ರೈಲ್ವೇ ಸಚಿವಾಲಯ
ನಾಗರಿಕ ಕೇಂದ್ರಿತ ಅಖಿಲ ಭಾರತ ʼರೈಲ್ ಜನ ಸಂವಾದ್ʼ 22.10.2026ರಂದು ಎಲ್ಲ ರೈಲು ನಿಲ್ದಾಣಗಳಲ್ಲಿ ನಡೆಯಲಿದೆ
ಭಾರತೀಯ ರೈಲ್ವೆಯಲ್ಲಿ 6ನೇ ವಿಶೇಷ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಿದ ರೈಲ್ವೆ ಮಂಡಳಿಯ ಕಾರ್ಯದರ್ಶಿ
ಸ್ಪಷ್ಟ ಫಲಿತಾಂಶಗಳು ಮತ್ತು 'ವೇಸ್ಟ್ ಟು ವಂಡರ್' (ತ್ಯಾಜ್ಯದಿಂದ ವಿಸ್ಮಯ) ಉಪಕ್ರಮಗಳಿಗೆ ವಿಶೇಷ ಅಭಿಯಾನದಲ್ಲಿ ಆದ್ಯತೆ
ಈ ತಿಂಗಳ ಅಂತ್ಯದೊಳಗೆ 1 ಲಕ್ಷ ಸ್ಥಳಗಳನ್ನು ಸ್ವಚ್ಛಗೊಳಿಸುವುದು, 7 ಲಕ್ಷ ಚದರ ಅಡಿ ಜಾಗವನ್ನು ತೆರವುಗೊಳಿಸುವುದು ಹಾಗೂ ಗುಜರಿ ಮತ್ತು ಇ-ತ್ಯಾಜ್ಯ ವಿಲೇವಾರಿಯಿಂದ ₹600 ಕೋಟಿ ಆದಾಯ ಗಳಿಸುವ ಗುರಿ
ಪ್ರಕಟಣಾ ದಿನಾಂಕ:
12 OCT 2026 7:06PM by PIB Bengaluru
ಭಾರತೀಯ ರೈಲ್ವೆಯ ವಲಯ ರೈಲ್ವೆಗಳು ಮತ್ತು ಘಟಕಗಳಲ್ಲಿ ಬಾಕಿ ಉಳಿದಿರುವ ಕಾರ್ಯಗಳ ವಿಲೇವಾರಿಗಾಗಿ ನಡೆಯುತ್ತಿರುವ 6ನೇ ವಿಶೇಷ ಅಭಿಯಾನದ (SCDPM-6) ಪ್ರಗತಿಯನ್ನು ಬಲಪಡಿಸುವ ಮತ್ತು ಪರಿಶೀಲಿಸುವ ಉದ್ದೇಶದಿಂದ, 08.10.2026ರಂದು ರೈಲ್ವೆ ಮಂಡಳಿಯಲ್ಲಿ ಮಂಡಳಿಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ವಿಡಿಯೊ ಸಂವಾದದ ಮೂಲಕ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ವಲಯ ರೈಲ್ವೆಗಳ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರು (ಎಜಿಎಂಗಳು), ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂಗಳು) ಮತ್ತು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಎಡಿಆರ್‌ಎಂಗಳು), ವಲಯ ರೈಲ್ವೆಗಳ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು (ಸಿಪಿಆರ್‌ಒಗಳು), ಉತ್ಪಾದನಾ ಘಟಕಗಳ ಪ್ರಧಾನ ವ್ಯವಸ್ಥಾಪಕರು (ಜಿಎಂಗಳು), ರೈಲ್ವೆ ಸಾರ್ವಜನಿಕ ವಲಯದ ಉದ್ಯಮಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು (ಸಿಎಮ್‌ಡಿ/ಎಂಡಿಗಳು), ತರಬೇತಿ ಸಂಸ್ಥೆಗಳ ಮಹಾನಿರ್ದೇಶಕರು (DGs), ರೈಲ್ವೆ ಮಂಡಳಿಯ ಸಂಬಂಧಿತ ಅಧಿಕಾರಿಗಳು ಹಾಗೂ ಕ್ಷೇತ್ರ ಘಟಕಗಳಲ್ಲಿ 6ನೇ ವಿಶೇಷ ಅಭಿಯಾನದ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

ಸಭೆಯಲ್ಲಿ ಅಭಿಯಾನದ ಗುರಿಗಳಿಗೆ ಅನುಗುಣವಾಗಿ ಆಗಿರುವ ಪ್ರಗತಿಯನ್ನು ಪರಿಶೀಲಿಸಲಾಯಿತು. ಸ್ಪಷ್ಟ ಫಲಿತಾಂಶಗಳನ್ನು ಸಾಧಿಸುವುದು ಮತ್ತು ಬಾಕಿ ಉಳಿದಿರುವ ಕಾರ್ಯಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡುವುದರ ಮೇಲೆ ವಿಶೇಷ ಗಮನ ಹರಿಸಲಾಯಿತು. ಭಾರತೀಯ ರೈಲ್ವೆಯು 1,00,000 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು, 7,00,000 ಚದರ ಅಡಿ ಜಾಗವನ್ನು ತೆರವುಗೊಳಿಸುವುದು ಹಾಗೂ ಗುಜರಿ ವಿಲೇವಾರಿಯ ಮೂಲಕ ₹600 ಕೋಟಿ ಆದಾಯ ಗಳಿಸುವ ಗುರಿಯನ್ನು ಹೊಂದಿದೆ.
ಈ ವರ್ಷದ ಅಭಿಯಾನದ ಆದ್ಯತೆಗಳಿಗೆ ಅನುಗುಣವಾಗಿ, ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳು, 2022ರ ಪ್ರಕಾರ ಇ-ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸುವುದು, ವಿಂಗಡಿಸುವುದು ಮತ್ತು ವಿಲೇವಾರಿ ಮಾಡುವುದಕ್ಕೆ ಹಾಗೂ ಜಿಎಫ್‌ಆರ್ ಪ್ರಕಾರ ಗುಜರಿ ವಿಲೇವಾರಿಗೆ ವಿಶೇಷ ಒತ್ತು ನೀಡಲಾಗಿದೆ. ತ್ಯಾಜ್ಯದಿಂದ ಅದ್ಭುತ ಸೃಷ್ಟಿಸುವ (ವೇಸ್ಟ್ ಟು ವಂಡರ್) ಉಪಕ್ರಮ ಸೇರಿದಂತೆ ಉತ್ತಮ ಕಾರ್ಯಪದ್ಧತಿಗಳನ್ನು ಗುರುತಿಸಿ, ಅವುಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಅಭಿಯಾನದ ನಾಗರಿಕ ಕೇಂದ್ರಿತ ಭಾಗವಾಗಿ ʼರೈಲ್ ಜನ ಸಂವಾದ್ʼ ಆಯೋಜಿಸಲಾಗುತ್ತಿದೆ. ಯುವಜನರ ಭಾಗವಹಿಸುವಿಕೆಗೆ ವಿಶೇಷ ವೇದಿಕೆ ಒದಗಿಸಲು 'ರೈಲ್ ಜನ ಯುವ ಸಂವಾದ್' ಸಹ ಹಮ್ಮಿಕೊಳ್ಳಲಾಗುತ್ತಿದೆ. ಅಖಿಲ ಭಾರತ ಮಟ್ಟದ ʼರೈಲ್ ಜನ ಸಂವಾದ್ʼ 22.10.2026ರಂದು ಎಲ್ಲ ರೈಲು ನಿಲ್ದಾಣಗಳಲ್ಲಿ ನಡೆಯಲಿದೆ.
ಭಾರತೀಯ ರೈಲ್ವೆಯಾದ್ಯಂತ 6ನೇ ವಿಶೇಷ ಅಭಿಯಾನದ ಅಡಿಯಲ್ಲಿ ಕೈಗೊಂಡಿರುವ ಕೆಲವು ಪ್ರಮುಖ ಉಪಕ್ರಮಗಳು ಹೀಗಿವೆ:
- ದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ.
- ತ್ಯಾಜ್ಯದ ನಾಲ್ಕು ಪ್ರಕಾರಗಳ ವಿಂಗಡಣೆಯನ್ನು ಉತ್ತೇಜಿಸಲು ಸರ್‌ಹಿಂದ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ಘನತ್ಯಾಜ್ಯ ವಿಂಗಡಣಾ ಅಭಿಯಾನ.
- ರೈಲ್ವೆ ಸಿಬ್ಬಂದಿ ಮತ್ತು ಭಾಗವಹಿಸುವವರ ಆರೋಗ್ಯ ಹಾಗೂ ಕ್ಷೇಮವನ್ನು ಉತ್ತೇಜಿಸಲು ನಾಗಪುರದಲ್ಲಿ ಮಧ್ಯ ರೈಲ್ವೆಯಿಂದ ಆರೋಗ್ಯ ತಪಾಸಣಾ ಶಿಬಿರದ ಆಯೋಜನೆ.
- ಘನತ್ಯಾಜ್ಯ ನಿರ್ವಹಣಾ ನಿಯಮಗಳು, 2026ರ ಪಾಲನೆಯನ್ನು ಉತ್ತೇಜಿಸಲು ಪೂರ್ವ ರೈಲ್ವೆಯ ಸೀಲ್ದಾ ವಿಭಾಗದಿಂದ ಜಾಗೃತಿ ಮತ್ತು ಸಾಮರ್ಥ್ಯವೃದ್ಧಿ ಕಾರ್ಯಕ್ರಮಗಳ ಆಯೋಜನೆ.
- ರೈಲುಗಳ ಸೌಲಭ್ಯಗಳಲ್ಲಿ ಸ್ವಚ್ಛತೆಯನ್ನು ಸುಧಾರಿಸಲು ಈಶಾನ್ಯ ರೈಲ್ವೆಯಿಂದ ಸ್ವಚ್ಛತಾ ಮತ್ತು ನೈರ್ಮಲ್ಯ ಅಭಿಯಾನ.
- ಸ್ವಚ್ಛತೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ನೈಋತ್ಯ ರೈಲ್ವೆಯಾದ್ಯಂತ ವಿವಿಧ ಚಟುವಟಿಕೆಗಳ ಆಯೋಜನೆ.
ರೈಲ್ವೆ ಸಚಿವಾಲಯವು 2026ರ ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ ನಡೆಯುತ್ತಿರುವ 6ನೇ ವಿಶೇಷ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಅಭಿಯಾನದ ಉದ್ದೇಶಗಳನ್ನು ಸಾಧಿಸುವ ಮತ್ತು ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ತನ್ನ ಬದ್ಧತೆಯನ್ನು ಸಚಿವಾಲಯವು ಈ ಮೂಲಕ ಪುನರುಚ್ಚರಿಸಿದೆ.
*****
(ಪ್ರಕಟಣೆ ಐ.ಡಿ.: 2322537)
ವಿಸಿಟರ್ ಕೌಂಟರ್ : 12