ಪ್ರಕಟಣಾ ದಿನಾಂಕ:
01 NOV 2026 7:21PM by PIB Bengaluru
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಎಸ್ಎಂವಿಟಿ ಬೆಂಗಳೂರು–ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ), ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಶ್ರೀ ಹೆಚ್.ಡಿ. ಕುಮಾರಸ್ವಾಮಿ, ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ, ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ದೇಶದ ಎರಡು ಪ್ರಮುಖ ಮಹಾನಗರಗಳು ಮತ್ತು ಆರ್ಥಿಕ ಕೇಂದ್ರಗಳ ನಡುವಿನ ಆಧುನಿಕ ರಾತ್ರಿ ರೈಲು ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ರೈಲು ಸಂಚಾರದ ಆರಂಭವು ಮಹತ್ವದ ಹೆಜ್ಜೆಯಾಗಿದೆ.
ಹೊಸ ತಲೆಮಾರಿನ ಈ ಸ್ಲೀಪರ್ ರೈಲಿನ ಆರಂಭದಿಂದ ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಕರಿಗೆ ಮತ್ತೊಂದು ಆಧುನಿಕ, ಆರಾಮದಾಯಕ ಮತ್ತು ದಕ್ಷ ಪ್ರಯಾಣದ ಆಯ್ಕೆ ಲಭ್ಯವಾಗಲಿದೆ. ಈ ರೈಲು ಉದ್ಯೋಗಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಪ್ರವಾಸಿಗರಿಗೆ ಅನುಕೂಲ ಒದಗಿಸಲಿದೆ. ಅಲ್ಲದೆ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಪ್ರಮುಖ ನಗರಗಳು ಹಾಗೂ ಪ್ರದೇಶಗಳ ನಡುವಿನ ಸಂಪರ್ಕವೂ ಮತ್ತಷ್ಟು ಬಲಗೊಳ್ಳಲಿದೆ.

2026ರ ಜನವರಿಯಲ್ಲಿ ಹೌರಾ–ಗುವಾಹಟಿ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಿದ ಬಳಿಕ, ನಿನ್ನೆ ವಾರಾಣಸಿ–ನವದೆಹಲಿ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿಸಲಾಗಿತ್ತು. ಇದೀಗ ಬೆಂಗಳೂರು–ಮುಂಬೈ ರೈಲು ಸೇವೆಯ ಆರಂಭದೊಂದಿಗೆ ಆಧುನಿಕ ರಾತ್ರಿ ರೈಲು ಪ್ರಯಾಣದ ಜಾಲ ಮತ್ತಷ್ಟು ವಿಸ್ತರಣೆಯಾಗಲಿದೆ. ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡುವ ಸಾರಿಗೆ ವ್ಯವಸ್ಥೆಯನ್ನು ರೂಪಿಸುವ ಭಾರತೀಯ ರೈಲ್ವೆಯ ಬದ್ಧತೆಯನ್ನು ಇದು ಮತ್ತಷ್ಟು ಬಲಪಡಿಸಲಿದೆ.

ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲಿನ ಕುರಿತು ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್ ಅವರು, ದೇಶದ ಐಟಿ ಮತ್ತು ಸ್ಟಾರ್ಟ್ಅಪ್ ರಾಜಧಾನಿಯಾಗಿರುವ ಬೆಂಗಳೂರನ್ನು ಆರ್ಥಿಕ ರಾಜಧಾನಿ ಮುಂಬೈಯೊಂದಿಗೆ ಈ ರೈಲು ಬೆಸೆಯಲಿದೆ ಎಂದು ತಿಳಿಸಿದರು. ಈ ರೈಲು ಆಂಧ್ರಪ್ರದೇಶದ ಅನಂತಪುರ ಮತ್ತು ಗುಂತಕಲ್, ಕರ್ನಾಟಕದ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಹಾಗೂ ಮಹಾರಾಷ್ಟ್ರದ ಸೋಲಾಪುರ, ಪುಣೆ ಮತ್ತು ಕಲ್ಯಾಣ್ ಮೂಲಕ ಸಂಚರಿಸಲಿದೆ. ಈ ಮೂಲಕ ಈ ಹಿಂದೆ ಅತ್ಯಾಧುನಿಕ ಮತ್ತು ವಿಶ್ವಮಟ್ಟದ ರೈಲು ಸೇವೆಗಳ ಸೌಲಭ್ಯವಿಲ್ಲದ ಉತ್ತರ ಕರ್ನಾಟಕದ ಹಲವು ಭಾಗಗಳಿಗೂ ಉತ್ತಮ ರಾತ್ರಿ ರೈಲು ಸಂಪರ್ಕ ದೊರೆಯಲಿದೆ. ಕರ್ನಾಟಕಕ್ಕೆ ಮುಂದಿನ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯೂ ಬೆಂಗಳೂರಿನಿಂದಲೇ ಆರಂಭವಾಗಲಿದೆ ಎಂದು ಅವರು ಘೋಷಿಸಿದರು. ಈ ರೈಲು ರಾಜ್ಯದ ಉತ್ತರ ಭಾಗಗಳಾದ ಹುಬ್ಬಳ್ಳಿ ಪ್ರದೇಶವನ್ನು ಸಂಪರ್ಕಿಸಿ, ಪುಣೆ ಮತ್ತು ಮುಂಬೈ ಕಡೆಗೆ ಸಂಚರಿಸಲಿದೆ ಎಂದು ಅವರು ಹೇಳಿದರು.
ಬೆಂಗಳೂರು ಮತ್ತು ಮಂಗಳೂರು ನಡುವಿನ ವಂದೇ ಭಾರತ್ ರೈಲು ಸೇವೆಯೂ ಮುಂದಿನ ಕೆಲವು ವಾರಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಈ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡು, ಯಶಸ್ವಿ ಪರೀಕ್ಷೆ ನಡೆದ ಬಳಿಕ ಸೇವೆ ಆರಂಭವಾಗಲಿದೆ. ಇದರಿಂದ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ಈ ಹೊಸ ರೈಲು ಸೇವೆಯು ಈ ಭಾಗದ ಜನರಿಗೆ ವೇಗವಾದ, ಹೆಚ್ಚು ಆರಾಮದಾಯಕ ಮತ್ತು ವಿಶ್ವ ದರ್ಜೆಯ ರೈಲು ಪ್ರಯಾಣದ ಸೌಲಭ್ಯ ಒದಗಿಸಲಿದೆ ಎಂದು ಅವರು ಹೇಳಿದರು. ಕರ್ನಾಟಕದ ರೈಲು ಸಂಪರ್ಕವನ್ನು ಬಲಪಡಿಸುವಲ್ಲಿ ಆಧುನಿಕ ರೈಲ್ವೆ ಮೂಲಸೌಕರ್ಯ, ತಂತ್ರಜ್ಞಾನ ಆಧಾರಿತ ಸುಧಾರಣೆಗಳು ಮತ್ತು ಹೈಸ್ಪೀಡ್ ರೈಲು ಸೇವೆಗಳ ವಿಸ್ತರಣೆಯ ಮಹತ್ವವನ್ನೂ ಅವರು ಒತ್ತಿಹೇಳಿದರು. ಇವು ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದರ ಜೊತೆಗೆ ರಾಜ್ಯದ ಆರ್ಥಿಕ ಅಭಿವೃದ್ಧಿಗೂ ನೆರವಾಗಲಿವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಹೈಸ್ಪೀಡ್ ರೈಲು ಸಂಪರ್ಕದ ವಿಸ್ತರಣೆ ಮತ್ತು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಹಾಗೂ ಆರ್ಥಿಕ ಚಟುವಟಿಕೆಗಳ ಸಮನ್ವಯಕ್ಕೆ ನೆರವಾಗಲು ಹೊಸ ರೈಲು ಮಾರ್ಗಗಳ ಅಭಿವೃದ್ಧಿಯ ಬಗ್ಗೆಯೂ ಶ್ರೀ ಅಶ್ವಿನಿ ವೈಷ್ಣವ್ ಅವರು ಪ್ರಸ್ತಾಪಿಸಿದರು. ಪ್ರಯಾಣದ ಸಮಯದಲ್ಲಿ ಆಗಲಿರುವ ಇಳಿಕೆಯನ್ನು ಉಲ್ಲೇಖಿಸಿದ ಅವರು, ಬೆಂಗಳೂರು–ಚೆನ್ನೈ ನಡುವಿನ ಪ್ರಯಾಣಕ್ಕೆ ಕೇವಲ 73 ನಿಮಿಷಗಳು ಸಾಕಾಗಲಿವೆ. ಬೆಂಗಳೂರು–ಹೈದರಾಬಾದ್ ನಡುವಿನ ಪ್ರಯಾಣವನ್ನು ಸುಮಾರು 2 ಗಂಟೆ 10 ನಿಮಿಷಗಳಲ್ಲಿ ಕ್ರಮಿಸಬಹುದು ಎಂದು ತಿಳಿಸಿದರು.
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಮಾತನಾಡಿ. ಕರ್ನಾಟಕದಾದ್ಯಂತ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ರೈಲು ಸಂಪರ್ಕವನ್ನು ಬಲಪಡಿಸಲು ರೈಲ್ವೆ ಸಚಿವಾಲಯ ಕೈಗೊಂಡಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಒದಗಿಸಿರುವುದನ್ನು ಪ್ರಸ್ತಾಪಿಸಿದ ಅವರು, ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಗಮನಾರ್ಹ ಪ್ರಗತಿ ಸಾಧಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬೃಹತ್ ಹೂಡಿಕೆಯಿಂದ ರೈಲ್ವೆ ಮೂಲಸೌಕರ್ಯ ವಿಸ್ತರಣೆ ಮಾತ್ರವಲ್ಲದೆ, ಸುರಕ್ಷತೆಯಲ್ಲೂ ಸುಧಾರಣೆ ಕಂಡುಬಂದಿದೆ ಎಂದು ಶ್ರೀ ಜೋಶಿ ಹೇಳಿದರು. ಕವಚ್ ಸುರಕ್ಷತಾ ವ್ಯವಸ್ಥೆ ಜಾರಿಗೆ ಬಂದ ಬಳಿಕ ರೈಲು ಅಪಘಾತಗಳ ಸಂಖ್ಯೆ 135ರಿಂದ 16ಕ್ಕೆ ಇಳಿಕೆಯಾಗಿದೆ. ರೈಲು ಅಪಘಾತಗಳನ್ನು ಸಂಪೂರ್ಣವಾಗಿ ಶೂನ್ಯಕ್ಕೆ ತರುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ ಎಂದರು. ಹೊಸ ವಂದೇ ಭಾರತ್ ರೈಲು ಸೇವೆಗಳ ಆರಂಭ ಮತ್ತು ಹೆಚ್ಚುವರಿ ಹೈಸ್ಪೀಡ್ ರೈಲು ಕಾರಿಡಾರ್ಗಳ ಘೋಷಣೆಯನ್ನು ಅವರು ಸ್ವಾಗತಿಸಿದರು. ಈ ಉಪಕ್ರಮಗಳಿಂದ ಪ್ರಯಾಣಿಕರ ಸಂಪರ್ಕ ಸುಧಾರಿಸುವುದರ ಜೊತೆಗೆ ಪ್ರಾದೇಶಿಕ ಅಭಿವೃದ್ಧಿಗೆ ವೇಗ ದೊರೆಯಲಿದೆ. ಕರ್ನಾಟಕದಾದ್ಯಂತ ಆಧುನಿಕ ರೈಲು ಸೇವೆಗಳು ಹೆಚ್ಚಿನ ಜನರಿಗೆ ಲಭ್ಯವಾಗಲಿವೆ ಎಂದು ತಿಳಿಸಿದರು.
ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯ ಆರಂಭವನ್ನು ಸ್ವಾಗತಿಸಿದರು. ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸುವ ಪ್ರಸ್ತಾವನೆ ಮತ್ತು ಬೆಂಗಳೂರನ್ನು ಪುಣೆಯೊಂದಿಗೆ ಸಂಪರ್ಕಿಸುವ ಯೋಜನೆಯನ್ನೂ ಅವರು ಸ್ವಾಗತಿಸಿದರು. ಈ ಉಪಕ್ರಮಗಳಿಂದ ಕರ್ನಾಟಕದ ಜನರಿಗೆ ಮಾತ್ರವಲ್ಲದೆ, ಬೆಂಗಳೂರಿನಲ್ಲಿ ನೆಲೆಸಿರುವ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೂ ಅನುಕೂಲವಾಗಲಿದೆ. ಇದರಿಂದ ಪ್ರಯಾಣಿಕರ ಅನುಕೂಲ ಮತ್ತು ಪ್ರಾದೇಶಿಕ ರೈಲು ಸಂಪರ್ಕ ಮತ್ತಷ್ಟು ಸುಧಾರಿಸಲಿದೆ ಎಂದು ಅವರು ಹೇಳಿದರು.
ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಕರ್ನಾಟಕದ ರೈಲ್ವೆ ಮೂಲಸೌಕರ್ಯದಲ್ಲಿ ಆಗಿರುವ ಮಹತ್ವದ ಬದಲಾವಣೆಗಳನ್ನು ಪ್ರಸ್ತಾಪಿಸಿದರು. ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು, ರೈಲು ಸಂಪರ್ಕವನ್ನು ಬಲಪಡಿಸುವುದು ಮತ್ತು ರಾಜ್ಯಾದ್ಯಂತ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ರಾಜ್ಯದಲ್ಲಿ ಸುಮಾರು ₹52,000 ಕೋಟಿ ವೆಚ್ಚದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದರು. ರೈಲು ಸೇವೆಗಳನ್ನು ಪುನರಾರಂಭಿಸುವುದು, ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣವನ್ನು ತ್ವರಿತಗೊಳಿಸುವುದು ಹಾಗೂ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳು ಮತ್ತು ಇತರ ಪ್ರಮುಖ ಸ್ಥಳಗಳ ರೈಲು ನಿಲ್ದಾಣಗಳನ್ನು ಆಧುನೀಕರಿಸುವಲ್ಲಿ ರೈಲ್ವೆ ಸಚಿವರು ಕೈಗೊಂಡಿರುವ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಎರಡು ಪ್ರಮುಖ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರಗಳ ನಡುವಿನ ಸಂಪರ್ಕ
ಹೊಸ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲು, ಮಾಹಿತಿ ತಂತ್ರಜ್ಞಾನ, ನಾವೀನ್ಯತೆ, ಶಿಕ್ಷಣ ಮತ್ತು ಉದ್ಯಮಶೀಲತೆಯ ಪ್ರಮುಖ ಕೇಂದ್ರವಾಗಿರುವ ಬೆಂಗಳೂರನ್ನು ದೇಶದ ಆರ್ಥಿಕ ಮತ್ತು ವಾಣಿಜ್ಯ ರಾಜಧಾನಿ ಮುಂಬೈಯೊಂದಿಗೆ ಸಂಪರ್ಕಿಸುವ ಮಹತ್ವದ ರಾತ್ರಿ ರೈಲು ಸೇವೆಯಾಗಲಿದೆ.
ಈ ಎರಡೂ ಮಹಾನಗರಗಳ ನಡುವೆ ಉದ್ಯೋಗಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಮತ್ತು ಕುಟುಂಬಗಳ ಸಂಚಾರ ಗಣನೀಯ ಪ್ರಮಾಣದಲ್ಲಿದೆ. ಹೊಸ ರೈಲು ಸೇವೆಯಿಂದ ಪ್ರಯಾಣಿಕರಿಗೆ ಮತ್ತೊಂದು ಅನುಕೂಲಕರ ಪ್ರಯಾಣದ ಆಯ್ಕೆ ದೊರೆಯಲಿದೆ. ರಾತ್ರಿ ಪ್ರಯಾಣಿಸಿ ಮರುದಿನ ತಮ್ಮ ಗಮ್ಯಸ್ಥಾನ ತಲುಪಲು ಇದರಿಂದ ಸಾಧ್ಯವಾಗಲಿದೆ.
ಈ ರೈಲು ಮಾರ್ಗದಲ್ಲಿ ಅನಂತಪುರ, ಗುಂತಕಲ್, ರಾಯಚೂರು, ಯಾದಗಿರಿ, ವಾಡಿ, ಕಲಬುರಗಿ, ಸೋಲಾಪುರ, ಪುಣೆ ಮತ್ತು ಕಲ್ಯಾಣ್ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳು ಸಂಪರ್ಕಗೊಳ್ಳಲಿವೆ. ಇದರಿಂದ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಹಲವು ಪ್ರದೇಶಗಳ ನಡುವಿನ ರೈಲು ಸಂಪರ್ಕ ಬಲಗೊಳ್ಳಲಿದೆ. ಪ್ರಮುಖ ವಾಣಿಜ್ಯ ಕೇಂದ್ರಗಳು, ಶಿಕ್ಷಣ ಕೇಂದ್ರಗಳು ಮತ್ತು ಪ್ರಾದೇಶಿಕ ನಗರಗಳಿಗೆ ಸುಲಭವಾಗಿ ತಲುಪಲು ಅನುಕೂಲವಾಗಲಿದೆ.
ಬೆಂಗಳೂರು ಎಸ್ಎಂವಿಟಿ ನಿಲ್ದಾಣದಿಂದ ಸಂಜೆ 7:45ಕ್ಕೆ ಹೊರಡುವ ರೈಲು, ಮರುದಿನ ಬೆಳಿಗ್ಗೆ 11:55ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ತಲುಪಲಿದೆ. ಮುಂಬೈನಿಂದ ರಾತ್ರಿ 8:10ಕ್ಕೆ ಸಿಎಸ್ಎಂಟಿ ನಿಲ್ದಾಣದಿಂದ ಹೊರಡುವ ರೈಲು, ಮರುದಿನ ಮಧ್ಯಾಹ್ನ 12 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ. ಈ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದೆ. ಬೆಂಗಳೂರಿನಿಂದ ಹೊರಡುವ ರೈಲು ಸೋಮವಾರ ಸಂಚರಿಸುವುದಿಲ್ಲ. ಮುಂಬೈನಿಂದ ಹೊರಡುವ ರೈಲು ಮಂಗಳವಾರ ಸಂಚರಿಸುವುದಿಲ್ಲ.
ರಾತ್ರಿ ಪ್ರಯಾಣದ ವೇಳಾಪಟ್ಟಿಯಿಂದಾಗಿ ಪ್ರಯಾಣಿಕರು ಹಗಲಿನ ಸಮಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಎರಡು ಮಹಾನಗರಗಳ ನಡುವೆ ಆರಾಮವಾಗಿ ಪ್ರಯಾಣಿಸಲು ಸಾಧ್ಯವಾಗಲಿದೆ. ಮಾರ್ಗಮಧ್ಯದ ನಗರಗಳು ಮತ್ತು ಪಟ್ಟಣಗಳ ಜನರಿಗೂ ಆಧುನಿಕ ರೈಲು ಪ್ರಯಾಣದ ಮತ್ತೊಂದು ಆಯ್ಕೆ ದೊರೆಯಲಿದೆ.
ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿರುವುದು, ಆಧುನಿಕ ಮೂಲಸೌಕರ್ಯ, ಸುಧಾರಿತ ತಂತ್ರಜ್ಞಾನ ಮತ್ತು ಉತ್ತಮ ರೈಲು ಸಂಪರ್ಕದ ಮೂಲಕ ಪ್ರಯಾಣಿಕರ ಸಾರಿಗೆ ವ್ಯವಸ್ಥೆಯನ್ನು ಪರಿವರ್ತಿಸುವ ಭಾರತೀಯ ರೈಲ್ವೆಯ ನಿರಂತರ ಪ್ರಯತ್ನಗಳಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ, ಮಹಾನಗರಗಳನ್ನು ಬೆಳೆಯುತ್ತಿರುವ ಪ್ರಾದೇಶಿಕ ಕೇಂದ್ರಗಳೊಂದಿಗೆ ಸಂಪರ್ಕಿಸುವ ಆಧುನಿಕ, ದಕ್ಷ, ಸುರಕ್ಷಿತ ಮತ್ತು ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡುವ ಸಾರಿಗೆ ಜಾಲವನ್ನು ಅಭಿವೃದ್ಧಿಪಡಿಸಲು ಭಾರತೀಯ ರೈಲ್ವೆ ಬದ್ಧವಾಗಿದೆ.
*****