ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಮೈಸೂರಿನಲ್ಲಿ 9 ದಿನಗಳ ಶಿಲ್ಪ ಸಮಾಗಮ ಮೇಳ–2026 ಅಕ್ಟೋಬರ್ 11ರಿಂದ ಆರಂಭವಾಗಿದೆ


12 ರಾಜ್ಯಗಳ ಕುಶಲಕರ್ಮಿಗಳ ಸಾಂಪ್ರದಾಯಿಕ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಪ್ರದರ್ಶನ

ಪ್ರಕಟಣಾ ದಿನಾಂಕ: 12 OCT 2026 7:40PM by PIB Bengaluru

ಕರ್ನಾಟಕದ ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವತಿಯಿಂದ ಆಯೋಜಿಸಲಾಗಿರುವ ಶಿಲ್ಪ ಸಮಾಗಮ ಮೇಳ–2026 ಅಕ್ಟೋಬರ್ 11ರಿಂದ ಆರಂಭವಾಗಿದೆ.

ಅಕ್ಟೋಬರ್ 19ರವರೆಗೆ ಒಟ್ಟು 9 ದಿನಗಳ ಕಾಲ ನಡೆಯಲಿರುವ ಈ ಮೇಳವು ಪರಿಶಿಷ್ಟ ಜಾತಿಗಳು, ಇತರ ಹಿಂದುಳಿದ ವರ್ಗಗಳು ಮತ್ತು ಪೌರಕಾರ್ಮಿಕ ಸಮುದಾಯಗಳ ಫಲಾನುಭವಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶ ಹೊಂದಿದೆ. ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮೂರು ರಾಷ್ಟ್ರೀಯ ನಿಗಮಗಳಾದ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್‌ಎಸ್‌ಎಫ್‌ಡಿಸಿ), ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್‌ಬಿಸಿಎಫ್‌ಡಿಸಿ) ಹಾಗೂ ರಾಷ್ಟ್ರೀಯ ಪೌರಕಾರ್ಮಿಕರ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್‌ಎಸ್‌ಕೆಎಫ್‌ಡಿಸಿ) ಗಳ ಬೆಂಬಲ ಪಡೆದಿರುವ ಕುಶಲಕರ್ಮಿಗಳ ಉತ್ಪನ್ನಗಳೂ ಈ ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಈ ಉಪಕ್ರಮವು ಕುಶಲಕರ್ಮಿಗಳಿಗೆ ಮಾರುಕಟ್ಟೆಯ ಸಂಪರ್ಕಗಳನ್ನು ಬಲಪಡಿಸುವುದು, ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ಉತ್ತೇಜಿಸುವುದು ಮತ್ತು ಗುರಿನಿರ್ದಿಷ್ಟ ಸಮುದಾಯಗಳಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಚಿವಾಲಯವು 2022ರಿಂದ ಶಿಲ್ಪ ಸಮಾಗಮ ಮೇಳಗಳನ್ನು ಆಯೋಜಿಸುತ್ತಿದ್ದು, ಈವರೆಗೆ ಆಯೋಜಿಸಲಾದ 13 ಮೇಳಗಳ ಮೂಲಕ 975 ಕುಶಲಕರ್ಮಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2026–27ನೇ ಹಣಕಾಸು ವರ್ಷದಲ್ಲಿ ನಡೆಯುತ್ತಿರುವ ಮೊದಲ ಶಿಲ್ಪ ಸಮಾಗಮ ಮೇಳ ಇದಾಗಿದೆ.

ಮೇಳದಲ್ಲಿ ಒಟ್ಟು 83 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ಪೈಕಿ 80 ಮಳಿಗೆಗಳನ್ನು ಕುಶಲಕರ್ಮಿಗಳಿಗೆ ಹಂಚಿಕೆ ಮಾಡಲಾಗಿದೆ. ಮಳಿಗೆ ಪಡೆದಿರುವವರಲ್ಲಿ 37 ಮಹಿಳಾ ಕುಶಲಕರ್ಮಿಗಳೂ ಸೇರಿದ್ದಾರೆ.. ಸಂದರ್ಶಕರಿಗಾಗಿ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ಒದಗಿಸುವ ಆಹಾರ ಮಳಿಗೆಗಳನ್ನೂ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಕೇರಳ, ರಾಜಸ್ಥಾನ, ಪುದುಚೇರಿ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದಂತೆ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕುಶಲಕರ್ಮಿಗಳು ಈ ಮೇಳದಲ್ಲಿ ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದರು.

ಈ ಪ್ರದರ್ಶನದಲ್ಲಿ ವಿವಿಧ ಬಗೆಯ ಸಾಂಪ್ರದಾಯಿಕ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಅವುಗಳಲ್ಲಿ ಕರಕುಶಲ ವಸ್ತುಗಳು, ಕೈಮಗ್ಗದ ಸೀರೆಗಳು, ಮಸಾಲೆ ಪದಾರ್ಥಗಳು, ಉಪ್ಪಿನಕಾಯಿ, ಊದುಬತ್ತಿಗಳು, ಜೇನುತುಪ್ಪದ ಉತ್ಪನ್ನಗಳು, ಬ್ಲಾಕ್‌ ಪ್ರಿಂಟಿಂಗ್‌ ವಿನ್ಯಾಸದ ಉತ್ಪನ್ನಗಳು, ಕಾಂಜೀವರಂ ಸೀರೆಗಳು, ಚರ್ಮದ ವಸ್ತುಗಳು, ಮರದ ಆಟಿಕೆಗಳು, ಚೀಲಗಳು ಮತ್ತು ಪರ್ಸ್‌ಗಳು, ಟೆರಾಕೋಟಾ ಉತ್ಪನ್ನಗಳು, ಕೃತಕ ಆಭರಣಗಳು, ಬೀಟೆಮರದ ಗೋಡೆ ಅಲಂಕಾರಿಕ ವಸ್ತುಗಳು ಹಾಗೂ ಹಾಸಿಗೆ ಮತ್ತು ಕುಶನ್‌ಗಳ ಹೊದಿಕೆಗಳು ಸೇರಿವೆ. ಈ ವೇದಿಕೆಯು ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ಪರಿಚಯಿಸಲು ಮತ್ತು ಸಂಭಾವ್ಯ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸುತ್ತದೆ. ಜೊತೆಗೆ ಭಾರತದ ವೈವಿಧ್ಯಮಯ ಸಾಂಪ್ರದಾಯಿಕ ಪರಂಪರೆ ಮತ್ತು ಸಾಂಪ್ರದಾಯಿಕ ಕೌಶಲ್ಯಗಳನ್ನು ಉತ್ತೇಜಿಸುತ್ತದೆ.

ಶಿಲ್ಪ ಸಮಾಗಮ ಮೇಳವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಅದರ ಮೂರು ರಾಷ್ಟ್ರೀಯ ನಿಗಮಗಳಾದ ಎನ್‌ಎಸ್‌ಎಫ್‌ಡಿಸಿ, ಎನ್‌ಬಿಸಿಎಫ್‌ಡಿಸಿ ಮತ್ತು ಎನ್‌ಎಸ್‌ಕೆಎಫ್‌ಡಿಸಿಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಅಧಿಕಾರಿ ಹೇಳಿದರು. ಅರ್ಹ ಫಲಾನುಭವಿಗಳಿಗೆ ಲಭ್ಯವಿರುವ ನೆರವು ಮತ್ತು ಅಭಿವೃದ್ಧಿ ಅವಕಾಶಗಳ ಬಗ್ಗೆ ಅರಿವು ಹೆಚ್ಚಿಸುವುದರ ಜೊತೆಗೆ, ಉದ್ಯಮಶೀಲತೆ ಮತ್ತು ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.

ಗುರಿನಿರ್ದಿಷ್ಟ ಸಮುದಾಯಗಳ ಉತ್ಪನ್ನಗಳಿಗೆ ದೇಶ ಮತ್ತು ವಿದೇಶಗಳಲ್ಲಿನ ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಲು ಸಚಿವಾಲಯವು ʼಭಾರತ್ ತುಲಿಪ್ʼ (ಸಾಂಪ್ರದಾಯಿಕ ಕುಶಲಕರ್ಮಿಗಳ ಉನ್ನತಿ ಮತ್ತು ಜೀವನೋಪಾಯ ಕಾರ್ಯಕ್ರಮ) ಎಂಬ ಉಪಕ್ರಮವನ್ನು ಪರಿಚಯಿಸಿದೆ. ಈ ಉಪಕ್ರಮದಡಿ ಉತ್ಪನ್ನಗಳಿಗೆ ‘ಭಾರತ್ ತುಲಿಪ್’ ಎಂಬ ಬ್ರ್ಯಾಂಡ್‌ ಹೆಸರನ್ನು ನೀಡಲಾಗುತ್ತದೆ. ಇದರಿಂದ ಉತ್ಪನ್ನಗಳ ಗೋಚರತೆ ಹೆಚ್ಚುವುದರ ಜೊತೆಗೆ, ಆನ್‌ಲೈನ್‌ ಮಾರಾಟಕ್ಕೂ ಅನುಕೂಲವಾಗುತ್ತದೆ. ಕುಶಲಕರ್ಮಿಗಳ ಜೀವನೋಪಾಯವನ್ನು ಬಲಪಡಿಸುವುದು, ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಉಳಿಸುವುದು ಮತ್ತು ಭಾರತದ ಶ್ರೀಮಂತ ಕರಕುಶಲ ಪರಂಪರೆಯನ್ನು ಹೆಚ್ಚಿನ ಜನರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಮೇಳದಲ್ಲಿ ಭಾಗವಹಿಸುವ ಕುಶಲಕರ್ಮಿಗಳಿಗೆ ಉಚಿತ ಮಳಿಗೆಗಳನ್ನು ಒದಗಿಸುವುದರ ಜೊತೆಗೆ, ಪ್ರಯಾಣ ವೆಚ್ಚ, ದೈನಂದಿನ ಭತ್ಯೆ, ಸರಕುಗಳ ಸಾಗಣೆ ವೆಚ್ಚ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿದಂತೆ ಅಗತ್ಯ ನೆರವನ್ನು ಸಚಿವಾಲಯ ಒದಗಿಸುತ್ತದೆ ಎಂದು ಅಧಿಕಾರಿ ಹೇಳಿದರು. ಈ ನೆರವಿನಿಂದ ಕುಶಲಕರ್ಮಿಗಳು ಮಳಿಗೆ ಬಾಡಿಗೆ ಮತ್ತು ಭಾಗವಹಿಸುವಿಕೆಗೆ ಸಂಬಂಧಿಸಿದ ನಿರ್ದಿಷ್ಟ ವೆಚ್ಚಗಳನ್ನು ಭರಿಸುವ ಹೊರೆಯಿಲ್ಲದೆ ಮೇಳದಲ್ಲಿ ಪಾಲ್ಗೊಂಡು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ.

2026–27ನೇ ಹಣಕಾಸು ವರ್ಷದಲ್ಲಿ ಗುವಾಹಟಿ, ನವದೆಹಲಿಯ ದಿಲ್ಲಿ ಹಾಟ್‌, ಜೋಧಪುರ ಮತ್ತು ಲಕ್ನೋದಲ್ಲಿ ಹೆಚ್ಚುವರಿ ಶಿಲ್ಪ ಸಮಾಗಮ ಮೇಳಗಳನ್ನು ಆಯೋಜಿಸಲು ಸಚಿವಾಲಯ ಉದ್ದೇಶಿಸಿದೆ.

ಸಚಿವಾಲಯ ಮತ್ತು ಅದರ ಮೂರು ರಾಷ್ಟ್ರೀಯ ನಿಗಮಗಳು 2026ರ ನವೆಂಬರ್ 14ರಿಂದ 27ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (ಐಐಟಿಎಫ್)–2026 ಹಾಗೂ 2027ರ ಫೆಬ್ರವರಿಯಲ್ಲಿ ಫರೀದಾಬಾದ್‌ನಲ್ಲಿ ನಡೆಯಲಿರುವ ಸೂರಜ್‌ಕುಂಡ್ ಮೇಳದಲ್ಲಿ ಭಾಗವಹಿಸಲಿವೆ.

ಶಿಲ್ಪ ಸಮಾಗಮ ಮೇಳ ಮತ್ತು ಭಾರತ್ ತುಲಿಪ್‌ನಂತಹ ಉಪಕ್ರಮಗಳ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಗುರಿನಿರ್ದಿಷ್ಟ ಸಮುದಾಯಗಳ ಕುಶಲಕರ್ಮಿಗಳಿಗೆ ಮಾರುಕಟ್ಟೆ ಪ್ರವೇಶ, ಉದ್ಯಮಶೀಲತೆ ಮತ್ತು ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವುದನ್ನು ಮುಂದುವರಿಸಿದೆ. ಇದೇ ವೇಳೆ, ಭಾರತದ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ವಸ್ತುಗಳ ಸಂರಕ್ಷಣೆ ಹಾಗೂ ಅವುಗಳಿಗೆ ವ್ಯಾಪಕ ಮನ್ನಣೆ ದೊರೆಯುವಂತೆ ಮಾಡುವ ಪ್ರಯತ್ನಗಳಿಗೂ ಬೆಂಬಲ ನೀಡುತ್ತಿದೆ.

 

*****

 


(ಪ್ರಕಟಣೆ ಐ.ಡಿ.: 2322540) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी