ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

 ಇಂಡಿಯಾ ಮೊಬೈಲ್ ಕಾಂಗ್ರೆಸ್'ನ 10ನೇ ಆವೃತ್ತಿಯನ್ನು ಉದ್ಘಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಭಾರತದ ದೂರಸಂಪರ್ಕ ವಲಯವು ಹೆಚ್ಚಿನ ಸ್ವಾವಲಂಬನೆಯತ್ತ ಸ್ಥಿರವಾಗಿ ಸಾಗುತ್ತಿರುವುದನ್ನು ನೋಡುವುದೇ ಪ್ರೋತ್ಸಾಹದಾಯಕವಾಗಿದೆ: ಪ್ರಧಾನಮಂತ್ರಿ
ಕಳೆದ 10-12 ವರ್ಷಗಳಲ್ಲಿ, ಮೊಬೈಲ್ ಫೋನ್ ಆಧುನಿಕ ಸಂವಹನದ ಮಾಧ್ಯಮವಾಗುವುದರ ಜೊತೆಗೆ ಉತ್ತಮ ಆಡಳಿತದ ಪ್ರಮುಖ ಸಾಧನವಾಗಿಯೂ ಹೊರಹೊಮ್ಮಿದೆ; ಇದು ನಮ್ಮ 'ಡಿಜಿಟಲ್ ಇಂಡಿಯಾ' ದೃಷ್ಟಿಕೋನದ ಕೇಂದ್ರಬಿಂದುವಾಗಿದೆ: ಪ್ರಧಾನಮಂತ್ರಿ
ಒಂದು ದಶಕದ ಹಿಂದೆ ಭಾರತದಲ್ಲಿ 'ಡಿಜಿಟಲ್ ಕಂದಕ' (digital divide) ಒಂದು ದೊಡ್ಡ ಸವಾಲಾಗಿತ್ತು; ಆಧುನಿಕ ತಂತ್ರಜ್ಞಾನವು ಕೆಲವೇ ಮಂದಿಗೆ ಸೀಮಿತವಾದ ಸೌಲಭ್ಯವಾಗಿ ಪರಿಣಮಿಸುತ್ತಿತ್ತು ಮತ್ತು ಆರ್ಥಿಕವಾಗಿ ಸಮರ್ಥರಾದವರು ಮಾತ್ರ ಅದರ ಪ್ರಯೋಜನಗಳನ್ನು ಪಡೆಯುವಂತಹ ಪರಿಸ್ಥಿತಿ ಇತ್ತು; 'ಡಿಜಿಟಲ್ ಇಂಡಿಯಾ' ಅಭಿಯಾನದ ಮೂಲಕ ನಾವು ಈ ವಾಸ್ತವತೆಯನ್ನು ಬದಲಾಯಿಸಲು ನಿರ್ಧರಿಸಿದೆವು ಮತ್ತು ಮೊಬೈಲ್ ಫೋನನ್ನು ಅದರ ಕೇಂದ್ರಬಿಂದುವನ್ನಾಗಿ ಮಾಡಿದೆವು; ಇದು ತಂತ್ರಜ್ಞಾನವನ್ನು ಎಲ್ಲರಿಗೂ ತಲುಪಿಸುವ (ಪ್ರಜಾಪ್ರಭುತ್ವೀಕರಣಗೊಳಿಸುವ) ನಿಟ್ಟಿನಲ್ಲಿ ಕೈಗೊಂಡ ಒಂದು ಬೃಹತ್ ಪ್ರಯತ್ನವಾಗಿತ್ತು: ಪ್ರಧಾನಿ
ಇಂದು ನೂರಾರು ಸರ್ಕಾರಿ ಸೇವೆಗಳನ್ನು ಮೊಬೈಲ್ ಫೋನ್‌ಗಳ ಮೂಲಕವೇ ಪಡೆಯಬಹುದು; ಸರ್ಕಾರದ ನೆರವು ಈಗ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆಯಾಗುತ್ತಿದೆ: ಪ್ರಧಾನಮಂತ್ರಿ
ಮೊಬೈಲ್ ಫೋನ್‌ಗಳು ಇನ್ನು ಮುಂದೆ ಕೇವಲ ಸಂಭಾಷಣೆಯ ಮಾಧ್ಯಮಗಳು ಮಾತ್ರವೇ ಅಲ್ಲ; ಬದಲಾಗಿ, ಅವು ಪ್ರಯಾಣ, ಕಾಯುವಿಕೆ ಮತ್ತು ವೆಚ್ಚವನ್ನು ಕಡಿಮೆ ಮಾಡಿ, ಹೆಚ್ಚಿನ ಅನುಕೂಲವನ್ನು ಒದಗಿಸಿವೆ. ಇದು ತಂತ್ರಜ್ಞಾನವು ನಾಗರಿಕರಿಗೆ ನೀಡಿರುವ ಅತ್ಯಂತ ದೊಡ್ಡ ಪ್ರಯೋಜನವಾಗಿದೆ: ಪ್ರಧಾನಮಂತ್ರಿ.
ಭಾರತದಲ್ಲಿ ಇಂದು ಮೊಬೈಲ್ ಫೋನ್ ಗೇಮಿಂಗ್ ಕನ್ಸೋಲ್ ಮತ್ತು ಸೃಜನಶೀಲ ವೇದಿಕೆ (ಕ್ರಿಯೇಷನ್ ​​ಸ್ಟುಡಿಯೋ) - ಹೀಗೆ ಎರಡರಂತೆಯೂ ಕಾರ್ಯನಿರ್ವಹಿಸುತ್ತಿದೆ: ಪ್ರಧಾನಿ
ಇಂದಿನ ದಿನಗಳಲ್ಲಿ ದೂರಸಂಪರ್ಕ ಮತ್ತು ಡಿಜಿಟಲ್ ತಂತ್ರಜ್ಞಾನದ ನಿರ್ಣಾಯಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಅದರ ಭದ್ರತಾ ಚೌಕಟ್ಟನ್ನು ಬಲಪಡಿಸುವುದು ಅತ್ಯಗತ್ಯವಾಗಿದೆ; ಫೋನ್ ಮತ್ತು ನೆಟ್‌ವರ್ಕ್ ಭದ್ರತೆಯು ನಮ್ಮೆಲ್ಲರಿಗೂ ಆದ್ಯತೆಯ ವಿಷಯವಾಗಿದೆ: ಪ್ರಧಾನಮಂತ್ರಿ
'ಡೀಪ್‌ಫೇಕ್‌'ಗಳು ಎಷ್ಟೊಂದು ದೊಡ್ಡ ಸವಾಲಾಗಿ ಪರಿಣಮಿಸಿವೆ ಎಂಬುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ; ಹಾಗಾಗಿ, ಇದನ್ನು ಎದುರಿಸಲು ಜಾಗತಿಕ ಮಟ್ಟದ ಚೌಕಟ್ಟೊಂದನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಅತ್ಯಗತ್ಯ: ಪ್ರಧಾನಮಂತ್ರಿ
ಕಳೆದ ಕೆಲವು ವರ್ಷಗಳಲ್ಲಿ, ಭಾರತವು 'ಗ್ರಾಹಕ'ನ ಸ್ಥಾನದಿಂದ 'ಸೃಷ್ಟಿಕರ್ತ'ನ ನಿರ್ಮಾಣಕಾರನ  ಸ್ಥಾನದತ್ತ ಸಾಗಿದೆ; ಈಗ ಭಾರತವು ಎಂತಹ ಗುರಿಯತ್ತ ಮುನ್ನಡೆಯುತ್ತಿದೆ ಎಂದರೆ, ಅಲ್ಲಿ ಉತ್ಪನ್ನ ಮತ್ತು ವಿನ್ಯಾಸವು ಭಾರತದಲ್ಲೇ ತಯಾರಾಗಲಿದ್ದು, ಅದರ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕ

ಪ್ರಕಟಣಾ ದಿನಾಂಕ: 08 OCT 2026 2:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಯಶೋಭೂಮಿಯಲ್ಲಿ 'ಇಂಡಿಯಾ ಮೊಬೈಲ್ ಕಾಂಗ್ರೆಸ್'ನ (IMC) 10ನೇ ಆವೃತ್ತಿಯನ್ನು ಉದ್ಘಾಟಿಸಿದರು. ರಾಷ್ಟ್ರೀಯ ಮಟ್ಟದ ಅತ್ಯಂತ ಮಹತ್ವದ ಮೈಲಿಗಲ್ಲಿನ ಸ್ಮರಣೆಯಲ್ಲಿ, ಪ್ರಧಾನಮಂತ್ರಿಯವರು ಅಕ್ಟೋಬರ್ 8ರ 'ವಾಯುಪಡೆ ದಿನ'ದ ಅಂಗವಾಗಿ ದೇಶದ ಧೀರ ವಾಯು ರಕ್ಷಕರಿಗೆ ತಮ್ಮ ಆರಂಭಿಕ ನುಡಿಗಳಲ್ಲಿ ಗೌರವ ಸಮರ್ಪಿಸಿದರು. ದೇಶದ ಆಕಾಶವನ್ನು ರಕ್ಷಿಸುತ್ತಿರುವ ಧೀರ ಸಿಬ್ಬಂದಿಗೆ ಅವರು ಹೆಮ್ಮೆಯಿಂದ ಗೌರವ ನಮನಗಳನ್ನು ಸಲ್ಲಿಸಿದರು. "ನಮ್ಮ ಎಲ್ಲಾ ಧೀರ ಯೋಧರಿಗೆ ನಾನು ನಮಸ್ಕರಿಸುತ್ತೇನೆ ಮತ್ತು ವಾಯುಪಡೆ ದಿನದಂದು ದೇಶದ ಜನತೆಗೆ ಶುಭಾಶಯ ಕೋರುತ್ತೇನೆ," ಎಂದು ಶ್ರೀ ಮೋದಿ ಅವರು ನುಡಿದರು.

ಸರ್ಕಾರದ ಮುಖ್ಯಸ್ಥರಾಗಿ ನಿರಂತರವಾಗಿ 25 ವರ್ಷಗಳ ಸೇವೆಯನ್ನು ಪೂರೈಸಿದ ಮಹತ್ವದ ವೈಯಕ್ತಿಕ ಮೈಲಿಗಲ್ಲನ್ನು ಸ್ಮರಿಸಿಕೊಂಡ ಪ್ರಧಾನ ಮಂತ್ರಿಯವರು, ಈ ಅವಧಿಯಲ್ಲಿ ತಮಗೆ ಬೆಂಬಲ ನೀಡಿದ ಪ್ರತಿಯೊಬ್ಬ ನಾಗರಿಕರಿಗೂ ಮತ್ತು ಅಂತರರಾಷ್ಟ್ರೀಯ ಸ್ನೇಹಿತರಿಗೂ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು. "ತಮ್ಮ ಶುಭಾಶಯಗಳಿಗಾಗಿ ನಾನು ದೇಶದ ಪ್ರತಿಯೊಬ್ಬ ಪ್ರಜೆಗೂ ಹಾಗೂ ಪ್ರಪಂಚದಾದ್ಯಂತ ಇರುವ ಭಾರತದ ಪ್ರತಿಯೊಬ್ಬ ಸ್ನೇಹಿತರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ," ಎಂದು ಶ್ರೀ ಮೋದಿ ನುಡಿದರು.

ದೀರ್ಘಕಾಲೀನ ಸೇವೆಯ ಒಂದು ಅದ್ಭುತ ಸಾಮ್ಯತೆಯನ್ನು ಎತ್ತಿ ತೋರಿಸಿದ ಪ್ರಧಾನ ಮಂತ್ರಿಯವರು, 'ಇಂಡಿಯಾ ಮೊಬೈಲ್ ಕಾಂಗ್ರೆಸ್'ನ 10ನೇ ವಾರ್ಷಿಕೋತ್ಸವವನ್ನು ಆಚರಿಸುವ ಜೊತೆಗೆ, ದೇಶದಲ್ಲಿ ಜಿಎಸ್‌ಎಂಎ (GSMA) ಮಂಡಳಿಯ ಸಭೆಯನ್ನು ಆಯೋಜಿಸುವ ವಿಶೇಷ ಗೌರವದತ್ತಲೂ ಬೆಟ್ಟು ಮಾಡಿದರು. ಅಲ್ಲಿ ಉಪಸ್ಥಿತರಿದ್ದ ಟೆಲಿಕಾಂ ಆಪರೇಟರ್‌ಗಳು, ಉದ್ಯಮದ ನಾಯಕರು, ಶಿಕ್ಷಣ ತಜ್ಞರು ಮತ್ತು ನವೋದ್ಯಮ (ಸ್ಟಾರ್ಟಪ್‌)ಗಳನ್ನೊಳಗೊಂಡ ಜಾಗತಿಕ ಸಮುದಾಯವನ್ನು ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಭಾರವಾದ ಹೃದಯದಿಂದ ಮಾತನಾಡಿದ ಪ್ರಧಾನ ಮಂತ್ರಿಯವರು, ಖ್ಯಾತ ನಟ ನಾನಾ ಪಾಟೇಕರ್ ಅವರ ನಿಧನದ ಕುರಿತಾದ ದುಃಖದಾಯಕ ಸುದ್ದಿಯನ್ನು ಹಂಚಿಕೊಂಡರು. ತೆರೆಯ ಮೇಲೆ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ನಿರಂತರವಾಗಿ ಪ್ರೇಕ್ಷಕರ ಮನಗೆದ್ದ ಆ ಪ್ರತಿಭಾವಂತ ಕಲಾವಿದನನ್ನು ಅವರು ಶ್ಲಾಘಿಸಿದರು. "ಅವರು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದ ಒಬ್ಬ ಪ್ರತಿಭಾವಂತ ಕಲಾವಿದರಾಗಿದ್ದರು," ಎಂದು ಶ್ರೀ ಮೋದಿ ಬಣ್ಣಿಸಿದರು.

ದಿವಂಗತ ನಟನ ಗಾಢವಾದ ರಾಷ್ಟ್ರಪ್ರೇಮವನ್ನು ಕೊಂಡಾಡಿದ ಪ್ರಧಾನ ಮಂತ್ರಿಯವರು, ನಾನಾ ಪಾಟೇಕರ್ ಅವರನ್ನು ಅತ್ಯಂತ ಸ್ವತಂತ್ರ ವ್ಯಕ್ತಿತ್ವದವರಾಗಿದ್ದು, ತಮ್ಮ ಜೀವನವನ್ನೇ ಸಂಪೂರ್ಣವಾಗಿ ತ್ರಿವರ್ಣ ಧ್ವಜದ ಗೌರವ ಮತ್ತು ವೈಭವಕ್ಕಾಗಿ ಮುಡಿಪಾಗಿಟ್ಟವರು ಎಂದು ಬಣ್ಣಿಸಿದರು. ಅವರ ಚುರುಕಾದ ಸಂಭಾಷಣೆಗಳು ಮತ್ತು ಪ್ರಭಾವಶಾಲಿ ಮೌನವು ಸಾಮಾಜಿಕ ಪಿಡುಗುಗಳು ಹಾಗೂ ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ನಿರಂತರವಾಗಿ ಧ್ವನಿಯೆತ್ತುತ್ತಿದ್ದವು ಎಂದು ಹೇಳುತ್ತಾ, ಅವರನ್ನು ಚಲನಚಿತ್ರ ರಂಗದ ಕ್ರಾಂತಿಕಾರಿ ಎಂದು ಪ್ರಧಾನಿ ವರ್ಣಿಸಿದರು. "ನಾನು ನಾನಾ ಪಾಟೇಕರ್ ಜೀ ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ ಹಾಗೂ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ," ಎಂದು ಶ್ರೀ ಮೋದಿ ನುಡಿದರು.

'ಇಂಡಿಯಾ ಮೊಬೈಲ್ ಕಾಂಗ್ರೆಸ್' ವೇದಿಕೆಯ ಮೂಲಕ ಡಿಜಿಟಲ್ ಸಂಪರ್ಕ ವ್ಯವಸ್ಥೆಯ ಗಮನಾರ್ಹ ಬೆಳವಣಿಗೆಯನ್ನು ಅವಲೋಕಿಸಿದ ಪ್ರಧಾನ ಮಂತ್ರಿಯವರು, 2022ರಲ್ಲಿ ಇದೇ ವೇದಿಕೆಯಿಂದ 5 ಜಿ ಸೇವೆಯನ್ನು ಉದ್ಘಾಟಿಸಿದ್ದನ್ನು ಹಾಗೂ 2023ರಲ್ಲಿ ಅದರ ವ್ಯಾಪಕ ವಿಸ್ತರಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದನ್ನು ಸ್ಮರಿಸಿದರು. 5.5 ಲಕ್ಷಕ್ಕೂ ಹೆಚ್ಚು ಬೇಸ್ ಸ್ಟೇಷನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ 5ಜಿ ಜಾಲವು ದೇಶದ ಪ್ರತಿಯೊಂದು ಜಿಲ್ಲೆಯನ್ನು ಯಶಸ್ವಿಯಾಗಿ ತಲುಪಿದ್ದು, ಇಂಟರ್ನೆಟ್ ವೇಗವನ್ನು ಹತ್ತು ಪಟ್ಟು ಹೆಚ್ಚಿಸಿದೆ ಎಂದು ಅವರು ಹೆಮ್ಮೆಯಿಂದ ಘೋಷಿಸಿದರು. "ಇಂದು 5 ಜಿ ಸಂಪರ್ಕವು ದೇಶದ ಪ್ರತಿಯೊಂದು ಜಿಲ್ಲೆಯನ್ನು ತಲುಪಿರುವುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ," ಎಂದು ಶ್ರೀ ಮೋದಿ ಹೇಳಿದರು.

ಈ ವೇದಿಕೆಯು ಜಾಗತಿಕ ಮಟ್ಟದಲ್ಲಿ ಗಳಿಸುತ್ತಿರುವ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿಯವರು, ಹಿಂದಿನ ವರ್ಷಗಳಲ್ಲಿ ದೇಶೀಯ ಆವಿಷ್ಕಾರ ಮತ್ತು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದರೆ, 2024ರ ಆವೃತ್ತಿಯಲ್ಲಿ ಜಾಗತಿಕ ಮಾನದಂಡಗಳ ಕುರಿತು ಚರ್ಚಿಸಲು 'ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ'ವನ್ನು (ITU) ಆಯೋಜಿಸಲಾಗಿತ್ತು ಎಂಬುದನ್ನು ಸ್ಮರಿಸಿದರು. ದೇಶದ ದೂರಸಂಪರ್ಕ ವಲಯದ ಅಭೂತಪೂರ್ವ ಯಶಸ್ಸಿಗೆ ಹಾಗೂ ಮಹತ್ವಾಕಾಂಕ್ಷೆಯ ಕನಸುಗಳನ್ನು ಸಾಕಾರಗೊಳಿಸುವಲ್ಲಿ 'ಇಂಡಿಯಾ ಮೊಬೈಲ್ ಕಾಂಗ್ರೆಸ್' ಒಂದು ಪ್ರಮುಖ ವೇಗವರ್ಧಕವಾಗಿ ಹೊರಹೊಮ್ಮಿದೆ ಎಂದು ಅವರು ಬಣ್ಣಿಸಿದರು. "ಕಳೆದ ವರ್ಷಗಳಲ್ಲಿ, ಈ ವೇದಿಕೆಯು ಭಾರತದ ಪ್ರಗತಿ ಮತ್ತು ಭಾರತದ ಕನಸುಗಳ ವೇದಿಕೆಯಾಗಿ ಹೊರಹೊಮ್ಮಿದೆ," ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಸಮ್ಮೇಳನದ ಮಹತ್ವಾಕಾಂಕ್ಷೆಯ ವಿಷಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಮಿತಿಗಳಿಲ್ಲದ ವಿಸ್ತರಣೆಗೆ (scaling without boundaries) ದೇಶದ ಸ್ವಂತ ಪರಿವರ್ತನಾಶೀಲ ಪಯಣವೇ ಅತ್ಯುತ್ತಮ ಸಾಕ್ಷಿ ಎಂದು ಪರಿಗಣಿಸುವಂತೆ ಪ್ರತಿನಿಧಿಗಳಿಗೆ ಕರೆ ನೀಡಿದರು. ಮಿತಿಗಳಿಲ್ಲದ ವಿಸ್ತರಣೆಯ ಈ ದೃಷ್ಟಿಕೋನವನ್ನು ದೇಶವು ಹೇಗೆ ಸಕ್ರಿಯವಾಗಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಂದಿದೆ ಎಂಬುದನ್ನು ಹಂಚಿಕೊಳ್ಳುವುದಾಗಿ ಅವರು ಭರವಸೆ ನೀಡಿದರು. "ಗಡಿ-ಮಿತಿಗಳಿಲ್ಲದ ವಿಸ್ತರಣೆಯ ಕನಸನ್ನು ನಾವು ಹೇಗೆ ಸಾಕಾರಗೊಳಿಸಿದ್ದೇವೆ ಮತ್ತು ಪ್ರದರ್ಶಿಸಿದ್ದೇವೆ ಎಂಬುದನ್ನು ಭಾರತದ ಅನುಭವಗಳ ಮೂಲಕ ನಿಮ್ಮ ಮುಂದೆ ವಿವರಿಸಲು ನಾನು ಬಯಸುತ್ತೇನೆ," ಎಂದು ಶ್ರೀ ಮೋದಿ ನುಡಿದರು.

ಸಂಪರ್ಕ ವ್ಯವಸ್ಥೆಯ ಮೂಲಭೂತ ಉದ್ದೇಶವನ್ನು ಮರು ವ್ಯಾಖ್ಯಾನಿಸಿದ ಪ್ರಧಾನ ಮಂತ್ರಿಯವರು, ಜಾಗತಿಕ ಮಟ್ಟದಲ್ಲಿ ದೂರಸಂಪರ್ಕಕ್ಕೆ ಸಂಬಂಧಿಸಿದ ಚರ್ಚೆಗಳು ಹೆಚ್ಚಾಗಿ ಸ್ಪೆಕ್ಟ್ರಮ್, ಟವರ್‌ಗಳು ಮತ್ತು ನೆಟ್‌ವರ್ಕ್ ವೇಗದಂತಹ ವಿಷಯಗಳ ಮೇಲೆ ಕೇಂದ್ರೀಕೃತವಾಗಿದ್ದರೂ, ದೇಶದ ಜನಸಾಮಾನ್ಯರ ಪಾಲಿಗೆ ಮೊಬೈಲ್ ಫೋನ್ ಅದಕ್ಕಿಂತಲೂ ಆಳವಾದ ಮತ್ತು ಮಹತ್ವದ ಸಾಧನವಾಗಿ ವಿಕಸನಗೊಂಡಿದೆ ಎಂದು ವಿವರಿಸಿದರು. "ಕಳೆದ 10-12 ವರ್ಷಗಳಲ್ಲಿ, ಮೊಬೈಲ್ ಫೋನ್ ಉತ್ತಮ ಆಡಳಿತದ ಪ್ರಮುಖ ಸಾಧನವಾಗಿ ಹೊರಹೊಮ್ಮಿದ್ದು, 'ಡಿಜಿಟಲ್ ಇಂಡಿಯಾ'ದ ದೂರದೃಷ್ಟಿಯ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ದೂರಸಂಪರ್ಕ ಕ್ಷೇತ್ರದಲ್ಲಿನ ಭಾರಿ ಬೆಳವಣಿಗೆಯ ಮೂಲ ಕಾರಣಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿಯವರು, ದೇಶದ ಡೇಟಾ ಲಭ್ಯತೆ, ಕೈಗೆಟುಕುವ ದರದ ಸಾಧನಗಳು ಮತ್ತು ಬೃಹತ್ ಬಳಕೆದಾರರ ಸಂಖ್ಯೆಯನ್ನು ಕಂಡು ಜಗತ್ತೇ ವಿಸ್ಮಯಗೊಂಡಿರುವುದರತ್ತ ಬೆಟ್ಟು ಮಾಡಿದರು ; ಜೊತೆಗೆ, ಈ ಸಾಧನೆಗಳ ಹಿಂದಿರುವ ಆಳವಾದ 'ಏಕೆ' ಮತ್ತು 'ಹೇಗೆ' ಎಂಬ ಅಂಶಗಳನ್ನು ಅರ್ಥಮಾಡಿಕೊಳ್ಳುವಂತೆ ಸಭಿಕರನ್ನು ಕೋರಿದರು. ಈ ಅಂತರ್ಗತ ಉದ್ದೇಶವನ್ನು ಅರಿತುಕೊಳ್ಳುವುದರಿಂದ ದೇಶವನ್ನು ಮುನ್ನಡೆಸುತ್ತಿರುವ ನಿರ್ದಿಷ್ಟ ಕಾರ್ಯಕ್ಷೇತ್ರ ಯಾವುದು ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ವಿವರಿಸಿದರು. "ಇದನ್ನು ನಾವು ಅರ್ಥಮಾಡಿಕೊಂಡಾಗ, ಭಾರತದ ಗಮನವಿರುವ ನಿರ್ದಿಷ್ಟ ಕ್ಷೇತ್ರ ಯಾವುದು ಎಂಬುದು ಎಲ್ಲರಿಗೂ ಅತ್ಯಂತ ಸ್ಪಷ್ಟವಾಗುತ್ತದೆ," ಎಂದು ಶ್ರೀ ಮೋದಿ ಹೇಳಿದರು.

ಡಿಜಿಟಲ್ ಬಹಿಷ್ಕಾರದ/ಕಂದಕದ ವಿರುದ್ಧದ ಆಕ್ರಮಣಕಾರಿ ಹೋರಾಟವನ್ನು ವಿವರಿಸುತ್ತಾ, ಕೇವಲ ಒಂದು ದಶಕದ ಹಿಂದೆ ಆಧುನಿಕ ತಂತ್ರಜ್ಞಾನವು ಹೇಗೆ ತ್ವರಿತವಾಗಿ ಒಂದು ಗಣ್ಯ ಸವಲತ್ತಾಗಿ ಮಾರ್ಪಟ್ಟಿತು ಎಂಬುದನ್ನು ಪ್ರಧಾನಿ ನೆನಪಿಸಿಕೊಂಡರು. ಡಿಜಿಟಲ್ ಇಂಡಿಯಾ ಅಭಿಯಾನವು ತಂತ್ರಜ್ಞಾನವನ್ನು ತೀವ್ರವಾಗಿ ಪ್ರಜಾಪ್ರಭುತ್ವೀಕರಣಗೊಳಿಸಲು ಮೊಬೈಲ್ ಫೋನ್ ಅನ್ನು ಉದ್ದೇಶಪೂರ್ವಕವಾಗಿ ಕೇಂದ್ರೀಕರಿಸಿತು, ವ್ಯಾಪಕ ದೂರಸಂಪರ್ಕ ಸುಧಾರಣೆಗಳನ್ನು ಜಾರಿಗೆ ತಂದಿತು ಮತ್ತು ಸಾಧನಗಳನ್ನು ದೇಶೀಯವಾಗಿ ತಯಾರಿಸುವುದನ್ನು ಖಚಿತಪಡಿಸಿಕೊಳ್ಳಲು ಮೂಲಸೌಕರ್ಯವನ್ನು ವ್ಯಾಪಕವಾಗಿ ವಿಸ್ತರಿಸಿತು ಎಂದು ಅವರು ವಿವರಿಸಿದರು. "ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣಕ್ಕಾಗಿ ಇದು ಬಹಳ ದೊಡ್ಡ ಪ್ರಯತ್ನವಾಗಿತ್ತು" ಎಂದು ಶ್ರೀ ಮೋದಿ ದೃಢ ಮಾತಿನಲ್ಲಿ ಹೇಳಿದರು.

ಡಿಜಿಟಲ್ ಪ್ರಜಾಪ್ರಭುತ್ವೀಕರಣದಿಂದ ಮೂಡಿಬಂದಿರುವ ಸ್ಥಿತಿಸ್ಥಾಪಕತ್ವವನ್ನು ಉಲ್ಲೇಖಿಸುತ್ತಾ, ಮೊಬೈಲ್ ಫೋನ್‌ಗಳು ಮತ್ತು ಡೇಟಾದ ವ್ಯಾಪಕ ಲಭ್ಯತೆಯು ಸಾಮಾನ್ಯ ನಾಗರಿಕರ ಜೀವನವನ್ನು ಎಷ್ಟು ಸುಗಮಗೊಳಿಸಿದೆ ಎಂಬುದನ್ನು ಪ್ರಧಾನ ಮಂತ್ರಿಯವರು ವಿವರಿಸಿದರು; ವಿಶೇಷವಾಗಿ ಜಾಗತಿಕ ಸಾಂಕ್ರಾಮಿಕದ ಲಾಕ್‌ಡೌನ್ ಅವಧಿಯಲ್ಲಿಯೂ ಕಚೇರಿಗಳು, ಬ್ಯಾಂಕುಗಳು ಮತ್ತು ಶಾಲೆಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಇದು ಸಹಕಾರಿಯಾಯಿತು. ದೂರದ ಹಳ್ಳಿಗಳಲ್ಲಿನ ಅತ್ಯಂತ ಬಡ ಮಕ್ಕಳು ಕೂಡ ಈಗ ಗುಣಮಟ್ಟದ ಡಿಜಿಟಲ್ ಶಿಕ್ಷಣವನ್ನು ಸುಲಭವಾಗಿ ಪಡೆಯುತ್ತಿರುವುದನ್ನು ಅವರು ಸಂಭ್ರಮದಿಂದ ಉಲ್ಲೇಖಿಸಿದರು. "ಡಿಜಿಟಲ್ ಕಲಿಕೆಯು ಎಲ್ಲರಿಗೂ ಕೈಗೆಟುಕುವಂತಾಗುತ್ತಿದೆ," ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಈ ಶೈಕ್ಷಣಿಕ ಕ್ರಾಂತಿಯನ್ನು ದೃಢೀಕರಿಸುವ ಗಮನಾರ್ಹ ಅಂಕಿಅಂಶಗಳನ್ನು ಪ್ರಸ್ತುತಪಡಿಸುತ್ತಾ, ಪ್ರಧಾನ ಮಂತ್ರಿಯವರು ರಾಷ್ಟ್ರೀಯ 'ದೀಕ್ಷಾ' (Diksha) ಆನ್‌ಲೈನ್ ವೇದಿಕೆಯ ಮಾಹಿತಿಯನ್ನು ಹಂಚಿಕೊಂಡರು. ಸಾಂಕ್ರಾಮಿಕದ ತೀವ್ರತೆಯ ಅವಧಿಯಿಂದ ಹಿಡಿದು ಜುಲೈ 2022ರವರೆಗೆ, ಈ ವೇದಿಕೆಯು 500 ಕೋಟಿಗೂ (5 ಬಿಲಿಯನ್) ಹೆಚ್ಚು ಕಲಿಕಾ ಅವಧಿಗಳನ್ನು ನಿಭಾಯಿಸಿದೆ ಮತ್ತು 6,000 ಕೋಟಿ (60 ಬಿಲಿಯನ್) ನಿಮಿಷಗಳ ಕಲಿಕೆಗೆ ಅನುವು ಮಾಡಿಕೊಟ್ಟಿದೆ ಎಂದು ಅವರು ತಿಳಿಸಿದರು. "ನಮ್ಮ ಎಲ್ಲಾ ಡಿಜಿಟಲ್ ಮತ್ತು ಆನ್‌ಲೈನ್ ಶಿಕ್ಷಣ ಮಾಧ್ಯಮಗಳೊಂದಿಗೆ ಸುಮಾರು 25 ಕೋಟಿ ವಿದ್ಯಾರ್ಥಿಗಳನ್ನು ಸಂಪರ್ಕಿಸುವುದೇ ಈಗ ನಮ್ಮ ಎದುರಿನ ಪ್ರಯತ್ನವಾಗಿದೆ," ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ತಂತ್ರಜ್ಞಾನವು ಅತ್ಯಂತ ವೈವಿಧ್ಯಮಯವಾದ ರಾಷ್ಟ್ರವನ್ನು ಹೇಗೆ ಒಂದಾಗಿಸಿತು ಎಂಬುದನ್ನು ವಿವರಿಸಿದ ಪ್ರಧಾನ ಮಂತ್ರಿಯವರು, ಮೊಬೈಲ್ ಸಂಪರ್ಕ ವ್ಯವಸ್ಥೆಯು ಹಿಂದೆ ದೈನಂದಿನ ಜೀವನಕ್ಕೆ ಅಡ್ಡಿಯಾಗಿದ್ದ ಭೌಗೋಳಿಕ ಮತ್ತು ಭಾಷಾ ಸಂಬಂಧಿತ ಬೃಹತ್ ಅಡೆತಡೆಗಳನ್ನು ವ್ಯವಸ್ಥಿತವಾಗಿ ನಿವಾರಿಸಿತು ಎಂದು ತಿಳಿಸಿದರು. ಡಿಜಿಟಲ್ ಬದಲಾವಣೆಗೆ ಮುನ್ನ, ಕೇವಲ ಮೂಲಭೂತ ಬ್ಯಾಂಕಿಂಗ್, ಆರೋಗ್ಯ ಮತ್ತು ಸರ್ಕಾರಿ ಸೇವೆಗಳನ್ನು ಪಡೆಯಲು ನಾಗರಿಕರು ನಗರ ಕೇಂದ್ರಗಳಿಗೆ ಪ್ರಯಾಣಿಸಲು ಅಪಾರ ಸಮಯ ಮತ್ತು ಹಣವನ್ನು ವ್ಯಯಿಸುತ್ತಿದ್ದರು ಎಂಬುದನ್ನು ಅವರು ಎತ್ತಿ ತೋರಿಸಿದರು. "ಮೊಬೈಲ್ ಸಂಪರ್ಕವು ಈ ವೈವಿಧ್ಯತೆಯನ್ನು ಅನುಕೂಲತೆಯೊಂದಿಗೆ ಬೆಸೆದಿದೆ," ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಡಿಜಿಟಲ್ ಆಡಳಿತದ ಮೂಲಕ ಸಾಧಿಸಲಾದ ಬೃಹತ್ ಮಟ್ಟದ ಆರ್ಥಿಕ ಸಮಗ್ರತೆ/ಪಾರದರ್ಶಕತೆಯನ್ನು ವಿವರಿಸಿದ ಪ್ರಧಾನ ಮಂತ್ರಿಯವರು, ಮೊಬೈಲ್ ವೇದಿಕೆಗಳ ಮೂಲಕ ಫಲಾನುಭವಿಗಳಿಗೆ 50 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ ಮತ್ತು ಇದರ ಪರಿಣಾಮವಾಗಿ 5 ಲಕ್ಷ ಕೋಟಿ ರೂಪಾಯಿ ಭ್ರಷ್ಟರ ಕೈ ಸೇರುವುದು ಪರಿಣಾಮಕಾರಿಯಾಗಿ ತಪ್ಪಿದೆ ಎಂದು ಹೆಮ್ಮೆಯಿಂದ ಹೇಳಿದರು. ಅವರು ನಿರ್ದಿಷ್ಟವಾಗಿ 'ಪಿಎಂ ಕಿಸಾನ್ ಸಮ್ಮಾನ್ ನಿಧಿ'ಯನ್ನು ಉಲ್ಲೇಖಿಸಿದರು; ಈ ಯೋಜನೆಯು ಹಿಂದೆಂದೂ ಸರ್ಕಾರದ ಸೌಲಭ್ಯಗಳನ್ನು ಪಡೆಯದಿದ್ದ, ಸಮಾಜದ ಅಂಚಿನಲ್ಲಿರುವ ಸಣ್ಣ ರೈತರ ಖಾತೆಗಳಿಗೆ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸುರಕ್ಷಿತವಾಗಿ ಮತ್ತು ನೇರವಾಗಿ ಜಮೆ ಮಾಡಿದೆ. "ಈಗ ಅದೇ ಹಣವು ಅರ್ಹ ಫಲಾನುಭವಿಯನ್ನು ತಲುಪುತ್ತಿದೆ," ಎಂದು ಶ್ರೀ ಮೋದಿ ಹೇಳಿದರು

ಈ ತಾಂತ್ರಿಕ ಸಬಲೀಕರಣದ ಹಿಂದಿನ ಮೂಲ ತತ್ವವನ್ನು ಸಂಕ್ಷೇಪವಾಗಿ ವಿವರಿಸುತ್ತಾ, ಮೊಬೈಲ್ ಫೋನ್‌ಗಳು ಕೇವಲ ಸಂಭಾಷಣೆಯ ಸಾಧನಗಳಾಗಿ ಉಳಿಯದೆ, ಪ್ರಯಾಣದ ಕಡಿತ ಹಾಗೂ ಕಾಯುವ ಸಮಯದ ಕಡಿತ, ವೆಚ್ಚದಲ್ಲಿ ಉಳಿತಾಯ ಮತ್ತು ಅಪಾರ ಅನುಕೂಲತೆಯನ್ನು ಖಾತ್ರಿಪಡಿಸುವ ಸಾಧನಗಳಾಗಿವೆ ಎಂದು ಪ್ರಧಾನ ಮಂತ್ರಿಗಳು ಪ್ರತಿಪಾದಿಸಿದರು. ಸಾಮಾನ್ಯ ನಾಗರಿಕರಿಗೆ ತಂತ್ರಜ್ಞಾನದ ಹೂಡಿಕೆಯಿಂದ ದೊರೆತ ಅತ್ಯುನ್ನತ ಪ್ರತಿಫಲವೇ ಈ ವ್ಯಾಪಕ ಹಾಗೂ ಸಮಗ್ರ ಪರಿವರ್ತನೆ ಎಂದು ಅವರು ಬಣ್ಣಿಸಿದರು. "ಇದು ತಂತ್ರಜ್ಞಾನದಿಂದ ನಾಗರಿಕರಿಗೆ ದೊರೆತ ಅತಿದೊಡ್ಡ ಲಾಭಾಂಶ (Citizen Dividend) ಆಗಿದೆ," ಎಂದು ಶ್ರೀ ಮೋದಿ ದೃಢಪಡಿಸಿದರು.

ಬಲಿಷ್ಠ ಮೂಲಸೌಕರ್ಯವು ಉಂಟುಮಾಡುವ ಆರ್ಥಿಕ ಸರಪಳಿ ಪರಿಣಾಮವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು, ದೂರದ ಪ್ರದೇಶಗಳಲ್ಲಿ ಟವರ್‌ಗಳ ಸ್ಥಾಪನೆ, ವ್ಯಾಪಕವಾದ ಆಪ್ಟಿಕಲ್ ಫೈಬರ್ ಜಾಲದ ವಿಸ್ತರಣೆ ಮತ್ತು ಅಗ್ಗದ ದರದ ಡೇಟಾ ಸೌಲಭ್ಯಗಳು ಆರ್ಥಿಕತೆಯಲ್ಲಿ ಸಂಪೂರ್ಣ ಹೊಸ ವಲಯಗಳ ಉದಯಕ್ಕೆ ಹೇಗೆ ಕಾರಣವಾದವು ಎಂಬುದನ್ನು ವಿವರಿಸಿದರು. ಈ ಮೂಲಭೂತ ವಿಸ್ತರಣೆಯು ತಂತ್ರಜ್ಞಾನ, ಮನರಂಜನೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೊಸ ಗ್ರಾಹಕರು ಹಾಗೂ ಸೃಜನಶೀಲ ಸೃಷ್ಟಿಕರ್ತರ ಬೃಹತ್ ಅಲೆಯನ್ನೇ ಸೃಷ್ಟಿಸಿತು ಎಂಬುದರತ್ತ ಅವರು ಗಮನಸೆಳೆದರು. "ಇದು ಆರ್ಥಿಕತೆಯಲ್ಲಿ ಹೊಸ ವಲಯಗಳನ್ನೂ ಸೃಷ್ಟಿಸಿದೆ," ಎಂದು ಶ್ರೀ ಮೋದಿ ಹೇಳಿದರು

ಸಂವಾದಾತ್ಮಕ ಮನರಂಜನಾ ವಲಯದಲ್ಲಿನ ಅಭೂತಪೂರ್ವ ಬೆಳವಣಿಗೆಯನ್ನು ಎತ್ತಿ ತೋರಿಸಿದ ಪ್ರಧಾನ ಮಂತ್ರಿಯವರು, 50 ಕೋಟಿಗೂ ಹೆಚ್ಚು ಜನರು — ಮುಖ್ಯವಾಗಿ ಟೈಯರ್-2 ಮತ್ತು ಟೈಯರ್-3 ನಗರಗಳ ಯುವಜನರು — ಈಗ ಗೇಮಿಂಗ್ ಪರಿಸರ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಕೇವಲ ಆಟಗಾರರಾಗಿದ್ದ ಈ ಯುವ ಡಿಜಿಟಲ್ ಪೀಳಿಗೆಯವರು ಸ್ಪರ್ಧಾತ್ಮಕ ಇ-ಸ್ಪೋರ್ಟ್ಸ್ ಕ್ರೀಡಾಪಟುಗಳು, ವಿಷಯ ಸೃಷ್ಟಿಕರ್ತರು ಮತ್ತು ಮಹತ್ವಾಕಾಂಕ್ಷೆಯ ಉದ್ಯಮಿಗಳಾಗಿ ವಿಕಸನಗೊಂಡಿರುವುದನ್ನು ಅವರು ಶ್ಲಾಘಿಸಿದರು. "ಅಂದರೆ, ಭಾರತದಲ್ಲಿ ಮೊಬೈಲ್ ಫೋನ್ ಇಂದು ಗೇಮಿಂಗ್ ಸಲಕರಣೆಯ ಘಟಕ ಆಗಿರುವುದಲ್ಲದೆ, ಸೃಜನಶೀಲತೆಯ ಸ್ಟುಡಿಯೋ ಕೂಡ ಆಗಿದೆ," ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಸೃಜನಶೀಲ ಸೃಷ್ಟಿಕರ್ತ ಆರ್ಥಿಕತೆಯ ಪ್ರಜಾಪ್ರಭುತ್ವೀಕರಣವನ್ನು ಸಂಭ್ರಮದಿಂದ ಉಲ್ಲೇಖಿಸುತ್ತಾ, ತ್ವರಿತ ಸಂಪರ್ಕ ಮತ್ತು ಕೈಗೆಟುಕುವ ದತ್ತಾಂಶವು ವೀಡಿಯೊ ಹಂಚಿಕೆ ವೇದಿಕೆಗಳು ಮತ್ತು ಪ್ರಾದೇಶಿಕ ಒಟಿಟಿ ಸೇವೆಗಳನ್ನು ಗ್ರಾಮೀಣ ಪಟ್ಟಣಗಳಿಗೆ ಹೇಗೆ ಯಶಸ್ವಿಯಾಗಿ ತಳ್ಳಿತು, ಐತಿಹಾಸಿಕ ಭಾಷಾ ಅಡೆತಡೆಗಳನ್ನು ಹೇಗೆ ಮುರಿದಿದೆ ಎಂಬುದನ್ನು ವಿವರಿಸಿದರು. ವಿಷಯ ಸೃಷ್ಟಿ ಉದ್ಯಮವು ಬಹು ಸಾವಿರ ಕೋಟಿ ಮೌಲ್ಯದ ವಲಯವಾಗಿ ಬೆಳೆದಿದ್ದು, ಲಕ್ಷಾಂತರ ಜನರಿಗೆ ಲಾಭದಾಯಕ ಜೀವನೋಪಾಯವನ್ನು ಒದಗಿಸುತ್ತಿದೆ ಎಂದು ಅವರು ಬಹಿರಂಗಪಡಿಸಿದರು. "ಅಂದರೆ, ಮೊಬೈಲ್ ಫೋನ್ ಭಾರತದಲ್ಲಿ ವಿಷಯ ಸೃಷ್ಟಿಯನ್ನು ಪ್ರಜಾಪ್ರಭುತ್ವೀಕರಣಗೊಳಿಸಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಸೈಬರ್ ಭದ್ರತೆಯ ನಿರ್ಣಾಯಕ ಅಗತ್ಯದತ್ತ ಗಮನಹರಿಸಿದ ಪ್ರಧಾನ ಮಂತ್ರಿಯವರು, ದೂರಸಂಪರ್ಕ ಮತ್ತು ಡಿಜಿಟಲ್ ತಂತ್ರಜ್ಞಾನಗಳು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವುದರಿಂದ, ಫೋನ್‌ಗಳು ಮತ್ತು ನೆಟ್‌ವರ್ಕ್‌ಗಳ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು ಅತ್ಯುನ್ನತ ರಾಷ್ಟ್ರೀಯ ಆದ್ಯತೆಯಾಗಿದೆ ಎಂದು ಪ್ರತಿಪಾದಿಸಿದರು. ಸಂಕೀರ್ಣವಾದ ತಾಂತ್ರಿಕ ರಚನೆ ಅಥವಾ ಪ್ರೋಟೋಕಾಲ್‌ಗಳಿಗಿಂತ ಸರಳ ಹಾಗೂ ಮೂಲಭೂತವಾದ ಸುರಕ್ಷತೆಯ ಭರವಸೆಯೇ ಸಾಮಾನ್ಯ ನಾಗರಿಕರಿಗೆ ಹೆಚ್ಚು ಮುಖ್ಯ ಎಂಬುದನ್ನು ಅವರು ಒತ್ತಿ ಹೇಳಿದರು. "ಅವರಿಗೆ ನಂಬಿಕೆ ಎಂಬುದು ಅತ್ಯಂತ ಮುಖ್ಯ," ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಡಿಜಿಟಲ್ ಟ್ರಸ್ಟ್ ನ ನಿರೀಕ್ಷೆಗಳನ್ನು ವಿವರಿಸುತ್ತಾ, ಪ್ರಧಾನಿ ಬಳಕೆದಾರರ ಸುರಕ್ಷತೆಯ ಸ್ಪಷ್ಟ ಚಿತ್ರಣವನ್ನು ನೀಡಿದರು, ನಾಗರಿಕರು ಕರೆ ಮಾಡುವವರ ನಿಜವಾದ ಗುರುತನ್ನು ಸಂಪೂರ್ಣವಾಗಿ ತಿಳಿದಿರಬೇಕು, ಸಂದೇಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಮತ್ತು ಪಾವತಿಗಳನ್ನು ಕಾರ್ಯಗತಗೊಳಿಸುವಾಗ ಅಥವಾ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳುವಾಗ ಸಂಪೂರ್ಣವಾಗಿ ಸುರಕ್ಷಿತವಾಗಿರಬೇಕು ಎಂದು ಅಭಿಪ್ರಾಯಪಟ್ಟರು. ಗ್ರಾಹಕರ ವಿಶ್ವಾಸವು ಡಿಜಿಟಲ್ ವಿಸ್ತರಣೆಯ ಸಂಪೂರ್ಣ ತಳಹದಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. "ಅವರು ಯಾವುದೇ ರೂಪದಲ್ಲಿ ತಮ್ಮ ಡೇಟಾವನ್ನು ಒದಗಿಸುವಾಗ, ಅವರು ತಮ್ಮ ಡೇಟಾ ಸುರಕ್ಷಿತವಾಗಿದೆ ಎಂಬ ನಂಬಿಕೆಯನ್ನು ಹೊಂದಿರಬೇಕು" ಎಂದು ಶ್ರೀ ಮೋದಿ ಸ್ಪಷ್ಟ ಮಾತುಗಳಲ್ಲಿ ನುಡಿದರು

ಗಡಿರಹಿತ ಡಿಜಿಟಲ್ ಬೆದರಿಕೆಗಳ ವಿರುದ್ಧ ಒಗ್ಗೂಡಿದ ಅಂತಾರಾಷ್ಟ್ರೀಯ ಕ್ರಮಕ್ಕೆ ಕರೆ ನೀಡಿದ ಪ್ರಧಾನ ಮಂತ್ರಿಯವರು, ಸೈಬರ್ ವಂಚನೆ ಮತ್ತು 'ಡೀಪ್‌ಫೇಕ್‌'ಗಳು ಜಾಗತಿಕ ಮಟ್ಟದ ದೌರ್ಬಲ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಎಚ್ಚರಿಸಿದರು. ಇದಕ್ಕಾಗಿ ಸರ್ಕಾರಗಳು, ತಂತ್ರಜ್ಞಾನ ಕಂಪನಿಗಳು, ಸೇವಾ ಪೂರೈಕೆದಾರರು ಮತ್ತು ಹಣಕಾಸು ಸಂಸ್ಥೆಗಳನ್ನು ಒಗ್ಗೂಡಿಸುವ ತುರ್ತು ಹಾಗೂ ಸಮನ್ವಯಯುತ ಜಾಗತಿಕ ಚೌಕಟ್ಟಿನ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ವಂಚನೆಯು ಅಂತಿಮ ಬಳಕೆದಾರರನ್ನು ತಲುಪುವ ಮೊದಲೇ ಅದನ್ನು ತಡೆಯಬಲ್ಲ ಪೂರ್ವಭಾವಿ ಕಾರ್ಯವಿಧಾನಗಳನ್ನು ರೂಪಿಸಲು ಇಂಜಿನಿಯರ್ ಗಳಿಗೆ ಸಹಾಯ ಮಾಡುವಂತೆ ಅವರು ಜಿ.ಎಸ್.ಎಂ.ಎ. (GSMA) ಗೆ ಸ್ಪಷ್ಟವಾಗಿ ಕರೆ ನೀಡಿದರು. "ಭಾರತವು ತನ್ನ ಅನುಭವಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಸದಾ ಸಿದ್ಧವಾಗಿದೆ," ಎಂದು ಶ್ರೀ ಮೋದಿ ದೃಢವಾಗಿ ನುಡಿದರು.

ದೀರ್ಘಕಾಲೀನ ಕಾರ್ಯತಂತ್ರದ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ದಶಕದಲ್ಲಿ ಕೇವಲ ನಾಲ್ಕು ವರ್ಷಗಳು ಮಾತ್ರ ಬಾಕಿ ಉಳಿದಿರುವಾಗ, ಈ ಶೃಂಗಸಭೆಯಲ್ಲಿ ನಡೆಯುವ ಚರ್ಚೆಗಳು ಜಾಗತಿಕ ಮೊಬೈಲ್ ಮಾರುಕಟ್ಟೆಯನ್ನು ಭವಿಷ್ಯದತ್ತ ಕೊಂಡೊಯ್ಯುವ ನಿರ್ಣಾಯಕ ಮಾರ್ಗಸೂಚಿಯನ್ನು ರೂಪಿಸಲಿವೆ ಎಂದು ಪ್ರಧಾನ ಮಂತ್ರಿಯವರು ಪ್ರತಿನಿಧಿಗಳಿಗೆ ನೆನಪಿಸಿದರು. ತಾಂತ್ರಿಕ ಪ್ರಾಬಲ್ಯದ ಮುಂದಿನ ಯುಗಕ್ಕೆ ಅಗತ್ಯವಾದ ಯೋಜನೆಗಳನ್ನು ರೂಪಿಸುವಲ್ಲಿ ಈ ಕಾರ್ಯಕ್ರಮವು ಒಂದು ಪ್ರಮುಖ ವೇದಿಕೆಯಾಗಲಿದೆ ಎಂದು ಅವರು ಬಣ್ಣಿಸಿದರು. "ಈ ಮಾರ್ಗಸೂಚಿಯು ಭಾರತದೊಂದಿಗೆ ಇಡೀ ವಿಶ್ವದ ಮೊಬೈಲ್ ಮಾರುಕಟ್ಟೆಗೂ ದಿಕ್ಕು-ದಿಶೆಯನ್ನು ನೀಡಲಿದೆ" ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದರು.

ತಾಂತ್ರಿಕ ಸಾರ್ವಭೌಮತ್ವದ ಅಂತಿಮ ದೃಷ್ಟಿಕೋನವನ್ನು ವಿವರಿಸುತ್ತಾ, ಪ್ರಧಾನ ಮಂತ್ರಿಯವರು ರಾಷ್ಟ್ರವು ಗ್ರಾಹಕರಿಂದ ಸೃಷ್ಟಿಕರ್ತ/ನಿರ್ಮಾಣಕಾರನಾಗಿ  ಯಶಸ್ವಿಯಾಗಿ ಪರಿವರ್ತನೆಗೊಂಡಿದೆ ಮತ್ತು ಉತ್ಪನ್ನ ವಿನ್ಯಾಸ, ಆಧಾರವಾಗಿರುವ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿಯ ಮೇಲೆ ಸಂಪೂರ್ಣ ದೇಶೀಯ ನಿಯಂತ್ರಣದತ್ತ ಬಲವಾಗಿ  ಸಾಗುತ್ತಿದೆ ಎಂದು ಘೋಷಿಸಿದರು. ಸರ್ಕಾರವು ದಶಕಗಳಷ್ಟು ಹಳೆಯದಾದ ಕಾನೂನುಗಳನ್ನು ತ್ವರಿತವಾಗಿ ಆಧುನೀಕರಿಸುತ್ತಿದೆ, ಸಮಗ್ರ ಪ್ರೋತ್ಸಾಹಕಗಳನ್ನು ನಿಯೋಜಿಸುತ್ತಿದೆ ಮತ್ತು ಯಶಸ್ಸನ್ನು ಖಚಿತಪಡಿಸಿಕೊಳ್ಳಲು ದೂರಸಂಪರ್ಕ ಕಾಯ್ದೆ ಮತ್ತು ಗತಿಶಕ್ತಿ ಪೋರ್ಟಲ್‌ನಂತಹ ವ್ಯಾಪಕ ನಿಯಂತ್ರಕ ಸುಧಾರಣೆಗಳನ್ನು ಜಾರಿಗೊಳಿಸುತ್ತಿದೆ ಎಂದು ಅವರು ಉದ್ಯಮಕ್ಕೆ ಭರವಸೆ ನೀಡಿದರು. "ಅಂದರೆ, ದೂರಸಂಪರ್ಕ ವಲಯದಲ್ಲಿಯೂ ಸಹ, ಸುಧಾರಣಾ ಎಕ್ಸ್ ಪ್ರೆಸ್  ವೇಗವಾಗಿ ಮುಂದುವರಿಯುತ್ತಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಪ್ರಮುಖ ನಿರ್ಣಾಯಕ  ಹಾರ್ಡ್‌ವೇರ್‌ನ ಸ್ಥಳೀಯ ಉತ್ಪಾದನೆಯ ಕುರಿತು ಮಾಹಿತಿ ನೀಡಿದ ಪ್ರಧಾನ ಮಂತ್ರಿಯವರು, ದೇಶೀಯ ಸೆಮಿಕಂಡಕ್ಟರ್ ಉತ್ಪಾದನಾ ವ್ಯವಸ್ಥೆಯು ವೇಗವಾಗಿ ವಿಸ್ತರಿಸುತ್ತಿದ್ದು, ಈಗಾಗಲೇ ಐದು ಸ್ಥಳಗಳಲ್ಲಿ ವಾಣಿಜ್ಯ ಮಟ್ಟದ ಉತ್ಪಾದನೆ ಆರಂಭವಾಗಿದೆ ಎಂದು ಘೋಷಿಸಿದರು. 'ಇಂಡಿಯಾ ಸೆಮಿಕಂಡಕ್ಟರ್ ಮಿಷನ್'ನ ಮುಂದಿನ ಹಂತವು ಸಂಪೂರ್ಣ ಪೂರೈಕೆ ಸರಪಳಿಯ ಸ್ಥಳೀಕರಣದತ್ತ ಬಲವಾದ ಗಮನಹರಿಸಲಿದೆ ಎಂದು ಅವರು ತಿಳಿಸಿದರು. "ಇದರರ್ಥ, ಟೆಲಿಕಾಂ ವಲಯಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ," ಎಂದು ಶ್ರೀ ಮೋದಿ ದೃಢಪಡಿಸಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನ ಮಂತ್ರಿಯವರು 'ಇಂಡಿಯಾ ಮೊಬೈಲ್ ಕಾಂಗ್ರೆಸ್'ಗೆ ಒಂದು ಪ್ರಬಲವಾದ ಕರೆ ನೀಡಿದರು. ಕೇವಲ ತಂತ್ರಜ್ಞಾನ ಪ್ರದರ್ಶನಕ್ಕೆ ಸೀಮಿತವಾಗದೆ, ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಬೃಹತ್ ಸಂಕಲ್ಪಕ್ಕೆ ಚಾಲನೆ ನೀಡಬಲ್ಲ ಮಾನವಕಲ್ಯಾಣಕಾರಿ ಆವಿಷ್ಕಾರಗಳು, ಸಂಶೋಧನೆ ಮತ್ತು ಸಹಭಾಗಿತ್ವಗಳ ಪ್ರಮುಖ ಕೇಂದ್ರಬಿಂದುವಾಗಿ ಇದು ರೂಪುಗೊಳ್ಳಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು. ಈ ವೇದಿಕೆಯನ್ನು ಉದ್ಯಮ ಮತ್ತು ಹೊಸ ಆಲೋಚನೆಗಳ ಪ್ರಮುಖ ಜಾಗತಿಕ ಸಂಗಮವನ್ನಾಗಿ ಪರಿವರ್ತಿಸಲು ಪಾಲ್ಗೊಂಡಿರುವವರು ಅವಿರತವಾಗಿ ಶ್ರಮಿಸುತ್ತಾರೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು. "ಇದಕ್ಕಾಗಿ ನೀವೆಲ್ಲರೂ ಪೂರ್ಣ ಹೃದಯದಿಂದ ಪ್ರಯತ್ನಗಳನ್ನು ಮುಂದುವರಿಸುತ್ತೀರಿ ಎಂಬ ವಿಶ್ವಾಸ ನನಗಿದೆ; ಇದೇ ನಿರೀಕ್ಷೆಯೊಂದಿಗೆ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭಾಶಯಗಳು," ಎಂದು ಶ್ರೀ ಮೋದಿ ನುಡಿದರು.

 

 

******

 

 


(ಪ್ರಕಟಣೆ ಐ.ಡಿ.: 2320778) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , हिन्दी , Malayalam