ಗೋವಾದಲ್ಲಿ ನಡೆಯಲಿರುವ 2026ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ-2026) ಸಂದರ್ಭದಲ್ಲಿ ‘ವೇವ್ಸ್ ಬಜಾರ್’ನಲ್ಲಿರುವ ‘ವೇವ್ಎಕ್ಸ್ ನವೋದ್ಯಮ ಪೆವಿಲಿಯನ್’ನಲ್ಲಿ ಭಾಗವಹಿಸಲು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಚಲನಚಿತ್ರ ಮತ್ತು ಸಂಬಂಧಿತ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ನವೋದ್ಯಮಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ಹಾಗೂ ಮಾಧ್ಯಮ ಉದ್ಯಮದ ಮುಂದೆ ತಮ್ಮ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸಲು ನವೀನ ನವೋದ್ಯಮಗಳಿಗೆ ವಿಶೇಷ ವೇದಿಕೆಯನ್ನು ಒದಗಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ. ಇದು ಜಾಗತಿಕ ಸೃಜನಶೀಲ ಪರಿಸರ ವ್ಯವಸ್ಥೆಯಲ್ಲಿ ಚಲನಚಿತ್ರ ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳು, ಹೂಡಿಕೆದಾರರೊಂದಿಗೆ ನೆಟ್ವರ್ಕಿಂಗ್, ಉದ್ಯಮ ಒಡನಾಟ ಮತ್ತು ಸಹಯೋಗಕ್ಕೆ ಅವಕಾಶಗಳನ್ನು ಸುಗಮಗೊಳಿಸುತ್ತದೆ.
ಚಲನಚಿತ್ರ ಮತ್ತು ಸಂಬಂಧಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಪಿಐಐಟಿ-ನೋಂದಾಯಿತ ನವೋದ್ಯಮಗಲಿಗೆ ಅರ್ಜಿ ಸಲ್ಲಿಸುವ ಅವಕಾಶ ಮುಕ್ತವಾಗಿದೆ. ‘ವೇವ್ಎಕ್ಸ್’ ರಚಿಸಿದ ಆಯ್ಕೆ ಸಮಿತಿಯು ನಡೆಸುವ ಸ್ಕ್ರೀನಿಂಗ್ ಮತ್ತು ಮೌಲ್ಯಮಾಪನ ಪ್ರಕ್ರಿಯೆಯ ಮೂಲಕ ಅರ್ಹ ನವೋದ್ಯಮಗಳನ್ನು ಪರಿಗಣಿಸಲಾಗುತ್ತದೆ.
ಆಸಕ್ತ ಮತ್ತು ಅರ್ಹ ನವೋದ್ಯಮಗಳು ತಮ್ಮ ಆವಿಷ್ಕಾರಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಲು ಈ ಅವಕಾಶವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಲು ಈ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.
ನೋಂದಣಿ ನಮೂನೆ ಮತ್ತು ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ: wavex.wavesbazaar.com ಪ್ರಶ್ನೆಗಳನ್ನು ಈ ಕೆಳಗಿನವುಗಳಿಗೆ ನಿರ್ದೇಶಿಸಬಹುದು: Wavex-mib [at]gov[dot]in.
ಗೋವಾದ ಐಎಫ್ಎಫ್ಐ ಬಗ್ಗೆ
1952ರಲ್ಲಿ ಸ್ಥಾಪನೆಯಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) ಏಷ್ಯಾದ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಇದು ವಿಶ್ವ ಸಿನೆಮಾದಲ್ಲಿನ ಶ್ರೇಷ್ಠತೆಯನ್ನು ಆಚರಿಸುತ್ತದೆ ಮತ್ತು ಭಾರತ ಮತ್ತು ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರು, ಕಲಾವಿದರು, ನಿರ್ಮಾಪಕರು ಮತ್ತು ಸಿನಿಮಾ ಉತ್ಸಾಹಿಗಳಿಗೆ ವೇದಿಕೆಯನ್ನು ಒದಗಿಸುತ್ತದೆ. ಗೋವಾದಲ್ಲಿ ವಾರ್ಷಿಕವಾಗಿ ನಡೆಯುವ ‘ಐಎಫ್ಎಫ್ಐ’ ವೈವಿಧ್ಯಮಯ ಸಿನಿಮೀಯ ಕೃತಿಗಳನ್ನು ಪ್ರದರ್ಶಿಸಲು, ಸೃಜನಶೀಲ ವಿನಿಮಯವನ್ನು ಉತ್ತೇಜಿಸಲು ಮತ್ತು ಸಿನಿಮಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸಲು ಜಾಗತಿಕ ಚಲನಚಿತ್ರ ಭ್ರಾತೃತ್ವವನ್ನು ಒಟ್ಟುಗೂಡಿಸುತ್ತದೆ.
‘ವೇವ್ಎಕ್ಸ್’ ಬಗ್ಗೆ
ವೇವ್ಎಕ್ಸ್ (ವೇವ್ಸ್ ಸ್ಟಾರ್ಟ್ಅಪ್ ಆಕ್ಸಿಲರೇಟರ್) ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ನವೋದ್ಯಮ ವೇಗವರ್ಧಕ ಮತ್ತು ಇನ್ಕ್ಯುಬೇಷನ್ ಉಪಕ್ರಮವಾಗಿದೆ. ಇದು ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಪೋಷಿಸಲು ಸಮರ್ಪಿತವಾಗಿದೆ. ಇದು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್, ಎಕ್ಸ್ಟೆಂಡೆಡ್ ರಿಯಾಲಿಟಿ (ಎವಿಜಿಸಿ-ಎಕ್ಸ್ಆರ್) ಮತ್ತು ಮಾಧ್ಯಮ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನವೋದ್ಯಮಗಳನ್ನು ಬೆಂಬಲಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ.
*****