ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌‌ಪೋ 2026ಕ್ಕೆ ಚಾಲನೆ ನೀಡಿದರು


ಜಾಗತಿಕ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಿರುವುದರ ಬಗ್ಗೆ 140 ಕೋಟಿ ಭಾರತೀಯರು ಹೆಮ್ಮೆಪಡುತ್ತಾರೆ. ಎಲ್ಲ ಸವಾಲುಗಳ ನಡುವೆಯೂ ಭಾರತದ ಬೆಳವಣಿಗೆ ಸದೃಢವಾಗಿದೆ: ಪ್ರಧಾನಮಂತ್ರಿ

ಇಂಧನ ಭದ್ರತೆಯ ಭವಿಷ್ಯ ಇರುವುದು ಶುದ್ಧ ಇಂಧನದಲ್ಲಿ: ಪ್ರಧಾನಮಂತ್ರಿ

ಸೌರ ಕ್ರಾಂತಿಯ ಈ ಹೊಸ ಯುಗ ಕೇವಲ ಸೌರಶಕ್ತಿಯ ಅಳವಡಿಕೆಗೆ ಮಾತ್ರ ಸೀಮಿತವಾಗಿಲ್ಲ; ನಾವೀನ್ಯತೆಯೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತಿದೆ: ಪ್ರಧಾನಮಂತ್ರಿ

ಮನೆಯ ಗರಿಷ್ಠ ಇಂಧನ ಅಗತ್ಯಗಳನ್ನು ಸೌರಶಕ್ತಿಯ ಮೂಲಕವೇ ಪೂರೈಸುವ ಮಾದರಿಗಳನ್ನು ಅಭಿವೃದ್ಧಿಪಡಿಸುವಂತೆ ನಮ್ಮ ನವೋದ್ಯಮಗಳು, ಐಐಟಿಗಳು, ನಾವೀನ್ಯಕಾರರು ಮತ್ತು ಉದ್ಯಮಿಗಳಿಗೆ ನಾನು ಕರೆ ನೀಡುತ್ತೇನೆ: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 02 NOV 2026 7:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌‌ಪೋ 2026ಕ್ಕೆ ಚಾಲನೆ ನೀಡಿದರು. ಭಾರತ ಮತ್ತು ವಿದೇಶಗಳ ಉದ್ಯಮ ಕ್ಷೇತ್ರದ ಪ್ರಮುಖರು, ಹೂಡಿಕೆದಾರರು, ನವೋದ್ಯಮಗಳ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಜಾಗತಿಕ ಇಂಧನ ಬಿಕ್ಕಟ್ಟುಗಳು ಇಂದಿನ ದೈನಂದಿನ ಜೀವನ ಹಾಗೂ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ನವೀಕರಿಸಬಹುದಾದ ಇಂಧನದ ಮಹತ್ವವನ್ನು ಎತ್ತಿತೋರಿಸಿರುವ ವಿಶೇಷ ಸನ್ನಿವೇಶದಲ್ಲಿ ಈ ವರ್ಷದ ಶೃಂಗಸಭೆ ನಡೆಯುತ್ತಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್‌ಎ) ಒಂಬತ್ತನೇ ಅಧಿವೇಶನದೊಂದಿಗೆ ಈ ಶೃಂಗಸಭೆ ನಡೆಯುತ್ತಿದ್ದು, ಹಸಿರು ಜಲಜನಕ ಕುರಿತ ನಾಲ್ಕನೇ ಸಮ್ಮೇಳನದ ಪ್ರತಿನಿಧಿಗಳೂ ಇದರಲ್ಲಿ ಭಾಗವಹಿಸುತ್ತಿರುವುದರಿಂದ ಈ ವರ್ಷದ ಕಾರ್ಯಕ್ರಮದ ವ್ಯಾಪ್ತಿ ಅತ್ಯಂತ ವಿಸ್ತಾರವಾಗಿದೆ ಎಂದು ಅವರು ಹೇಳಿದರು.

ಕೊರೊನಾ ಸಾಂಕ್ರಾಮಿಕದಿಂದ ಹಿಡಿದು ಪ್ರಸ್ತುತ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನವರೆಗೆ ಜಾಗತಿಕ ಆರ್ಥಿಕತೆಯು ಹಿಂದೆಂದೂ ಕಾಣದ ಅಡೆತಡೆಗಳನ್ನು ಎದುರಿಸಿದೆ ಎಂದ ಪ್ರಧಾನಮಂತ್ರಿಯವರು, ಇಂತಹ ಜಾಗತಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಭಾರತ ಸಮರ್ಥವಾಗಿ ನಿಭಾಯಿಸಿರುವುದರ ಜೊತೆಗೆ ತನ್ನ ಆರ್ಥಿಕ ಬೆಳವಣಿಗೆಯ ವೇಗವನ್ನೂ ಕಾಯ್ದುಕೊಂಡಿರುವ ಬಗ್ಗೆ 140 ಕೋಟಿ ಭಾರತೀಯರು ಹೆಮ್ಮೆಪಡುತ್ತಾರೆ ಎಂದು ಹೇಳಿದರು. ಶುದ್ಧ ಇಂಧನ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಮಾಡಿರುವ ದೇಶೀಯ ಹೂಡಿಕೆ ಹಾಗೂ ವ್ಯವಸ್ಥಿತ ಸುಧಾರಣೆಗಳು ಬಾಹ್ಯ ಆಘಾತಗಳ ತೀವ್ರ ಪರಿಣಾಮಗಳಿಂದ ದೇಶವನ್ನು ರಕ್ಷಿಸಿವೆ ಎಂದು ಅವರು ಒತ್ತಿಹೇಳಿದರು. “ಕಳೆದ ಒಂದು ದಶಕದಲ್ಲಿ ಭಾರತವು ಶುದ್ಧ ಇಂಧನದಲ್ಲಿ ಹೂಡಿಕೆ ಮಾಡದಿದ್ದರೆ ಮತ್ತು ಇದಕ್ಕಾಗಿ ಹೊಸ ವ್ಯವಸ್ಥೆಗಳನ್ನು ರೂಪಿಸದಿದ್ದರೆ, ನಮ್ಮ ಬಿಕ್ಕಟ್ಟು ವಿಶ್ವದ ಇತರ ದೇಶಗಳಿಗಿಂತಲೂ ಹೆಚ್ಚು ತೀವ್ರವಾಗಿರುತ್ತಿತ್ತು” ಎಂದು ಪ್ರಧಾನಿ ಶ್ರೀ ಮೋದಿ ಹೇಳಿದರು.

ಇತ್ತೀಚಿನ ಜಾಗತಿಕ ಬಿಕ್ಕಟ್ಟುಗಳು ಇಂಧನ ಭದ್ರತೆ ಮತ್ತು ಆರ್ಥಿಕ ಭದ್ರತೆಯ ನಡುವಿನ ನೇರ ಸಂಬಂಧವನ್ನು ಸಾಬೀತುಪಡಿಸಿವೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಪಳೆಯುಳಿಕೆ ಇಂಧನಗಳ ಮೇಲಿನ ಅತಿಯಾದ ಅವಲಂಬನೆಯು ಜಾಗತಿಕ ಆರ್ಥಿಕತೆಯನ್ನು ಪದೇಪದೇ ಬಿಕ್ಕಟ್ಟಿಗೆ ಸಿಲುಕಿಸುತ್ತದೆ ಎಂದು ಎಚ್ಚರಿಸಿದರು. ಏಕೆಂದರೆ ಪಳೆಯುಳಿಕೆ ಇಂಧನಗಳ ನಿಕ್ಷೇಪಗಳು ಸೀಮಿತವಾಗಿದ್ದು, ಕೆಲವೇ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, ಶುದ್ಧ ಇಂಧನದ ಸಾಮರ್ಥ್ಯ ಅಪರಿಮಿತವಾಗಿದ್ದು, ಎಲ್ಲರಿಗೂ ಲಭ್ಯವಿದೆ ಎಂದು ಅವರು ಹೇಳಿದರು. “ಇಂಧನ ಭದ್ರತೆಯ ಭವಿಷ್ಯ ಇರುವುದು ಶುದ್ಧ ಇಂಧನದಲ್ಲಿಯೇ ಎಂಬುದು ನಮಗೆಲ್ಲರಿಗೂ ತಿಳಿದಿದೆ” ಎಂದು ಶ್ರೀ ಮೋದಿ ಹೇಳಿದರು.

ಕಳೆದ 12 ವರ್ಷಗಳ ಭಾರತದ ಶುದ್ಧ ಇಂಧನ ಪಯಣವು ಭರವಸೆ, ಬದ್ಧತೆ ಮತ್ತು ಸಾಧನೆಗಳಿಂದ ಕೂಡಿದೆ ಎಂದು ವಿವರಿಸಿದ ಪ್ರಧಾನಮಂತ್ರಿಯವರು, 2030ರ ವೇಳೆಗೆ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ 500 ಗಿಗಾವ್ಯಾಟ್ ಸಾಮರ್ಥ್ಯವನ್ನು ಸಾಧಿಸುವುದಾಗಿ ಸಿಒಪಿ-26ರಲ್ಲಿ ಭಾರತ ನೀಡಿದ್ದ ಬದ್ಧತೆಯನ್ನು ಉಲ್ಲೇಖಿಸಿದರು. 2025ರ ವೇಳೆಗೆ ತನ್ನ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇ.50ರಷ್ಟನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಪಡೆಯುವ ಪ್ಯಾರಿಸ್ ಒಪ್ಪಂದದ ಬದ್ಧತೆಯನ್ನು ನಿಗದಿತ ಅವಧಿಗಿಂತ ಐದು ವರ್ಷ ಮುಂಚಿತವಾಗಿಯೇ ಭಾರತ ಈಡೇರಿಸಿದೆ ಎಂದು ಅವರು ಹೇಳಿದರು. ಪ್ರಸ್ತುತ ಭಾರತವು ಸೌರ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ವಿಶ್ವದ ಅಗ್ರ ಮೂರು ರಾಷ್ಟ್ರಗಳ ಪೈಕಿ ಒಂದಾಗಿದ್ದು, ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಪಳೆಯುಳಿಕೆಯೇತರ ಇಂಧನ ಮೂಲಗಳ ಪಾಲು ಶೇ.50ಕ್ಕಿಂತ ಹೆಚ್ಚಾಗಿದೆ. ಅಲ್ಲದೆ, 500 ಗಿಗಾವ್ಯಾಟ್ ಗುರಿಯಲ್ಲಿ ಈಗಾಗಲೇ ಸುಮಾರು 300 ಗಿಗಾವ್ಯಾಟ್ ಸಾಮರ್ಥ್ಯವನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು. ಮುಂದಿನ 10ರಿಂದ 11 ವರ್ಷಗಳಲ್ಲಿ ಮತ್ತಷ್ಟು 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಅವರು ಪ್ರಕಟಿಸಿದರು. “ಈ ಗುರಿ ಸ್ವಲ್ಪ ಕಷ್ಟಕರವಾಗಿದೆ. ಆದರೆ, ನನ್ನ ದೇಶದ ಸಾಮರ್ಥ್ಯದ ಮೇಲೆ ನನಗೆ ನಂಬಿಕೆಯಿದೆ. ಆದ್ದರಿಂದಲೇ ನಾನು ಹೇಳುತ್ತಿದ್ದೇನೆ, ನಾವು ಇದನ್ನು ಸಾಧಿಸಿಯೇ ತೀರುತ್ತೇವೆ!” ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಭಾರತವು ತನ್ನ ನಾವೀನ್ಯತೆಗಳು ಮತ್ತು ಅನುಭವಗಳ ಪ್ರಯೋಜನಗಳನ್ನು ಇಡೀ ಮಾನವಕುಲದೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಹಸಿರು ಇಂಧನ ಕ್ಷೇತ್ರದಲ್ಲಿಯೂ ದೇಶ ಇದೇ ಸಹಕಾರದ ಮನೋಭಾವದೊಂದಿಗೆ ಮುನ್ನಡೆಯುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅವರು ಕೆಲವು ನಿರ್ದಿಷ್ಟ ಉದಾಹರಣೆಗಳನ್ನು ನೀಡಿದರು. “ಈ ಕ್ಷೇತ್ರದಲ್ಲಿ ಭಾರತದ ಸಾಧನೆಗಳು ವಿಶ್ವದ ಅನೇಕ ದೇಶಗಳಿಗೆ ಉಪಯುಕ್ತವಾಗಲಿವೆ” ಎಂದು ಶ್ರೀ ಮೋದಿ ಹೇಳಿದರು.

ಫೆಬ್ರವರಿ 2024ರಲ್ಲಿ ಒಂದು ಕೋಟಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಉದ್ದೇಶದಿಂದ ಆರಂಭಿಸಲಾದ ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ತ್ವರಿತ ಪ್ರಗತಿಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ಕಳೆದ 24ರಿಂದ 25 ತಿಂಗಳುಗಳಲ್ಲಿ 65 ಲಕ್ಷಕ್ಕೂ ಅಧಿಕ ಕುಟುಂಬಗಳು ಈ ಅಭಿಯಾನದ ಭಾಗವಾಗಿವೆ ಎಂದು ತಿಳಿಸಿದರು. ಪ್ರತಿ ಆರು ದಿನಗಳಿಗೊಮ್ಮೆ ಒಂದು ಲಕ್ಷ ಹೊಸ ಮನೆಗಳು ಈ ಯೋಜನೆಗೆ ಸೇರ್ಪಡೆಯಾಗುತ್ತಿವೆ. ಒಂದು ಅಧ್ಯಯನದ ಪ್ರಕಾರ, ಈ ಯೋಜನೆಯಿಂದ ವಿದ್ಯುತ್ ಬಿಲ್‌ಗಳಲ್ಲಿ ಸರಿಸುಮಾರು ಶೇ.76ರಷ್ಟು ಉಳಿತಾಯವಾಗುತ್ತಿದೆ. ಅಲ್ಲದೆ, ಲಕ್ಷಾಂತರ ಕುಟುಂಬಗಳ ವಿದ್ಯುತ್ ಬಿಲ್‌ಗಳು ಶೂನ್ಯವಾಗಿವೆ. ಈ ಕುಟುಂಬಗಳು ತಮಗೆ ಅಗತ್ಯವಿರುವುದಕ್ಕಿಂತ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ವಿದ್ಯುತ್ ಗ್ರಿಡ್‌ಗೆ ಮಾರಾಟ ಮಾಡುವ ಮೂಲಕ ಆದಾಯವನ್ನೂ ಗಳಿಸುತ್ತಿವೆ ಎಂದು ಅವರು ಹೇಳಿದರು. “ಭಾರತದ ಈ ಯೋಜನೆಯು ಅನೇಕ ದೇಶಗಳ ಇಂಧನ ಭದ್ರತೆಗೆ ಹೆಚ್ಚಿನ ಬಲವನ್ನು ನೀಡುತ್ತದೆ” ಎಂದು ಪ್ರಧಾನಿ ಹೇಳಿದರು.

ಕಳೆದ 12 ವರ್ಷಗಳಲ್ಲಿ ಸೌರಶಕ್ತಿಯನ್ನು ದೈನಂದಿನ ಜೀವನ, ಕೈಗಾರಿಕೆ ಮತ್ತು ಕೃಷಿಯೊಂದಿಗೆ ಬೆಸೆಯಲು ಕೈಗೊಂಡಿರುವ ಪ್ರಯತ್ನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, 44,000ಕ್ಕೂ ಅಧಿಕ ಸರ್ಕಾರಿ ಕಟ್ಟಡಗಳನ್ನು ಸೌರಶಕ್ತಿಯೊಂದಿಗೆ ಸಂಪರ್ಕಿಸುವುದರಿಂದ ವಾರ್ಷಿಕವಾಗಿ ಸುಮಾರು ₹700 ಕೋಟಿ ಉಳಿತಾಯವಾಗುತ್ತಿದೆ ಎಂದು ತಿಳಿಸಿದರು. ಕುಸುಮ್ ಯೋಜನೆಯಡಿ 30 ಲಕ್ಷಕ್ಕೂ ಅಧಿಕ ರೈತರಿಗೆ ಸೌರಶಕ್ತಿ ಆಧಾರಿತ ನೀರಾವರಿ ಸೌಲಭ್ಯ ಒದಗಿಸಲಾಗಿದ್ದು, ಪ್ರತಿ ಸೌರ ಪಂಪ್ ಫಲಾನುಭವಿ ರೈತರಿಗೆ ವಾರ್ಷಿಕವಾಗಿ ಸುಮಾರು ₹1 ಲಕ್ಷ ಉಳಿತಾಯವಾಗುತ್ತಿದೆ ಎಂದರು. ಜಲಾಶಯಗಳು, ಕೆರೆಗಳು ಮತ್ತು ಸರೋವರಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಜಲಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರ ಜೊತೆಗೆ ಭೂಸ್ವಾಧೀನ ವೆಚ್ಚವನ್ನು ಉಳಿಸುವ ಪಿಎಂ ಸೂರ್ಯ ಸರೋವರ ಯೋಜನೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. “ಭಾರತವು ತನ್ನ ನಾಗರಿಕರ ಜೀವನದ ಅವಿಭಾಜ್ಯ ಅಂಗವಾಗಿ ಸೌರಶಕ್ತಿಯನ್ನು ರೂಪಿಸುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.

ಭಾರತದ ಶುದ್ಧ ಇಂಧನ ವ್ಯವಸ್ಥೆಯು ಜಲವಿದ್ಯುತ್, ಸೌರಶಕ್ತಿ, ಪವನಶಕ್ತಿ ಮತ್ತು ಅಣುಶಕ್ತಿಗೆ ಮಾತ್ರ ಸೀಮಿತವಾಗಿಲ್ಲ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಅಡಿಯಲ್ಲಿ ಈ ದಶಕದ ಅಂತ್ಯದ ವೇಳೆಗೆ 50 ಲಕ್ಷ ಟನ್ ಹಸಿರು ಜಲಜನಕ ಉತ್ಪಾದಿಸುವ ಗುರಿಯೊಂದಿಗೆ ಭಾರತವು ಮಿಷನ್ ಮೋಡ್‌ನಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು. ಇದರ ಜೊತೆಗೆ ಸಾರಿಗೆ ವಲಯದಲ್ಲಿಯೂ ಹಸಿರು ಜಲಜನಕ ಬಳಕೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು. “ಕೆಲವೇ ತಿಂಗಳುಗಳ ಹಿಂದೆ ಭಾರತ ತನ್ನ ಮೊದಲ ಹಸಿರು ಜಲಜನಕ ರೈಲನ್ನು ಆರಂಭಿಸಿದೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ತಿಳಿಸಿದರು.

ಸೌರ ಮತ್ತು ಪವನಶಕ್ತಿ ಉತ್ಪಾದನೆ ಹೆಚ್ಚಿರುವ ಪ್ರದೇಶಗಳಿಂದ ಕಡಿಮೆ ಉತ್ಪಾದನೆಯಿರುವ ಪ್ರದೇಶಗಳಿಗೆ ಸಮರ್ಥವಾಗಿ ವಿದ್ಯುತ್ ವಿತರಿಸುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದರು. ಇದರಿಂದ ದೇಶದಾದ್ಯಂತ ಮನೆಗಳು, ಕೃಷಿ ಕ್ಷೇತ್ರ ಮತ್ತು ಕೈಗಾರಿಕೆಗಳಿಗೆ ಸಮಾನವಾಗಿ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು. ಇದಕ್ಕಾಗಿ ಮೀಸಲಾದ ವಿದ್ಯುತ್ ಪ್ರಸರಣ ಮಾರ್ಗಗಳು ಮತ್ತು ಉಪಕೇಂದ್ರಗಳನ್ನು ಒಳಗೊಂಡ ಹಸಿರು ಇಂಧನ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು. ಐದು ಪ್ರಾದೇಶಿಕ ವಿದ್ಯುತ್ ಗ್ರಿಡ್‌ಗಳನ್ನು ಒಂದೇ ಆವರ್ತನದಡಿ ಸಂಯೋಜಿಸಿದ 'ಒಂದು ರಾಷ್ಟ್ರ, ಒಂದು ವಿದ್ಯುತ್ ಗ್ರಿಡ್' ಜಾಲವು ಇದಕ್ಕೆ ಬೆಂಬಲ ನೀಡುತ್ತಿದೆ ಎಂದರು. ಈ ಪ್ರಸರಣ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಭಾರತ ಈಗ ಮುಂದಿನ ಹಂತದತ್ತ ಸಾಗುತ್ತಿದೆ ಎಂದು ಅವರು ತಿಳಿಸಿದರು. “ಇತ್ತೀಚೆಗೆ ಇದಕ್ಕಾಗಿ ಸುಮಾರು ‌₹2 ಲಕ್ಷ ಕೋಟಿ ಹೂಡಿಕೆಯ ಗುರಿಯನ್ನು ಭಾರತ ನಿಗದಿಪಡಿಸಿದೆ” ಎಂದು ಶ್ರೀ ಮೋದಿ ಹೇಳಿದರು.

ಹಸಿರು ಇಂಧನ ಕ್ಷೇತ್ರದಲ್ಲಿ ಭಾರತದ ಯಶಸ್ಸಿಗೆ ದೇಶೀಯ ಉತ್ಪಾದನೆಯಲ್ಲಿನ ಭಾರೀ ಏರಿಕೆಯೇ ಪ್ರಮುಖ ಕಾರಣ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಈ ಹಿಂದೆ ಸೌರಶಕ್ತಿಯ ಸಣ್ಣಪುಟ್ಟ ಬಿಡಿಭಾಗಗಳಿಗೂ ಸಂಪೂರ್ಣವಾಗಿ ಆಮದಿನ ಮೇಲೆ ಅವಲಂಬಿತವಾಗಿದ್ದ ಭಾರತ, ಇಂದು ಉತ್ಪಾದನಾ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದರು. ಒಂದು ದಶಕದ ಹಿಂದೆ ಸುಮಾರು 2 ಗಿಗಾವ್ಯಾಟ್‌ನಷ್ಟಿದ್ದ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯ ಇಂದು 200 ಗಿಗಾವ್ಯಾಟ್‌ಗೂ ಅಧಿಕವಾಗಿದೆ. ಇದರ ಜೊತೆಗೆ ಸುಮಾರು 40 ಗಿಗಾವ್ಯಾಟ್ ಸೌರ ಕೋಶ ಉತ್ಪಾದನಾ ಸಾಮರ್ಥ್ಯವೂ ಬೆಳೆದಿದ್ದು, ಇತರ ಬಿಡಿಭಾಗಗಳ ಉತ್ಪಾದನೆಯೂ ವಿಸ್ತರಣೆಯಾಗುತ್ತಿದೆ ಎಂದು ಅವರು ತಿಳಿಸಿದರು. “ಅಂದರೆ, ಹಸಿರು ಇಂಧನಕ್ಕೆ ಸಂಬಂಧಿಸಿದ ಭಾರತದ ಮಹತ್ವಾಕಾಂಕ್ಷೆಗಳು ನಮ್ಮ ಆತ್ಮನಿರ್ಭರ ಭಾರತ ಅಭಿಯಾನ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನದ ಯಶಸ್ಸಿಗೂ ಸಾಕ್ಷಿಯಾಗಿವೆ” ಎಂದು ಪ್ರಧಾನಿ ಹೇಳಿದರು.

ಈವರೆಗೆ ಸಾಧಿಸಿರುವ ಯಶಸ್ಸಿಗೆ ತೃಪ್ತಿಪಟ್ಟುಕೊಂಡು ನಿಲ್ಲದೆ, ದೇಶವು ತನ್ನ ವೇಗದ ಪ್ರಗತಿಯನ್ನು ಮುಂದುವರಿಸಬೇಕು ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಪ್ರತಿಯೊಂದು ಸರ್ಕಾರಿ ಕಟ್ಟಡ, ಶಾಲೆ, ಕಾಲೇಜು, ಆಸ್ಪತ್ರೆ ಹಾಗೂ ಬೀದಿ ದೀಪಗಳ ಜಾಲವನ್ನು ಶೀಘ್ರವಾಗಿ ಸೌರಶಕ್ತಿಯೊಂದಿಗೆ ಸಂಪರ್ಕಿಸುವಂತೆ ಕರೆ ನೀಡಿದರು. ಈ ನಿಟ್ಟಿನಲ್ಲಿ ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಬೇಕು. ಉತ್ತಮ ಸಾಧನೆ ಮಾಡಿದವರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಯಶಸ್ವಿಯಾದ ಮಾದರಿಗಳನ್ನು ಇತರರು ಅನುಸರಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಸಲಹೆ ನೀಡಿದರು. “ನಾವು ಈ ಕೆಲಸವನ್ನು ಅತ್ಯಂತ ವೇಗವಾಗಿ ಮಾಡಬೇಕಾಗಿದೆ” ಎಂದು ಶ್ರೀ ಮೋದಿ ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆಯನ್ನು ವಿಸ್ತರಿಸುವ ಕುರಿತು ವಿಶೇಷ ಸಲಹೆ ನೀಡಿದ ಪ್ರಧಾನಮಂತ್ರಿಯವರು, ಲಕ್ಷಾಂತರ ಸೌರ ಪಂಪ್‌ಗಳನ್ನು ವಿತರಿಸುವುದಕ್ಕೆ ಮಾತ್ರ ಸೀಮಿತವಾಗದೆ, ಕೃಷಿ ಮಾಡದೆ ಖಾಲಿ ಉಳಿದಿರುವ ಭೂಮಿಯನ್ನೂ ಸೌರಶಕ್ತಿ ಉತ್ಪಾದನೆಗೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಾಧ್ಯವಾದಷ್ಟು ಹೆಚ್ಚಿನ ಗ್ರಾಮಗಳ ರೈತರು ತಮ್ಮ ಖಾಲಿ ಜಮೀನುಗಳಲ್ಲಿ ಹಾಗೂ ಹೊಲಗಳ ಬದುಗಳ ಉದ್ದಕ್ಕೂ ಸೌರ ಫಲಕಗಳನ್ನು ಅಳವಡಿಸಲು ಪ್ರೋತ್ಸಾಹಿಸಬೇಕು ಎಂದು ಅವರು ಒತ್ತಿಹೇಳಿದರು. “ನಾವು ಸೌರ ಪಂಪ್‌ಗಳನ್ನಷ್ಟೇ ಅವಲಂಬಿಸುವುದನ್ನು ಮೀರಿ ಮುನ್ನಡೆಯಬೇಕು” ಎಂದು ಶ್ರೀ ಮೋದಿ ಹೇಳಿದರು.

ಸೌರ ಕ್ರಾಂತಿಯ ಹೊಸ ಯುಗದಲ್ಲಿ ಸೌರಶಕ್ತಿಯ ಬಳಕೆಯಷ್ಟೇ ನಾವೀನ್ಯತೆಯೂ ಮಹತ್ವದ್ದಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಮನೆಗಳ ಗರಿಷ್ಠ ಇಂಧನ ಅಗತ್ಯಗಳನ್ನು ಪೂರೈಸಬಲ್ಲ, ಹಗಲು-ರಾತ್ರಿ ಹಾಗೂ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲೂ ಕಾರ್ಯನಿರ್ವಹಿಸುವ ಸೌರಶಕ್ತಿ ಮಾದರಿಗಳನ್ನು ಅಭಿವೃದ್ಧಿಪಡಿಸುವಂತೆ ನವೋದ್ಯಮಗಳು, ಐಐಟಿಗಳು, ನಾವೀನ್ಯಕಾರರು ಮತ್ತು ಉದ್ಯಮಿಗಳಿಗೆ ಕರೆ ನೀಡಿದರು. ಆಮದು ಮಾಡಿಕೊಳ್ಳುವ ಅನಿಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮೇಲ್ಛಾವಣಿ ಸೌರಶಕ್ತಿಯ ಮೂಲಕ ಅಡುಗೆ ಮಾಡುವ ವ್ಯವಸ್ಥೆ ಹಾಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಮನೆಯಲ್ಲಿಯೇ ಸೌರಶಕ್ತಿಯ ಮೂಲಕ ಚಾರ್ಜ್ ಮಾಡುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಸಲಹೆ ನೀಡಿದರು. “ಇದರಿಂದ ದೇಶದ ಮಧ್ಯಮ ವರ್ಗದ ಕುಟುಂಬಗಳು ಪ್ರತಿವರ್ಷ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು” ಎಂದು ಶ್ರೀ ಮೋದಿ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಸಂಬಂಧಿತ ಉಪವಲಯಗಳಲ್ಲಿ ಶುದ್ಧ ಇಂಧನದ ವಿಶೇಷ ಬಳಕೆಯ ಅಗತ್ಯವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಹೈನುಗಾರಿಕೆ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸಲು ವಿಶೇಷ ಸೌರ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಂತೆ ಕರೆ ನೀಡಿದರು. “ಪಶುಗಳಿಗೆ ಮೇವು ಒದಗಿಸುವುದು, ಬೆಳೆ ಕೊಯ್ಲು ಮತ್ತು ಕೊಯ್ಲಿನ ನಂತರದ ಪ್ರಕ್ರಿಯೆಗಳು ಸೇರಿದಂತೆ ಇಂತಹ ಪ್ರತಿಯೊಂದು ಕೆಲಸಕ್ಕೂ ಸೌರಶಕ್ತಿ ಆಧಾರಿತ ಉಪಕರಣಗಳನ್ನು ಅಭಿವೃದ್ಧಿಪಡಿಸಬೇಕು” ಎಂದು ಪ್ರಧಾನಿ ಹೇಳಿದರು.

ಈ ಗುರಿಗಳನ್ನು ಸಾಧಿಸಲು ಮುಂದಿನ ತಲೆಮಾರಿನ ನಾವೀನ್ಯತೆ, ಸ್ವದೇಶಿ ಇಂಧನ ಸಂಗ್ರಹಣಾ ಉಪಕರಣಗಳು ಹಾಗೂ ಹೊಸ ಬ್ಯಾಟರಿ ಸಂಗ್ರಹಣಾ ಸಾಮರ್ಥ್ಯದ ಅಗತ್ಯವಿದೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಇದು ಭಾರತದ ಯುವಜನರಿಗೆ ದೊರೆತಿರುವ ಬೃಹತ್ ಅವಕಾಶವಾಗಿದೆ ಎಂದರು. ಸಂಶೋಧಕರು ಮತ್ತು ಹೂಡಿಕೆದಾರರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. “ನೀವು ಭಾರತದಲ್ಲಿ ಅಭಿವೃದ್ಧಿಪಡಿಸುವ ಪರಿಹಾರಗಳು ವಿಶ್ವದ ಅನೇಕ ದೇಶಗಳಿಗೆ ಉಪಯುಕ್ತವಾಗಲಿವೆ” ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವದ ಅತ್ಯಂತ ಹೆಚ್ಚಿನ ಯುವಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾದ ಭಾರತದಲ್ಲಿ ಕೈಗೊಳ್ಳಲಾಗುತ್ತಿರುವ ಪ್ರತಿಯೊಂದು ಶುದ್ಧ ಇಂಧನ ಉಪಕ್ರಮವೂ ಸೌರ ಫಲಕಗಳು ಮತ್ತು ಉಪಕರಣಗಳ ಉತ್ಪಾದನೆ, ಅಳವಡಿಕೆ, ಸೇವೆ ಹಾಗೂ ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಸೌರಶಕ್ತಿ ಸಾಮರ್ಥ್ಯದ ಮತ್ತಷ್ಟು ವಿಸ್ತರಣೆಯು ಆರ್ಥಿಕತೆಯ ವಿವಿಧ ವಲಯಗಳಲ್ಲಿ ಉದ್ಯೋಗಾವಕಾಶಗಳನ್ನು ಹಲವು ಪಟ್ಟು ಹೆಚ್ಚಿಸಲಿದೆ ಎಂದರು. “ಅಡುಗೆ ಮನೆಯ ಒಲೆಯಿಂದ ಹಿಡಿದು ಸಾರಿಗೆ ಸಾಧನಗಳವರೆಗೆ ಎಲ್ಲವೂ ಸೌರಶಕ್ತಿ ಮತ್ತು ಹಸಿರು ಇಂಧನ ಆಧಾರಿತವಾದಾಗ, ಹೊಸ ಉದ್ಯಮವೊಂದು ಸೃಷ್ಟಿಯಾಗುತ್ತದೆ” ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಭಾರತದಲ್ಲಿರುವ ಅಪಾರ ಬೇಡಿಕೆ, ಪ್ರಮಾಣ, ವ್ಯಾಪ್ತಿ ಹಾಗೂ ರಾಜಕೀಯ ಮತ್ತು ನೀತಿ ಸ್ಥಿರತೆಯ ಪ್ರಯೋಜನ ಪಡೆದುಕೊಳ್ಳುವಂತೆ ಜಾಗತಿಕ ಹೂಡಿಕೆದಾರರಿಗೆ ಆಹ್ವಾನ ನೀಡಿದ ಪ್ರಧಾನಮಂತ್ರಿಯವರು, ಕಳೆದ ಒಂದು ದಶಕದಲ್ಲಿ ನವೀಕರಿಸಬಹುದಾದ ಇಂಧನ ವಲಯವು ₹15 ಲಕ್ಷ ಕೋಟಿಗೂ ಅಧಿಕ, ಅಂದರೆ $164 ಬಿಲಿಯನ್‌ಗೂ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಿದೆ ಎಂದು ತಿಳಿಸಿದರು. 2024ರ ಆರ್‌ಇ-ಇನ್ವೆಸ್ಟ್ (RE-INVEST) ಶೃಂಗಸಭೆಯ ನಂತರದ ಕೇವಲ ಎರಡು ವರ್ಷಗಳ ಅವಧಿಯಲ್ಲಿಯೇ ₹6 ಲಕ್ಷ ಕೋಟಿಗೂ ಅಧಿಕ, ಅಂದರೆ $63 ಬಿಲಿಯನ್‌ಗಳಷ್ಟು ಹೂಡಿಕೆ ಹರಿದುಬಂದಿದೆ ಎಂದರು. ಈ ದಶಕದ ಅಂತ್ಯದ ವೇಳೆಗೆ ಹೂಡಿಕೆಯ ಅವಕಾಶಗಳು ₹20 ಲಕ್ಷ ಕೋಟಿ, ಅಂದರೆ $220 ಬಿಲಿಯನ್‌ ಮೀರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು. “ಆದ್ದರಿಂದ, ನಿಮ್ಮೆಲ್ಲರಿಗೂ ಭಾರತದ ಶುದ್ಧ ಇಂಧನ ವಲಯದಲ್ಲಿ ಅವಕಾಶಗಳ ಹೊಸ ಆಕಾಶವೇ ತೆರೆದುಕೊಳ್ಳಲಿದೆ” ಎಂದು ಶ್ರೀ ಮೋದಿ ಹೇಳಿದರು.

ಭಾರತದ ಶುದ್ಧ ಇಂಧನ ಪಯಣ ಮತ್ತು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಆಶಯಗಳಿಗೆ ಆಧಾರವಾಗಿರುವ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಭಾರತದ ಜಾಗತಿಕ ಸಂದೇಶವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅಗತ್ಯವಿರುವ ಪ್ರತಿಯೊಂದು ದೇಶಕ್ಕೂ ಅವಶ್ಯಕವಾದ ಹಣಕಾಸು ನೆರವು, ತಂತ್ರಜ್ಞಾನ ಮತ್ತು ಪರಿಣತಿಯನ್ನು ತಲುಪಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದರು. “ಆದ್ದರಿಂದಲೇ, ಆಫ್ರಿಕಾಕ್ಕಾಗಿ $200 ಮಿಲಿಯನ್ ಮೊತ್ತದ 'ಆಫ್ರಿಕಾ ಸೋಲಾರ್ ಫೆಸಿಲಿಟಿ' ಪ್ರಸ್ತಾವನೆಯನ್ನು ಮುಂದಿಡಲಾಗಿದೆ” ಎಂದು ಪ್ರಧಾನಮಂತ್ರಿ ತಿಳಿಸಿದರು.

ಜಾಗತಿಕ ಹವಾಮಾನ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಮುಂಬರುವ ದಶಕ ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಪ್ರತಿಯೊಂದು ದೇಶ ಮತ್ತು ಪ್ರದೇಶವನ್ನು ಈ ಪರಿವರ್ತನೆಯೊಂದಿಗೆ ಬೆಸೆಯುವ ಮೂಲಕ ಭವಿಷ್ಯದ ಭದ್ರತೆಯನ್ನು ಖಚಿತಪಡಿಸುವಲ್ಲಿ ಶೃಂಗಸಭೆಯಲ್ಲಿ ಭಾಗವಹಿಸಿರುವವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “ಆಗ ಮಾತ್ರ ನಾವು ಶುದ್ಧ ಭವಿಷ್ಯ, ಹಸಿರು ಭವಿಷ್ಯ ಮತ್ತು ಸುರಕ್ಷಿತ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದ ಶ್ರೀ ಮೋದಿ ತಮ್ಮ ಮಾತು ಮುಕ್ತಾಯಗೊಳಿಸಿದರು.

 

*****

 


(ಪ್ರಕಟಣೆ ಐ.ಡಿ.: 2331858) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , Khasi , English , Urdu , Marathi , हिन्दी , Assamese , Gujarati , Odia , Tamil