ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಡೆದ 'ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026'ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಗೌರವಾನ್ವಿತ​​​​​​​ ಉಪರಾಷ್ಟ್ರಪತಿ


ಕಳೆದ ದಶಕದಲ್ಲಿ ಭಾರತದ ನವೀಕರಿಸಬಹುದಾದ ಇಂಧನ ವಲಯವು ₹15 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಿದೆ: ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರು

135 ದೇಶಗಳ 75,000 ಕ್ಕೂ ಹೆಚ್ಚು ವೀಕ್ಷಕರ ಭಾಗವಹಿಸುವಿಕೆಯೊಂದಿಗೆ ಮುಕ್ತಾಯಗೊಂಡ ಬಿಆರ್‌ಇ (BRE) ಶೃಂಗಸಭೆ ಮತ್ತು ಎಕ್ಸ್‌ಪೋ 2026

ಪ್ರಕಟಣಾ ದಿನಾಂಕ: 05 NOV 2026 3:45PM by PIB Bengaluru

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಗಮನಾರ್ಹ ಪ್ರಗತಿಯು, ಪರಿಸರ ಬದ್ಧತೆಗಳು ಹಾಗೂ ಆರ್ಥಿಕ ಬೆಳವಣಿಗೆಗೆ ಅಡಚಣೆಯಲ್ಲ, ಬದಲಾಗಿ ದೇಶದ ಅಭಿವೃದ್ಧಿಯ ಪಯಣಕ್ಕೆ ಪ್ರೇರಕಶಕ್ತಿಯಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ ಎಂದು ಭಾರತದ ಸನ್ಮಾನ್ಯ ಉಪರಾಷ್ಟ್ರಪತಿಗಳಾದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ನವದೆಹಲಿಯಲ್ಲಿ ನಡೆದ 'ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026' ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವಾಗ ತಿಳಿಸಿದರು.

ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಸಾಧನೆಗಳು, ಸುಸ್ಥಿರ ಅಭಿವೃದ್ಧಿಗೆ ಅದರ ಬದ್ಧತೆ ಮತ್ತು ದೇಶಾದ್ಯಂತ ಕುಟುಂಬಗಳು, ರೈತರು ಹಾಗೂ ಸಮುದಾಯಗಳನ್ನು ಸಶಕ್ತಗೊಳಿಸುವಲ್ಲಿ ಶುದ್ಧ ಇಂಧನದ ಪರಿವರ್ತನಾತ್ಮಕ ಪಾತ್ರದ ಬಗ್ಗೆ ಸನ್ಮಾನ್ಯ ಉಪರಾಷ್ಟ್ರಪತಿಯವರು ಒತ್ತಿ ಹೇಳಿದರು.

ಕಳೆದ ದಶಕದಲ್ಲಿ ಸಾಧಿಸಿದ ಪ್ರಗತಿಯು, ಪರಿಸರ ಬದ್ಧತೆಗಳು ಬೆಳವಣಿಗೆಗೆ ಪ್ರೇರಕಶಕ್ತಿಯಾಗಿದ್ದು, ಹೆಚ್ಚಿನ ಇಂಧನ ಲಭ್ಯತೆ, ಕಡಿಮೆ ಕೈಗಾರಿಕಾ ವೆಚ್ಚಗಳು, ಉದ್ಯೋಗಾವಕಾಶಗಳು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತವೆ ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಸಮರ್ಥಿಸುತ್ತದೆ ಎಂದು ಸನ್ಮಾನ್ಯ ಉಪರಾಷ್ಟ್ರಪತಿಗಳು ಹೇಳಿದರು. ಬಲವಾದ ಉದ್ಯಮ-ಶೈಕ್ಷಣಿಕ ಸಹಯೋಗಕ್ಕೆ ಕರೆ ನೀಡಿದ ಅವರು, "2040 ರ ತಂತ್ರಜ್ಞಾನಗಳು ಇಂದಿನ ಪ್ರಯೋಗಾಲಯಗಳು ಮತ್ತು ಸ್ಟಾರ್ಟ್‌ಅಪ್‌ಗಳಿಂದ ಬರಲಿವೆ," ಎಂದು ಸಂಶೋಧನೆ, ಆವಿಷ್ಕಾರ ಮತ್ತು ಉದ್ಯಮಶೀಲತೆಯ ಮಹತ್ವವದ ಕುರಿತು ಪ್ರಮುಖವಾಗಿ ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನೂತನ ಮತ್ತು ನವೀಕರಿಸಬಹುದಾದ ಇಂಧನ, ಶಿಕ್ಷಣ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಭಾರತದ ನವೀಕರಿಸಬಹುದಾದ ಇಂಧನ ವಲಯವು ಕಳೆದ ದಶಕದಲ್ಲಿ ₹15 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಿದೆ ಎಂದು ತಿಳಿಸಿದರು. ಕೇವಲ ಕಳೆದ ಎರಡು ವರ್ಷಗಳಲ್ಲೇ ಸುಮಾರು ₹6 ಲಕ್ಷ ಕೋಟಿ ಈ ವಲಯಕ್ಕೆ ಹರಿದುಬಂದಿದೆ ಎಂದು ಅವರು ಹೇಳಿದರು.

ಬಿಆರ್‌ಇ ಶೃಂಗಸಭೆ ಮತ್ತು ಎಕ್ಸ್‌ಪೋ 2026, ಭಾರತದಲ್ಲಿ ಆಯೋಜಿಸಲಾದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಾರ್ಯಕ್ರಮವಾಗಿದೆ ಎಂದು ಶ್ರೀ ಜೋಶಿ ಅವರು ತಿಳಿಸಿದರು. ಇದರಲ್ಲಿ 135 ದೇಶಗಳ 75,000 ಕ್ಕೂ ಹೆಚ್ಚು ವೀಕ್ಷಕರು, 32ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಚಿವರು, ಎಂಟಕ್ಕೂ ಹೆಚ್ಚು ಪಾಲುದಾರ ದೇಶಗಳು ಮತ್ತು ಯುರೋಪಿಯನ್ ಯೂನಿಯನ್ ಭಾಗವಹಿಸಿದ್ದವು. ಈ ಶೃಂಗಸಭೆಯು 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪಾಲುದಾರರಾಗಿ, ಆರು ಮುಖ್ಯಮಂತ್ರಿಗಳನ್ನು, 10 ರಾಜ್ಯ ಇಂಧನ ಸಚಿವರನ್ನು, 400 ಕ್ಕೂ ಹೆಚ್ಚು ಪ್ರದರ್ಶಕರನ್ನು, 620 ಕ್ಕೂ ಹೆಚ್ಚು ಭಾಷಣಕಾರರನ್ನು ಮತ್ತು 113 ಗೋಷ್ಠಿಗಳನ್ನು ಒಂದೆಡೆ ತಂದಿತು. ಇದು 9 ನೇ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಸೆಂಬ್ಲಿ ಮತ್ತು ಹಸಿರು ಹೈಡ್ರೋಜನ್ ಕುರಿತ 4 ನೇ ಅಂತಾರಾಷ್ಟ್ರೀಯ ಸಮಾವೇಶವನ್ನೂ ಒಳಗೊಂಡಿತ್ತು.

ನಾಲ್ಕು ದಿನಗಳ ಹಿಂದೆ, ಜಾಗತಿಕ ಇಂಧನ ಪರಿವರ್ತನೆಯ ಮುಂದಿನ ಹಂತವನ್ನು ರೂಪಿಸುವ ಹಂಚಿಕೆಯ ಮಹತ್ವಾಕಾಂಕ್ಷೆಯೊಂದಿಗೆ ಭಾಗವಹಿಸುವವರೆಲ್ಲರೂ ಒಂದೆಡೆ ಸೇರಿದ್ದರು ಎಂದು ಕೇಂದ್ರ ಸಚಿವರು ತಿಳಿಸಿದರು. ಶೃಂಗಸಭೆಯು ಮುಕ್ತಾಯಗೊಳ್ಳುತ್ತಿದ್ದಂತೆ, ಅವರು ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಮತ್ತು ಭಾರತವು ತನ್ನ ನವೀಕರಿಸಬಹುದಾದ ಇಂಧನದ ಯಶೋಗಾಥೆಯನ್ನು ಜಗತ್ತಿಗೆ ತಿಳಿಯುವಂತೆ ಮಾಡಿದೆ ಎಂದು ಅವರು  ಹೇಳಿದರು. 'ವಾಟ್ಸ್ ನೆಕ್ಸ್ಟ್' ವೇದಿಕೆಯು, ಆವಿಷ್ಕಾರಕರನ್ನು ಒಂದೆಡೆ ತಂದರೆ, 'ನೆಕ್ಸ್ಟ್ ಟೆರಾವಾಟ್' ಸಚಿವರ ಪ್ಲೆನರಿ ಗೋಷ್ಠಿಯು ಸಂಯೋಜಿತ ಇಂಧನ ಯೋಜನೆ, ಸ್ಥಿತಿಸ್ಥಾಪಕ ಮೂಲಸೌಕರ್ಯ, ಶೇಖರಣೆ ಮತ್ತು ಹಣಕಾಸಿನ ಕುರಿತು ಚರ್ಚಿಸಿತು ಎಂದು ಅವರು ಹೇಳಿದರು.

ಹಿಂದಿನ ದಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಕೈಗೊಂಡ ಒಂದು ಪ್ರಮುಖ ನಿರ್ಧಾರದ ಬಗ್ಗೆ ಶ್ರೀ ಜೋಶಿ ಒತ್ತಿ ಹೇಳಿದರು. ಇದರ ಅಡಿಯಲ್ಲಿ 92 GWh ಗ್ರಿಡ್-ಪ್ರಮಾಣದ ಇಂಧನ ಶೇಖರಣಾ ಸಾಮರ್ಥ್ಯದ ಅಭಿವೃದ್ಧಿಗಾಗಿ ₹14,500 ಕೋಟಿಯ ವೈಯಾಬಿಲಿಟಿ ಗ್ಯಾಪ್ ಫಂಡಿಂಗ್ (VGF) ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದು 30 GWh ನ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಗಳು (BESS), 60 GWh ನ ಪಂಪ್ಡ್ ಸ್ಟೋರೇಜ್ ಯೋಜನೆಗಳು (PSPs) ಮತ್ತು ಹೊಸ ತಂತ್ರಜ್ಞಾನಗಳ ಮೂಲಕ 2 GWh ಅನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.

ಭಾರತವು ಉಪಯುಕ್ತತೆ-ಪ್ರಮಾಣದ ಸೌರ ವಿದ್ಯುತ್ ಉತ್ಪಾದನಾ ವೆಚ್ಚವನ್ನು ಪ್ರತಿ MWh ಗೆ 30–35 ಅಮೆರಿಕನ್ ಡಾಲರ್ (₹2,840–₹3,313) ಸಾಧಿಸಿದೆ ಎಂದು ಶ್ರೀ ಜೋಶಿ ಅವರು ತಿಳಿಸಿದರು, ಇದು ಪ್ರಪಂಚದಲ್ಲೇ ಅತ್ಯಂತ ಕಡಿಮೆ ದರವಾಗಿದೆ. ನವೀಕರಿಸಬಹುದಾದ ಇಂಧನವು, ಪಳೆಯುಳಿಕೆ ಇಂಧನ ಆಮದಿನಲ್ಲಿ 100 ಬಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚು ಉಳಿಸಲು ಭಾರತಕ್ಕೆ ಸಹಾಯ ಮಾಡಿದೆ, ಇದು ಸುಮಾರು ₹9.46 ಲಕ್ಷ ಕೋಟಿಗೆ ಸಮಾನವಾಗಿದೆ ಎಂದು ಅವರು ಹೇಳಿದರು.

2025 ರಲ್ಲಿ ಭಾರತವು 15 GW ಸಾಮರ್ಥ್ಯದ ಹೈಬ್ರಿಡ್ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಹರಾಜು ಮಾಡಿದೆ ಎಂಬುದನ್ನೂ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು, ಇದರಿಂದ ಒಟ್ಟು ಹರಾಜು ಮಾಡಿದ ಸಾಮರ್ಥ್ಯವು 64 GW ಗೆ ತಲುಪಿದೆ. ಈ ಎರಡೂ ಅಂಕಿ-ಅಂಶಗಳು ಪ್ರಪಂಚದಲ್ಲೇ ಅತ್ಯಧಿಕ ಪ್ರಮಾಣವನ್ನು ಪ್ರತಿನಿಧಿಸುತ್ತವೆ. 2023 ಮತ್ತು 2025 ರ ನಡುವೆ ಸಾಧಿಸಿದ ಸರಾಸರಿ ದರಗಳು ಪ್ರತಿ MWh ಗೆ ಸುಮಾರು 45 ಅಮೆರಿಕನ್ ಡಾಲರ್ (₹4,260) ಆಗಿದ್ದು, ಇದು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಸರಾಸರಿ ವಿದ್ಯುತ್ ವೆಚ್ಚಕ್ಕಿಂತ ಶೇಕಡಾ 20 ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಭಾರತದ ಬೆಳೆಯುತ್ತಿರುವ ಉತ್ಪಾದನಾ ಸಾಮರ್ಥ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಸೌರ ಶಕ್ತಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು 225 GW ದಾಟಿದೆ, ಇದು ಭಾರತವನ್ನು ಸೋಲಾರ್ ಮಾಡ್ಯೂಲ್‌ಗಳ ವಿಶ್ವದ ಎರಡನೇ ಅತಿದೊಡ್ಡ ತಯಾರಕನನ್ನಾಗಿ ಮಾಡಿದೆ ಎಂದು ಅವರು ತಿಳಿಸಿದರು. ಸ್ವಯಂ ಬಳಕೆಗಾಗಿ ವಿಕೇಂದ್ರೀಕೃತ ಸೌರ ಶಕ್ತಿ ಸಾಮರ್ಥ್ಯವು 2030ರ ವೇಳೆಗೆ 100 GW ಮೀರುತ್ತದೆ ಎಂದೂ ಅವರು ತಿಳಿಸಿದರು.

ಶೃಂಗಸಭೆಯ ಅವಧಿಯಲ್ಲಿ ಬಿಡುಗಡೆಯಾದ ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ವರದಿಯಾದ 'ಇಂಡಿಯಾ ಆರ್‌ಇ ಮಾರ್ಕೆಟ್ ರಿಪೋರ್ಟ್ 2026: ಅನಾಲಿಸಿಸ್ ಅಂಡ್ ಫೋರ್‌ಕಾಸ್ಟ್ ಟು 2030' ನಲ್ಲೂ ಈ ಅಂಕಿ-ಅಂಶಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಈ ಶೃಂಗಸಭೆಯ ಸಂದರ್ಭದಲ್ಲಿ, ಸಹಕಾರ ಮತ್ತು ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಲು ಶ್ರೀ ಜೋಶಿ ಅವರು ಫ್ರಾನ್ಸ್, ಡೆನ್ಮಾರ್ಕ್, ಕೆನಡಾ ಪೆನ್ಷನ್ ಪ್ಲಾನ್ ಇನ್ವೆಸ್ಟ್‌ಮೆಂಟ್ ಬೋರ್ಡ್ ಮತ್ತು ಗ್ಲೋಬಲ್ ಸೌತ್‌ನ ಹಲವಾರು ದೇಶಗಳೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದರು. ಸಿಇಒ ದುಂಡುಮೇಜಿನ ಸಭೆಯಲ್ಲಿ 400 ಬಿಲಿಯನ್ ಅಮೆರಿಕನ್ ಡಾಲರ್ (₹37.85 ಲಕ್ಷ ಕೋಟಿ) ಮೌಲ್ಯದ ಹೂಡಿಕೆಗಳ ಬದ್ಧತೆಯನ್ನು ವ್ಯಕ್ತಪಡಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಡಿಯಲ್ಲಿ 200 ಮಿಲಿಯನ್ ಅಮೆರಿಕನ್ ಡಾಲರ್ (₹1,893 ಕೋಟಿ) ವೆಚ್ಚದ ಆಫ್ರಿಕಾ ಸೋಲಾರ್ ಫೆಸಿಲಿಟಿಯನ್ನು ಪ್ರಸ್ತಾಪಿಸಲಾಗಿದೆ ಎಂದೂ ಅವರು ಉಲ್ಲೇಖಿಸಿದರು.

ಈ ಶೃಂಗಸಭೆಯು ವಿವಿಧ ದೇಶಗಳ 800 ಅಂತಾರಾಷ್ಟ್ರೀಯ ಪ್ರತಿನಿಧಿಗಳ ಭಾಗವಹಿಸುವಿಕೆಗೆ ಮತ್ತು ವರ್ಷಕ್ಕೆ 3 ಲಕ್ಷ ಟನ್ ಹಸಿರು ಮೆಥನಾಲ್ ಪೂರೈಕೆಯ ಸಾಮರ್ಥ್ಯವನ್ನು ಹೊಂದಿರುವ ಎಸ್‌ಇಸಿಐ ತಿಳುವಳಿಕಾ ಒಡಂಬಡಿಕೆ ಸೇರಿದಂತೆ 10 ತಿಳುವಳಿಕಾ ಒಡಂಬಡಿಕೆಗಳು ಮತ್ತು ಚೌಕಟ್ಟಿನ ಒಪ್ಪಂದಗಳ ಸಹಿಗೆ ಸಾಕ್ಷಿಯಾಯಿತು.

ನವೀಕರಿಸಬಹುದಾದ ಇಂಧನ ವಿಸ್ತರಣೆಯ ಜೊತೆಗೆ ಇಂಧನ ಮೂಲಸೌಕರ್ಯಗಳನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಜೋಶಿ ಅವರು, ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ಸಾಮರ್ಥ್ಯಕ್ಕೆ ಬಲವಾದ ಪ್ರಸರಣ ಜಾಲಗಳು, ಹೆಚ್ಚಿನ ಶೇಖರಣಾ ಸಾಮರ್ಥ್ಯ ಮತ್ತು ಸ್ಮಾರ್ಟ್ ಗ್ರಿಡ್‌ಗಳ ಅಗತ್ಯವಿದೆ ಎಂದು ಅವರು ತಿಳಿಸಿದರು. ಮುನ್ನೋಟ, ಮುನ್ನೆಚ್ಚರಿಕೆಯ ನಿರ್ವಹಣೆ ಮತ್ತು ಇಂಧನ ನಿರ್ವಹಣೆಯಲ್ಲಿ ಡಿಜಿಟಲೀಕರಣ ಹಾಗೂ ಕೃತಕ ಬುದ್ಧಿಮತ್ತೆಯು ಅತ್ಯಂತ ಪ್ರಮುಖವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

2031-32 ರ ವೇಳೆಗೆ ಎಐ ಡೇಟಾ ಸೆಂಟರ್‌ಗಳಿಂದಾಗಿ, 26.3 GW ಹೆಚ್ಚುವರಿ ವಿದ್ಯುತ್ ಬೇಡಿಕೆಯನ್ನು ಸೇರ್ಪಡೆಮಾಡುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು. ಈ ಹೆಚ್ಚುವರಿ ಹೊರೆಯನ್ನು ಪೂರೈಸಲು ಯೋಜನೆ ರೂಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು, ಈ ಬೇಡಿಕೆಯನ್ನು ಪೂರೈಸುವಲ್ಲಿ ನವೀಕರಿಸಬಹುದಾದ ಇಂಧನವು ಪ್ರಾಥಮಿಕ ಪಾತ್ರ ವಹಿಸುತ್ತದೆ. ಅವರು, “ಎಐ ಭವಿಷ್ಯಕ್ಕೆ ಶಕ್ತಿ ನೀಡುತ್ತದೆ. ಶುದ್ಧ ಇಂಧನವು ಎಐಗೆ ಶಕ್ತಿ ನೀಡುತ್ತದೆ,” ಎಂದು ಹೇಳಿದರು.

ತಮ್ಮ ಮುಕ್ತಾಯ ಭಾಷಣದಲ್ಲಿ ಶ್ರೀ ಜೋಶಿ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಬಿಆರ್‌ಇಎಸ್‌ಇ 2026” ರಲ್ಲಿ ಭಾರತಕ್ಕೆ ಒಂದು ಗುರಿಯನ್ನು ನೀಡಿದ್ದಾರೆ ಎಂದು ಪುನರುಚ್ಚರಿಸಿದರು. ಈ ಗುರಿಯನ್ನು ಸಾಧಿಸುವತ್ತ ಶ್ರಮಿಸಲು ಉದ್ಯಮಕ್ಕೆ ಸಾಮರ್ಥ್ಯವಿದೆ, ಹೂಡಿಕೆದಾರರಿಗೆ ವಿಶ್ವಾಸವಿದೆ ಮತ್ತು ಅಂತಾರಾಷ್ಟ್ರೀಯ ಪಾಲುದಾರರು ಒಟ್ಟಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನೂತನ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ಸಹಾಯಕ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್; ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಡಾ. ಅಜಯ್ ಕುಮಾರ್ ಸೂದ್; ಮತ್ತು ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಾಲುದಾರ ದೇಶಗಳ ಪ್ರತಿನಿಧಿಗಳು, ನೀತಿ ನಿರೂಪಕರು, ಹೂಡಿಕೆದಾರರು, ಉದ್ಯಮ ನಾಯಕರು, ಜ್ಞಾನ ಪಾಲುದಾರರು, ಪ್ರದರ್ಶಕರು ಮತ್ತು ಇತರ ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

 

*****

 


(ಪ್ರಕಟಣೆ ಐ.ಡಿ.: 2333138) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil