ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪ್ರಕಟಣಾ ದಿನಾಂಕ:
28 OCT 2026 6:46PM by PIB Bengaluru
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು (MoPNG), ತನ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್ಸಿಗಳು) ಹಾಗೂ ಇತರ ಸಂಸ್ಥೆಗಳೊಂದಿಗೆ ಸೇರಿ, ವಿಶೇಷ ಅಭಿಯಾನ 6 ಅನ್ನು ಸಕ್ರಿಯವಾಗಿ ಅನುಷ್ಠಾನಗೊಳಿಸುತ್ತಿದೆ. ಸ್ವಚ್ಛತೆ, ದಾಖಲೆಗಳ ಸಮರ್ಥ ನಿರ್ವಹಣೆ, ಗುಜರಿ ವಸ್ತುಗಳು ಮತ್ತು ಇ-ತ್ಯಾಜ್ಯದ ವಿಲೇವಾರಿ ಹಾಗೂ ಕಚೇರಿ ಸ್ಥಳಾವಕಾಶದ ಗರಿಷ್ಠ ಸದ್ಬಳಕೆಗೆ ಈ ಅಭಿಯಾನವು ಒತ್ತು ನೀಡುತ್ತದೆ.
ವಿಶೇಷ ಅಭಿಯಾನ 6ರ ಭಾಗವಾಗಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಅದರ ತೈಲ ಮತ್ತು ಅನಿಲ ವಲಯದ ಕೇಂದ್ರ ಸಾರ್ವಜನಿಕ ಉದ್ಯಮಗಳು ಸ್ವಚ್ಛತೆಯನ್ನು ಉತ್ತೇಜಿಸುವಲ್ಲಿ ಮತ್ತು ಕಚೇರಿ ಸ್ಥಳಾವಕಾಶದ ಗರಿಷ್ಠ ಸದ್ಬಳಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ. ಅಭಿಯಾನಕ್ಕಾಗಿ ಸಂಗ್ರಹಿಸಲಾದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾರು ಪ್ರಗತಿಯ ಅಂಕಿಅಂಶಗಳ ಪ್ರಕಾರ, 3.42 ಲಕ್ಷ ಚದರ ಅಡಿ ಸ್ಥಳಾವಕಾಶವನ್ನು ತೆರವುಗೊಳಿಸಲಾಗಿದೆ. ಇದು ಹಿಂದಿನ ವರ್ಷ ಸಾಧಿಸಲಾದ 3.03 ಲಕ್ಷ ಚದರ ಅಡಿಗೆ ಹೋಲಿಸಿದರೆ ಶೇ. 13.20ರಷ್ಟು ಹೆಚ್ಚಳವಾಗಿದೆ.
ಈ ಅಭಿಯಾನದಡಿ ಗುಜರಿ ವಸ್ತುಗಳು ಮತ್ತು ಇ-ತ್ಯಾಜ್ಯದ ವಿಲೇವಾರಿಯಿಂದ ₹41 ಕೋಟಿ ಗುರಿಯನ್ನು ಮೀರಿ ₹49.46 ಕೋಟಿ ಆದಾಯ ಗಳಿಸಲಾಗಿದೆ. ಈ ಮೂಲಕ ನಿಗದಿತ ಗುರಿಯ ಶೇ. 120.63ರಷ್ಟು ಸಾಧನೆ ಮಾಡಲಾಗಿದೆ. ಈ ಸಾಧನೆಗಳು ಸ್ವಚ್ಛತೆಯನ್ನು ಸಾಂಸ್ಥಿಕ ಕಾರ್ಯವಿಧಾನದ ಭಾಗವಾಗಿಸುವುದು, ಗುಜರಿ ವಸ್ತುಗಳು ಮತ್ತು ಇ-ತ್ಯಾಜ್ಯವನ್ನು ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡುವುದನ್ನು ಖಚಿತಪಡಿಸುವುದು ಹಾಗೂ ತೈಲ ಮತ್ತು ಅನಿಲ ವಲಯದಾದ್ಯಂತ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವುದರ ಬಗ್ಗೆ ಸಚಿವಾಲಯ ಹೊಂದಿರುವ ಬದ್ಧತೆಯನ್ನು ಉಲ್ಲೇಖಿಸುತ್ತವೆ.
ಸಚಿವಾಲಯವು ಅಭಿಯಾನದ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು ತಮ್ಮ ಪ್ರಯತ್ನಗಳನ್ನು ಮತ್ತಷ್ಟು ತೀವ್ರಗೊಳಿಸುವಂತೆ, ಇ-ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಹಾಗೂ ಕಚೇರಿಗಳು ಮತ್ತು ಘಟಕಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ತನ್ನ ಎಲ್ಲ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಿದೆ.
ವಿಶೇಷ ಅಭಿಯಾನ 6 ತೈಲ ಮತ್ತು ಅನಿಲ ವಲಯದಾದ್ಯಂತ ಸ್ವಚ್ಛತೆ, ಪರಿಸರ ಹೊಣೆಗಾರಿಕೆ, ದಾಖಲೆಗಳ ಸಮರ್ಥ ನಿರ್ವಹಣೆ ಹಾಗೂ ಸುಧಾರಿತ ಆಡಳಿತಾತ್ಮಕ ಕಾರ್ಯನಿರ್ವಹಣೆಗೆ ಸಚಿವಾಲಯ ಹೊಂದಿರುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.

*****