|
ಲೋಕಸಭಾ ಸಚಿವಾಲಯ
12ನೇ ಬ್ರಿಕ್ಸ್ ಸಂಸದೀಯ ವೇದಿಕೆಯ ಜಂಟಿ ಘೋಷಣೆ ನವದೆಹಲಿ, ಭಾರತ 26–27 ಅಕ್ಟೋಬರ್ 2026
“ಜನಕೇಂದ್ರಿತ ಅಭಿವೃದ್ಧಿಗಾಗಿ ಸಂಸತ್ತುಗಳ ಸಬಲೀಕರಣ”
ಪ್ರಕಟಣಾ ದಿನಾಂಕ:
27 OCT 2026 5:41PM by PIB Bengaluru

- ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ಫೆಡರಲ್ ರಿಪಬ್ಲಿಕ್ ಆಫ್ ಬ್ರೆಜಿಲ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್, ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾ, ರಿಪಬ್ಲಿಕ್ ಆಫ್ ಇಂಡಿಯಾ, ರಿಪಬ್ಲಿಕ್ ಆಫ್ ಇಂಡೋನೇಷ್ಯಾ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ರಷ್ಯನ್ ಫೆಡರೇಶನ್, ರಿಪಬ್ಲಿಕ್ ಆಫ್ ಸೌತ್ ಆಫ್ರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಂಸತ್ತುಗಳ ಸಭಾಧ್ಯಕ್ಷರು ಹಾಗೂ ಪ್ರತಿನಿಧಿಗಳಾದ ನಾವು, “ಜನಕೇಂದ್ರಿತ ಅಭಿವೃದ್ಧಿಗಾಗಿ ಸಂಸತ್ತುಗಳನ್ನು ಸಬಲೀಕರಣಗೊಳಿಸುವುದು” ಎಂಬ ಧ್ಯೇಯವಾಕ್ಯದಡಿ 2026ರ ಅಕ್ಟೋಬರ್ 26–27ರಂದು ಭಾರತದ ನವದೆಹಲಿಯಲ್ಲಿ ನಡೆದ 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯ (12ನೇ ಬ್ರಿಕ್ಸ್ ಪಿಎಫ್) ಸಭೆಯಲ್ಲಿ ಸಮಾವೇಶಗೊಂಡಿದ್ದೇವೆ.
- 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯಲ್ಲಿ ಪಾಲ್ಗೊಂಡ ಪಾಲುದಾರ ರಾಷ್ಟ್ರಗಳನ್ನು ನಾವು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಮತ್ತು ಸಂಸತ್ತುಗಳ ನಡುವಿನ ಸಹಕಾರಕ್ಕೆ ಅವು ನೀಡಿರುವ ಅಮೂಲ್ಯ ಕೊಡುಗೆಗಳನ್ನು ಗುರುತಿಸುತ್ತೇವೆ. ಪಾಲುದಾರ ರಾಷ್ಟ್ರಗಳೊಂದಿಗೆ ಒಳಗೊಳ್ಳುವ, ಪರಸ್ಪರ ಪ್ರಯೋಜನಕಾರಿಯಾದ ಹಾಗೂ ಅಭಿವೃದ್ಧಿ ಆಧಾರಿತ ಪಾಲುದಾರಿಕೆಯನ್ನು ಹೆಚ್ಚಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಬ್ರಿಕ್ಸ್ನ ವಿವಿಧ ಚಟುವಟಿಕೆಗಳಲ್ಲಿ ಮತ್ತು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿನ ಪ್ರಾಯೋಗಿಕ ಸಹಕಾರದಲ್ಲಿ ಪಾಲುದಾರ ರಾಷ್ಟ್ರಗಳ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತೇವೆ.
- 2026ರಲ್ಲಿ ಭಾರತದ ಬ್ರಿಕ್ಸ್ ಅಧ್ಯಕ್ಷತೆಗೆ ನಾವು ನಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ, ಇದರ ಧ್ಯೇಯವಾಕ್ಯ: “ಸ್ಥಿತಿಸ್ಥಾಪಕತೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ”, ಇದು ಸಾಮಾನ್ಯ ಸವಾಲುಗಳನ್ನು ಸಮತೋಲಿತ, ಒಳಗೊಳ್ಳುವಿಕೆ ಮತ್ತು ಭವಿಷ್ಯದ ದೃಷ್ಟಿಕೋನದೊಂದಿಗೆ ಎದುರಿಸಲು ಬ್ರಿಕ್ಸ್ ಸಹಕಾರವನ್ನು ಬಲಪಡಿಸುವ ನಮ್ಮೆಲ್ಲರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
- 2026ರ ಸೆಪ್ಟೆಂಬರ್ 12–13ರಂದು ನಡೆದ 18ನೇ ಬ್ರಿಕ್ಸ್ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಭಾರತವನ್ನು ಅಭಿನಂದಿಸುತ್ತೇವೆ ಮತ್ತು ನವದೆಹಲಿ ನಾಯಕರ ಘೋಷಣೆಯ ಅಂಗೀಕಾರವನ್ನು ಸ್ವಾಗತಿಸುತ್ತೇವೆ. ಇದಲ್ಲದೆ, 2026ರ ಬ್ರಿಕ್ಸ್ ಅಧ್ಯಕ್ಷತೆಯ ಉಳಿದ ಅವಧಿಯಲ್ಲಿಯೂ ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ.
- ಸದಸ್ಯ ರಾಷ್ಟ್ರಗಳ ಸಂಸತ್ತುಗಳ ಸಾಂವಿಧಾನಿಕ ಅಧಿಕಾರ ವ್ಯಾಪ್ತಿ ಮತ್ತು ಕಾರ್ಯವ್ಯಾಪ್ತಿಗೆ ಅನುಗುಣವಾಗಿ, ಸಹಕಾರದ ಮೂರು ಪ್ರಮುಖ ಸ್ತಂಭಗಳಾದ ರಾಜಕೀಯ ಮತ್ತು ಭದ್ರತೆ, ಆರ್ಥಿಕ ಮತ್ತು ಹಣಕಾಸು ಹಾಗೂ ಸಾಂಸ್ಕೃತಿಕ ಮತ್ತು ಜನರ ನಡುವಿನ ವಿನಿಮಯ ಕ್ಷೇತ್ರಗಳಲ್ಲಿ ಬ್ರಿಕ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಶಾಸಕಾಂಗದ ಬೆಂಬಲವನ್ನು ನಾವು ದೃಢಪಡಿಸುತ್ತೇವೆ. ಪರಸ್ಪರ ಗೌರವ ಮತ್ತು ತಿಳುವಳಿಕೆ, ಸಮಾನತೆ, ಐಕಮತ್ಯ, ಮುಕ್ತತೆ, ಒಳಗೊಳ್ಳುವಿಕೆ ಹಾಗೂ ಒಮ್ಮತದ ಬ್ರಿಕ್ಸ್ ಆಶಯಕ್ಕೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.
- ನಮ್ಮ ರಾಷ್ಟ್ರಗಳು ಮತ್ತು ಜನರ ನಡುವೆ ಪರಸ್ಪರ ತಿಳುವಳಿಕೆ, ಸ್ನೇಹ ಮತ್ತು ಸಹಕಾರವನ್ನು ಬೆಳೆಸುವಲ್ಲಿ ಬ್ರಿಕ್ಸ್ನ ಸಾಂಸ್ಕೃತಿಕ ಹಾಗೂ ಜನರ ನಡುವಿನ ವಿನಿಮಯ ಮತ್ತು ಉಪಕ್ರಮಗಳ ಮಹತ್ವವನ್ನು ನಾವು ಪುನರುಚ್ಚರಿಸುತ್ತೇವೆ. ಈ ಹಿನ್ನೆಲೆಯಲ್ಲಿ, ಭಾರತದ ಅಧ್ಯಕ್ಷತೆಯಲ್ಲಿ ಸಂಸ್ಕೃತಿ, ಕ್ರೀಡೆ, ಕಲೆ, ಶಿಕ್ಷಣ, ಮಹಿಳಾ ವ್ಯವಹಾರಗಳು ಮತ್ತು ಯುವಜನ ವ್ಯವಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನರ ನಡುವಿನ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಿರುವುದನ್ನು ಸ್ವಾಗತಿಸುತ್ತೇವೆ. ಸಂಸ್ಕೃತಿಗಳ ವೈವಿಧ್ಯತೆಯನ್ನು ಗೌರವಿಸುವುದು, ಪರಂಪರೆಗೆ ಹೆಚ್ಚಿನ ಮೌಲ್ಯ ನೀಡುವುದು, ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವುದು ಹಾಗೂ ಬಲಿಷ್ಠ ಅಂತರರಾಷ್ಟ್ರೀಯ ಜನರು-ಜನರ ನಡುವಿನ ವಿನಿಮಯ ಮತ್ತು ಸಹಕಾರವನ್ನು ಜಂಟಿಯಾಗಿ ಬೆಂಬಲಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಕೈಗೊಳ್ಳುವಂತೆ ಕರೆ ನೀಡುತ್ತೇವೆ. “ನಾಗರಿಕತೆಗಳ ನಡುವಿನ ಸಂವಾದಕ್ಕಾಗಿ ಅಂತರರಾಷ್ಟ್ರೀಯ ದಿನ” ಎಂಬ ಶೀರ್ಷಿಕೆಯ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ A/RES/78/286 ಅನ್ನು ಅಂಗೀಕರಿಸಿರುವುದನ್ನೂ ಸ್ಮರಿಸುತ್ತೇವೆ.
- ಜಾಗತಿಕ ಸ್ಥಿರತೆ, ಶಾಂತಿ ಮತ್ತು ಅಭಿವೃದ್ಧಿಗೆ ಅತ್ಯಗತ್ಯವಾದ ಅಡಿಪಾಯಗಳಾಗಿ ವಿಶ್ವಸಂಸ್ಥೆಯ ಚಾರ್ಟರ್ನಲ್ಲಿ ಪ್ರತಿಪಾದಿಸಿರುವ ಸಾರ್ವಭೌಮ ಸಮಾನತೆ, ಪರಸ್ಪರ ಗೌರವ, ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಮತ್ತು ಅಂತರರಾಷ್ಟ್ರೀಯ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವ ತತ್ವಗಳಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.
- ಸಂಸತ್ತುಗಳ ನಡುವಿನ ಸಹಕಾರವು ಬ್ರಿಕ್ಸ್ ಸಹಕಾರದ ಚೌಕಟ್ಟಿನ ಪ್ರಮುಖ ಭಾಗವಾಗಿದೆ ಎಂದು ನಾವು ಗುರುತಿಸುತ್ತೇವೆ. ಇದು ಪರಸ್ಪರ ತಿಳುವಳಿಕೆಯನ್ನು ಬೆಳೆಸಲು, ರಾಷ್ಟ್ರಗಳ ನಡುವೆ ವಿಶ್ವಾಸವನ್ನು ನಿರ್ಮಿಸಲು, ಅಂತರರಾಷ್ಟ್ರೀಯ ವಿವಾದಗಳ ಶಾಂತಿಯುತ ಪರಿಹಾರಕ್ಕೆ ಬೆಂಬಲ ನೀಡಲು, ನಮ್ಮ ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಹಾಗೂ ಒಳಗೊಳ್ಳುವಿಕೆ, ಒಗ್ಗಟ್ಟು ಮತ್ತು ಸುಸ್ಥಿರ ಅಭಿವೃದ್ಧಿಯ ಮೌಲ್ಯಗಳನ್ನು ಉತ್ತೇಜಿಸಲು ವಿಶಿಷ್ಟ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ, ಬ್ರಿಕ್ಸ್ ಸಂಸದೀಯ ವೇದಿಕೆಯ ಪಾತ್ರವನ್ನು ಪುನರುಚ್ಚರಿಸುತ್ತೇವೆ. ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸಂಸತ್ತುಗಳ ನಡುವೆ ಸಂಸದೀಯ ಸಂವಾದ ಮತ್ತು ಸಹಕಾರವನ್ನು ಬಲಪಡಿಸುವಲ್ಲಿ ಈ ಹಿಂದೆ ನಡೆದಿರುವ 11 ಬ್ರಿಕ್ಸ್ ಸಂಸದೀಯ ವೇದಿಕೆ ಸಭೆಗಳು ನೀಡಿರುವ ಮಹತ್ವದ ಕೊಡುಗೆಗಳನ್ನು ಗುರುತಿಸುತ್ತೇವೆ.
- ಜಾಗತಿಕ ದಕ್ಷಿಣದ ಧ್ವನಿಯನ್ನು ಮತ್ತಷ್ಟು ಬಲವಾಗಿ ಪ್ರತಿಧ್ವನಿಸುವಂತೆ ಮಾಡಲು, ಅಂತರಸಂಸದೀಯ ಒಕ್ಕೂಟ (ಐಪಿಯು) ಸೇರಿದಂತೆ ಅಂತರರಾಷ್ಟ್ರೀಯ ಸಂಸದೀಯ ವೇದಿಕೆಗಳಲ್ಲಿ ಬ್ರಿಕ್ಸ್ನ ಪರಸ್ಪರ ಸಹಕಾರವನ್ನು ಬಲಪಡಿಸುವ ನಿರೀಕ್ಷೆಯಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ, ಐಪಿಯು ವ್ಯಾಪ್ತಿಯಲ್ಲಿ ಬ್ರಿಕ್ಸ್ ಪ್ಲಸ್ ಭೌಗೋಳಿಕ-ರಾಜಕೀಯ ಗುಂಪನ್ನು ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸುವ ರಷ್ಯಾದ ಉಪಕ್ರಮವನ್ನು ಗಮನಕ್ಕೆ ತೆಗೆದುಕೊಳ್ಳುತ್ತೇವೆ.
- 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯಲ್ಲಿ ನಡೆದ ರಚನಾತ್ಮಕ ಸಂಸದೀಯ ಸಂವಾದವನ್ನು ನಾವು ಸ್ವಾಗತಿಸುತ್ತೇವೆ. ಸಾಂಸ್ಥಿಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವಲ್ಲಿ ಸಂಸತ್ತುಗಳ ಪಾತ್ರ, ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಡಿಜಿಟಲ್ ತಂತ್ರಜ್ಞಾನಗಳ ಬಳಕೆ, ಹೆಚ್ಚು ಪ್ರಾತಿನಿಧಿಕ ಮತ್ತು ಒಳಗೊಳ್ಳುವಿಕೆಯ ಜಾಗತಿಕ ಆಡಳಿತ ವ್ಯವಸ್ಥೆಯನ್ನು ಬೆಳೆಸುವುದು, ಸುಸ್ಥಿರತೆಯನ್ನು ಉತ್ತೇಜಿಸುವುದು ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿ ಮತ್ತು ಅದರ ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್ಡಿಜಿಗಳು) ಸೇರಿದಂತೆ ಅವುಗಳ ಅನುಷ್ಠಾನಕ್ಕಾಗಿ ಜಾಗತಿಕ ಸಾಮೂಹಿಕ ಕ್ರಮಗಳನ್ನು ತ್ವರಿತಗೊಳಿಸುವುದು ಈ ಸಂವಾದದ ಪ್ರಮುಖ ವಿಷಯಗಳಾಗಿದ್ದವು.
- ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿ ಹಾಗೂ ಅದರ ಸಮಗ್ರ, ಜನಕೇಂದ್ರಿತ ಗುರಿಗಳು ಮತ್ತು ಉದ್ದೇಶಗಳನ್ನು ರಾಷ್ಟ್ರೀಯ ನೀತಿಗಳು ಮತ್ತು ನಿಯಮಗಳಿಗೆ ಅನುಗುಣವಾಗಿ ಸಮತೋಲಿತ ಹಾಗೂ ಸಂಯೋಜಿತ ರೀತಿಯಲ್ಲಿ ಜಾರಿಗೊಳಿಸಲು ಶ್ರದ್ಧೆಯಿಂದ ಕಾರ್ಯನಿರ್ವಹಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ತೀವ್ರ ಬಡತನ ಸೇರಿದಂತೆ ಎಲ್ಲ ಸ್ವರೂಪಗಳ ಬಡತನವನ್ನು ನಿರ್ಮೂಲನೆ ಮಾಡುವುದು ಜಾಗತಿಕ ಮಟ್ಟದ ಅತ್ಯಂತ ಮಹತ್ವದ ಸವಾಲಾಗಿದ್ದು, ಸುಸ್ಥಿರ ಅಭಿವೃದ್ಧಿಗೆ ಅದು ಪೂರ್ವಾಪೇಕ್ಷಿತವಾಗಿದೆ ಎಂಬುದನ್ನು ಗುರುತಿಸುತ್ತೇವೆ. 2030ರ ಕಾರ್ಯಸೂಚಿಯನ್ನು ನಾವೀನ್ಯತೆಯೊಂದಿಗೆ, ಸಮನ್ವಯದಿಂದ, ಪರಿಸರಸ್ನೇಹಿಯಾಗಿ, ಮುಕ್ತವಾಗಿ ಮತ್ತು ಹಂಚಿಕೆಯ ಸಹಕಾರದ ಮೂಲಕ ಉತ್ತೇಜಿಸುವ ಮಹತ್ವವನ್ನೂ ಗುರುತಿಸುತ್ತೇವೆ. 2030ರ ನಂತರದ ಸುಸ್ಥಿರ ಅಭಿವೃದ್ಧಿಯ ಜಾಗತಿಕ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಬ್ರಿಕ್ಸ್ ರಾಷ್ಟ್ರಗಳು ನಿಕಟ ಸಹಕಾರ ಮತ್ತು ಮಹತ್ವದ ಕೊಡುಗೆಯನ್ನು ನಾವು ಎದುರುನೋಡುತ್ತಿದ್ದೇವೆ.
- ಹವಾಮಾನ ಬದಲಾವಣೆಯನ್ನು ಎದುರಿಸುವ ತುರ್ತು ಅಗತ್ಯವನ್ನು ಗುರುತಿಸಿ, ಸಂವಾದ ಮತ್ತು ಅಂತರರಾಷ್ಟ್ರೀಯ ಸಹಕಾರದ ಮೂಲಕ ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳನ್ನು (ಎನ್ಡಿಸಿಗಳು) ಜಾರಿಗೊಳಿಸಲು, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಮತ್ತು ಅವುಗಳಿಗೆ ಹೊಂದಿಕೊಳ್ಳುವ ಪ್ರಯತ್ನಗಳನ್ನು ಬಲಪಡಿಸಲು ಹಾಗೂ ನ್ಯಾಯಸಮ್ಮತ ಪರಿವರ್ತನೆಯ ಮಾರ್ಗಗಳನ್ನು ಉತ್ತೇಜಿಸಲು ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಕರೆ ನೀಡುತ್ತೇವೆ. ಅನ್ವಯವಾಗುವ ಸಂದರ್ಭಗಳಲ್ಲಿ, ವಿವಿಧ ರಾಷ್ಟ್ರಗಳ ರಾಷ್ಟ್ರೀಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಸಮಾನತೆ ಹಾಗೂ ಸಾಮಾನ್ಯವಾದರೂ ವಿಭಿನ್ನ ಹೊಣೆಗಾರಿಕೆಗಳು ಮತ್ತು ಆಯಾ ಸಾಮರ್ಥ್ಯಗಳ ತತ್ವವನ್ನು ಪ್ರತಿಬಿಂಬಿಸುತ್ತಾ, ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಒಪ್ಪಂದದ (ಯುಎನ್ಎಫ್ಸಿಸಿಸಿ) ಉದ್ದೇಶಗಳು ಮತ್ತು ಅದರ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸುವುದು ಇದರ ಉದ್ದೇಶವಾಗಿದೆ. ಹೊಂದಾಣಿಕೆ ಕ್ರಮಗಳಿಗಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪರಸ್ಪರ ಒಪ್ಪಿಕೊಂಡ ಷರತ್ತುಗಳ ಆಧಾರದ ಮೇಲೆ ಹೆಚ್ಚುವರಿ, ಸಾಕಷ್ಟು, ಊಹಿಸಬಹುದಾದ ಮತ್ತು ಸುಲಭವಾಗಿ ಲಭ್ಯವಾಗುವ ಹಣಕಾಸು ಸಂಪನ್ಮೂಲಗಳು, ಸಾಮರ್ಥ್ಯ ವೃದ್ಧಿ ಬೆಂಬಲ ಹಾಗೂ ತಂತ್ರಜ್ಞಾನ ಅಭಿವೃದ್ಧಿ ಮತ್ತು ವರ್ಗಾವಣೆಯನ್ನು ಒದಗಿಸಬೇಕು.
- ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು (ಐಸಿಟಿಗಳು) ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಪರಿವರ್ತನಾತ್ಮಕ ಸಾಮರ್ಥ್ಯವನ್ನು ನಾವು ಗುರುತಿಸುತ್ತೇವೆ. ಪ್ರತಿಯೊಂದು ದೇಶದ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಯನ್ನು ಗೌರವಿಸುತ್ತಾ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಪರಿಸರವನ್ನು ಮುಕ್ತ, ಸುರಕ್ಷಿತ, ಭದ್ರ, ಸ್ಥಿರ, ಸಮಾನವಾಗಿ ಲಭ್ಯವಾಗುವ, ಶಾಂತಿಯುತ ಹಾಗೂ ಪರಸ್ಪರ ಕಾರ್ಯಸಾಧ್ಯವಾದ ರೀತಿಯಲ್ಲಿ ಬಳಸುವುದು ಮತ್ತು ಅಭಿವೃದ್ಧಿಪಡಿಸುವುದು ಅಗತ್ಯವೆಂದು ಒತ್ತಿಹೇಳುತ್ತೇವೆ.
- ಕೃತಕ ಬುದ್ಧಿಮತ್ತೆಯು ಎಲ್ಲರಿಗೂ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಅಪಾರ ಅವಕಾಶಗಳನ್ನು ಒದಗಿಸುತ್ತದೆ ಎಂಬುದನ್ನು ನಾವು ಗುರುತಿಸುತ್ತೇವೆ. ರಾಷ್ಟ್ರೀಯ ಆದ್ಯತೆಗಳು ಮತ್ತು ಅನ್ವಯವಾಗುವ ಕಾನೂನುಗಳಿಗೆ ಅನುಗುಣವಾಗಿ, ಎಐ ಸಂಪನ್ಮೂಲಗಳು, ಸಾಮರ್ಥ್ಯ ವೃದ್ಧಿ, ಜ್ಞಾನ ಮತ್ತು ಅವಕಾಶಗಳಿಗೆ ಸಮಾನ ಪ್ರವೇಶವನ್ನು ಹೆಚ್ಚಿಸುವಲ್ಲಿ ಅಂತರರಾಷ್ಟ್ರೀಯ ಸಹಕಾರದ ಮಹತ್ವವನ್ನೂ ಗಮನಿಸುತ್ತೇವೆ. ಅದೇ ವೇಳೆ, ಎಐನ ಸುರಕ್ಷಿತ, ಭದ್ರ, ಅಂತರ್ಗತ ಮತ್ತು ವಿಶ್ವಾಸಾರ್ಹ ಅಭಿವೃದ್ಧಿ ಹಾಗೂ ಬಳಕೆಯನ್ನು ಖಚಿತಪಡಿಸಬೇಕು. ಎಐ ವ್ಯವಸ್ಥೆಗಳ ಇಂಧನ ದಕ್ಷತೆಯನ್ನು ಉತ್ತೇಜಿಸುವುದು, ಎಐ ವಿಜ್ಞಾನ ಮತ್ತು ನಾವೀನ್ಯತೆಯನ್ನು ಬೆಳೆಸುವುದು, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಒಳಿತಿಗಾಗಿ ಎಐ ಬಳಸುವುದು ಹಾಗೂ ಸಂಭಾವ್ಯ ಅಪಾಯಗಳನ್ನು ತಗ್ಗಿಸುವುದು ಎಲ್ಲ ರಾಷ್ಟ್ರಗಳಿಗೂ, ವಿಶೇಷವಾಗಿ ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ, ನ್ಯಾಯಸಮ್ಮತ, ಸಮಾನ ಮತ್ತು ಸಮೃದ್ಧ ಭವಿಷ್ಯವನ್ನು ರೂಪಿಸಲು ಅತ್ಯಗತ್ಯವಾಗಿದೆ. ವೈಯಕ್ತಿಕ ಮಾಹಿತಿಯ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವುದರ ಜೊತೆಗೆ, ಸ್ಥಿತಿಸ್ಥಾಪಕ ರಾಷ್ಟ್ರೀಯ ತಾಂತ್ರಿಕ ವ್ಯವಸ್ಥೆಗಳನ್ನು ನಿರ್ಮಿಸುವ ಮೂಲಕ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಡಿಜಿಟಲ್ ಸಾರ್ವಭೌಮತ್ವವನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳುತ್ತೇವೆ.
- ಸಂಸದೀಯ ಸಂಶೋಧನೆ, ವಿಶ್ಲೇಷಣೆ, ಸಂಪರ್ಕ ಕಾರ್ಯಕ್ರಮಗಳು, ನಾಗರಿಕರೊಂದಿಗಿನ ಸಂವಹನ ಮತ್ತು ಪ್ರತಿಕ್ರಿಯೆ ಸಂಗ್ರಹಣೆ ಸೇರಿದಂತೆ ಸಂಸತ್ತುಗಳ ಕಾರ್ಯನಿರ್ವಹಣೆಯನ್ನು ಬಲಪಡಿಸಲು ಡಿಜಿಟಲ್ ತಂತ್ರಜ್ಞಾನಗಳು ಮತ್ತು ಎಐ ಆಧಾರಿತ ಪರಿಹಾರಗಳನ್ನು ಬಳಸುವಲ್ಲಿ ಗಮನಾರ್ಹ ಸಾಮರ್ಥ್ಯವಿದೆ ಎಂಬುದನ್ನು ನಾವು ಗುರುತಿಸುತ್ತೇವೆ. ತಾಂತ್ರಿಕ ಪ್ರಗತಿಯಿಂದ ಶಾಸಕಾಂಗ ಸಂಸ್ಥೆಗಳು ನಾವೀನ್ಯತೆಯನ್ನು ಅಳವಡಿಸಿಕೊಳ್ಳಲು ಮತ್ತು ಸಮಾನವಾಗಿ ಪ್ರಯೋಜನ ಪಡೆಯಲು ಅನುಕೂಲವಾಗುವಂತೆ, ಡಿಜಿಟಲ್ ತಂತ್ರಜ್ಞಾನಗಳು ಹಾಗೂ ಎಐ ಆಧಾರಿತ ಸಾಧನಗಳ ಬಳಕೆಯ ಯಶಸ್ವಿ ಉದಾಹರಣೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸಂಸತ್ತುಗಳು ಪರಸ್ಪರ ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುತ್ತೇವೆ.
- ಎಲ್ಲರಿಗೂ ಸಾರ್ವತ್ರಿಕ ಮತ್ತು ಅರ್ಥಪೂರ್ಣ ಸಂಪರ್ಕ ಸೌಲಭ್ಯ ಒದಗಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ, ಸುಧಾರಿತ ಸಾರ್ವಜನಿಕ ಸೇವಾ ವಿತರಣೆ ಹಾಗೂ ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸೇರಿದಂತೆ ಡಿಜಿಟಲ್ ಮೂಲಸೌಕರ್ಯಗಳ ಸ್ಥಾಪನೆಗೆ ಅನುಕೂಲವಾಗುವಂತೆ ಸಹಯೋಗದ ಪ್ರಯತ್ನಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುತ್ತೇವೆ. ಈ ಹಿನ್ನೆಲೆಯಲ್ಲಿ, ಬ್ರಿಕ್ಸ್ ರಾಷ್ಟ್ರಗಳಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಂಡಾರವನ್ನು ಆರಂಭಿಸುವ ಪ್ರಸ್ತಾವನೆ ಹಾಗೂ ಬ್ರಿಕ್ಸ್ ರಾಷ್ಟ್ರಗಳ ಡಿಜಿಟಲ್ ಪರಿವರ್ತನೆಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಪರಿಹಾರಗಳ ಪ್ರಾಯೋಗಿಕ ಯೋಜನೆಗಳನ್ನು ಆರಂಭಿಸುವ ಪ್ರಸ್ತಾವನೆಯನ್ನು ನಾವು ಗಮನಿಸುತ್ತೇವೆ.
- ವ್ಯಾಪಕ ಸಮಾಲೋಚನೆ, ಜಂಟಿ ಕೊಡುಗೆ ಮತ್ತು ಹಂಚಿಕೆಯ ಪ್ರಯೋಜನಗಳ ಆಶಯದೊಂದಿಗೆ, ಹೆಚ್ಚು ನ್ಯಾಯಯುತ, ಸಮಾನ, ಚುರುಕಾದ, ಪರಿಣಾಮಕಾರಿ, ದಕ್ಷ, ಸ್ಪಂದನಶೀಲ, ಪ್ರಾತಿನಿಧಿಕ, ಕಾನೂನುಬದ್ಧ, ಪ್ರಜಾಸತ್ತಾತ್ಮಕ ಮತ್ತು ಉತ್ತರದಾಯಿತ್ವ ಹೊಂದಿರುವ ಅಂತರರಾಷ್ಟ್ರೀಯ ಹಾಗೂ ಬಹುಪಕ್ಷೀಯ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಬಹುಧ್ರುವೀಯತೆ ಮತ್ತು ಬಹುಪಕ್ಷೀಯತೆಯು ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ (ಇಎಂಡಿಸಿಗಳು) ತಮ್ಮ ಸಾಮರ್ಥ್ಯವನ್ನು ಸಾಕಾರಗೊಳಿಸಲು ಹಾಗೂ ಎಲ್ಲರಿಗೂ ಪ್ರಯೋಜನಕಾರಿಯಾದ, ಒಳಗೊಳ್ಳ್ಳುವಿಕೆಯ, ಸುಸ್ಥಿರ ಮತ್ತು ಸಮಾನ ಆರ್ಥಿಕ ಜಾಗತೀಕರಣ ಹಾಗೂ ಸಹಕಾರದ ಪ್ರಯೋಜನಗಳನ್ನು ಪಡೆಯಲು ಹೆಚ್ಚಿನ ಅವಕಾಶಗಳನ್ನು ಒದಗಿಸಬಲ್ಲವು ಎಂಬುದನ್ನು ಗುರುತಿಸುತ್ತೇವೆ. ಸಕಾರಾತ್ಮಕ ಬದಲಾವಣೆಗೆ ಚಾಲನೆ ನೀಡುವ ಶಕ್ತಿಯಾಗಿ ಜಾಗತಿಕ ದಕ್ಷಿಣದ ಮಹತ್ವವನ್ನು ಎತ್ತಿಹಿಡಿಯುತ್ತೇವೆ. ಸ್ವಯಂಪ್ರೇರಿತ ಅಭಿವೃದ್ಧಿ ಸಹಕಾರ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಅದರ ಕಳವಳಗಳು ಮತ್ತು ಆದ್ಯತೆಗಳಿಗೆ ಧ್ವನಿಯಾಗುವಲ್ಲಿ ಬ್ರಿಕ್ಸ್ನ ಪಾತ್ರವನ್ನು ಪುನರುಚ್ಚರಿಸುತ್ತೇವೆ.
- ಸದಸ್ಯ ರಾಷ್ಟ್ರಗಳ ಸಂಸತ್ತುಗಳ ಸಾಂವಿಧಾನಿಕ ಅಧಿಕಾರ ವ್ಯಾಪ್ತಿ ಮತ್ತು ಕಾರ್ಯವ್ಯಾಪ್ತಿಯೊಳಗೆ, ಹೆಚ್ಚು ಪ್ರಾತಿನಿಧಿಕ ಮತ್ತು ಒಳಗೊಳ್ಳುವಿಕೆಯ ಜಾಗತಿಕ ಆಡಳಿತ ವ್ಯವಸ್ಥೆಯನ್ನು ರೂಪಿಸುವಲ್ಲಿ ಸಂಸದೀಯ ರಾಜತಾಂತ್ರಿಕತೆ, ಸಂಸತ್ತುಗಳ ನಡುವಿನ ಸಂವಾದ ಮತ್ತು ಸಹಕಾರದ ಕೊಡುಗೆಯನ್ನು ನಾವು ಒತ್ತಿಹೇಳುತ್ತೇವೆ.
- ಬಹುಪಕ್ಷೀಯತೆಯನ್ನು ಬಲಪಡಿಸುವ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಇದರಲ್ಲಿ ವಿಶ್ವಸಂಸ್ಥೆಯ ಚಾರ್ಟರ್ನಲ್ಲಿ ಪ್ರತಿಪಾದಿಸಲಾದ ಉದ್ದೇಶಗಳು ಮತ್ತು ತತ್ವಗಳೂ ಸೇರಿವೆ; ಅವು ಅಂತರರಾಷ್ಟ್ರೀಯ ಕಾನೂನಿನ ಅನಿವಾರ್ಯ ಅಡಿಪಾಯಗಳಾಗಿವೆ. ಸಾರ್ವಭೌಮ ರಾಷ್ಟ್ರಗಳು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು, ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸಲು, ಎಲ್ಲರಿಗೂ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳ ಉತ್ತೇಜನ ಹಾಗೂ ರಕ್ಷಣೆಯನ್ನು ಖಚಿತಪಡಿಸಲು ಸಹಕರಿಸುವ ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿ ವಿಶ್ವಸಂಸ್ಥೆಯು ಕೇಂದ್ರ ಪಾತ್ರ ವಹಿಸುತ್ತದೆ ಎಂಬುದನ್ನು ನಾವು ಒತ್ತಿಹೇಳುತ್ತೇವೆ. ದೇಶಗಳ ರಾಷ್ಟ್ರೀಯ ಪರಿಸ್ಥಿತಿಗಳು, ರಾಷ್ಟ್ರೀಯ ವ್ಯವಸ್ಥೆಗಳ ವೈವಿಧ್ಯತೆ ಮತ್ತು ಅಭಿವೃದ್ಧಿಯ ಮಾರ್ಗಗಳನ್ನು ಗೌರವಿಸುತ್ತಾ, ಅಂತರರಾಷ್ಟ್ರೀಯ ಕಾನೂನಿನಡಿ ರಾಷ್ಟ್ರಗಳ ಬಾಧ್ಯತೆಗಳಿಗೆ ಅನುಗುಣವಾಗಿ, ಒಗ್ಗಟ್ಟು, ಪರಸ್ಪರ ಗೌರವ, ನ್ಯಾಯ ಮತ್ತು ಸಾರ್ವಭೌಮ ಸಮಾನತೆಯ ಆಧಾರದ ಮೇಲಿನ ಸಹಕಾರವನ್ನು ಬೆಳೆಸಬೇಕು. ಪರಸ್ಪರ ಪ್ರಯೋಜನಕಾರಿ ಸಹಕಾರದ ಆಧಾರದ ಮೇಲೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಉಜ್ವಲವಾದ ಹಂಚಿಕೆಯ ಭವಿಷ್ಯವನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.
- ಪ್ರಸ್ತುತ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ತುರ್ತು ಅಗತ್ಯವಾಗಿದೆ ಎಂದು ನಾವು ಒತ್ತಿಹೇಳುತ್ತೇವೆ. ಇದಕ್ಕಾಗಿ ಬಹುಪಕ್ಷೀಯತೆಯನ್ನು ಬಲಪಡಿಸುವುದು ಅತ್ಯಗತ್ಯ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ವಿಶ್ವಸಂಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲು ನಾವು ಬೆಂಬಲಿಸುತ್ತೇವೆ. ಸಮಕಾಲೀನ ವಾಸ್ತವಗಳು ಮತ್ತು ಅಂತರರಾಷ್ಟ್ರೀಯ ಸಮುದಾಯದ ಅಗತ್ಯಗಳನ್ನು ಉತ್ತಮವಾಗಿ ಪ್ರತಿಬಿಂಬಿಸುವಂತೆ, ಈ ಸುಧಾರಣೆಯು ವಿಶ್ವಸಂಸ್ಥೆಯನ್ನು ಹೆಚ್ಚು ನ್ಯಾಯಯುತ, ಸಮಾನ, ಪ್ರಜಾಸತ್ತಾತ್ಮಕ, ಪ್ರಾತಿನಿಧಿಕ, ಪರಿಣಾಮಕಾರಿ ಮತ್ತು ದಕ್ಷವಾಗಿಸಬೇಕು. ಈ ಹಿನ್ನೆಲೆಯಲ್ಲಿ, 2026ರ ಬ್ರಿಕ್ಸ್ ನವದೆಹಲಿ ಘೋಷಣೆಯ 13ನೇ ಪ್ಯಾರಾಗ್ರಾಫ್ನಲ್ಲಿರುವ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ.
- ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸುವುದು, ಮಾನವೀಯ ನೆರವು ತಲುಪುವುದನ್ನು ನಿರಾಕರಿಸುವುದು ಅಥವಾ ತಡೆಯುವುದು ಹಾಗೂ ಮಾನವೀಯ ನೆರವು ಕಾರ್ಯಕರ್ತರನ್ನು ಗುರಿಯಾಗಿಸುವುದು ಸೇರಿದಂತೆ ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಎಲ್ಲ ಉಲ್ಲಂಘನೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಹಿನ್ನೆಲೆಯಲ್ಲಿ, 2026ರ ಬ್ರಿಕ್ಸ್ ನವದೆಹಲಿ ಘೋಷಣೆಯ 29ನೇ ಪ್ಯಾರಾಗ್ರಾಫ್ ಅನ್ನು ಗಮನಕ್ಕೆ ತೆಗೆದುಕೊಳ್ಳುತ್ತೇವೆ. ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಎಲ್ಲ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ಖಚಿತಪಡಿಸುವ ಅಗತ್ಯವನ್ನು ಒತ್ತಿಹೇಳುತ್ತೇವೆ. ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಗೌರವ, ಪಾಲನೆ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಉತ್ತೇಜಿಸಲು ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಕೈಗೊಂಡಿರುವ ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಗುರುತಿಸುತ್ತೇವೆ.
- ಮಧ್ಯಪ್ರಾಚ್ಯ/ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿರುವ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ. ಆಯಾ ರಾಷ್ಟ್ರಗಳ ರಾಷ್ಟ್ರೀಯ ನಿಲುವುಗಳನ್ನು ಗಮನದಲ್ಲಿಟ್ಟುಕೊಂಡು, ಗರಿಷ್ಠ ಸಂಯಮವನ್ನು ವಹಿಸುವಂತೆ ಹಾಗೂ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದಾದ ಕ್ರಮಗಳನ್ನು ತಪ್ಪಿಸುವಂತೆ ಕರೆ ನೀಡುತ್ತೇವೆ. ಅಲ್ಲದೆ, ವಿಶ್ವಸಂಸ್ಥೆಯ ಚಾರ್ಟರ್ನ ಉದ್ದೇಶಗಳು ಮತ್ತು ತತ್ವಗಳನ್ನು ಸಂಪೂರ್ಣವಾಗಿ ಹಾಗೂ ಪರಸ್ಪರ ಸಂಬಂಧದೊಂದಿಗೆ ಪಾಲಿಸುವ ಮೂಲಕ, ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದೂ ಸೇರಿದಂತೆ, ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ರಕ್ಷಣೆಯನ್ನು ಖಚಿತಪಡಿಸುವಂತೆ ಒತ್ತಾಯಿಸುತ್ತೇವೆ. ಈ ಪ್ರದೇಶದಲ್ಲಿ ಶಾಶ್ವತ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಕೊಡುಗೆ ನೀಡುವ ದೀರ್ಘಕಾಲೀನ ತಿಳುವಳಿಕೆಯನ್ನು ಬೆಳೆಸಲು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಹೆಚ್ಚಿನ ಪ್ರಯತ್ನಗಳನ್ನು ಕೈಗೊಳ್ಳುವಂತೆ ಕರೆ ನೀಡುತ್ತೇವೆ. ಅನ್ವಯವಾಗುವ ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಜಾಗತಿಕ ವ್ಯಾಪಾರ, ಪೂರೈಕೆ ಸರಪಳಿಗಳು ಮತ್ತು ಇಂಧನ ಪೂರೈಕೆಯ ನಿರಂತರ ಸುಗಮ ಹರಿವನ್ನು ಕಾಪಾಡಲು ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿಹೇಳುತ್ತೇವೆ.
- ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿರುವ ಏಕಪಕ್ಷೀಯ ಬಲವಂತದ ಕ್ರಮಗಳನ್ನು ನಾವು ಖಂಡಿಸುತ್ತೇವೆ. ಏಕಪಕ್ಷೀಯ ಆರ್ಥಿಕ ನಿರ್ಬಂಧಗಳು ಮತ್ತು ದ್ವಿತೀಯ ನಿರ್ಬಂಧಗಳ ರೂಪದಲ್ಲಿರುವ ಇಂತಹ ಕ್ರಮಗಳು, ಗುರಿಯಾಗಿಸಲಾದ ರಾಷ್ಟ್ರಗಳ ಸಾಮಾನ್ಯ ಜನರ ಮಾನವ ಹಕ್ಕುಗಳ ಮೇಲೆ, ವಿಶೇಷವಾಗಿ ಅಭಿವೃದ್ಧಿಯ ಹಕ್ಕು, ಆರೋಗ್ಯ ಮತ್ತು ಆಹಾರ ಭದ್ರತೆಯ ಮೇಲೆ, ವ್ಯಾಪಕವಾದ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದನ್ನು ಪುನರುಚ್ಚರಿಸುತ್ತೇವೆ. ಅಂತರರಾಷ್ಟ್ರೀಯ ಕಾನೂನು ಹಾಗೂ ವಿಶ್ವಸಂಸ್ಥೆಯ ಚಾರ್ಟರ್ನ ತತ್ವಗಳು ಮತ್ತು ಉದ್ದೇಶಗಳನ್ನು ದುರ್ಬಲಗೊಳಿಸುವ ಇಂತಹ ಕಾನೂನುಬಾಹಿರ ಕ್ರಮಗಳನ್ನು ರದ್ದುಗೊಳಿಸುವಂತೆ ಕರೆ ನೀಡುತ್ತೇವೆ.
- ಭಯೋತ್ಪಾದನೆಯ ಯಾವುದೇ ಕೃತ್ಯವು ಅಪರಾಧ ಮತ್ತು ಯಾವುದೇ ಸಮರ್ಥನೆಯಿಲ್ಲದ ಕೃತ್ಯವಾಗಿದೆ ಎಂದು ನಾವು ಬಲವಾಗಿ ಖಂಡಿಸುತ್ತೇವೆ. ಅದರ ಉದ್ದೇಶ ಏನೇ ಇರಲಿ, ಅದು ಎಲ್ಲಿ, ಯಾವಾಗ ಮತ್ತು ಯಾರಿಂದ ನಡೆದಿರಲಿ, ಅದನ್ನು ಖಂಡಿಸುತ್ತೇವೆ. 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇವೆ. ಆ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದು, ಇನ್ನೂ ಅನೇಕರು ಗಾಯಗೊಂಡಿದ್ದರು. ಗಡಿಯಾಚೆಯಿಂದ ಭಯೋತ್ಪಾದಕರ ಸಂಚಾರ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಮತ್ತು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ಒದಗಿಸುವುದು ಸೇರಿದಂತೆ, ಭಯೋತ್ಪಾದನೆಯ ಎಲ್ಲ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ಹೋರಾಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಭಯೋತ್ಪಾದನೆಯನ್ನು ಯಾವುದೇ ಧರ್ಮ, ರಾಷ್ಟ್ರೀಯತೆ, ನಾಗರಿಕತೆ ಅಥವಾ ಜನಾಂಗೀಯ ಗುಂಪಿನೊಂದಿಗೆ ಗುರುತಿಸಬಾರದು ಎಂಬುದನ್ನು ಪುನರುಚ್ಚರಿಸುತ್ತೇವೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವವರು ಮತ್ತು ಅವುಗಳಿಗೆ ಬೆಂಬಲ ನೀಡುವ ಎಲ್ಲರನ್ನೂ ಸಂಬಂಧಿತ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಹೊಣೆಗಾರರನ್ನಾಗಿ ಮಾಡಿ ನ್ಯಾಯದ ಕಟಕಟೆಗೆ ತರಬೇಕು. ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಖಚಿತಪಡಿಸುವಂತೆ ಕರೆ ನೀಡುತ್ತೇವೆ ಮತ್ತು ಭಯೋತ್ಪಾದನೆ ನಿಗ್ರಹದಲ್ಲಿ ದ್ವಂದ್ವ ಮಾನದಂಡಗಳನ್ನು ತಿರಸ್ಕರಿಸುತ್ತೇವೆ. ಭಯೋತ್ಪಾದನೆಯನ್ನು ಎದುರಿಸುವಲ್ಲಿ ರಾಷ್ಟ್ರಗಳೇ ಪ್ರಾಥಮಿಕ ಹೊಣೆಗಾರಿಕೆಯನ್ನು ಹೊಂದಿವೆ ಎಂಬುದನ್ನು ಒತ್ತಿಹೇಳುತ್ತೇವೆ. ಭಯೋತ್ಪಾದಕ ಬೆದರಿಕೆಗಳನ್ನು ತಡೆಗಟ್ಟಲು ಮತ್ತು ಎದುರಿಸಲು ಕೈಗೊಳ್ಳುವ ಜಾಗತಿಕ ಪ್ರಯತ್ನಗಳು ವಿಶ್ವಸಂಸ್ಥೆಯ ಚಾರ್ಟರ್, ಅದರಲ್ಲಿಯೂ ವಿಶೇಷವಾಗಿ ಅದರ ಉದ್ದೇಶಗಳು ಮತ್ತು ತತ್ವಗಳು, ಸಂಬಂಧಿತ ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಶಿಷ್ಟಾಚಾರಗಳು ಹಾಗೂ ಅನ್ವಯವಾಗುವ ಸಂದರ್ಭಗಳಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು, ಅಂತರರಾಷ್ಟ್ರೀಯ ನಿರಾಶ್ರಿತರ ಕಾನೂನು ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನು ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನಡಿ ರಾಷ್ಟ್ರಗಳ ಬಾಧ್ಯತೆಗಳಿಗೆ ಸಂಪೂರ್ಣವಾಗಿ ಅನುಗುಣವಾಗಿರಬೇಕು. ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಕಾರ್ಯತಂತ್ರ, ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಕಾರ್ಯಯೋಜನೆ ಮತ್ತು ಭಯೋತ್ಪಾದನೆ ನಿಗ್ರಹ ಕಾರ್ಯಪಡೆ (ಸಿಟಿಡಬ್ಲ್ಯುಜಿ)ಯ ಪೊಸಿಷನ್ ಪೇಪರ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಕಾರ್ಯಪಡೆ (ಸಿಟಿಡಬ್ಲ್ಯುಜಿ) ಮತ್ತು ಅದರ ಐದು ಉಪಗುಂಪುಗಳ ಚಟುವಟಿಕೆಗಳನ್ನು ಸ್ವಾಗತಿಸುತ್ತೇವೆ. ಭಯೋತ್ಪಾದನೆ ನಿಗ್ರಹ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ನಿರೀಕ್ಷೆಯಲ್ಲಿದ್ದೇವೆ. ವಿಶ್ವಸಂಸ್ಥೆಯ ಚೌಕಟ್ಟಿನಡಿ ಅಂತರರಾಷ್ಟ್ರೀಯ ಭಯೋತ್ಪಾದನೆಯ ಸಮಗ್ರ ಸಮಾವೇಶವನ್ನು ತ್ವರಿತವಾಗಿ ಅಂತಿಮಗೊಳಿಸಿ ಅಂಗೀಕರಿಸುವಂತೆ ಕರೆ ನೀಡುತ್ತೇವೆ. ವಿಶ್ವಸಂಸ್ಥೆಯಿಂದ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳೆಂದು ಗೊತ್ತುಪಡಿಸಲಾದ ಎಲ್ಲರ ವಿರುದ್ಧ ಒಗ್ಗಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕರೆ ನೀಡುತ್ತೇವೆ.
- ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಸಂಬಂಧಿತ ನಿರ್ಣಯಗಳಿಗೆ ಅನುಗುಣವಾಗಿ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎಂಬ ಎರಡು ರಾಷ್ಟ್ರಗಳು ಶಾಂತಿ ಮತ್ತು ಭದ್ರತೆಯೊಂದಿಗೆ ಅಕ್ಕಪಕ್ಕದಲ್ಲಿ ಸಹಬಾಳ್ವೆ ನಡೆಸುವ ದ್ವಿರಾಷ್ಟ್ರ ಪರಿಹಾರದ ಆಧಾರದ ಮೇಲೆ ಇಸ್ರೇಲ್– ಪ್ಯಾಲೆಸ್ತೀನ್ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವುದಕ್ಕೆ ನಮ್ಮ ಅಚಲ ಬೆಂಬಲವನ್ನು ಪುನರುಚ್ಚರಿಸುತ್ತೇವೆ. ಪ್ಯಾಲೆಸ್ತೀನ್ ಜನರ ಸ್ವಯಂ ನಿರ್ಣಯದ ಹಕ್ಕು, ಸ್ವಾತಂತ್ರ್ಯ ಮತ್ತು ಸ್ವತಂತ್ರ ಸಾರ್ವಭೌಮ ರಾಷ್ಟ್ರವನ್ನು ಹೊಂದುವ ಹಕ್ಕನ್ನು ಪ್ರತಿಪಾದಿಸುತ್ತೇವೆ.
- ಪರಿಣಾಮಕಾರಿ ಸಂಸದೀಯ ಸಹಕಾರವನ್ನು ಬೆಳೆಸುವಲ್ಲಿ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ನಿರ್ಣಾಯಕವಾಗಿವೆ ಎಂಬುದನ್ನು ನಾವು ಗುರುತಿಸುತ್ತೇವೆ. ಆದ್ದರಿಂದ, ಸಂಸದರು ಹಾಗೂ ಅವರ ತಾಂತ್ರಿಕ ಮತ್ತು ಶಾಸಕಾಂಗ ಸಲಹೆಗಾರರ ನಡುವೆ ಅನುಭವ ವಿನಿಮಯ, ಜ್ಞಾನ ಹಂಚಿಕೆ ಮತ್ತು ಸಹಯೋಗವನ್ನು ಉತ್ತೇಜಿಸುವ ಮೂಲಕ ಸಾಮರ್ಥ್ಯ ವೃದ್ಧಿ ಹಾಗೂ ವೃತ್ತಿಪರ ಸಂಪರ್ಕ ಜಾಲಗಳನ್ನು ಬಲಪಡಿಸಲು ಕರೆ ನೀಡುತ್ತೇವೆ.
- 2024ರ ಜುಲೈ 11ರಂದು ಅಂಗೀಕರಿಸಲಾದ ಬ್ರಿಕ್ಸ್ ಸಂಸದೀಯ ವೇದಿಕೆಯ ಕುರಿತ ತಿಳಿವಳಿಕೆ ಒಪ್ಪಂದದ ಪ್ರೋಟೋಕಾಲ್ನ 8ನೇ ಪ್ಯಾರಾಗ್ರಾಫ್ಗೆ ಅನುಗುಣವಾಗಿ, ಕ್ರೀಡಾ ಕ್ಷೇತ್ರದಲ್ಲಿ ಸಂಸತ್ತುಗಳ ನಡುವಿನ ಬ್ರಿಕ್ಸ್ ಕಾರ್ಯಕಾರಿ ಗುಂಪನ್ನು ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸುವ ರಷ್ಯಾದ ಪ್ರಸ್ತಾವನೆಯನ್ನು ಗಮನಕ್ಕೆ ತೆಗೆದುಕೊಳ್ಳುತ್ತೇವೆ. ರಾಷ್ಟ್ರೀಯ ಕಾನೂನುಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ, ಕ್ರೀಡೆ ಮತ್ತು ದೈಹಿಕ ಶಿಕ್ಷಣ ಕ್ಷೇತ್ರಗಳಲ್ಲಿ ಅನುಭವ ಹಾಗೂ ಉತ್ತಮ ಅಭ್ಯಾಸಗಳನ್ನು ಸ್ವಯಂಪ್ರೇರಿತವಾಗಿ ವಿನಿಮಯ ಮಾಡಿಕೊಳ್ಳಲು ಈ ಗುಂಪು ವೇದಿಕೆಯನ್ನು ಒದಗಿಸುತ್ತದೆ.
- ಬ್ರಿಕ್ಸ್ ಮಹಿಳಾ ಸಂಸದರ ವೇದಿಕೆಯ 10ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಂಸತ್ತುಗಳ ನಡುವಿನ ಚರ್ಚೆಗಳು ಹೆಚ್ಚು ಒಳಗೊಳ್ಳುವ ಉದ್ದೇಶದಿಂದ ಈ ಸಭೆಯನ್ನು ವಾರ್ಷಿಕ ಕಾರ್ಯಕ್ರಮವನ್ನಾಗಿ ಸಾಂಸ್ಥಿಕಗೊಳಿಸಲು ಕರೆ ನೀಡಿದ್ದ 2016ರ ಜೈಪುರ ಘೋಷಣೆಯನ್ನು ನಾವು ಸ್ಮರಿಸುತ್ತೇವೆ. ಪರಸ್ಪರ ತಿಳುವಳಿಕೆಯನ್ನು ಆಳಗೊಳಿಸಲು ಹಾಗೂ ಅನುಭವಗಳು ಮತ್ತು ಶಾಸಕಾಂಗದ ಉತ್ತಮ ಅಭ್ಯಾಸಗಳ ವಿನಿಮಯಕ್ಕೆ ಅನುಕೂಲ ಕಲ್ಪಿಸಲು ಕೊಡುಗೆ ನೀಡುವ ಬ್ರಿಕ್ಸ್ ಸಂಸತ್ತುಗಳ ಅಂತರರಾಷ್ಟ್ರೀಯ ವ್ಯವಹಾರಗಳ ಸಮಿತಿಗಳ ಅಧ್ಯಕ್ಷರ ಸಭೆಗಳ ಮೂಲಕ ಸಂಸತ್ತುಗಳ ನಡುವಿನ ಪರಸ್ಪರ ಸಂಪರ್ಕವನ್ನು ಬಲಪಡಿಸುವಂತೆಯೂ ಕರೆ ನೀಡುತ್ತೇವೆ.
- 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಭಾರತದ ಸಂಸತ್ತನ್ನು ಅಭಿನಂದಿಸುತ್ತೇವೆ. ಭಾರತದ ಸಂಸತ್ತು ಮತ್ತು ಜನರು ನಮಗೆ ನೀಡಿದ ಆತಿಥ್ಯಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
- ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಬ್ರಿಕ್ಸ್ ಅಧ್ಯಕ್ಷತೆಯಡಿಯಲ್ಲಿ 2027ರಲ್ಲಿ ಮತ್ತೆ ಸಮಾವೇಶಗೊಳ್ಳುವುದನ್ನು ಎದುರುನೋಡುತ್ತಿದ್ದೇವೆ.
*****
(ಪ್ರಕಟಣೆ ಐ.ಡಿ.: 2329210)
|