ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಒಡಿಶಾದ ಭುವನೇಶ್ವರದಲ್ಲಿ ಆರ್‌ಬಿಐನ ನೂತನ ದತ್ತಾಂಶ ಕೇಂದ್ರ ಮತ್ತು ಸೈಬರ್ ಭದ್ರತಾ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಹೆಚ್ಚು ಸುರಕ್ಷಿತ ಹಣಕಾಸು ವ್ಯವಸ್ಥೆಯತ್ತ ಒಂದು ಪ್ರಮುಖ ಹೆಜ್ಜೆ; ಭುವನೇಶ್ವರದಲ್ಲಿರುವ ಆರ್‌ಬಿಐನ ಹೊಸ ಸೌಲಭ್ಯಗಳು ಡಿಜಿಟಲ್ ಮೂಲಸೌಕರ್ಯ ಮತ್ತು ಸೈಬರ್ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸುತ್ತವೆ: ಪ್ರಧಾನಮಂತ್ರಿ

ಮಹಾಪ್ರಭುವಿನ ಆಶೀರ್ವಾದದೊಂದಿಗೆ, ಇಂದು ಭುವನೇಶ್ವರವು 'ನವ ಭಾರತ'ಕ್ಕೆ ಒಂದು ಹೊಸ ಸಂಸ್ಥೆಯನ್ನು ನೀಡುತ್ತಿದೆ; ಭುವನೇಶ್ವರದಲ್ಲಿ ಆರ್‌ಬಿಐನ ಡೇಟಾ ಸೆಂಟರ್ ಮತ್ತು ಸೈಬರ್ ಭದ್ರತಾ ತರಬೇತಿ ಸಂಸ್ಥೆ - ಇವೆರಡರ ಉದ್ಘಾಟನೆಯು ಒಂದು ಮಹತ್ವದ ಸಂದರ್ಭವಾಗಿದೆ; ಇದು ಒಡಿಶಾದ ಜನರಿಗೆ ಹಾಗೂ ಇಡೀ ದೇಶಕ್ಕೆ ಬಹಳ ಪ್ರಯೋಜನಕಾರಿಯಾಗಲಿದೆ: ಪ್ರಧಾನಮಂತ್ರಿ

ನಾವು ಜನಪರ, ಕ್ರಿಯಾಶೀಲ ಮತ್ತು ಉತ್ತಮ ಆಡಳಿತದ ಮಾದರಿಯಿಂದ ಪ್ರೇರಿತರಾಗಿದ್ದೇವೆ; ನಮ್ಮ ಪಾಲಿಗೆ ಅಭಿವೃದ್ಧಿ ಎಂದರೆ ಭಾರತದ ಸಮಾನ ಪ್ರಗತಿ, ಇದರಲ್ಲಿ ಅವಕಾಶಗಳು ನಮ್ಮ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳೆಲ್ಲಕ್ಕೂ ಸಮಾನವಾಗಿ ತಲುಪುತ್ತವೆ: ಪ್ರಧಾನಮಂತ್ರಿ

ಇಂದು, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯು ಪ್ರತಿಯೊಬ್ಬ ಭಾರತೀಯರನ್ನು 24 ಗಂಟೆಯ ಬ್ಯಾಂಕಿಂಗ್ ಸೇವೆಗಳೊಂದಿಗೆ ಸಂಪರ್ಕಿಸಿದೆ: ಪ್ರಧಾನಮಂತ್ರಿ

ಇಂದು, ಬ್ಯಾಂಕಿಗೆ ನೀಡಲು ಯಾವುದೇ ಭದ್ರತೆ ಇಲ್ಲದವರು ಕೂಡ ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಿರುವ ಸಾಲಗಳನ್ನು ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಸಾಧ್ಯವಾಗಿದೆ. ಸಣ್ಣ ಉದ್ಯಮಿಗಳಿಂದ ಹಿಡಿದು ಸಾಂಪ್ರದಾಯಿಕ ಕುಶಲಕರ್ಮಿಗಳವರೆಗೆ, ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಅಸಂಘಟಿತ ವಲಯದ ಕಾರ್ಮಿಕರವರೆಗೆ—ಹೀಗೆ ಎಲ್ಲರೂ ಇದೇ ಮೊದಲ ಬಾರಿಗೆ ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆದಿದ್ದಾರೆ: ಪ್ರಧಾನಮಂತ್ರಿ

ಕಳೆದ ದಶಕವು ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾಗಿದ್ದವರ ಬಳಿಗೆ ಬ್ಯಾಂಕಿಂಗ್ ಸೇವೆಯನ್ನು ಕೊಂಡೊಯ್ಯುವ ದಶಕವಾಗಿತ್ತು; ಮುಂಬರುವ ದಶಕವು ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ದಕ್ಷ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸುವ ದಶಕವಾಗಿದೆ: ಪ್ರಧಾನಮಂತ್ರಿ

ಇಂದಿನ ದಿನಗಳಲ್ಲಿ ಯುದ್ಧಗಳು ಕೇವಲ ಶಸ್ತ್ರಾಸ್ತ್ರಗಳಿಂದಲೇ ನಡೆಯುವುದಿಲ್ಲ; ಒಂದು ರಾಷ್ಟ್ರದ ಆರ್ಥಿಕತೆಯ ಮೇಲೆ ದಾಳಿ ಮಾಡುವ ಮೂಲಕವೂ ಅದನ್ನು ದುರ್ಬಲಗೊಳಿಸಬಹುದು. ಭಾರತವು ಆರ್ಥಿಕವಾಗಿ ಬಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸೈಬರ್ ಕಳ್ಳರು ಮತ್ತು ಸೈಬರ್ ಭಯೋತ್ಪಾದಕರಿಂದ ನಾವು ರಕ್ಷಿಸಿಕೊಳ್ಳಬೇಕು: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 25 OCT 2026 7:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾದ ಭುವನೇಶ್ವರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ನೂತನ ದತ್ತಾಂಶ ಕೇಂದ್ರ (Data Centre) ಮತ್ತು ಸೈಬರ್ ಭದ್ರತಾ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿದರು. ಮಹಾಪ್ರಭು ಜಗನ್ನಾಥನ ಆಶೀರ್ವಾದವನ್ನು ಕೋರಿದ ಪ್ರಧಾನಮಂತ್ರಿಯವರು, 'ನವ ಭಾರತ'ಕ್ಕೆ ಒಂದು ಪ್ರಮುಖ ಹೊಸ ಸಂಸ್ಥೆಯನ್ನು ಕೊಡುಗೆಯಾಗಿ ನೀಡಿದ ಭುವನೇಶ್ವರವನ್ನು ಶ್ಲಾಘಿಸಿದರು. ಈ ಎರಡೂ ಸೌಲಭ್ಯಗಳನ್ನು ಪ್ರಾರಂಭಿಸುವಲ್ಲಿ ಶ್ರಮಿಸಿದ ಆರ್‌ಬಿಐ ಮತ್ತು ಸಂಬಂಧಪಟ್ಟ ಎಲ್ಲರಿಗೂ ಅವರು ಅಭಿನಂದನೆ ಸಲ್ಲಿಸಿದರು. "ಇದು ಒಡಿಶಾದ ಜನರಿಗೆ ಹಾಗೂ ಇಡೀ ದೇಶಕ್ಕೆ ಅತ್ಯಂತ ಪ್ರಯೋಜನಕಾರಿಯಾಗಲಿದೆ" ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದರು.

ಈ ಉದ್ಘಾಟನೆಯ ವ್ಯಾಪಕ ಮಹತ್ವವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಕಾರ್ಯಕ್ರಮವು ದೇಶದ ಆಡಳಿತಾತ್ಮಕ ದೃಷ್ಟಿಕೋನದಲ್ಲಿನ ಮೂಲಭೂತ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಸಮಕಾಲೀನ ಆಡಳಿತವು ಅಭಿವೃದ್ಧಿಗೆ ಆದ್ಯತೆ ನೀಡುವುದು, ಅದರ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಅಭಿವೃದ್ಧಿಯ ಫಲಗಳು ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಆಧಾರಿತವಾಗಿದೆ ಎಂದು ಅವರು ಒತ್ತಿ ಹೇಳಿದರು. "ಭಾರತದಲ್ಲಿ ಆಡಳಿತ ನಿರ್ವಹಣೆಯ ವಿಧಾನವು ಹೇಗೆ ಬದಲಾಗಿದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ," ಎಂದು ಪ್ರಧಾನಮಂತ್ರಿ ಮೋದಿ ಅಭಿಪ್ರಾಯಪಟ್ಟರು.

ಪ್ರಧಾನಮಂತ್ರಿಯವರು, ಸಮತೋಲಿತ ಪ್ರಾದೇಶಿಕ ಬೆಳವಣಿಗೆ, ಬಡವರಿಗೆ ಘನತೆ ಮತ್ತು ಯಾವುದೇ ನಾಗರಿಕರು ಅಭಿವೃದ್ಧಿಯ ಓಟದಲ್ಲಿ ಹಿಂದೆ ಉಳಿಯದಂತೆ ನೋಡಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದ, 'ಜನಪರ' ಹಾಗೂ 'ಸಕ್ರಿಯ' ಉತ್ತಮ ಆಡಳಿತ ಮಾದರಿಯತ್ತ ಆಗಿರುವ ಬದಲಾವಣೆಯ ಬಗ್ಗೆ ವಿವರವಾಗಿ ವಿವರಿಸಿದರು. ಎಕ್ಸ್ ಪ್ರೆಸ್‌ವೇಗಳು (ಅತಿವೇಗದ ಹೆದ್ದಾರಿಗಳು) ಈಗ ಸಣ್ಣ ಪಟ್ಟಣಗಳನ್ನು ಸಂಪರ್ಕಿಸುತ್ತಿವೆ, ಏಮ್ಸ್ (AIIMS) ನಂತಹ ಸಂಸ್ಥೆಗಳು ಅನೇಕ ರಾಜ್ಯಗಳಲ್ಲಿ ವಿಸ್ತರಿಸಿವೆ, ಸಣ್ಣ ಪಟ್ಟಣಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ, ಹಳ್ಳಿಗಳಲ್ಲಿ ಸುಮಾರು 1.75 ಲಕ್ಷ 'ಆಯುಷ್ಮಾನ್ ಆರೋಗ್ಯ ಮಂದಿರ'ಗಳನ್ನು ಸ್ಥಾಪಿಸಲಾಗಿದೆ ಮತ್ತು ದೂರದ ಪ್ರದೇಶಗಳಲ್ಲೂ ಡಿಜಿಟಲ್ ಸಂಪರ್ಕ ವ್ಯವಸ್ಥೆ ವಿಸ್ತರಿಸುತ್ತಿದೆ ಎಂದು ಅವರು ಎತ್ತಿ ತೋರಿಸಿದರು. "ನಾಗರಿಕರ ಜೀವನವನ್ನು ಸುಲಭಗೊಳಿಸುವುದು ಮತ್ತು ಅವರ ಕನಸುಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸಿಕೊಡುವುದೇ ಈಗ ಆಡಳಿತದ ನಿಜವಾದ ಉದ್ದೇಶವಾಗಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

1960 ಮತ್ತು 1970ರ ದಶಕಗಳಲ್ಲಿ ಬಡವರ ಹೆಸರಿನಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಗಿದ್ದರೂ, 2014ರವರೆಗೂ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯು ಬ್ಯಾಂಕಿಂಗ್ ವ್ಯವಸ್ಥೆಯ ವ್ಯಾಪ್ತಿಯಿಂದ ಹೊರಗಿತ್ತು ಎಂಬುದರತ್ತ ಪ್ರಧಾನ ಮಂತ್ರಿಗಳು ಬೆಟ್ಟು ಮಾಡಿದರು. ಆ ಸಮಯದಲ್ಲಿ ಮಧ್ಯಮ ವರ್ಗದವರಿಗೆ ಬ್ಯಾಂಕ್ ಸಾಲ ಪಡೆಯುವುದು ದೂರದ ಕನಸಾಗಿತ್ತು; ಇನ್ನು ಸಣ್ಣ ರೈತರು, ಭೂಮಿಯಿಲ್ಲದವರು ಮತ್ತು ಮಹಿಳೆಯರ ಪಾಲಿಗೆ ಇದೊಂದು ಊಹಿಸಲೂ ಸಾಧ್ಯವಾಗದ ವಿಷಯವಾಗಿತ್ತು. ಹಣಕಾಸು ಸೇರ್ಪಡೆಯ ಈ ಆಧುನಿಕ ಯುಗವು ದೇಶಾದ್ಯಂತ ಈ ಪರಿಸ್ಥಿತಿಯನ್ನೇ ಬದಲಾಯಿಸಿದೆ ಎಂದು ಅವರು ಹೇಳಿದರು. "ಇಂದು ಭಾರತದಲ್ಲಿ, ಡಿಜಿಟಲ್ ಬ್ಯಾಂಕಿಂಗ್ ಎಲ್ಲರನ್ನೂ 24 ಗಂಟೆಗಳ ಬ್ಯಾಂಕಿಂಗ್ ಸೇವೆಗಳೊಂದಿಗೆ ಸಂಪರ್ಕಿಸಿದೆ," ಎಂದು ಪ್ರಧಾನಮಂತ್ರಿ ಮೋದಿ ಅಭಿಪ್ರಾಯಪಟ್ಟರು.

"ಇಂದು ಡಿಜಿಟಲ್ ಬ್ಯಾಂಕಿಂಗ್ ಮೂಲಕ ದೇಶದ ಪ್ರತಿಯೊಂದು ಕುಟುಂಬವೂ ಫಲಾನುಭವಿಯಾಗಿದೆ," ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಪ್ರಸ್ತುತ ವ್ಯವಸ್ಥೆಯಲ್ಲಿ ಸೋರಿಕೆಗಳಿಗೆ ಸಂಪೂರ್ಣವಾಗಿ ಕಡಿವಾಣ ಬಿದ್ದಿದೆ ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಪ್ರತಿಯೊಂದು ರೂಪಾಯಿಯೂ ಈಗ ಯಾವುದೇ ಕಡಿತವಿಲ್ಲದೆ ನೇರವಾಗಿ ಫಲಾನುಭವಿಯ ಖಾತೆಯನ್ನು ತಲುಪುತ್ತಿದೆ ಎಂದು ಅವರು ವಿವರಿಸಿದರು. "ದೇಶದಲ್ಲಿ ತೆರೆಯಲಾದ ಸುಮಾರು 60 ಕೋಟಿ 'ಜನ್ ಧನ್' ಖಾತೆಗಳಿಂದಲೇ ಇದು ಸಾಧ್ಯವಾಗಿದೆ," ಎಂದು ಪ್ರಧಾನಮಂತ್ರಿ ಮೋದಿ ಉಲ್ಲೇಖಿಸಿದರು.

ಮೇಲಾಧಾರವಿಲ್ಲದ ಅಂದರೆ ಬ್ಯಾಂಕಿಗೆ ಭದ್ರತೆ ನೀಡಲಾಗದ  ವ್ಯಕ್ತಿಗಳು ಸಹ ವ್ಯವಹಾರಗಳನ್ನು ಪ್ರಾರಂಭಿಸಲು ಕೈಗೆಟುಕುವ ಔಪಚಾರಿಕ ಸಾಲವನ್ನು ಪಡೆಯಬಹುದು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಸಣ್ಣ ಉದ್ಯಮಿಗಳು, ಸಾಂಪ್ರದಾಯಿಕ ಕುಶಲಕರ್ಮಿಗಳು, ಬೀದಿ ವ್ಯಾಪಾರಿಗಳು ಮತ್ತು ಅಸಂಘಟಿತ ಕಾರ್ಮಿಕರು ಗುರಿ ಕೇಂದ್ರಿತ ಮಧ್ಯಸ್ಥಿಕೆಗಳ ಮೂಲಕ ಹೇಗೆ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸಿದರು. ಮುದ್ರಾ ಯೋಜನೆಯಡಿಯಲ್ಲಿ 13 ಕೋಟಿ ಜನರು ಮೊದಲ ಬಾರಿಗೆ ಉದ್ಯಮಿಗಳಾದರು, ಲಕ್ಷಾಂತರ ಬೀದಿ ವ್ಯಾಪಾರಿಗಳು ಮತ್ತು ನುರಿತ ಕುಶಲಕರ್ಮಿಗಳು ಪ್ರಧಾನ ಮಂತ್ರಿ ಸ್ವನಿಧಿ ಮತ್ತು ಪ್ರಧಾನ ಮಂತ್ರಿ ವಿಶ್ವಕರ್ಮ ಮೂಲಕ ಔಪಚಾರಿಕ ಸಾಲವನ್ನು ಪಡೆದರು ಮತ್ತು 10 ಕೋಟಿ ಗ್ರಾಮೀಣ ಮಹಿಳೆಯರನ್ನು ಪ್ರತಿನಿಧಿಸುವ ಸ್ವಸಹಾಯ ಗುಂಪುಗಳು ಸಾವಿರಾರು ಕೋಟಿ ಬ್ಯಾಂಕ್ ಸಹಾಯವನ್ನು ಪಡೆದಿವೆ ಎಂಬುದರತ್ತ ಅವರು ಗಮನ ಸೆಳೆದರು. "ಮೊದಲ ಬಾರಿಗೆ, ಅವರು ಔಪಚಾರಿಕ ಬ್ಯಾಂಕಿಂಗ್‌ನ ಪ್ರಯೋಜನವನ್ನು ಪಡೆದಿದ್ದಾರೆ" ಎಂದು ಶ್ರೀ ಮೋದಿ ನುಡಿದರು.

ಒಂದು ಕಾಲದಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಕೇವಲ ಶ್ರೀಮಂತರ ಸೊತ್ತಾಗಿದ್ದವು, ಆದರೆ ಇಂದು ಕೋಟ್ಯಂತರ 'ರೂಪೇ' (RuPay) ಕಾರ್ಡ್‌ಗಳ ಮೂಲಕ ಅವು ಪ್ರತಿಯೊಬ್ಬ ನಾಗರಿಕರ ಕೈಗೆಟುಕುವಂತಾಗಿವೆ. ಈ ಕಾರ್ಡ್‌ಗಳು ಆತ್ಮಗೌರವ ಮತ್ತು ಸ್ವಾವಲಂಬನೆಯ ಸಂಕೇತಗಳಾಗಿವೆ ಎಂದು ಪ್ರಧಾನ ಮಂತ್ರಿಯವರು ಉಲ್ಲೇಖಿಸಿದರು. ಈ ಪರಿವರ್ತನೆಗೆ ಕಾರಣವಾದ ಬ್ಯಾಂಕಿಂಗ್ ವಲಯದ ಕೊಡುಗೆಯನ್ನು ಅವರು ಶ್ಲಾಘಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ (ಕೇಂದ್ರೀಯ ಬ್ಯಾಂಕ್), ವಾಣಿಜ್ಯ ಬ್ಯಾಂಕುಗಳು ಮತ್ತು ದೇಶಾದ್ಯಂತ ಇರುವ ಪ್ರತಿಯೊಬ್ಬ ಬ್ಯಾಂಕ್ ಉದ್ಯೋಗಿಯ ಸಾಮೂಹಿಕ ಪ್ರಯತ್ನಗಳನ್ನು ಅವರು ಕೊಂಡಾಡಿದರು. "ಈ ಗೌರವದಲ್ಲಿ ನೀವೆಲ್ಲರೂ ಪಾಲುದಾರರಾಗಿದ್ದೀರಿ," ಎಂದು ಪ್ರಧಾನಮಂತ್ರಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

'ನಾಗರಿಕ್ ದೇವೋ ಭವ' ಎಂಬ ಮಂತ್ರದೊಂದಿಗೆ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಭದ್ರತಾ ಜಾಲದ ಅಭೂತಪೂರ್ವ ವಿಸ್ತರಣೆಯ ಬಗ್ಗೆ ವಿವರಿಸಿದ ಪ್ರಧಾನ ಮಂತ್ರಿಯವರು, 'ಅಟಲ್ ಪಿಂಚಣಿ ಯೋಜನೆ'ಯು ಒಡಿಶಾದ 38 ಲಕ್ಷ ಮಂದಿ ಸೇರಿದಂತೆ ಒಟ್ಟು 9 ಕೋಟಿ ನಾಗರಿಕರನ್ನು ಒಳಗೊಂಡಿದೆ ಎಂದು ತಿಳಿಸಿದರು. ಹಾಗೆಯೇ, 2 ಲಕ್ಷ ರೂಪಾಯಿಗಳ ಅಪಘಾತ ವಿಮೆಗಾಗಿ ವಾರ್ಷಿಕ 20 ರೂಪಾಯಿ ಪ್ರೀಮಿಯಂ ಹೊಂದಿರುವ 'ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ' ಮತ್ತು ಜೀವ ವಿಮೆಗಾಗಿ ವಾರ್ಷಿಕ 450 ರೂಪಾಯಿಗಿಂತ ಕಡಿಮೆ ಪ್ರೀಮಿಯಂ ಹೊಂದಿರುವ 'ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ'ಗಳು, ಹಿಂದೆ ಕೇವಲ ಶ್ರೀಮಂತರಿಗೆ ಮಾತ್ರ ಲಭ್ಯವಿದ್ದ ವಿಮಾ ಸೌಲಭ್ಯವನ್ನು ಬಡವರು ಮತ್ತು ಮಧ್ಯಮ ವರ್ಗದವರಿಗೂ ತಲುಪಿಸಿವೆ ಎಂದು ಅವರು ಹೇಳಿದರು. ಇಂತಹ ಯೋಜನೆಗಳ ಮೂಲಕ ಹಣ ಪಾವತಿಸುವಾಗ ದೊಡ್ಡ ಮಟ್ಟದ ಪ್ರಚಾರ ಅಥವಾ ಸದ್ದು ಮಾಡುವ ಇತರ ಸರ್ಕಾರಗಳಿಗಿಂತ ಭಿನ್ನವಾಗಿ, ಕಠಿಣ ಸಮಯದಲ್ಲಿ ಕುಟುಂಬಗಳಿಗೆ 25,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಯಾವುದೇ ಆಡಂಬರವಿಲ್ಲದೆ ತಲುಪಿಸಲಾಗಿದೆ ಎಂದು ಅವರು ಎತ್ತಿ ತೋರಿಸಿದರು. " ಉತ್ತಮ ಆಡಳಿತ ಎಂದರೆ ಇದೇ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಕಳೆದ ದಶಕವು ಬ್ಯಾಂಕ್ ಸೌಲಭ್ಯವಿಲ್ಲದವರಿಗೆ ಬ್ಯಾಂಕಿಂಗ್ ಮಾಡುವತ್ತ ಗಮನಹರಿಸಿದ್ದರೆ, ಮುಂಬರುವ ದಶಕವು ಒಡಿಶಾದ ಹೊಸ ದತ್ತಾಂಶ ಕೇಂದ್ರ ಮತ್ತು ಬಲಿಷ್ಠ ಕಂಪ್ಯೂಟಿಂಗ್ ವ್ಯವಸ್ಥೆಗಳ ಬೆಂಬಲದೊಂದಿಗೆ ಬ್ಯಾಂಕಿಂಗ್ ಅನ್ನು ಹೆಚ್ಚು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹವಾಗಿಸಲು ಸಮರ್ಪಿತವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಆಧುನಿಕ ಯುದ್ಧವು ವಿಕಸನಗೊಳ್ಳುತ್ತಿರುವ ಸೈಬರ್ ಬೆದರಿಕೆಗಳ ಮೂಲಕ ಆರ್ಥಿಕತೆಯನ್ನು ಗುರಿಯಾಗಿಸುತ್ತದೆ ಎಂದು ಎಚ್ಚರಿಸಿದರು. ಬೆಳೆಯುತ್ತಿರುವ ಆರ್ಥಿಕ ಶಕ್ತಿಯು ತನ್ನ ಹಣಕಾಸು ವ್ಯವಸ್ಥೆಯನ್ನು ಸೈಬರ್ ಲೂಟಿಕೋರರು ಮತ್ತು ಸೈಬರ್ ಭಯೋತ್ಪಾದಕರಿಂದ ರಕ್ಷಿಸಬೇಕು ಎಂದು ಒತ್ತಿ ಹೇಳಿದ ಅವರು, ಹಳತಾದ ತರಬೇತಿ ಸಾಧನಗಳನ್ನು ಆಧುನಿಕ ಮೂಲಸೌಕರ್ಯ ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲಗಳೊಂದಿಗೆ ಬದಲಾಯಿಸುವ ಅಗತ್ಯವನ್ನು ಒತ್ತಿ ಹೇಳಿದರು. "ಇಲ್ಲಿಯೇ, ಈ ಹೊಸ ಸೈಬರ್ ಭದ್ರತಾ ಸಂಸ್ಥೆಯ ಪಾತ್ರ ನಿರ್ಣಾಯಕವಾಗುತ್ತದೆ" ಎಂದು ಪ್ರಧಾನಮಂತ್ರಿ ಮೋದಿ ಪ್ರತಿಪಾದಿಸಿದರು.

ವಿಕ್ಷಿತ ಭಾರತಕ್ಕೆ ಪೂರ್ವ ಭಾರತವು ಪ್ರಬಲ ಬೆಳವಣಿಗೆಯ ಎಂಜಿನ್ ಎಂದು ಗುರುತಿಸಿ, ಒಡಿಶಾದ ಪ್ರಸ್ತುತ ಸರ್ಕಾರದ ಅಡಿಯಲ್ಲಿ ವೇಗವರ್ಧಿತ ವೇಗದತ್ತ ಬೆಳಕು ಬೀರಿದ ಪ್ರಧಾನಮಂತ್ರಿ, ರಾಜ್ಯವು ತನ್ನ ಸಾಂಪ್ರದಾಯಿಕ ಖನಿಜ ಆಧಾರಿತ ಕೈಗಾರಿಕೆಗಳನ್ನು ಅರೆವಾಹಕಗಳು, ಎಲೆಕ್ಟ್ರಾನಿಕ್ಸ್, ದತ್ತಾಂಶ ಕೇಂದ್ರಗಳು ಮತ್ತು ಸುಧಾರಿತ ಕಂಪ್ಯೂಟಿಂಗ್‌ನ ಹೊಸ ಪರಿಸರ ವ್ಯವಸ್ಥೆಯೊಂದಿಗೆ ಜೋಡಿಸುತ್ತಿದೆ ಎಂಬುದನ್ನು ಗುರುತಿಸಿದರು, ಇದು ಗಣಿಗಳಿಂದ ಮೈಕ್ರೋಚಿಪ್‌ಗಳಿಗೆ ಹೊಸ ಭವಿಷ್ಯವನ್ನು ಬರೆಯುತ್ತದೆ. ಈ ಉದಯೋನ್ಮುಖ ಮಾರ್ಗಗಳು ವಿಶಾಲವಾದ ಅವಕಾಶಗಳನ್ನು ತೆರೆಯುತ್ತವೆ ಮತ್ತು ಒಡಿಶಾದ ಯುವಜನರ ಭವ್ಯ ಕನಸುಗಳನ್ನು ನನಸಾಗಿಸುತ್ತವೆ  ಎಂಬುದರಲ್ಲಿ ಸಂಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಹಬ್ಬದ ಶುಭಾಶಯಗಳು ಮತ್ತು ಜೈ ಜಗನ್ನಾಥ ಘೋಷಣೆಗಳೊಂದಿಗೆ ತಮ್ಮ ಮಾತುಗಳನ್ನು ಮುಗಿಸಿದರು. "ನೀವು ನೋಡುತ್ತೀರಿ, ಒಡಿಶಾ, ಗಣಿಗಳಿಂದ ಮೈಕ್ರೋಚಿಪ್‌ಗಳಿಗೆ, ಹೊಸ ಭವಿಷ್ಯವನ್ನು ಬರೆಯಲಿದೆ" ಎಂದು ಶ್ರೀ ಮೋದಿ ದೃಢವಾಗಿ ನುಡಿದರು.

 

*****

 


(ಪ್ರಕಟಣೆ ಐ.ಡಿ.: 2328276) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: Odia , English , Urdu , Marathi , हिन्दी , Assamese , Gujarati , Tamil