ಪ್ರಕಟಣಾ ದಿನಾಂಕ:
06 NOV 2026 2:22PM by PIB Bengaluru
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಇಂದು “ಅಂತರಸಂಪರ್ಕ ಒಪ್ಪಂದಗಳ ನೋಂದಣಿ (ನಾಲ್ಕನೇ ತಿದ್ದುಪಡಿ) ನಿಯಮಾವಳಿಗಳು, 2026” ಅನ್ನು ಬಿಡುಗಡೆ ಮಾಡಿದೆ. ಈ ನಿಯಮಾವಳಿಗಳು 1 ಜನವರಿ 2027 ರಿಂದ ಜಾರಿಗೆ ಬರಲಿವೆ.
ದೂರಸಂಪರ್ಕದಲ್ಲಿ ‘ಅಂತರಸಂಪರ್ಕ’ ಎಂದರೆ ಎರಡು ಅಥವಾ ಹೆಚ್ಚಿನ ದೂರಸಂಪರ್ಕ ಜಾಲಗಳನ್ನು ಪರಸ್ಪರ ಸಂಪರ್ಕಿಸುವ ವಾಣಿಜ್ಯ ಮತ್ತು ತಾಂತ್ರಿಕ ವ್ಯವಸ್ಥೆಯಾಗಿದ್ದು, ಇದು ಅವುಗಳ ನಡುವೆ ದೂರಸಂಪರ್ಕ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ ಹಾಗೂ ವಿಭಿನ್ನ ಸೇವಾದಾರರ ಬಳಕೆದಾರರು ಪರಸ್ಪರ ಸರಾಗವಾಗಿ ಸಂವಹನ ನಡೆಸಲು ಸಹಾಯ ಮಾಡುತ್ತದೆ. ‘ಅಂತರಸಂಪರ್ಕ ಒಪ್ಪಂದಗಳ ನೋಂದಣಿ ನಿಯಮಾವಳಿಗಳು- 1999ರ, ಸೇವಾದಾರರ ನಡುವೆ ಮಾಡಿಕೊಳ್ಳಲಾದ ಅಂತರಸಂಪರ್ಕ ಒಪ್ಪಂದಗಳ ನೋಂದಣಿ ಮತ್ತು ನಿರ್ವಹಣೆಗೆ ಅಗತ್ಯವಾದ ನಿಯಂತ್ರಣ ಚೌಕಟ್ಟನ್ನು ಒದಗಿಸುತ್ತವೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಾಯ್ದೆ, 1997 ರ ಸೆಕ್ಷನ್ 11(1)(ಬಿ) ಯ ಉಪ-ಪರಿಚ್ಛೇದ (vii) ಮತ್ತು (viii) ಗಳು, ಇತರ ವಿಷಯಗಳ ಜೊತೆಗೆ, ಅಂತರಸಂಪರ್ಕ ಒಪ್ಪಂದಗಳ ನೋಂದಣಿಯನ್ನು ನಿರ್ವಹಿಸಲು ಮತ್ತು ನಿಗದಿತ ಶುಲ್ಕದ ಪಾವತಿ ಹಾಗೂ ಇತರೆ ನಿರ್ದಿಷ್ಟಪಡಿಸಿದ ಅಗತ್ಯತೆಗಳ ಈಡೇರಿಕೆಗೆ ಒಳಪಟ್ಟು, ಸಾರ್ವಜನಿಕ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಲು ಟ್ರಾಯ್ ಗೆ ಅಧಿಕಾರ ನೀಡುತ್ತವೆ.
ಅಂತರಸಂಪರ್ಕ ವಿಷಯಗಳನ್ನು ನಿಯಂತ್ರಿಸುವ ಪ್ರಸ್ತುತ ನಿಯಂತ್ರಣ ಚೌಕಟ್ಟು, ಪಾರದರ್ಶಕವಾಗಿ ಮತ್ತು ಸೇವಾದಾರರ ನಡುವೆ ಸಮರ್ಥ ಅಂತರಸಂಪರ್ಕಕ್ಕೆ ಪೂರಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಟ್ರಾಯ್ 3.4.2025 ರಂದು “ಅಂತರಸಂಪರ್ಕ ವಿಷಯಗಳ ಮೇಲಿನ ಪ್ರಸ್ತುತ ಟ್ರಾಯ್ ನಿಯಮಗಳ ಪರಿಶೀಲನೆ” ಕುರಿತು ಪೂರ್ವ ಸಮಾಲೋಚನಾ ಪತ್ರದ ಮೂಲಕ ನಿಯಂತ್ರಣ ಚೌಕಟ್ಟಿನ ಪರಿಶೀಲನೆಯನ್ನು ಪ್ರಾರಂಭಿಸಿತು. ಈ ಪೂರ್ವ ಸಮಾಲೋಚನಾ ಪತ್ರದ ಮೂಲಕ, 1999ರ ಅಂತರಸಂಪರ್ಕ ಒಪ್ಪಂದಗಳ ನೋಂದಣಿ ನಿಯಮಾವಳಿಗಳನ್ನು ಪರಿಶೀಲಿಸಲು ಸಂಬಂಧಪಟ್ಟವರ ಅಭಿಪ್ರಾಯಗಳನ್ನು ಕೋರಲಾಗಿತ್ತು.
ನಂತರ, ಪೂರ್ವ ಸಮಾಲೋಚನಾ ಪ್ರಕ್ರಿಯೆಯಲ್ಲಿ ಸ್ವೀಕರಿಸಲಾದ ಪಾಲುದಾರರ ಅಭಿಪ್ರಾಯಗಳನ್ನು ಪರಿಗಣಿಸಿ ಮತ್ತು ಹಿನ್ನೆಲೆ ಮಾಹಿತಿಯನ್ನು ಒದಗಿಸುವ “ಅಂತರಸಂಪರ್ಕ ವಿಷಯಗಳ ಮೇಲಿನ ಪ್ರಸ್ತುತ ಟ್ರಾಯ್ ನಿಯಮಗಳ ಪರಿಶೀಲನೆ” ಕುರಿತ ಸಮಾಲೋಚನಾ ಪತ್ರವನ್ನು 10.11.2025 ರಂದು ಬಿಡುಗಡೆ ಮಾಡಲಾಯಿತು. ಈ ಸಮಾಲೋಚನಾ ಪತ್ರದ ಮೂಲಕ, 1999ರ ಅಂತರಸಂಪರ್ಕ ಒಪ್ಪಂದಗಳ ನೋಂದಣಿ ನಿಯಮಾವಳಿಗಳನ್ನು ಪರಿಶೀಲಿಸಲು ಪಾಲುದಾರರ ಅಭಿಪ್ರಾಯಗಳನ್ನು ಕೋರಲಾಯಿತು. ಸಮಯದ ವಿಸ್ತರಣೆಯ ನಂತರ, ಲಿಖಿತ ಅಭಿಪ್ರಾಯಗಳು ಮತ್ತು ಭಿನ್ನ ಅಭಿಪ್ರಾಯಗಳನ್ನು ಸಲ್ಲಿಸಲು ಕೊನೆಯ ದಿನಾಂಕಗಳು ಕ್ರಮವಾಗಿ 15.12.2025 ಮತ್ತು 29.12.2025 ಆಗಿದ್ದವು.
ಸಮಾಲೋಚನಾ ಪತ್ರದಲ್ಲಿ ಎತ್ತಲಾದ ವಿಷಯಗಳಿಗೆ ಪ್ರತಿಕ್ರಿಯೆಯಾಗಿ, ಹದಿನೇಳು ಪಾಲುದಾರರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದರೆ, ಒಂಬತ್ತು ಪಾಲುದಾರರು ಭಿನ್ನ ಅಭಿಪಾಯಗಳನ್ನು ಸಲ್ಲಿಸಿದರು. ಸಮಾಲೋಚನಾ ಪ್ರಕ್ರಿಯೆಯ ಭಾಗವಾಗಿ, 28.1.2026 ರಂದು ಸಮಾಲೋಚನಾ ಪತ್ರದ ಕುರಿತು ಬಹಿರಂಗ ಚರ್ಚೆ (ಒ.ಎಚ್.ಡಿ.) ನಡೆಸಲಾಯಿತು. ಸಮಾಲೋಚನಾ ಪ್ರಕ್ರಿಯೆಯಲ್ಲಿ ಪಾಲುದಾರರಿಂದ ಬಂದ ಅಭಿಪ್ರಾಯಗಳು ಮತ್ತು ಅವುಗಳ ವಿಶ್ಲೇಷಣೆಯನ್ನು ಪರಿಗಣಿಸಿ, ಟ್ರಾಯ್ “ಅಂತರಸಂಪರ್ಕ ಒಪ್ಪಂದಗಳ ನೋಂದಣಿ (ನಾಲ್ಕನೇ ತಿದ್ದುಪಡಿ) ನಿಯಮಗಳು, 2026” ಅನ್ನು ಅಂತಿಮಗೊಳಿಸಿದೆ.
ತಿದ್ದುಪಡಿ ನಿಯಮಗಳ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
- ಅಂತರಸಂಪರ್ಕ ಒಪ್ಪಂದಗಳ ಆನ್ ಲೈನ್ ನೋಂದಣಿ: ಈ ಉದ್ದೇಶಕ್ಕಾಗಿ ಟ್ರಾಯ್ ಸ್ಥಾಪಿಸಿದ ಪೋರ್ಟಲ್ ಮೂಲಕವೇ ಎಲ್ಲಾ ಸೇವಾದಾರರು ತಮ್ಮ ಅಂತರಸಂಪರ್ಕ ಒಪ್ಪಂದಗಳನ್ನು ಹಾಗೂ ಅದರಲ್ಲಿನ ಯಾವುದೇ ತಿದ್ದುಪಡಿಗಳನ್ನು ನೋಂದಾಯಿಸಲು ತಿದ್ದುಪಡಿ ನಿಯಮಾವಳಿಗಳು ಅವಕಾಶ ಕಲ್ಪಿಸುತ್ತವೆ. ಫ್ಲಾಪಿ/ಡಿಸ್ಕ್ ಗಳಲ್ಲಿ ಸಾಫ್ಟ್ ಕಾಪಿಯೊಂದಿಗೆ ಮುದ್ರಿತ ಪ್ರತಿಗಳನ್ನು ಸಲ್ಲಿಸುವ ಮುಂಚಿನ ಅಗತ್ಯವನ್ನು ರದ್ದುಗೊಳಿಸಲಾಗಿದೆ. 1 ಜನವರಿ 2027 ರಂತೆ ಜಾರಿಯಲ್ಲಿರುವ ಒಪ್ಪಂದಗಳನ್ನು ಆ ದಿನಾಂಕದಿಂದ ಹದಿನೈದು ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ, ಮತ್ತು ಹೊಸ ಒಪ್ಪಂದಗಳು ಹಾಗೂ ತಿದ್ದುಪಡಿಗಳನ್ನು ಅವುಗಳ ಜಾರಿ ಅಥವಾ ತಿದ್ದುಪಡಿಯಾದ ಹದಿನೈದು ದಿನಗಳ ಒಳಗೆ ಸಲ್ಲಿಸಬೇಕು. ಇದು ಪರಿಣಾಮಕಾರಿ ನೋಂದಣಿ, ನವೀಕರಿಸಿದ ರಿಜಿಸ್ಟರ್ ನಿರ್ವಹಣೆ ಮತ್ತು ಒಪ್ಪಂದಗಳನ್ನು ಸುಲಭವಾಗಿ ಮರುಪಡೆಯಲು ಅನುಕೂಲ ಮಾಡಿಕೊಡುತ್ತದೆ.
- ಪಠ್ಯ ಹುಡುಕಬಹುದಾದ ಎಲೆಕ್ಟ್ರಾನಿಕ್ ದಾಖಲೆಗಳ ಸಲ್ಲಿಕೆ: ಸೇವಾದಾರರು ನೋಂದಣಿಗೆ ನಿಗದಿಪಡಿಸಿದ ಕಾಲಮಿತಿಯೊಳಗೆ ಅಂತರಸಂಪರ್ಕ ಒಪ್ಪಂದಗಳು ಮತ್ತು ಅವುಗಳ ತಿದ್ದುಪಡಿಗಳ ಎಲೆಕ್ಟ್ರಾನಿಕ್ ಪ್ರತಿಗಳನ್ನು ಪಠ್ಯ-ಹುಡುಕಬಹುದಾದ ಪಿಡಿಎಫ್ ಸ್ವರೂಪದಲ್ಲಿ ಸಲ್ಲಿಸಬೇಕಾಗುತ್ತದೆ. ಇದು ದಾಖಲೆಗಳ ಸಮರ್ಥ ಸಂಸ್ಕರಣೆ, ಪರಿಶೀಲನೆ, ನಿರ್ವಹಣೆ ಮತ್ತು ಮರುಪಡೆಯುವಿಕೆಗೆ ಅನುಕೂಲ ಮಾಡಿಕೊಡುತ್ತದೆ.
- ಅಂತರಸಂಪರ್ಕ ಒಪ್ಪಂದಗಳ ರಿಜಿಸ್ಟರ್ಗೆ ಆನ್ ಲೈನ್ ಪ್ರವೇಶ: ತಿದ್ದುಪಡಿ ಮಾಡಲಾದ ಚೌಕಟ್ಟು, ಅಂತರಸಂಪರ್ಕ ಒಪ್ಪಂದಗಳ ರಿಜಿಸ್ಟರ್ ನ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಲು, ರಿಜಿಸ್ಟರ್ ನ ನಿಗದಿತ ಭಾಗವನ್ನು ವೀಕ್ಷಿಸಲು ಮತ್ತು ಪೋರ್ಟಲ್ ಮೂಲಕ ಅದರ ಪ್ರತಿಗಳನ್ನು ಅಥವಾ ಸಾರಾಂಶವನ್ನು ಪಡೆಯಲು ಅವಕಾಶ ನೀಡುತ್ತದೆ. ಇದು ಚಾಲ್ತಿಯಲ್ಲಿರುವ ಭೌತಿಕ ವಿಧಾನದ ಜೊತೆಗೆ ರಿಜಿಸ್ಟರ್ ನ ಸಂಬಂಧಿತ ಭಾಗಗಳಿಗೆ ಎಲೆಕ್ಟ್ರಾನಿಕ್ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ, ಆ ಮೂಲಕ ಅನ್ವಯವಾಗುವ ನಿಯಂತ್ರಣ ನಿಬಂಧನೆಗಳಿಗೆ ಒಳಪಟ್ಟು ಸಾರ್ವಜನಿಕರಿಗೆ ಸುಲಭಲಭ್ಯತೆ ಮತ್ತು ಅನುಕೂಲತೆಯನ್ನು ಸುಧಾರಿಸುತ್ತದೆ.
- ಕಾಲಮಿತಿಯೊಳಗೆ ವಿವರವಾದ ಮಾಹಿತಿಯನ್ನು ಒದಗಿಸುವುದು: ಟ್ರಾಯ್ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಅಂತರಸಂಪರ್ಕ ಒಪ್ಪಂದಗಳ ರಿಜಿಸ್ಟರ್ ನಲ್ಲಿ ಸೇರಿಸಬಹುದಾದ ವಿವರವಾದ ಮಾಹಿತಿಯನ್ನು ಪಡೆಯಲು ಟ್ರಾಯ್ ಸ್ವರೂಪಗಳನ್ನು ನಿರ್ದಿಷ್ಟಪಡಿಸಬಹುದು. ಇದು ರಚನಾತ್ಮಕ ಮತ್ತು ಪ್ರಮಾಣಿತ ಮಾಹಿತಿಯ ಸಮಯೋಚಿತ ಲಭ್ಯತೆಯನ್ನು ಖಚಿತಪಡಿಸುತ್ತದೆ, ಪರಿಣಾಮಕಾರಿ ನಿಯಂತ್ರಣ ಮೇಲ್ವಿಚಾರಣೆ ಮತ್ತು ಅಂತರಸಂಪರ್ಕ ವ್ಯವಸ್ಥೆಗಳಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಸುಗಮಗೊಳಿಸುತ್ತದೆ.
- ಪರಿಶೀಲನೆ ಮತ್ತು ಪ್ರತಿಗಳಿಗಾಗಿ ಶುಲ್ಕ ಪರಿಷ್ಕರಣೆ: ರಿಜಿಸ್ಟರ್ ಪರಿಶೀಲನೆಯ ಶುಲ್ಕವನ್ನು ಗಂಟೆಗೆ ಅಥವಾ ಅದರ ಭಾಗಕ್ಕೆ ₹1,500 ಗೆ ಮತ್ತು ಪ್ರತಿಗಳು ಅಥವಾ ಸಾರಾಂಶಗಳ ಶುಲ್ಕವನ್ನು ಪುಟಕ್ಕೆ ₹500 ಗೆ ಪರಿಷ್ಕರಿಸಲಾಗಿದೆ. ಪರಿಷ್ಕರಿಸಿದ ಶುಲ್ಕ ರಚನೆಯನ್ನು ' ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಮಾಹಿತಿ ಪ್ರವೇಶ), 2005' ರ ಅಡಿಯಲ್ಲಿ ನಿಗದಿಪಡಿಸಿದ ಚೌಕಟ್ಟಿಗೆ ಅನುಗುಣವಾಗಿ ತರಲಾಗಿದೆ.
- ಆರ್ಥಿಕ ದಂಡನೆಗಳಿಗಾಗಿ ಶ್ರೇಣೀಕೃತ ಚೌಕಟ್ಟು: ನಿಯಮಾವಳಿಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಈ ನಿಯಮಾವಳಿಗಳ ನಿಬಂಧನೆಗಳ ಉಲ್ಲಂಘನೆಗಾಗಿ ಶ್ರೇಣೀಕೃತ ಆರ್ಥಿಕ ದಂಡನೆಯ ಚೌಕಟ್ಟನ್ನು ನಿರ್ದಿಷ್ಟಪಡಿಸಲಾಗಿದೆ. ಇದು ನಿಯಂತ್ರಣ ಚೌಕಟ್ಟಿನ ಜಾರಿಯನ್ನು ಹೆಚ್ಚು ಪರಿಣಾಮಕಾರಿಗಿಸುತ್ತದೆ, ಜೊತೆಗೆ ಸೂಕ್ತ ಮತ್ತು ನಿಯಮಾವಳಿಗಳ ಉಲ್ಲಂಘನೆಯ ಸ್ವರೂಪ ಮತ್ತು ಗಂಭೀರತೆಗೆ ತಕ್ಕಂತೆ ದಂಡನೆಗಳನ್ನು ವಿಧಿಸಲು ಇದು ಸಹಕಾರಿಯಾಗುತ್ತದೆ.
ನೋಂದಣಿ, ಸಲ್ಲಿಕೆ ಮತ್ತು ಪ್ರವೇಶ ಪ್ರಕ್ರಿಯೆಗಳ ಡಿಜಿಟಲೀಕರಣದ ಮೂಲಕ ಅಂತರಸಂಪರ್ಕ ಒಪ್ಪಂದಗಳ ನೋಂದಣಿ ಮತ್ತು ನಿರ್ವಹಣೆಯನ್ನು ಆಡಳಿತ ನಡೆಸುವ ಚೌಕಟ್ಟನ್ನು ತಿದ್ದುಪಡಿ ನಿಯಮಾವಳಿಗಳು ಆಧುನಿಕಗೊಳಿಸುತ್ತವೆ. ಕಾಲಮಿತಿಯೊಳಗೆ ಮಾಹಿತಿಯನ್ನು ಒದಗಿಸುವುದು ಮತ್ತು ಶ್ರೇಣೀಕೃತ ಆರ್ಥಿಕ ದಂಡನೆಗಳಿಗೆ ಸಂಬಂಧಿಸಿದ ನಿಬಂಧನೆಗಳು ಪರಿಣಾಮಕಾರಿ ನಿಯಂತ್ರಣ ಮೇಲ್ವಿಚಾರಣೆ ಮತ್ತು ಅನುಸರಣೆಯನ್ನು ಸುಗಮಗೊಳಿಸುತ್ತವೆ. ಒಟ್ಟಾರೆಯಾಗಿ, ತಿದ್ದುಪಡಿ ಮಾಡಲಾದ ಚೌಕಟ್ಟು ಅಂತರಸಂಪರ್ಕ ಒಪ್ಪಂದಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಆಡಳಿತಾತ್ಮಕ ದಕ್ಷತೆ, ಪಾರದರ್ಶಕತೆ, ಸುಲಭ ಪ್ರವೇಶ ಮತ್ತು ನಿಯಂತ್ರಣ ನಿಖರತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
“ಅಂತರಸಂಪರ್ಕ ಒಪ್ಪಂದಗಳ ನೋಂದಣಿ (ನಾಲ್ಕನೇ ತಿದ್ದುಪಡಿ) ನಿಯಮಗಳು, 2026” ರ ವಿವರವಾದ ವರದಿ, ವಿವರಣಾತ್ಮಕ ಜ್ಞಾಪನಾ ಪತ್ರವು , ಟ್ರಾಯ್ ನ ಜಾಲತಾಣ www.trai.gov.in ನಲ್ಲಿ ಲಭ್ಯವಿದೆ.
ಯಾವುದೇ ಸ್ಪಷ್ಟೀಕರಣ ಅಥವಾ ಮಾಹಿತಿಗಾಗಿ, ಶ್ರೀ ಸಮೀರ್ ಗುಪ್ತಾ, ಸಲಹೆಗಾರರು (ನೆಟ್ವರ್ಕ್ಸ್, ಸ್ಪೆಕ್ಟ್ರಮ್ ಮತ್ತು ಲೈಸೆನ್ಸಿಂಗ್-I), ಟ್ರಾಯ್ , ಅವರನ್ನು ಇಮೇಲ್ ವಿಳಾಸ: adv-nsl1@trai.gov.in ಅಥವಾ ದೂರವಾಣಿ ಸಂಖ್ಯೆ +91-11-20907752 ಮೂಲಕ ಸಂಪರ್ಕಿಸಬಹುದು.
*****