ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಜಾಗತಿಕ ದಕ್ಷಿಣದಲ್ಲಿ ಮೊದಲ ಬಾರಿಗೆ ಅಗ್ರಿ ವೋಲ್ಟಾಯಿಕ್ಸ್ (ಕೃಷಿ-ಸೌರಶಕ್ತಿ) ವಿಶ್ವ ಸಮ್ಮೇಳನ 2026ಕ್ಕೆ ಭಾರತದ ಆತಿಥ್ಯ


ಕೇಂದ್ರ ಕೃಷಿ ಸಚಿವರು ಹಾಗೂ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಿಂದ ಅಗ್ರಿ ವೋಲ್ಟಾಯಿಕ್ಸ್ ವಿಶ್ವ ಸಮ್ಮೇಳನ 2026ರ ಜಂಟಿ ಉದ್ಘಾಟನೆ

ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಾಯೋಗಿಕ ಅಗತ್ಯಗಳನ್ನು ಪೂರೈಸುವಂತೆ ಅಗ್ರಿ ವೋಲ್ಟಾಯಿಕ್ಸ್ ನೀತಿಗಳನ್ನು ರೂಪಿಸಬೇಕು: ಶ್ರೀ ಚೌಹಾಣ್

ಪಿಎಂ-ಕುಸುಮ್‌ನ ಮುಂದಿನ ಹಂತದಿಂದ ಕೃಷಿ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆ ಮತ್ತಷ್ಟು ವಿಸ್ತರಣೆ: ಶ್ರೀ ಜೋಶಿ

ಪ್ರಕಟಣಾ ದಿನಾಂಕ: 21 OCT 2026 5:40PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಶಿಕ್ಷಣ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ನವದೆಹಲಿಯಲ್ಲಿ ಮೂರು ದಿನಗಳ ಅಗ್ರಿ ವೋಲ್ಟಾಯಿಕ್ಸ್ (ಕೃಷಿ-ಸೌರಶಕ್ತಿ) ವಿಶ್ವ ಸಮ್ಮೇಳನ 2026ನ್ನು ಜಂಟಿಯಾಗಿ ಉದ್ಘಾಟಿಸಿದರು.

ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಕೃಷಿ ಸಚಿವರು, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರೈತರು ಕೃಷಿಯ ಜೊತೆಗೆ ಸೌರಶಕ್ತಿಯನ್ನೂ ಅಳವಡಿಸಿಕೊಂಡು ಅನ್ನದಾತರು ಮತ್ತು ಊರ್ಜಾದಾತರು ಎರಡೂ ಆಗಬಹುದು ಎಂದು ಒತ್ತಿಹೇಳಿದರು. ಕೃಷಿ ಮತ್ತು ಸೌರಶಕ್ತಿಯ ಸಮನ್ವಯವು ಜಾಗತಿಕ ಕಲ್ಯಾಣವನ್ನು ಉತ್ತೇಜಿಸುವುದರ ಜೊತೆಗೆ ರೈತರ ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಶ್ರೀ ಚೌಹಾಣ್ ಹೇಳಿದರು. ಕೃಷಿ ಸಮುದಾಯದ ಶೇ. 85ಕ್ಕಿಂತಲೂ ಹೆಚ್ಚಿನ ಪಾಲನ್ನು ಹೊಂದಿರುವ ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಾಯೋಗಿಕ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಅಗ್ರಿ ವೋಲ್ಟಾಯಿಕ್ಸ್ ನೀತಿಗಳನ್ನು ರೂಪಿಸಬೇಕು ಎಂದು ಅವರು ಒತ್ತಿ ಹೇಳಿದರು.

ಕೃಷಿ ಭೂಮಿಯ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಅಳವಡಿಸಿ, ಅದರ ಕೆಳಗೆ ಬೆಳೆಗಳನ್ನು ಬೆಳೆಯಲು ಅವಕಾಶ ನೀಡುವ ಮೂಲಕ ಅಗ್ರಿ ವೋಲ್ಟಾಯಿಕ್ಸ್ ನಲ್ಲಿ ವಿದ್ಯುತ್ ಉತ್ಪಾದಿಸಬಹುದು ಎಂದು ಶ್ರೀ ಚೌಹಾಣ್ ವಿವರಿಸಿದರು. ಆಧುನಿಕ ಜೀವನ ಮತ್ತು ಕೃಷಿಗೆ ವಿದ್ಯುತ್ ಅನಿವಾರ್ಯವಾಗಿದೆ. ಹೀಗಾಗಿ ಕೃಷಿಯೊಂದಿಗೆ ವಿದ್ಯುತ್ ಉತ್ಪಾದನೆಯನ್ನು ಸಂಯೋಜಿಸುವುದು ರೈತರ ಕಲ್ಯಾಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

ಭಾರತದ ಕೃಷಿ ಪ್ರಗತಿಯನ್ನು ಉಲ್ಲೇಖಿಸಿದ ಸಚಿವರು, ಆಹಾರ ಭದ್ರತೆಯ ಅಗತ್ಯಗಳನ್ನು ಪೂರೈಸಲು ಹಿಂದೆ ದೇಶವು ಆಹಾರಧಾನ್ಯಗಳ ಆಮದನ್ನು ಅವಲಂಬಿಸಿತ್ತು ಎಂದು ನೆನಪಿಸಿದರು. ರೈತರ ಕೊಡುಗೆಯಿಂದಾಗಿ ಇಂದು ಭಾರತದಲ್ಲಿ ಗೋಧಿ ಮತ್ತು ಅಕ್ಕಿಯ ಸಾಕಷ್ಟು ದಾಸ್ತಾನು ಇದೆ ಎಂದು ಅವರು ಹೇಳಿದರು. ಕೃಷಿ ಕ್ಷೇತ್ರವು ಶೇ. 4.5ರ ಬೆಳವಣಿಗೆ ದರವನ್ನು ಕಾಯ್ದುಕೊಂಡಿದ್ದು, ಕೃಷಿ ಉತ್ಪನ್ನಗಳ ರಫ್ತು ದಾಖಲೆಯ 52.55 ಶತಕೋಟಿ ಅಮೆರಿಕನ್ ಡಾಲರ್‌ಗೆ ತಲುಪಿದೆ ಎಂದು ಅವರು ತಿಳಿಸಿದರು.

ಭಾರತದ ಕೃಷಿ ಕ್ಷೇತ್ರ ಎದುರಿಸುತ್ತಿರುವ ಮೂಲಭೂತ ಸವಾಲುಗಳತ್ತ ಕೇಂದ್ರ ಕೃಷಿ ಸಚಿವರು ಗಮನ ಸೆಳೆದರು. ದೇಶದಲ್ಲಿ ಸರಾಸರಿ ಭೂ ಹಿಡುವಳಿ ಕೇವಲ 0.96 ಹೆಕ್ಟೇರ್‌ಗಳಷ್ಟಿದೆ ಎಂದು ಅವರು ತಿಳಿಸಿದರು. ಕೃಷಿ ಮಾಡುವುದನ್ನು ನಿಲ್ಲಿಸಿ ಸೌರ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡುವ ಬದಲು, ರೈತರು ಕೃಷಿ ಮುಂದುವರಿಸಲು ಅವಕಾಶ ಕಲ್ಪಿಸುವ ಮಾದರಿಗಳನ್ನೇ ಅಗ್ರಿ ವೋಲ್ಟಾಯಿಕ್ಸ್ ವ್ಯವಸ್ಥೆಯಲ್ಲಿ ಅಳವಡಿಸಬೇಕು ಎಂದು ಅವರು ಒತ್ತಿಹೇಳಿದರು.

ಫಲಕಗಳ ಎತ್ತರ, ಆಧಾರ ಕಂಬಗಳ ನಡುವಿನ ಅಂತರ ಮತ್ತು ಕೃಷಿ ಯಂತ್ರೋಪಕರಣಗಳ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರಾಯೋಗಿಕ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಬೇಕು ಎಂದು ಅವರು ಕರೆ ನೀಡಿದರು. ಇದರಿಂದ ರೈತರು ಉಳುಮೆ ಮಾಡುವುದಕ್ಕೂ, ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬೆಳೆಗಳು ಮತ್ತು ಬೆಳೆ ಪದ್ಧತಿಗಳನ್ನು ಬದಲಾಯಿಸುವುದಕ್ಕೂ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಮಣ್ಣಿನ ಸವಕಳಿಯನ್ನು ತಡೆದು ನೀರನ್ನು ಅತ್ಯುತ್ತಮವಾಗಿ ಬಳಸಲು ಮಳೆನೀರಿನ ಹರಿವು ಮತ್ತು ಸಂಗ್ರಹಣೆಗೆ ಪರಿಣಾಮಕಾರಿ ವ್ಯವಸ್ಥೆಗಳ ಅಗತ್ಯವಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ರೈತ ಉತ್ಪಾದಕ ಸಂಘಟನೆಗಳನ್ನು (ಎಫ್‌ಪಿಒ) ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಉಪಕರಣಗಳ ಬಳಕೆ, ದುರಸ್ತಿ ಮತ್ತು ನಿರ್ವಹಣೆಯಲ್ಲಿ ಗ್ರಾಮೀಣ ಯುವಕರು ಹಾಗೂ ಮಹಿಳೆಯರಿಗೆ ತರಬೇತಿ ನೀಡಬೇಕು ಎಂದೂ ಅವರು ಹೇಳಿದರು.

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಆರ್ಥಿಕ ಬೆಳವಣಿಗೆಯ ಜೊತೆಗೆ ಶುದ್ಧ ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ವಿವರಿಸಿದರು. ದೇಶದ ಪಳೆಯುಳಿಕೆಯೇತರ ಇಂಧನ ಆಧಾರಿತ ಸ್ಥಾಪಿತ ವಿದ್ಯುತ್ ಸಾಮರ್ಥ್ಯ 308.03 ಗಿಗಾವಾಟ್‌ಗೆ ತಲುಪಿದ್ದು, ಸುಮಾರು 560 ಗಿಗಾವಾಟ್‌ನ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ. 55ಕ್ಕಿಂತ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಆರ್ಥಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಸಾಧಿಸಿರುವ ವ್ಯಾಪಕ ಪರಿವರ್ತನೆಯನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು ಉಲ್ಲೇಖಿಸಿದರು.

ಆಹಾರ ಭದ್ರತೆ, ಇಂಧನದ ಅಗತ್ಯ ಮತ್ತು ಭೂಮಿಯ ಲಭ್ಯತೆ ನಡುವೆ ಸಮತೋಲನ ಕಾಯ್ದುಕೊಳ್ಳುವ ಮಹತ್ವವನ್ನು ವಿವರಿಸಿದ ಸಚಿವರು, ಒಂದೇ ಭೂಮಿಯಲ್ಲಿ ಕೃಷಿ ಮತ್ತು ವಿದ್ಯುತ್ ಉತ್ಪಾದನೆ ಎರಡರಿಂದಲೂ ರೈತರು ಆದಾಯ ಗಳಿಸಲು ಅಗ್ರಿ ವೋಲ್ಟಾಯಿಕ್ಸ್ ನೆರವಾಗುತ್ತದೆ ಎಂದರು. “ಒಂದು ಭೂಮಿ, ಎರಡು ಫಸಲುಗಳು” ಎಂಬ ತತ್ವವನ್ನು ಅವರು ಪುನರುಚ್ಚರಿಸಿದರು.

ದಿ ಎನರ್ಜಿ ಆ್ಯಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (ಟಿಇಆರ್‌ಐ) ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿದ ಅವರು, ಭಾರತದ 160 ಮಿಲಿಯನ್ ಹೆಕ್ಟೇರ್ ಕೃಷಿ ಭೂಮಿಯಲ್ಲಿ 47.5 ಮಿಲಿಯನ್ ಹೆಕ್ಟೇರ್‌ಗಳು, ಅಂದರೆ ಸುಮಾರು ಶೇ. 30ರಷ್ಟು ಭೂಮಿ, ತಾಂತ್ರಿಕವಾಗಿ ಅಗ್ರಿ ವೋಲ್ಟಾಯಿಕ್ಸ್‌ಗೆ ಸೂಕ್ತವಾಗಿದೆ ಎಂದು ಅಂದಾಜಿಸಲಾಗಿದೆ ಎಂದರು. 16 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿದರೆ ವರ್ಷಕ್ಕೆ 12,775 TWh ವಿದ್ಯುತ್ ಉತ್ಪಾದಿಸಬಹುದು ಎಂದು ಒಂದು ಅಂದಾಜು ಸೂಚಿಸಿದೆ. 2050ರ ವೇಳೆಗೆ ಭಾರತದ ಅಂದಾಜು ವಿದ್ಯುತ್ ಬೇಡಿಕೆಯಾದ 5,250–10,020 TWh ಗೆ ಇದು ಸಮನಾಗಿರಬಹುದು ಅಥವಾ ಅದನ್ನೂ ಮೀರಿಸಬಹುದು. ಇವು ತಾಂತ್ರಿಕ ಅಂದಾಜುಗಳಾಗಿದ್ದು, ವಾಸ್ತವಿಕ ಅನುಷ್ಠಾನವು ಸ್ಥಳೀಯ ಪರಿಸ್ಥಿತಿಗಳು ಮತ್ತು ಕಾರ್ಯಸಾಧ್ಯತೆಯನ್ನು ಅವಲಂಬಿಸಿರುತ್ತದೆ ಎಂದು ಸಚಿವರು ತಿಳಿಸಿದರು. ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಒಟ್ಟಾಗಿ ಭಾರತದ ಅಂದಾಜು ಅಗ್ರಿ ವೋಲ್ಟಾಯಿಕ್ಸ್‌ ಸಾಮರ್ಥ್ಯದ ಸುಮಾರು ಶೇ. 50ರಷ್ಟು ಇದೆ ಎಂದು ಅವರು ಹೇಳಿದರು.

ಹಣ್ಣು ಮತ್ತು ತೋಟಗಾರಿಕಾ ಬೆಳೆಗಳು, ತರಕಾರಿಗಳು, ಸಾಂಬಾರ ಬೆಳೆಗಳು, ತೋಟಗಾರಿಕೆ, ಪುಷ್ಪಕೃಷಿ, ಮೇವು ಬೆಳೆಗಳು ಹಾಗೂ ಸೂಕ್ತ ಪ್ರದೇಶಗಳಲ್ಲಿ ಪಶುಸಂಗೋಪನೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಅಗ್ರಿ ವೋಲ್ಟಾಯಿಕ್ಸ್‌ ಹೊಂದಿಸಿಕೊಳ್ಳಬಹುದು ಎಂದು ಶ್ರೀ ಜೋಶಿ ಹೇಳಿದರು. ಸೂಕ್ತ ವ್ಯವಸ್ಥೆಗಳಲ್ಲಿ ಕೆಲವು ಬೆಳೆಗಳ ಇಳುವರಿ ಶೇ. 10–20ರಷ್ಟು ಹೆಚ್ಚಾಗಬಹುದು ಮತ್ತು ನೀರಿನ ಬಳಕೆ ಸುಮಾರು ಶೇ. 30ರಷ್ಟು ಕಡಿಮೆಯಾಗಬಹುದು ಎಂದು ಕ್ಷೇತ್ರ ಅಧ್ಯಯನಗಳು ಸೂಚಿಸಿವೆ ಎಂದು ಅವರು ಹೇಳಿದರು.

ಕೃಷಿ ಮೂಲಸೌಕರ್ಯವನ್ನು ವಿದ್ಯುತ್ ಗ್ರಿಡ್ ಯೋಜನೆಯೊಂದಿಗೆ ಸಂಯೋಜಿಸುವ ಸಾಧ್ಯತೆಯನ್ನೂ ಸಚಿವರು ಪ್ರಸ್ತಾಪಿಸಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 7.70 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಸೌಲಭ್ಯಗಳನ್ನು ಭೌಗೋಳಿಕ ಗುರುತುಗಳೊಂದಿಗೆ (ಜಿಐ) ದಾಖಲಿಸಲಾಗಿದೆ. ಪಿಎಂ ಕಿಸಾನ್ ಸಂಪದ ಯೋಜನೆಯಡಿ 400ಕ್ಕೂ ಹೆಚ್ಚು ಸಮಗ್ರ ಶೀತ ಸರಪಳಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಮಾರುಕಟ್ಟೆಗಳು, ಗೋದಾಮುಗಳು ಮತ್ತು ಶೀತ ಸರಪಳಿ ಸೌಲಭ್ಯಗಳ ಸಮೀಪ ಸೂಕ್ತ ಯೋಜನಾ ಸ್ಥಳಗಳನ್ನು ಗುರುತಿಸಲು ಕೃಷಿ ಸೌಲಭ್ಯಗಳ ನಕ್ಷೆಗಳನ್ನು ವಿದ್ಯುತ್ ಗ್ರಿಡ್ ಮೂಲಸೌಕರ್ಯದೊಂದಿಗೆ ಸಂಯೋಜಿಸಬಹುದು. ಇದರಿಂದ ಸಾಗಣೆ ವ್ಯವಸ್ಥೆ ಮತ್ತು ಯೋಜನೆಗಳ ಕಾರ್ಯಸಾಧ್ಯತೆ ಸುಧಾರಿಸುತ್ತದೆ ಎಂದು ಅವರು ಸಲಹೆ ನೀಡಿದರು.

ಕೃಷಿಯಲ್ಲಿ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಶ್ರೀ ಜೋಶಿ, ಪಿಎಂ-ಕುಸುಮ್ ಯೋಜನೆಯಡಿ ವಿಕೇಂದ್ರೀಕೃತ ಸೌರ ವಿದ್ಯುತ್ ಘಟಕಗಳು, ಪ್ರತ್ಯೇಕ ಸೌರ ಪಂಪ್‌ಗಳು ಮತ್ತು ಫೀಡರ್ ಮಟ್ಟದ ಸೌರೀಕರಣ ಸೇರಿದಂತೆ ಗ್ರಿಡ್‌ಗೆ ಸಂಪರ್ಕ ಹೊಂದಿರುವ ಪಂಪ್‌ಗಳ ಸೌರೀಕರಣಕ್ಕೆ ಬೆಂಬಲ ನೀಡಲಾಗಿದೆ ಎಂದರು. ಹಿಂದಿನ ವರ್ಷ ವಿಕೇಂದ್ರೀಕೃತ ಸೌರ ಸಾಮರ್ಥ್ಯ 16.3 ಗಿಗಾವಾಟ್‌ಗೆ ತಲುಪಿದ್ದು, ಇದರಲ್ಲಿ ಪಿಎಂ-ಕುಸುಮ್‌ ಯೋಜನೆಯಡಿ 7.6 ಗಿಗಾವಾಟ್ ಮತ್ತು ಮೇಲ್ಛಾವಣಿ ಸೌರಶಕ್ತಿಯಿಂದ 8.7 ಗಿಗಾವಾಟ್ ಸೇರಿವೆ ಎಂದು ಅವರು ಹೇಳಿದರು. ಈ ಬೆಳವಣಿಗೆಗೆ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯೂ ಪ್ರಮುಖ ಕೊಡುಗೆ ನೀಡಿದ್ದು, ಇದರ ಫಲಾನುಭವಿಗಳ ಸಂಖ್ಯೆ 63 ಲಕ್ಷವನ್ನು ಮೀರಿದೆ ಎಂದು ಅವರು ಹೇಳಿದರು.

ಪಿಎಂ-ಕುಸುಮ್‌ ಯೋಜನೆಯ ಮುಂದಿನ ಹಂತದ ಅಡಿಯಲ್ಲಿ ಜಗತ್ತಿನ ಅತ್ಯಂತ ಮಹತ್ವಾಕಾಂಕ್ಷೆಯ ಅಗ್ರಿ ವೋಲ್ಟಾಯಿಕ್ಸ್ ಕಾರ್ಯಕ್ರಮಗಳಲ್ಲಿ ಒಂದನ್ನು ಆರಂಭಿಸಲಾಗುವುದು ಎಂದು ಸಚಿವರು ಘೋಷಿಸಿದರು. ಈಗಿರುವ ಕೃಷಿ ಕಾರ್ಯಕ್ರಮಗಳೊಂದಿಗೆ ಈ ಯೋಜನೆಯನ್ನು ಸಂಯೋಜಿಸುವ ಮೂಲಕ ಕೃಷಿಯಲ್ಲಿ ಸೌರಶಕ್ತಿಯ ಬಳಕೆಯನ್ನು ಮತ್ತಷ್ಟು ವಿಸ್ತರಿಸಲು ಇದು ಅವಕಾಶ ಕಲ್ಪಿಸಲಿದೆ ಎಂದರು. ಎತ್ತರದಲ್ಲಿ ಮತ್ತು ಓರೆಯಾಗಿ ಅಳವಡಿಸುವ ರಚನೆಗಳಿಂದ ಅಗ್ರಿ ವೋಲ್ಟಾಯಿಕ್ಸ್ ಘಟಕಗಳ ವೆಚ್ಚವು ಸಾಮಾನ್ಯ ಸೌರ ಘಟಕಗಳಿಗಿಂತ ಶೇ. 25–30ರಷ್ಟು ಹೆಚ್ಚಾಗಬಹುದು. ಅಗ್ರಿ ವೋಲ್ಟಾಯಿಕ್ಸ್ ಸಾಮರ್ಥ್ಯ ನಿರ್ಮಾಣಕ್ಕೆ ಬೆಂಬಲ ನೀಡುವ ಮೂಲಕ ಈ ವೆಚ್ಚದ ಅಂತರವನ್ನು ಸರಿದೂಗಿಸಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ತಿಳಿಸಿದರು.

2025–26ರಲ್ಲಿ ವಿದ್ಯುತ್ ಪೂರೈಕೆಯ ಸರಾಸರಿ ವೆಚ್ಚ ಪ್ರತಿ ಯೂನಿಟ್‌ಗೆ ಸುಮಾರು ₹7ರಷ್ಟಿತ್ತು. ಆದರೆ ಕೆಲವು ನಿರ್ದಿಷ್ಟ ಊಹೆಗಳ ಆಧಾರದಲ್ಲಿ ಅಗ್ರಿ ವೋಲ್ಟಾಯಿಕ್ಸ್ ಮೌಲ್ಯಮಾಪನಗಳಲ್ಲಿ ಪ್ರತಿ ಯೂನಿಟ್ ವಿದ್ಯುತ್ ಉತ್ಪಾದನಾ ವೆಚ್ಚ ₹3.20–₹3.30ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಶ್ರೀ ಜೋಶಿ ಹೇಳಿದರು. ಸ್ಪರ್ಧಾತ್ಮಕ ಯೋಜನಾ ವಿನ್ಯಾಸಗಳು ಮತ್ತು ಹಣಕಾಸು ಮಾದರಿಗಳು ಅಗ್ರಿ ವೋಲ್ಟಾಯಿಕ್ಸ್ ಅನ್ನು ವಾಣಿಜ್ಯ ದೃಷ್ಟಿಯಿಂದ ಕಾರ್ಯಸಾಧ್ಯವಾಗಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.

ಅಂತರರಾಷ್ಟ್ರೀಯ ಅನುಭವವನ್ನು ಉಲ್ಲೇಖಿಸಿದ ಸಚಿವರು, 2025ರಲ್ಲಿ ಜಾಗತಿಕ ಅಗ್ರಿ ವೋಲ್ಟಾಯಿಕ್ಸ್ ಮಾರುಕಟ್ಟೆಯ ಸ್ಥಾಪಿತ ಸಾಮರ್ಥ್ಯ 18.4 ಗಿಗಾವಾಟ್‌ಗಳನ್ನು ದಾಟಿದೆ ಎಂದರು. ಇಟಲಿಯು ರೈತರು, ಸೌರಶಕ್ತಿ ಅಭಿವೃದ್ಧಿಪಡಿಸುವ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳಿಗಾಗಿ 1.7 ಬಿಲಿಯನ್ ಯೂರೋಗಳ ನಿಧಿ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಜಪಾನ್ ಎಲ್ಲ ವರ್ಗದ ಕೃಷಿ ಭೂಮಿಯಲ್ಲಿ ಅಗ್ರಿ ವೋಲ್ಟಾಯಿಕ್ಸ್‌ಗೆ ಅವಕಾಶ ನೀಡಿ, ಆದ್ಯತಾ ದರಗಳ ಮೂಲಕ ಸಣ್ಣ ಪ್ರಮಾಣದ ವ್ಯವಸ್ಥೆಗಳಿಗೆ ಬೆಂಬಲ ನೀಡುತ್ತಿದೆ. ಜರ್ಮನಿಯಲ್ಲಿ ಕೃಷಿ ಬಳಕೆ ಮುಂದುವರಿಸುವುದು ಮತ್ತು ಕನಿಷ್ಠ ಬೆಳೆ ಇಳುವರಿ ಸಾಧಿಸುವುದನ್ನು ಬೆಂಬಲದ ಷರತ್ತುಗಳಾಗಿ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಈ ಕ್ಷೇತ್ರದ ಉದ್ಯೋಗ ಸೃಷ್ಟಿ ಸಾಮರ್ಥ್ಯವನ್ನೂ ಸಚಿವರು ಪ್ರಸ್ತಾಪಿಸಿದರು. ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಆ್ಯಂಡ್ ಪಾಲಿಸಿ ಪ್ರಕಟಿಸಿದ ಅಗ್ರಿಪಿವಿ ಕೈಪಿಡಿಯ ಪ್ರಕಾರ, ಅಗ್ರಿ ವೋಲ್ಟಾಯಿಕ್ಸ್ ನಿಂದ 1.10 ಲಕ್ಷದಿಂದ 3.32 ಲಕ್ಷದಷ್ಟು ಪೂರ್ಣಕಾಲಿಕ ಉದ್ಯೋಗಗಳಿಗೆ ಸಮಾನವಾದ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು. ಇದರಿಂದ ಕೃಷಿ ಉತ್ಪಾದಕತೆ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಗ್ರಾಮೀಣ ಉದ್ಯೋಗಕ್ಕೆ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದರು.

ಜಾಗತಿಕ ದಕ್ಷಿಣದ ಅಗತ್ಯಗಳಿಗೆ ಸೂಕ್ತವಾದ ಅಗ್ರಿ ವೋಲ್ಟಾಯಿಕ್ಸ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಂತರರಾಷ್ಟ್ರೀಯ ಸಹಭಾಗಿತ್ವದ ಮಹತ್ವವನ್ನು ಸಚಿವರು ಒತ್ತಿಹೇಳಿದರು. ಈ ಕ್ಷೇತ್ರದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಜರ್ಮನ್ ಪಾಲುದಾರರು, ಭಾರತ-ಜರ್ಮನಿ ಅಗ್ರಿ ವೋಲ್ಟಾಯಿಕ್ಸ್ ಸಹಕಾರ, ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಇತರ ಸಂಸ್ಥೆಗಳ ಪಾತ್ರವನ್ನು ಅವರು ಶ್ಲಾಘಿಸಿದರು. ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳು ಸಣ್ಣ ರೈತರ ಸವಾಲುಗಳು, ನೀರಿನ ಕೊರತೆ, ವಿಶ್ವಾಸಾರ್ಹ ಶುದ್ಧ ಇಂಧನ ಮತ್ತು ಕೈಗೆಟುಕುವ ತಂತ್ರಜ್ಞಾನಗಳ ಅಗತ್ಯದಂತಹ ಸಾಮಾನ್ಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಪರಸ್ಪರ ಅನುಭವ ಹಂಚಿಕೆ ಮತ್ತು ಸ್ಥಳೀಯ ಪರಿಸ್ಥಿತಿಗೆ ಹೊಂದುವ ಪರಿಹಾರಗಳ ಆಧಾರದ ಮೇಲೆ ಸಹಕಾರ ನೀಡಲು ಅವರು ಕರೆ ನೀಡಿದರು.

'ಗ್ಲೋಬಲ್ ಅಗ್ರಿ ವೋಲ್ಟಾಯಿಕ್ಸ್ ಕ್ಲೈಮೇಟ್-ಝೋನ್ ಟೆಕ್ನಿಕಲ್ ಫ್ರೇಮ್‌ವರ್ಕ್' ಬಿಡುಗಡೆ ಈ ತಂತ್ರಜ್ಞಾನದ ವ್ಯಾಪಕ ಅಳವಡಿಕೆಯತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಶ್ರೀ ಜೋಶಿ ಹೇಳಿದರು. ಸರ್ಕಾರಗಳು, ರೈತರು, ಡೆವಲಪರ್‌ಗಳು, ಸಂಶೋಧಕರು ಮತ್ತು ಹಣಕಾಸು ಸಂಸ್ಥೆಗಳು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು, ತಾಂತ್ರಿಕ ಮಾನದಂಡಗಳನ್ನು ರೂಪಿಸಲು ಹಾಗೂ ಪ್ರತ್ಯೇಕ ಪ್ರಾಯೋಗಿಕ ಯೋಜನೆಗಳಿಂದ ವ್ಯಾಪಕ ಅನುಷ್ಠಾನದತ್ತ ಸಾಗಲು ಈ ಚೌಕಟ್ಟು ನೆರವಾಗಲಿದೆ ಎಂದು ಅವರು ಹೇಳಿದರು.

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಅವರು ಕೃಷಿಯಲ್ಲಿ ಸೌರಶಕ್ತಿಯನ್ನು ಉತ್ತೇಜಿಸುವಲ್ಲಿ ಪಿಎಂ-ಕುಸುಮ್‌ ಯೋಜನೆಯ ಕೊಡುಗೆಯನ್ನು ವಿವರಿಸಿದರು. ಈ ಯೋಜನೆಯಡಿ ಸುಮಾರು 25 ಲಕ್ಷ ಪಂಪ್‌ಸೆಟ್‌ಗಳನ್ನು ಸೌರಶಕ್ತಿಗೆ ಪರಿವರ್ತಿಸಲಾಗಿದ್ದು, ಡೀಸೆಲ್ ಪಂಪ್‌ಗಳ ಬದಲಿಗೆ ಸೌರ ಪಂಪ್‌ಗಳನ್ನು ಬಳಸಲು ಸಾಧ್ಯವಾಗಿರುವುದರಿಂದ ಸುಮಾರು 25 ಲಕ್ಷ ರೈತರಿಗೆ ಪ್ರಯೋಜನವಾಗಿದೆ ಎಂದು ಅವರು ಹೇಳಿದರು. ಡೀಸೆಲ್ ಬಳಕೆ ಮತ್ತು ಕಚ್ಚಾ ತೈಲ ಆಮದಿಗೆ ವಿದೇಶಿ ವಿನಿಮಯ ವೆಚ್ಚವನ್ನು ಕಡಿಮೆ ಮಾಡುವಲ್ಲಿಯೂ ಈ ಯೋಜನೆ ನೆರವಾಗಿದೆ ಎಂದರು.

ರೈತರ ಪ್ರಗತಿ, ಆದಾಯ ಗಳಿಕೆ ಮತ್ತು ಜೀವನೋಪಾಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡುವಂತೆ ಪಿಎಂ-ಕುಸುಮ್‌ ಯೋಜನೆಯ ಮುಂದಿನ ಹಂತವನ್ನು ರೂಪಿಸಲು ಸಚಿವಾಲಯವು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಸಾರಂಗಿ ತಿಳಿಸಿದರು. ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೆಚ್ಚಿಸುವ ಮಹತ್ವವನ್ನು ಅವರು ಒತ್ತಿಹೇಳಿದರು. ದೊಡ್ಡ ಪ್ರಮಾಣದಲ್ಲಿ ಅಗ್ರಿ ವೋಲ್ಟಾಯಿಕ್ಸ್ ಅನ್ನು ಉತ್ತೇಜಿಸಲು ವಿದ್ಯುತ್ ವಿತರಣಾ ಕಂಪನಿಗಳು ಮತ್ತು ರಾಜ್ಯ ಇಂಧನ ಇಲಾಖೆಗಳ ಸಹಭಾಗಿತ್ವದಲ್ಲಿ ಸೂಕ್ತ ವಿದ್ಯುತ್ ಖರೀದಿ ಮಾದರಿಗಳನ್ನು ರೂಪಿಸುವ ಪ್ರಯತ್ನಗಳೂ ನಡೆಯುತ್ತಿವೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ಖಾತೆ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್, ಭಾರತದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಅತೀಶ್ ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮೂರು ದಿನಗಳ ವಿಶ್ವ ಸಮ್ಮೇಳನವು 2026ರ ಅಕ್ಟೋಬರ್ 23ರಂದು ಮುಕ್ತಾಯಗೊಳ್ಳಲಿದೆ.

******

 


(ಪ್ರಕಟಣೆ ಐ.ಡಿ.: 2326170) ವಿಸಿಟರ್ ಕೌಂಟರ್ : 19
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी