ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಬಲಪಡಿಸಲು ನೆದರ್‌ ಲ್ಯಾಂಡ್ಸ್ ನಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್

ಪ್ರಕಟಣಾ ದಿನಾಂಕ: 27 OCT 2026 9:54AM by PIB Bengaluru

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು 26 ಅಕ್ಟೋಬರ್ 2026 ರಂದು ನೆದರ್ ಲ್ಯಾಂಡ್ಸ್ ಸರ್ಕಾರಿ ನಾಯಕರು, ಸಂಸದರು ಮತ್ತು ಡಚ್ ಕಂಪನಿಗಳ ಪ್ರಮುಖ ಪ್ರತಿನಿಧಿಗಳೊಂದಿಗೆ ಹಲವು  ಉನ್ನತ ಮಟ್ಟದ ಸಭೆಗಳನ್ನು ನಡೆಸುವ ಮೂಲಕ ತಮ್ಮ ನೆದರ್ಲ್ಯಾಂಡ್ಸ್ ಭೇಟಿಯನ್ನು ಮುಂದುವರಿಸಿದರು. ಈ ಸಭೆಗಳು ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಬಲಪಡಿಸುವುದು, ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸುವುದು ಹಾಗೂ ಭಾರತೀಯ ಮತ್ತು ಡಚ್ ಉದ್ಯಮಗಳ ನಡುವೆ ಸಹಯೋಗಕ್ಕಾಗಿ ಹೊಸ ಅವಕಾಶಗಳನ್ನು ಗುರುತಿಸುವುದರ ಮೇಲೆ ಗಮನ ಹರಿಸಿದ್ದವು.

ಶ್ರೀ ಪಿಯೂಷ್ ಗೋಯಲ್ ಅವರು ವಿದೇಶಿ ವ್ಯಾಪಾರ ಮತ್ತು ಅಭಿವೃದ್ಧಿ ಸಹಕಾರ ಸಚಿವರಾದ ಶ್ರೀ ಶೂರ್ಡ್  ಶೋರ್ಡ್ಸ್ಮಾ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಸಚಿವರಾದ ಶ್ರೀಮತಿ ಹೆಲೀನ್ ಹರ್ಬರ್ಟ್ ಮತ್ತು ಉತ್ತರ ಹಾಲೆಂಡ್ ಪ್ರಾಂತ್ಯದ ಕಿಂಗ್ಸ್ ಕಮಿಷನರ್ ಶ್ರೀ ಅರ್ಥರ್ ವ್ಯಾನ್ ಡಿಜ್ಕ್ ಅವರೊಂದಿಗೆ ಸಭೆಗಳನ್ನು ನಡೆಸಿದರು.

ಸಚಿವರು ನೆದರ್ಲ್ಯಾಂಡ್ಸ್ ಜನಪ್ರತಿನಿಧಿ ಸಭೆಯ ವಿದೇಶಿ ವ್ಯಾಪಾರ ಮತ್ತು ಅಭಿವೃದ್ಧಿ ಸಹಕಾರ ಸಮಿತಿಯ ಸದಸ್ಯರು ಹಾಗೂ ಸೆನೆಟ್ ಸಮಿತಿಯ ಯುರೋಪಿಯನ್ ವ್ಯವಹಾರಗಳ ಸದಸ್ಯರೊಂದಿಗೆ ಸಂವಾದ ನಡೆಸಿದರು. ಈ ಮಾತುಕತೆಗಳು ದ್ವಿಪಕ್ಷೀಯ ಆರ್ಥಿಕ ಸಂಬಂಧಗಳು, ವ್ಯಾಪಾರ ಮತ್ತು ಹೂಡಿಕೆ ಹಾಗೂ ವಿಶಾಲವಾದ ಭಾರತ ಮತ್ತು ಯುರೋಪಿಯನ್ ಒಕ್ಕೂಟದ ಆರ್ಥಿಕ ಸಹಭಾಗಿತ್ವದ ಕುರಿತು ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸಿದವು.

ಶ್ರೀ ಪಿಯೂಷ್ ಗೋಯಲ್ ಮತ್ತು ನೆದರ್ಲ್ಯಾಂಡ್ಸ್ ನ ವಿದೇಶಿ ವ್ಯಾಪಾರ ಮತ್ತು ಅಭಿವೃದ್ಧಿ ಸಹಕಾರ ಸಚಿವರಾದ ಶ್ರೀ ಶೂರ್ಡ್  ಶೋರ್ಡ್ಸ್ಮಾ ಅವರು ಜಂಟಿಯಾಗಿ ಅಧ್ಯಕ್ಷತೆ ವಹಿಸಿದ್ದ 'ಭಾರತ-ನೆದರ್ ಲ್ಯಾಂಡ್ಸ್ ಬಿಸಿನೆಸ್ ಫೋರಂ' ದಿನದ ಪ್ರಮುಖ ಭಾಗವಾಗಿತ್ತು. ಈ ವೇದಿಕೆಯಲ್ಲಿ ಭಾರತೀಯ ಮತ್ತು ಡಚ್ ಉದ್ಯಮಗಳ ಪ್ರಮುಖ ಪ್ರತಿನಿಧಿಗಳು ಸೇರಿದಂತೆ ಸುಮಾರು 200 ಜನರು ಭಾಗವಹಿಸಿದ್ದರು.

ಈ ವೇದಿಕೆಯು ಭಾರತ-ಯೂರೋಪಿಯನ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ ಫಲಿತಾಂಶದಿಂದಾಗುವ ಪ್ರಮುಖ ಅವಕಾಶಗಳ ಮೇಲೆ, ವಿಶೇಷವಾಗಿ ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸುವುದು, ಹೂಡಿಕೆ ಸಹಭಾಗಿತ್ವವನ್ನು ಬಲಪಡಿಸುವುದು, ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವುದು ಮತ್ತು ಪ್ರಮುಖ ವಲಯಗಳಲ್ಲಿ ಸಹಕಾರವನ್ನು ಬೆಳೆಸುವ ಬಗ್ಗೆ ಗಮನ ಹರಿಸಿತು. ಚರ್ಚೆಗಳು ಭಾರತೀಯ ಮತ್ತು ಡಚ್ ಆರ್ಥಿಕತೆಗಳ ಪೂರಕ ಸಾಮರ್ಥ್ಯಗಳನ್ನು ಮತ್ತು ಮುಕ್ತ ವ್ಯಾಪಾರ ಒಪ್ಪಂದದಿಂದ  ಉಂಟಾಗುವ ಅವಕಾಶಗಳನ್ನು ಗಾಡವಾದ  ಉದ್ಯಮ ಸಹಭಾಗಿತ್ವಗಳು, ಹೂಡಿಕೆಗಳು ಮತ್ತು ಭಾರತ ಹಾಗೂ ಯುರೋಪ್ ನಡುವಿನ ಪೂರೈಕೆ ಸರಪಳಿಗಳ ಬಲವಾದ ಸಂಯೋಜನೆಯಾಗಿ ಪರಿವರ್ತಿಸುವಲ್ಲಿ ನಿಕಟ ಉದ್ಯಮದಿಂದ ಉದ್ಯಮಕ್ಕೆ ತೊಡಗಿಸಿಕೊಳ್ಳುವಿಕೆಯ ಮಹತ್ವವನ್ನು ಉಲ್ಲೇಖಿಸಿದವು.

ತಮ್ಮ ಉದ್ಯಮ ಕೇಂದ್ರಿತ ಕಾರ್ಯಕ್ರಮದ ಭಾಗವಾಗಿ, ಶ್ರೀ ಪಿಯೂಷ್ ಗೋಯಲ್ ಅವರು ಹಲವಾರು ಪ್ರಮುಖ ಡಚ್ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ  ವೈಯಕ್ತಿಕ ಸಭೆಗಳನ್ನು ನಡೆಸಿದರು. ಈ ಸಭೆಗಳು ವ್ಯಾಪಾರ ಆದ್ಯತೆಗಳು ಮತ್ತು ಸಹಕಾರದ ಸಂಭಾವ್ಯ ಕ್ಷೇತ್ರಗಳ ಕುರಿತು ಉದ್ಯಮದ ನಾಯಕರೊಂದಿಗೆ ತೊಡಗಿಸಿಕೊಳ್ಳಲು ಅವಕಾಶಗಳನ್ನು ಒದಗಿಸಿದವು. ಈ ಕಂಪನಿಗಳು ಸೆಮಿಕಂಡಕ್ಟರ್ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಸಾಗಾಣಿಕೆ, ಇಂಧನ ಮತ್ತು ಕೈಗಾರಿಕಾ ಪರಿಹಾರಗಳು, ತಂತ್ರಜ್ಞಾನ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ವಲಯಗಳನ್ನು ಪ್ರತಿನಿಧಿಸಿದ್ದವು.

ಹೇಗ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಚ್ ಎಸ್ ಬಿ ಸಿ,  ನೆದರ್ ಲ್ಯಾಂಡ್ಸ್ ಸಹಯೋಗದೊಂದಿಗೆ ಆಯೋಜಿಸಿದ್ದ 15 ಡಚ್ ಕಂಪನಿಗಳ ಸಿಎಕ್ಸ್ಒಗಳ  ದುಂಡುಮೇಜಿನ ಸಭೆಯಲ್ಲೂ ಶ್ರೀ ಪಿಯೂಷ್ ಗೋಯಲ್ ಭಾಗವಹಿಸಿದ್ದರು.

ಈ ದುಂಡುಮೇಜಿನ ಸಭೆಯು ಹೂಡಿಕೆ, ವಾಣಿಜ್ಯ ಸಹಭಾಗಿತ್ವಗಳು ಮತ್ತು ಭಾರತ ಹಾಗೂ ನೆದರ್ಲ್ಯಾಂಡ್ಸ್ ನಡುವಿನ ಆಳವಾದ ಆರ್ಥಿಕ ಸಹಕಾರದ ಅವಕಾಶಗಳ ಕುರಿತು ಉದ್ಯಮದ ನಾಯಕರೊಂದಿಗೆ ನೇರ ಸಂವಾದವನ್ನು ಸುಗಮಗೊಳಿಸಿತು. ಇದು ವ್ಯಾಪಾರದ ವಾತಾವರಣದ ಕುರಿತು ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಬಲವಾದ ಖಾಸಗಿ ವಲಯದ ಸಹಕಾರಕ್ಕಾಗಿ ಮಾರ್ಗಗಳನ್ನು ಗುರುತಿಸಲು ವೇದಿಕೆಯನ್ನು ಒದಗಿಸಿತು.

ಶ್ರೀ ಪಿಯೂಷ್ ಗೋಯಲ್ ಅವರು ತಮ್ಮ ಭೇಟಿಯ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೂ ಸಂವಾದ ನಡೆಸಿದರು. ದ್ವಿಪಕ್ಷೀಯ ಬಾಂಧವ್ಯವನ್ನು ಹೊಸ ಕಾರ್ಯತಂತ್ರದ ಪಾಲುದಾರಿಕೆ  ಮಟ್ಟಕ್ಕೆ  ಏರಿಸಿದ ನಂತರ ಮತ್ತು ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ ತೀರ್ಮಾನದ ನಂತರ ಭಾರತ-ನೆದರ್ಲ್ಯಾಂಡ್ಸ್ ಆರ್ಥಿಕ ಸಂಬಂಧಗಳಲ್ಲಿ ಬೆಳೆಯುತ್ತಿರುವ ವೇಗವನ್ನು ಸಚಿವರು ಒತ್ತಿಹೇಳಿದರು. ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಭಾಗಿತ್ವವನ್ನು ವಿಸ್ತರಿಸಲು ಇರುವ ಪ್ರಮುಖ ಅವಕಾಶಗಳನ್ನು ಅವರು ಪುನರುಚ್ಚರಿಸಿದರು ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಪ್ರವೇಶದ್ವಾರವಾಗಿ ನೆದರ್ಲ್ಯಾಂಡ್ಸ್ನ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. ಈ ಸಂವಾದವು ಭಾರತದ ಆರ್ಥಿಕ ಬೆಳವಣಿಗೆ, ಹೂಡಿಕೆ ಅವಕಾಶಗಳು ಮತ್ತು ನೆದರ್ಲ್ಯಾಂಡ್ಸ್ ಹಾಗೂ ವಿಶಾಲವಾದ ಯುರೋಪಿಯನ್ ಒಕ್ಕೂಟದೊಂದಿಗಿನ ತನ್ನ ಸಹಭಾಗಿತ್ವವನ್ನು ಬಲಪಡಿಸುವ ಬದ್ಧತೆಯನ್ನು ಎತ್ತಿಹಿಡಿಯಲು ಅವಕಾಶವನ್ನು ಒದಗಿಸಿತು.

 

*****


(ಪ್ರಕಟಣೆ ಐ.ಡಿ.: 2328840) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil