ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ನ ಬನಸ್ಕಾಂತದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಪ್ರಕಟಣಾ ದಿನಾಂಕ: 30 OCT 2026 3:51PM by PIB Bengaluru

ಭಾರತ ಮಾತಾ ಕೀ ಜೈ.

ಭಾರತ ಮಾತಾ ಕೀ ಜೈ.

ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲ್ ಜಿ, ಉಪಮುಖ್ಯಮಂತ್ರಿ ಭಾಯಿ ಹರ್ಷ್ ಸಂಘವಿ ಜಿ, ವಿಧಾನಸಭೆಯ ಸಭಾಪತಿ ಶ್ರೀ ಶಂಕರ್‌ಭಾಯಿ ಚೌಧರಿ ಜಿ, ಗುಜರಾತ್ ಸರ್ಕಾರದ ಎಲ್ಲಾ ಸಚಿವರೆ, ಸಂಸದರೆ ಮತ್ತು ಶಾಸಕರೆ, ಇತರೆ ಜನಪ್ರತಿನಿಧಿಗಳೆ ಹಾಗೂ ನನ್ನ ಸಹೋದರ ಸಹೋದರಿಯರೆ.

ಇಂದು, ತಂತ್ರಜ್ಞಾನದ ಮೂಲಕ ದೇಶದ ಪ್ರತಿಯೊಂದು ಜಿಲ್ಲೆಯ ರೈತರು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ಜತೆಗೆ, ಗುಜರಾತ್‌ನ ಪ್ರತಿಯೊಂದು ಹಳ್ಳಿಯ ರೈತರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು  ಹೀಗೆ ಎಲ್ಲರೂ ರೈತರಿಗಾಗಿ ಆಯೋಜಿಸಲಾದ ಈ ಪ್ರಮುಖ ಕಾರ್ಯಕ್ರಮದಲ್ಲಿ ಇಂದು ನಮ್ಮೊಂದಿಗೆ ಉಪಸ್ಥಿತರಿದ್ದಾರೆ. ಅವರೆಲ್ಲರನ್ನೂ ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಇಂದು ಬನಸ್ಕಾಂತ ತನ್ನದೇ ಆದ ಸ್ಥಾನಮಾನ ಸ್ಥಾಪಿಸಿದೆ. ಪರದೆಯ ಮೇಲೆ ನಾನು ಗಮನಿಸುತ್ತಿದ್ದೆ, ಬಹುಶಃ ಇಷ್ಟು ದೊಡ್ಡ ಸಂಖ್ಯೆಯ ಜನರು ಮಂಚಗಳ(ಚಾರ್ಪಾಯಿಗಳ) ಮೇಲೆ ಕುಳಿತಿರುವುದು ಜಗತ್ತಿನ ಬೇರೆಲ್ಲೂ ನಡೆದಿರಲಿಕ್ಕಿಲ್ಲ. ದೇಶದ ಜನರಿಗೂ ಕೂಡ, ಈ ಸಭೆಯಲ್ಲಿ ಎಲ್ಲರೂ ಮಂಚಗಳ ಮೇಲೆ ಕುಳಿತಿರುವ ದೃಶ್ಯ ಖಂಡಿತವಾಗಿಯೂ ಅಚ್ಚರಿ ಉಂಟುಮಾಡಿರಬೇಕು. ಇಂದು ಬನಸ್ಕಾಂತ ನಮ್ಮ ಹಳ್ಳಿಗಳ ಈ ಶ್ರೇಷ್ಠ ಸಂಪ್ರದಾಯಕ್ಕೆ ಮರುಜೀವ ನೀಡಿದೆ. ನೀವು ಮೊದಲೇ 'ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ಗೆ ತಿಳಿಸಿದ್ದರೆ, ಅವರು ಖಂಡಿತವಾಗಿಯೂ ಇದನ್ನು ವಿಶ್ವ ದಾಖಲೆಗೆ ಸೇರಿಸುತ್ತಿದ್ದರು. ಸ್ವಲ್ಪ ಸಮಯದ ಹಿಂದೆಯಷ್ಟೇ ಇಲ್ಲಿ ಇದರ ಬಗ್ಗೆಯೇ ಪ್ರಸ್ತಾಪಿಸಲಾಯಿತು.

ನೀವು ನನಗೆ ವಹಿಸಿಕೊಟ್ಟ ಜವಾಬ್ದಾರಿಗೆ ಈಗ 25 ವರ್ಷಗಳು ತುಂಬಿವೆ. ನೋಡಿ, ಎಂತಹ ಕಾಕತಾಳೀಯ, ಈ 25 ವರ್ಷಗಳು ಪೂರ್ಣಗೊಂಡ ನಂತರ ನನ್ನ ಮೊದಲ ಭೇಟಿ ನಮ್ಮ ಬನಸ್ಕಾಂತವೈ ಆಗಿದೆ! ನಿಮಗೆ ನೆನಪಿರಬಹುದು, 2001ರಲ್ಲಿ ಮುಖ್ಯಮಂತ್ರಿಯಾದ ನಂತರ, ಮುಖ್ಯಮಂತ್ರಿಯಾಗಿ ನನ್ನ ಮೊದಲ ಪ್ರಮುಖ ಸಾರ್ವಜನಿಕ ಕಾರ್ಯಕ್ರಮ 'ದೀಸಾ'ದಲ್ಲಿ ನಡೆದಿತ್ತು. ಇಲ್ಲಿರುವ ಹಿರಿಯರಿಗೆ ಆ 'ಲೋಕ ಕಲ್ಯಾಣ ಮೇಳ' ನೆನಪಿರಬಹುದು. ಆ ಕಾರ್ಯಕ್ರಮ ಬಹುಶಃ ಐತಿಹಾಸಿಕವೇ ಆಗಿತ್ತು. ಒಂದೇ ಜಿಲ್ಲೆಯಿಂದ 3 ಲಕ್ಷ ಜನರು ಅದರಲ್ಲಿ ಭಾಗವಹಿಸಿದ್ದರು. ಆ ದಾಖಲೆಯನ್ನು ಇಂದಿಗೂ ಮುರಿಯಲಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಆ ದಾಖಲೆ ಬನಸ್ಕಾಂತಕ್ಕೆ ಸೇರಿದ್ದು. ಅಲ್ಲಿಂದಲೇ ಈ ಪಯಣ ಆರಂಭವಾಯಿತು, ಇಂದು ಅದೇ ಸ್ಥಳದಲ್ಲಿ 25 ವರ್ಷಗಳ ಸೇವೆಯ ಲೆಕ್ಕಾಚಾರವನ್ನು ನಿಮ್ಮ ಮುಂದೆ ಮಂಡಿಸುವ ಅವಕಾಶ ನನಗೆ ಸಿಕ್ಕಿದೆ.

ನವರಾತ್ರಿ ಮುಗಿದ ಕೆಲವೇ ದಿನಗಳಲ್ಲಿ, ತಾಯಿ ಅಂಬಾಳ ಪವಿತ್ರ ಭೂಮಿಗೆ ಬರುವ ಅವಕಾಶ ನನಗೆ ಸಿಕ್ಕಿದೆ. ನಾನು ತಾಯಿ ಅಂಬಾಳ ಪಾದಗಳಿಗೆ ನಮಸ್ಕರಿಸುತ್ತೇನೆ. ಸ್ವಲ್ಪ ಸಮಯದ ಹಿಂದಷ್ಟೇ ಮಹಿಳೆಯರು, ಮಕ್ಕಳು, ರೈತರು ಮತ್ತು ಹೈನುಗಾರರಿಗೆ ಸಮರ್ಪಿತವಾದ ಯೋಜನೆಗಳನ್ನು ಇಲ್ಲಿ ಉದ್ಘಾಟಿಸಲಾಯಿತು, ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. 'ಪಿಎಂ-ಕಿಸಾನ್ ಸಮ್ಮಾನ್ ನಿಧಿ'ಯ ಹೊಸ ಕಂತು ದೇಶಾದ್ಯಂತ ಇರುವ ಕೋಟ್ಯಂತರ ಸಣ್ಣ ರೈತರ ಖಾತೆಗಳನ್ನು ತಲುಪಿದೆ. ಇದಕ್ಕಾಗಿ ನಾನು ಗುಜರಾತ್‌ನ ಜನರಿಗೆ, ದೇಶದ ಜನರಿಗೆ ಮತ್ತು ಭಾರತದಾದ್ಯಂತ ಇರುವ ರೈತರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಗುಜರಾತ್ ಮತ್ತು ಬನಸ್ಕಾಂತದ ಜನರು ನನ್ನನ್ನು ಕ್ಷಮಿಸಬೇಕು. ಇಂದು ನಾನು ಹಿಂದಿಯಲ್ಲಿ ಮಾತನಾಡಬೇಕಾಗಿದೆ, ಏಕೆಂದರೆ ದೇಶದ ಮೂಲೆಮೂಲೆಗಳಿಂದ ಜನರು ಈ ಕಾರ್ಯಕ್ರಮದೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾನು ಹಿಂದಿಯಲ್ಲಿ ಮಾತನಾಡಲು ನೀವು ಅನುಮತಿ ನೀಡುತ್ತೀರಿ ತಾನೇ? ತುಂಬಾ ಒಳ್ಳೆಯದು.

ಸ್ನೇಹಿತರೆ,

ನಮ್ಮ ರೈತರು, ಅಂದರೆ ನಮಗೆ ಅನ್ನದಾತರು 'ವಿಕಸಿತ ಭಾರತ'ದ ಅತ್ಯಂತ ಬಲವಾದ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದಾರೆ. ನಮ್ಮ ಸರ್ಕಾರವು ಯಾವಾಗಲೂ ರೈತರ ಕಲ್ಯಾಣ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಿದೆ. 2013-14ನೇ ಸಾಲಿಗೆ ಹೋಲಿಸಿದರೆ, ದೇಶದ ಕೃಷಿ ಬಜೆಟ್ ಈಗ 5 ಪಟ್ಟು ಹೆಚ್ಚಾಗಿದೆ. 'ಪಿಎಂ-ಕಿಸಾನ್ ಸಮ್ಮಾನ್ ನಿಧಿ'ಯು ಕೋಟ್ಯಂತರ ಸಣ್ಣ ರೈತರ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದು ಸುಮಾರು 10 ಕೋಟಿ ರೈತರ ಖಾತೆಗಳಿಗೆ 18,000 ಕೋಟಿ ರೂಪಾಯಿಗೂ ಹೆಚ್ಚು ಹಣ ವರ್ಗಾಯಿಸಲಾಗಿದೆ. ಗುಜರಾತ್‌ನ 50 ಲಕ್ಷಕ್ಕೂ ಹೆಚ್ಚು ರೈತರು ಕೂಡ ಇದರ ಪ್ರಯೋಜನ ಪಡೆದಿದ್ದಾರೆ. ಅವರ ಖಾತೆಗಳಿಗೆ 1,000 ಕೋಟಿ ರೂಪಾಯಿಗೂ ಹೆಚ್ಚು ಹಣ ಜಮೆಯಾಗಿದೆ. ಕೇವಲ ಬನಸ್ಕಾಂತ ಜಿಲ್ಲೆಯಲ್ಲೇ ಲಕ್ಷಾಂತರ ರೈತ ಕುಟುಂಬಗಳ ಖಾತೆಗಳಿಗೆ ಸುಮಾರು 50 ಕೋಟಿ ರೂಪಾಯಿ ತಲುಪಿದೆ.

ಸ್ನೇಹಿತರೆ,

ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಸರ್ಕಾರ ಜಾರಿಗೆ ತಂದ ನೀತಿಗಳಿಂದಾಗಿ ರೈತರಿಗೆ 50 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಪ್ರಯೋಜನಗಳು ಅಥವಾ ಉಳಿತಾಯಗಳು ಲಭಿಸಿವೆ. ಬರೋಬ್ಬರಿ 50 ಲಕ್ಷ ಕೋಟಿ ರೂಪಾಯಿಗಳು! ಕೇವಲ 5 ಯೋಜನೆಗಳ ಉದಾಹರಣೆಯನ್ನು ನಾನು ನಿಮಗೆ ನೀಡುತ್ತೇನೆ. 'ಪಿಎಂ-ಕಿಸಾನ್ ಸಮ್ಮಾನ್ ನಿಧಿ'ಯ ಅಡಿ ಸುಮಾರು 4.5 ಲಕ್ಷ ಕೋಟಿ ರೂಪಾಯಿ ನೇರವಾಗಿ ಸಣ್ಣ ರೈತರ ಬ್ಯಾಂಕ್ ಖಾತೆಗಳನ್ನು ತಲುಪಿವೆ. ಸಹೋದರಿಯೇ, ನೀನು ನನ್ನನ್ನೇ ಸೋಲಿಸಿಬಿಟ್ಟೆ! ನಿನ್ನ ಕೈ ನೋಯುತ್ತಿದೆ, ಹಾಗಾಗಿ ಸ್ವಲ್ಪ ಹೊತ್ತಿನ ನಂತರ ನೀನು ಕುಳಿತುಕೊಳ್ಳುತ್ತೀಯ ಎಂದು ನಾನು ಭಾವಿಸಿದ್ದೆ. ನನ್ನ ಈ ಮಗಳು ತಂದಿರುವ ಆ ಸುಂದರವಾದ ಚಿತ್ರವನ್ನು ಸಂಗ್ರಹಿಸಿಕೊಳ್ಳುವಂತೆ ನಾನು ಎಸ್‌ಪಿಜಿ ಸಿಬ್ಬಂದಿಯನ್ನು ಕೋರುತ್ತೇನೆ. ಇಲ್ಲದಿದ್ದರೆ, ಅದನ್ನು ಹಿಡಿದಿಟ್ಟುಕೊಳ್ಳಿ, ಅವಳು ಸುಸ್ತಾಗುತ್ತಾಳೆ. ಮಗುವೇ, ಎಸ್‌ಪಿಜಿ ಸಿಬ್ಬಂದಿ ಅದನ್ನು ಅಲ್ಲೇ ತೆಗೆದುಕೊಳ್ಳುತ್ತಾರೆ. ದಯವಿಟ್ಟು ನೀವು ಎಲ್ಲಿದ್ದೀರೋ ಅಲ್ಲೇ ಇರಿ. ಎಸ್‌ಪಿಜಿ ಸಿಬ್ಬಂದಿ ಅದನ್ನು ತೆಗೆದುಕೊಳ್ಳಲಿ. ಸ್ವಾತಂತ್ರ್ಯದ ನಂತರ, ಸಣ್ಣ ರೈತರ ಅಗತ್ಯಗಳನ್ನು ಎಂದಿಗೂ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಯಾರೂ ಅವರ ಕಡೆ ಗಮನ ಹರಿಸಲಿಲ್ಲ. ಆದರೂ, ನಮ್ಮ ದೇಶದ ಒಟ್ಟು ರೈತರಲ್ಲಿ ಸಣ್ಣ ರೈತರೇ ಶೇಕಡ 85ಕ್ಕಿಂತ ಹೆಚ್ಚು ಇದ್ದಾರೆ. ಶೇಕಡ 85ಕ್ಕಿಂತ ಹೆಚ್ಚು! ನಮ್ಮ ಸರ್ಕಾರವೇ ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, 'ಪಿಎಂ-ಕಿಸಾನ್ ಸಮ್ಮಾನ್ ನಿಧಿ' ಮೂಲಕ ಅವರಿಗೆ ಬೆಂಬಲ ನೀಡಿದೆ.

ಸ್ನೇಹಿತರೆ,

ಕಳೆದ ಕೆಲವು ವರ್ಷಗಳಲ್ಲಿ ಜಾಗತಿಕ ಅನಿಶ್ಚಯಗಳಿಂದಾಗಿ ರಸಗೊಬ್ಬರಗಳ ಬೆಲೆ ತೀವ್ರವಾಗಿ ಏರಿಕೆಯಾದವು. ಆದರೆ, ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ನಮ್ಮ ಸರ್ಕಾರವು, ಈ ಹೊರೆಯನ್ನು ರೈತರ ಮೇಲೆ ಬೀಳಲು ಬಿಡಲಿಲ್ಲ. ಇದಕ್ಕಾಗಿ ಸರ್ಕಾರವು ಸುಮಾರು 16 ಲಕ್ಷ ಕೋಟಿ ರೂಪಾಯಿನ್ನು ವೆಚ್ಚ ಮಾಡಿದೆ. ರಸಗೊಬ್ಬರಗಳು ನಿಮಗೆ ಕೈಗೆಟುಕುವ ದರದಲ್ಲಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ರೈತರ ಮೇಲೆ ಆರ್ಥಿಕ ಹೊರೆ ಬೀಳದಂತೆ ತಡೆಯಲು, ನಾವು ರಾಷ್ಟ್ರೀಯ ಬೊಕ್ಕಸದಿಂದ 16 ಲಕ್ಷ ಕೋಟಿ ರೂಪಾಯಿ ವ್ಯಯಿಸಿದ್ದೇವೆ.

ಸ್ನೇಹಿತರೆ,

ಹಿಂದಿನ ಸರ್ಕಾರಗಳು 'ಕನಿಷ್ಠ ಬೆಂಬಲ ಬೆಲೆ' ವಿಷಯದಲ್ಲಿ ರೈತರನ್ನು ಪದೇಪದೆ ದಾರಿ ತಪ್ಪಿಸಿದ್ದವು. ಆದರೆ, ನಮ್ಮ ಸರ್ಕಾರವು ನೀಡಿದ ಎಂಎಸ್ಪಿ ಭರವಸೆಯನ್ನು ಈಡೇರಿಸಿದೆ. ಕಳೆದ 12 ವರ್ಷಗಳಲ್ಲಿ ಗೋಧಿ ಮತ್ತು ಭತ್ತ ಬೆಳೆಯುವ ರೈತರಿಗೆ ಎಂಎಸ್ಪಿ ರೂಪದಲ್ಲಿ 24 ಲಕ್ಷ ಕೋಟಿ ರೂ. ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.

ಸ್ನೇಹಿತರೆ,

ನಮ್ಮ ಸರ್ಕಾರವು 'ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ'ಯ ಮೂಲಕ ರೈತರಿಗೆ ಒಂದು ಬಲವಾದ ಸುರಕ್ಷತಾ ಕವಚ ಒದಗಿಸಿದೆ. ನಾವು ಬೃಹತ್ ಪ್ರಮಾಣದಲ್ಲಿ ಬೆಳೆ ವಿಮಾ ಯೋಜನೆ ಜಾರಿಗೆ ತಂದಿದ್ದೇವೆ. ಕಳೆದ 10-12 ವರ್ಷಗಳಲ್ಲಿ ರೈತರಿಗೆ ಬೆಳೆ ವಿಮಾ ಪರಿಹಾರವಾಗಿ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ತಲುಪಿದೆ. ಬೆಳೆ ನಷ್ಟ ಸಂಭವಿಸಿದಾಗಲೆಲ್ಲಾ, ವಿಮಾ ಬೆಂಬಲದ ಮೂಲಕ 2 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಮೊತ್ತ ರೈತರ ಕೈಸೇರಿದೆ. ರೈತರ ನೀರಾವರಿ ವೆಚ್ಚ ಕಡಿಮೆ ಮಾಡಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ 'ಪಿಎಂ-ಕುಸುಮ್' ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ. ಈ ಯೋಜನೆಯಡಿ ಈಗಾಗಲೇ ಸುಮಾರು 12 ಲಕ್ಷ ಸೌರ ಪಂಪ್‌ಗಳನ್ನು ರೈತರಿಗೆ ವಿತರಿಸಲಾಗಿದೆ. ನೀರಾವರಿಗಾಗಿ ಸೌರಶಕ್ತಿಯಿಂದ ಚಲಿಸುವ ಈ 12 ಲಕ್ಷ ಪಂಪ್‌ಗಳನ್ನು ರೈತರಿಗೆ ನೀಡಲಾಗಿದೆ. ಇದರಿಂದಾಗಿ ವಿದ್ಯುತ್ ಮತ್ತು ಡೀಸೆಲ್‌ನ ಅಗತ್ಯವು ಗಣನೀಯವಾಗಿ ಕಡಿಮೆಯಾಗಿದೆ. ಒಂದು ವೇಳೆ ಈ ಸೌರ ಪಂಪ್‌ಗಳನ್ನು ಒದಗಿಸದಿದ್ದಿದ್ದರೆ, ರೈತರು 80 ಕೋಟಿ ಲೀಟರ್‌ಗಿಂತಲೂ ಹೆಚ್ಚು ಡೀಸೆಲ್ ಖರೀದಿಸಬೇಕಾಗುತ್ತಿತ್ತು. ಲಕ್ಷಾಂತರ ರೈತರು ಈ ವೆಚ್ಚ ಉಳಿಸಿದ್ದಾರೆ. ಅಷ್ಟೇ ಅಲ್ಲದೆ, ಹೆಚ್ಚುವರಿ ವಿದ್ಯುತ್ ಕೂಡ ಉತ್ಪಾದನೆಯಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಕೇವಲ ಈ 5 ಯೋಜನೆಗಳು ಮತ್ತು ನಿರ್ಧಾರಗಳಿಂದ ರೈತರಿಗೆ ನೇರ ಪ್ರಯೋಜನ ಸಿಕ್ಕಿದೆ, ಅವರಿಗೆ ಸುಮಾರು 50 ಲಕ್ಷ ಕೋಟಿ ರೂಪಾಯಿ ಉಳಿತಾಯವಾಗಿದೆ. ಇದು ಅತ್ಯಂತ ದೊಡ್ಡ ಮೊತ್ತವಾಗಿದೆ. ಈ 50 ಲಕ್ಷ ಕೋಟಿ ರೂಪಾಯಿ ರೈತರ ಆದಾಯ ಹೆಚ್ಚಿಸಿವೆ ಮತ್ತು ಭಾರತೀಯ ಕೃಷಿ ವಲಯವನ್ನು ಬಲಪಡಿಸಿವೆ.

ಸ್ನೇಹಿತರೆ,

ಕೃಷಿ ನಮ್ಮ ಪರಂಪರೆ, ಕೃಷಿ ನಮ್ಮ ಸಂಸ್ಕೃತಿ. ಕಳೆದ 12 ವರ್ಷಗಳಲ್ಲಿ ನಮ್ಮ ಸರ್ಕಾರವು ಕೃಷಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿದೆ. ನಾವು ಕೃಷಿ ಮತ್ತು ಪಶುಸಂಗೋಪನೆಯನ್ನು ವೈಜ್ಞಾನಿಕ ವಿಧಾನಗಳೊಂದಿಗೆ ಜೋಡಿಸಿದ್ದೇವೆ. 'ಮಣ್ಣಿನ ಆರೋಗ್ಯ ಕಾರ್ಡ್‌ಗಳು' ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿವೆ. ಹಿಂದೆ, ರೈತರಿಗೆ ತಮ್ಮ ಜಮೀನುಗಳಿಗೆ ಯಾವ ರೀತಿಯ ಗೊಬ್ಬರ ಮತ್ತು ಎಷ್ಟು ಪ್ರಮಾಣದಲ್ಲಿ ಬೇಕು ಎಂದು ನಿರ್ಧರಿಸುವುದು ಕಷ್ಟಕರವಾಗಿತ್ತು. 'ಮಣ್ಣಿನ ಆರೋಗ್ಯ ಕಾರ್ಡ್‌'ಗಳು ಈ ಸಮಸ್ಯೆಯನ್ನು ಪರಿಹರಿಸಿದವು. ಇಂದು 26 ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡ್‌ಗಳು ರೈತರ ಕೈಯಲ್ಲಿವೆ. ಇವು ಕೃಷಿ ಪದ್ಧತಿಗಳನ್ನು ಆಧುನೀಕರಿಸಿವೆ.

ಸ್ನೇಹಿತರೆ,

ಬದಲಾಗುತ್ತಿರುವ ಹವಾಮಾನವು ರೈತರಿಗೆ ಒಂದು ದೊಡ್ಡ ಸವಾಲಾಗಿದೆ. ಆದ್ದರಿಂದ, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾದ ಹೊಸ ತಳಿಯ ಬೀಜಗಳನ್ನು ರೈತರಿಗೆ ನಿರಂತರವಾಗಿ ಒದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ, ಸುಮಾರು 3 ಸಾವಿರ ಹೊಸ ತಳಿಯ ಬೀಜಗಳನ್ನು ರೈತರಿಗೆ ಲಭ್ಯವಾಗುವಂತೆ ಮಾಡಲಾಗಿದೆ.

ಸ್ನೇಹಿತರೆ,

ಹೈನುಗಾರಿಕೆ ನಮ್ಮ ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗವಾಗಿದೆ, ಇದರಲ್ಲಿ ನಮ್ಮ ಸಹೋದರಿಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕಳೆದ ದಶಕದಲ್ಲಿ, ಪಶುಪಾಲನೆ ಮತ್ತು ಹೈನುಗಾರಿಕಾ ವಲಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯನ್ನು ನಾವು ಬಲವಾಗಿ ಉತ್ತೇಜಿಸಿದ್ದೇವೆ. ಜಾನುವಾರು ತಳಿಗಳು ಸುಧಾರಿಸಿದಾಗ, ಹಾಲಿನ ಉತ್ಪಾದನೆಯೂ ಹೆಚ್ಚಾಗುತ್ತದೆ. ಶಂಕರ್‌ಭಾಯ್ ಅವರು ಈ ಹಿಂದೆ ಹೇಳಿದಂತೆ, ಹಿಂದೆ 4 ಹಸುಗಳು ನೀಡುತ್ತಿದ್ದಷ್ಟು ಹಾಲನ್ನು ಈಗ ಒಂದೇ ಹಸು ನೀಡುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಮತ್ತು ಚಿಕಿತ್ಸೆ ನೀಡಿದರೆ, ರೋಗಗಳಿಂದಾಗುವ ನಷ್ಟವನ್ನು ಕಡಿಮೆ ಮಾಡಬಹುದು. ಸರಳವಾಗಿ ಹೇಳುವುದಾದರೆ, ಆರೋಗ್ಯಕರ ಜಾನುವಾರು ಎಂದರೆ, ಪಶುಪಾಲನೆಯಲ್ಲಿ ತೊಡಗಿರುವ ನಮ್ಮ ಸಹೋದರ ಸಹೋದರಿಯರಿಗೆ ಹೆಚ್ಚಿನ ಆದಾಯ ಎಂದರ್ಥ.

ಸ್ನೇಹಿತರೆ,

ನಿಮಗೆಲ್ಲರಿಗೂ 'ರಾಷ್ಟ್ರೀಯ ಗೋಕುಲ ಮಿಷನ್' ಬಗ್ಗೆ ತಿಳಿದಿರಬಹುದು. ಇದರ ಮೂಲಕ ಸ್ಥಳೀಯ ತಳಿಗಳನ್ನು ಸಂರಕ್ಷಿಸಲಾಗುತ್ತಿದೆ, ವೈಜ್ಞಾನಿಕ ತಳಿ ಅಭಿವೃದ್ಧಿಯನ್ನು ಉತ್ತೇಜಿಸಲಾಗುತ್ತಿದೆ. ಬನಸ್ಕಾಂತದಲ್ಲಿ ಸ್ಥಾಪಿಸಲಾದ ಹೊಸ ಸಂಶೋಧನಾ ಕೇಂದ್ರವು ಈ ಅಭಿಯಾನವನ್ನು ಇನ್ನಷ್ಟು ಬಲಪಡಿಸುತ್ತದೆ. ಇಲ್ಲಿ ಗಿರ್, ಸಾಹಿವಾಲ್ ಮತ್ತು ಕಾಂಕ್ರೇಜ್‌ನಂತಹ ಸ್ಥಳೀಯ ಹಸು ತಳಿಗಳನ್ನು ಹಾಗೂ ಮೆಹ್ಸಾನಾ, ಮುರ್ರಾ ಮತ್ತು ಜಾಫರಾಬಾದಿಯಂತಹ ಎಮ್ಮೆ ತಳಿಗಳನ್ನು ಸಂರಕ್ಷಿಸಲಾಗುತ್ತಿದೆ. ಅದೇ ಸಮಯದಲ್ಲಿ, ಅವುಗಳ ಗುಣಮಟ್ಟ ಸುಧಾರಿಸಲು ಪ್ರಮುಖ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ. ಕಾಂಕ್ರೇಜ್ ತಳಿಗಾಗಿ, ದೇಶದಲ್ಲಿಯೇ ಇಂತಹ ಸೌಲಭ್ಯವಿರುವುದು ಇದೇ ಮೊದಲು. ಉದಾಹರಣೆಗೆ, ಒಬ್ಬ ರೈತನ ಬಳಿ ಉತ್ತಮ ಗುಣಮಟ್ಟದ ಹಸುವಿದೆ ಎಂದು ಭಾವಿಸೋಣ. ಅದು ಕಡಿಮೆ ವೆಚ್ಚದಲ್ಲಿ ಹೆಚ್ಚು ಹಾಲು ನೀಡುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. ಸಹಜವಾಗಿಯೇ, ಆ ಹಸುವಿನ ಮುಂದಿನ ಪೀಳಿಗೆಯಲ್ಲೂ ಅದೇ ಗುಣಗಳು ಮುಂದುವರಿಯಬೇಕೆಂದು ಆ ರೈತ ಬಯಸುತ್ತಾನೆ. ಐವಿಎಫ್ ನಂತಹ ಆಧುನಿಕ ತಂತ್ರಜ್ಞಾನಗಳು ಇದನ್ನು ಸಾಧಿಸಲು ಸಹಾಯ ಮಾಡುತ್ತವೆ. ಇವು ಉತ್ತಮ ಗುಣಲಕ್ಷಣಗಳು, ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇದರ ನೇರ ಪ್ರಯೋಜನವು ಹೈನುಗಾರರಿಗೆ ಸಿಗುತ್ತದೆ.

ಸ್ನೇಹಿತರೆ,

ಪಶುಸಂಪತ್ತನ್ನು ರೋಗಗಳಿಂದ ರಕ್ಷಿಸುವುದು ನಮ್ಮ ಆದ್ಯತೆಗಳಲ್ಲಿ ಒಂದಾಗಿದೆ. ಕಾಲುಬಾಯಿ ರೋಗವು ಜಾನುವಾರು ಆರೋಗ್ಯದ ಮೇಲೆ ಹಾಗೂ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಾವು ರಾಷ್ಟ್ರವ್ಯಾಪಿ ಉಚಿತ ಲಸಿಕಾ ಅಭಿಯಾನ ಪ್ರಾರಂಭಿಸಿದೆವು. ಇಲ್ಲಿಯವರೆಗೆ, ಜಾನುವಾರುಗಳಿಗೆ ಸುಮಾರು 150 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. 8 ಕೋಟಿಗೂ ಹೆಚ್ಚು ರೈತರ ಪಶು ಸಂಪತ್ತಿಗೆ ಉಚಿತ ಲಸಿಕೆ ಹಾಕಲಾಗಿದೆ. ಇದು ಹೈನುಗಾರರು ಎದುರಿಸುತ್ತಿದ್ದ ಆರ್ಥಿಕ ಹೊರೆಯನ್ನು ಕೂಡ ಕಡಿಮೆ ಮಾಡಿದೆ.

ಸ್ನೇಹಿತರೆ,

ಈ ಪ್ರಯತ್ನಗಳ ಪರಿಣಾಮವು ಹಾಲು ಉತ್ಪಾದನೆಯಲ್ಲಿಯೂ ಎದ್ದು ಕಾಣುತ್ತಿದೆ. 2013-14ರಲ್ಲಿ ಒಂದು ಹಸು ಅಥವಾ ಎಮ್ಮೆ ದಿನಕ್ಕೆ ಸರಾಸರಿ 5 ಲೀಟರ್‌ಗಿಂತ ಕಡಿಮೆ ಹಾಲು ನೀಡುತ್ತಿತ್ತು. ನೀವು ನನ್ನನ್ನು ದೆಹಲಿಗೆ ಕಳುಹಿಸಿದಾಗ ಪರಿಸ್ಥಿತಿ ಹೀಗಿತ್ತು; ದಿನಕ್ಕೆ 5 ಲೀಟರ್‌ಗಿಂತಲೂ ಕಡಿಮೆ! ಇಂದು, ರಾಷ್ಟ್ರೀಯ ಸರಾಸರಿ ಪ್ರಮಾಣವು ದಿನಕ್ಕೆ ಸುಮಾರು 8 ಲೀಟರ್‌ಗೆ ಏರಿಕೆಯಾಗಿದೆ. ಹಾಲು ಉತ್ಪಾದಕತೆಯಲ್ಲಿ ಭಾರತದ ಬೆಳವಣಿಗೆಯ ದರವು ಜಗತ್ತಿನಲ್ಲೇ ಅತ್ಯಂತ ವೇಗವಾಗಿದೆ. ಹಾಲು ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ. ಇದರ ಪ್ರಯೋಜನಗಳು ಹಳ್ಳಿಗಳನ್ನು ತಲುಪಿದ್ದು, ಇದರಿಂದ ಕೃಷಿ ಕುಟುಂಬಗಳ ಆದಾಯವು ಹೆಚ್ಚಾಗಿದೆ.

ಸ್ನೇಹಿತರೆ,

ಹೈನುಗಾರರು ಕೇವಲ ಹಾಲಿನಿಂದ ಮಾತ್ರವಲ್ಲದೆ, ಸಗಣಿಯಿಂದಲೂ ಆದಾಯ ಗಳಿಸಬೇಕೆಂದು ನಾವು ಬಯಸುತ್ತೇವೆ. ಸಗಣಿ ಮತ್ತು ಕೃಷಿ ತ್ಯಾಜ್ಯಗಳಿಂದ ಬಯೋಗ್ಯಾಸ್, ಬಯೋ-ಸಿಎನ್‌ಜಿ ಮತ್ತು ಸಾವಯವ ಗೊಬ್ಬರಗಳನ್ನು ತಯಾರಿಸಲು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ 'ಬನಸ್ ಡೈರಿ'ಯಂತಹ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಇಂದು 2 ಬಯೋ-ಸಿಎನ್‌ಜಿ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ: ಆರೋಗ್ಯಕರ ಪಶುಸಂಪತ್ತಿನಿಂದ ಹೆಚ್ಚಿನ ಹಾಲು ಉತ್ಪಾದನೆ ಮತ್ತು ಸಗಣಿಯ ಸಂಪೂರ್ಣ ಬಳಕೆ. ನಾವು ಹೈನುಗಾರಿಕೆಯನ್ನು ಕೇವಲ ಒಂದು ಸಂಪ್ರದಾಯವಾಗಿ ಉಳಿಸದೆ, ರೈತರ ಆದಾಯ ಹೆಚ್ಚಿಸುವ ಮತ್ತು ಹಳ್ಳಿಗಳನ್ನು ಸಮೃದ್ಧಗೊಳಿಸುವ ಒಂದು ಪ್ರಬಲ ಸಾಧನವಾಗಿ ಪರಿವರ್ತಿಸುತ್ತಿದ್ದೇವೆ. ಸ್ವಲ್ಪ ಸಮಯದ ಹಿಂದೆ ನಾನು ಇಲ್ಲಿನ ಮಹಿಳೆಯರೊಂದಿಗೆ ಮಾತನಾಡುತ್ತಿದ್ದೆ. ಅವರು ತಾವು 2 ಕೋಟಿ ರೂಪಾಯಿ ಮೌಲ್ಯದ ಹಾಲು ಪೂರೈಸುವುದಾಗಿ ಹೇಳಿದರು. 2 ಕೋಟಿ ರೂಪಾಯಿ ಮೌಲ್ಯದ ಹಾಲು! ಆಗ ನಾನು ಅವರನ್ನು, "ನೀವು ಎಷ್ಟು ಓದಿದ್ದೀರಿ?" ಎಂದು ಕೇಳಿದೆ. ಅದಕ್ಕೆ ಅವರು, "4 ಪುಸ್ತಕಗಳು (ಅಂದರೆ 4ನೇ ತರಗತಿವರೆಗೆ ಮಾತ್ರ ಓದಿದ್ದೇವೆ)" ಎಂದು ಉತ್ತರಿಸಿದರು. ಆದರೂ ಅವರು 2 ಕೋಟಿ ರೂಪಾಯಿ ಮೌಲ್ಯದ ಹಾಲು ಪೂರೈಸುತ್ತಿದ್ದಾರೆ!

ಸ್ನೇಹಿತರೆ,

ಕಳೆದ ಕೆಲವು ವರ್ಷಗಳಲ್ಲಿ ಹಳ್ಳಿಗಳ ಸಮೃದ್ಧಿಗಾಗಿ ನಾವು ಸಮಗ್ರ ದೃಷ್ಟಿಕೋನದೊಂದಿಗೆ ಕೆಲಸ ಮಾಡಿದ್ದೇವೆ. ಮೀನುಗಾರಿಕೆ ವಲಯವನ್ನೇ ನೋಡಿ, ಅದು ಎಷ್ಟು ವಿಸ್ತರಿಸಿದೆ ಎಂದು ಗಮನಿಸಿ. ಭಾರತದ ಸಮುದ್ರಾಹಾರ ರಫ್ತು ಪ್ರಮಾಣವು ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ ಎಂಬುದು ನಿಮಗೆ ಸಂತೋಷದ ವಿಷಯವಾಗಬಹುದು. ನಮ್ಮ ಮೀನುಗಾರರು ಸಮುದ್ರಕ್ಕೆ ಹೋಗಿ, ಮೀನು ಮತ್ತು ಸೀಗಡಿಗಳನ್ನು ಹಿಡಿದು ಮಾರಾಟ ಮಾಡುತ್ತಾರೆ. ಇಂದು ಈ ವಲಯವು ಅಪಾರ ಪ್ರಗತಿಯನ್ನು ಸಾಧಿಸಿದೆ, ವಿಶ್ವಾದ್ಯಂತ ಇದರ ಬೇಡಿಕೆ ತೀವ್ರವಾಗಿ ಹೆಚ್ಚಾಗಿದೆ. ಮೀನುಗಾರಿಕೆ ವಲಯದಲ್ಲಿ ಸಹಕಾರವನ್ನು ಕೂಡ ಉತ್ತೇಜಿಸಲಾಗುತ್ತಿದೆ.

ಸ್ನೇಹಿತರೆ,

ನಮ್ಮ ರೈತರಿಗೆ ಆದಾಯದ ಹೆಚ್ಚುವರಿ ಮೂಲ ಒದಗಿಸಿರುವ ಮತ್ತೊಂದು ವಲಯವಿದೆ. ಅದೇ ಜೇನು ಸಾಕಣೆ. ಕಳೆದ 12 ವರ್ಷಗಳಲ್ಲಿ ಜೇನುತುಪ್ಪದ ಉತ್ಪಾದನೆ ದ್ವಿಗುಣಗೊಂಡಿದೆ. ನನಗೆ ನೆನಪಿದೆ, ನಾನು ಬನಸ್ಕಂಥಾಕ್ಕೆ ಬಂದಾಗ, ನೀವೆಲ್ಲರೂ 'ಸಿಹಿ ಕ್ರಾಂತಿ' ಅಥವಾ 'ಜೇನು ಕ್ರಾಂತಿ' ತರಬೇಕೆಂದು ನಾನು ನಿಮ್ಮಲ್ಲಿ ಕೋರಿದ್ದೆ. ಇಂದು ಬನಸ್ಕಂಥಾ ಜೇನುತುಪ್ಪ ಉತ್ಪಾದನೆಯಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಸ್ವಲ್ಪ ಸಮಯದ ಹಿಂದೆ ನಾನು ಮಹಿಳೆಯರೊಂದಿಗೆ ಸಂವಾದ ನಡೆಸುತ್ತಿದ್ದಾಗ, ಅವರು ತಾವು 35 ಲಕ್ಷ ರೂಪಾಯಿ ಮೌಲ್ಯದ ಜೇನುತುಪ್ಪವನ್ನು ಮಾರಾಟ ಮಾಡುವುದಾಗಿ ತಿಳಿಸಿದರು. ಭಾರತವು ನೈಸರ್ಗಿಕ ಜೇನುತುಪ್ಪವನ್ನು ರಫ್ತು ಮಾಡುವ ವಿಶ್ವದ 2ನೇ ಅತಿದೊಡ್ಡ ರಾಷ್ಟ್ರವಾಗಿದೆ ಎಂಬುದು ನಿಮಗೆ ಹೆಮ್ಮೆಯ ವಿಷಯವಾಗಲಿದೆ. ಈ 'ಸಿಹಿ ಕ್ರಾಂತಿ'ಯಲ್ಲಿ ನಮ್ಮ ಮಹಿಳಾ ಸ್ವಸಹಾಯ ಸಂಘಗಳ ಕೊಡುಗೆಯೂ ನಿರಂತರವಾಗಿ ಹೆಚ್ಚುತ್ತಿದೆ.

ಸ್ನೇಹಿತರೆ,

ಕೆಲವು ದಿನಗಳ ಹಿಂದೆ, ಅಕ್ಟೋಬರ್ 7ರಂದು ನಾನು ಸರ್ಕಾರಿ ಮುಖ್ಯಸ್ಥನಾಗಿ 25 ವರ್ಷಗಳನ್ನು ಪೂರೈಸಿದೆ. ಇದು ನಿನ್ನೆಯಷ್ಟೇ ನಡೆದಂತೆ ಭಾಸವಾಗುತ್ತಿದೆ. ಹೌದು, 2001ರ ಅಕ್ಟೋಬರ್ 7ರಂದು ನಾನು ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಆ ಕ್ಷಣ, ನಿನ್ನೆಯಷ್ಟೇ ನಡೆದಂತೆ ಅನ್ನಿಸುತ್ತಿದೆ. ನೀವೆಲ್ಲರೂ ನಿಮ್ಮ 'ನರೇಂದ್ರ ಭಾಯ್'ಗೆ ಅಪಾರ ಪ್ರೀತಿ ಮತ್ತು ವಾತ್ಸಲ್ಯ ನೀಡಿದ್ದೀರಿ. ಇಂದು ಇಲ್ಲಿ ನನಗೆ ಸ್ವಲ್ಪ ಮುಜುಗರವೆನಿಸಿತು. ದೇಶದ ಇತರೆ ಭಾಗಗಳಲ್ಲಿ ಏನೇ ಹೇಳಲಿ, ಆದರೆ ಇಲ್ಲಿ ಶಂಕರ್‌ಭಾಯ್ ಅವರು "ಪ್ರಧಾನ ಮಂತ್ರಿ ಸಾಹೇಬ್, ಪ್ರಧಾನ ಮಂತ್ರಿ ಸಾಹೇಬ್" ಎಂದು ಕರೆದರು. ನೀವೇ ಪ್ರಾಮಾಣಿಕವಾಗಿ ಹೇಳಿ, ಇಂತಹ ಸಂಬೋಧನೆಯನ್ನು ನಾನು ಹೇಗೆ ಸ್ವೀಕರಿಸಲಿ? ಇಲ್ಲಿನ ಜನರು ಸಹಜವಾಗಿಯೇ, "ನಮ್ಮ ನರೇಂದ್ರ ಭಾಯ್ ಬಂದಿದ್ದಾರೆ" ಎಂದು ಹೇಳುತ್ತಾರೆ. ಹಾಗೆ ಹೇಳುವುದರಲ್ಲಿ ಹೆಚ್ಚು ಸಂತೋಷವಿಲ್ಲವೇ? "ಪ್ರಧಾನ ಮಂತ್ರಿ ಸಾಹೇಬ್" ಎಂದು ಕರೆಯುವುದರಲ್ಲಿ ಏನಿದೆ? ಗುಜರಾತ್‌ನ ನನ್ನ ಸಹೋದರರು "ನಮ್ಮ ನರೇಂದ್ರ ಭಾಯ್" ಎಂದು ಕರೆದಾಗ, ನನ್ನ ಹೃದಯವು ಭಾವಪರವಶವಾಗುತ್ತದೆ. ಕೇವಲ ಪ್ರೀತಿಗಿಂತ ಹೆಚ್ಚಾಗಿ, ಪ್ರತಿಯೊಬ್ಬ ಗುಜರಾತಿ ವ್ಯಕ್ತಿಯೂ ನನಗೆ ಏನನ್ನಾದರೂ ಕಲಿಸಿದ್ದಾರೆ. ಅವರು ನನಗೆ ಸರಿಯಾದ ಮಾರ್ಗ ತೋರಿಸಿಕೊಟ್ಟರು, ನನಗೆ ಸ್ಫೂರ್ತಿಯಾದರು. ಆ ಸಮಯದಲ್ಲಿ, ನನಗೆ ಸರ್ಕಾರಿ ಕಚೇರಿಗಳು, ಸರ್ಕಾರಿ ಕಾರ್ಯ ನಿರ್ವಹಣೆ ಅಥವಾ ಕಡತಗಳ ಬಗ್ಗೆ ಏನೂ ತಿಳಿದಿರಲಿಲ್ಲ. ಸಾಮಾನ್ಯ ಕುಟುಂಬದಿಂದ ಬಂದ, ತಮ್ಮ ಹಿಂದಿನ ತಲೆಮಾರುಗಳಲ್ಲಿ ಯಾರೂ ಗ್ರಾಮದ ಮುಖ್ಯಸ್ಥರಾಗುವ ಕನಸನ್ನೂ ಕಾಣದ ಒಬ್ಬ ವ್ಯಕ್ತಿಗೆ, ಮೊದಲು ಗುಜರಾತ್‌ಗೆ ಮತ್ತು ನಂತರ ಇಡೀ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ನೀವೆಲ್ಲರೂ ನನಗೆ ವಹಿಸಿಕೊಟ್ಟಿದ್ದೀರಿ. ಇದಕ್ಕೂ ಮೊದಲು ಮಹಿಳೆಯರೊಂದಿಗೆ ಮಾತನಾಡುತ್ತಿದ್ದಾಗ, 'ಜ್ಯೋತಿಗ್ರಾಮ', ನೀರು ತರುವ ಯೋಜನೆ, ನೈಸರ್ಗಿಕ ಕೃಷಿ ಮತ್ತು ಪಶುಸಂಪತ್ತಿಗೆ ಸಂಬಂಧಿಸಿದ ಉಪಕ್ರಮಗಳಂತಹ ಆಲೋಚನೆಗಳು ನನಗೆ ಹೇಗೆ ಹೊಳೆದಿವೆ ಎಂದು ಅವರು ಕೇಳಿದರು. ಅದಕ್ಕೆ ನಾನು, "ಇದಕ್ಕೆ ಯಾವುದೇ ವಿಶೇಷ ಸೂತ್ರವಿಲ್ಲ; ನೀವೇ ನನಗೆ ಎಲ್ಲವನ್ನೂ ಕಲಿಸಿದ್ದೀರಿ, ನಾನು ಕೇವಲ ಹೋಗಿ ಅದನ್ನು ಕಾರ್ಯರೂಪಕ್ಕೆ ತಂದೆ ಅಷ್ಟೇ" ಎಂದು ಉತ್ತರಿಸಿದೆ.

ಸ್ನೇಹಿತರೆ,

ನನಗೆ ಯಾವಾಗಲೂ ತಿಳಿದಿರುವುದು ಎರಡೇ ವಿಷಯಗಳು: ಜನಸೇವೆ ಎಂದರೆ ರಾಷ್ಟ್ರಸೇವೆ, ಮತ್ತು ಗುಜರಾತ್‌ನ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಉಳಿದಂತೆ, ಹೇಗೆ ಕೆಲಸ ಮಾಡಬೇಕು ಮತ್ತು ಹೇಗೆ ಮುನ್ನಡೆಯಬೇಕು ಎಂಬುದನ್ನು ನೀವೇ ನನಗೆ ಕಲಿಸಿದ್ದೀರಿ. ರಾಷ್ಟ್ರಕ್ಕಾಗಿ ನಾನು ಏನೇನು ಮಾಡಿದ್ದೇನೋ, ಅದು ಭಾರತದ ಎಲ್ಲಾ ನಾಗರಿಕರಿಗೆ ಮತ್ತು ನಿಮ್ಮೆಲ್ಲರಿಗೂ ಸಲ್ಲಬೇಕು. ಇದಕ್ಕಾಗಿ ನಾನು ನನ್ನ ಜೀವನವಿಡೀ ನಿಮಗೆ ಋಣಿಯಾಗಿರುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಸೇವೆಗೆ ಸಮರ್ಪಿತನಾಗಿರುತ್ತೇನೆ. ದೇಶದ ಜನರಿಗೆ ಮತ್ತು ನಿಮ್ಮೆಲ್ಲರಿಗೂ ಸೇವೆ, ಸೇವೆ, ಮತ್ತು ಅದು ಕೇವಲ ಸೇವೆಯಷ್ಟೆ.

ಸ್ನೇಹಿತರೆ,

ಇಲ್ಲಿ ಉಪಸ್ಥಿತರಿರುವ ಹಿರಿಯ ನಾಗರಿಕರಿಗೆ ಹಳೆಯ ದಿನಗಳು ನೆನಪಿರಬಹುದು. 25 ವರ್ಷಗಳ ಹಿಂದೆ ನಾನು ಇಲ್ಲಿಗೆ ಬರುತ್ತಿದ್ದಾಗ, ವಿದ್ಯುತ್ ಮತ್ತು ನೀರಿನ ತೀವ್ರ ಸಮಸ್ಯೆಗಳಿದ್ದವು. ಆಗಲೂ ನಾನು ಹೇಳುತ್ತಿದ್ದೆ - ನಾವು ವಿದ್ಯುತ್ ಮತ್ತು ನೀರನ್ನು ಉಳಿಸಬೇಕು ಎಂದು. ಆಗ ರೈತರು, "ನೀರು ಉಳಿಸಿ ಎಂದು ಹೇಳಲು ಮೋದಿ ಯಾರು? ಅವರು ನಮಗೆ ವಿದ್ಯುತ್ ಕೂಡ ಕೊಡುವುದಿಲ್ಲ" ಎಂದು ನನ್ನ ವಿರುದ್ಧ ಪ್ರತಿಭಟಿಸುತ್ತಿದ್ದರು. ನಾನು ನಿಮ್ಮೊಂದಿಗೆ ವಾದಿಸುತ್ತಲೇ ಇದ್ದೆ, ಅಂತಿಮವಾಗಿ ನೀವು ನನ್ನ ಮಾತನ್ನು ಒಪ್ಪಿಕೊಂಡಿರಿ. ಇಂದು ನೋಡಿ, ನಾವು ಎಲ್ಲಿಂದ ಎಲ್ಲಿಗೆ ತಲುಪಿದ್ದೇವೆ! ಆ ಹಳೆಯ ಸಮಸ್ಯೆಗಳು ಈಗ ಕೇವಲ ನೆನಪುಗಳಲ್ಲಿ ಮಾತ್ರ ಉಳಿದಿವೆ. ಇಂದೂ ಕೂಡ, ನಾನು ನಿಮಗೆ ಅದೇ ಮಾತನ್ನು ಹೇಳುತ್ತೇನೆ: ನಾವು ನೀರನ್ನು ಉಳಿಸಬೇಕು, ಹಾಗೆಯೇ ವಿದ್ಯುತ್ ಅನ್ನು ಕೂಡ ಉಳಿಸಬೇಕು.

ಸ್ನೇಹಿತರೆ,

ನರ್ಮದಾ ನದಿಯ ನೀರು ಮತ್ತು ಹನಿ ನೀರಾವರಿಯಂತಹ ಆಧುನಿಕ ತಂತ್ರಜ್ಞಾನಗಳು ಬನಸ್ಕಾಂತವನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಇವು ಬನಸ್ಕಾಂತದ ಸ್ವರೂಪವನ್ನೇ, ಅದರ ಭವಿಷ್ಯವನ್ನೇ ಬದಲಿಸಿವೆ. ಬನಸ್ಕಾಂತದ ಆಲೂಗಡ್ಡೆಗಳು ಇಂದು ವಿಶ್ವಾದ್ಯಂತ ಪ್ರಸಿದ್ಧವಾಗಿವೆ. ಬನಸ್ಕಾಂತದ ವ್ಯಕ್ತಿಯೊಬ್ಬರ ಬಳಿಗೆ ಬಂದು ಯಾರಾದರೂ, "ನಾನು ಆಲೂಗಡ್ಡೆಯನ್ನು ಚಿನ್ನವಾಗಿ ಪರಿವರ್ತಿಸುತ್ತೇನೆ" ಎಂದು ಹೇಳಿದರೆ, ಅವರು ತಕ್ಷಣವೇ "ನಾನು ಈಗಾಗಲೇ ಅದನ್ನು ಮಾಡುತ್ತಿದ್ದೇನೆ" ಎಂದು ಉತ್ತರಿಸುತ್ತಾರೆ! ಇಲ್ಲಿ 'ಬನಸ್ ಡೇರಿ'ಯಂತಹ ಸಹಕಾರಿ ಸಂಸ್ಥೆಯಿದೆ; ಇದು ಸಹಕಾರಿ ಚಳುವಳಿಯನ್ನು ಕಾಶಿ ಸೇರಿದಂತೆ ದೇಶದ ಇತರೆ ಭಾಗಗಳಿಗೂ ವಿಸ್ತರಿಸುತ್ತಿದೆ. ನಾನು ಬನಸ್ ಡೇರಿಗೆ ವಿಶೇಷವಾಗಿ ಕೃತಜ್ಞನಾಗಿದ್ದೇನೆ, ಏಕೆಂದರೆ ನನ್ನ ಕಾಶಿಯಲ್ಲಿರುವ ಜನರು ಕೂಡ ನಿಮ್ಮ ಅನುಭವ ಮತ್ತು ಸೇವೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಈಗ, ಫ್ರೆಂಚ್ ಫ್ರೈಸ್ ತಯಾರಿಸುವ ಆಲೂಗಡ್ಡೆ ಸಂಸ್ಕರಣಾ ಘಟಕದ ಸಾಮರ್ಥ್ಯ ಹೆಚ್ಚಿಸಲಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದ ಆಲೂಗಡ್ಡೆ ಖರೀದಿಸಲು ಸಾಧ್ಯವಾಗುತ್ತದೆ. ಇದು ಆಲೂಗಡ್ಡೆ ಬೆಳೆಗಾರರಿಗೆ ದೊರೆಯುವ ಒಂದು ಪ್ರಮುಖ ಸೌಲಭ್ಯ ಮತ್ತು ಬೆಂಬಲವಾಗಿದೆ.

ಸ್ನೇಹಿತರೆ,

ಹಣ್ಣು ಮತ್ತು ತರಕಾರಿ ಕೃಷಿಯಲ್ಲಿ ತೊಡಗಿರುವ ರೈತರಿಗಾಗಿ 'ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ'ವನ್ನು ಜಾರಿಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದ ಅಡಿ, ಇಂದು 12 ಕ್ಲಸ್ಟರ್‌ಗಳಿಗೆ ಅನುಮೋದನೆ ನೀಡಲಾಗಿದೆ. ಈ ಕ್ಲಸ್ಟರ್‌ಗಳು ಟೊಮೆಟೊ, ಆಲೂಗಡ್ಡೆ, ಮೆಣಸಿನಕಾಯಿ, ದ್ರಾಕ್ಷಿ, ಬಾಳೆಹಣ್ಣು, ಈರುಳ್ಳಿ, ಕಿತ್ತಳೆ, ದಾಳಿಂಬೆ ಮತ್ತು ಕೋಕೋ ಮುಂತಾದ ಹಣ್ಣುಗಳು ಹಾಗೂ ತರಕಾರಿಗಳಿಗೆ ಸಂಬಂಧಿಸಿವೆ. ಈ ಉಪಕ್ರಮದ ಮೂಲಕ ರೈತರಿಗೆ ಹೊಸ ತೋಟಗಳನ್ನು ಸ್ಥಾಪಿಸಲು ಮತ್ತು ಹಳೆಯ ತೋಟಗಳನ್ನು ಪುನರುಜ್ಜೀವನಗೊಳಿಸಲು ಬೆಂಬಲ ನೀಡಲಾಗುತ್ತದೆ. ಹಳೆಯ ತೋಟಗಳನ್ನು ಪುನರುಜ್ಜೀವನಗೊಳಿಸಲು ಜನರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು, ಈ ಸಂಪೂರ್ಣ ಯೋಜನೆಗೆ ಸಹಾಯಧನವನ್ನೂ ಒದಗಿಸಲಾಗುವುದು. ಉತ್ತರ ಗುಜರಾತ್‌ನಲ್ಲಿ ಅನುಮೋದಿಸಲಾದ 2 ಕ್ಲಸ್ಟರ್‌ಗಳು ಬನಸ್ಕಾಂತ ಮತ್ತು ಸಬರಕಾಂತ ಜಿಲ್ಲೆಗಳ ಆಲೂಗಡ್ಡೆ ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನ ನೀಡಲಿವೆ.

ಸ್ನೇಹಿತರೆ,

ಇಂದು ಗುಜರಾತ್‌ಗೆ ಸಂಬಂಧಿಸಿದ ಇತರೆ ಹಲವು ಅಭಿವೃದ್ಧಿ ಯೋಜನೆಗಳನ್ನು ಸಹ ಉದ್ಘಾಟಿಸಲಾಗಿದೆ. ಗುಜರಾತ್‌ಗೆ 2 ಹೊಸ ರೈಲು ಸೇವೆಗಳು ಲಭ್ಯವಾಗಿವೆ. ಅಹಮದಾಬಾದ್–ವಾರಾಣಸಿ ಸಬರಮತಿ ಎಕ್ಸ್‌ಪ್ರೆಸ್ ಮತ್ತು ಮೆಹ್ಸಾನಾ–ಬೆಚರಾಜಿ–ಸಬರಮತಿ ಮೆಮು ರೈಲು. ಇವೆರಡೂ ಅತ್ಯಂತ ಮಹತ್ವದ ರೈಲು ಸಂಪರ್ಕ ಯೋಜನೆಗಳಾಗಿವೆ. ಇದರ ಜತೆಗೆ, ಅಹಮದಾಬಾದ್ ಮೆಟ್ರೊ ಸೇವೆಯನ್ನು ಸಹ ವಿಸ್ತರಿಸಲಾಗುತ್ತಿದೆ. ಗಿಫ್ಟ್ ಸಿಟಿ ಮತ್ತು ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೊ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅಹಮದಾಬಾದ್–ಮೆಹ್ಸಾನಾ ಹೆದ್ದಾರಿಯನ್ನು ಈಗ ಚತುಷ್ಪಥಗಳಿಂದ ಅಷ್ಟಪಥಗಳಿಗೆ ವಿಸ್ತರಿಸಲಾಗುತ್ತಿದೆ.

ಸ್ನೇಹಿತರೆ,

ಇಂದು ಗುಜರಾತ್‌ನ ಮಕ್ಕಳಿಗಾಗಿ 4,000ಕ್ಕೂ ಹೆಚ್ಚು ಆಧುನಿಕ ಅಂಗನವಾಡಿಗಳನ್ನು ಸಹ ಉದ್ಘಾಟಿಸಲಾಗುತ್ತಿದೆ. ಇವುಗಳಿಂದ ಸುಮಾರು 4 ಲಕ್ಷ ಮಕ್ಕಳು ಮತ್ತು ಗರ್ಭಿಣಿಯರು ಪ್ರಯೋಜನ ಪಡೆಯಲಿದ್ದಾರೆ.

ಸ್ನೇಹಿತರೆ,

ಇಂತಹ ಪ್ರತಿಯೊಂದು ಪ್ರಯತ್ನವೂ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದೆ. ಇಂದು ದೇಶದ ಪ್ರತಿಯೊಬ್ಬ ರೈತ, ಪ್ರತಿಯೊಬ್ಬ ಯುವಕ ಹಾಗೂ ಪ್ರತಿಯೊಬ್ಬ ಮಗಳು ಮತ್ತು ಸಹೋದರಿಯು 'ಅಭಿವೃದ್ಧಿ ಹೊಂದಿದ ಭಾರತ' ನಿರ್ಮಿಸುವ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದಾರೆ. ಆದರೆ ದುರದೃಷ್ಟವಶಾತ್, ಕೆಲವರಿಗೆ ಇದು ಇಷ್ಟವಿಲ್ಲ. ಕೆಲವರಿಗೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವರು ದೇಶವು ಕಷ್ಟದಲ್ಲಿರುವುದನ್ನು ನೋಡಲು ಬಯಸುವವರು. ರಾಷ್ಟ್ರವು ಸಂಕಷ್ಟದಲ್ಲಿರುವುದನ್ನು ನೋಡಿ ಇವರು ತೃಪ್ತಿ ಪಡೆಯುತ್ತಾರೆ. ದೇಶಕ್ಕೆ ಸವಾಲುಗಳು ಎದುರಾದಾಗಲೆಲ್ಲಾ ಇವರು ಸಂತೋಷಪಡುತ್ತಾರೆ.

ಸ್ನೇಹಿತರೆ,

ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಇರಾನ್ ಮತ್ತು ಗಲ್ಫ್ ಪ್ರದೇಶದ ಸುತ್ತ ಯುದ್ಧ ನಡೆಯುತ್ತಿದೆ. ಈ ಯುದ್ಧದ ಪರಿಣಾಮಗಳನ್ನು ಎದುರಿಸಲು ಭಾರತವು ಒಗ್ಗಟ್ಟಾಗಿ ನಿಂತಿರುವ ಸಮಯದಲ್ಲಿ, ಇವರು ವದಂತಿಗಳನ್ನು ಹರಡುವ ಕೆಲಸದಲ್ಲಿ ನಿರತರಾಗಿದ್ದಾರೆ. ರೈತರಿಗೆ ರಸಗೊಬ್ಬರಗಳು ಸಿಗುವುದಿಲ್ಲ ಎಂದು ವದಂತಿಗಳನ್ನು ಹರಡಲಾಯಿತು. ಕೃತಕ ಸಾಲುಗಳನ್ನು (ಕ್ಯೂ) ಸೃಷ್ಟಿಸಿ ವಾತಾವರಣವನ್ನು ಕಲುಷಿತಗೊಳಿಸಲಾಗಿದೆ. ಅಡುಗೆ ಅನಿಲ ಸಿಗುವುದಿಲ್ಲ ಎಂದು ಹೇಳಿ ಮಹಿಳೆಯರಲ್ಲಿ ಭಯ ಹುಟ್ಟಿಸಲಾಯಿತು; "ಇನ್ನು ಮುಂದೆ ಅಡುಗೆ ಮಾಡುವುದು ಹೇಗೆ? ಮಕ್ಕಳು ಶಾಲೆಗೆ ಹೋಗುವುದು ಹೇಗೆ?" ಎಂದು ಕೇಳುವ ಮೂಲಕ ಅವರನ್ನು ಆತಂಕಕ್ಕೀಡುಮಾಡಲಾಯಿತು. ಮೋದಿ ಅವರನ್ನು ಅಪಕೀರ್ತಿಗೊಳಿಸುವ ಉದ್ದೇಶದಿಂದ, ದೇಶದಲ್ಲಿ ಭಯ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸುವುದು ಇವರ ಯೋಜನೆಯಾಗಿದೆ.

ಸ್ನೇಹಿತರೆ,

ಈ ದೇಶದ ರೈತ ಬಾಂಧವರಿಗೆ ನಾನು ನೆನಪಿಸಲು ಬಯಸುತ್ತೇನೆ. 'ಮೋದಿ ನಿಮ್ಮೊಂದಿಗೆ ದೃಢವಾಗಿ ನಿಲ್ಲುತ್ತಾರೆ' ಎಂದು ನಾನು ಹೇಳಿದ್ದೇನೆ. ಇನ್ನೂ ಯುದ್ಧ ಮುಂದುವರಿದಿದ್ದರೂ, ರೈತರಿಗೆ ರಸಗೊಬ್ಬರಗಳ ಕೊರತೆಯಾಗದಂತೆ ಮೋದಿ ನೋಡಿಕೊಳ್ಳುತ್ತಿರುವುದು ಕಂಡುಬಂದಿದೆ. ರಸಗೊಬ್ಬರ ಪೂರೈಕೆಯಲ್ಲಿ ನಾವು ಯಾವುದೇ ಕೊರತೆಯಾಗಲು ಬಿಡಲಿಲ್ಲ.

ಸ್ನೇಹಿತರೆ,

ಈ ಯುದ್ಧದ ಬೊಬ್ಬರದಲ್ಲಿ ವಿಶ್ವಾದ್ಯಂತ ರಸಗೊಬ್ಬರಗಳ ಬೆಲೆ ಗಣನೀಯವಾಗಿ ಏರಿಕೆಯಾಗಿವೆ. ರಸಗೊಬ್ಬರಗಳ ತಯಾರಿಕೆಯಲ್ಲಿ ರಾಸಾಯನಿಕಗಳ ಬೆಲೆಯು ಬಹಳ ಹೆಚ್ಚಾಗಿದೆ. ಆದರೂ, ಈ ಹೊರೆಯನ್ನು ರೈತರ ಮೇಲೆ ಬೀಳದಂತೆ ಸರ್ಕಾರ ತಡೆಹಿಡಿದಿದೆ. ವಿಶ್ವದ ಇತರೆ ಕಡೆ ಸುಮಾರು 3,000 ರೂ. ಬೆಲೆ ಬಾಳುವ ಒಂದು ಚೀಲ ಯೂರಿಯಾ ಭಾರತೀಯ ರೈತರಿಗೆ 300 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಯೂರಿಯಾದ ಜಾಗತಿಕ ಬೆಲೆ ಸುಮಾರು 3,000 ರೂ. ಇದ್ದರೂ, ಸರ್ಕಾರವು ಆ ಹೊರೆಯನ್ನು ತಾನೇ ಹೊತ್ತುಕೊಂಡು, ನಿಮಗೆ ಸುಮಾರು 300 ರೂ.ಗೆ ನೀಡಲಾಗುತ್ತದೆ. ಜಾಗತಿಕ ಗುಣಮಟ್ಟದ ಒಂದು ಚೀಲ ಡಿಎಪಿ ರಸಗೊಬ್ಬರದ ಬೆಲೆ 5,000 ರೂ. ದಾಟಿದೆ. ಆದರೆ ದೇಶದ ರೈತರಿಗೆ ಅದೇ ಚೀಲವು ಸುಮಾರು 1,350 ರೂ.ಗೆ ಸಿಗುತ್ತಿದೆ. ನಮ್ಮ ರೈತರು ಇನ್ನಷ್ಟು ಬಲಶಾಲಿಯಾಗಲಿ, ಅವರ ಜೀವನ ಸುಧಾರಿಸಲಿ ಎಂಬ ಉದ್ದೇಶದಿಂದ ರಾಷ್ಟ್ರವು ಈ ಬೆಂಬಲವನ್ನು ನೀಡುತ್ತಿದೆ.

ಸ್ನೇಹಿತರೆ,

ಅನಿಶ್ಚಯದಿಂದ ತುಂಬಿರುವ ಜಗತ್ತಿನಲ್ಲಿ, ಭಾರತದ ತ್ವರಿತ ಅಭಿವೃದ್ಧಿಯು ಇಡೀ ವಿಶ್ವಕ್ಕೆ ಭರವಸೆಯ ಹೊಸ ಮೂಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ಒಂದೇ ಭಾರತ, ಶ್ರೇಷ್ಠ ಭಾರತ ಎಂಬ ಹಾದಿಯಲ್ಲಿ ಮುನ್ನಡೆಯುವುದನ್ನು ಮುಂದುವರಿಸಬೇಕು. ನಾಳೆ, ಅಕ್ಟೋಬರ್ 31ರಂದು, ಈ ಸಂಕಲ್ಪವನ್ನು ಇನ್ನಷ್ಟು ಬಲಪಡಿಸುವ ದಿನವಾಗಿದೆ. ನಾಳೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಹಾಗೂ 'ರಾಷ್ಟ್ರೀಯ ಏಕತಾ ದಿವಸ'. ಇಡೀ ರಾಷ್ಟ್ರವೇ ರಾಷ್ಟ್ರೀಯ ಏಕತಾ ದಿವಸ ಆಚರಿಸಲಿದೆ. ಈ ದಿನದಂದು ದೇಶಾದ್ಯಂತ ಏಕತೆಗಾಗಿ ಓಟ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕಾಗಿ ನಡೆಯುತ್ತಿರುವ ಭವ್ಯ ಸಿದ್ಧತೆಗಳ ಬಗ್ಗೆ ಎಲ್ಲೆಡೆಯಿಂದ ವರದಿಗಳು ಬರುತ್ತಿವೆ. ದೇಶದ ಎಲ್ಲಾ ನಾಗರಿಕರಲ್ಲಿ, ವಿಶೇಷವಾಗಿ ನಮ್ಮ ಯುವ ಸ್ನೇಹಿತರಲ್ಲಿ, ನಾಳೆ ಬೆಳಗ್ಗೆ ನಡೆಯಲಿರುವ 'ರನ್ ಫಾರ್ ಯೂನಿಟಿ'ಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ನಾನು ವಿಶೇಷವಾಗಿ ವಿನಂತಿಸುತ್ತೇನೆ.

ಸ್ನೇಹಿತರೆ,

ಪ್ರತಿ ವರ್ಷ ಅಕ್ಟೋಬರ್ 31ರ ಬೆಳಗ್ಗೆ ಏಕ್ತಾ ನಗರದಲ್ಲಿ 'ಏಕತಾ ಉತ್ಸವ' ಆಚರಿಸಲಾಗುತ್ತದೆ. ಆದರೆ ಈ ಬಾರಿ, 'ರನ್ ಫಾರ್ ಯೂನಿಟಿ' (ಏಕತೆಗಾಗಿ ಓಟ) ಮತ್ತು ಇತರೆ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು, ಇದನ್ನು ಬೆಳಗಿನ ಬದಲಿಗೆ ಸಂಜೆ ಆಯೋಜಿಸಲಾಗುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದೊಂದು ಬದಲಾವಣೆ. ನಾಳೆ ಸಂಜೆ 5.30ಕ್ಕೆ ಏಕ್ತಾ ನಗರದಲ್ಲಿ ಭವ್ಯವಾದ 'ಏಕತಾ ಉತ್ಸವ' ನಡೆಯಲಿದೆ. ಈ ಕಾರ್ಯಕ್ರಮವನ್ನು ಅತ್ಯಂತ ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ. ನೀವೆಲ್ಲರೂ ಇದನ್ನು ದೂರದರ್ಶನದಲ್ಲಿ ವೀಕ್ಷಿಸಬೇಕು. ಗುಜರಾತ್‌ನ ನೆಲದಲ್ಲಿ ನಡೆಯಲಿರುವ ಈ ಪಥಸಂಚಲನವು, ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಆಚರಣೆಗಳನ್ನು ನೆನಪಿಸುವಂತಿರಲಿದೆ. ಖಂಡಿತವಾಗಿಯೂ ವೀಕ್ಷಿಸಿ. ಇದರಲ್ಲಿ ಪೊಲೀಸ್ ಮತ್ತು ಭದ್ರತಾ ಪಡೆಗಳ ಪಥಸಂಚಲನವಿರುತ್ತದೆ, ಆಕರ್ಷಕ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ನಾಳೆ ಸಂಜೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ನಾಗರಿಕರು ಪಾಲ್ಗೊಳ್ಳಬೇಕೆಂದು ನಾನು ಕೋರುತ್ತೇನೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಚ್‌ನಿಂದ ಕಾಮಾಖ್ಯದವರೆಗೆ - ಇಡೀ ರಾಷ್ಟ್ರವು ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಬೇಕು, 'ಏಕ್ ಭಾರತ್, ಶ್ರೇಷ್ಠ ಭಾರತ್' (ಒಂದು ಭಾರತ, ಶ್ರೇಷ್ಠ ಭಾರತ) ಎಂಬ ಸಂಕಲ್ಪವನ್ನು ಪುನರುಚ್ಚರಿಸಬೇಕು. ಈ ಮನವಿಯೊಂದಿಗೆ, ಈ ಅಭಿವೃದ್ಧಿ ಕಾರ್ಯಗಳಿಗಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭಾಶಯಗಳನ್ನು ಕೋರುತ್ತೇನೆ.

ತುಂಬು ಧನ್ಯವಾದಗಳು.

ಹಿಂಭಾಗದಲ್ಲಿ ಕುಳಿತಿರುವ ಸಹೋದರಿಯರು ನನಗೆ ಆಶೀರ್ವಾದ ನೀಡುತ್ತಿದ್ದಾರೆ. ತಾಯಂದಿರೆ, ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ. ನಿಮ್ಮ ಆಶೀರ್ವಾದ ನನಗೆ ಅಪಾರ ಶಕ್ತಿ ನೀಡುತ್ತದೆ. ನಿಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.

ಭಾರತ ಮಾತಾ ಕೀ ಜೈ!

ಭಾರತ ಮಾತಾ ಕೀ ಜೈ!

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಮತ್ತು ಕೆಲವೆಡೆ ಗುಜರಾತಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ. ಅವುಗಳ ಮೂಲ ಆಶಯ ತಿಳಿಸುವ ಉದ್ದೇಶದಿಂದ ಇಲ್ಲಿ ಅನುವಾದ ಮಾಡಲಾಗಿದೆ.

 

*****


(ಪ್ರಕಟಣೆ ಐ.ಡಿ.: 2331137) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Manipuri , Assamese , Punjabi , Gujarati , Telugu