ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಮೈಸೂರಿನಲ್ಲಿ ನಡೆಯುತ್ತಿರುವ 'ಶಿಲ್ಪ ಸಮಾಗಮ ಪ್ರದರ್ಶನ'ಕ್ಕೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶು ಪಂತ್ ಭೇಟಿ
9 ದಿನಗಳ ಈ ಪ್ರದರ್ಶನದಲ್ಲಿ 83 ಮಳಿಗೆಗಳಿವೆ. ಇದರಲ್ಲಿ ಕುಶಲಕರ್ಮಿಗಳಿಗೆ 80 ಮಳಿಗೆಗಳನ್ನು ಮೀಸಲಿಡಲಾಗಿದ್ದು, ಅದರಲ್ಲಿ 37 ಮಳಿಗೆಗಳು ಮಹಿಳಾ ಕುಶಲಕರ್ಮಿಗಳಿಗೆ ಸೇರಿವೆ.
12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.
ಹಿಂದುಳಿದ ಸಮುದಾಯಗಳಿಗೆ ಮಾರುಕಟ್ಟೆ ಪ್ರವೇಶ, ಉದ್ಯಮಶೀಲತೆಯ ಉತ್ತೇಜನ ಮತ್ತು ಅವರ ಆರ್ಥಿಕ ಸಬಲೀಕರಣಕ್ಕಿರುವ ಸರ್ಕಾರದ ಬದ್ಧತೆಯನ್ನು ತಿಳಿಸಿದ ಶ್ರೀ ಸುಧಾಂಶು ಪಂತ್
ಪ್ರಕಟಣಾ ದಿನಾಂಕ:
18 OCT 2026 9:29PM by PIB Bengaluru
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶು ಪಂತ್ ಅವರು, ಮೈಸೂರಿನಲ್ಲಿ ನಡೆಯುತ್ತಿರುವ 9 ದಿನಗಳ 'ಶಿಲ್ಪ ಸಮಾಗಮ ಪ್ರದರ್ಶನ 2026'ಕ್ಕೆ ಇಂದು ( ಭಾನುವಾರ, 18.10.2026) ಭೇಟಿ ನೀಡಿದರು.

ಈ ಪ್ರದರ್ಶನವನ್ನು ಸಚಿವಾಲಯವು ತನ್ನ ಅಧೀನದಲ್ಲಿರುವ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್.ಎಸ್.ಎಫ್.ಡಿ.ಸಿ.), ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್.ಬಿ.ಸಿ.ಎಫ್.ಡಿ.ಸಿ.) ಮತ್ತು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್.ಎಸ್.ಕೆ.ಎಫ್.ಡಿ.ಸಿ.) ಸಹಯೋಗದೊಂದಿಗೆ ಆಯೋಜಿಸಿದೆ. ಈ ನಿಗಮಗಳು ಕುಶಲಕರ್ಮಿಗಳಿಗೆ ಮತ್ತು ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ಒದಗಿಸುತ್ತವೆ.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಕಾರ್ಯದರ್ಶಿಯವರು ವಿವಿಧ ಮಳಿಗೆಗಳನ್ನು ಪರಿಶೀಲಿಸಿದರು ಹಾಗೂ ಮಳಿಗೆಯ ನಿರ್ವಾಹಕರು ಮತ್ತು ಸಂದರ್ಶಕರೊಂದಿಗೆ ಮಾತುಕತೆ ನಡೆಸಿದರು.

ಶರೀಂ ಪಂತ್ ಅವರು ಮೈಸೂರಿಗೆ ಎರಡು ದಿನಗಳ ಭೇಟಿ ನೀಡಿದ್ದು, ಈ ವೇಳೆ ಅವರು ಸಚಿವಾಲಯದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಅನುಷ್ಠಾನದ ಕುರಿತು ಆಡಳಿತ ಮಂಡಳಿಯೊಂದಿಗೆ ಸಮಗ್ರ ಪರಿಶೀಲನೆ ನಡೆಸುತ್ತಿದ್ದಾರೆ.

ಇಂತಹ ಉಪಕ್ರಮಗಳ ಮೂಲಕ, ಹಿಂದುಳಿದ ಸಮುದಾಯಗಳಿಗೆ ಮಾರುಕಟ್ಟೆ ಪ್ರವೇಶ, ಉದ್ಯಮಶೀಲತೆಯ ಪ್ರೋತ್ಸಾಹ ಮತ್ತು ಅವರ ಆರ್ಥಿಕ ಸಬಲೀಕರಣಕ್ಕಾಗಿ ಸಚಿವಾಲಯ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಶ್ರೀ ಪಂತ್ ಅವರು ಹೇಳಿದರು.

'ಶಿಲ್ಪ ಸಮಾಗಮ ಪ್ರದರ್ಶನ'ವು ಅಕ್ಟೋಬರ್ 19, 2026 ಸೋಮವಾರದವರೆಗೆ ನಡೆಯಲಿದೆ. ಇದು ಸಂದರ್ಶಕರಿಗೆ ಭಾರತದ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಮತ್ತು ಕೈಮಗ್ಗ ಉತ್ಪನ್ನಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುವುದರ ಜೊತೆಗೆ, ಕುಶಲಕರ್ಮಿಗಳ ಜೀವನೋಪಾಯಕ್ಕೆ ಬೆಂಬಲ ನೀಡಲು ವೇದಿಕೆಯಾಗಿದೆ.

ಅಕ್ಟೋಬರ್ 11, 2026 ರಿಂದ ಈ ಪ್ರದರ್ಶನ ನಡೆಯುತ್ತಿದೆ. ಇದು ಪರಿಶಿಷ್ಟ ಜಾತಿಗಳು, ಇತರೆ ಹಿಂದುಳಿದ ವರ್ಗಗಳು ಸಮುದಾಯಗಳು ಮತ್ತು ಸಫಾಯಿ ಕರ್ಮಚಾರಿ ವರ್ಗದವರುಗಳಿಗೆ ಸೇರಿದ ಕುಶಲಕರ್ಮಿಗಳು ಹಾಗೂ ಫಲಾನುಭವಿಗಳಿಗೆ ತಮ್ಮ ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳು ಮತ್ತು ಇತರ ಸರಕುಗಳನ್ನು ವಿಶಾಲ ಗ್ರಾಹಕ ವರ್ಗದ ಮುಂದೆ ಪ್ರದರ್ಶಿಸಲು ಒಂದು ಮಾರುಕಟ್ಟೆ ವೇದಿಕೆ ಒದಗಿಸುತ್ತದೆ .ಎಂದು ಹೇಳಿದರು

ಈ ಪ್ರದರ್ಶನದಲ್ಲಿ ಒಟ್ಟು 83 ಮಳಿಗೆಗಳಿವೆ. ಇದರಲ್ಲಿ ಕುಶಲಕರ್ಮಿಗಳಿಗೆ 80 ಮಳಿಗೆಗಳನ್ನು ಮೀಸಲಿಡಲಾಗಿದ್ದು, ಅದರಲ್ಲಿ 37 ಮಳಿಗೆಗಳು ಮಹಿಳಾ ಕುಶಲಕರ್ಮಿಗಳಿಗೆ ಸೇರಿವೆ. ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಕೇರಳ, ರಾಜಸ್ಥಾನ, ಪುದುಚೇರಿ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕುಶಲಕರ್ಮಿಗಳು ಈ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

ಈ ಮಳಿಗೆಗಳಲ್ಲಿ ಕರಕುಶಲ ವಸ್ತುಗಳು, ಕೈಮಗ್ಗ ಸೀರೆಗಳು, ಸಾಂಬಾರ ಪದಾರ್ಥಗಳು, ಉಪ್ಪಿನಕಾಯಿಗಳು, ಅಗರಬತ್ತಿಗಳು, ಜೇನುತುಪ್ಪ ಆಧಾರಿತ ಉತ್ಪನ್ನಗಳು, ಅಚ್ಚು-ಕೈ ಮುದ್ರಿತ (ಬ್ಲಾಕ್-ಪ್ರಿಂಟ್) ವಸ್ತುಗಳು, ಚರ್ಮದ ವಸ್ತುಗಳು, ಮರದ ಆಟಿಕೆಗಳು, ಬ್ಯಾಗ್ ಗಳು, ಪರ್ಸ್ಗಳು, ಟೆರಾಕೋಟಾ (ಮಣ್ಣಿನ) ಉತ್ಪನ್ನಗಳು, ಕೃತಕ ಆಭರಣಗಳು, ಬೀಟಿ/ತೇಗು ಸಾಗುವಾನಿ (ರೋಸ್ವುಡ್) ಮರದ ಗೋಡೆ ಅಲಂಕಾರಿಕ ವಸ್ತುಗಳು ಹಾಗೂ ಬೆಡ್ ಮತ್ತು ಕುಶನ್ ಕವರ್ ಗಳಂತಹ ವೈವಿಧ್ಯಮಯ ಉತ್ಪನ್ನಗಳು ಲಭ್ಯವಿವೆ. ಅಲ್ಲದೆ, ಸಾಂಪ್ರದಾಯಿಕ ಖಾದ್ಯಗಳನ್ನು ಬಡಿಸುವ ಆಹಾರ ಮಳಿಗೆಗಳೂ ಇದ್ದು, ಇವು ಸಂದರ್ಶಕರಿಗೆ ಉತ್ತಮ ಅನುಭವ ನೀಡುತ್ತವೆ ಎಂದು ಅವರು ಹೇಳಿದರು.

ಈ ಪ್ರದರ್ಶನವು ಕುಶಲಕರ್ಮಿಗಳಿಗೆ ಮಾರುಕಟ್ಟೆ ಸಂಪರ್ಕವನ್ನು ಬಲಪಡಿಸಲು, ಸಾಂಪ್ರದಾಯಿಕ ಕೌಶಲ್ಯಗಳನ್ನು ಉತ್ತೇಜಿಸಲು ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ. ಸಂದರ್ಶಕರು ಮತ್ತು ಸಂಭಾವ್ಯ ಗ್ರಾಹಕರೊಂದಿಗೆ ನೇರ ಸಂವಾದ ನಡೆಸುವ ಮೂಲಕ, ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಬಹುದು, ಗ್ರಾಹಕರ ನೆಲೆಯನ್ನು ವಿಸ್ತರಿಸಬಹುದು ಮತ್ತು ತಮ್ಮ ಉದ್ಯಮಗಳ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ಉಪಕ್ರಮವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವುದಲ್ಲದೆ, ಸಾಂಪ್ರದಾಯಿಕ ಕಲಾ ಪ್ರಕಾರಗಳು ಮತ್ತು ಕೌಶಲ್ಯಗಳನ್ನು ಸಂರಕ್ಷಿಸಲು ಸಹಕಾರಿಯಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಸಚಿವಾಲಯ ಮತ್ತು ಅದರ ಅಧೀನದಲ್ಲಿರುವ ಮೂರು ರಾಷ್ಟ್ರೀಯ ನಿಗಮಗಳ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಈ ಪ್ರದರ್ಶನವು ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ಅರ್ಹ ಫಲಾನುಭವಿಗಳು ಲಭ್ಯವಿರುವ ಆರ್ಥಿಕ ನೆರವು ಮತ್ತು ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದು ಅವರು ವಿವರಿಸಿದರು.
ಅನ್ವಯವಾಗುವ ನಿಯಮಗಳ ಪ್ರಕಾರ, ಕುಶಲಕರ್ಮಿಗಳಿಗೆ ಉಚಿತ ಮಳಿಗೆಗಳನ್ನು ಒದಗಿಸುವುದು ಹಾಗೂ ಪ್ರಯಾಣ ವೆಚ್ಚ, ದೈನಂದಿನ ಭತ್ಯೆ, ಸರಕು ಸಾಗಣೆ ಮತ್ತು ಊಟದ ವ್ಯವಸ್ಥೆಗೆ ಬೆಂಬಲ ನೀಡುವ ಮೂಲಕ ಸಚಿವಾಲಯವು ಅವರ ಭಾಗವಹಿಸುವಿಕೆಯನ್ನು ಸುಗಮಗೊಳಿಸುತ್ತದೆ. ಈ ಪ್ರದರ್ಶನದ ಜೊತೆಗೆ, ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಡಿಜಿಟಲ್ ವೇದಿಕೆಗಳ ಮೂಲಕ, ನಿರ್ದಿಷ್ಟ ಗುಂಪಿನ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಅವಕಾಶಗಳನ್ನು ವಿಸ್ತರಿಸುವ ಉದ್ದೇಶದಿಂದ, ಸಚಿವಾಲಯವು 'ಭಾರತ್ ಟುಲಿಪ್' (ಸಾಂಪ್ರದಾಯಿಕ ಕುಶಲಕರ್ಮಿಗಳ ಉನ್ನತಿ ಜೀವನೋಪಾಯ ಕಾರ್ಯಕ್ರಮ) ಎಂಬ ಉಪಕ್ರಮವನ್ನು ಉತ್ತೇಜಿಸುತ್ತಿದೆ ಎಂಬುದನ್ನು ಉಲ್ಲೇಖಿಸುವುದು ಇಲ್ಲಿ ಸೂಕ್ತವಾಗಿದೆ. 'ಭಾರತ್ ಟುಲಿಪ್' ಅಡಿಯಲ್ಲಿ ಉತ್ಪನ್ನಗಳಿಗೆ ಬ್ರಾಂಡಿಂಗ್ ಮಾಡುವುದರಿಂದ, ಅವುಗಳ ಗೋಚರತೆ ಹೆಚ್ಚುತ್ತದೆ, ಆನ್ಲೈನ್ ಮಾರಾಟಕ್ಕೆ ಅನುಕೂಲವಾಗುತ್ತದೆ ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ವಿಶಾಲ ಗ್ರಾಹಕ ವರ್ಗದೊಂದಿಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ.

ಸಚಿವಾಲಯವು 2022 ರಿಂದ 'ಶಿಲ್ಪ ಸಮಾಗಮ ಪ್ರದರ್ಶನ'ಗಳನ್ನು ಆಯೋಜಿಸುತ್ತಿದ್ದು, ಇಲ್ಲಿಯವರೆಗೆ ನಡೆಸಲಾದ 13 ಪ್ರದರ್ಶನಗಳ ಮೂಲಕ 975 ಕುಶಲಕರ್ಮಿಗಳು ಪ್ರಯೋಜನ ಪಡೆದಿದ್ದಾರೆ. ಪ್ರಸ್ತುತ ಮೈಸೂರಿನಲ್ಲಿ ನಡೆಯುತ್ತಿರುವ ಪ್ರದರ್ಶನವು, 2026-27ನೇ ಹಣಕಾಸು ವರ್ಷದ ಮೊದಲ 'ಶಿಲ್ಪ ಸಮಾಗಮ ಪ್ರದರ್ಶನ'ವಾಗಿದೆ.
ಈ ಪ್ರಸಕ್ತ ಹಣಕಾಸು ವರ್ಷದಲ್ಲಿ, ಗುವಾಹಟಿಯಲ್ಲಿ (ಅಕ್ಟೋಬರ್ 21 ರಿಂದ 28, 2026 ರವರೆಗೆ) ಹಾಗೂ ನವದೆಹಲಿಯ 'ದಿಲ್ಲಿ ಹಾಟ್', ಜೋಧ್ಪುರ ಮತ್ತು ಲಕ್ನೋಗಳಲ್ಲಿ ಹೆಚ್ಚುವರಿ ಪ್ರದರ್ಶನಗಳನ್ನು ಆಯೋಜಿಸಲು ಸಚಿವಾಲಯವು ಪ್ರಸ್ತಾಪಿಸಿದೆ. ಇದರ ಜೊತೆಗೆ, ನವದೆಹಲಿಯ ಭಾರತ್ ಮಂಟಪದಲ್ಲಿ 2026 ರ ನವೆಂಬರ್ 14 ರಿಂದ 27 ರವರೆಗೆ ನಡೆಯಲಿರುವ 'ಇಂಡಿಯಾ ಇಂಟರ್ನ್ಯಾಷನಲ್ ಟ್ರೇಡ್ ಫೇರ್ 2026' (ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ) ಮತ್ತು 2027 ರ ಫೆಬ್ರವರಿಯಲ್ಲಿ ನಡೆಯಲಿರುವ 'ಸೂರಜ್ಕುಂಡ್ ಪ್ರದರ್ಶನ'ದಂತಹ ಪ್ರಮುಖ ಪ್ರದರ್ಶನಗಳಲ್ಲಿಯೂ ಸಚಿವಾಲಯ ಭಾಗವಹಿಸಲು ಉದ್ದೇಶಿಸಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
******
(ಪ್ರಕಟಣೆ ಐ.ಡಿ.: 2324970)
ವಿಸಿಟರ್ ಕೌಂಟರ್ : 24