದು ವಿಶೇಷ ಅಭಿಯಾನ 5.0ಕ್ಕೆ ಹೋಲಿಸಿದರೆ ಸುಮಾರು ಶೇ. 16ರಷ್ಟು ಹೆಚ್ಚಳವಾಗಿದೆ. ಇದಲ್ಲದೆ, 277.82 ಲಕ್ಷ ಚದರ ಅಡಿ ಕಚೇರಿ ಸ್ಥಳಾವಕಾಶವನ್ನು ಮುಕ್ತಗೊಳಿಸಿ, ಉತ್ಪಾದಕ ಉದ್ದೇಶಗಳಿಗಾಗಿ ಬಳಸಲು ಅನುವು ಮಾಡಿಕೊಡಲಾಗಿದೆ. ಇದು ಹಿಂದಿನ ಅಭಿಯಾನಕ್ಕೆ ಹೋಲಿಸಿದರೆ ಸುಮಾರು ಶೇ. 19ರಷ್ಟು ಹೆಚ್ಚಳವಾಗಿದೆ.

ಬಾಕಿ ಕೆಲಸಗಳನ್ನು ಕಡಿಮೆಗೊಳಿಸುವುದು ಮತ್ತು ಆಡಳಿತದ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿಯೂ ಅಭಿಯಾನವು ಗಮನಾರ್ಹ ಪ್ರಗತಿ ಸಾಧಿಸಿದೆ. ಒಟ್ಟು 9,99,168 ಸಾರ್ವಜನಿಕ ಕುಂದುಕೊರತೆಗಳನ್ನು ವಿಲೇವಾರಿ ಮಾಡಲಾಗಿದ್ದು, 40,878 ಸಾರ್ವಜನಿಕ ಕುಂದುಕೊರತೆಗಳ ಮೇಲ್ಮನವಿಗಳಿಗೆ ಪರಿಹಾರ ಒದಗಿಸಲಾಗಿದೆ. ಸಚಿವಾಲಯಗಳು ಮತ್ತು ಇಲಾಖೆಗಳು 26,79,875 ಭೌತಿಕ ಕಡತಗಳನ್ನು ಪರಿಶೀಲಿಸಿ, ಅವುಗಳ ಪೈಕಿ 15,76,828 ಕಡತಗಳನ್ನು ವಿಲೇವಾರಿ ಮಾಡಿವೆ. ಡಿಜಿಟಲ್ ವಿಭಾಗದಲ್ಲಿ 9,58,864 ಇ-ಕಡತಗಳನ್ನು ಪರಿಶೀಲಿಸಲಾಗಿದ್ದು, 7,01,723 ಇ-ಕಡತಗಳನ್ನು ಮುಕ್ತಾಯಗೊಳಿಸಲಾಗಿದೆ. ಇದರಿಂದ ದಕ್ಷ, ಕಾಗದರಹಿತ ಮತ್ತು ನಾಗರಿಕ ಕೇಂದ್ರಿತ ಆಡಳಿತ ವ್ಯವಸ್ಥೆಯ ಬಗೆಗಿನ ಸರ್ಕಾರದ ಬದ್ಧತೆ ಮತ್ತಷ್ಟು ಬಲಗೊಂಡಿದೆ.

ಪ್ರಮುಖ ಮಾನದಂಡಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು

ಪ್ರಮುಖ ಸಾಧಕರ ಪೈಕಿ, ಗುಜರಿ ವಸ್ತುಗಳ ವಿಲೇವಾರಿ ಮೂಲಕ ಆದಾಯ ಗಳಿಸುವಲ್ಲಿ ರೈಲ್ವೆ ಸಚಿವಾಲಯ (ರೈಲ್ವೆ ಮಂಡಳಿ) ಮೊದಲ ಸ್ಥಾನದಲ್ಲಿದ್ದು, ₹618.06 ಕೋಟಿ ಆದಾಯ ಗಳಿಸಿದೆ. ನಂತರದ ಸ್ಥಾನಗಳಲ್ಲಿ ಮಿಲಿಟರಿ ವ್ಯವಹಾರಗಳ ಇಲಾಖೆ ₹88.96 ಕೋಟಿ, ಕಲ್ಲಿದ್ದಲು ಸಚಿವಾಲಯ ₹61.41 ಕೋಟಿ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ₹₹34.81 ಕೋಟಿ ಆದಾಯ ಗಳಿಸಿವೆ.

ಸ್ವಚ್ಛತಾ ಸ್ಥಳಗಳ ಸಂಖ್ಯೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೊದಲ ಸ್ಥಾನದಲ್ಲಿದೆ. ಈ ಇಲಾಖೆಯು ಶಾಲೆಗಳಲ್ಲಿ 7.01 ಲಕ್ಷಕ್ಕೂ ಅಧಿಕ ಸ್ವಚ್ಛತಾ ಅಭಿಯಾನಗಳನ್ನು ಕೈಗೊಂಡಿದೆ. ನಂತರದ ಸ್ಥಾನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಅಭಿಯಾನದ ಅವಧಿಯಲ್ಲಿ 6.52 ಲಕ್ಷ ಅಂಗನವಾಡಿ ಕೇಂದ್ರಗಳು ಹಾಗೂ ಸಚಿವಾಲಯದ ಇತರ ಸಂಸ್ಥೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 1.62 ಲಕ್ಷಕ್ಕೂ ಅಧಿಕ ಸ್ಥಳಗಳನ್ನು, ಅಂಚೆ ಇಲಾಖೆಯು 1.35 ಲಕ್ಷಕ್ಕೂ ಅಧಿಕ ಸ್ಥಳಗಳನ್ನು ಹಾಗೂ ಹಣಕಾಸು ಸೇವೆಗಳ ಇಲಾಖೆಯು ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳಾದ್ಯಂತ 1.20 ಲಕ್ಷಕ್ಕೂ ಅಧಿಕ ಸ್ಥಳಗಳನ್ನು ಒಳಗೊಂಡಿವೆ. ಈ ಇಲಾಖೆಗಳು ಈವರೆಗೆ ಆಯೋಜಿಸಲಾದ ಅತಿದೊಡ್ಡ ವಿಶೇಷ ಅಭಿಯಾನದ ಯಶಸ್ಸಿಗೆ ಪ್ರಮುಖ ಕೊಡುಗೆ ನೀಡಿವೆ.

ಸೂಕ್ತ ಬಳಕೆಯ ಉದ್ದೇಶಗಳಿಗಾಗಿ ಸ್ಥಳಾವಕಾಶ ಮುಕ್ತಗೊಳಿಸುವ ವಿಭಾಗದಲ್ಲಿ ಕಲ್ಲಿದ್ದಲು ಸಚಿವಾಲಯ ಮೊದಲ ಸ್ಥಾನದಲ್ಲಿದ್ದು, 1.48 ಕೋಟಿ ಚದರ ಅಡಿಗೂ ಅಧಿಕ ಸ್ಥಳಾವಕಾಶವನ್ನು ಮುಕ್ತಗೊಳಿಸಿದೆ. ನಂತರದ ಸ್ಥಾನದಲ್ಲಿರುವ ಭಾರೀ ಕೈಗಾರಿಕೆಗಳ ಸಚಿವಾಲಯವು 50.19 ಲಕ್ಷ ಚದರ ಅಡಿಗೂ ಅಧಿಕ ಸ್ಥಳಾವಕಾಶವನ್ನು ಹಾಗೂ ರಕ್ಷಣಾ ಉತ್ಪಾದನಾ ಇಲಾಖೆಯು ತನ್ನ ಅಧೀನದ ವಿವಿಧ ಸಂಸ್ಥೆಗಳಲ್ಲಿ 19.34 ಲಕ್ಷ ಚದರ ಅಡಿ ಸ್ಥಳಾವಕಾಶವನ್ನು ಮುಕ್ತಗೊಳಿಸಿವೆ.

ಅಭಿಯಾನದ ಅವಧಿಯಲ್ಲಿ ರೈಲ್ವೆ ಸಚಿವಾಲಯ (ರೈಲ್ವೆ ಮಂಡಳಿ) 2.69 ಲಕ್ಷಕ್ಕೂ ಅಧಿಕ ಸಾರ್ವಜನಿಕ ಕುಂದುಕೊರತೆಗಳನ್ನು ವಿಲೇವಾರಿ ಮಾಡಿದೆ. ನಂತರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2.42 ಲಕ್ಷ, ಅಂಚೆ ಇಲಾಖೆಯು 1.50 ಲಕ್ಷ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು 1.01 ಲಕ್ಷ ಸಾರ್ವಜನಿಕ ಕುಂದುಕೊರತೆಗಳನ್ನು ವಿಲೇವಾರಿ ಮಾಡಿವೆ.

ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸಚಿವಾಲಯಗಳು ಒಟ್ಟು 983 ಪ್ರಕ್ರಿಯೆಗಳನ್ನು ವರದಿ ಮಾಡಿದ್ದು, ಮಿಲಿಟರಿ ವ್ಯವಹಾರಗಳ ಇಲಾಖೆಯು ಈ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ.

ಇ-ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ

ಹಿಂದಿನ ಅಭಿಯಾನದಲ್ಲಿ ಪರಿಚಯಿಸಲಾದ ಇ-ತ್ಯಾಜ್ಯ ನಿರ್ವಹಣೆಯ ಆದ್ಯತೆಯನ್ನು ಮತ್ತಷ್ಟು ಮುಂದುವರಿಸಿರುವ ವಿಶೇಷ ಅಭಿಯಾನ 6.0ರಲ್ಲಿ, ಇ-ತ್ಯಾಜ್ಯದ ಪರಿಣಾಮಕಾರಿ ಸಂಗ್ರಹಣೆ, ಪ್ರತ್ಯೇಕಿಸುವಿಕೆ ಮತ್ತು ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳು, 2022ರ ಪ್ರಕಾರ ವೈಜ್ಞಾನಿಕ ವಿಲೇವಾರಿಗೆ ವಿಶೇಷ ಒತ್ತು ನೀಡಲಾಗಿದೆ.

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG), ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC), ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB), ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ಮರುಬಳಕೆ ಉದ್ಯಮದ ಸಹಯೋಗದೊಂದಿಗೆ ನಡೆಸಿದ ಸಂಘಟಿತ ಪ್ರಯತ್ನಗಳ ಮೂಲಕ ಸರ್ಕಾರಿ ಕಚೇರಿಗಳನ್ನು ಅಧಿಕೃತ ಮರುಬಳಕೆದಾರರು, ನವೀಕರಣಕಾರರು ಮತ್ತು ಉತ್ಪಾದಕರೊಂದಿಗೆ ಸಂಪರ್ಕಿಸುವ ವ್ಯವಸ್ಥಿತ ಕಾರ್ಯವಿಧಾನವನ್ನು ರೂಪಿಸಲಾಗಿದೆ.

ಈ ಅಭಿಯಾನದ ಅವಧಿಯಲ್ಲಿ ಕೈಗೊಂಡ ಪ್ರಯತ್ನಗಳ ಫಲವಾಗಿ, ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಮರುಬಳಕೆದಾರರು, ನವೀಕರಣಕಾರರು ಮತ್ತು ಉತ್ಪಾದಕರ ಸಂಖ್ಯೆ 38ರಿಂದ 200ಕ್ಕೂ ಹೆಚ್ಚಾಗಿದೆ. ಇದರಿಂದ ಜವಾಬ್ದಾರಿಯುತ ಇ-ತ್ಯಾಜ್ಯ ನಿರ್ವಹಣೆಗೆ ಅಗತ್ಯವಾದ ಸಾಂಸ್ಥಿಕ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ.

ಅಭಿಯಾನದ ಅವಧಿಯಲ್ಲಿ ಸಚಿವಾಲಯಗಳು ಮತ್ತು ಇಲಾಖೆಗಳು ಇ-ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವ ಮೂಲಕ ಸುಮಾರು ₹50 ಕೋಟಿ ಆದಾಯ ಗಳಿಸಿವೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 5 ಲಕ್ಷ ಇ-ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವ ಗುರಿಯ ವಿರುದ್ಧ ಶಾಲೆಗಳಿಂದ 58 ಲಕ್ಷಕ್ಕೂ ಅಧಿಕ ಇ-ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದೆ. ಇಲಾಖೆಯ ವ್ಯಾಪಕ ಕ್ಷೇತ್ರಮಟ್ಟದ ಜಾಲದ ಮೂಲಕ ಈ ಅಭಿಯಾನವನ್ನು ತಲುಪಿಸುವ ಪ್ರಯತ್ನದ ಪರಿಣಾಮಕಾರಿತ್ವವನ್ನು ಇದು ತೋರಿಸುತ್ತದೆ.

ರೈಲ್ವೆ ಸಚಿವಾಲಯವೂ ಪ್ರಮುಖ ಕೊಡುಗೆದಾರನಾಗಿ ಹೊರಹೊಮ್ಮಿದ್ದು, ಇ-ತ್ಯಾಜ್ಯ ವಿಲೇವಾರಿ ಮೂಲಕ ₹10.43 ಕೋಟಿ ಆದಾಯ ಗಳಿಸಿದೆ.

ಸಂಪೂರ್ಣ ಸರ್ಕಾರದ ಭಾಗವಹಿಸುವಿಕೆ

ವಿಶೇಷ ಅಭಿಯಾನ 6.0ರ ವೈಶಿಷ್ಟ್ಯವೆಂದರೆ, ನಿರ್ದಿಷ್ಟ ದಿನದಂದು ಆಯ್ದ ಸಚಿವಾಲಯಗಳು ಮತ್ತು ಇಲಾಖೆಗಳು ತಮ್ಮ ಎಲ್ಲ ಕ್ಷೇತ್ರಮಟ್ಟದ ಕಚೇರಿಗಳು ಹಾಗೂ ಅಧೀನ ಸಂಸ್ಥೆಗಳಲ್ಲಿ ಸಮನ್ವಯದೊಂದಿಗೆ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶದಿಂದ ʼಒಂದು ದಿನದ ವಿಶೇಷ ಕಾರ್ಯಕ್ರಮʼವನ್ನು ಪರಿಚಯಿಸಿರುವುದು. ಭಾರತ ಸರ್ಕಾರದ ಒಟ್ಟು 27 ಸಚಿವಾಲಯಗಳು/ಇಲಾಖೆಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 2,40,156 ಕ್ಷೇತ್ರಮಟ್ಟದ ಕಚೇರಿಗಳನ್ನು ಈ ಅಭಿಯಾನದ ವ್ಯಾಪ್ತಿಗೆ ತಂದಿವೆ.

ಸ್ವಚ್ಛತೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು

ಈ ಅಭಿಯಾನದ ಮೂಲಕ ವ್ಯಾಪಕ ಸಾರ್ವಜನಿಕ ಸಂಪರ್ಕ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ವಿಶೇಷ ಅಭಿಯಾನ 6.0ರ ಅವಧಿಯಲ್ಲಿ ಸಚಿವಾಲಯಗಳು ಮತ್ತು ಇಲಾಖೆಗಳು 1 ಲಕ್ಷಕ್ಕೂ ಅಧಿಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಪ್ರಕಟಿಸಿವೆ. ಅಲ್ಲದೆ, 1.86 ಕೋಟಿ ಡಿಜಿಟಲ್ ಸಂವಹನಗಳು ದಾಖಲಾಗಿದ್ದು, 9.25 ಕೋಟಿ ಜನರನ್ನು ತಲುಪಲಾಗಿದೆ ಅಥವಾ ವೀಕ್ಷಣೆಗಳು ದಾಖಲಾಗಿವೆ. ಅಭಿಯಾನದ ಪೂರ್ವಸಿದ್ಧತೆ ಮತ್ತು ಅನುಷ್ಠಾನದ ಹಂತಗಳಲ್ಲಿ ಈವರೆಗೆ ಪಿಐಬಿಯಿಂದ 227 ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಲಾಗಿದೆ.

ವಿಶೇಷ ಅಭಿಯಾನ – ಸ್ವಚ್ಛತೆ, ಇ-ಆಡಳಿತವನ್ನು ಸಾಂಸ್ಥಿಕಗೊಳಿಸುವುದು ಮತ್ತು ಬಾಕಿ ಕೆಲಸಗಳನ್ನು ಕಡಿಮೆಗೊಳಿಸುವುದು

ವಿಶೇಷ ಅಭಿಯಾನ 6.0ರ ಮೂಲಕ ಸ್ವಚ್ಛತೆಯನ್ನು ಸಾಂಸ್ಥಿಕಗೊಳಿಸುವುದು, ಆಡಳಿತಾತ್ಮಕವಾಗಿ ಬಾಕಿ ಉಳಿದಿರುವ ಕೆಲಸಗಳನ್ನು ಕಡಿಮೆಗೊಳಿಸುವುದು, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಉತ್ತೇಜನ ನೀಡುವುದು ಹಾಗೂ ಸಾರ್ವಜನಿಕ ಸಂಪನ್ಮೂಲಗಳ ಗರಿಷ್ಠ ಸದ್ಬಳಕೆಯನ್ನು ಖಚಿತಪಡಿಸುವ ಸರ್ಕಾರದ ಬದ್ಧತೆ ಮತ್ತಷ್ಟು ಬಲಗೊಂಡಿದೆ.

ಸಚಿವಾಲಯಗಳು ಮತ್ತು ಇಲಾಖೆಗಳು ಅಳವಡಿಸಿಕೊಂಡಿರುವ ನವೀನ ಕಾರ್ಯವಿಧಾನಗಳು ಸುಸ್ಥಿರ ಕಾರ್ಯಸ್ಥಳ ನಿರ್ವಹಣೆ ಮತ್ತು ನಾಗರಿಕ ಕೇಂದ್ರಿತ ಆಡಳಿತ ವ್ಯವಸ್ಥೆಗೆ ಇತರರೂ ಅಳವಡಿಸಿಕೊಳ್ಳಬಹುದಾದ ಮಾದರಿಗಳಾಗಿವೆ.

ಸಾಧನೆಗೆ ಸಂಬಂಧಿಸಿದ ಅಂಕಿಅಂಶಗಳು ವಿಶೇಷ ಅಭಿಯಾನ 6.0ರ ಪೋರ್ಟಲ್‌ನಲ್ಲಿ ಸಚಿವಾಲಯಗಳು ಮತ್ತು ಇಲಾಖೆಗಳು ಸಲ್ಲಿಸಿರುವ ಕ್ರೋಡೀಕೃತ ವರದಿಗಳನ್ನು ಆಧರಿಸಿವೆ ಮತ್ತು ಮೌಲ್ಯಮಾಪನ ಹಂತದಲ್ಲಿ ಅಂತಿಮ ಪರಿಶೀಲನೆಗೆ ಒಳಪಟ್ಟಿರುತ್ತವೆ. 

 

*****


(ಪ್ರಕಟಣೆ ಐ.ಡಿ.: 2334374) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil