ಸಂವಹನ ಸಚಿವಾಲಯ
azadi ka amrit mahotsav

ಡಿಜಿಟಲ್ ಸಂಪರ್ಕ ಮತ್ತು ಮೂಲಸೌಕರ್ಯ ವಿಸ್ತರಣೆಯನ್ನು ತ್ವರಿತಗೊಳಿಸಲು ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರು ಮತ್ತು ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ದುಂಡುಮೇಜಿನ ಸಭೆ ನಡೆಸಿದ ದೂರಸಂಪರ್ಕ ಇಲಾಖೆ


ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರಾಜ್ಯ ಸಚಿವರಾದ ಡಾ. ಚಂದ್ರಶೇಖರ್  ಪೆಮ್ಮಸಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ದುಂಡುಮೇಜಿನ ಸಭೆ

“ವಿಕಸಿತ ಭಾರತ @2047 ಸಾಕಾರಗೊಳಿಸಲು, ನಾವು ರೈಟ್ ಆಫ್ ವೇ (ಮಾರ್ಗದ ಹಕ್ಕು) ಅನುಮೋದನೆಗಳನ್ನು ತ್ವರಿತಗೊಳಿಸುವುದು, ಭಾರತ್-ನೆಟ್ ಮತ್ತು 4G ಸಂಪರ್ಕವನ್ನು ಕಟ್ಟಕಡೆಯ ಹಂತದವರಗೂ ತಲುಪಿಸುವ ಮೂಲಕ 'ಟೀಮ್ ಇಂಡಿಯಾ' ಆಗಿ ಕಾರ್ಯನಿರ್ವಹಿಸಬೇಕು”: ರಾಜ್ಯ ಸಚಿವರಿಗೆ ಶ್ರೀ ಸಿಂಧಿಯಾ ಕರೆ

ದೂರಸಂಪರ್ಕ ಮೂಲಸೌಕರ್ಯ ಮತ್ತು ನಾಗರಿಕ-ಕೇಂದ್ರಿತ ಡಿಜಿಟಲ್ ಸೇವೆಗಳ ತ್ವರಿತ ಅನುಷ್ಠಾನಕ್ಕೆ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬದ್ಧತೆಯ ಪುನರುಚ್ಚಾರ

ಐಎಂಸಿ 2026 ದುಂಡುಮೇಜಿನ ಸಭೆಯಲ್ಲಿ ರೈಟ್ ಆಫ್ ವೇ  ಸುಧಾರಣೆಗಳು, ಭಾರತ್ನೆಟ್, 4G ಸಂಪರ್ಕ ಮತ್ತು ಡಿಜಿಟಲ್ ಸೇರ್ಪಡೆ ಕುರಿತು ಚರ್ಚಿಸಿದ ರಾಜ್ಯ ಸರ್ಕಾರಗಳ ಐಟಿ ಸಚಿವರು ಮತ್ತು ಕಾರ್ಯದರ್ಶಿಗಳು

ಪ್ರಕಟಣಾ ದಿನಾಂಕ: 08 OCT 2026 5:40PM by PIB Bengaluru

ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆಯು 'ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) 2026' ರ ಅಂಗವಾಗಿ ರಾಜ್ಯ ಸರ್ಕಾರಗಳ ಐಟಿ ಸಚಿವರು ಮತ್ತು ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ದುಂಡುಮೇಜಿನ ಸಭೆಯನ್ನು ಆಯೋಜಿಸಿತ್ತು. ಈ ದುಂಡುಮೇಜಿನ ಸಭೆಯ ಅಧ್ಯಕ್ಷತೆಯನ್ನು ಈಶಾನ್ಯ ಪ್ರದೇಶದ ಅಭಿವೃದ್ಧಿ ಹಾಗೂ ಕೇಂದ್ರ ಸಂಪರ್ಕ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ವಹಿಸಿದ್ದರು. ಕೇಂದ್ರ ಸಂಪರ್ಕ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಹಾಗೂ ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಶ್ರೀ ಅಮಿತ್ ಅಗರ್ವಾಲ್ ಉಪಸ್ಥಿತರಿದ್ದರು.

ಈ ದುಂಡುಮೇಜಿನ ಸಭೆಯು ದೂರಸಂಪರ್ಕ, ಡಿಜಿಟಲ್ ಮೂಲಸೌಕರ್ಯ ಮತ್ತು ನಾಗರಿಕ ಕೇಂದ್ರಿತ ಡಿಜಿಟಲ್ ಸೇವೆಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ರಚನಾತ್ಮಕ ಸಂವಾದ ಮತ್ತು ಸಮನ್ವಯಕ್ಕೆ ಸೂಕ್ತ ವೇದಿಕೆಯನ್ನು ಒದಗಿಸಿತು. ಐಎಂಸಿ2026ರ “ಗಡಿಗಳಿಲ್ಲದ ವಿಸ್ತರಣೆ” ಎಂಬ ವಿಷಯಕ್ಕೆ ಅನುಗುಣವಾಗಿ, ಭಾರತದ ಡಿಜಿಟಲ್ ರೂಪಾಂತರ ಮತ್ತು 2047ರ ವೇಳೆಗೆ ವಿಕಸಿತ ಭಾರತದ ದೃಷ್ಟಿಕೋನವನ್ನು ಬೆಂಬಲಿಸಲು ಡಿಜಿಟಲ್ ಸಂಪರ್ಕವನ್ನು ವಿಸ್ತರಿಸುವುದು, ಮೂಲಸೌಕರ್ಯ ನಿಯೋಜನೆಯನ್ನು ವೇಗಗೊಳಿಸುವುದು ಮತ್ತು ಕೇಂದ್ರ ಮತ್ತು ರಾಜ್ಯ ಸಹಕಾರವನ್ನು ಬಲಪಡಿಸುವುದರ ಮೇಲೆ ಚರ್ಚೆಗಳು ಗಮನ ಹರಿಸಿದವು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ, "ದೂರಸಂಪರ್ಕವು ಕೇಂದ್ರದ ಸರ್ಕಾರದ ವ್ಯಾಪ್ತಿಯ ವಿಷಯವಾಗಿರಬಹುದು, ಆದರೆ ಡಿಜಿಟಲ್ ಮೂಲಸೌಕರ್ಯವನ್ನು ರಾಜ್ಯಗಳ ನೆಲದಲ್ಲಿ ನಿರ್ಮಿಸಲಾಗುತ್ತಿದೆ. ಇದು ರಾಷ್ಟ್ರೀಯ ಬ್ರಾಡ್ ಬ್ಯಾಂಡ್ ಮಿಷನ್ 2.0 ಅನ್ನು ಮುನ್ನಡೆಸುವಲ್ಲಿ ನಮ್ಮ ರಾಜ್ಯಗಳನ್ನು ನಿಜವಾದ ಪಾಲುದಾರರನ್ನಾಗಿ ಮಾಡುತ್ತದೆ. ವಿಕಸಿತ ಭಾರತ @2047 ಅನ್ನು ಸಾಕಾರಗೊಳಿಸಲು, ನಾವು ಎಸ್ ಎ ಎಸ್ ಸಿ ಐ ಬಂಡವಾಳ ಪ್ರೋತ್ಸಾಹಕಗಳನ್ನು ಪಡೆಯಲು ರೈಟ್ ಆಫ್ ವೇ  ಅನುಮೋದನೆಗಳನ್ನು ವೇಗಗೊಳಿಸುವುದು, ಭಾರತ್ ನೆಟ್ ಮತ್ತು 4G ಸಂಪರ್ಕವನ್ನು ಕೊನೆಯ ಹಂತದವರೆಗೂ ತಲುಪಿಸುವುದು, ಸಂಚಾರ್ ಸಾಥಿ ಮೂಲಕ ನೆಟ್ ವರ್ಕ್ ಗಳನ್ನು ಸುರಕ್ಷಿತಗೊಳಿಸುವುದು ಮತ್ತು ʻಸಮೃದ್ಧ ಗ್ರಾಮʼ ಕಾರ್ಯಕ್ರಮವನ್ನು ವಿಸ್ತರಿಸುವ ಮೂಲಕ 'ಟೀಮ್ ಇಂಡಿಯಾ' ಆಗಿ ಕಾರ್ಯನಿರ್ವಹಿಸುವ ಮೂಲಕ ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ," ಎಂದು ಹೇಳಿದರು.

ಡಿಜಿಟಲ್ ಸಂಪರ್ಕ ಮೂಲಸೌಕರ್ಯಗಳ ಯಶಸ್ವಿ ಅನುಷ್ಠಾನದಲ್ಲಿ, ವಿಶೇಷವಾಗಿ ರೈಟ್ ಆಫ್ ವೇ, ಭೂಮಿ ಹಂಚಿಕೆ ಮತ್ತು ತಾಣಗಳಿಗೆ ಸೈಟ್ ಪ್ರವೇಶದಂತಹ ತಳಮಟ್ಟದ ಅಗತ್ಯತೆಗಳನ್ನು ಈಡೇರಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಹಿಸುವ ಪ್ರಮುಖ ಪಾತ್ರವನ್ನು ಚರ್ಚೆಗಳು ಎತ್ತಿಹಿಡಿದವು.

ದೂರಸಂಪರ್ಕ ಕಾಯ್ದೆ, 2023 ರ ಅಡಿಯಲ್ಲಿ ದೂರಸಂಪರ್ಕ ಇಲಾಖೆ (DoT) ರೂಪಿಸಿದ ದೂರಸಂಪರ್ಕ (ರೈಟ್ ಆಫ್ ವೇ) ನಿಯಮಗಳು, 2024 ರ ಅನುಷ್ಠಾನದ ಮೇಲೆ ದುಂಡುಮೇಜಿನ ಸಮ್ಮೇಳನವು ನಿರ್ದಿಷ್ಟವಾಗಿ ಗಮನಹರಿಸಿತು. ಜನವರಿ 1, 2025 ರಿಂದ ಜಾರಿಗೆ ಬಂದ ಈ ನಿಯಮಗಳು ದೂರಸಂಪರ್ಕ ಮೂಲಸೌಕರ್ಯ ಸ್ಥಾಪನೆಗೆ ಏಕರೂಪ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಸ್ಥಾಪಿಸಿದವು. ಪ್ರಮುಖ ವೈಶಿಷ್ಟ್ಯಗಳಲ್ಲಿ ರೈಟ್ ಆಫ್ ವೇ ಶುಲ್ಕಗಳ ತರ್ಕಬದ್ಧಗೊಳಿಸುವಿಕೆ ಮತ್ತು ನಿಗದಿತ ಸಮಯದೊಳಗೆ ಅರ್ಜಿಗಳ ಸಂಸ್ಕರಣೆ ಸೇರಿವೆ. ಈ ನಿಯಮಗಳ ಅಡಿಯಲ್ಲಿ, ಪ್ರಮಾಣಿತ ರೈಟ್ ಆಫ್ ವೇ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು 67 ದಿನಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ, ಆದರೆ ಭಾರತ್ ನೆಟ್ ನಂತಹ ವಿಶೇಷ ಯೋಜನೆಗಳಿಗೆ 7 ದಿನಗಳ ಕಾಲಮಿತಿಯನ್ನು ಅನ್ವಯಿಸುತ್ತದೆ.

ದೂರ ಸಂಪರ್ಕ ಇಲಾಖೆಯ  'ರೈಟ್ ಆಫ್ ವೇ' ನಿಯಮಗಳು, 2024 ಅನ್ನು ಅನುಸರಿಸಲು ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಿತ ಇಲಾಖೆಗಳಿಗೆ ನಿರ್ದೇಶನ ನೀಡಿ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರ್ಕಾರಿ ಆದೇಶಗಳು ಅಥವಾ ಅಧಿಸೂಚನೆಗಳನ್ನು ಹೊರಡಿಸಿವೆ ಎಂದು ಉಲ್ಲೇಖಿಸಲಾಯಿತು. ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ 'ರೈಟ್ ಆಫ್ ವೇ'   ಪೋರ್ಟಲ್ ನಲ್ಲಿ ಸಕ್ರಿಯವಾಗಿವೆ. ₹4,000 ಕೋಟಿ ಅನುದಾನವನ್ನು ಹೊಂದಿರುವ ಬಂಡವಾಳ ಹೂಡಿಕೆಗಾಗಿ ವಿಶೇಷ ನೆರವು (ಎಸ್ ಎ ಎಸ್ ಸಿ ಐ) ಯೋಜನೆ 2026-27, ರಾಜ್ಯಗಳು ಮತ್ತು ಅವುಗಳ ಸಂಸ್ಥೆಗಳು (ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳು, ನಿಗಮಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು) 'ರೈಟ್ ಆಫ್ ವೇ'  ಸುಧಾರಣೆಗಳ ಅನುಷ್ಠಾನವನ್ನು ಬಲಪಡಿಸಲು ಪ್ರಮುಖವಾಗಿ  ಸಹಾಯವಾಗಿದೆ ಎಂದು ಎತ್ತಿ ತೋರಿಸಲಾಯಿತು.

ಸಭೆಯಲ್ಲಿ ತಿದ್ದುಪಡಿ ಮಾಡಲಾದ ಭಾರತ್ ನೆಟ್ ಕಾರ್ಯಕ್ರಮ (ಎಬಿಪಿ) ಮತ್ತು 4ಜಿ ಸ್ಯಾಚುರೇಶನ್ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲಾಯಿತು. ಎಬಿಪಿ ಯೋಜನೆಯು ಪ್ರಸ್ತುತ ಇರುವ ಭಾರತ್ ನೆಟ್ವರ್ಕನ್ನು ಮೇಲ್ದರ್ಜೆಗೇರಿಸುವುದು, ಹೊಸ ಗ್ರಾಮ ಪಂಚಾಯತಿಗಳಿಗೆ ಹೆಚ್ಚುವರಿ ನೆಟ್ ವರ್ಕ್ ಮೂಲಸೌಕರ್ಯವನ್ನು ರಚಿಸುವುದು, ಬೇಡಿಕೆಗೆ ಅನುಗುಣವಾಗಿ ಪಂಚಾಯತಿಯೇತರ ಹಳ್ಳಿಗಳನ್ನು ಸಂಪರ್ಕಿಸುವುದು ಮತ್ತು 1.5 ಕೋಟಿ ಫೈಬರ್ ಅಂತರಜಾಲ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಆಗಸ್ಟ್ 2026 ರ ಹೊತ್ತಿಗೆ, ಎಬಿಪಿ  ಅಡಿಯಲ್ಲಿ 55,780 ಕಿಮೀ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲಾಗಿದೆ ಮತ್ತು 28,700 ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೇರಿಸಿ ಸಂಪರ್ಕಿಸಲಾಗಿದೆ.

ವಾಣಿಜ್ಯಿ ಕಾರಣಗಳಿಂದಾಗಿ ದೂರಸಂಪರ್ಕ ಸೇವಾ ಪೂರೈಕೆದಾರರು ನೆಟ್ ವರ್ಕ್ ವಿಸ್ತರಿಸದ ದೂರದ ಮತ್ತು ಸಂಪರ್ಕವಿಲ್ಲದ ಪ್ರದೇಶಗಳಿಗೆ ಮೊಬೈಲ್ ಸಂಪರ್ಕವನ್ನು ವಿಸ್ತರಿಸಲು ಡಿಜಿಟಲ್ ಭಾರತ ನಿಧಿ (ಡಿಬಿಎನ್) ಧನಸಹಾಯದೊಂದಿಗೆ ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಸಭೆಯಲ್ಲಿ ಮುಖ್ಯವಾಗಿ ಎತ್ತಿ ತೋರಿಸಲಾಯಿತು. ಈ ಉದ್ಯಮಗಳು ಡಿಜಿಟಲ್ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ಆಗಸ್ಟ್ 31, 2026 ರ ಹೊತ್ತಿಗೆ, ದೇಶಾದ್ಯಂತ 35,771 ಹಳ್ಳಿಗಳು ಮತ್ತು ಸ್ಥಳಗಳನ್ನು ತಲುಪಲು 25,367 ಮೊಬೈಲ್ ಟವರ್ ಗಳನ್ನು ಕಾರ್ಯಗತಗೊಳಿಸಲಾಗಿದೆ. ಬಿಎಸ್ ಎನ್ ಎಲ್ ಜಾರಿಗೆ ತಂದಿರುವ 4ಜಿ ಸ್ಯಾಚುರೇಶನ್ ಯೋಜನೆಯಲ್ಲಿ ದೇಶೀಯ 4ಜಿ ತಂತ್ರಜ್ಞಾನವನ್ನು  ಬಳಸಲಾಗಿದೆ.

ಸೈಬರ್ ಅಪರಾಧ ಮತ್ತು ಆರ್ಥಿಕ ವಂಚನೆಯನ್ನು ತಡೆಗಟ್ಟಲು ದೂರ ಸಂಪರ್ಕ ಇಲಾಖೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ಕಾನೂನು ಜಾರಿ ಸಂಸ್ಥೆಗಳು, ದೂರಸಂಪರ್ಕ ಸೇವಾ ಪೂರೈಕೆದಾರರು ಮತ್ತು ಇತರ ಪಾಲುದಾರರ ನಡುವೆ ಸಮನ್ವಯವನ್ನು ಬಲಪಡಿಸುವ 'ಸಂಚಾರ್ ಸಾಥಿ' ಉಪಕ್ರಮ ಮತ್ತು ಅದರ ಮಹತ್ವದ ಕುರಿತು ದುಂಡುಮೇಜಿನ ಸಭೆಯಲ್ಲಿ ಚರ್ಚಿಸಲಾಯಿತು. ಸಂಚಾರ್ ಸಾಥಿ ನಾಗರಿಕರಿಗೆ ಶಂಕಿತ ವಂಚನೆಯ ಕರೆ ಮತ್ತು ಸಂದೇಶಗಳನ್ನು ವರದಿ ಮಾಡಲು, ತಮ್ಮ ಹೆಸರಿನಲ್ಲಿ ನೀಡಲಾದ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸಲು, ಅನಧಿಕೃತ ಸಂಪರ್ಕಗಳನ್ನು ವರದಿ ಮಾಡಲು ಮತ್ತು ಕಳೆದುಹೋದ ಅಥವಾ ಕಳುವಾದ ಮೊಬೈಲ್ ಸಾಧನಗಳನ್ನು ನಿರ್ಬಂಧಿಸಲು, ವರದಿ ಮಾಡಲು ಮತ್ತು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಸೈಬರ್ ವಂಚನೆಯ ವಿರುದ್ಧ ಗುಪ್ತಚರ ಮಾಹಿತಿ ವಿನಿಮಯ ಮತ್ತು ಸಂಯೋಜಿತ ಕ್ರಮಕ್ಕಾಗಿ ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ಫಾರ್ಮ್ (ಡಿಐಪಿ) ಸಹ ಒಂದು ಪ್ರಮುಖ ವ್ಯವಸ್ಥೆಯಾಗಿದೆ ಎಂದು ಒತ್ತಿಹೇಳಲಾಯಿತು.

ಚರ್ಚಿಸಲಾದ ಮತ್ತೊಂದು ಪ್ರಮುಖ ಉಪಕ್ರಮವೆಂದರೆ 'ಸಮೃದ್ಧ ಗ್ರಾಮ್ ಫಿಜಿಟಲ್ ಸೇವೆಗಳ ಉಪಕ್ರಮ'. ಇದು ಗ್ರಾಮೀಣ ಪ್ರದೇಶಗಳಲ್ಲಿ ವಿಶ್ವಾಸಾರ್ಹ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ನಾಗರಿಕ ಕೇಂದ್ರಿತ ಸೇವೆಗಳು ಮತ್ತು ಅವಕಾಶಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ ಸುಸಜ್ಜಿತ ಸೇವಾ ವಿತರಣಾ ಮಾದರಿಯಾಗಿದೆ. 'ಸಮೃದ್ಧಿ ಕೇಂದ್ರಗಳ' ಮೂಲಕ, ಈ ಉಪಕ್ರಮವು ಟೆಲಿ-ಸಮಾಲೋಚನೆ ಮತ್ತು ತಪಾಸಣೆಗಳು, ಡಿಜಿಟಲ್ ತರಗತಿಗಳು ಮತ್ತು ಕೌಶಲ್ಯ ಅಭಿವೃದ್ಧಿ, ಇ-ಆಡಳಿತ, ಬ್ಯಾಂಕಿಂಗ್, ಮಣ್ಣು ಪರೀಕ್ಷೆ, ಡ್ರೋನ್ ಆಧಾರಿತ ಕೃಷಿ ಸೇವೆಗಳು, ಉದ್ಯೋಗಾವಕಾಶಗಳು ಮತ್ತು ಇ-ಕಾಮರ್ಸ್ ನಂತಹ ಸೇವೆಗಳನ್ನು ಒಂದೇ ಸೂರಿನಡಿ ತರುತ್ತದೆ. ಈ ಮಾದರಿಯನ್ನು ಮಧ್ಯಪ್ರದೇಶದ ಉಮ್ರಿ, ಉತ್ತರ ಪ್ರದೇಶದ ಚೌರಾವಾಲಾ ಮತ್ತು ಆಂಧ್ರಪ್ರದೇಶದ ನಾರಕೋಡೂರುಗಳಲ್ಲಿ ಪ್ರಾಯೋಗಿಕವಾಗಿ  ಜಾರಿಗೆ ತರಲಾಗುತ್ತಿದ್ದು, ಇದು ಡಬ್ಲ್ಯೂ ಎಸ್ ಐ ಎಸ್  ಪ್ರಶಸ್ತಿಗಳು 2026 ರಲ್ಲಿ 'ಆಕ್ಷನ್ ಲೈನ್ ಸಿ6 – ಎನೇಬ್ಲಿಂಗ್ ಎನ್ವಿರಾನ್ಮೆಂಟ್'  (ಪರಿಸರವನ್ನು ಸಕ್ರಿಯಗೊಳಿಸುವ) ವರ್ಗದಲ್ಲಿ  ಜಾಗತಿಕವಾಗಿ ವಿಜೇತರಾಗಿ ಗುರುತಿಸಲ್ಪಟ್ಟಿದೆ.

ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ದೂರಸಂಪರ್ಕ ಉದ್ಯಮದ ನಡುವೆ ಸಮನ್ವಯವನ್ನು ಬಲಪಡಿಸುವುದು, ಡಿಜಿಟಲ್ ಮೂಲಸೌಕರ್ಯ ನಿಯೋಜನೆಯನ್ನು ವೇಗಗೊಳಿಸುವುದು, ಉದಯೋನ್ಮುಖ ತಂತ್ರಜ್ಞಾನಗಳ ಅಳವಡಿಕೆಯನ್ನು ಸುಗಮಗೊಳಿಸುವುದು ಮತ್ತು ನಾಗರಿಕ ಕೇಂದ್ರಿತ ಡಿಜಿಟಲ್ ಸೇವೆಗಳನ್ನು ವಿಸ್ತರಿಸುವ ಹಂಚಿಕೆಯ ಬದ್ಧತೆಯೊಂದಿಗೆ ದುಂಡುಮೇಜಿನ ಸಭೆಯು ಮುಕ್ತಾಯಗೊಂಡಿತು. ಈ ಚರ್ಚೆಗಳು ಡಿಜಿಟಲ್ ಸಾಮರ್ಥ್ಯ ಹೊಂದಿರುವ ಮತ್ತು ಸರ್ವ ಸಂಪರ್ಕ ಹೊಂದಿರುವ ಭಾರತವನ್ನು ನಿರ್ಮಿಸುವ ಹಾಗೂ 2047ರ ವೇಳೆಗೆ 'ವಿಕಸಿತ ಭಾರತ'ದ ದೃಷ್ಟಿಕೋನವನ್ನು ಮುನ್ನಡೆಸುವ ಸಾಮೂಹಿಕ ಸಂಕಲ್ಪವನ್ನು ಪುನರುಚ್ಚರಿಸಿದವು.

Follow DoT Handles for more: -

X - https://x.com/DoT_India

Insta-  https://www.instagram.com/department_of_telecom?igsh=MXUxbHFjd3llZTU0YQ==

Fb - https://www.facebook.com/DoTIndia

Youtube: https://youtube.com/@departmentoftelecom?si=DALnhYkt89U5jAaa


*****


(ಪ್ರಕಟಣೆ ಐ.ಡಿ.: 2320999) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी