ನಾಗರೀಕ ವಿಮಾನಯಾನ ಸಚಿವಾಲಯ
azadi ka amrit mahotsav

ಏಳು ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಯೋಗಗಳನ್ನು ಪ್ರಾರಂಭಿಸಿದ ಡಿಜಿ ಯಾತ್ರಾ


2027ರಲ್ಲಿ ವ್ಯಾಪಕ ಜಾರಿಗಾಗಿ ಪ್ರಯಾಣಿಕರ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಪ್ರಯೋಗಗಳು

ಪ್ರಕಟಣಾ ದಿನಾಂಕ: 01 NOV 2026 4:48PM by PIB Bengaluru

‘ಡಿಜಿ ಯಾತ್ರಾ’ ಭಾರತದಾದ್ಯಂತ ಏಳು ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪ್ರಯೋಗಗಳನ್ನು ಪ್ರಾರಂಭಿಸಿದೆ. ಇದು ದೇಶದ ವಾಯುಯಾನ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮತ್ತೊಂದು ಹೆಜ್ಜೆಯಾಗಿದೆ. 2026ರ ನವೆಂಬರ್‌ನಿಂದ ನಡೆಯಲಿರುವ ಪ್ರಯೋಗಗಳು, ಇ-ಪಾಸ್ ಪೋರ್ಟ್ ಹೊಂದಿರುವ ಅರ್ಹ ಭಾರತೀಯ ಪ್ರಜೆಗಳಿಗೆ ‘ಏರ್ ಇಂಡಿಯಾ’ ಮತ್ತು ‘ಇಂಡಿಗೊ’ ನಿರ್ವಹಿಸುವ ಆಯ್ದ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸುವಾಗ ಗೊತ್ತುಪಡಿಸಿದ ವಿಮಾನ ನಿಲ್ದಾಣದ ಟಚ್ ಪಾಯಿಂಟ್ ಗಳಲ್ಲಿ ಡಿಜಿ ಯಾತ್ರೆಯನ್ನು ಬಳಸಲು ಅನುವು ಮಾಡಿಕೊಡುತ್ತದೆ.

ದೆಹಲಿ, ಬೆಂಗಳೂರು, ಹೈದರಾಬಾದ್, ಕೊಚ್ಚಿನ್, ಮುಂಬೈ, ಚೆನ್ನೈ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲಿ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಅರ್ಹ ಪ್ರಯಾಣಿಕರು ಟರ್ಮಿನಲ್ ಪ್ರವೇಶ ದ್ವಾರಗಳು, ಸೆಕ್ಯುರಿಟಿ ಹೋಲ್ಡ್ ಏರಿಯಾಗಳು (ಎಸ್ಎಚ್ಎ) ಮತ್ತು ಬೋರ್ಡಿಂಗ್ ಗೇಟ್‌ಗಳಲ್ಲಿ ಅಗತ್ಯ ಮೂಲಸೌಕರ್ಯಗಳು ಲಭ್ಯವಿರುವ ಕಡೆಗಳಲ್ಲಿ ಈ ಸೌಲಭ್ಯವನ್ನು ಬಳಸಲು ಸಾಧ್ಯವಾಗುತ್ತದೆ. ಪ್ರಾಯೋಗಿಕ ಅವಧಿಯಲ್ಲಿ ಪಡೆದ ಪ್ರತಿಕ್ರಿಯೆಯು 2027ರಲ್ಲಿ ವ್ಯಾಪಕವಾಗಿ ಜಾರಿಗೊಳಿಸುವ ಯೋಜನೆಗೆ ಸಹಾಯಕವಾಗಲಿವೆ.

ಈ ಸೌಲಭ್ಯವನ್ನು ಪಡೆಯಲು, ಅರ್ಹ ಭಾರತೀಯ ನಾಗರಿಕರು ‘ಡಿಜಿ ಯಾತ್ರಾ’ ಮೊಬೈಲ್ ತಂತ್ರಾಂಶದ ಮೂಲಕ ಇ-ಪಾಸ್‌ಪೋರ್ಟ್ ಆಧಾರಿತ ಪರಿಶೀಲಿಸಬಹುದಾದ ರುಜುವಾತು (ವಿಸಿ) ಸೃಷ್ಟಿಸಬೇಕು. ಈ ಪ್ರಕ್ರಿಯೆಯು ಇ-ಪಾಸ್‌ಪೋರ್ಟ್‌ನ ‘ಮೆಷಿನ್ ರೀಡಬಲ್ ಝೋನ್’ (ಆರ್‌ಎಂಝೆಡ್‌) ಸ್ಕ್ಯಾನ್ ಮಾಡುವುದು, ಹೊಂದಾಣಿಕೆಯಾಗುವ ಸ್ಮಾರ್ಟ್‌ಫೋನ್‌ನ ‘ನಿಯರ್ ಫೀಲ್ಡ್ ಕಮ್ಯುನಿಕೇಶನ್’ (ಎನ್‌ಎಫ್‌ಸಿ) ವೈಶಿಷ್ಟ್ಯವನ್ನು ಬಳಸಿ ಅದರಲ್ಲಿರುವ ಚಿಪ್ ಓದುವುದು, ಸೆಲ್ಫಿ ತೆಗೆದುಕೊಳ್ಳುವುದು ಮತ್ತು ವಿವರಗಳನ್ನು ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ. ಈ ರುಜುವಾತನ್ನು ಸಾಧನದಲ್ಲಿರುವ ಪ್ರಯಾಣಿಕರ ‘ಡಿಜಿ ಯಾತ್ರಾ’ ವ್ಯಾಲೆಟ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಪ್ರಾಯೋಗಿಕ ಪರೀಕ್ಷೆಗಳಿಗಾಗಿ ಸಕ್ರಿಯಗೊಳಿಸಲಾದ ವಿಮಾನ ನಿಲ್ದಾಣದ ಟಚ್‌ಪಾಯಿಂಟ್‌ಗಳಲ್ಲಿ ಈ ಸೌಲಭ್ಯವನ್ನು ಬಳಸಬಹುದಾಗಿದೆ.

ಈ ಸೌಲಭ್ಯವು ಪ್ರಸ್ತುತ ಇರುವ ಪ್ರಯಾಣ ಪ್ರಕ್ರಿಯೆಗಳಿಗೆ ಪೂರಕವಾಗಿರಲಿದೆಯೇ ಹೊರತು, ಅವುಗಳನ್ನು ಬದಲಾಯಿಸುವುದಿಲ್ಲ. ಪ್ರಯಾಣಿಕರು ತಮ್ಮ ಪ್ರಯಾಣ ದಾಖಲೆಗಳನ್ನು ಕೊಂಡೊಯ್ಯುವುದನ್ನು ಮುಂದುವರಿಸಬೇಕು ಮತ್ತು ಎಲ್ಲಾ ಕಡ್ಡಾಯ ಏರ್‌ಲೈನ್ ದಾಖಲೆ ತಪಾಸಣೆಗಳು, ವಲಸೆ (ಇಮಿಗ್ರೆಷನ್‌) ಪ್ರಕ್ರಿಯೆಗಳು ಮತ್ತು ಇತರ ಅನ್ವಯವಾಗುವ ಪ್ರಯಾಣದ ಔಪಚಾರಿಕತೆಗಳನ್ನು ಪೂರ್ಣಗೊಳಿಸಬೇಕು.

ಭಾರತದ ವಿಮಾನಯಾನ ಜಾಲದಾದ್ಯಂತ ‘ಡಿಜಿ ಯಾತ್ರಾ’ ಅಳವಡಿಕೆಯು ವಿಸ್ತರಣೆಯಾಗುತ್ತಲೇ ಇದೆ. ಈ ವೇದಿಕೆಯು 26.5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ ಮತ್ತು ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಸೇವೆ ಸಲ್ಲಿಸುತ್ತಿರುವ 39 ದೇಶೀಯ ವಿಮಾನ ನಿಲ್ದಾಣಗಳಲ್ಲಿ 110 ದಶಲಕ್ಷಕ್ಕೂ ಅಧಿಕ  ಪ್ರಯಾಣಗಳಿಗೆ ಅನುಕೂಲ ಮಾಡಿಕೊಟ್ಟಿದೆ. 2027ರ ವೇಳೆಗೆ ಇನ್ನೂ 25 ದೇಶೀಯ ವಿಮಾನ ನಿಲ್ದಾಣಗಳನ್ನು ಇದರ ವ್ಯಾಪ್ತಿಗೆ ತರಲು ಯೋಜಿಸಲಾಗಿದೆ.

ಭಾರತ ಸರ್ಕಾರದ 'ಡಿಜಿಟಲ್ ಇಂಡಿಯಾ' ಮತ್ತು 'ಸುಗಮ ಹಾರಾಟ' ದೃಷ್ಟಿಕೋನಕ್ಕೆ ಅನುಗುಣವಾಗಿ, ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಸುಧಾರಿಸಲು ಮತ್ತು ತಡೆರಹಿತ ವಿಮಾನ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯ ಬದ್ಧವಾಗಿದೆ.

 

*****


(ಪ್ರಕಟಣೆ ಐ.ಡಿ.: 2331236) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , English , Urdu , Marathi , हिन्दी , Malayalam